ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಅರ್ಧ ಶತಕಕ್ಕೂ ಹೆಚ್ಚು ದೇಶಗಳ ಕಂಡ ನನಗೆ ಭಾರತದಲ್ಲಿ ಪ್ರವಾಸ ಮಾಡುವುದೆಂದರೆ ಪ್ರಯಾಸ. ಪ್ರವಾಸಿ ಸ್ಥಳಗಳನ್ನು ಹೇಗೆ ಅಚುಕ್ಕಟ್ಟಾಗಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಹೇಗೆ ಮಾರ್ಕೆಟಿಂಗ್ ಮಾಡಬೇಕು ಅನ್ನುವುದನ್ನು ಪಾಶ್ಚ್ಯಾತರನ್ನ ನೋಡಿ ಕಲಿಯಬೇಕು. ನಮ್ಮದು ಅತ್ಯಂತ ಹಳೆಯ ಮತ್ತು ಸಮೃದ್ಧ ಇತಿಹಾಸವಿರುವ ದೇಶ. ಆದರೇನು ಇಂದಿಗೆ ಪ್ರತಿ ಚಾರಿತ್ರಿಕ ಸ್ಥಳಗನ್ನು ಅದೆಷ್ಟು ಕೆಟ್ಟದಾಗಿ ಇಟ್ಟುಕೊಂಡಿದ್ದೇವೆ ಎಂದರೆ, ದುಡ್ಡು ತೆತ್ತು ದೈಹಿಕ ಶ್ರಮದ ಜೊತೆಗೆ ಮಾನಸಿಕ ಹಿಂಸೆ ಏಕೆ ಅನುಭವಿಸಬೇಕು? ಎಂದು ಪ್ರವಾಸಿಗರಿಗೆ ಅನ್ನಿಸುವಷ್ಟು. ಈ ಕಾರಣದಿಂದ ಭಾರತದಲ್ಲಿ ನಾನು ನೋಡಿದ ಐತಿಹಾಸಿಕ ಅಥವಾ ಪ್ರೇಕ್ಷಣೀಯ ಸ್ಥಳಗಳ ಸಂಖ್ಯೆ ಬೆರಳೆಣಿಕೆಯಷ್ಟು. ಪರಿಸ್ಥಿತಿ ಹೀಗಿದ್ದೂ ಗುಜರಾತಿಗೆ ಹೋಗಬೇಕು. ಪಟೇಲರ ಐಕ್ಯತೆಯ ಪ್ರತಿಮೆಯನ್ನ ಕಣ್ತುಂಬಿಕೊಳ್ಳಬೇಕು ಎನ್ನುವ ತವಕ ಮಾತ್ರ ಕಡಿಮೆಯಾಗಲಿಲ್ಲ. ಪಟೇಲರ ಪ್ರತಿಮೆಯನ್ನ ಲೋಕಾರ್ಪಣೆ ಮಾಡಿದ ದಿನದಿಂದ ಶುರುವಾದ ತುಡಿತವನ್ನ ಕೆಲಸ ಬದುಕಿನ ನಡುವೆ ಹೆಚ್ಚು ದಿನ ತಡೆದಿಡಲು ಸಾಧ್ಯವಾಗಲಿಲ್ಲ. ಐಕ್ಯತೆಯ ಪ್ರತಿಮೆ ಜಗತ್ತಿಗೆ ತೆರೆದುಕೊಂಡು ಸರಿಯಾಗಿ ೨೭ ನೇ ದಿನಕ್ಕೆ ನನ್ನ ಖಾಯಂ ಟ್ರಾವೆಲ್ ಏಜೆಂಟ್ ಆಕಾಶನಿಗೆ ಫೋನ್ ಮಾಡಿ ‘ಆಕಾಶ್ , ಗುಜರಾತಿಗೆ ಹೋಗಬೇಕು ಪಟೇಲರ ಪ್ರತಿಮೆ ನೋಡಲು’ ಎಂದೆ. ಉಳಿದದ್ದು ಆಕಾಶನ ಕೆಲಸ. ಹೀಗೆ ಹೊರಟೆ ಅಂತ ಎಂಡಿಪಿ ಕಾಫಿ ಹೌಸ್ ನ ಪ್ರಸಾದ್ ಅವರಿಗೆ ಮತ್ತು ಗೆಳೆಯ ನವೀನ ಕಟ್ಟಿ ಅವರಿಗೆ ಹೇಳಿದೆ. ನಾವು ಬರ್ತೀವಿ ನಡೆಯಿರಿ ಹೋಗೋಣ ಎಂದರು. ಪ್ರಸಾದ್ ಅವರಂತೂ ಅಲ್ಲೊಂದು ಎಂಡಿಪಿ ಕಾಫಿ ಮಳಿಗೆ ತೆಗೆಯಬಹುದಾ? ಅಂತ ಸ್ಟಡಿ ಮಾಡಿದ ಹಾಗೂ ಆಗುತ್ತೆ ಅಂತ ಉತ್ಸಾಹ ತೋರಿದರು. ಪ್ರವಾಸಕ್ಕೆ ಸದಾ ಸನ್ನದ್ದ ಸ್ಥಿತಿಯಲ್ಲಿರುವ ನನಗಿನ್ನೇನು ಬೇಕು?
ಖರ್ಚು ವೆಚ್ಚದ ಲೆಕ್ಕಾಚಾರ
ಮೂರುನಾಲ್ಕು ದಿನದ ಗುಜರಾತ್ ಟ್ರಿಪ್ ಹಾಕುವುದು ಉತ್ತಮವೆಂದು ನನ್ನ ಭಾವನೆ. ಉಸಿರಾಡಲು ಪುರುಸೊತ್ತಿಲ್ಲದ ಕೆಲಸದ ನಡುವೆ ಮೂರುದಿನ ರಜಾ ತೆಗೆದುಕೊಳ್ಳುವುದು ಸಾಧ್ಯವಿಲ್ಲದ ಮಾತು. ೨೪ ಗಂಟೆಯಲ್ಲಿ ನಮ್ಮ ಪ್ರವಾಸ ಮುಗಿಯಬೇಕು ಎನ್ನುವುದು ನಮ್ಮ ಉದ್ದೇಶ. ಅಲ್ಲದೆ ಕಡಿಮೆ ಅವಧಿಯಲ್ಲಿ ಎಲ್ಲವನ್ನೂ ನಿಗದಿ ಪಡಿಸಿದ ಕಾರಣ ನಮ್ಮ ಖರ್ಚು ಹೆಚ್ಚಾಯಿತು. ತಿಂಗಳ ಮುಂಚೆ ವಿಮಾನದ ಟಿಕೆಟ್ ಕಾಯ್ದಿರಿಸಿದರೆ ಐದು ಸಾವಿರ ಅಥವಾ ಅದಕ್ಕೂ ಕಡಿಮೆ ಹಣದಲ್ಲಿ ಬೆಂಗಳೂರು -ವಡೋದರಾ -ಬೆಂಗಳೂರು ಹೋಗಿಬರಲು ಸಾಧ್ಯ. ಮೂರು ಸಾವಿರ ರೂಪಾಯಿ ಹಣದಲ್ಲಿ ಉತ್ತಮ ಮಟ್ಟದ ರೂಮುಗಳು ಉಳಿದುಕೊಳ್ಳಲು ಸಿಗುತ್ತದೆ. ಊಟ ಉಪಹಾರ ಬೆಂಗಳೂರಿಗಿಂತ ಕಡಿಮೆ ಹಣದಲ್ಲಿ ಲಭ್ಯ. ೩/೪ ದಿನ ೧೫/೨೦ ಸಾವಿರ ರೂಪಾಯಿ ವ್ಯಯಿಸಿ ಒಬ್ಬ ವ್ಯಕ್ತಿ ಪಟೇಲರ ಐಕ್ಯತೆಯ ಪ್ರತಿಮೆ ಜೊತೆಗೆ ಸಬರಮತಿ ಆಶ್ರಮ , ವಡೋದರಾ ನಗರ ಜೊತೆಗೆ ಅಹಮದಾಬಾದ್ ಸುತ್ತಿ ಬರಬಹುದು.
ಸಸ್ಯಾಹಾರಿಗಳಿಗೆ ಊಟ ಉಪಹಾರಕ್ಕೆ ತೊಂದರೆಯಿಲ್ಲವೇ?
ಕರ್ನಾಟಕದಿಂದ ಎಡವಿ ಬಿದ್ದರೆ ಸಿಗುವ ಕೇರಳ ರಾಜ್ಯದಲ್ಲಿ ೧೯೯೮ ರಲ್ಲಿ ಆಡಿಟ್ ಕೆಲಸದ ಮೇಲೆ ತಿಂಗಳು ಕಳೆದ ನೆನಪು ಇನ್ನೂ ಹಸಿರಾಗಿದೆ. ಅಂದಿನ ಸಮಯದಲ್ಲಿ ಕಣ್ಣೂರಿನಲ್ಲಿ ಇದ್ದದ್ದು ಒಂದೇ ಒಂದು ಸಸ್ಯಹಾರಿ ಹೋಟೆಲ್. ಉಳಿದಂತೆ ಎಲ್ಲವೂ ಮಾಂಸಮಯ. ಇಂದಿನ ಕೇರಳ ಹೇಗಿದೆಯೋ? ಅಯ್ಯಪ್ಪ, ಗುರುವಾಯೂರಪ್ಪನೇ ಬಲ್ಲ! ಗುಜರಾತ್ ಆ ವಿಷಯದಲ್ಲಿ ಸಂಪೂರ್ಣ ಉಲ್ಟಾ. ಎಲ್ಲಿ ನೋಡಿದರೂ ವೆಜೆಟೇರಿಯನ್ ಹೋಟೆಲ್ಗಳದ್ದೇ ಸಾಮ್ರಾಜ್ಯ. ೨೫೦ ಕಿಲೋಮೀಟರ್’ಗೂ ಮೀರಿದ ರಸ್ತೆ ಪ್ರಯಾಣದಲ್ಲಿ ಮಾರ್ಗ ಮಧ್ಯದಲ್ಲಿ ಕಂಡದ್ದು ಒಂದೇ ಒಂದು ಮ್ಯಾಕ್ ಡೊನಾಲ್ಡ್ , ಬೇರೆಲ್ಲೂ ಬೇಕೆಂದರೂ ಒಂದು ಮೊಟ್ಟೆಯ ತುಂಡು ಸಹ ಸಿಗದು. ಆ ಮಟ್ಟಿಗೆ ಇದು ಸಸ್ಯಾಹಾರಿಗಳಿಗಿದು ಸ್ವರ್ಗ. ಇಲ್ಲಿ ಉಪಹಾರಕ್ಕೆ ಸೇವಿಸುವ ತಿಂಡಿಗಳು ಮುಕ್ಕಾಲು ಪಾಲು ಎಲ್ಲವೂ ಒಂದು ಸಿಹಿ ಅಂಶ ಇದ್ದೆ ಇರುತ್ತದೆ . ಸಿಹಿ, ಉಪ್ಪು, ಖಾರದ ಅದೊಂತರ ಮಿಶ್ರಣ. ಎಣ್ಣೆಯಲ್ಲಿ ಹುರಿದು (ಕರಿದು?) ಇಟ್ಟಿರುವ ಮೆಣಸಿನಕಾಯಿ ಬಾಯಲ್ಲಿ ಕರಗಿಹೋಗುತ್ತದೆ ವಿನಃ ಖಾರ ಎನ್ನಿಸುವುದಿಲ್ಲ. ಇಲ್ಲಿಗೆ ಬಂದ ಮೇಲೆ ಏನು ತಿನ್ನುತ್ತಿರೋ ಇಲ್ಲವೋ ದಾಲ್ ಕಿಚಡಿ ಮಾತ್ರ ಸೇವಿಸಿದೆ ಹೋಗಬೇಡಿ. ಅದೊಂದು ಅಮೋಘ ಅನುಭವ. ಅಂತಹ ದಾಲ್ ಕಿಚಡಿ ನಾನು ಸೇವಿಸಿದ್ದು ಜೀವನದಲ್ಲಿ ಪ್ರಥಮ.
ಬೆಂಗಳೂರಿನಿಂದ ಹೇಗೆ – ಎಲ್ಲಿಗೆ? ಐಕ್ಯತೆಯ ಮೂರ್ತಿ ಇರುವ ಜಾಗಕ್ಕೆ ನೇರವಾಗಿ ಹೋಗಲು ಸಾಧ್ಯವೇ?
ಬೆಂಗಳೂರಿನಿಂದ ವಡೋದರಾ ನಗರಕ್ಕೆ ಹೋಗುವುದು ಉತ್ತಮ. ವಡೋದರಾ ಏರ್ಪೋರ್ಟ್’ನಿಂದ ಐಕ್ಯತೆಯ ಪ್ರತಿಮೆ ಇರುವ ಜಾಗಕ್ಕೆ ೧೧೦ ಕಿಲೋಮೀಟರ್ ಕ್ರಮಿಸಬೇಕು. ಏರ್ಪೋರ್ಟ್’ನಿಂದ ಸರದಾರ್ ಸರೋವರ್ ಎನ್ನುವ ಐಕ್ಯತೆಯ ಪ್ರತಿಮೆಯಿರುವ ಇರುವ ಜಾಗಕ್ಕೆ ಹೋಗಲು ಕಾರನ್ನ ಮೊದಲೇ ಕಾಯ್ದಿರಿಸುವುದು ಉತ್ತಮ. ನಿಮಗ್ಯಾವ ಕಾರು ಬೇಕು ಎನ್ನುವುದರ ಮೇಲೆ ಬೆಲೆ ನಿರ್ಧಾರವಾಗುತ್ತದೆ. ವಡೋದರಾ ಏರ್ಪೋರ್ಟ್’ನಿಂದ ಸರದಾರ್ ಸರೋವರಕ್ಕೆ ಒಂದೂವರೆ ಗಂಟೆಯಿಂದ ಎರಡು ಗಂಟೆಯಲ್ಲಿ ತಲುಪಬಹುದು. ಇಲ್ಲಿಗೆ ಹೋಗುವ ರಸ್ತೆ ರಾಜ್ಯ ಹೆದ್ದಾರಿ. ರಸ್ತೆಗಳ ಗುಣಮಟ್ಟ ಬಹಳ ಚೆನ್ನಾಗಿದೆ. ಹತ್ತು ಅಥವಾ ಹದಿನೈದು ಕಿಲೋಮೀಟರ್ಗೆ ಐಕ್ಯತೆಯ ಪ್ರತಿಮೆಗೆ ಇನ್ನಿಷ್ಟು ಕಿಲೋಮೀಟರ್ ಬಾಕಿಯಿದೆ ಎನ್ನುವ ಲೆಕ್ಕಾಚಾರ ಹೇಳುವ ಫಲಕಗಳು ರಾರಾಜಿಸುತ್ತವೆ. ಒಟ್ಟಿನಲ್ಲಿ ಪ್ರಥಮ ಬಾರಿಗೆ ಬಂದವರು ತಾವೇ ಬಾಡಿಗೆ ಕಾರು ಪಡೆದು ಡ್ರೈವ್ ಮಾಡುತ್ತೇವೆ ಎಂದವರು ಕೂಡ ರಸ್ತೆ ತಪ್ಪದ ಹಾಗೆ ಅಲ್ಲಲ್ಲಿ ಸೂಚನಾ ಫಲಕಗಳಿವೆ. ಬೆಳಿಗ್ಗೆ ಬೇಗ ತಿಂಡಿ ತಿನ್ನುವ ಅಭ್ಯಾಸವಿದ್ದವರು ವಡೋದರಾ ನಗರದಲ್ಲಿ ಅಲ್ಲಲ್ಲಿ ಇರುವ ಜಗದೀಶ್ ಎನ್ನುವ ಉಪಹಾರ ಮಂದಿರದಲ್ಲಿ ಒಂದಷ್ಟು ತಿಂದು ಹೊರಡುವುದು ಒಳ್ಳೆಯದು. ಹೆದ್ದಾರಿಯಲ್ಲಿ ಸಿಗುವುದು ಕೇವಲ ಎರಡು ಹೋಟೆಲ್’ಗಳು. ಅದರಲ್ಲಿ ಒಂದರಲ್ಲಿ ಸಂಪೂರ್ಣವಾಗಿ ಟ್ರಕ್ ಡ್ರೈವರ್’ಗಳು ತುಂಬಿರುತ್ತಾರೆ. ನಾವು ಹೆಜ್ಜೆಯಿಡಲು ಸಾಧ್ಯವಾಗದ ವಾತಾವರಣ. ಇನ್ನೊಂದು ದರ್ಶನ್ ಹೆಸರಿನ ಹೋಟೆಲ್. ಇದು ಚೆನ್ನಾಗಿದೆ ಆದರೆ ತೆಗೆಯುವುದು ಬೆಳಿಗ್ಗೆ ೧೧ರ ನಂತರ. ವಡೋದರಾದಲ್ಲಿ ಪೆಟ್ ಪೂಜಾ ಮುಗಿಸುವುದು ಒಳಿತು.
ಏಕತೆಯ ಪ್ರತಿಮೆಯ ಎದುರು ಇರುವೆಯಂತೆ ಕಾಣುವ ನಾವು !
ಹೋಹ್ ಅದೊಂದು ಮಧುರಾನುಭೂತಿ! ೧೮೨ ಮೀಟರ್ ಎತ್ತರದ ಪಟೇಲರ ಪ್ರತಿಮೆ ಎರಡು ಕಿಲೋಮೀಟರ್ ದೂರದಿಂದಲೇ ಕಾಣಲು ಶುರುವಾಗುತ್ತದೆ. ಹತ್ತಿರ ಬಂದು ಪ್ರತಿಮೆಯ ಎದಿರು ನಿಂತು ಕತ್ತೆತ್ತಿ ಪ್ರತಿಮೆಯ ವೀಕ್ಷಿಸಿದರೆ ಮನಸ್ಸಿನಲ್ಲಿ ಉಂಟಾಗುವ ಅನುಭೂತಿಯ ಅಕ್ಷರದಲ್ಲಿ ವರ್ಣಿಸಲು ಸಾಧ್ಯವಿಲ್ಲ. ವಿಡಿಯೋ, ಫೋಟೋ, ಅಥವಾ ಇನ್ನಾವುದೇ ಮಾಧ್ಯಮದ ಮೂಲಕ ಅದನ್ನು ಹಿಡಿದಿಡಲು ಅಥವಾ ಕಟ್ಟಿಕೊಡಲು ಸಾಧ್ಯವಿಲ್ಲ. ಬದುಕಿನಲ್ಲಿ ಕೆಲವೊಂದನ್ನು ಅನುಭವಿಸಿಯೇ ತೀರಬೇಕು. ನಾನು ಪರಿಪೂರ್ಣ ಆರು ಅಡಿ ಎತ್ತರದ ಆಸಾಮಿ! ಆದರೂ ಪಟೇಲರ ಕಾಲಿನ ಹೆಬ್ಬೆರಳ ಉಗುರಿನ ಎತ್ತರಕ್ಕೂ ನಾನು ಸಮವಲ್ಲ ಎಂದರೆ! ಆ ಮೂರ್ತಿಯ ಅಗಾಧತೆಯ ಅರಿವಾದೀತು. ಪಟೇಲರ ಪಂಚೆಯ ನೆರಿಗೆ, ಶಾಲಿನ ಸುಕ್ಕು, ಕೋಟಿನ ಗುಂಡಿ, ಕಾಲು ಮತ್ತು ಕೈ ಬೆರಳು, ಉಗುರು ಅಬ್ಬಾ ಅದೆಷ್ಟು ಚಿಕ್ಕ ವಿಷಯಗಳನ್ನೂ ಗಮನಿಸಿ ಅವಕ್ಕೆ ಪರಿಪೂರ್ಣತೆಯನ್ನ ನೀಡಿದ್ದಾರೆ. ಇದನ್ನ ವಿನ್ಯಾಸ ಮಾಡಿದ, ಪರಿಕಲ್ಪನೆ ಮಾಡಿಕೊಂಡ ವ್ಯಕ್ತಿಯ ಅಂತಃಶಕ್ತಿಗೊಂದು ಮನಪೂರ್ವಕ ನಮನಗಳು.
ಪಟೇಲರ ಮೂರ್ತಿ ೧೮೨ ಮೀಟರ್ ಎತ್ತರದ್ದು. ಇದು ವಿಶ್ವದಲ್ಲೇ ಅತಿ ಹೆಚ್ಚಿನ ಎತ್ತರದ ಪ್ರತಿಮೆ ಎನ್ನುವ ಹೆಗ್ಗಳಿಕೆಗೆ ಭಾಜನವಾಗಿದೆ. ೧೩೫ ಮೀಟರ್ ಎತ್ತರದ ತನಕ ಪ್ರವಾಸಿಗರನ್ನ ಲಿಫ್ಟ್ ಮೂಲಕ ಕರೆದುಕೊಂಡು ಹೋಗುತ್ತಾರೆ. ಈ ಸ್ಥಾನ ಸರ್ದಾರರ ಹೃದಯದ ಭಾಗ . ನಮ್ಮ ಲಿಫ್ಟ್ ಆಪರೇಟರ್ ‘ದೇಖೊ ಕಿಸೀಕ ದಿಲ್ ಮೇ ಪೋಂಚ್ ನ ಬಹುತ್ ಮುಷ್ಕಿಲ್ ಹೈ, ಲೇಕಿನ್ ಸರದಾರ್ ಕ ದಿಲ್ ಫೆ ಆಪ್ ಲೋಗ್ ತೀನ್ ಮಿನಿಟ್ ಮೇ ಪೋಂಚ್ ಗಯಾ’ ಎಂದ. ಅಲ್ಲಿದ್ದವರೆಲ್ಲ ಗೊಳ್ಳೆಂದು ನಕ್ಕರು. ಆದರೂ ನಾನು ಕಾಣದ ಆದರೆ ಬಹಳಷ್ಟು ಕೇಳಿದ ಭಾರತದ ಅಪ್ರತಿಮ ನಾಯಕನ ಹೃದಯ ಹೊಕ್ಕು ಹದಿನೈದು ನಿಮಿಷ ಕಳೆದೆ ಎನ್ನುವುದು ವರ್ಣಿಸಲಾಗದ ಅನುಭವ. ಇರಲಿ.
ಸರದಾರರ ಹೃದಯಕ್ಕೆ ಸಾಮಾನ್ಯ ಪ್ರವೇಶಕ್ಕೆ ೩೫೦ ರೂಪಾಯಿ ಕೊಡಬೇಕು. ಇಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ಕಾಯಬೇಕು. ಇಲ್ಲವೇ ೧೦೦೦ ರೂಪಾಯಿ ಕೊಟ್ಟರೆ ಐದು ನಿಮಿಷದಲ್ಲಿ ಲಿಫ್ಟ್ ನಲ್ಲಿ ಕಳಿಸಿಬಿಡುತ್ತಾರೆ. ನಾವು ಸಾವಿರ ಕೊಟ್ಟು ಸರದಾರರ ಹೃದಯಕ್ಕೆ ವೇಗದ ಎಂಟ್ರಿ ಪಡೆದೆವು. ಸರದಾರ್ ಸರೋವರದಲ್ಲಿ ಸದ್ಯಕ್ಕೆ ನೀರಿಲ್ಲ. ನೀರು ತುಂಬಿದ ನಂತರ ೧೬ ಕಿಲೋಮೀಟರ್ ನೀರಿನ ಮಧ್ಯೆ ಜಗತ್ತಿನ ಅಪ್ರತಿಮ ಪ್ರತಿಮೆಯನ್ನ ಊಹಿಸಿಕೊಳ್ಳಿ. ಇದು ವಿಶ್ವವಿಖ್ಯಾತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಧ್ಯಾಹ್ನ ಬಸವಳಿದ ದೇಹಕ್ಕೆ ಸಿಕ್ಕೆತೆ ಆಹಾರ?
ಇಲ್ಲೊಂದು ಪುಟ್ಟ ಫುಡ್ ಕೋರ್ಟ್ ಇದೆ. ಅಲ್ಲಿ ತುಂಬಿರುವ ಜನರನ್ನ ತಣಿಸಲು ಯಾವುದೇ ತೆರೆನಾದ ಸಿದ್ಧತೆ ಇಲ್ಲ. ಅವರ ಬಳಿ ಏನಿದೆಯೂ ಅದನ್ನೇ ತಿನ್ನಬೇಕು. ಹದಿನೈದು ನಿಮಿಷ ಬಿಟ್ಟರೆ ಅದೂ ಖಾಲಿ. ಒಟ್ಟಿನಲ್ಲಿ ಈ ಮಟ್ಟಿನ ಜನ ಅಲ್ಲಿಗೆ ಬಂದಾರು ಎನ್ನುವ ಊಹೆ ಇರಲಿಲ್ಲವೂ ಏನೋ; ಅಂತೂ ಅಲ್ಲೆಲ್ಲ ಅವ್ಯವಸ್ಥೆ ತಾಂಡವಾಡುತ್ತಿದೆ. ಪಟೇಲರ ಪ್ರತಿಮೆಯ ಸುತ್ತಮುತ್ತ ಜಾಗವನ್ನ ಸ್ವಚ್ಛವಾಗಿಟ್ಟಿದ್ದಾರೆ. ಅದೇ ಸ್ವಚ್ಛತೆ ಫುಡ್ ಕೋರ್ಟ್ ನಲ್ಲಿ ಕಾಣಲಿಲ್ಲ.
ಕೊನೆ ಮಾತು : ಇಲ್ಲಿ ಎಲ್ಲವೂ ಒಂದು ಸುಸ್ಥಿತಿಗೆ ಬರಲು ಇನ್ನೊಂದು ಆರು ತಿಂಗಳು ಖಂಡಿತ ಬೇಕು. ಅಲ್ಲಿಯವರೆಗೆ ಸಂಸಾರ ಸಮೇತ ಹೋಗುವರು ಕಾಯುವುದು ಒಳ್ಳೆಯದು. ಉಳಿದಂತೆ ಹಣ್ಣು ತಿಂದು ಬದುಕುತ್ತೇನೆ ಎನ್ನುವವರು ನಾಳೆಯೇ ಹೊರಡಿ. ಇನ್ನೊಂದು ಸಣ್ಣ ಮಾಹಿತಿ, ಇಲ್ಲಿ ಆಹಾರವನ್ನ ಹತ್ತಿ ಎಣ್ಣೆ ಅಥವಾ ಕಡಲೇಕಾಯಿ ಎಣ್ಣೆಯಲ್ಲಿ ತಯಾರಿಸುತ್ತಾರೆ. ಹತ್ತಿ ಎಣ್ಣೆ ಅಭ್ಯಾಸವಿಲ್ಲದವರು ಒಂದು ದಿನ ಹೊಟ್ಟೆ ಕೆಟ್ಟು ಶೌಚಗೃಹದಲ್ಲಿ ದಿನ ಕಳೆಯಬೇಕಾಗುತ್ತದೆ ಎಚ್ಚರ.