ಅಂಕಣ

‘ಶಕುಂತಳಾ’

 ‘ಶಕುಂತಳಾ’ (ಕಥಾಸಂಕಲನ)

ಲೇಖಕರು: ಗುರುಪ್ರಸಾದ್ ಕಾಗಿನೆಲೆ

ಎರಡನೆಯ ಮುದ್ರಣ: ೨೦೧೨, ಪುಟಗಳು: ೧೫೦, ಬೆಲೆ: ರೂ ೮೦-೦೦

ಪ್ರಕಾಶಕರು: ಛಂದ ಪುಸ್ತಕ, ೧-೦೦೪, ಮಂತ್ರಿ ಪ್ಯಾರಾಡೈಸ್,

ಬನ್ನೇರುಘಟ್ಟ ರಸ್ತೆ, ಬೆಂಗಳೂರು-೭೬

ಗುರುಪ್ರಸಾದ್ ಕಾಗಿನೆಲೆಯವರು ಪ್ರವೃತ್ತಿಯಿಂದ ಬರಹಗಾರರು ಮತ್ತು ವೃತ್ತಿಯಿಂದ ವೈದ್ಯರು; ಹಲವು ವರ್ಷಗಳಿಂದ ಅನಿವಾಸಿ ಕನ್ನಡಿಗರಾಗಿ ಕನ್ನಡ ಬರಹಗಾರರಾಗಿದ್ದಾರೆ. ಹುಟ್ಟೂರು ಶಿವಮೊಗ್ಗ. ಓದಿದ್ದು ಮೈಸೂರು, ಮಂಡ್ಯಗಳಲ್ಲಿ. ಡೆಟ್ರಾಯ್ಟನಲ್ಲಿ ವೈದ್ಯಕೀಯ ವೃತ್ತಿಗೆ ಬೇಕಾದ ಉನ್ನತ ತರಬೇತಿ ಪಡೆದಿದ್ದಾರೆ. ‘ಶಕುಂತಳಾ’ವನ್ನಲ್ಲದೆ ಇವರು ‘ನಿರ್ಗುಣ’, ‘ಬಿಳಿಯ ಚಾದರ’, ‘ಗುಣ’, ‘ವೈದ್ಯ ಮತ್ತೊಬ್ಬ’ ಕೃತಿಗಳನ್ನು ರಚಿಸಿದ್ದಾರೆ. ‘ಆಚೀಚೆ ಕತೆಗಳು’ ಮತ್ತು ‘ಬೇರು-ಸೂರು’ ಇವರು ಸಂಪಾದಿಸಿದ ಕೃತಿಗಳು.

ಕಾಗಿನೆಲೆಯವರ ಬಿಡಿ ಕತೆಗಳನ್ನು ಅಲ್ಲಲ್ಲಿ ಓದಿದ್ದೆನಾದರೂ ಸಂಕಲನವಾಗಿ ಅವರ ಒಂದಷ್ಟು ಕತೆಗಳನ್ನು ನಾನು ಓದಿದ್ದು ‘ಶಕುಂತಳಾ’ದಲ್ಲಿಯೇ. ಕಾಗಿನೆಲೆಯವರು ಸದ್ಯ ಒಳ್ಳೆಯ ಪ್ರವರ್ಧಮಾನ ಕತೆಗಾರ. ಮನುಷ್ಯಸ್ವಭಾವದ ಸೂಕ್ಷ್ಮ ಗ್ರಹಿಕೆ, ಸಶಕ್ತ ಅಭಿವ್ಯಕ್ತಿಯ ಪ್ರತಿಭೆ ಮತ್ತು ಪ್ರಪಂಚವನ್ನು ಕಾಣುವ ಹೊಸ ದೃಷ್ಟಿ ಇವರ ಕತೆಗಾರಿಕೆಯ ವೈಶಿಷ್ಟ್ಯವಾಗಿದೆ.  ಈ ಸಂಕಲನದಲ್ಲಿ ಗುರುಪ್ರಸಾದ್ ಕಾಗಿನೆಲೆಯವರು ೨೦೦೩ರಿಂದ ೨೦೦೬ರ ನಡುವೆ ಬರೆದ ಹತ್ತು ಕಥೆಗಳಿವೆ. ಇವುಗಳಲ್ಲಿ ‘ಬೀಜ’, ‘ಮೊದಲ ತೇದಿ’, ‘ಸುಮ್ಮನೆ’, ‘ವಿಲ್ಲಾ ವೈದ್ಯ’ಕತೆಗಳನ್ನು ಬಿಟ್ಟು ಉಳಿದ ಕತೆಗಳು ಜರುಗುವುದು ಆಸ್ಪತ್ರೆಯ ಆವರಣಗಳಲ್ಲಿ. ರೋಗಿಯೊಬ್ಬರ ಮನಸ್ಥಿತಿಯೇ ಈ ಕತೆಗಳ ವಸ್ತು ಎಂದು ಸ್ಥೂಲವಾಗಿ ಹೇಳಬಹುದಾದರೂ ಇದೊಂದು ಪ್ರಾಥಮಿಕ ಮಾಹಿತಿ ಮಾತ್ರ. ಮನುಷ್ಯಸಂಬಂಧಗಳ ಸಂಕೀರ್ಣತೆ, ಸ್ವಭಾವವೈಚಿತ್ರ್ಯ ಮತ್ತು ಗೋಜಲಾಗುತ್ತಲೆ ಉಳಿದುಕೊಳ್ಳುವ ನಮ್ಮ ಒಡನಾಟಗಳು ಈ ಕತೆಗಳಲ್ಲಿ ನಿರೂಪಣೆಗೊಳ್ಳುತ್ತವೆ. ಕಾಗಿನೆಲೆಯವರ ಕತೆಗಳ ಬಂಧ ಬಿಗಿಯಾಗಿರುತ್ತದೆ, ಮತ್ತು ಕತೆಗಳ ಆಶಯದ ಕುರಿತು ಇವರ ನಿಲುವು ಅಸಾಂಪ್ರದಾಯಿಕವಾಗಿರುತ್ತದೆ. ಇದರಿಂದಾಗಿ ಈ ಕತೆಗಳಲ್ಲಿ ನಮಗೆ ಕುತೂಹಲ ಇಮ್ಮಡಿಸುತ್ತದೆ. ಈ ಸಂಕಲನದಲ್ಲಿರುವ ಹತ್ತು ಕತೆಗಳಲ್ಲಿ  ‘ಬೀಜ’, ‘ಮೊದಲ ತೇದಿ’, ‘ಡ್ಯಾಡಿ’, ‘ಶಕುಂತಳಾ’ ಮತ್ತು ‘ಸುಮ್ಮನೆ’ ಇವು ನನಗೆ ಹೆಚ್ಚು ಸಾರ್ಥಕ ಕತೆಗಳೆನಿಸುತ್ತವೆ.

ಕಾಗಿನೆಲೆಯವರ ‘ಶಕುಂತಲಾ’ ಕತೆಗೆ ವಿವೇಕ ಶಾನಭಾಗರು ಖಾಸಗಿಯಾಗಿ ಪ್ರತಿಕ್ರಿಯಿಸಿದ್ದನ್ನು ಪುಸ್ತಕದ ಬ್ಲರ್ಬ್‌ನಲ್ಲಿ ಬಳಸಿಕೊಳ್ಳಲಾಗಿದೆ. “ಶಕುಂತಳಾ ವಸ್ತು ಮತ್ತು ರಚನೆಯಲ್ಲಿ ಸ್ಪಷ್ಟವಾಗಿ ಹೊಸತನ್ನು ಶೋಧಿಸುವ ಕತೆ. ಅಂತೆಯೇ ಜೀವದ ಅವ್ಯಕ್ತ ಹಂಬಲಗಳು, ಕೈಮೀರಿ ಹೋದ ಭೂತಕಾಲ, ಬಿಟ್ಟುಬಂದ ಹಾದಿಗಳು ಮತ್ತು ವರ್ತಮಾನದಲ್ಲಿ ಎಲ್ಲವನ್ನೂ ಏಕತ್ರ ಹಿಡಿಯುವ ಸಂಕಟಗಳನ್ನು ಈ ಕತೆ ಬಹು ಸಮರ್ಥವಾಗಿ ಹೇಳುತ್ತದೆ. ಅವ್ಯಕ್ತತೆ ಮತ್ತು ಅಮೂರ್ತತೆಯನ್ನು ಹೇಳಲು ಅಗತ್ಯವಾದ ರೀತಿಯಲ್ಲಿ ಕತೆಯ ನಿರ್ವಹಣೆಯಿದೆ. ಎಷ್ಟನ್ನು ಹೇಳಬೇಕು, ಎಷ್ಟನ್ನು ಸೂಚಿಸಬೇಕು, ಎಷ್ಟನ್ನು ಮುಚ್ಚಿಡಬೇಕು ಅನ್ನುವ ಕಲೆಗಾರಿಕೆ ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.” ವಿವೇಕ ಶಾನಭಾಗರ ಈ ಅನಿಸಿಕೆ ನಮಗೆ ಒಪ್ಪಿತವಾದರೆ ಇದು ಕಾಗಿನೆಲೆಯವರ ಹತ್ತೂ ಕತೆಗಳ ಚೆಹರೆ ಎಂದೂ ಒಪ್ಪಿಕೊಳ್ಳಬೇಕಾಗುತ್ತದೆ.

ಒಂದು ಸಾಹಿತ್ಯಕೃತಿಯನ್ನು ಓದುವಾಗ ಅಲ್ಲೊಂದು ಅನುಸಂಧಾನ ಜರುಗುತ್ತಲೇ ಇರುತ್ತದೆ  ಎನ್ನುವುದು ನನ್ನ ಅನುಭವ. ಟಾಲ್‌ಸ್ಟಾಯ್, ಪುಷ್ಕಿನ್, ಚೆಕಾಫ್, ಓ ಹೆನ್ರಿ, ಮುನ್ಶಿ ಪ್ರೇಮಚಂದ್, ಅಮರಕಾಂತ್, ಅಮೃತಾ ಪ್ರೀತಮ್, ಮಾಸ್ತಿ, ಅನಂತಮೂರ್ತಿ, ಲಂಕೇಶ್, ವೈದೇಹಿ, ಜಯಂತ ಕಾಯ್ಕಿಣಿ, ಮೂರ್ತಿ ಅಂಕೋಲೇಕರ್ ಹೀಗೆ ಓದುವ ಅನುಸಂಧಾನದಲ್ಲಿ ತೊಡಗಿಸಿ ನನ್ನ ಅನುಭವವನ್ನು ಹಿಗ್ಗಿಸಿದ ಹತ್ತಾರು ಲೇಖಕರ ಕೃತಿಗಳು ನನಗೆ ಅಂತಿಮವಾಗಿ ದಕ್ಕಿದ್ದು ಈ ಓದುವ ಅನುಸಂಧಾನದಿಂದ. ಸಾಹಿತ್ಯಕೃತಿಯೊಂದು ಅನುಸಂಧಾನಗೊಳ್ಳುವಾಗ ಅದು ಓದುಗನ ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗೆ ದಾಟಿಕೊಂಡು ಧ್ವನಿಸತೊಡಗುತ್ತದೆ. ಕೃತಿ ನಿಜವಾಗುತ್ತ ವರ್ಧಿಷ್ಣುವಾಗುವ ಕ್ರಮ ಇದು. ಕಾಗಿನೆಲೆಯವರ ಈ ಕಥೆಗಳು ಯಾವ ನಿರ್ದಿಷ್ಟ ಸಾಂಸ್ಕೃತಿಕ ನೆಲೆಯೊಳಗೂ ಜರುಗದೆ ಅಪರಿಚಿತವಾದ ಅತ್ಯಾಧುನಿಕ ಕೌಟುಂಬಿಕ ಚೌಕಟ್ಟಿನಲ್ಲಿ ನಡೆಯುತ್ತವೆ. ಕತೆಯನ್ನು ಬೆಳೆಸುವ ದಟ್ಟವಾದ ವಿವರಗಳು, ‘ಮೊದಲ ತೇದಿ’ಯಂತಹ ಕತೆಗಳಲ್ಲಿ ಎರಡು ಬೇರೆ ಬೇರೆ ಘಟನೆಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಾಗಿ ಬರುವ ಸಂದರ್ಭ ಇವೆಲ್ಲ ಓದುಗನಾದ ನನ್ನ ಆವರಣಕ್ಕೆ ದಾಟಿ ಬರುವುದಿಲ್ಲ. ಕತೆಗಳ ಒಳಗೆ ಸಂಭವಿಸುವ ಕುಟುಂಬದೊಳಗಿನ ಭಾವನಾತ್ಮಕ ತಿಕ್ಕಾಟ ಕೂಡ ಅಸಾಂಪ್ರದಾಯಿಕವಾದದ್ದು ಎನಿಸುತ್ತದೆ. ಆದರೆ ಕಾಗಿನೆಲೆಯವರ ಕಥನ ಕೌಶಲ್ಯ ಬೆರಗಾಗಿಸುತ್ತದೆ. ಇವರ ಕಥೆಗಳಿಗೆ ಅನ್ಯನಾಗಿಯೇ ನಾನು ಕಥೆಗಳನ್ನು ಓದಿದ್ದೇನೆ ಎನ್ನುವುದು ನನ್ನ ಈ ತನಕದ ಮಾತಿನ ತಾತ್ಪರ್ಯ. ಈಗ ಈ ಅಂಕಣಕ್ಕಾಗಿ ಈ ಲೇಖನವನ್ನು ಟಂಕಿಸುವಾಗ ಕೂಡ ನಾನು ಕಾಗಿನೆಲೆಯವರ ಕಥೆಗಳನ್ನು ಗ್ರಹಿಸುವ ಯತ್ನ ಮಾಡುತ್ತಿದ್ದೇನೆ. ಬಹುಶಃ ಸಾಹಿತ್ಯಕ್ಕಿಂತ ಭಿನ್ನವಾದ ಕಲಾಶಿಸ್ತನ್ನು ಗ್ರಹಿಸುವ ಕ್ರಮ ಇದಕ್ಕೆ ಬೇಕಾಗುತ್ತದೆ. ಪಾಬ್ಲೊ ಪಿಕಾಸೊ, ಮಾರ‍್ಸೆಲ್ ಡು ಚಾಂಪ್, ರಿಚ್ಟರ್, ಸರ್ರಿಯಲಿಸ್ಟ್ ಪೇಂಟರ್ ಮಾರ‍್ಟಿನ್, ಮುಂತಾದ ಚಿತ್ರಕಲಾವಿದರನ್ನು ಗ್ರಹಿಸುವ ಕ್ರಮದಲ್ಲಿ ಕಾಗಿನೆಲೆಯವರನ್ನು ಕೂಡ ಅರಿಯಬೇಕಾಗುತ್ತದೆ. ಅಥವಾ ನನ್ನ ಗ್ರಹಿಕೆ ಇನ್ನೂ ಹೆಚ್ಚು ಅಪ್‌ಡೇಟ್ ಆಗಬೇಕು, ಚೂಪಾಗಬೇಕು. ಸುಮಾರು ನಲವತ್ತೈದು ವರ್ಷಗಳ ಹಿಂದೆ ಅನಂತಮೂರ್ತಿಯವರ ಕ್ಲಿಪ್ ಜಾಯಿಂಟ್ ಕಥೆ ಓದುವಾಗ ಕೂಡ ಇಂತಹುದೇ ಒಂದು ತೊಳಲಾಟ ಅನುಭವಿಸಿದ್ದೆ. ಆದರೆ ಕಥೆ ನಮ್ಮ ಸಾಂಸ್ಕೃತಿಕ ಆವರಣದ ವಿಮರ್ಶೆಯೂ ಆಗಿದ್ದರಿಂದ ನನಗೆ ಕಥೆಯ ಟ್ರ್ಯಾಕ್ ಅನೂಹ್ಯ ಎನಿಸಿರಲಿಲ್ಲ.

ಕಾಗಿನೆಲೆಯವರ ಕತೆಗಳು ಓದಲೇಬೇಕಾದವು ಎಂದು ಮತ್ತೆ ನಾನು ಹೇಳಲು ಈ ಕತೆಗಳು ನಮಗೆ ಸವಾಲು ಆಗಿರುವುದು. ಏಕೆಂದರೆ ನಮ್ಮ ಬದುಕು ಇಂದು ವಿಶ್ವಾದ್ಯಂತ ಅಡ್ಡಾಡುತ್ತ ಚಲ್ಲಾಪಿಲ್ಲಿಯಾಗುತ್ತಿದೆ. ಅದರ ಮುನ್ನುಡಿಯಂತಿವೆ ಈ ಕತೆಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!