ಅಂಕಣ ಸ್ಪ್ಯಾನಿಷ್ ಗಾದೆಗಳು

ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು

ಈ ಗಾದೆ ಮಾತು ಹಣೆಬರಹ, ಫೇಟ್ (fate )ಡೆಸ್ಟಿನಿಗಳ ಬಗ್ಗೆ ಮಾತಾಡುತ್ತದೆ. ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ, ಒಬ್ಬಬ್ಬರ ಬದುಕು ಒಂದೊಂದು ತರ. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ, ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ. ಹೀಗೇಕೆ? ಅವರು ಬೆಳೆದ ವಾತಾವರಣ, ನೀಡಿದ ಶಿಕ್ಷಣ, ಪ್ರೀತಿ, ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ, ಬೆಳೆಯುತ್ತಾ ಅವರ ಜೀವನದಲ್ಲಿ ಬಹಳಷ್ಟು ಅಂತರ ಸೃಷ್ಟಿಯಾಗುತ್ತದೆ. ಹೀಗೇಕೆ? ಇಲ್ಲಿ ಏಕೆ ಎನ್ನುವುದಕ್ಕೆ ಉತ್ತರವನ್ನು ನಿಖರವಾಗಿ ನೀಡಲು ಸಾಧ್ಯವಿಲ್ಲದ ಸಮಯದಲ್ಲಿ ‘ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ’ ಎನ್ನುವ ಪದಗಳು ಸೃಷ್ಟಿಯಾಗಿರಬಹುದು. ಅಲ್ಲದೆ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಕೆಲವೊಂದು ವಿಷಯಗಳಿಗೆ ನಿಖರ ಉತ್ತರ ಹುಡುಕುವುದು ಅಥವಾ ಕಾರಣ ಕೊಡುವುದು ಕಷ್ಟಸಾಧ್ಯ. ನಾವು ನಂಬಲಿ ಅಥವಾ ಬಿಡಲಿ ಕೆಲವೊಂದು ವಿಷಯವನ್ನ ಇದ್ದಹಾಗೆ ಒಪ್ಪಿಕೊಳ್ಳುವುದ ಬಿಟ್ಟು ಹೆಚ್ಚಿನದೇನೂ ನಾವು ಮಾಡಲು ಸಾಧ್ಯವಿಲ್ಲ.

ಈ ಗಾದೆ ಮಾತಿನ ಅರ್ಥ ಇಂತಹುದೆ ವಿಷಯವನ್ನ ಸ್ಪಷ್ಟ ಮಾಡುತ್ತದೆ. ಜೀವನದಲ್ಲಿ ಎಲ್ಲಾ ತರದ ಸೋಲು, ನೋವು ತಿಂದ ವ್ಯಕ್ತಿಯೊಬ್ಬ ಇನ್ನು ಈ ಜೀವನ ನನಗೆ ಸಾಕು ಎಂದು ತನ್ನ ಜೀವನವನ್ನ ಕೊನೆಗೊಳಿಸಲು ಪ್ರಯತ್ನಿಸುತ್ತಾನೆ. ಅಲ್ಲಿಯೂ ಹಲವು ವಿಫಲಗಳನ್ನ ಕಂಡು ಕೊನೆಗೆ ಸಮುದ್ರದಲ್ಲಿ ಮುಳುಗಿ ಸಾಯುವ ನಿಶ್ಚಯಕ್ಕೆ ಬರುತ್ತಾನೆ. ಹೀಗೆ ಸಮುದ್ರ ಹೊಕ್ಕಾಗ ಅಲ್ಲಿನ ನೀರು ಕೂಡ ಇಂಗಿ ಹೋಗಿ ಕೇವಲ ಮೊಳಕಾಲವರೆಗೆ ಮಾತ್ರ ನೀರು ಇರುತ್ತದೆ. ಕೊನೆಗೆ ಅವನ ಸಾಯುವ  ಪ್ರಯತ್ನಕ್ಕೆ ಸಮುದ್ರ ಹೊಕ್ಕರು ಜಯ ಸಿಗುವುದಿಲ್ಲ. ಇಲ್ಲಿ ಋಣಾತ್ಮಕ ಉದಾಹರಣೆ ಕೊಡಲಾಗಿದೆ. ಆದರೆ ಇದನ್ನ ಬದುಕಿನ ಎಲ್ಲಾ ಮಜಲುಗಳಲ್ಲೂ ಅನ್ವಯಿಸಬಹುದು. ಅರ್ಥ ಬಹಳ ಸರಳ; ಕೆಲವೊಮ್ಮೆ ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಅದರಲ್ಲಿ ಜಯ ಸಿಗದೇ ಹೋಗಬಹುದು. ಏಕೆಂದರೆ ಅವರ ಹಣೆಬರಹದಲ್ಲಿ ಅದು ಇರುವುದಿಲ್ಲ, ಅಥವಾ ಆ ವಸ್ತು ಅಥವಾ ವಿಷಯದ ಪ್ರಾಪ್ತಿ ಅಥವಾ ಲಬ್ಧತೆ ಇರುವುದಿಲ್ಲ. ಈ ಗಾದೆ ನಮಗಿಂತ ಹೆಚ್ಚಿನ ಬಲವುಳ್ಳ ಕಣ್ಣಿಗೆ ಕಾಣದ ಶಕ್ತಿಯ ಬಗ್ಗೆ ಜೊತೆಗೆ ನಮ್ಮ ಡೆಸ್ಟಿನಿ ಬಗ್ಗೆ ನಂಬಿಕೆ ಹೆಚ್ಚಿಸುವ ಮಾತನಾಡುತ್ತದೆ. ನಾವೆಲ್ಲಾ ನಮ್ಮ ಹಣೆಬರಹವನ್ನ ಹೊತ್ತು ಬಂದಿರುತ್ತೇವೆ ಎನ್ನವುದು ಸಾಮಾನ್ಯ ಅರ್ಥ.

ಇದನ್ನ ಸ್ಪಾನಿಷ್ ಭಾಷಿಕರು ‘El que nace para tamal, del cielo le caen las hojas’ ಎಂದರು (ಎಲ್ ಕೆ ನಾಸೆ ಪರ ತಮಾಲ್, ದೆಲ್ ಸಿಯಲೋ ಕಾಯೆನ್ ಲಾಸ್ ಹೋಹಾಸ್). ಇದು ನಮ್ಮ ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು ಎನ್ನುವ ಗಾದೆಯ ಯಥಾವತ್ತು ಅರ್ಥ ನೀಡುತ್ತದೆ. ಇಲ್ಲಿ ಬಳಸಿರುವ ಉಪಮೆ ಮಾತ್ರ ಬಿನ್ನವಾಗಿದೆ. ತಮಾಲ್ ಎನ್ನುವುದು ಲಾಟಿನ್ ಭಾಷಿಕರು ಮಾಡುವ ಒಂದು ಖಾದ್ಯ. ಜೋಳ ಮತ್ತು ಮಾಂಸವನ್ನ ಸೇರಿಸಿ ಬೇಯಿಸಿ ಮಾಡುವ ಒಂದು ಆಹಾರ ಪದಾರ್ಥ. ಈ ಗಾದೆ ಹೇಳುತ್ತದೆ- ಕೆಲವರು ತಮಾಲ್ ಖಾದ್ಯವನ್ನ ಮಾಡಲೆಂದೇ ಹುಟ್ಟಿರುತ್ತಾರೆ. ಅಂತವರಿಗೆ ಎಲೆಯಲ್ಲಿ ಕಟ್ಟಿದ  ಮಾಂಸ ಮತ್ತು ಜೋಳ ಆಕಾಶದಿಂದ ಬೀಳುತ್ತದೆ.

ಇದರರ್ಥ ಕೆಲವರ ಹಣೆಬರಹ ಅಥವಾ ಅದೃಷ್ಟ ಎಷ್ಟು ಚೆನ್ನಾಗಿರುತ್ತದೆ ಎಂದರೆ, ಅವರ ನಿಂತ ಜಾಗಕ್ಕೆ ಆ ಖಾದ್ಯ ತಯಾರಿಸಲು ಬೇಕಾದ ವಸ್ತು ಸಿಗುತ್ತದೆ. ಅದೇ ಕೆಲವರು ಎಷ್ಟೇ ಕಷ್ಟಪಟ್ಟರೂ ಅವರಿಗೆ ತಮಾಲ್ ತಯಾರಿಸುವ, ತಿನ್ನುವ ಯೋಗವಿರುವುದಿಲ್ಲ. ಸಮಯ, ಹಣೆಬರಹ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲಾ ಚಿನ್ನ ಇಲ್ಲವೇ ಎಲ್ಲವೂ ವಿರುದ್ಧ ಎನ್ನುವುದು ಎರಡೂ ಗಾದೆಗಳ ಅರ್ಥ.

ಇನ್ನು ಇಂಗ್ಲಿಷ್ ಭಾಷಿಕರು ‘He who was born to be unlucky, will always be so’ ಎನ್ನುತ್ತಾರೆ. ಒಟ್ಟಿನಲ್ಲಿ ನಾವು ನಮ್ಮ ಅದೃಷ್ಟ, ದುರಾದೃಷ್ಟ ಕೇಳಿಕೊಂಡು ಬಂದಿರುತ್ತೇವೆ ಎನ್ನುವುದು ನಮ್ಮ ಹಿರಿಯರು ನಂಬಿದ ವಿಷಯವಾಗಿತ್ತು . ಇಂದಿಗೂ ಇಂತಹ ಮಾತುಗಳಲ್ಲಿ ಪೂರ್ಣವಾಗಿ ನಂಬಿಕೆಯಿಲ್ಲ ಎನ್ನುವುದು ಅಸಾಧ್ಯ. ನಮ್ಮ ಕಣ್ಣ ಮುಂದೆ ನಮಗಿಂತ ಎಲ್ಲಾ ಕೋನದಲ್ಲೂ ಕಡಿಮೆ ಎನಿಸಿಕೊಂಡ ವ್ಯಕ್ತಿ ನಮ್ಮ ಮುಂದೆಯೇ ನಮ್ಮ ಮೀರಿ ಬೆಳೆದಾಗ, ಅದೃಷ್ಟ , ಹಣೆಬರಹ ಮತ್ತೆ ಮುಂಚೂಣಿಗೆ ಬರುತ್ತವೆ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

 El que nace: ಯಾರೂ ಹುಟ್ಟಿರುತ್ತಾರೊ, ಒನ್ ಹೂ ಇಸ್ ಬಾರ್ನ್ ಎನ್ನುವ ಅರ್ಥ. ಎಲ್ ಕೆ ನಾಸೆ ಎನ್ನುವುದು ಉಚ್ಚಾರಣೆ.

para tamal: ತಮಾಲ್ ಗಾಗಿ ಎನ್ನುವುದು ಅರ್ಥ. ತಮಾಲ್ ಎನ್ನುವುದು ಒಂದು ಖಾದ್ಯ. ಪರ ತಮಾಲ್ ಎನ್ನುವುದು ಉಚ್ಚಾರಣೆ.

del cielo: ಆಕಾಶದಿಂದ  ಎನ್ನುವುದು ಅರ್ಥ.  ದೆಲ್ ಸಿಯಲೋ ಎನ್ನುವುದು ಉಚ್ಚಾರಣೆ.

le caen: ಬೀಳುತ್ತದೆ, ಉದುರುತ್ತದೆ ಎನ್ನುವ ಅರ್ಥ. ಲೇ ಕಾಯೆನ್ ಎನ್ನುವುದು ಉಚ್ಚಾರಣೆ.

las hojas:  ಹಾಳೆ, ಎಲೆ ಎನ್ನುವ ಅರ್ಥ. ಲಾಸ್ ಹೋಹಾಸ್ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!