Featured ಅಂಕಣ

ನಮೋ ‘ಅರಿಹಂತಾಯ’: ವಿಕ್ಷಿಪ್ತ ಶಕ್ತಿಗಳ ಅಣ್ವಸ್ತ್ರ ಬೆದರಿಕೆಗೆ ಭಾರತದ ಸುರಕ್ಷಾ ಕವಚ.

‘ಅರಿಹಂತ’ ಅಂದರೆ ಸಂಸ್ಕೃತ ಭಾಷೆಯಲ್ಲಿ ‘ಶತ್ರುಗಳ ವಿನಾಶಕ’ ಎಂದರ್ಥ (ಅರಿ=ಶತ್ರು. ಹಂತ=ವಿನಾಶಕ). ’ಐಎನ್‌ಎಸ್ ಅರಿಹಂತ್’ ಭಾರತದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆ. ನವೆಂಬರ್ ೫ಕ್ಕೆ ಅರಿಹಂತ ಹಿಂದೂ ಮಹಾಸಾಗರದಲ್ಲಿ ಸುಮಾರು ೩೦೦ಮೀಟರ್ ಆಳಕ್ಕೆ ಧುಮುಕಿ ಮೊದಲ ಹಂತದ ಗಸ್ತು ಪರೀಕ್ಷಣವನ್ನು ಯಶಸ್ವಿಯಾಗಿ ಪೂರೈಸಿದೆ. ಇದರ ಲೋಕಾರ್ಪಣೆಯೊಂದಿಗೆ ಭಾರತ ದೇಶ ಭೂ (ಪೃಥ್ವಿ, ಅಗ್ನಿ ಕ್ಷಿಪಣಿಗಳು), ವಾಯು ಹಾಗೂ ಜಲ ಹೀಗೆ ಮೂರೂ ಮಾಧ್ಯಮಗಳಲ್ಲಿಯೂ ನ್ಯೂಕ್ಲಿಯರ್ ಶಸ್ತ್ರ ಬಲವಿರುವ ’ಅಣ್ವಸ್ತ್ರ ತ್ರಿವಳಿ’ ಶಕ್ತಿಯಾಗಿದೆ. ರಷ್ಯ, ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಚೀನ ದೇಶಗಳನ್ನು ಹೊರತುಪಡಿಸಿ ಪರಮಾಣು ತಂತ್ರಜ್ಞಾನದ ಜಲಾಂತರ್ಗಾಮಿಯನ್ನು ಅಭಿವೃದ್ಧಿಪಡಿಸಿ ಬಳಸುತ್ತಿರುವ ‘ಅಣ್ವಸ್ತ್ರ ತ್ರಿವಳಿ’ ಸಾಮಾರ್ಥ್ಯದ ವಿಶ್ವದ ಆರನೇ ದೇಶ ಭಾರತ. ಏಷ್ಯಾದ ಖಂಡದ ಎರಡನೇ ದೇಶ.

ಯಾವ ಉಪಗ್ರಹ ತಂತ್ರಜ್ಞಾನಗಳ ಕಣ್ಣಿಗೂ ಕಾಣದಂತೆ ಸತತವಾಗಿ ಅನೇಕ ತಿಂಗಳುಗಳ ಕಾಲ ಸಾಗರದ ಆಳದಲ್ಲಿಯೇ ಉಳಿಯಬಲ್ಲ, ಏಕಕಾಲಕ್ಕೆ ೯೫ ಜನರನ್ನು ಹೊತ್ತೊಯ್ಯಬಲ್ಲ, ಸುಮಾರು ೪,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ, ೬೦೦೦ ಟನ್ ತೂಕದ, ಯುರೇನಿಯಂ ಇಂಧನದಿಂದ ಪುಷ್ಟೀಕರಿಸಿದ (ಎನ್‌ರಿಚ್ಡ್) ೮೩ ಮೆಗಾವ್ಯಾಟ್ ಪ್ರೆಶರೈಸ್ಡ್ ಲಘು-ನೀರಿನ ರಿಯಾಕ್ಟರ್ ಇಂಜಿನ್ ಶಕ್ತಿಯ, ೭೫೦ ಕಿಲೋಮೀಟರ್‌ಗಳಷ್ಟು ದೂರಕ್ಕೆ ಕ್ಷಿಪಣಿಗಳ ದಾಳಿ ನಡೆಸುವ ಸಾಮರ್ಥ್ಯವಿರುವ, ಏಕಕಾಲಕ್ಕೆ ೧೨ ಅಣುಶಕ್ತಿಯ ‘ಬ್ಯಾಲಿಸ್ಟಿಕ್ ಮಿಸೈಲ್’ಗಳನ್ನು (ಕ್ಷಿಪಣಿಯನ್ನು ಉಡಾಯಿಸಿದ ಮೇಲೆ ಅವು ಬಹುತೇಕ ಗುರುತ್ವಾಕರ್ಷಣ ಬಲದ ಸಹಾಯದಿಂದಲೇ ಚಲಿಸುವ ಕಾರಣದಿಂದ ಇದನ್ನು ಬ್ಯಾಲಿಸ್ಟಿಕ್ ಎಂದು ಕರೆಯಲಾಗುತ್ತದೆ. ಇದು ನಿಖರ ಗುರಿಯತ್ತ ಇಂಧನಸಹಿತವಾಗಿ ಸಾಗುವ ‘ಕ್ರ್ಯೂಸ್ ಮಿಸೈಲ್’ಗಿಂತ ಭಿನ್ನ) ಹೊತ್ತೊಯ್ಯಬಲ್ಲದು ಮತ್ತು ಸಾಗರದಾಳದಿಂದಲೇ ಯಾರ ಕಣ್ಣಿಗೂ ಕಾಣದಂತೆ ಕ್ಷಿಪಣಿಗಳನ್ನು ನಿಗದಿತ ಗುರಿಯತ್ತ ಸ್ಫೋಟಿಸಬಲ್ಲದು. ನ್ಯೂಕ್ಲಿಯರ್ ಕಮಾಂಡ್ ಕಂಟ್ರೋಲ್ ಘಟಕದ ಮೂಲಕ ಮಾತ್ರವೇ ಅದನ್ನು ಬಳಸುವ ಜಾಗರುಕ ನಿಯಮವನ್ನು ಮಾಡಲಾಗಿದೆ.

ಕೆ೧೫ (ಬಿಒ-೧೫) ’ಸಮೀಪ ವ್ಯಾಪ್ತಿ’ಯ ಅಂದರೆ ಸುಮಾರು ೭೦೦ ರಿಂದ ೭೫೦ ಕಿಲೋಮೀಟರ್ ದೂರ ತಲುಪಬಲ್ಲ ೧೨ ಕ್ಷಿಪಣಿಗಳ ಸಾಮರ್ಥ್ಯವನ್ನು ಹಾಗೂ ಮುಂದಿನ ದಿನಗಳಲ್ಲಿ ’ಬಹುದೂರ ವ್ಯಾಪ್ತಿ’ಯ ಅಂದರೆ ೩,೫೦೦ ಕಿಲೋಮೀಟರ್‌ಗಳಷ್ಟು ದೂರ ಸಾಗಬಲ್ಲ ಕೆಳ ಬ್ಯಾಲಿಸ್ಟಿಕ್ ಅಣ್ವಸ್ತ್ರ ಕ್ಷಿಪಣಿಗಳನ್ನು ಅಳವಡಿಸುವ ನಿರೀಕ್ಷೆಯಿದೆ. ವಿಶೇಷ ಕ್ಷಿಪಣಿಗಳಿಗೆ ‘ಕೆ’ ಮಾದರಿ ಎಂಬ ಹೆಸರನ್ನು ಭಾರತದ ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ, ಎಪಿಜೆ ಅಬ್ದುಲ್ ’ಕಲಾಂ’ರವರಿಗೆ ಗೌರವ ಸಲ್ಲಿಸಲು ಹೆಸರಿಸಲಾಗಿದೆ. ಅರಿಹಂತ್ ಕ್ಲಾಸ್‌ನ ಇನ್ನುಳಿದ ೫ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ-ಗಸ್ತು ಕಾರ್ಯ ಭರದಿಂದ ಸಾಗಿದೆ. ಅವು ಮತ್ತಷ್ಟು ಅತ್ಯಾಧುನಿಕ ತಂತ್ರಜ್ಞಾನ ಸಾಮರ್ಥ್ಯಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ. ನೌಕಾದಳಕ್ಕೆ ಅರಿಹಂತ್ ಸೇರುವಿಕೆಯಿಂದ ಯಾವುದೇ ಹೊತ್ತಿನಲ್ಲಿಯೂ ಭೂ ಹಾಗೂ ವಾಯು ಅಣ್ವಸ್ತ್ರಗಳ ಮೇಲೆ ಮೊದಲ ಘಟ್ಟದ ನ್ಯೂಕ್ಲಿಯರ್ ದಾಳಿಯಾದರೂ ಸಾಗರದಾಳದಲ್ಲಿ ಹುದುಗಿರುವ ಅರಿಹಂತ ಜಲಾಂತರ್ಗಾಮಿ ನೌಕೆಯನ್ನು ನಾಶಪಡಿಸುವುದು ಕಷ್ಟಸಾಧ್ಯ. ಹಾಗಾಗಿ ಸಹಜವಾಗಿ ಎರಡನೇ ಹಂತದ ಪ್ರತಿದಾಳಿ ನಡೆಸುವುದಕ್ಕೆ ಅರಿಹಂತ್ ಜಲಾಂತರ್ಗಾಮಿ ನೌಕೆ, ಭಾರತದ ಅತ್ಯುತ್ತಮ ಆಯ್ಕೆ.

ಐಎನ್‌ಎಸ್ ಅರಿಹಂತ್, ಭಾರತದ ಪೂರ್ವ ನೌಕಾದಳ ವಲಯದ ಎಸ್.ಎಸ್.ಬಿ.ಎನ್.(ಸ್ಟ್ರಾಟಜಿಕ್ ಸ್ಟ್ರೈಕ್ ನ್ಯೂಕ್ಲಿಯರ್ ಸಬ್‌ಮೆರಿನ್) ತಂತ್ರಗಾರಿಕೆಯ ದಾಳಿ ನಡೆಸಬಲ್ಲ ಜಲಾಂತರ್ಗಾಮಿ ನೌಕೆ. ಪ್ರಸ್ತುತ ಭಾರತೀಯ ನೌಕಾದಳದಲ್ಲಿ ‘ಐಎನ್‌ಎಸ್ ಚಕ್ರ’ ಎಂಬ ‘ಅಕುಲಾ ಕ್ಲಾಸ್’ನ ಜಲಾಂತರ್ಗಾಮಿ ನೌಕೆಯನ್ನು ರಷ್ಯಾದಿಂದ ಗುತ್ತಿಗೆ ಪಡೆದು ಬಳಸಲಾಗುತ್ತಿದೆ. ಅದರೊಂದಿಗೆ ಭಾರತ ಈಗಾಗಲೇ ೧೬ ಡಿಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ರಷ್ಯ ಹಾಗೂ ಜರ್ಮನಿಯಿಂದ ಗುತ್ತಿಗೆ ಪಡೆದು ಬಳಸುತ್ತಿದೆ. ಆದರೆ ಸ್ವದೇಶಿ ನಿರ್ಮಿತ ಅರಿಹಂತ್, ರಷ್ಯದ ಸಹಾಯದೊಂದಿಗೆ ವಿಶಾಖಪಟ್ಟಣಂ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡ ಮೊದಲ ತಲೆಮಾರಿನ ಅಣುಶಕ್ತಿಯ ಸಹಾಯದಿಂದ ಚಲಿಸುವ ಹಾಗೂ ಅಣ್ವಸ್ತ್ರ ಹೊಂದಿರುವ ಏಕೈಕ ನೌಕೆ. ಅರಿಹಂತ್‌ನ ಹುಟ್ಟಿನ ಕಲ್ಪನೆ ಆರಂಭವಾಗಿದ್ದು ೧೯೭೦ರ ದಶಕದಲ್ಲಿ. ೧೯೮೮ರಲ್ಲಿ ಇದನ್ನು ‘ಮುಂದುವರೆದ ತಂತ್ರಜ್ಞಾನ ಹಡಗು’ (ಅಡ್ವಾನ್ಸ್ ಟೆಕ್ನಾಲಜಿ ವೆಸಲ್= ಎ.ಟಿ.ವಿ) ಎಂಬ ಯೋಜನೆಯಡಿಯಲ್ಲಿ ಗೌಪ್ಯವಾಗಿ ಪ್ರಾರಂಭಿಸಲಾಗಿತ್ತು. ಅದರ ಸುಧಾರಿತ ರೂಪವಾಗಿ, ಕಾರ್ಗಿಲ್ ವಿಜಯೋತ್ಸವದ ದಶಮಾನೋತ್ಸವ ಸಂಭ್ರಮಾಚರಣೆಯ ನೆನಪಿಗಾಗಿ ೨೦೦೯ರಲ್ಲಿ ಮೊದಲ ಬಾರಿಗೆ ಇದರ ನಿರ್ಮಾಣದ ಸುದ್ದಿ ಘೋಷಿಸಲಾಯಿತು. ೨೦೧೬ರಲ್ಲಿ ಭಾರತೀಯ ನೌಕದಳವನ್ನು ಸೇರಿಕೊಂಡಿದ್ದ ಐಎನ್‌ಎಸ್ ಅರಿಹಂತ್ ನವೆಂಬರ್ ೫, ೨೦೧೮ರಲ್ಲಿ ಮೊದಲ ಪರೀಕ್ಷಣ ಗಸ್ತನ್ನು ಪೂರೈಸುವ ಮೂಲಕ ಭಾರತದ ಯುದ್ಧ ತಂತ್ರಗಾರಿಕೆ ಹಾಗೂ ಸುರಕ್ಷತೆಯ ಹಿನ್ನೆಲೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇದು ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್(ಬಿ.ಎ.ಆರ್.ಸಿ), ಡಿಫೆಂನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಜೇಶನ್(ಡಿಆರ್‌ಡಿಒ), ಕೆಲವು ಖಾಸಗಿ ತಂತ್ರಜ್ಞಾನಗಳ ಪಾಲ್ಗೊಳ್ಳುವಿಕೆ, ನೌಕಾದಳದ ‘ಇಂಜಿನಿಯರಿಂಗ್ ಕ್ಷಮತೆ’ ಹಾಗೂ ಭಾರತೀಯ ವಿಜ್ಞಾನಿಗಳ ಸಾಧನೆಗೆ ಸಾಕ್ಷಿ.

ಪಾರಂಪರಿಕ ನೌಕೆಗಳಿಗೆ ಹೋಲಿಸಿದರೆ ಅರಿಹಂತ್‌ನ ವಿಶೇಷತೆಗಳು:

ಪೋಖ್ರಾನ್-೨ ರ ಯಶಸ್ವಿ ಪರೀಕ್ಷೆಗಳ ಬಳಿಕ ಭಾರತ ನೌಕಾ ಮಾಧ್ಯಮದಲ್ಲಿಯೂ ಅಣುಶಕ್ತಿಯ ನೌಕೆಗಳನ್ನು ತಯಾರಿಸಲು ಹೆಚ್ಚಿನ ಗಮನಹರಿಸಿತ್ತು. ಸಾಗುವ ದಾರಿಯಲ್ಲಿ ದೊಡ್ಡದಾಗಿ ಸದ್ದುಮಾಡುವ ಆ ಮೂಲಕ ‘ಸೋನಾರ್’ ಮೊದಲಾದ ಮಾಧ್ಯಮಕ್ಕೆ ಸುಲಭವಾಗಿ ಗೋಚರವಾಗುವ ಪಾರಂಪರಿಕ ಡಿಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿಗಳಿಗೆ ಹೋಲಿಸಿದರೆ ಅಣುಶಕ್ತಿಯ ನೌಕೆಗಳು ಹೆಚ್ಚು ಸಮರ್ಥ ಹಾಗೂ ಶಕ್ತಿಶಾಲಿ. ಡಿಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳು ಹೆಚ್ಚು ಕಾಲ ನೀರಿನಲ್ಲಿ ಉಳಿಯುವ ಸಾಮರ್ಥ್ಯ ಹೊಂದಿಲ್ಲ. ಆಮ್ಲಜನಕ ಪಡೆಯುವುದಕ್ಕೋ, ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುವುದಕ್ಕೋ ಅಥವಾ ಇಂಧನವನ್ನು ತುಂಬಿಸಿಕೊಳ್ಳುವುದಕ್ಕಾಗಿಯೋ ದಿನಕ್ಕೊಮ್ಮೆಯಾದರೂ ಅವು ಸಾಗರದಾಳದಿಂದ ಮೇಲಕ್ಕೆ ಬರಲೇ ಬೇಕು. ಸಾಗರದಾಳದಲ್ಲಿ ಹಾಗೂ ನೀರಿನ ಮೇಲೆಯೂ ಅವುಗಳ ಚಲನೆಯ ವೇಗ ಅಣುಶಕ್ತಿಯ ಜಲಾಂತರ್ಗಾಮಿ ನೌಕೆಗೆ ಹೋಲಿಸಿದರೆ ಆಮೆಗತಿಯದ್ದು. ಈ ಸಂದರ್ಭದಲ್ಲಿ ಶತ್ರುಪಾಳಯಕ್ಕೆ ಈ ನೌಕೆಗಳನ್ನು ಗುರುತಿಸಿ, ನಾಶಗೊಳಿಸುವುದಕ್ಕೆ ಸುಲಭ. ೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತದ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ‘ಐಎನ್‌ಎಸ್ ಘಾಝಿ’ ಕುರಿತಾಗಿ ಕಳೆದ ವರ್ಷ ಬಿಡುಗಡೆಯಾಗಿದ್ದ ಇದೇ ಹೆಸರಿನ ಹಿಂದಿ ಚಿತ್ರದಲ್ಲಿ ಡಿಸೆಲ್-ಎಲೆಕ್ಟ್ರಿಕ್ ಸಬ್‌ಮೆರಿನ್‌ಗಳು ಕಾರ್ಯನಿರ್ವಹಿಸುವ ಹಾಗೂ ಅದರ ಕಾರ್ಯನಿರ್ವಹಣೆಯ ಸಂಕೀರ್ಣ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ.

ಪಾರಂಪರಿಕ ನೌಕೆಗಳಿಗೆ ಹೋಲಿಸಿದರೆ ಅಣುಶಕ್ತಿಯ ರಿಯಾಕ್ಟರ್ ಸಹಾಯದಿಂದ ಚಲಿಸುವ ಇಂಧನ ಹೊಂದಿರುವ ಅರಿಹಂತ್, ಒಮ್ಮೆ ಸಾಗರದಾಳದಲ್ಲಿ ಇಳಿದರೆ ಯಾವುದೇ ಸಮಸ್ಯೆಯಿಲ್ಲದೆ ತಿಂಗಳುಗಳ ಕಾಲ ಅಲ್ಲೇ ಉಳಿದು, ವೇಗದ ಚಲನೆಯ ಮೂಲಕ ಭಾರತದ ರಕ್ಷಣೆಗೆ ಗಸ್ತು ನಡೆಸುತ್ತಿರಬಹುದು. ನೀರಿನ ಒತ್ತಡ, ಆಮ್ಲಜನಕ ಮೊದಲಾದ ಅನಿವಾರ್ಯತೆಗಳು ಎದುರಾಗದೆ, ಭೂ ಹಾಗೂ ವಾಯು ನೆಲೆಗಳು ಧ್ವಂಸಗೊಂಡರೂ ಸಮುದ್ರದಾಳದಿಂದಲೇ ಪ್ರತಿದಾಳಿ ನಡೆಸುವುದಕ್ಕೆ ಶಕ್ತ. ಇಂಡೋ-ಫೆಸಿಫಿಕ್ ಸಾಗರ ಪ್ರದೇಶ ಶಾಂತಿ ಹಾಗೂ ಸುರಕ್ಷತೆಯಿಂದ ಇರಬೇಕಾದರೆ ಆದಷ್ಟು ಬೇಗ ಅರಿಹಂತ್ ಮಾದರಿಯಲ್ಲಿ ಉಳಿದ ತಲೆಮಾರಿನ ೫ ಜಲಾಂತರ್ಗಾಮಿ ನೌಕೆಗಳು ಆದಷ್ಟು ಬೇಗನೇ ಪೂರ್ಣಗೊಂಡು ಸೇವೆಗೆ ಸಿದ್ಧವಾಗುವುದು ಅನಿವಾರ್ಯ.

ಹಾಗೆಂದು ಅರಿಹಂತ್‌ನಲ್ಲಿ ಮಿತಿಗಳೇ ಇಲ್ಲವೆಂದಲ್ಲ. ಅರಿಹಂತ್‌ನ ಗಾತ್ರ ಅಮೆರಿಕ ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ ಜಲಾಂತರ್ಗಾಮಿ ನೌಕೆಯಷ್ಟಿದೆ. ಅದೇ ರೀತಿ ವಿಶ್ವದ(ಅಮೆರಿಕ, ಚೀನ, ರಷ್ಯ ಇತ್ಯಾದಿ) ಸಮಕಾಲೀನ ಅಣುಶಕ್ತಿ ಚಾಲಿತ ಮತ್ತು ಅಣ್ವಸ್ತ್ರ ಶಕ್ತಿಯ ಜಲಾಂತರ್ಗಾಮಿ ನೌಕೆಗಳು ೨೫೦ ಮೆಗಾವ್ಯಾಟ್ ಶಕ್ತಿಯ ರಿಯಾಕ್ಟರ್ ಇಂಜಿನ್‌ಗಳನ್ನು ಹೊಂದಿವೆ. ಅವಕ್ಕೆ ಹೋಲಿಸಿದರೆ ೮೩ ಮೆಗಾವ್ಯಾಟ್ ಶಕ್ತಿಯ ಅರಿಹಂತ್‌ನ ಇಂಜಿನ್ ದುರ್ಬಲವಾಗಿದೆ. ಅವುಗಳ ಕಾರ್ಯಕ್ಷಮತೆಯ ಹಂತಕ್ಕೆ ಭಾರತವೂ ಏರಬೇಕಾದರೆ, ಇಂಜಿನ್ ನಿರ್ಮಾಣ ಕ್ರಿಯೆಯಲ್ಲಿ ವಿದೇಶಿ ತಂತ್ರಜ್ಞಾನದ ನೆರವು ಪಡೆಯುವುದು ಅನಿವಾರ್ಯ. ಪ್ರಸ್ತುತ ೭೫೦ ಕಿಲೋಮೀಟರ್ ಗುರಿಮುಟ್ಟಬಲ್ಲ ಕ್ಷಿಪಣಿಗಳು ಪಾಕಿಸ್ತಾನದ ನೆಲೆಗಳನ್ನು ಮುಟ್ಟಬಲ್ಲವು ಆದರೆ ಚೀನದ ನೆಲೆಗಳನ್ನಲ್ಲ. ಹಾಗಾಗಿ ಚೀನ ದೇಶದ ವಿನಾಶಕಾರಿ ಪ್ರವೃತ್ತಿಯನ್ನು ತಡೆಯುವ ನಿಟ್ಟಿನಲ್ಲಿ ಅರಿಹಂತ್ ಕ್ಲಾಸ್‌ನ ಮುಂದಿನ ೫ ನೌಕೆಗಳು ಬಹುದೂರ ತಲುಪಬಲ್ಲ ಬೃಹತ್ ಶಕ್ತಿ-ಸಾಮರ್ಥ್ಯದ ನೌಕೆಗಳಾಗಬೇಕಿವೆ. ಬೃಹತ್ ಶಕ್ತಿಯ ತಂತ್ರಜ್ಞಾನವುಳ್ಳ ಅಣುಶಕ್ತಿಯ ಅಣ್ವಸ್ತ್ರ ನೌಕೆ ಎಂದ ಮೇಲೆ ಅದನ್ನು ನಿರ್ಮಿಸಲು, ಪೋಷಿಸಲು ತಗಲುವ ವೆಚ್ಚವೂ ಅಧಿಕ. ಅಮೆರಿಕ ೭೨, ರಷ್ಯ ೪೦, ಫ್ರಾನ್ಸ್, ಬ್ರಿಟನ್‌ಗಳು ೮ ರಿಂದ ೧೦ ಹಾಗೂ ಚೀನ ೧೦ ಅಣುಶಕ್ತಿಯ ಆಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿವೆ. ಮತ್ತು ಇನ್ನೂ ಅನೇಕ ನೌಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇವುಗಳ ತುಲನೆಯಲ್ಲಿ ಭಾರತ ಬಹು ಹಿಂದೆ ಉಳಿದಿದೆ. ಅಥವಾ ಇನ್ನೂ ಮೊದಲ ತಲೆಮಾರಿನ ಅಣ್ವಸ್ತ್ರಗಳ ಬೆಳವಣ ಗೆಯಲ್ಲಿದೆ. ಹಾಗಾಗಿ ಭಾರತದ ರಕ್ಷಣೆಗೆ ಅರಿಹಂತ್ ಒಂದು ಹೆಜ್ಜೆಯೇ ಹೊರತು ಸರ್ವತ್ರ, ಸಶಕ್ತ ಪರಿಹಾರವಲ್ಲ.

ಅಣ್ವಸ್ತ್ರದ ಬೆದರಿಕೆಯೊಡ್ಡುವ ಚೀನ ಹಾಗೂ ಮುಖ್ಯವಾಗಿ ಪಾಕಿಸ್ತಾನಕ್ಕೆ ಸಂದೇಶ:

ಭಾರತದ ಅರಿಹಂತ್ ಜಲಾಂತರ್ಗಾಮಿ ನೌಕೆ ಭಾರತಕ್ಕೆ ಪ್ರತಿಷ್ಟೆಗಿಂತ ಅದರ ಅಸ್ತಿತ್ವಕ್ಕೆ ಅನಿವಾರ್ಯ ಆಯ್ಕೆ. ಆದರೆ ಭಾರತದ ಅರಿಹಂತ್‌ಗೆ ಪ್ರತಿಯಾಗಿ ಪಾಕಿಸ್ತಾನ ‘ಬಾಬರ್-೩’ ’ಕ್ರ್ಯೂಸ್ ಮಿಸೈಲ್ ಜಲಾಂತರ್ಗಾಮಿ ನೌಕೆ’ಯನ್ನು ನೌಕಾದಳಕ್ಕೆ ಸೇರಿಸಿದೆ. ‘ಮೊದಲು ಅಣ್ವಸ್ತ್ರ ದಾಳಿ’ ನಡೆಸುವುದಕ್ಕೂ ಸಿದ್ಧ ಎಂಬ ನೀತಿಯನ್ನು ಅನುಸರಿಸುತ್ತಿರುವ ಪಾಕಿಸ್ತಾನಕ್ಕೆ ಎರಡನೇ ಹಂತದ ಪ್ರತಿದಾಳಿ ನಡೆಸುವ ಅಣುಶಕ್ತಿಯ ಜಲಾಂತರ್ಗಾಮಿ ನೌಕೆಯ ಅಳವಡಿಕೆಯ ಅನಿವಾರ್ಯತೆಯೇ ಅನುಮಾನಾಸ್ಪದವಾಗಿದೆ. ನೌಕೆಯಲ್ಲಿ ‘ಬಾಬರ್’ ಅಳವಡಿಕೆಯಿಂದ ಹಾಗೂ ಚೀನದಿಂದ ಪಡೆಯಲಿರುವ ಅನೇಕ ಅಣ್ವಸ್ತ್ರ ನೌಕೆಗಳ ಸೇರ್ಪಡೆಯಿಂದ ಪಾಕಿಸ್ತಾನದ ಮೊದಲ ದಾಳಿ ನಡೆಸುವ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ. ಇದರಲ್ಲಿ ಭಾರತವನ್ನು ಬೆದರಿಸುವ, ಪ್ರಚೋದಿಸುವ ಮತ್ತು ಕನಿಷ್ಟ ದಕ್ಷಿಣ ಏಷ್ಯಾದ ಮಟ್ಟಿಗೆ ಅಣ್ವಸ್ತ್ರ ಸ್ಪರ್ಧೆಯನ್ನು ಜಾಗೃತವಾಗಿಡುವ ಪ್ರಯತ್ನದಂತೆ ತೋರುತ್ತದೆ. ಮೇಲಾಗಿ ಚೀನ-ಪಾಕಿಸ್ತಾನಗಳ ಮೈತ್ರಿತ್ವ ಮಿಲಿಟರಿ ನೆಲೆಯಲ್ಲಿಯೂ ಗಟ್ಟಿಗೊಳ್ಳುತ್ತಿರುವುದು, ಪಾಕಿಸ್ತಾನ ಚೀನದಿಂದ ಶಸ್ತ್ರಾಸ್ತ್ರ, ಅಣ್ವಾಸ್ತ್ರಗಳನ್ನು ಪಡೆಯುತ್ತಿರುವುದು ಭಾರತ ಹಾಗೂ ಸುತ್ತಮುತ್ತಲ ದೇಶಗಳ ಪಾಲಿಗೆ ಆತಂಕದ ಸಂಗತಿ.

ಇನ್ನು ಚೀನ ದೇಶದ ಮಿಲಿಟರಿಯಲ್ಲಿ ಬೃಹತ್ ಪ್ರಮಾಣದ ಸುಧಾರಣೆಗಳಾಗುತ್ತಿವೆ. ಅದರಲ್ಲೂ ಹೆಚ್ಚಿನ ಮಹತ್ತ್ವವನ್ನು ನೌಕಾದಳದ ಸುಧಾರಣೆಗೆ ನೀಡಲಾಗಿದೆ. ಮೇಲಾಗಿ ಚೀನ ಎರಡನೇ ತಲೆಮಾರಿನ ಶಾಂಗ್ ಮತ್ತು ಜಿನ್ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅದರ ಉದ್ದೇಶ ಪ್ರಭಾವಶಾಲಿ ಅಣ್ವಸ್ತ್ರಸಹಿತ ನೌಕಾದಳದ ಸಹಾಯದಿಂದ ದಕ್ಷಿಣ ಚೀನ ಸಾಗರ, ಹಿಂದೂ ಮಹಾಸಾಗರ ಹಾಗೂ ಇಂಡೋ-ಫೆಸಿಫಿಕ್ ಪ್ರಾಂತ್ಯಗಳಲ್ಲಿ ಹೆಚ್ಚುತ್ತಿರುವ ತನ್ನ ಪ್ರಾಬಲ್ಯವನ್ನು ಶಾಸನಬದ್ಧಗೊಳಿಸುವುದು. ಈ ಪ್ರಾಂತ್ಯಗಳಲ್ಲಿ ವಿಸ್ತಾರವಾದಿ ಹಾಗೂ ಆಕ್ರಮಣಶೀಲ ಚೀನದ ಪ್ರಾಬಲ್ಯ ನಿಯಂತ್ರಣದಲ್ಲಿರಬೇಕಾದರೆ ಅದಕ್ಕೆ ಅರಿಹಂತ್‌ನಂತಹ ರಕ್ಷಣೆ ಒದಗಿಸುವ ಸ್ವಯಂತಂತ್ರ ಮಾದರಿಯ ಪ್ರತ್ಯುತ್ತರ ಅನಿವಾರ್ಯ.

ಭಾರತಕ್ಕೆ ಪ್ರತಿದಾಳಿ ನಡೆಸಬಲ್ಲ ಅಣ್ವಸ್ತ್ರಗಳ ಅಭಿವೃದ್ಧಿಯ ಅನಿವಾರ್ಯತೆಯೇನು?

ಅಣ್ವಸ್ತ್ರ ಎಂಬ ಹೆಸರಿನಲ್ಲಿಯೇ ಭಯ ಕಾಣುವವರು ಹೆಚ್ಚು. ಅಣ್ವಸ್ತ್ರ ಪ್ರಯೋಗಿಸಿದರೆ ವಿನಾಶ ಎಂದೇ ಅರ್ಥ. ಭವಿಷ್ಯದಲ್ಲಿ ಪಾರಂಪರಿಕ ಯುದ್ಧ ವಿಧಾನಗಳು ನೆನೆಗುದಿಗೆ ಸರಿದು ಒಂದೇ ಒಂದು ಸ್ವಿಚ್‌ನಿಂದ ಸಮಸ್ತವನ್ನೂ ಹಾಳುಗೆಡವಬಲ್ಲ ಶಕ್ತಿ ಅಣ್ವಸ್ತ್ರಗಳೇ ಒಂದು ಹಂತದ ಪಾರಮ್ಯ ಮೆರೆಯಲಿವೆ. ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ. ಆದರೆ ಪಾಕಿಸ್ತಾನ, ಚೀನ ದೇಶಗಳು ಅಣ್ವಸ್ತ್ರದ ಮೂಲಕ ಭಾರತದ ಆಂತರಿಕ ಭದ್ರತೆ ಹಾಗೂ ಅಸ್ತಿತ್ವಕ್ಕೇ ಆತಂಕವೊಡ್ಡುತ್ತಿರುವಾಗ, ಭಾರತವೂ ಅದಕ್ಕೆ ಪ್ರತ್ಯುತ್ತರ ನೀಡುವುದಕ್ಕೆ ಸಜ್ಜಾಗಿರಬೇಕು ಇಲ್ಲದಿದ್ದರೆ ಅಣ್ವಸ್ತ್ರ ದಾಳಿ ಹಾಗೂ ಅಣ್ವಸ್ತ್ರ ದಾಳಿಯ ಭೀತಿ-ಬೆದರಿಕೆಗಳಿಂದಲೇ ಭಾರತ ಒಂದೇ ಬಾರಿಗೆ ಶತಮಾನಗಳಷ್ಟು ಹಿಂದಕ್ಕೆ ಹೋಗುವ ಅಪಾಯವಿದೆ.

ಭಾರತ ೧೯೯೮ರಲ್ಲಿ, ಅಂದರೆ ಸರಿಯಾಗಿ ಎರಡು ದಶಕಗಳ ಹಿಂದೆ, ಪೋಖ್ರಾನ್‌ನ ‘ಆಪರೇಶನ್ ಶಕ್ತಿ’ ಪರೀಕ್ಷಣೆಗಳ ಮೂಲಕ ಅಧಿಕೃತವಾಗಿ ಅಣ್ವಸ್ತ್ರ ದೇಶವಾಗಿ ಜಗಜ್ಜಾಹೀರಾಯಿತು. ಅದೇ ಸುಮಾರಿಗೆ ಪಾಕಿಸ್ತಾನವೂ ಅಣ್ವಸ್ತ್ರ ದೇಶವಾಗಿ ಗುರುತಿಸ್ಪಟ್ಟಿತು. ಭಾರತದ ಗೌಪ್ಯ ಅಣ್ವಸ್ತ್ರಗಳ ಪರೀಕ್ಷಣೆಯ ಸುದ್ದಿಯಿಂದ ಮೊದಲಿಗೆ ವಿಶ್ವದ ಅನೇಕ ದೇಶಗಳು ಬೆಚ್ಚಿಬಿದ್ದವು. ಆದರೆ ಕಾಲಕ್ರಮೇಣ ಪಾಕಿಸ್ತಾನ ಹೊರತುಪಡಿಸಿ ಭಾರತದ ಅಣ್ವಸ್ತ್ರ ಪರೀಕ್ಷೆಯ ಅನಿವಾರ್ಯತೆಯನ್ನು ಅರಿತವು. ಎಲ್ಲರಿಗೂ ಭಾರತ ಅಣ್ವಸ್ತ್ರವನ್ನು ಹಿಂಸೆಗೆ ಬಳಸುವುದಿಲ್ಲ; ಅದೇನಿದ್ದರೂ ಭಾರತದ ರಕ್ಷಣೆಗೆ ಇರುವ ಕವಚ ಎಂಬ ಸತ್ಯವನ್ನು ಅರಿತವು. ಪ್ರಾರಂಭದಿಂದಲೂ ಭಾರತ, ಅಣ್ವಸ್ತ್ರಗಳನ್ನು ’ಮೊದಲು ಪ್ರಯೋಗಿಸುವುದಿಲ್ಲ’ ಮತ್ತು ಕನಿಷ್ಟ ರಕ್ಷಣೆಗಾಗಿ ಮಾತ್ರವೇ ಅಭಿವೃದ್ಧಿಪಡಿಸುವುದು ಎಂಬ ನಿಯಮ ಹಾಗೂ ಸಿದ್ಧಾಂತವನ್ನು ಪಾಲಿಸಿಕೊಂಡು ಬಂದಿದೆ. ಭಾರತದ ಅಣ್ವಸ್ತ್ರ ನೀತಿಯ ಮತ್ತೊಂದು ಮಹತ್ತ್ವದ ವಿಚಾರವೆಂದರೆ ಅದು ಯಾವುದೇ ಕಾರಣಕ್ಕೂ ತನ್ನಲ್ಲಿರುವ ಅಣ್ವಸ್ತ್ರಗಳನ್ನು, ಅಣ್ವಸ್ತ್ರರಹಿತ (ಹೊಂದಿರದ) ದೇಶಗಳ ಮೇಲೆ ಪ್ರಯೋಗಿಸುವುದಿಲ್ಲ ಎಂಬ ದೃಢ ಸಂಕಲ್ಪ. ಇಲ್ಲಿ ಸಾರ್ವತ್ರಿಕ ಮತ್ತು ಪಾರದರ್ಶಕ ‘ಅಣ್ವಸ್ತ್ರಮುಕ್ತ’ ವಿಶ್ವವನ್ನು (ನ್ಯೂಕ್ಲಿಯರ್ ಫ್ರಿ ವಲ್ಡ್) ನಿರ್ಮಿಸುವ ಸ್ಪಷ್ಟ ಸಂದೇಶ ಅಡಗಿದೆ.

೨೦೦೩ರಲ್ಲಿ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ‘ರಕ್ಷಣೆಗೆ ಸಂಬಂಧಿಸಿದ ಕ್ಯಾಬಿನೆಟ್ ಸಮಿತಿ’ ತೆಗೆದುಕೊಂಡ ಐತಿಹಾಸಿಕ ನಿರ್ಣಯ ಶಾಂತಿಬಯಸುವ, ಶಾಂತಿಮಾರ್ಗದಲ್ಲಿ ಸಾಗುವ ಯಾವುದೇ ದೇಶಕ್ಕೂ ಭಾರತದಿಂದ ಅಪಾಯವಿಲ್ಲ ಎಂಬ ಸ್ಪಷ್ಟ ಸಂದೇಶ ಹಾಗೂ ಮಾರ್ಗದರ್ಶಿಯನ್ನು ನೀಡಿದೆ. ಅದಕ್ಕೆ ಪೂರಕವಾಗಿ ರೂಪುಗೊಂಡ ಸಕ್ಷಮ, ಸುರಕ್ಷಿತ ‘ನ್ಯೂಕ್ಲಿಯರ್ ಆದೇಶ ಮತ್ತು ಅಧಿಕಾರ’ ವ್ಯವಸ್ಥೆ ಅಣ್ವಸ್ತ್ರ ಬಳಕೆಯನ್ನು  ಮತ್ತಷ್ಟು ಜಾಗರೂಕ ಹಾಗೂ ಜವಾಬ್ದಾರಿಯುತಗೊಳಿಸಿದೆ. ಇದನ್ನು ಅರಿತ ಪಶ್ಚಿಮದ ರಾಷ್ಟ್ರಗಳೂ ಭಾರತದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಬೇಗನೇ ಹಿಂಪಡೆದವು. ಇದರಲ್ಲಿ ಅಂದಿನ ಸರಕಾರದ ರಾಜತಾಂತ್ರಿಕ ಕ್ಷಮತೆಯ ಸಾಧನೆಯೂ ಅಡಗಿದೆ. ಭಾರತದ ಪಾರದರ್ಶಕ ಪರಂಪರೆ ಹಾಗೂ ನೈತಿಕ ನೀತಿಯ ಕಾರಣದಿಂದಲೇ ಇಂದು ಚೀನ ಹೊರತುಪಡಿಸಿ ಬಹುತೇಕ ರಾಷ್ಟ್ರಗಳು ಭಾರತವನ್ನು ‘ಎನ್‌ಎಸ್‌ಜಿ(ನ್ಯೂಕ್ಲಿಯರ್ ಸಪ್ಲಯರ್ಸ್ ಗ್ರೂಪ್)’ಗೆ ಸೇರಿಸಲು ಒಪ್ಪಿಗೆ ಸೂಚಿಸಿವೆ.

೨೦೧೦ರ ನೀನಾಸಮ್ ಸಾಂಸ್ಕೃತಿಕ ಶಿಬಿರದಲ್ಲಿ ಮಾತನಾಡುತ್ತಾ, ಚಿಂತಕ ಯು.ಆರ್. ಅನಂತಮೂರ್ತಿ ಭಾರತದ ಅಣ್ವಸ್ತ್ರ ನೀತಿಯಲ್ಲಿಯೇ ‘ಸಂಕಲ್ಪ ಹಿಂಸೆ’ (ನೋಡಿ: ಜನ್ನನ ಯಶೋಧರ ಚರಿತೆ) ಅಡಗಿದೆ. ಹಾಗಾಗಿ ಭಾರತವೇ ಹಿಂಸೆಯಿಂದ ಶಾಂತಿಯನ್ನು ಸ್ಥಾಪಿಸಬೇಕೆಂಬ ಲೆಕ್ಕಾಚಾರದಲ್ಲಿದೆ ಎಂದು ಭಾರತದ ಅಣ್ವಸ್ತ್ರ ನೀತಿ ಹಾಗೂ ಅದರ ರುವಾರಿಗಳಲ್ಲೊಬ್ಬರಾದ ಅಬ್ದುಲ್ ಕಲಾಂರನ್ನು ಟೀಕಿಸಿ ಮಾತನಾಡಿದ್ದರು. ಭಾರತದ ಅಣ್ವಸ್ತ್ರ ನೀತಿಯ ಹಾಗೂ ರಕ್ಷಣಾ ತಂತ್ರಗಾರಿಕೆಯ ಕುರಿತಾದ ತಪ್ಪು ಪರಿಕಲ್ಪನೆಗಳನ್ನು ಹೊತ್ತವರು ಇಂತಹ ವಾದಗಳಿಗೆ ಜೋತು ಬೀಳುವುದು ಮತ್ತು ತಮ್ಮ ಅಜ್ಞಾನದ ಮೂಲಕ ಸಮುದಾಯವನ್ನು ದಿಕ್ಕುತಪ್ಪಿಸುತ್ತಿರುತ್ತವೆ. ಆದರ್ಶದ ಚಿನ್ಮಯಿ ಕಲ್ಪನೆಯಲ್ಲಿ ವಾಸ್ತವಿಕ ಅಸ್ಮಿತೆಗೆ ಅನಿವಾರ್ಯವಾದ ಮೃಣ್ಮಯಿ ಪ್ರಜ್ಞೆಯನ್ನು ಅಳಿಸುವುದು ಅಸಾಧ್ಯ. ದೇಶದ ಭೂಭಾಗ ಸುರಕ್ಷಿತವಾಗಿದ್ದಾಗ ಮಾತ್ರ ದೇಶವಾಸಿಗಳು ಸುರಕ್ಷಿತವಾಗಿರಲು ಸಾಧ್ಯ. ಮನುಷ್ಯರು ಬದುಕಿದರೆ ತಾನೆ ಮಾನವತಾವಾದ ಉಳಿಯುವುದು. ದುರ್ಬಲವಾಗಿರುವುದು ಎಂದರೆ ಸುಭಿಕ್ಷತೆಯ ಕೊನೆ, ಲೂಟಿಕೋರರಿಗೆ ಆಹ್ವಾನ ಎಂದರ್ಥ.

ಬಹುತೇಕ ಮುಂದುವರೆದ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ದೇಶದ ಶಸ್ತ್ರಾಸ್ತ್ರ ಕೈಗಾರಿಕೆಗೆ ಇಂಬು ನೀಡಲು ಬೇರೆ ದೇಶಗಳಲ್ಲಿ ಯುದ್ಧಮಾಡಿಸುವುದು, ಯುದ್ಧದ ವಾತಾವರಣ ನಿರ್ಮಿಸಿ ತಮ್ಮ ಮಾರುಕಟ್ಟೆಯನ್ನು ಖಾಯಂಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ. ಆದರೆ ಭಾರತ ಶಾಂತಿಪ್ರಿಯ ದೇಶ, ನಮ್ಮನ್ಯಾರು ಕೆಣಕುತ್ತಾರೆ? ಕೆಣಕಿದರೂ ಅವರಿಗೆ ಬೇಕಾದ ಭೂಪ್ರದೇಶವನ್ನೋ ಅಥವಾ ಅವರು ಕೇಳಿದ್ದನ್ನು ಕೊಟ್ಟುಬಿಟ್ಟರೆ ಭಾರತದ ಒಂದು ಉದಾತ್ತ ನಡೆಯ ಮೂಲಕ ವಿಶ್ವದಲ್ಲಿಯೇ ಶಾಂತಿ ಸ್ಥಾಪಿಸಬಹುದು ಎಂಬ ಹುಸಿ, ದಾರಿತಪ್ಪಿಸುವ ವಾದವನ್ನು ಹುಟ್ಟುಹಾಕುವವರು, ದೇಶವೊಂದು ಶಕ್ತಿಯುತವಾಗಿಲ್ಲದಿದ್ದರೆ ಆ ದೇಶ ಎಂದಿಗೂ ಶಾಂತಿಯಿಂದ ಇರಲು ಸಾಧ್ಯವಿಲ್ಲ ಎಂಬ ಕನಿಷ್ಟ ಸತ್ಯವನ್ನು ತಿಳಿಯುವ, ತಿಳಿಸುವ ಪ್ರಯತ್ನ ಮಾಡುವುದಿಲ್ಲ. ಭಾರತ ದುರ್ಬಲವಾಗಿದ್ದರೆ ಚೀನ, ಅಮೆರಿಕದಂತಹ ಬಲಿಷ್ಠ ರಾಷ್ಟ್ರಗಳು ಬಿಡಿ, ಗಾತ್ರ ಹಾಗೂ ಶಕ್ತಿಯಲ್ಲಿ ಅವಕ್ಕಿಂತಲೂ ಸಣ್ಣಪುಟ್ಟ ದೇಶಗಳೇ ಭಾರತದ ಮೇಲೆ ಯಜಮಾನ್ಯವನ್ನು ಸ್ಥಾಪಿಸಿಬಿಡುತ್ತವೆ. ಶಕ್ತಿಯನ್ನು ದೌರ್ಜನ್ಯಕ್ಕೆ ಬಳಸದಿದ್ದರೆ ಶಕ್ತಿಯುತವಾಗಿರುವುದು ಎಂದಿಗೂ ಮಿತಿಯಲ್ಲ. ಶಕ್ತಿಯನ್ನು ಉತ್ತಮ ಕಾರ್ಯಕ್ಕೆ ಬಳಸಿದರೆ ಭಾರತವಷ್ಟೇ ಅಲ್ಲ, ಭಾರತದೊಂದಿಗೆ ಸಾಗುವ ಪ್ರತಿಯೊಂದು ದೇಶಗಳೂ ಶಾಂತಿಯುತವಾಗಿ ಮತದತು ಸುಭಿಕ್ಷವಾಗಿರಲು ಸಾಧ್ಯ.

ಕೋಸ್ಟರಿಕ ಎಂಬ ಮಧ್ಯ ಅಮೆರಿಕದ, ಬಹುತೇಕ ಫುಟ್ಬಾಲ್ ಕ್ರೀಡೆಗೆ ಹೆಸರುವಾಸಿಯಾದ, ದೇಶದ ರಕ್ಷಣಾ ಬಜೆಟ್ ಸೊನ್ನೆ. ಹಾಗೆಂದು ಭಾರತವೂ ತನ್ನ ರಕ್ಷಣಾ ಬಜೆಟ್ ಅನ್ನು ಸೊನ್ನೆಗೆ ಇಳಿಸಿದರೆ ಮರುದಿನ ಭಾರತವೆಂಬ ಈ ದೇಶವೇ ಇರುವುದಿಲ್ಲ. ಮತ್ತೊಮ್ಮೆ ೧೯೪೭ರ ಹಿಂದೆಯಿದ್ದ ದಾಸ್ಯದ ಸ್ಥಿತಿಗೆ ಮರಳಬೇಕಾಗುತ್ತದೆ. ಹಾಗೊಂದು ವೇಳೆ ಸೊನ್ನೆ ರಕ್ಷಣಾ ಬಜೆಟ್ ಹೊಂದಿರುವ ಕೋಸ್ಟರಿಕ ಮತ್ತು ಅಲ್ಲಿನ ಜನರು ಸುರಕ್ಷಿತವಾಗಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ವಿಸ್ತೀರ್ಣದಲ್ಲಿ ಕೇರಳಕ್ಕಿಂತಲೂ ಸಣ್ಣ ಭೂಪ್ರದೇಶದ, ಅಮೆರಿಕದ ನೆರಳಿರುವ ದೇಶವನ್ನು ಆಕ್ರಮಿಸಲು ಹೊರಟ ದೇಶಕ್ಕೆ ಏನು ಸಿಗುತ್ತದೆ? ಬರೀ ನಷ್ಟ. ಯಾಕೆಂದರೆ ಆ ದೇಶದಲ್ಲಿ ಪಡೆಯುವುದಕ್ಕೆ ಏನೂ ಇಲ್ಲ. ಆದರೆ ಭಾರತದಲ್ಲಿ ಏನಿಲ್ಲ?

ಇತ್ತೀಚೆಗೆ ಅಮೆರಿಕದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿಯೇ ಗನ್ ತಂದು ಶೂಟೌಟ್ ನಡೆಸಿದ್ದ. ಆಗ ಆ ದೇಶದ ರಾಷ್ಟ್ರಾಧ್ಯಕ್ಷ ತಮ್ಮ ಮೇರು ಪ್ರತಿಭೆ ಹಾಗೂ ಅಮೆರಿಕನ್ನರ ಅತ್ಯುನ್ನತ ಮೇಧಾವಿತನವನ್ನು ಪ್ರಚುರಪಡಿಸುವಂತೆ ಒಂದು ಹೇಳಿಕೆಯನ್ನು ನೀಡುತ್ತಾರೆ. ಆ ಪ್ರಕಾರ ಪ್ರತಿಯೊಬ್ಬ ಶಿಕ್ಷಕನ ಕೈಗೂ ಒಂದೊಂದು ಬಂದೂಕನ್ನು ನೀಡಿದರೆ ವಿದ್ಯಾರ್ಥಿಗಳು ತಾನೇ ತಾನಾಗಿ ಭಯದಿಂದ ನಿಯಂತ್ರಣದಲ್ಲಿರುತ್ತಾರೆ, ಇಂತಹ ಕೃತ್ಯಗಳು ಸಹಜವಾಗಿ ನಿಲ್ಲುತ್ತವೆ. ಸಮಸ್ಯೆಯನ್ನು ಉಲ್ಬಣಿಸುವಂತೆ ವಿಶ್ವ ಇಂತಹ ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದೆ. ಇದು ಹಿಂದಿಯ ’ಜನ್ನತ್ ೨’ ಚಲನಚಿತ್ರದ ನಾಯಕ ಹಾಗೂ ಅಮೆರಿಕದ ಗನ್ ಲಾಬಿ ಪರ ಧ್ವನಿಯೆತ್ತುವವರ ಧ್ವನಿಯಂತಿದೆ. ಹೀಗೆ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಬಂದೂಕು, ಶಸ್ತ್ರಾಸ್ತ್ರ ನೀಡಬೇಕು. ಆಗ ಪರಸ್ಪರ ಭಯದಿಂದ ತಾವೇ ತಾವಾಗಿ ಎಲ್ಲರೂ ಶಾಂತಿಯಿಂದ ನೆಲೆಸುತ್ತಾರೆ ಎಂಬ ದಾರಿತಪ್ಪಿಸುವ ವಾದವೂ ರಕ್ಷಣೆಗೆ ಸಂಬಂಧಿಸಿದ ವಿಚಾರದಲ್ಲಿ ಮತ್ತೊಂದು ತುದಿಯಲ್ಲಿ ನಿಲ್ಲುವ ಅತಿರೇಕದ ವಾದ. ಎರಡೂ ವಾದಗಳು ಮನುಷ್ಯ ಕುಲವನ್ನು ವಿನಾಶದತ್ತ ಕೊಂಡುಯ್ಯುವುದರಲ್ಲಿ ಅನುಮಾನವಿಲ್ಲ. ಒಂದರಲ್ಲಿ ಸ್ವಯಂ ರಕ್ಷಣೆಗೂ ನಿಲ್ಲದೆ ಕೈಕಟ್ಟಿ ನಿಲ್ಲುವ ಸಂದೇಶವಿದ್ದರೆ, ಮತ್ತೊಂದರಲ್ಲಿ ಜಿದ್ದಿಗೆ ಬಿದ್ದು ಶಕ್ತಿಯ ಪರಾಕಾಷ್ಟೆಯಿಂದ ಏಕಪಕ್ಷೀಯ ಯುದ್ಧ ಸಾರುವ ಹುನ್ನಾರವಿದೆ. ಅಣ್ವಸ್ತ್ರ ಕ್ರೋಢೀಕರಣ ಮತ್ತು ಬಳಕೆಯ ನೀತಿಯಲ್ಲಿಯೂ ಎರಡೂ ಅತಿರೇಕದ ವಾದಗಳು ಚಾಲ್ತಿಯಲ್ಲಿವೆ. ಇಂತಹ ಹೊತ್ತಿನಲ್ಲಿ ಭಾರತದ ಅಸ್ತಿತ್ವವನ್ನು ಕಾಪಿಡಲು ’ಅಣ್ವಸ್ತ್ರ ತ್ರಿವಳಿ’ಗಳು ಮಹತ್ವದ ಪಾತ್ರವಹಿಸುತ್ತವೆ.

ಈ ವರ್ಷ ತೆರೆಕಂಡ, ೧೯೯೮ರ ‘ಪೋಖ್ರಾನ್೨’ ಪರೀಕ್ಷಣೆಗಳಿಗೆ ಸಂಬಂಧಿಸಿದ ‘ಪರ್ಮಾಣು’ ಎಂಬ ಹಿಂದಿ ಚಲನಚಿತ್ರದಲ್ಲಿ ಭಾರತ ಅಣ್ವಸ್ತ್ರ ಪರಿಕ್ಷಣೆ ನಡೆಸುವ ಹಾಗೂ ಅಣ್ವಸ್ತ್ರ ಶಕ್ತಿಯಾಗಿ ಹೊರಹೊಮ್ಮುವ ಅನಿವಾರ್ಯತೆಯನ್ನು ಒತ್ತಿಹೇಳುವ ಮಾತಿದೆ. ‘ನಮ್ಮ ವಾಹನ ಸುಮಾರು ಸಮಯದಿಂದ ಗ್ಯಾರೆಜ್‌ನಲ್ಲಿ ನಿಲ್ಲಿಸಲಾಗಿದೆ(೧೯೭೪ ರ ಶಾಂತಿಯುತ ಪರೀಕ್ಷೆ) ಆದರೆ ಅದು ಚಲಿಸುತ್ತಿದೆಯೋ ಇಲ್ಲವೋ ತಿಳಿಯುವುದಕ್ಕೆ ಮತ್ತು ತಿಳಿಸುವುದಕ್ಕಾದರೂ ನಾವು ಅಣ್ವಸ್ತ್ರಗಳನ್ನು ಪರೀಕ್ಷಿಸಬೇಕು. ಆಗಲೇ ನಮ್ಮ ಶಕ್ತಿ ಜಗತ್ತಿಗೆ ಅರಿವಾಗುವುದು ಮತ್ತು ಸರಿಯಾದ ಗೌರವ ಪ್ರಾಪ್ತವಾಗುವುದು. ’ಅಬ್ ಹಮ್ ಡರ್ ಕೆ ಶಾಂತ್ ನಹಿ ಭೇಟೆಂಗೆ, ಕರ‍್ಕೆ ಶಾಂತ್ ಭೇಟೆಂಗೆ(ಹೆದರಿಕೆಯಿಂದಲ್ಲ ಬದಲಾಗಿ ಏನಾದರು ಮಾಡಿ ಶಾಂತವಾಗಿ ಖುರಬೇಕಿದೆ)’.

ಖಂಡಿತವಾಗಿಯೂ ಭಾರತದ ರಕ್ಷಣೆಗೆ ಅಣ್ವಸ್ತ್ರವನ್ನು ಪ್ರಯೋಗಿಸಲೇಬೇಕಿಂದಿಲ್ಲ. ಅದು ಕೇವಲ ಬತ್ತಳಿಕೆಯಲ್ಲಿ ತಯಾರಿದ್ದರೆ ಸಾಕು. ಆಗ ಭಾರತವನ್ನು ಹೆದರಿಸುವ ಮಾತು ದೂರ. ಸಮಾನ ಗೌರವದಿಂದ ಕಾಣುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಭಾರತದ್ದು ಸ್ವತಂತ್ರ, ಸ್ವಾಯತ್ತ ಅಸ್ಮಿತೆ ಹಾಗೂ ರಕ್ಷಣೆಯ ನೈತಿಕತೆಯನ್ನು ಉಳಿಸಿಕೊಳ್ಳುವ, ಯಾರಿಗೂ ಕೇಡು ಬಯಸದೆ ಸರ್ವರ ಒಳಿತು ಅರಸುವ ಮಧ್ಯಮ ಮಾರ್ಗ. ಆದ್ದರಿಂದ ಅದು ವಿಶ್ವದ ಯಾವುದೇ ಶಕ್ತಿಯ ಮುಂದೆ ಸ್ವಂತವಾಗಿ ನಿಂತು ಶಾಂತಿ ಹಾಗೂ ಸುರಕ್ಷತೆಯ ಆತ್ಮವಂಚನೆಯಿಲ್ಲದ ಸ್ವತಂತ್ರ ಧ್ವನಿ ಮೊಳಗಿಸುವ ಬದ್ಧತೆ ಹೊಂದಿದೆ. ಅದರ ಭಾಗವಾಗಿಯೇ ನೌಕಾದಳದಲ್ಲಿ ಮೊದಲ ತಲೆಮಾರಿನ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಶಕ್ತಿಯ ಐಎನ್‌ಎಸ್ ಅರಿಹಂತ್‌ನ ಒಳಗೊಳ್ಳುವಿಕೆ ಹಾಗೂ ಅದರ ಮೊದಲ ಹಂತದ ಪ್ರಾಯೋಗಿಕ ಪ್ರತಿಬಂಧಕ ಗಸ್ತನ್ನು ಅರ್ಥಮಾಡಿಕೊಳ್ಳಬೇಕು. ಜೈನರ ಮೊದಲ ತೀರ್ಥಂಕರ ’ಅರಿಹಂತ’. ಎಂದರೆ ಅರಿಷಡ್ವರ್ಗಗಳನ್ನು ಗೆದ್ದವನು ಎಂದರ್ಥ. ಅರಿಹಂತ್ ಮಾದರಿಯಲ್ಲಿ ಉಳಿದ ೬ ಜಲಾಂತರ್ಗಾಮಿ ನೌಕೆಗಳೂ ಭಾರತದ ಪಾಲಿಗೆ ನೂರಾರು ಬಗೆಯ ಅಣ್ವಸ್ತ್ರಗಳ ಮುಖೇನ ಬೆದರಿಕೆಯೊಡ್ಡುವ ವಿನಾಶಕಾರಿ ಶಕ್ತಿಗಳನ್ನು ಗೆಲ್ಲುವ, ಅವುಗಳನ್ನು ನಾಶಪಡಿಸುವ ಭದ್ರತೆಯ ಸುರಕ್ಷಾ ಕವಚವಾಗಲಿ. ನಮೋ ಅರಿಹಂತಾಯ.

(ಉದಯವಾಣಿ ದಿನಪತ್ರಿಕೆ ಪ್ರಕಟಿತ ಬರಹ)

Facebook ಕಾಮೆಂಟ್ಸ್

ಲೇಖಕರ ಕುರಿತು

Shreyanka S Ranade

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!