ಅಂಕಣ

`ಕೌಶಲ ಭಾರತ – ಕುಶಲ ಭಾರತ’ದತ್ತ ಕೇಂದ್ರದ ದೃಢ ಚಿತ್ತ 

ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಏಳೂವರೆ ಬಿಲಿಯನ್ ಜನರಿದ್ದೇವೆ. ಅಂದರೆ ೭೫೦ ಕೋಟಿ ಜನ. ಇದರಲ್ಲಿ ಎಲ್ಲರೂ ಬದುಕಿಗಾಗಿ ಒಂದಲ್ಲ ಒಂದು ಕೆಲಸ ಮಾಡುತ್ತಿರಲೇಬೇಕಲ್ಲವೇ? ಕೆಲವೊಮ್ಮೆ ಅವರು ಮಾಡುತ್ತಿರುವ ಕೆಲಸವನ್ನ ಕೆಲಸ ಎಂದು ಗುರುತಿಸಿದೆ ಹೋಗಿರಬಹುದು. ಅವರಿಗೆ ವೇತನ, ಟ್ರಾವೆಲ್ ಅಲೋವೆನ್ಸ್ ಸಿಗದಿರಬಹುದು. ಆದರೆ ಬದುಕಿನ ಬಂಡಿ ಎಳೆಯಲು ಏನಾದರು ಒಂದು ಕಾಯಕವಂತೂ ಬೇಕಲ್ಲವೇ? ಕೆಲವು ಕೆಲಸಗಳು ನಿಪುಣತೆ ಬೇಡುತ್ತವೆ. ಇನ್ನು ಕೆಲವು ದೈಹಿಕ ಶಕ್ತಿ ಬೇಡುತ್ತವೆ. ಜಗತ್ತಿನಾದ್ಯಂತ ಇಂದಿಗೆ ಐದು ಕೋಟಿಗೂ ಹೆಚ್ಚಿನ ನಿಪುಣ ಕೆಲಸಗಾರರ ಕೊರತೆಯಿದೆ ಎಂದರೆ ನಂಬುವಿರಾ? ನಮ್ಮ ರಾಷ್ಟೀಯವಾಹಿನಿಗಳಿರಬಹುದು ಅಥವಾ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳಿರಬಹುದು; ಅವುಗಳೆಲ್ಲವುದರ ವರಾತ ಒಂದೇ ‘ಕೆಲಸದ ಸೃಷ್ಟಿ’  ಅಂದರೆ ಜಾಬ್ ಕ್ರಿಯೇಷನ್ ಆಗುತ್ತಿಲ್ಲ ಎನ್ನುವುದು. ಅವರು ಬಿತ್ತರಿಸಿದ್ದು ನೋಡುವ ಮತ್ತು ಅದನ್ನ ನಂಬುವ ನಾವು ಹೆಚ್ಚಿನ ಮಾಹಿತಿಯ ಬಗ್ಗೆ ಯೋಚಿಸುವುದೇ ಇಲ್ಲ. ವಸ್ತುಸ್ಥಿತಿ ಬೇರೆಯದೇ ಇದೆ.

ಜಪಾನ್, ಯೂರೋಪಿನ ಬಹುತೇಕ ದೇಶಗಳು, ಸೌತ್ ಕೊರಿಯಾ ಸೇರಿದಂತೆ ಬಹಳ ದೇಶಗಳು ವೇಗವಾಗಿ ವೃದ್ಧಾಪ್ಯದ ಕಡೆಗೆ ಸಾಗುತ್ತಿವೆ. ಭಾರತದ ಜನಸಂಖ್ಯೆ ೧೩೦ ಕೋಟಿ ಅದರಲ್ಲಿ ಐವತ್ತಕ್ಕೂ ಹೆಚ್ಚಿನ ಜನರ ವಯಸ್ಸು ೨೫ದಕ್ಕೂ ಕಡಿಮೆ. ಇದನ್ನ ೩೫ರವರೆಗೆ ಏರಿಸಿದರೆ ನಮ್ಮ ಜನಸಂಖ್ಯೆಯ ೬೫ ಪ್ರತಿಶತ ಜನರು ಇದರಡಿಯಲ್ಲಿ ಬರುತ್ತಾರೆ. ಅಂದರೆ  ಹತ್ತಿರತ್ತಿರ ೮೫ ಕೋಟಿ ಜನರು ೩೫ ವಯೋಮಾನ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಎಂದಾಯ್ತು. ಇದನ್ನು ನಾವು ಆಸ್ತಿ ಎಂದು ಪರಿಗಣಿಸಬೇಕು. ಗ್ಲೋಬಲ್ ಸ್ಕಿಲ್ ಡೆಫಿಸಿಟ್ ಸೇರಿಕೊಂಡು ಜಗತ್ತಿಗೆ ಕೆಲಸಗಾರರ ಕೊರತೆ ಹೆಚ್ಚಾಗಿದೆ. ನಿಪುಣ ಕೆಲಸಗಾರರ ಜೊತೆಗೆ ಇತರ ಕೆಲಸಗಾರರ ಕೊರತೆ ಕೂಡ ಕಾಡುತ್ತಿದೆ. ಆಶ್ಚರ್ಯ ಅನ್ನಿಸುತ್ತದೆಯಲ್ಲವೇ? ಸುದ್ದಿ ಮಾಧ್ಯಮಗಳು ಕೆಲಸದ ಸೃಷ್ಟಿಯಾಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತವೆ. ಆದರೆ ಅಂಕಿಅಂಶ ಮತ್ತು ಗ್ರೌಂಡ್ ರಿಯಾಲಿಟಿ ಬೇರೆಯದೇ ಕಥೆ ಹೇಳುತ್ತದೆ. ಇಂತಹ ಸೂಕ್ಷ್ಮ ವಿಷಯವನ್ನ ದೇಶದ ನಾಯಕ ಮನಗಂಡರೆ ಏನಾಗಬಹುದು? ಖಂಡಿತ, ಆತ ತನ್ನ ದೇಶದ ಯುವ ಜನತೆಯ ಸ್ಕಿಲ್ ಅಥವಾ ಕೌಶಲ್ಯ ವೃದ್ಧಿಗೆ ಶ್ರಮಿಸಲು ಮುಂದಾಗುತ್ತಾರೆ. ಚೀನಾ ದೇಶ ಜಗತ್ತಿನ ಕಾರ್ಖಾನೆಯಂತೆ ದುಡಿಯುತ್ತಿದೆ. ಇವತ್ತು ಚೀನಾ ತನ್ನ ವಸ್ತುವನ್ನ ಉತ್ಪಾದಿಸದೆ ಹೋದರೆ ಜಗತ್ತು ತಲ್ಲಣಗೊಳ್ಳುತ್ತದೆ. ಆ ಮಟ್ಟಿಗೆ ಚೀನಾ ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸಿದೆ. ಭಾರತ ಇದೆ ಕೆಲಸವನ್ನ ಜಗತ್ತಿಗೆ ತನ್ನ ಕೌಶಲ್ಯ / ನುರಿತ ಯುವಜನತೆಯನ್ನು ನೀಡುವುದರ  ಮೂಲಕ ಮಾಡಬಹುದು. ಚೀನಿಯರಿಗೂ ಮತ್ತು ಭಾರತೀಯರಿಗೂ ಇರುವ ವ್ಯತ್ಯಾಸ ಇದೆ. ಭಾರತೀಯರು ಇಂಗ್ಲಿಷ್ ಅಲ್ಲದೆ ಬೇರೆ ಯಾವ ಭಾಷೆಯೇ ಆಗಿರಲಿ ಬಹಳ ಸುಲಭವಾಗಿ ಕಲಿಯುತ್ತಾರೆ. ೨೦೧೪ರ ಅಂಕಿಅಂಶ ಬೆಚ್ಚಿಬೀಳಿಸುತ್ತದೆ. ಏಕೆಂದರೆ ಜಗತ್ತಿನ ಅತ್ಯಂತ ಹೆಚ್ಚಿನ ಕೌಶಲ್ಯ ಕೊರತೆಯಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಜಪಾನ್ ಅಲಂಕರಿಸಿದರೆ ಭಾರತ ಎರಡನೇ ಸ್ಥಾನದಲ್ಲಿದೆ. ಅನಂತರ ಬ್ರೆಜಿಲ್, ಟರ್ಕಿ, ಮೆಕ್ಸಿಕೋ, ಆಸ್ಟ್ರೇಲಿಯಾ, ಕೆನಡಾ ಹೀಗೆ ಪಟ್ಟಿ ಸಾಗುತ್ತದೆ. ಎಂತಹ ವಿಚಿತ್ರ ಸ್ಥಿತಿ ನೋಡಿ ೧೩೦ ಕೋಟಿ ಜನಸಂಖ್ಯೆ ಇದ್ದರೂ ನಮ್ಮಲ್ಲಿ ಕೆಲವು ಕೆಲಸ ಮಾಡಲು ತಯಾರಾದ ಅಥವಾ ಸಿದ್ಧತೆ ಹೊಂದಿದ ಜನರ ಕೊರತೆಯಿದೆ. ಈ ಎಲ್ಲಾ ವಿಷಯಗಳನ್ನ ಅರಿತು ತನ್ನ ದೇಶದ ಭವಿಷ್ಯ ಬದಲಾಯಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ೨೦೧೫ ರಲ್ಲಿ  (Pradhan Mantri Kaushal Vikas Yojana (PMKVY) ) ಪ್ರಧಾನಮಂತ್ರಿ ಕೌಶಲಾಭೃದ್ಧಿ ಯೋಜನೆಯನ್ನ ಜಾರಿಗೆ ತಂದಿತು. ೨೦೧೬ ರಿಂದ ೨೦೨೦ರವರೆಗಿನ ಅವಧಿಗೆ ೧೨ ಸಾವಿರ ಕೋಟಿ ರೂಪಾಯಿಯನ್ನು ಈ ಯೋಜನೆಗಾಗಿ ಮೀಸಲಿಡಲಾಗಿದೆ.

ಕಾರ್ಯರೂಪ

೧) ಅಲ್ಪಾವಧಿ ತರಬೇತಿ : ಶಾಲೆ ಅಥವಾ ಕಾಲೇಜು ಬಿಟ್ಟು ಅರೆಕಾಲಿಕ ಕೆಲಸ ಮಾಡಿಕೊಂಡು ಪೂರ್ಣ ಪ್ರಮಾಣದಲ್ಲಿ ಯಾವುದೇ ವಿಷಯದಲ್ಲಿ ನಿಪುಣತೆ ಇರದ ಯುವ ಜನತೆ ಇಲ್ಲಿ ನೋಂದಾಯಿಸಿಕೊಳ್ಳುವ ಅವಕಾಶವಿದೆ. ಹಣಕಾಸು, ಡಿಜಿಟಲ್ ಲಿಟ್ರೇಸಿ, ಡೇಟಾ ಎಂಟ್ರಿಯಿಂದ ಹಲವಾರು ವಿಷಯಗಳಲ್ಲಿ ನಿಪುಣತೆ ಹೊಂದಲು ಅವಕಾಶವಿದೆ. ಇಲ್ಲಿ ಬರುವ ಅಭ್ಯರ್ಥಿಗಳ ನಿಪುಣತೆ ಆಧಾರದ ಮೇಲೆ ೧೫೦ರಿಂದ ೩೦೦ ಗಂಟೆಗಳ ಕಾಲದ ತರಬೇತಿಯನ್ನ ನೀಡಲಾಗುತ್ತದೆ. ಒಮ್ಮೆ ತರಬೇತಿ ಮುಗಿದು ಅವರು ನಿಗದಿತ ವಿಷಯದಲ್ಲಿ ನಿಪುಣತೆ ಪಡೆದಿದ್ದರೆ ಅಂತವರಿಗೆ ಕೆಲಸದ ಅವಕಾಶವನ್ನ ಕೂಡ ಮಾಡಿಕೊಡಲಾಗತ್ತದೆ. ಗಮನಿಸಿ ಇದೆಲ್ಲವೂ ಕೇಂದ್ರ ಸರಕಾರ ಅಭ್ಯರ್ಥಿಗಳ ಬಳಿ ಒಂದು ನಯಾ ಪೈಸೆ ತೆಗೆದುಕೊಳ್ಳದೆ ನೀಡುತ್ತಿರುವ ಸೇವೆ.

೨) ನಿಗದಿತ ವಿಷಯದ ಕಲಿಕೆಯನ್ನ ಗುರುತಿಸುವಿಕೆ: ಇದನ್ನು RPL ಎನ್ನುತ್ತೇವೆ. Recognition of Prior Learning ಎಂದರ್ಥ. ಅಂದರೆ ಅಭ್ಯರ್ಥಿಗಳಲ್ಲಿ ಈ ಮೊದಲೇ ಇರುವ ಅನುಭವ, ವೃತ್ತಿ ಜೊತೆಗೆ ಶೈಕ್ಷಣಿಕ ಮಟ್ಟವನ್ನ ಅಳೆದು ಅವರಿಗೆ ನಿಖರವಾಗಿ ಯಾವ ವಿಷಯದಲ್ಲಿ ನಿಪುಣತೆ ಬೇಕು ಎಂದು ಗುರುತಿಸಿ ಅದರಲ್ಲಿ ತರಬೇತಿ ನೀಡಿ ಅನಂತರ ಅವರು ಅಂತಹ ಕೆಲಸವನ್ನ ಮಾಡಲು ಅರ್ಹರು ಎಂದು ಪ್ರಮಾಣಪತ್ರ ನೀಡುವ ಕ್ರಿಯೆ. ಗಮನಿಸಿ ಇಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಾಕಷ್ಟು ಅನುಭವ ಮತ್ತು ಶಿಕ್ಷಣವಿರುತ್ತದೆ. ಆದರೆ ಬದಲಾದ ಸನ್ನಿವೇಶದಲ್ಲಿ ಹೆಚ್ಚಿನ ಅರಿವಿನ ಅಗತ್ಯವಿರುತ್ತದೆ. ಹೀಗಾಗಿ ಇಂತಹವರಿಗೆ ಬ್ರಿಡ್ಜ್ ಕೋರ್ಸ್ ಅಥವಾ ಜ್ಞಾನದ ಕೊರತೆ ನೀಗುವ (ನಾಲೆಡ್ಜ್  ಗ್ಯಾಪ್) ಕಾರ್ಯವನ್ನ ಇಲ್ಲಿ ಮಾಡಲಾಗುತ್ತದೆ. ಹೀಗೆ ಇದರಲ್ಲಿ ಜಯಶೀಲರಾದವರು ತಮ್ಮ ಕೆಲಸದಲ್ಲಿ ಮುಂದುವರಿಯಬಹುದು ಅಥವಾ ಸರಕಾರ ಅಥವಾ ಸರಕಾರೇತರ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಯನ್ನ ತುಂಬಬಹುದು.

೩) ವಿಶೇಷ ಯೋಜನೆಗಳು: ಸರಕಾರಿ ಸಂಸ್ಥೆಗಳಿಗೆ ಅಥವಾ ಬೇರೆ ಯಾವುದೇ ಕಾರ್ಪೊರೇಟ್ ಸಂಸ್ಥೆಗಳಿಗೆ ಬೇಕಾಗುವ ವಿಶೇಷ ನಿಪುಣತೆ ಬೇಡುವ ಕೆಲಸಗಾರರ ಕೊರತೆಯನ್ನ ತುಂಬುವುದು ಇಲ್ಲಿನ ಉದ್ದೇಶ. ಅಂದರೆ ಸರಕಾರ ದೇಶದ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳಿಗೆ ಯಾವ ವಲಯದಲ್ಲಿ ನಿಪುಣ ಕೆಲಸಗಾರರ ಕೊರತೆಯಿದೆ ಎಂದು ತಿಳಿದುಕೊಳ್ಳುತ್ತದೆ. ಅಲ್ಲದೆ ತನಗೆ ಕೊರತೆಯಿರುವ ವಲಯವನ್ನ ಕೂಡ ಗುರುತಿಸುತ್ತದೆ. ಮತ್ತು ವಿಶೇಷವಾಗಿ ಅಂತಹ ನಿಪುಣತೆ ಬೇಡುವ ಕೆಲಸಗಳನ್ನ ತುಂಬಲು ಅಭ್ಯರ್ಥಿಗಳನ್ನ ಆಯ್ಕೆಮಾಡಿ ಅಂತವರಿಗೆ ತರಬೇತಿಯನ್ನ ನೀಡುತ್ತದೆ. ನಂತರ ಅವರಿಗೆ ಕೆಲಸವನ್ನ ಕೂಡ ನೀಡುತ್ತದೆ.

ಮೇಲಿನ ಮೂರು ಹಂತದ ಕೆಲಸಗಳು ಸರಾಗವಾಗಿ ನಡೆಯಲು ಆಗಾಗ್ಗೆ ಕೌಶಲ್ಯ ಮತ್ತು ಕೆಲಸದ ಮೇಳವನ್ನ ಆಯೋಜಿಸುತ್ತದೆ. ಜೊತೆಗೆ ತರಬೇತಿ ಹೊಂದಿದ ಜನರನ್ನ ಸರಿಯಾದ ಹುದ್ದೆಗೆ ಸೇರಿಸಲು ಪ್ಲೇಸ್ಮೆಂಟ್ ಸರ್ವಿಸ್ ಅನ್ನು ಕೂಡ ನೀಡುತ್ತಿದೆ. ಒಟ್ಟು ಈ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆದುಕೊಂಡು ಹೋಗಲು ಮಾರ್ಗ ಸೂಚಿಯನ್ನ ಕೂಡ ಬಿಡುಗಡೆ ಮಾಡಿದೆ.

ಇಂತಹ ಯೋಜನೆ ಹಿಂದೆ ಇರಲಿಲ್ಲವೇ? ಎನ್ನುವ ಪ್ರಶ್ನೆ ಹಲವರನ್ನ ಕಾಡಬಹದು. ಉತ್ತರ, ಇತ್ತು. ಆದರೆ ಅದಕ್ಕೆ ಕೊಡಬೇಕಾದ ಗಮನ ಮತ್ತು ಆದ್ಯತೆ ನೀಡುತ್ತಿರಲಿಲ್ಲ. ಎಲ್ಲವೂ ಕಾಗದದಲ್ಲಿತ್ತು. ಆದರೆ ಇದೀಗ ಅವೆಲ್ಲವೂ ಕಾರ್ಯ ರೂಪಕ್ಕೆ ಬರುತ್ತಿವೆ. ಹಿಂದೆ ಇದಕ್ಕೆ ಎಂದು ಪ್ರತ್ಯೇಕ ಮಂತ್ರಾಲಯವಿರಲಿಲ್ಲ. ಆದರೆ ಈಗ ಇದಕ್ಕೆಂದು ಪ್ರತ್ಯೇಕ ಮಂತ್ರಾಲಯವಿದೆ.

ಕೊನೆ ಮಾತು: ಈ ಯೋಜನೆ ಜಾರಿಗೆ ಬಂದು ಮೂರು ವರ್ಷ ಮುಗಿಯಿತು. ಇಂದಿನ ಇದರ ಫಲಿತಾಂಶವೇನು? ಇದು ಎಲ್ಲರ ಮುಂದಿರುವ ಪ್ರಶ್ನೆ. ನಮ್ಮ ಸಮಾಜವೇ ಹೀಗೆ ಕೆಲಸ ಮಾಡುವವರನ್ನ ಮಾತ್ರ ಪ್ರಶ್ನಿಸುತ್ತದೆ. ಉಳಿದಂತೆ ಕೆಲಸ ಮಾಡದೆ ಸುಮ್ಮನೆ ಇರುವವರನ್ನ ಯಾರೂ ಪ್ರಶ್ನಿಸುವುದೂ ಇಲ್ಲ ತೆಗೆಳುವುದು ಇಲ್ಲ. ಅದಕ್ಕೆ ನಮ್ಮ ಹಿರಿಯರು ‘ನಡೆಯುವ ಕಾಲು ಮಾತ್ರ ಎಡವುದು’ ಎಂದರು. ಇರಲಿ. ಎಂದಿನಂತೆ ನಮ್ಮ ಸುದ್ದಿ ಮಾಧ್ಯಮಗಳು ಇದೊಂದು ಅತ್ಯಂತ ಹೀನಾಯ ಸೋಲು ಕಂಡ ಯೋಜನೆ ಎಂದು ಬಿಂಬಿಸುತ್ತಿವೆ. ಅವುಗಳು ನೀಡುತ್ತಿರುವ ಪ್ರಮಾಣ ಪತ್ರದಲ್ಲಿ ಸಿಕ್ಕಿರುವ ಅಂಕ ಹತ್ತಕ್ಕೆ ಮೂರು. ಅಂದರೆ ಹತ್ತು ಅಭ್ಯರ್ಥಿಗಳು ಈ ಯೋಜನೆಯಲ್ಲಿ ಪಾಲುಗೊಂಡರೆ ಅವರಲ್ಲಿ ಕೇವಲ ಮೂರು ಜನರಿಗೆ ಮಾತ್ರ ಕೆಲಸ ಸಿಗುತ್ತಿದೆ. ಉಳಿದ ಏಳು ಜನರಿಗೆ ಕೆಲಸ ಸಿಗುತ್ತಿಲ್ಲ ಎನ್ನುವುದು ಅವುಗಳ ಕೂಗು. ಮೊದಲ ಸಾಲುಗಳನ್ನು ಮತ್ತೊಮ್ಮೆ ಓದಿ ಜಗತ್ತಿನಲ್ಲಿ ಐದು ಕೋಟಿಗೂ ಮೀರಿದ ನಿಪುಣತೆ ಬೇಡುವ ಕೆಲಸಗಾರ ಕೊರತೆಯಿದೆ. ಅಂತಹ ಕೊರತೆ ಎದುರಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಹೀಗಿದ್ದೂ ಏಳು ಜನಕ್ಕೆ ಕೆಲಸವೇಕೆ ಸಿಗಲಿಲ್ಲ? ಅದು ಅವರಲ್ಲಿರುವ ಕೊರತೆಯೋ ಅಥವಾ ಕೇಂದ್ರ ಸರಕಾರ ಯೋಜನೆಯ ಕೊರತೆಯೋ? ಹಾಗೆ ನೋಡಲು, ಹೋಲಿಕೆ ಮಾಡಲು ಹೋದರೆ ಕಳೆದ ಹತ್ತು ವರ್ಷಗಳಲ್ಲಿ  ಆಗದ ಬದಲಾವಣೆ ಅರ್ಥಾತ್ ಸ್ಕಿಲ್ ಡೆವಲಪ್ಮೆಂಟ್ ಕಳೆದ ಮೂರು ವರ್ಷದಲ್ಲಿ ಆಗಿದೆ. ಭಾರತ ನಿಪುಣ ಕೆಲಸಗಾರರ ಜಗತ್ತಿಗೆ ಸರಬರಾಜು ಮಾಡುವ ಹ್ಯೂಮನ್ ರಿಸೋರ್ಸ್ ಹಬ್ ಆಗಬೇಕೆಂಬ ಪ್ರಧಾನ ಸೇವಕನ ಕನಸಿನೆಡೆಗೆ ಈ ಯೋಜನೆ ಮೊದಲ ಹೆಜ್ಜೆಗಳನ್ನ  ದೃಢವಾಗಿ ಊರಿದೆ  ಎಂದು ಹೇಳಲು ಅಡ್ಡಿಯಿಲ್ಲ. ಈ ಯೋಜನೆ ಹತ್ತು ಕೋಟಿಗೂ ಮೀರಿದ ಜನರಿಗೆ ತಲುಪುತ್ತಿದೆ ಎನ್ನುವುದನ್ನ ಇಲ್ಲಿ ಸ್ಮರಿಸೋಣ. 

 

(ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ ಬರಹ)

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!