ಅಂಕಣ ಸ್ಪ್ಯಾನಿಷ್ ಗಾದೆಗಳು

ಕನ್ನಡಿಯಲ್ಲಿನ ಗಂಟಿಗಿಂತ ಕೈಯಲ್ಲಿರುವ ದಂಟೆ ವಾಸಿ

ಆಸೆ ಎನ್ನುವುದು ಮನುಷ್ಯನ ಅತ್ಯಂತ ಸಹಜ ಗುಣಗಳಲ್ಲಿ ಒಂದು; ಹುಟ್ಟಿನಿಂದ ಸಾಯುವವರೆಗೆ ಮನುಷ್ಯನನ್ನ ಬಿಡದೆ ಹಿಂಬಾಲಿಸುವ ನಕ್ಷತ್ರಿಕ.  ಆಸೆಯೆ ದುಃಖಕ್ಕೆ ಮೂಲ ಕಾರಣ ಎಂದರು ಮಹಾತ್ಮರು. ಆಸೆಯೇ ಇರದಿದ್ದರೆ ಇಂದಿನ ಪ್ರಪಂಚ ಸೃಷ್ಟಿಯೇ ಆಗುತ್ತಿರಲಿಲ್ಲ, ಇಷ್ಟೆಲ್ಲಾ ಸಂಶೋಧನೆ, ಉನ್ನತಿ, ಪ್ರಗತಿ ಯಾವುದೂ ಆಗುತ್ತಲೇ ಇರಲಿಲ್ಲ ಎನ್ನುವುದು ಕೂಡ ಸತ್ಯ. ಆಸೆ ಇರುವುದು ತಪ್ಪಲ್ಲ. ಆದರೆ ಆಸೆ ಮತ್ತು ಅತಿ ಆಸೆ ನಡುವಿನ ಗೆರೆಯನ್ನ ಮಾತ್ರ ಅರಿತಿರಬೇಕು. ಈ ಸತ್ಯ ನಮ್ಮ ಹಿರಿಯರಿಗೆ ತಿಳಿದಿತ್ತು. ಹೀಗಾಗಿ ಕನ್ನಡಿಯಲ್ಲಿನ ಗಂಟಿಗಿಂತ ಕೈಯಲ್ಲಿರುವ ದಂಟೆ  ವಾಸಿ ಎಂದರು ಅನ್ನಿಸುತ್ತದೆ. ವಿಚಾರ ಮಾಡಿ ನೋಡಿ, ಆಸೆಯ ಭರದಲ್ಲಿ ನಾವು ಎಷ್ಟೆಲ್ಲಾ ತಪ್ಪು ಮಾಡುತ್ತೇವೆ, ಇತ್ತೀಚಿಗೆ ಇನ್ವೆಸ್ಟ್ಮೆಂಟ್ ಕಂಪನಿಯೊಂದು ಅತಿ ಹೆಚ್ಚಿನ ಲಾಭವನ್ನ ಕೊಡುವುದಾಗಿ ಹೇಳಿ ಜನರಿಂದ ಹಣವನ್ನ ಹೂಡಿಕೆ ಮಾಡಿಸಿಕೊಂಡಿತು. ಹೆಚ್ಚಿನ ಲಾಭದ ಆಸೆಯಲ್ಲಿ ಅಲ್ಲಿ ಹೂಡಿಕೆ ಮಾಡಿದ ಜನ ಹಣವನ್ನ ಕಳೆದುಕೊಂಡದ್ದು ಎಲ್ಲರಿಗೂ ತಿಳಿದ ವಿಷಯ. ಪ್ರಸಿದ್ಧ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ಕೂಡ ಹೀಗೆ ಕೋಟ್ಯಂತರ ಹಣವನ್ನ ಕಳೆದುಕೊಂಡ ಉದಾಹರಣೆಯಿದೆ. ಈ ಗಾದೆ ಮಾತಿನ ಅರ್ಥ ಬಹಳ ಸರಳ. ಕನ್ನಡಿಯಲ್ಲಿ ಕಾಣುವ ಗಂಟು ಭ್ರಮೆ ಅದು ಸಿಗಬಹುದು ಅಥವಾ ಸಿಗದೇ ಹೋಗಬಹುದು. ಆದರೆ ಕೈಲಿರುವ ದಂಟು ಅದು ಸೊಪ್ಪಿರಬಹುದು, ಹೆಚ್ಚು ಬೆಲೆ ಬಾಳದಿರಬಹುದು. ಆದರೆ ಅದು ಖಂಡಿತ ಒಪ್ಪತ್ತಿನ ಹೊಟ್ಟೆಯನ್ನಾದರೂ ತುಂಬಿಸುತ್ತದೆ. ಕನ್ನಡಿಯಲ್ಲಿನ ಗಂಟಿನ ಆಸೆಗೆ ಕೈಲಿರುವ ದಂಟನ್ನ ಕಳೆದುಕೊಳ್ಳುವುದು ಬೇಡ ಎನ್ನುವುದು ತಿರುಳು. ಇದರ ಒಳಾರ್ಥ ಇದ್ದರಲ್ಲಿ ಖುಷಿಯಾಗಿರಬೇಕು. ಅತಿ ಆಸೆ ಗತಿಗೇಡು ಎನ್ನುವುದನ್ನ ತಿಳಿಸುವುದೇ ಆಗಿದೆ.

ಇನ್ನು ಆಗಿನ ಸ್ಪ್ಯಾನಿಷ್ ಸಮಕಾಲೀನರು ’Más vale tierra en cuerpo que cuerpo en tierra’ ಎಂದರು.  (ಮಾಸ್ ಬಾಲೆ ತಿಯಾರ್ರ  ಏನ್  ಕೋರ್ಪೋ ಕೆ ಕೋರ್ಪೋ ಏನ್ ತಿಯಾರ್ರ) ಮಣ್ಣಿನೊಳಗೆ ದೇಹವಿರುವುದಕ್ಕಿಂತ ದೇಹದ ಮೇಲೆ ಮಣ್ಣಿರುವುದು ಎಷ್ಟೋ ವಾಸಿ ಎನ್ನುವುದು ಯಥಾವತ್ತು ಅನುವಾದ. ಮೂಲದಲ್ಲಿ ಅರ್ಥ ಮಾತ್ರ ನಮ್ಮ ಕನ್ನಡ ಗಾದೆಗೆ ಸನಿಹವಾಗಿದೆ. ದೇಹದ ಮೇಲೆ ಮಣ್ಣಿರುವುದು ಎಂದರೆ ಕಷ್ಟಪಟ್ಟು ದುಡಿಯುವುದು. ಲಾಲಸೆಯಿಂದ ದುಡಿಯುವುದು ಬಿಟ್ಟರೆ ದೇಹ ಮಣ್ಣಿನೊಳಗೆ ಇರುತ್ತದೆ ಎನ್ನುತ್ತಾರೆ. ಅಂದರೆ ಸಾವು ಕಟ್ಟಿಟ್ಟ ಬುತ್ತಿ ಎನ್ನುವ ಅರ್ಥ. ಇಲ್ಲಿಯೂ ಇದ್ದದ್ದರಲ್ಲಿ ಖುಷಿಯಾಗಿರಬೇಕು ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಹೆಚ್ಚಿನ ಧನ ಮತ್ತು ಧಾನ್ಯದ ಆಸೆಗೆ ಹೋಗವುದು ಬೇಡ ಎನ್ನುವುದು ಇವರ ಆಶಯ ಕೂಡ ಆಗಿತ್ತು.

ಇನ್ನು ಇದನ್ನೇ ಇಂಗ್ಲಿಷ್ ಭಾಷಿಕರು ’A Bird in the Hand is Worth Two in the Bush’ ಎಂದರು. ಜೊತೆಯಲ್ಲೇ ’Be happy with what you’ve got’ ಅನ್ನುವುದನ್ನು ಮರೆಯುವುದಿಲ್ಲ.

ಗಮನಿಸಿ ನೋಡಿ, ದೇಶ ಭಾಷೆ ವೇಷ ಬದುಕುವ ರೀತಿ ಬದಲಾದರೂ ನಮ್ಮ ಹಿರಿಯರ ಚಿಂತನೆ ಒಂದೇ ಆಗಿತ್ತು. ಅದಕ್ಕೆ ಶತಮಾನಗಳ ಕಾಲ ಶಾಂತ ರೀತಿಯಲ್ಲಿ ಬದುಕನ್ನು ಸವೆಸಿದರು. ಇಂದಿನ ವೇಗದ ಯುಗದಲ್ಲಿ ಈ ಗಾದೆ ಮಾತುಗಳ ಕೇಳುವ ಅದನ್ನ ಅಳವಡಿಸಿಕೊಳ್ಳುವುದಕ್ಕೆ ಸಮಯವಾದರೂ ಎಲ್ಲಿದೆ?

ಸ್ಪ್ಯಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

Más vale: ಎಷ್ಟೋ ವಾಸಿ, ಮಚ್ ಬೆಟರ್ ಎನ್ನುವ ಅರ್ಥ. ಮಾಸ್ ಬಾಲೆ ಎನ್ನುವುದು ಉಚ್ಚಾರಣೆ. ವಿ ಅಕ್ಷರವನ್ನ ಬಿ ಎಂದು ಉಚ್ಚಾರಣೆ ಮಾಡಲಾಗುತ್ತದೆ.

tierra: ಮಣ್ಣು, ಭೂಮಿ, ನೆಲ ಎನ್ನುವ ಅರ್ಥ. ತಿಯಾರ್ರ ಎನ್ನುವುದು ಉಚ್ಚಾರಣೆ.

en cuerpo: ದೇಹ ಮೇಲೆ ಎನ್ನುವ ಅರ್ಥ. ಕೋರ್ಪೋ ಎನ್ನುವುದು ಉಚ್ಚಾರಣೆ.

que cuerpo: ದೇಹದ ಒಳಗೆ ಎನ್ನುವ ಅರ್ಥ. ಕೆ ಕೋರ್ಪೋ ಎನ್ನುವುದು ಉಚ್ಚಾರಣೆ.

en tierra: ಮಣ್ಣು, ಭೂಮಿ, ನೆಲ ಎನ್ನುವ ಅರ್ಥ. ತಿಯಾರ್ರ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!