Featured ಅಂಕಣ

ಕರಾವಳಿಯ ಸಾಹಿತ್ಯ ಕುಸುಮಗಳು

ಕನ್ನಡ ಸಾಹಿತ್ಯಕ್ಕೆ ಕರಾವಳಿ ಕರ್ನಾಟಕದ ಕೊಡುಗೆ ಅಪಾರವಾದದ್ದು. ಸಾಹಿತ್ಯದ ಎಲ್ಲಾ ಪ್ರಕಾರಗಳಿಗೆ ಅನನ್ಯ ಕೊಡುಗೆ ನೀಡಿದ ಹಲವರಿಗೆ ಜನ್ಮದಾತೆ ಕರಾವಳಿ. ಅಂತಹ ಕೆಲವರ ಪರಿಚಯದ ಪ್ರಯತ್ನ ಇಲ್ಲಿದೆ.

ನಡೆದಾಡುವ ಜ್ಞಾನಕೋಶ

ಕಾರಂತಜ್ಜ ಎಂದೇ ಚಿರಪರಿಚಿತರಾಗಿದ್ದ ಕೋಟ ಶಿವರಾಮ ಕಾರಂತರು ೧೯೦೨, ಅಕ್ಟೋಬರ್ ೧೦ರಂದು ಉಡುಪಿ ಜಿಲ್ಲೆಯ ಕೋಟ ಊರಿನಲ್ಲಿ ಜನಿಸಿದರು. ‘ಕಡಲ ತೀರದ ಭಾರ್ಗವ’ ಎಂದೇ ಕರೆಯಲ್ಪಡುವ ಇವರು, ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿನಂತೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವಿಲ್ಲ. ರಾಷ್ಟ್ರಭಕ್ತಿ, ಸ್ವದೇಶೀ ಚಿಂತನೆ, ವ್ಯಾಪಾರ, ಪತ್ರಿಕೋದ್ಯಮ, ಫೊಟೋಗ್ರಫಿ, ನಾಟಕ, ನೃತ್ಯ, ಚಿತ್ರಕಲೆ, ಯಕ್ಷಗಾನ, ಸಂಗೀತ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಸಮಾಜ ಸುಧಾರಣೆ, ಗ್ರಾಮೋದ್ಧಾರ, ಶಿಕ್ಷಣ ಪ್ರಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸುಮಾರು ೪೧೭ ಕೃತಿಗಳನ್ನು ರಚಿಸಿರುವ ಇವರು, ಕಾದಂಬರಿ, ಸಣ್ಣಕಥೆ, ಪ್ರವಾಸಕಥನ, ಪ್ರಬಂಧ, ನಾಟಕ, ಆತ್ಮಕಥನ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿದ್ದಾರೆ. ನಿಷ್ಠುರವಾದಿಗಳಾಗಿದ್ದ ಕಾರಂತರು ಎಮರ್ಜೆನ್ಸಿ ಸಮಯದಲ್ಲಿ, ಎಮರ್ಜೆನ್ಸಿ ವಿರುದ್ಧವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ತಮಗೆ ಕೊಡಮಾಡಿದ್ದ ‘ಪದ್ಮಭೂಷಣ’ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದರು.

ಕವಿಶಿಷ್ಯ – ಪಂಜೆ ಮಂಗೇಶ ರಾವ್

ಮಕ್ಕಳ ಸಾಹಿತ್ಯ ಎಂದು ಬಂದಾಗ ಥಟ್ಟನೆ ನೆನಪಾಗುವವರು ಪಂಜೆ ಮಂಗೇಶ ರಾವ್. ಕಥೆ, ಕವನ. ಹರಟೆ, ಕಾದಂಬರಿ, ಐತಿಹಾಸಿಕ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಸಾಹಿತ್ಯಕೃಷಿಯನ್ನು ಮಾಡಿದ ಇವರು, ಮಕ್ಕಳಸಾಹಿತ್ಯದಲ್ಲಿ ತಮ್ಮದೇ ಆದ ವಿಶೇಷತೆಯನ್ನು ಹೊಂದಿದವರು. ತಾನೊಬ್ಬ ಕವಿಯ ಶಿಷ್ಯನಷ್ಟೆ ಎಂಬ ವಿನಯದಿಂದ ತಮ್ಮ ಕಾವ್ಯನಾಮವನ್ನು ‘ಕವಿಶಿಷ್ಯ’ ಎಂದು ಇಟ್ಟುಕೊಂಡಿದ್ದರು. ‘ಹರಟೆಮಲ್ಲ’, ‘ರಾ.ಮ.ಪಂ’ ಎಂಬ ಗುಪ್ತನಾಮಗಳಿಂದಲೂ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಇವರ ಪ್ರಸಿದ್ಧ ಕವನವಾದ ’ನಾಗರ ಹಾವೆ, ಹಾವೊಳು ಹೂವೆ’ ಕನ್ನಡ ಪಠ್ಯಪುಸ್ತಕದ ಭಾಗವಾಗಿತ್ತು. ಪಂಜೆಯವರ ಮನೆಮಾತು ಕೊಂಕಣಿ, ಜನಬಳಕೆಯ ಮಾತು ತುಳು, ಶಾಲೆಯಲ್ಲಿ ಕನ್ನಡ, ಬಂಟ್ವಾಳ, ಮಂಗಳೂರಿನಲ್ಲಿ ವ್ಯಾಸಂಗ, ಅಲ್ಲಿ ಇಂಗ್ಲಿಷ್. ಹೀಗೆ ಹಲವಾರು ಭಾಷೆಗಳ ಪ್ರಭಾವ ಅವರ ಸಾಹಿತ್ಯಕೃಷಿಯಲ್ಲಿ ಪರಿಣಾಮವನ್ನು ಬೀರಿವೆ.

ಪ್ರಥಮ ರಾಷ್ಟ್ರಕವಿ – ಮಂಜೇಶ್ವರ ಗೋವಿಂದ ಪೈ

ಕಾಸರಗೋಡಿನ ಮಂಜೇಶ್ವರದಲ್ಲಿ ೧೮೮೩ರಲ್ಲಿ ಜನಿಸಿದ (ಅಂದಿನ ದಕ್ಷಿಣಕನ್ನಡ) ಗೋವಿಂದ ಪೈ ಅವರು ಆಗಿನ ಮದ್ರಾಸ್ ಸರ್ಕಾರದಿಂದ ಪ್ರಥಮ ರಾಷ್ಟ್ರಕವಿ ಬಿರುದನ್ನು ಪಡೆದರು. ತುಳು, ಮಲಯಾಳ, ಸಂಸ್ಕೃತ, ತೆಲುಗು, ತಮಿಳು, ಮರಾಠಿ, ಉರ್ದು, ಬಂಗಾಳಿ, ಪರ್ಷಿಯನ್, ಪಾಲಿ. ಗ್ರೀಕ್, ಜಪಾನೀ ಭಾಷೆಗಳೂ ಸೇರಿದಂತೆ ಒಟ್ಟು ೨೫ ಭಾಷೆಗಳಲ್ಲಿ ನಿರರ್ಗಳವಾಗಿ ಓದು ಮತ್ತು ಬರೆಯಬಲ್ಲವರಾಗಿದ್ದರು. ಜಪಾನ್ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ಗಿಳಿವಿಂಡು (ಕವನ ಸಂಕಲನ) – ಇವರ ಪ್ರಥಮ ಕವನ ಸಂಕಲನವಾದ ಗಿಳಿವಿಂಡು ೪೬ ಕವನಗಳನ್ನು ಹೊಂದಿದೆ. ಈ ಕವನಗಳಲ್ಲಿ ಜೀವನದೆಡೆಗೆ ತನ್ನ ದೃಷ್ಟಿಕೋನ, ದೇಶಪ್ರೇಮ, ಕನ್ನಡಪ್ರೀತಿ, ಪ್ರಕೃತಿಯೊಂದಿಗೆ ತನ್ನ ಸಂಬಂಧವನ್ನು ಬಿಂಬಿಸಿದ್ದಾರೆ.

ಗೋವಿಂದ ಪೈ ಅವರು ತಮ್ಮ ಐತಿಹಾಸಿಕ ಅಧ್ಯಯನ ಮತ್ತು ಸಂಶೋಧನೆಯೊಂದಿಗೆ ಕನ್ನಡ ಕಲಿಕೆಯನ್ನು ಕೂಡಾ ಸಮೃದ್ಧಗೊಳಿಸಿದ್ದಾರೆ. ಅವರು ತುಳುನಾಡಿನ ಕಾಲಗಣನೆ ಮತ್ತು ಇತಿಹಾಸದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಹೊಂದಿದ್ದರು.

ರತ್ನಾಕರವರ್ಣಿ

16ನೇ ಶತಮಾನದ ಕನ್ನಡ ಕವಿ ರತ್ನಾಕರವರ್ಣಿ. ಷಟ್ಪದಿ ಮತ್ತು ಸಾಂಗತ್ಯ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ವಿಜಯನಗರದ ಆಡಳಿತ ಕಾಲದಲ್ಲಿ ಕನ್ನಡ ಸಾಹಿತ್ಯವನ್ನು ಪ್ರಸಿದ್ಧಿಗೆ ತಂದ ಕವಿ ರತ್ನಾಕರವರ್ಣಿ. ಭರತೇಶ ವೈಭವ ಇವರ ಪ್ರಸಿದ್ಧ ಕಾವ್ಯ. ಮೂಡಬಿದ್ರೆ ಮೂಲದ ರತ್ನಾಕರವರ್ಣಿ ಕಾರ್ಕಳದ ಭೈರಾಸ ಒಡೆಯರ್ ಆಸ್ಥಾನದಲ್ಲಿ ಆಸ್ಥಾನ ಕವಿಯಾಗಿದ್ದರು.  

ನವ್ಯಕವನಗಳ ಹರಿಕಾರ – ಗೋಪಾಲಕೃಷ್ಣ ಅಡಿಗ

ಕುಂದಾಪುರದ ಮೊಗೇರಿಯಲ್ಲಿ ೧೯೧೮ರಲ್ಲಿ ಕವಿ ಎಂ. ಗೋಪಾಲಕೃಷ್ಣ ಅಡಿಗರು ಜನಿಸಿದರು. ‘ನವ್ಯಕಾವ್ಯ’ ಎನ್ನುವ ಹೊಸದಿಶೆಗೆ ಚಾಲನೆ ನೀಡಿದ ಅಡಿಗರು, ಕನ್ನಡ ಕಾವ್ಯಲೋಕದಲ್ಲಿ ಒಂದು ಬಗೆಯ ಕ್ರಾಂತಿಗೆ ಮುನ್ನುಡಿ ಬರೆದವರು ಎಂದರೆ ತಪ್ಪಾಗಲಾರದು.

ಹೊಸಹಾದಿಯನು ಹಿಡಿದು ನಡೆಯಣ್ಣ, ಮುಂದೆ

ಹೊಸಜೀವ, ಹೊಸಭಾವ, ಹೊಸವೇಗದಿಂದೆ.

ಹಳೆಹಾದಿ ನಡೆಗಲಿವವರೆಗೆಮಗೆ ಸಾಕು;

ಬಲಿವುದಕೆ, ನಲಿವುದಕೆ ಹೊಸಹಾದಿ ಬೇಕು

ಇವು ಅವರ ಕವನವೊಂದರ ಸಾಲುಗಳು.

‘ಯಾವ ಮೋಹನ ಮುರಳಿ ಕರೆಯಿತೋ’, ‘ಅಳುವ ಕಡಲೊಳೂ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ’ – ಅಂತಹ ಅನನ್ಯ ಹಾಡುಗಳನ್ನು ಕೊಟ್ಟವರು ಕವಿ ಅಡಿಗರು.  

ಸೇಡಿಯಾಪು ಕೃಷ್ಣ ಭಟ್ಟ

ಪುತ್ತೂರಿನ ಸೇಡಿಯಾಪು ಗ್ರಾಮದಲ್ಲಿ ಜನಿಸಿದ ಇವರು, ಆಗಿನ ಮದರಾಸ್ ವಿಶ್ವವಿದ್ಯಾಲಯದಿಂದ ‘ವಿದ್ವಾನ್’ ಪದವಿಯನ್ನು ಪಡೆದಿದ್ದರು. ಅಲೋಷಿಯಸ್ ಹೈಸ್ಕೂಲಿನಲ್ಲಿ ಕನ್ನಡಪಂಡಿತರಾಗಿ, ಆರ್ಯುವೇದವಿದ್ಯೆಯನ್ನು ಕರಗತ ಮಾಡಿಕೊಂಡು ನಾಟೀವೈದ್ಯರಾಗಿ, ಕನ್ನಡದ ಅತ್ಯುತ್ತಮ ಪಂಡಿತರಾಗಿ ವಿದ್ವಾಂಸರೆನಿಸಿಕೊಂಡವರು ಇವರು. “ಪಂಡಿತರೆಂದರೆ ಹೇಗಿರುತ್ತಾರೆಂದು ನಾನು ಸಂತೋಷದಿಂದ ಬೆರಳೆತ್ತಿ ತೋರಿಸಬಹುದಾದವರು ಸೇಡಿಯಾಪು” ಎಂದು ಶಿವರಾಮ ಕಾರಂತರು ಅವರನ್ನು ಕೊಂಡಾಡಿದ್ದಾರೆ. ಕವಿತೆ, ಸಣ್ಣಕಥೆ, ಶಾಸ್ತ್ರವಿಚಾರಗಳ ಸಾಹಿತ್ಯ ಪ್ರಕಾರಗಳಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದರು.

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!