ಅಂಕಣ ಸ್ಪ್ಯಾನಿಷ್ ಗಾದೆಗಳು

ಆಡಿದಷ್ಟು ಸುಲಭವಲ್ಲ ಮಾಡುವುದು

ಜಗತ್ತಿನ ಬಹುತೇಕ ಜನ ಬಹಳ ಸುಲಭವಾಗಿ ಯಾವುದಾದರೊಂದು ಕೆಲಸವನ್ನ ಮಾಡಬಲ್ಲೆ ಎಂದು ಹೇಳುತ್ತಾರೆ. ಹೌದೇ ಸರಿ ಮಾಡಿ, ಎಂದಾಗ ಮಾತ್ರ ಮಾಡುವುದು ಹೇಳಿದಷ್ಟು ಸುಲಭವಲ್ಲ ಎನ್ನುವುದು ತಿಳಿಯುತ್ತದೆ. ಕಣ್ಣಿಗೆ ಹತ್ತಿರ ಇದೆ ಎನ್ನಿಸುವ ಕಟ್ಟಡವನ್ನು ತಲುಪಲು ನಡೆಯಲು ಶುರುಮಾಡಿದ ಮೇಲೆ ತಿಳಿಯುತ್ತದೆ, ಇದು ಕಣ್ಣಿಗೆ ಮಾತ್ರ ಹತ್ತಿರ. ಆದರೆ ಇದು ಕಂಡಷ್ಟು ಹತ್ತಿರವಿಲ್ಲ ಎಂದು. ಇದನ್ನ ನಮ್ಮ ಹಿರಿಯರು ‘ ಕಣ್ಣಿಗೆ ಹತ್ತಿರ, ಕಾಲಿಗೆ ದೂರ ‘ ಎಂದರು. ಇದರ ನೆಲೆಯಲ್ಲೇ ಹುಟ್ಟಿದ ಮಾತು ‘ಆಡಿದಷ್ಟು ಸುಲಭವಲ್ಲ ಮಾಡುವುದು’ .

ಇತರರಿಗೆ ಹೇಳುವಾಗ ಅದೇನು ಮಹಾ ಒಂದು ವಾರದಲ್ಲಿ ಮಾಡಿ ಕೊಡುತ್ತೇವೆ ಎನ್ನುವುದು ಸಾಮಾನ್ಯವಾಗಿ ಕೆಲಸವನ್ನ ಒಪ್ಪಿಕೊಳ್ಳುವ ಜನ ಅಥವಾ ಸಂಸ್ಥೆಯ ಪ್ರತಿನಿಧಿಸುವ ಜನ ಹೇಳುವ ಮಾತು. ಅದರ ಅನುಷ್ಠಾನಕ್ಕೆ ಹೊರಟಾಗ ಎದುರಾಗುವ ಅಡೆತಡೆಗಳು ಒಂದೆರೆಡಲ್ಲ. ಹೀಗಾಗಿ ಬೇಕೋ ಬೇಡವೋ ಹೇಳಿದ ಸಮಯಕ್ಕೆ ಕೆಲಸವಂತೂ ಮುಗಿಯುವುದಿಲ್ಲ. ಇದು ಎಲ್ಲರಿಗೂ ಸಾಮಾನ್ಯವಾಗಿ ಆಗಿರುವ ಅನುಭವ. ಈ ಆಡುಮಾತಿನ ಮೂಲಕ ನಮ್ಮ ಹಿರಿಯರು ‘ಬಾಯಲ್ಲಿ ಹೇಳಿದ ವೇಗಕ್ಕೆ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಧಾನಿಸಿ ಉತ್ತರಿಸು’ ಎನ್ನುವ ಸೂಕ್ಷ್ಮವನ್ನ ತಿಳಿಸಲು ಪ್ರಯತ್ನಿಸಿದ್ದಾರೆ. ಇದನ್ನ ಇನ್ನೊಂದು ಅರ್ಥದಲ್ಲೂ ಅರ್ಥೈಸಬಹುದು. ಅದೇನೆಂದರೆ ‘ನೀನು ಮಾಡುವ ಕೆಲಸ ಮಾತನಾಡಬೇಕು’ ಎನ್ನುವುದು. ಅಂದರೆ ಅದೇನು ಮಹಾ ಮಾಡಿಬಿಡುತ್ತೇನೆ ಎನ್ನುವುದಕ್ಕಿಂತ, ಮಾಡಿ ನಂತರ ಮಾತನಾಡುವುದು ಒಳ್ಳೆಯದು ಎನ್ನುವ ಅರ್ಥ. ಸರಳವಾಗಿ ಹೇಳುವುದಾದರೆ ಮಾತಿಗಿಂತ ಕೃತಿ ಮೇಲು ಎನ್ನುವುದು ಹೆಚ್ಚು ಉತ್ತಮ.

ಇದನ್ನ ಸ್ಪ್ಯಾನಿಷ್ ಪೂರ್ವಜರು ‘No es lo mismo decirlo que hacerlo’ (ನೊ ಈಸ್ ಲೊ ಮಿಸ್ಮೋ ದಿಸಿರ್ಲೊ ಕೆ ಹಸೆರ್ಲೊ) ಎಂದರು. ಬಾಯಲ್ಲಿ ಹೇಳುವುದು ಕೈಯಲ್ಲಿ ಮಾಡುವುದು ಒಂದೇ ಅಲ್ಲ ಎನ್ನುವುದು ಅರ್ಥ. ಇಲ್ಲಿಯೂ ನಮ್ಮ ಕನ್ನಡದ ಆಡುಮಾತಿನ ಅರ್ಥವನ್ನೇ ನೀಡುತ್ತದೆ. ಆಡುವ ಮುನ್ನ ಎಚ್ಚರವಿರಲಿ. ಮಾತು ಆಡಿದ ಮೇಲೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಅಷ್ಟು ಸುಲಭವಲ್ಲ ಎನ್ನುವುದು ಇಲ್ಲಿನ ಹಿರಿಯರು ಕೂಡ ನಂಬಿದ್ದ ಮಾತಾಗಿದೆ.

ಇನ್ನು ಇಂಗ್ಲಿಷರು Actions speak louder than words ಎನ್ನುತ್ತಾರೆ. ಅಂದರೆ ಆಡುವ ಮಾತಿಗಿಂತ ನಾವು ಮಾಡುವ ಕೆಲಸ ಹೆಚ್ಚು ಮಾತನಾಡುತ್ತದೆ ಎನ್ನುವ ಅರ್ಥ. ಇಲ್ಲಿಯೂ ಮಾತಿಗಿಂತ ಕೃತಿ ಮೇಲು ಎನ್ನುವ ವಾಕ್ಯವೇ ಪ್ರಾಮುಖ್ಯತೆ ಪಡೆಯುತ್ತದೆ.

ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು, ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಅಧಮನು ಎನ್ನುತ್ತಾರೆ ನಮ್ಮ ಹಿರಿಯರು. ಇಲ್ಲಿಯೂ ಆಡದೆ ಮಾಡುವನಿಗೆ ಉತ್ತಮ ಪಟ್ಟಕೊಟ್ಟಿದ್ದಾರೆ  ಆಡಿಯೂ ಮಾಡದವರು ಹೆಚ್ಚಾಗಿರುವ ಈ ಕಾಲದಲ್ಲಿ ಇದನ್ನ ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಯಮ ತಾಳ್ಮೆ ಈಗಿನ ಜನಾಂಗಕ್ಕೆ ಉಂಟೆ?

ಸ್ಪ್ಯಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

No es lo mismo   : ಒಂದೇ ಅಲ್ಲ , ಒಂದೇ ಸಮವಲ್ಲ/ತರವಲ್ಲ . ಇಟ್ಸ್ ನಾಟ್ ದಿ ಸೇಮ್ ಎನ್ನುವ ಅರ್ಥ . ನೊ ಈಸ್ ಲೊ ಮಿಸ್ಮೋ ಎನ್ನುವುದು ಉಚ್ಚಾರಣೆ .

decirlo   : ಹೇಳುವುದು . ಆಡುವುದು /ಮಾತಾಡುವುದು . ಹೇಳಿಕೆ ಎನ್ನುವ ಅರ್ಥ . ದಿಸಿರ್ಲೊ ಎನ್ನುವುದು ಉಚ್ಚಾರಣೆ .

que hacerlo  : ಮಾಡುವುದು ಎನ್ನುವ ಅರ್ಥ . ಕೆ ಹಸೆರ್ಲೊ ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!