X

ಅಂತರಂಗ ಅರಿತ ನರೇಂದ್ರ ಮೋದಿ – ಕಥನ – 3

ಹಿಮಾಲಯದಿಂದ ಹಿಂದಿರುಗಿದ ಬಳಿಕ, ಇತರರ ಸೇವೆಯಲ್ಲಿ ನನ್ನ ಜೀವನವನ್ನು ಕಳೆಯಬೇಕು ಎನ್ನುವುದನ್ನು ಅರಿತಿದ್ದೆ. ಸ್ವಲ್ಪ ಸಮಯದಲ್ಲೇ ನಾನು ಅಹಮದಾಬಾದ್’ಗೆ ತೆರಳಿದೆ. ದೊಡ್ಡ ನಗರವೊಂದರಲ್ಲಿ ಜೀವನ ಅದೇ ಮೊದಲಾಗಿತ್ತು – ನನ್ನ ಜೀವನದ ಅತ್ಯಂತ ಬೇರೆಯದೇ ರೀತಿಯ ಜೀವನ ಘಟ್ಟ ಅದಾಗಿತ್ತು. ಅಲ್ಲಿ ನನ್ನ ಅಂಕಲ್’ನ ಕ್ಯಾಂಟೀನ್’ನಲ್ಲಿ ಅವರಿಗೆ ಆಗಾಗ್ಗೆ ಸಹಾಯ ಮಾಡುತ್ತಾ, ಅಲ್ಲಿಯ ನನ್ನ ಜೀವನದ ಆರಂಭವಾಗಿತ್ತು.

ಇದೇ ಸಮಯಕ್ಕೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಪ್ರಚಾರಕನಾದೆ. ಅಲ್ಲಿ ಜೀವನದ ಹಲವು ಮಜಲುಗಳನ್ನು ದಾಟಿ ಬಂದ ಜನರ ಜೊತೆ ವ್ಯವಹರಿಸುವ ಅವಕಾಶ ದೊರೆಯಿತು. ಸಂಘದ ಕಛೇರಿಯನ್ನು ಸ್ವಚ್ಛಗೊಳಿಸುವುದು, ಚಹಾ-ತಿಂಡಿ ತಯಾರಿಸುವುದು, ಪಾತ್ರೆಗಳನ್ನು ತೊಳೆಯುವುದು ಹೀಗೆ ಸರದಿಯಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದೆವು. ಆದರೆ ಈ ಎಲ್ಲಾ ಕರ್ತವ್ಯಗಳ ನಡುವೆ ಹಿಮಾಲಯದಿಂದ  ಕಲಿತಿದ್ದನ್ನು ನನ್ನಿಂದ ದೂರವಾಗಿಸಿಕೊಳ್ಳಲಿಲ್ಲ. ಜೀವನದ ಈ ಹೊಸ ಘಟ್ಟವು ನನ್ನೊಳಗೆ ತುಂಬಿದ ಶಾಂತಿಯನ್ನು ತೊಡೆದುಹಾಕಬಾರದು ಎನ್ನುವುದನ್ನು ದೃಢಪಡಿಸಿಕೊಳ್ಳಲು, ಪ್ರತಿವರ್ಷದ ಒಂದಿಷ್ಟು ಸಮಯವನ್ನು ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು ಮೀಸಲಿಡಲು ನಿರ್ಧರಿಸಿದೆ. ಸಮತೋಲನ ಜೀವನ ಕಾಯ್ದುಕೊಳ್ಳಲು ಇದು ಹಾದಿಯಾಗಿತ್ತು. ದೀಪಾವಳಿಯ ಐದು ದಿನ ನಾನು ಕಾಡಿಗೆ – ಶುದ್ಧ ನೀರು ಹರಿಯುವ, ನಿರ್ಜನ ಪ್ರದೇಶಕ್ಕೆ ಹೋಗಿಬಿಡುತ್ತಿದ್ದೆ. ಹೆಚ್ಚಿನವರಿಗೆ ಈ ವಿಚಾರ ತಿಳಿದಿಲ್ಲ. ಆ ಐದು ದಿನಕ್ಕೆ ಸಾಕಾಗುವಷ್ಟು ಆಹಾರವನ್ನು ಕಟ್ಟಿಕೊಂಡು ಹೋಗುತ್ತಿದ್ದೆ. ಅಲ್ಲಿ ರೇಡಿಯೋ, ದಿನಪತ್ರಿಕೆ ಇರುತ್ತಿರಲಿಲ್ಲ; ಟಿ.ವಿ., ಇಂಟರ್’ನೆಟ್ ಎಲ್ಲಾ ಹೇಗೂ ಆ ಕಾಲದಲ್ಲಿ ಇರಲೇ ಇಲ್ಲ. ಇಂದಿಗೂ ಆ ಏಕಾಂಗಿ ದಿನಗಳು ನೀಡಿದ ಶಕ್ತಿಯು ಜೀವನವನ್ನು  ಮತ್ತು ಹಲವು ಅನುಭವಗಳನ್ನು ನಿಭಾಯಿಸಲು ಸಹಾಯ ಮಾಡುತ್ತವೆ. ಆ ದಿನಗಳಲ್ಲಿ ಕೆಲವರು ನನ್ನ ಬಳಿ ‘ನೀನು ಯಾರನ್ನು ಭೇಟಿಯಾಗಲು ಹೋಗುತ್ತೀಯಾ?’ ಎಂದು ಕೇಳುತ್ತಿದ್ದರು. ‘ನಾನು ನನ್ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ’ ಎನ್ನುತ್ತಿದ್ದೆ.

ಆದ್ದರಿಂದ, ಎಲ್ಲರೂ ಮುಖ್ಯವಾಗಿ ನನ್ನ ಯುವ ಸ್ನೇಹಿತರು ಈ ಅವಿಶ್ರಾಂತ-ವೇಗದ ಜೀವನದಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಂಡು – ನಿಮ್ಮ ಬಗ್ಗೆ ಯೋಚಿಸಿಕೊಂಡು, ಪರೀಕ್ಷಿಸಿಕೊಳ್ಳಬೇಕು ಎಂದು ಒತ್ತಿಹೇಳಲು ಇಚ್ಛಿಸುತ್ತೇನೆ. ಇದು ನಿಮ್ಮ ಗ್ರಹಿಕಾ ಶಕ್ತಿಯನ್ನು ಬದಲಾಯಿಸುತ್ತದೆ – ಅಂತರಂಗವನ್ನು ಚೆನ್ನಾಗಿ ಅರಿತುಕೊಳ್ಳುವಿರಿ. ಜೀವನವನ್ನು ನಿಜವಾದ ಅರ್ಥದಲ್ಲಿ ಬದುಕಲು ಆರಂಭಿಸುತ್ತೀರಿ. ನೀವು ಹೆಚ್ಚು ವಿಶ್ವಾಸ ಹೊಂದಿದ, ಧೈರ್ಯಗುಂದದ ವ್ಯಕ್ತಿಯಾಗುತ್ತೀರಿ. ಮುಂದೆ ಬರಲಿರುವ ಜೀವನಕ್ಕೆ ಇವೆಲ್ಲಾ ಸಹಾಯಕವಾಗುತ್ತದೆ. ‘ಪ್ರತಿಯೊಬ್ಬರೂ, ನೀವು ವಿಶೇಷ ವ್ಯಕ್ತಿಯೇ ಆಗಿದ್ದೀರಿ; ಬೆಳಕಿಗಾಗಿ ಇನ್ನೆಲ್ಲೋ ಹೊರಗಡೆ ಹುಡುಕಾಟ ನಡೆಸಬೇಕಿಲ್ಲ. ಬೆಳಕು ಈಗಾಗಲೇ ನಿಮ್ಮೊಳಗೇ ಇದೆ’ ಎನ್ನುವುದನ್ನು ಹೇಳಲು ಇಷ್ಟಪಡುತ್ತೇನೆ.

ಮೂಲ: ಹ್ಯೂಮನ್ಸ್ ಆಫ್ ಬಾಂಬೆ

#TheModiStory

Facebook ಕಾಮೆಂಟ್ಸ್

Readoo Staff: Tailored news content, just for you.
Related Post