Featured ಅಂಕಣ

ಪಟೇಲ್ ಎಂಬ ಉಕ್ಕಿನ ಪುರುಷ, ಸ್ವತಂತ್ರ ಭಾರತದ ಐಕ್ಯತೆಯ ಪ್ರತೀಕ

“ಪ್ರಾಚೀನ ಭಾರತ ಅನೇಕ ವರ್ಷಗಳ ಕಾಲ ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಎಂಬುದು ಅತ್ಯಂತ ತಲೆತಗ್ಗಿಸುವ ವಿಚಾರ. ಆದರೆ ಈಗ ಸ್ವಾತಂತ್ರ್ಯ ಲಭಿಸಿದೆ ಎಲ್ಲಾ ಭಾರತೀಯರ ಕರ್ತವ್ಯವೆಂದರೆ ಸ್ವತಂತ್ರ ಭಾರತ ಮತ್ತೊಮ್ಮೆ ಗುಲಾಮವಾಗದಂತೆ ನೋಡಿಕೊಳ್ಳಬೇಕು. ಏನಿದ್ದರೂ ಅದು ಮುಂದೆ ಸಾಗಬೇಕು, ಹಿನ್ನಡೆಯಬಾರದು ಆಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಒದಗುತ್ತದೆ.”- ಸರ್ದಾರ್ ವಲ್ಲಭಭಾಯಿ ಪಟೇಲ್.

ಕಳೆದ ಮೂರು ವರ್ಷಗಳಿಂದ ಸ್ವತಂತ್ರ ಭಾರತದ ಮೊದಲ ಉಪಪ್ರಧಾನಿ, ಇಂದಿನ ಏಕೀಕೃತ ಭಾರತದ ರುವಾರಿ, “ಭಾರತ ರತ್ನ” ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ, ಏಕತಾ ದಿನ, ಅಕ್ಟೋಬರ್ 31ರಂದು ದೇಶಾದ್ಯಂತ “ರನ್ ಫಾರ್ ಯುನಿಟಿ” (ದೇಶದ ಏಕತೆಗಾಗಿ ಓಟ) ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ಅದರ ಅಂಗವಾಗಿ ದೆಹಲಿಯ ರಾಷ್ಟ್ರಪತಿ ಭವನದ ಎದುರಿಗಿರುವ ವಿಜಯ್ ಚೌಕ್ ಬಳಿ ಸೇರುವುದು, ಸರ್ದಾರ್ ವಲ್ಲಭಭಾಯಿ ಪಟೇಲ್‍ಗಳ ವ್ಯಕ್ತಿತ್ವ, ಸಾಧನೆ ಹಾಗೂ “ಏಕ ಭಾರತ ಶ್ರೇಷ್ಟ ಭಾರತ” ಪರಿಕಲ್ಪನೆಯಲ್ಲಿ ಪ್ರಧಾನ ಮಂತ್ರಿಯವರ ವಿಚಾರಗಳನ್ನು ಆಲಿಸಿ, ನೂರಾರು ಭಾರತೀಯರ ಜೊತೆ ಇಂಡಿಯಾ ಗೇಟ್‍ನತ್ತ ಓಡುವುದು ವಾಡಿಕೆಯಾಗಿಬಿಟ್ಟಿದೆ. ಪಟೇಲ್ ಅಸ್ತಂಗತರಾದ ತರುವಾಯ ಬಂದ ಕಾಂಗ್ರೆಸ್ ಸರಕಾರಗಳು, ಪಟೇಲ್ ಹಾಗೂ ಅವರ “ಲೆಗೆಸಿ”ಯನ್ನು ಕಡೆಗಣಿಸಿರುವುದು ಸತ್ಯ. ಈ ಕೂಗು ಅನೇಕ ದಶಕಗಳಿಂದ ಸಮಕಾಲೀನ ಇತಿಹಾಸಕಾರರು, ಗುಜರಾತ್ ಹಾಗೂ ಭಾರತದ ಪ್ರಜೆಗಳಿಂದ ಕೇಳಿಬರುತ್ತಿತ್ತು. ಇದನ್ನು ಗುಜರಾತ್‍ನವರೇ ಆದ ಪ್ರಧಾನಿ ನರೇಂದ್ರ ಮೋದಿ ಸರಿಯಾಗಿಯೇ ಬಳಸಿಕೊಂಡರು. ಆ ಮೂಲಕ ಸರ್ದಾರ್ ಪಟೇಲ್, ಬೋಸ್, ಶಾಸ್ತ್ರಿ ಮೊದಲಾದ ತೆರೆಮರೆಗೆ ಸರಿಸಲ್ಪಟ್ಟಿರುವ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಕಾಲೀನ ಭಾರತದ ರೂಪುಗೊಳ್ಳುವಿಕೆಯಲ್ಲಿ ಪ್ರಧಾನಪಾತ್ರವಹಿಸಿದವರನ್ನು ನೆನೆಯುವ ಹಾಗೂ ಅವರ ಕೊಡುಗೆ, ಸ್ಥಾನಗಳನ್ನು ಈ ಕಾಲದ ಹಾಗೂ ಭವಿಷ್ಯದವರ ಮುಂದೆ ಪ್ರಸ್ತುತ-ಪ್ರಚುರಪಡಿಸುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ.

ರಾಷ್ಟ್ರ ನಿರ್ಮಾತೃರ ಇಂತಹ ಬೃಹತ್ “ಇಂಜಿನಿಯರಿಂಗ್ ಮಾರ್ವೆಲ್”ಗಳ ಮೂಲಕ ಜಾಗತಿಕವಾಗಿ ಸಮರ್ಥ ಭಾರತ ಏರುತ್ತಿರುವ ಹಾದಿ, ಸಾಧನೆಗಳಿಂದ ನಿರ್ವಹಿಸಲು ಹೊರಟಿರುವ ಮಹತ್ವಾಕಾಂಕ್ಷಿ ಸ್ಥಾನದ ಅರಿವನ್ನು ಜಗತ್ತಿಗೆ ಪಸರಿಸುವ ಕಾರ್ಯವೂ ಆಗುತ್ತಿದೆ. ಹೊಣೆಗಾರಿಕೆಯ ಪ್ರತೀಕವಾಗಿ ಹಳೆತಲೆಮಾರಿನವರ ಇತಿಹಾಸದ ನೆನಪನ್ನು ಜಾಗೃತಗೊಳಿಸುವ, ಅಂದಿನ ವಿದ್ಯಮಾನಗಳನ್ನು ಜೀವಂತವಾಗಿಡುವ ಮತ್ತು ಹೊಸತಲೆಮಾರಿನವರಿಗೆ ಅನ್ವೇಷಿಸಲು ಇತಿಹಾಸ ಸಂಕಥನದ ಹೊಸ ಪಾಠವನ್ನು ಕಲಿಸುವ ಪ್ರಕ್ರಿಯೆಯೂ ಹೌದು. ರಾಜಕೀಯವಾಗಿಯೂ ಇದು ಅವರಿಗೆ ವರದಾಯಕ. ಆದ್ದರಿಂದಲೇ ಎಲ್ಲಾ ರಾಜ್ಯಗಳಿಂದಲೂ ಉಕ್ಕನ್ನು ಸಂಗ್ರಹಿಸಿ, ಭಾರತದ ಉಕ್ಕಿನ ಪುರುಷನ 182 ಮೀಟರ್ (600 ಅಡಿ)ಯ ಬೃಹತ್ “ಸ್ಟಾಚ್ಯು ಆಫ್ ಯುನಿಟಿ”ಯ ನಿರ್ಮಾಣಕ್ಕೆ ಬಳಸಿಕೊಂಡಿದ್ದು ಸಾಂಕೇತಿಕವಾದರೂ ಆಕಾಶ ಮತ್ತು ಭೂಮಿಯ ಮಧ್ಯದಲ್ಲಿ ದೃಢ ಸಂಕಲ್ಪ,  ಏಕ ಭಾರತದ ಆತ್ಮಸಾಕ್ಷಿಯಾಗಿ ಇಡಿಯಾದ ಭಾರತವನ್ನೂ, ಬಿಡಿಯಾಗುತ್ತಿರುವ ಸಂಕುಚಿತ ಮನಸ್ಸುಗಳನ್ನು ವೀಕ್ಷಿಸುತ್ತಿರುವ, ಸರಿದಾರಿ ತೋರಿ ಎಚ್ಚರಿಸುತ್ತಿರುವ ದೇಶದ ನಾಯಕನೊಬ್ಬನ ರೂಪಕದಂತಿದೆ.

ಈ ನೆಲದ ಮಣ್ಣಿನ ಮಗನಾಗಿ ಭಾರತಕ್ಕೆ ಶೋಭೆಯನ್ನು ತಂದಿದ್ದ ವಲ್ಲಭಭಾಯಿ ಪಟೇಲರು ಈಗ ಅಮೆರಿಕದ “ಸ್ಟ್ಯಾಚು ಆಫ್ ಲಿಬರ್ಟಿ”ಗಿಂತ ಎರಡುಪಟ್ಟು ಎತ್ತರದ, ನರ್ಮದೆಯ ತಂಪಾದ ತಟದಲ್ಲಿ ಕಂಗೊಳಿಸುತ್ತಿರುವ “ಸ್ಟ್ಯಾಚು ಆಫ್ ಯುನಿಟಿ”ಯ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಆಕಾಶದ ಶೋಭೆಯನ್ನೂ ಹೆಚ್ಚಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ರಚನೆಗೊಂಡಿರುವ (ಭಾಷಾವಾರು ಮತ್ತು ರಾಜಕೀಯ) ರಾಜ್ಯಗಳೆಲ್ಲವೂ ತಮ್ಮ ಅಸ್ಮಿತೆಗೆ ಕಾರಣವಾದ ಪಟೇಲರನ್ನು ಸ್ಮರಿಸಬೇಕಾದ್ದು ಮತ್ತು ಸಮಸ್ತ ಭಾರತವೇ ಈ ಪ್ರಕ್ರಿಯೆಯ ಸಕ್ರಿಯ ಭಾಗವಾಗಬೇಕಾದ್ದು ಅನಿವಾರ್ಯ. ಹಾಗಾಗಿಯೇ ಈ “ಐಕ್ಯತೆಯ ಮೂರ್ತಿ” ಕೇವಲ ಹೆಮ್ಮೆಯ ಸಂಗತಿಯಲ್ಲ ಬದಲಾಗಿ ಭಾರತದ ಐಕ್ಯತೆಯನ್ನು ಪ್ರತೀ ಬಾರಿ ನೆನಪುಮಾಡುವ, ಏಕ ಭಾರತಕ್ಕೆ ಸದಾ ದಾರಿದೀಪವಾಗಿ ನಿಲ್ಲುವ ದೇಶದ ಮಾನಸ್ತಂಭ.

“ರನ್ ಫಾರ್ ಯುನಿಟಿ”ಯಲ್ಲಿ ನೂರಾರು ಜನರ ಮಧ್ಯೆ ಓಡುತ್ತಿರುವಾಗ, ಹಿಂದೆಂದಿಗಿಂತಲೂ ಪಟೇಲರು ಯಾಕಿಂದು ಪ್ರಸ್ತುತ ಹಾಗೂ ಅನಿವಾರ್ಯ ಎಂಬ ಆಲೋಚನೆ ಕಾಡುತ್ತಿತ್ತು. ಪ್ರತಿಮೆ ಎಂಬ ಸಾಂಕೇತಿಕತೆಯ ಹಿಂದೆ ಅಡಗಿರುವ ಸಂದೇಶ, ಎಚ್ಚರಿಕೆ, ಹಾಗೂ ಕಲಿಕೆಗಳು ಬಹುಮುಖ್ಯ. ಪ್ರಾದೇಶಿಕತೆ, ಭಾಷೆ, ಜನಾಂಗ, ಜಾತಿ, ಮತ, ಪಂಥ, ಉತ್ತರ-ದಕ್ಷಿಣ ಮೊದಲಾದ ಕ್ಷುಲ್ಲಕ ಹಾಗೂ ವಿಭಜನಕಾರಿ ಮನಸ್ಥಿತಿಗಳಿಂದ ಬೆಳೆಯುತ್ತಿರುವ ಪ್ರತ್ಯೇಕತೆ, ಪ್ರತ್ಯೇಕವಾದದ ಧೋರಣೆಗಳು ಏಕ ಭಾರತವನ್ನು ವಿಭಜಿತ ಭಾರತವನ್ನಾಗಿ ತುಂಡುತುಂಡಾಗಿಸಲು ಹೊರಟಿರುವ ವಿಕ್ಷಿಪ್ತತೆಗೆ ಉತ್ತರವಾಗಿ ಸಾರ್ವಭೌಮ ಭಾರತದ ಶಾಶ್ವತ ಪ್ರತಿನಿಧಿಯಾಗಿ ಪಟೇಲ್ ನಮ್ಮೆದುರು ನಿಲ್ಲುತ್ತಾರೆ. ಇಂದಿಗೂ ಪಟೇಲ್‍ರಂತಹ ಒಬ್ಬ ನಾಯಕ ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದು ಆದರೆ ವಿಕ್ಷಿಪ್ತ, ಭಂಜಕ ಶಕ್ತಿಗಳಿಗೆ ತಾವು ನಂಬಿರುವುದೇ ಪರಮಸತ್ಯ ಎಂಬ ಬೌದ್ಧಿಕ ವಲಯದ ಜಿಜ್ಞಾಸೆ, ಮೃಣ್ಮಯಿ ದೇಶವೆಂಬ ಪರಿಕಲ್ಪನೆಯನ್ನು ವಿರೋಧಿಸುತ್ತಾ ಗಡಿಗಳಿಲ್ಲದ ಚಿನ್ಮಯಿ ಪ್ರಪಂಚಕ್ಕೆ ಹಾತೊರೆಯುವ ಮನಸ್ಸುಗಳೂ ಒಂದಿಲ್ಲೊಂದು ರೀತಿಯಲ್ಲಿ ಪ್ರಜ್ಞಾ-ಅಪ್ರಜ್ಞಾಪೂರಕವಾಗಿ ಯಾವುದೋ ಭಂಜಕ ಪ್ರಣಾಳಿಗಳ ಬಲಿಪಶುಗಳಾಗುವ ಅಪಾಯವಿದ್ದರೂ ಇವೆಲ್ಲವನ್ನೂ ಹೇಗೆ ಅರ್ಥಮಾಡಿಸುವುದು ಎಂಬ ಪ್ರಶ್ನೆ ಪ್ರಬಲವಾಗಿ ಎದುರಾಗುತ್ತಿತ್ತು. ಸರ್ದಾರ್ ಪಟೇಲ್‍ರ ಮೂರ್ತಿಯೊಂದು ಇವಕ್ಕೆಲ್ಲ ಹೇಗೆ ಉತ್ತರವಾಗಬಲ್ಲದು ಎಂಬ ಮತ್ತೊಂದು ಪ್ರಶ್ನೆಯೂ ಏಕತಾ ಓಟದ ಭಾಗವಾಗಿಯೇ ಹಿಂದಿನಿಂದ ತಳ್ಳುತ್ತಿತ್ತು.

ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಅತೃಪ್ತರೇ. ಆ ಅತೃಪ್ತಿ, ಅಲ್ಪತೆಗಳು ಅಂದೂ ಇದ್ದವು, ಇಂದೂ ಇವೆ. ಉದಾಹರಣೆಗೆ “ಅಚ್ಛೆ ದಿನ್” ಅಥವಾ “ಬುರೆ ದಿನ್” ಇವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ಅನುಭವಕ್ಕೆ ಬರುವ ಸಂಗತಿಗಳು. ಇವನ್ನು ಏಕಸೂತ್ರದ ಸಾವಯವ ಶಿಲ್ಪದಲ್ಲಿ ಹಿಡಿದಿಡುವುದು ಅಸಾಧ್ಯ. ಆದರೆ ಅವರೆಡೂ “ದಿನ”ಗಳ ತುತ್ತ ತುದಿಗಳ ತೀವ್ರ ಆಡುಂಬೋಲಗಳು ಸಮಾಜದ ಏಕತೆಯ ಸ್ವಾಸ್ಥ್ಯದಲ್ಲಿ ಕಂದಕವನ್ನು ನಿರ್ಮಿಸಬಲ್ಲವು. ಅವನ್ನು ಮೆಟ್ಟಿನಿಂತು ಪರಿಹಾರಕಂಡುಕೊಳ್ಳಲು ಇತಿಹಾಸದ ಪಾಠವೂ, ಅವನ್ನು ಇನ್ನಷ್ಟು ಬಿಗಡಾಯಿಸಲು ಇತಿಹಾಸದ ಸಂಕೀರ್ಣತೆಗಳೂ ಹೊಂದಿಕೊಂಡೇ ನಿಂತಿವೆ ಎಂಬುದು ವಿಪರ್ಯಾಸ.

ಕಾಶ್ಮೀರ, ಈಶಾನ್ಯ ಭಾರತದ ರಾಜ್ಯಗಳು, ಈಗಲೇ ತಮ್ಮಗಣರಾಜ್ಯಗಳನ್ನು ನಿರ್ಮಿಸಲು ತಾಯಾರಾಗಿ ನಿಂತಿರುವ ಕಾಲಿಸ್ತಾನ್, ತಮಿಳುನಾಡಿನ ದ್ರಾವಿಡರು, ಅವರಿಂದ ಪ್ರೇರಣೆಪಡೆದು ಅಂತಹ ಆಲೋಚನೆಗಳ ಕಿಡಿಹೊತ್ತಿಸುತ್ತಿರುವ, ಅತಂತ್ರ ಅರಾಜಕ ಆಂತರಿಕ ಮತ್ತು ಬಾಹ್ಯ ಶಕ್ತಿಗಳು ನಮ್ಮ ನಡುವೆಯೂ ಇದ್ದಾರೆ. ಭೌತಿಕ ಆಯಾಮ ನಮಗೆ ಕಾಣುವಂಥದ್ದು. ಆದರೆ 21ನೇ ಶತಮಾನದ ತಂತ್ರಜ್ಞಾನ ಕ್ರಾಂತಿಯ ಯುಗದಲ್ಲಿ ಯಾವುದೋ ದೂರಪ್ರದೇಶಗಳಲ್ಲಿ ಕುಳಿತುಕೊಂಡು ಸಾಕಷ್ಟು ಪ್ರಮಾಣದಲ್ಲಿ ಹಣವನ್ನು ಚೆಲ್ಲಿ ದೇಶದೊಳಗೆ ವಿಭಜಕ ಚಿಂತನೆಗಳನ್ನು ಆಳಗೊಳಿಸುವ ಶಕ್ತಿಗಳು, ಕುರುಡು ಸೈದ್ಧಾಂತಿಕ ಪ್ರಭಾವದ ಹೇರಿಕೆ, ಧರ್ಮಾಂದತೆಯ ತೀವ್ರಗಾಮಿ ಪ್ರವೃತ್ತಿಯಿಂದ ರೂಪುಗೊಳ್ಳುವ ಭಯೋತ್ಪಾದನೆ ಮೊದಲಾದ ರಕ್ತ ಪಿಪಾಸುಗಳು, ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ಬಳಸಿಕೊಂಡು ಚುನಾವಣೆಯಲ್ಲಿ ಲಾಭಪಡೆಯುವುದಕ್ಕಾಗಿ ಜಾತಿ, ಮತ, ಮೀಸಲಾತಿ, ಭಾಷೆಗಳ ನಡುವೆ ಕಂದಕ ಸೃಷ್ಟಿಸಿ ದೇಶದೊಳಗೆ ನಾಗರಿಕ ಯುದ್ಧವನ್ನು ಸೃಷ್ಟಿಸುವ ಪ್ರಕ್ರಿಯೆಗಳು ನಮ್ಮ ಅರಿವಿಗೆ ಬಾರದಂತೆಯೇ ಚಾಲ್ತಿಯಲ್ಲಿರುತ್ತವೆ (ಉದಾಹರಣೆಗೆ ಇತ್ತೀಚೆಗೆ ಪೇಸ್‍ಬುಕ್‍ನಲ್ಲಿ ಜನರ ಮಾಹಿತಿ ಕದ್ದು ತಮಗೆ ಬೇಕಾದ ಪೂರಕ ಮಾಹಿತಿಗಳನ್ನೇ ಅವರ ಸಾಮಾಜಿಕ ಜಾಲತಣದಲ್ಲಿ ಮೂಡುವಂತೆ ಮಾಡಿ ಜನಸಾಮಾನ್ಯರ ದಿಕ್ಕುತಪ್ಪಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣ) ಅಂಥವರಿಂದ ಭಾರತವನ್ನು ಹಾಗೂ ಭಾರತೀಯರನ್ನೂ ರಕ್ಷಿಸಬೇಕಾಗದ ಅನಿವಾರ್ಯತೆ ಎಲ್ಲಾ ಪ್ರಜ್ಞಾವಂತ ರಾಷ್ಟ್ರಕರದ್ದು.

1862ರ ಜರ್ಮನಿಯ ಐಕ್ಯತೆ ಎಂದರೆ ‘ಒಟ್ಟೊ ವನ್ ಬಿಸ್ಮಾರ್ಕ್; ನೆನಪಾಗುತ್ತದೆ. ಇಟಲಿಯ ಏಕತೆ ಎಂದರೆ ಗಾರಿಬಾಲ್ಡಿ ನೆನಪಾಗುತ್ತದೆ. ಅಮೆರಿಕ ಎಂದ ಕೂಡಲೇ ಜಾರ್ಜ್ ವಾಶಿಂಗ್ಟನ್. ಅದೇ ರೀತಿ ಐಕ್ಯತೆಯ ಭಾರತ ಎಂದ ಕೂಡಲೇ, ಭಾರತದ ಬಿಸ್ಮಾರ್ಕ್ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ನೆನಪಾಗುತ್ತಾರೆ. ಸ್ವತಂತ್ರ ಭಾರತ ನಿರ್ಮಾಣದ ಸಂದರ್ಭದಲ್ಲಿ ಹರಿದು ಹಂಚಿಹೋಗಿದ್ದ, ಬ್ರಿಟಿಷರು ಭಾರತ ಬಿಟ್ಟು ತೆರಳುವಾಗ ಅಖಂಡ ಭಾರತವನ್ನು ಯುರೋಪಿನ ಸಣ್ಣ ಸಣ್ಣ ದೇಶಗಳಂತೆ ತುಂಡರಿಸಿ, “ಬಾಲ್ಕನೈಜ್”ಗೊಳಿಸಿ (ಲೂಯಿ ಮೌಂಟ್ ಬ್ಯಾಟನ್ ಬಾಲ್ಕನೈಜೇಶನ್ ಪ್ಲಾನ್) ಮತ್ತಷ್ಟು ಅತಂತ್ರಗೊಳಿಸುವ ಆಲೋಚನೆಯಲ್ಲಿದ್ದಾಗ, ಇಂದಿನ ಭಾರತ ಎಂಬ ಸ್ಪಷ್ಟ ಹಾಗೂ ಏಕತೆಯ ಭಾರತದ ರಾಜಕೀಯ ಭೂಪಟವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಭಾರತದ “ಉಕ್ಕಿನ ಪುರುಷ” ಎಂದು ಪ್ರಖ್ಯಾತರಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್.

ಸರ್ದಾರ್ ವಲ್ಲಭಭಾಯಿ ಪಟೇಲರ ಸಾರ್ವಜನಿಕ ಜೀವನವನ್ನು ಎರಡು ಭಾಗಗಳಲ್ಲಿ ನೋಡಬೇಕಿದೆ. ಗುಜರಾತ್‍ನ ಖೇಡಾ ಜಿಲ್ಲೆಯ ಸತ್ಯಾಗ್ರಹ ಪ್ರಾರಂಭವಾಗಿ ಭಾರತೀಯ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷರಾಗಿ, ಗಾಂಧೀಜಿಯ ಅಪ್ಪಟ ಅನುಯಾಯಿಯಾಗಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದು ಮತ್ತು ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿ, ಉಪಪ್ರಧಾನಿಯಾಗಿ ವೈಯ್ಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ದೇಶದ ಹಿತಾಸಕ್ತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡದ್ದು ಮೊದಲ ಘಟ್ಟ. ಎರಡನೇ ಆಯಾಮ ತೆರೆದುಕೊಳ್ಳುವುದು, ಹರಿದು ಹಂಚಿಹೋಗಲಿದ್ದ 565 ಪ್ರಾಂತ್ಯಗಳ ಸ್ವಾತಂತ್ರೋತ್ತರ ಭಾರತವನ್ನು ಒಂದು ಭದ್ರ, ಅಖಂಡ ರಾಷ್ಟ್ರವಾಗಿ ಒಗ್ಗೂಡಿಸುವ ಮಹತ್ವದ ಸವಾಲನ್ನು ಎದುರಿಸಿ, ಭಾರತವನ್ನು ಸಮರ್ಥವಾಗಿ ಐಕ್ಯಗೊಳಿಸಿ ಏಕತೆಯ ರಾಜಕೀಯ ಭೂಪಟದ ಚಿತ್ರಣವನ್ನು ಸ್ಪಷ್ಟಗೊಳಿಸಿದ್ದು.

ಸ್ವಾತಂತ್ರ್ಯ ಹೋರಾಟಗಾರರಾಗಿ ಪಟೇಲ್:

ಗಾಂಧೀಜಿಯ ಸಹ್ಯವಾಗುವವರೆಗೂ, ಪಟೇಲರು ಇಂಗ್ಲೆಂಡ್‍ನಲ್ಲಿ ಬ್ಯಾರಿಸ್ಟರ್ ಮುಗಿಸಿದ್ದರಿಂದ ಇಂಗ್ಲೀಷರಿಗೆ ಹತ್ತಿರವಾದ ಸೂಟು-ಬೂಟು, ಶ್ರೀಮಂತ ಜೀವನಪದ್ಧತಿ, ಗುಜರಾತ್‍ನಲ್ಲಿಯೇ ಅತ್ಯಂತ ಬೇಡಿಕೆಯ ಹಾಗೂ ದುಬಾರಿ ವಕೀಲರಾಗಿ ತಮ್ಮ ದಿನಗಳನ್ನು ಕಳೆಯುತ್ತಿದ್ದರು. ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದ ಗಾಂಧೀಜಿಯ ಅಹಿಂಸೆ ಮತ್ತು ಸತ್ಯಾಗ್ರಹ ಎಂಬ ಅಸ್ತ್ರಗಳನ್ನೊಳಗೊಂಡ ಚಳುವಳಿಯ ಮಾದರಿಯನ್ನು “ಗೋಧಿ ಹಿಟ್ಟಿನಿಂದ ಸಣ್ಣ ಸಣ್ಣ ಹರಳುಗಳನ್ನು ಹೆಕ್ಕಿ ತೆಗೆಯಲು ಬರುತ್ತದೆಯೇ ಎಂದು ಕೇಳುತ್ತಾರೆ, ಹೀಗೆ ಅವ್ಯಾವಹಾರಿಕ ರೀತಿಯಲ್ಲಿ ಸ್ವಾತಂತ್ರ್ಯ ಬರುತ್ತದೆ” ಎಂದು ಗಾಂಧಿ ವಿಚಾರಗಳ ಬಗ್ಗೆ ಪಟೇಲ್ ಉಡಾಫೆ ಮಾಡುತ್ತಿದ್ದರು. ಆದರೆ ಅಲ್ಲಿಂದ ಕೆಲವೇ ಸಮಯದಲ್ಲಿ ಗಾಂಧೀಜಿಯ ಒಡನಾಟದಿಂದ ಪ್ರೇರೇಪಿತರಾಗಿ, ಗಾಂಧೀಜಿಯ ಅತೀ ದೊಡ್ಡ ಅನುಯಾಯಿಯಾಗಿ ತಮ್ಮ ಬದುಕು, ಚಿಂತನೆ ಹಾಗೂ ಆದರ್ಶಗಳನ್ನು ಗಾಂಧೀ ತತ್ವಗಳ ಜೊತೆ ಐಕ್ಯಗೊಳ್ಳಲಿದೆ ಎಂಬ ಸೂಚನೆಯೂ ಪಟೇಲರಿಗೆ ಇದ್ದಿರಲಿಕ್ಕಿಲ್ಲ.

ಭಾರತದಲ್ಲಿ ಗಾಂಧೀಜಿಯ ಮೊದಲ ಕಾನೂನುಭಂಗ ಚಳುವಳಿ, 1917ರಲ್ಲಿ ಚಂಪಾರಣ್‍ನಲ್ಲಿ ಪ್ರಾರಂಭವಾಗುತ್ತದೆ. ಚಂಪಾರಣ್‍ನಲ್ಲಿ ಕಾನೂನು ಮುರಿಯಲು ಹೇಳಿ ರೈತರಿಗೆ ಬ್ರಿಟಿಷರಿಂದಲೇ ನ್ಯಾಯವನ್ನೊದಿಗಿಸುವ ಮೂಲಕ ಮೊದಲ ಜಯ ಸಾಧಿಸುತ್ತಾರೆ. ಆಗಲೇ ದೇಶಾದ್ಯಂತ ಗಾಂಧೀ ಹಾಗೂ ಗಾಂಧೀ ವಿಚಾರಗಳ ಚರ್ಚೆ ಪ್ರಾರಂಭವಾಗುತ್ತದೆ. 1918ರ ಅಹಮದಾಬಾದ್ ಮಿಲ್‍ನ ಕಾರ್ಮಿಕರ ಜೊತೆ ಗಾಂಧಿ ನಡೆಸುವ ಉಪವಾಸ ಸತ್ಯಾಗ್ರಹಗಳನ್ನು ತಿಳಿದುಕೊಂಡ……. ಪಟೇಲರು, ಗಾಂಧೀಜಿಯ ಕುರಿತಾಗಿ ತಮ್ಗಿದ್ದ ಕಲ್ಪನೆಯನ್ನು ಬದಲಾಯಿಸಿಕೊಳ್ಳುತ್ತಾರೆ ಮತ್ತು ಅವರನ್ನು “ಮ್ಯಾನ್ ಆಫ್ ಆಕ್ಷನ್” ಎಂದು ಸಂಬೋಧಿಸುತ್ತಾರೆ. ಅದೇ ಹೊತ್ತಿಗೆ ಗುಜರಾತ್‍ನ ಖೇಡಾ ಜಿಲ್ಲೆಯಲ್ಲಿ ಸಮಸ್ಯೆಯೊಂದು ಉದ್ಭವವಾಗುತ್ತದೆ.

1918ರಲ್ಲಿ ಎದುರಾದ ಭೀಕರ ಪ್ರವಾಹದ ಪರಿಣಾಮ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆಹಾನಿಯಾಗುತ್ತದೆ. “ರೆವೆನ್ಯು ಕೋಡ್”ನ ಪ್ರಕಾರ ಬೆಳೆಗಳ ಉತ್ಪಾದನೆ ಸಹಜ ಪ್ರಮಾಣಕ್ಕಿಂತ 1/4(25%)ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದ್ದರೆ ರೈತರಿಗೆ ತೆರಿಗೆಯಲ್ಲಿ ವಿನಾಯಿತಿ ದೊರೆಯುತ್ತಿತ್ತು. ಆದರೆ ಅಲ್ಲಿನ ಬ್ರಿಟಿಷ್ ಆಡಳಿತ ರೈತರಿಗೆ ಸಲ್ಲಬೇಕಾದ ನ್ಯಾಯಯುತ ಹಕ್ಕು, ತೆರಿಗೆ ವಿನಾಯ್ತಿಯನ್ನು ನೀಡಲು ನಿರಾಕರಿಸುತ್ತದೆ. ಅತಂತ್ರರಾಗಿದ್ದ ರೈತರು ಹಾಗೂ ಪಟೇಲ್, ಇಂದುಲಾಲ್ ಯಾಗ್ನಿಕ್ ಮೊದಲಾದವರು ಗಾಂಧೀಜಿಯ ಬಳಿ ತೆರಳಿದಾಗ, ಗಾಂಧೀಜಿ ರೈತರ ಪರ ನಿಂತು, ತಾತ್ಕಾಲಿಕವಾಗಿ ತೆರಿಗೆ ಕಟ್ಟದಿರಲು ರೈತರಿಗೆ ಸೂಚಿಸುತ್ತಾರೆ. ಏನನ್ನೂ ಮಾಡಲಾಗದ ಆಡಳಿತ ಗೌಪ್ಯವಾಗಿ “ಯಾರಿಗೆಲ್ಲ ಸಾಧ್ಯವೋ ಅವರಷ್ಟೇ ತೆರಿಗೆ ಕಟ್ಟಿ” ಎಂಬ ಸೂಚನೆ ಹೊರಡಿಸುತ್ತಾರೆ. ಇದು ಭಾರತದಲ್ಲಿ ಗಾಂಧೀಜಿಯ ಮೊದಲ “ಅಸಹಕಾರ” ಚಳುವಳಿಯೂ, ಗಾಂಧಿ-ಪಟೇಲ್ ಜೋಡಿಯ ಮೊದಲ ಗೆಲುವೂ ಹೌದು. ಎಲ್ಲಾ ಅಧಿಕಾರವಿದ್ದರೂ ಏನನ್ನೂ ಮಾಡಲಾಗದ ಸ್ಥಿತಿಯಲ್ಲಿ ಬ್ರಿಟಿಷರನ್ನು ಕಟ್ಟಿಹಾಕಿದ್ದು, ಜನಸಾಮಾನ್ಯರ ಆಶಯಗಳಿಗೆ ದೊರೆತ ಜಯ ಈ ಚಳುವಳಿಯ ಮತ್ತೊಂದು ಸಾಧನೆ. ಪಟೇಲರ ನಾಯಕತ್ವವನ್ನು ಗುರುತಿಸಿದ ಖೇಡಾ ಜಿಲ್ಲೆಯ ಮಹಿಳೆಯರು ಅವರಿಗೆ “ಸರ್ದಾರ್(ನಾಯಕ)” ಎಂಬ ಬಿರುದನ್ನು ನೀಡಿ ಗೌರವಿಸುತ್ತಾರೆ. ಅಲ್ಲಿಂದ ಮುಂದೆ ಪಟೇಲರು ದೇಶಾದ್ಯಂತ ಸರ್ದಾರ್ ಆಗಿ ಜನಪ್ರಿಯರಾಗುತ್ತಾರೆ.

1928ರಲ್ಲಿ ಗುಜರಾತ್‍ನ ಬರ್ದೋಲಿಯಲ್ಲಿ, ಬಾಂಬೆ ಪೆಸಿಡೆನ್ಸಿ, ಬರ ಹಾಗೂ ನೆರೆಗಳ ಸತತ ಹಾವಳಿಯಿಂದ ಕಂಗೆಟ್ಟಿದ್ದ ರೈತರ ತೆರಿಗೆಯನ್ನು ಅವೈಜ್ಞಾನಿಕವಾಗಿ 30% ರಷ್ಟು ಏರಿಸುತ್ತದೆ. ಅಲ್ಲಿನ ಬಡ ರೈತರಿಗೆ ತಿನ್ನುವುದಕ್ಕೂ ಆಹಾರವಿರದಿದ್ದ ಸಮಯದಲ್ಲಿ ಏರಿಸಿದ್ದ ತೆರಿಗೆಯ ವಿರುದ್ಧ, “ತೆರಿಗೆ ಕಟ್ಟದಿರಲು ನಿರ್ಧರಿಸಿ” ಪಟೇಲ್ ನೇತೃತ್ವದಲ್ಲಿ ಕಾನೂನುಭಂಗ ಚಳುವಳಿಯನ್ನು ಕೈಗೊಳ್ಳಲಾಗುತ್ತದೆ. ಪ್ರೆಸಿಡೆನ್ಸಿ ಮೊದಲಿಗೆ ಎಲ್ಲರ ಭೂಮಿಗಳನ್ನು ಒತ್ತುವರಿಮಾಡಿಕೊಂಡರೂ ಕಾಲಕ್ರಮೇಣ ಚಳುವಳಿಗೆ ಮಣಿದು ಭೂಮಿಯನ್ನು ಹಿಂದಿರುಗಿಸಲಾಗುತ್ತದೆ ಮತ್ತು ಅವೈಜ್ಞಾನಿಕ ತೆರಿಗೆಯನ್ನು ಹಿಂಪಡೆಯಲಾಗುತ್ತದೆ. ಇದು ಪಟೇಲ್‍ರನ್ನು ಸ್ವಾತಂತ್ರ್ಯ ಚಳುವಳಿಯ ಬಹುಮುಖ್ಯ ಗಾಂಧೀವಾದಿ ನಾಯಕರನ್ನಾಗಿಸುತ್ತದೆ. ಮುಂದೆ ದಂಡಿ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಮೊದಲಾದ ಹೋರಾಟಗಳಲ್ಲಿ ಗಾಂಧೀಜಿಯ ಹೆಗಲಿಗೆ ಹೆಗಲು ಕೊಟ್ಟು ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಗಾಂಧೀಜಿಯ ಕಿರಿಯ ಸಹೋದರ ಎಂದು ಪ್ರಖ್ಯಾತರಾಗಿ ಭಾರತ ಸ್ವಾತಂತ್ರ್ಯ ಚಳುವಳಿಯ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ.

ಸ್ವಾತಂತ್ರೋತ್ತರ ಐಕ್ಯ ಭಾರತದ ಹರಿಕಾರ:

ಪಟೇಲ್ ರಾಷ್ಟ್ರದ ಕುರಿತಾದ ಸ್ಪಷ್ಟ ದೂರದೃಷ್ಟಿಯಿದ್ದ ವಾಸ್ತವವಾದಿ ನಾಯಕ. ತೆಗೆದುಕೊಂಡ ನಿರ್ಧಾರಗಳು ಅಂದಿನ ಕಾಲಕ್ಕೆ ಪ್ರಾಯಶಃ ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲವೇನೋ, ಆದರೆ ಭವಿಷ್ಯದಲ್ಲಿ ಅದೇ ಭಾರತದ ದೊಡ್ಡ ಸಮಸ್ಯೆಯಾಗಿ ಭಾರತದ ವಿಭಜನೆಗೆ ಕಾರಣವಾಗಲಿತ್ತು. ಅಂತಹ ದಿಟ್ಟ ಸಂಕಲ್ಪ, ದೃಢ ಕೃತ್ತಿಮಗಳೇ ಅವರನ್ನು ಭವ್ಯ ಭಾರತದ ಮಹಾನಾಯಕರನ್ನಾಗಿಸಿದ್ದು.

ಸ್ವಾತಂತ್ರ್ಯ ಸಿಗುವುದು ಬಹುತೇಕ ಖಚಿತ ಎಂದು ತಿಳಿಯುತ್ತಿದ್ದಂತೆ ಅನೇಕ ಸಂಗತಿಗಳು ಗರಿಗೆದರಿದವು. ಭಾರತ ವಿಭಜನೆ, ಮೌಂಟ್ ಬ್ಯಾಟನ್ ಜಾರಿಗೆ ತರಲು ಹೊರಟಿದ್ದ, ಯಾರು ಯಾವ ಕಡೆಗಾದರೂ ಅಥವಾ ಸ್ವತಂತ್ರವಾಗಿ ಉಳಿಯುವ ಅವಕಾಶ ನೀಡಿದ್ದ, ಭಾರತವನ್ನು ಮತ್ತೊಂದು ಯುರೋಪ್‍ನಂತಾಗಿಸುವ “ಬಾಲ್ಕನೈಜೇಶನ್ ಯೋಜನೆ” ಇತ್ಯಾದಿಗಳ ಮಧ್ಯೆ ಭಾರತ ಬಿಟ್ಟು ತೊಲಗುವಾಗಲೂ ಬ್ರಿಟಿಷರು ನಿರ್ಮಿಸಿದ ಹಾಗೂ ಕೆಲವು ಭಾರತೀಯ ಪ್ರಾಂತ್ಯಗಳಿಂದ ಎದುರಾದ ಸವಾಲುಗಳನ್ನು ಮೆಟ್ಟಿನಿಂತು, 565 ಪ್ರಾಂತ್ಯಗಳಲ್ಲಿ ಹಂಚಿಹೋಗಲಿದ್ದ ಭಾರತದ ಭೂಭಾಗವನ್ನು ರಾಜಕೀಯ ಪ್ರಬುದ್ಧತೆ, ಸೈನ್ಯದ ಶಕ್ತಿ ಹಾಗೂ ರಾಜತಾಂತ್ರಿಕ ನೈಪುಣ್ಯದಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ರಾಜಸ್ಥಾನದಿಂದ ಅರುಣಾಚಲಪ್ರದೇಶದವರೆಗೆ ಯಾವುದೇ ಒತ್ತಡಗಳಿಗೂ ಮಣಿಯದೆ ಏಕಭಾರತ ನಿರ್ಮಿಸಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ. ಇಲ್ಲಿ ಎರಡು ರೀತಿಯ ತಂತ್ರದ ಮೂಲಕ ಸ್ಪಟ್ಟ ಏಕಸೂತ್ರದ ಭಾರತವನ್ನು ಒಗ್ಗೂಡಿಸುವ ಪ್ರಯತ್ನವನ್ನು ಜಾರಿಗೆ ತರುತ್ತಾರೆ.

ಬ್ರಿಟಿಷರು ಭಾರತ ಬಿಟ್ಟು ತೆರಳುವಾಗ(ಡೊಮಿನಿಯನ್ ಸ್ಟೇಟಸ್) ಭಾರತ ವಿಭಜನೆಯ ಮಾದರಿಯನ್ನು ಪರಸ್ಪರ ಚರ್ಚಿಸಿ ಪರಿಹಾರಕಂಡುಕೊಳ್ಳಲು ಸ್ಪಷ್ಟವಾದ “ಪರಿವರ್ತನೆಯ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸಲಿಲ್ಲ. ರಾಡ್‍ಕ್ಲಿಫ್ ನೇತೃತ್ವದ ಗಡಿ ವಿಭಜನಾ ಆಗೋಗದ ವರದಿ 12 ಆಗಸ್ಟ್ 1947ರಂದು ಪೂರ್ಣಗೊಂಡಿದ್ದರೂ ಜವಾಬ್ದಾರಿಯಿಂದ ಜಾಣತನದಿಂದ ತಪ್ಪಿಸಿಕೊಳ್ಳಬೇಕೆಂಬ ಹುಂಬತನ, ದಾರಿದ್ರ್ಯತೆಯಿಂದ, ಭಾರತ ಪಾಕಿಸ್ತಾನವನ್ನು ಮತ್ತಷ್ಟು ಕಚ್ಚಾಟದಲ್ಲಿ ಸಿಲುಕಿಸಲು, “ಬೌಂಡರಿ ಕಮಿಶನ್” ವರದಿಯನ್ನು ಮೌಂಟ್ ಬ್ಯಾಟನ್ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ದಿನ ಅಂದರೆ 15 ಅಗಸ್ಟ್ 1947ರಂದು ಘೋಷಿಸುತ್ತಾರೆ. ಇಲ್ಲಿಂದಲೇ ಭಾರತ-ಪಾಕಿಸ್ತಾನ ಮತ್ತು ಕಾಶ್ಮೀರದ ನಿಜವಾದ ಸಮಸ್ಯೆಯೂ ಪ್ರಾರಂಭವಾಗುತ್ತದೆ. ಇಂತಹ ಸವಾಲುಗಳನ್ನು ಜುಲೈ 1947ರಲ್ಲಿ “ರಾಜ್ಯಗಳ ಇಲಾಖೆ”ಯ ಅಧಿಕಾರವನ್ನು ಕೈಗೆತ್ತಿಕೊಂಡ ಕ್ಷಣದಿಂದಲೇ ಗೃಹಮಂತ್ರಿ ವಲ್ಲಭಭಾಯಿ ಪಟೇಲ್ ಕೈಗೆತ್ತಿಕೊಳ್ಳುತ್ತಾರೆ. ಭಾರತವನ್ನು ಒಗ್ಗೂಡಿಸಲು ಮೂರು ಹಂತದ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ.

  1. ಪ್ರೈವಿ ಪರ್ಸ್, ರಾಜ್ಯಗಳಿಗೆ ರಾಜಪ್ರಮುಖರಾಗಿಸುವ (ರಾಜ್ಯಪಾಲ) ಆಸೆ, ಆಮಿಷಗಳ ಮೂಲಕ ಹೆಚ್ಚಿನ ರಾಜರನ್ನು, ರಾಜ್ಯಗಳನ್ನು ಭಾರತವೆಂಬ ಸೂತ್ರದ ಭಾಗವಾಗಿಸುತ್ತಾರೆ.
  2. ಮಾತು ಕೇಳದ, ಸಂಧಾನಕ್ಕೆ ಒಪ್ಪದ ರಾಜರುಗಳಿಗೆ ಅಲ್ಲಿನ ಪ್ರಜೆಗಳ ಮೂಲಕ ಸಾಮೂಹಿಕ ಒತ್ತಡ ಹೋರಾಟದ ಬೆದರಿಕೆಯನ್ನು ಒಡ್ಡುವ ಮೂಲಕ.
  3. ದಂಡಂ ದಶಗುಣಂ ಎಂಬಂತೆ ಮಿಲಿಟರಿ, ಪೋಲಿಸ್ ಕಾರ್ಯಾಚರಣೆಯ ಮೂಲಕ ಹಠಮಾರಿ ದೇಶವಿರೋಧಿ ರಾಜರ ಹೆಡೆಮುರಿಕಟ್ಟುವ ಮೂಲಕ.

ಪಟೇಲ್ ಹಾಗೂ ಅವರ ಸಹಾಯಕರಾಗಿದ್ದ ವಿ,ಪಿ.ಮೆನನ್ ಸಹಾಯದಿಂದ 15 ಆಗಸ್ಟ್ 1947ರ ಹೊತ್ತಿಗೆ ಕಾಶ್ಮೀರ, ಹೈದರಾಭಾದ್, ಜುನಾಗಡ್ ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯಗಳು ಸ್ವತಂತ್ರ ಭಾರತದ ಭಾಗವಾಗಲು ಭಾರತ ಸರಕಾರದೊಂದಿಗೆ “ಇನ್ಟ್ರುಮೆಂಟ್ ಆಫ್ ಆಕ್ಸೆಶನ್‍ಗೆ” ಸಹಿಹಾಕುತ್ತಾರೆ. ಅದರನ್ವಯ ರಕ್ಷಣೆ, ವಿದೇಶಾಂಗ ವ್ಯವಹಾರ ಹಾಗೂ ಸಂವಹನ-ಸಂಪರ್ಕ ಅಧಿಕಾರಗಳನ್ನು ಭಾರತ ಸರಕಾರಕ್ಕೆ ಒಪ್ಪಿಸಲಾಯಿತು. ವಾಸ್ತವವಾಗಿ ಈ ಯಾವ ಅಧಿಕಾರಗಳೂ “ಬ್ರಿಟಿಷ್ ಪ್ಯಾರಾಮೌಂಟ್ಸಿ”ಯ ಅವಧಿಯಲ್ಲಿ ಇರಲೇ ಇಲ್ಲ. ಮೇಲಾಗಿ ರಾಜ್ಯಗಳ ಆಂತರಿಕ ರಾಜಕೀಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗದು ಎಂಬ ಪಟೇಲರ ನಿರ್ದೇಶನದಿಂದ ಬಹುಥೇಕ ರಾಜರು ತಮ್ಮ ರಾಜ್ಯಗಳನ್ನು ಭಾರತದೊಂದಿಗೆ ಐಕ್ಯಗೊಳಿಸಲು ಒಪ್ಪಿಕೊಂಡರು. ಹಾಗೆ ನೋಡಿದರೆ ಪಟೇಲರ ಕ್ಷಿಪ್ರಗತಿಯ ರಾಜತಾಂತ್ರಿಕ ಕಾರ್ಯಾಚರಣೆಯ ಎದುರು ಇವರೆಲ್ಲರಿಗೆ ಸಕ್ಷಮವಾದ ಭಾರತವನ್ನು ಸೇರದೆ ಬೇರೆ ದಾರಿಯೇ ಇರಲಿಲ್ಲ. ಇಷ್ಟಾದರೂ ಹತ್ತಿರದ ರಾಜ್ಯಗಳನ್ನು ಒಟ್ಟಾಗಿಸಿ ಹೊಸ ರಾಜ್ಯಗಳನ್ನಾಗಿಸುವ ಹೊಣೆಯೂ ಪಟೇಲರ ಮೇಲಿತ್ತು. ಉದಾಹರಣೆಗೆ, ಕತಿವಾರ್ ಯೂನಿಯನ್, ವಿಂಧ್ಯ, ಮಧ್ಯಪ್ರದೇಶಗಳನ್ನು ಒಂದು ರಾಜ್ಯವಾಗಿ, ಹಿಮಾಚಲ ಅಥವಾ ರಾಜಸ್ಥಾನಗಳನ್ನು ಒಂದು ರಾಜ್ಯವೆಂಬ ಆಡಳಿತ ಸೂತ್ರದಡಿ ತರಲು ಸ್ವಲ್ಪ ಸಮಯ ಹಿಡಿಯುತ್ತದೆ.

1945ರ ಉದಯಪುರ ಕಾಂಗ್ರೆಸ್ ಅಧಿವೇಶನ ಹಾಗೂ ಏಪ್ರಿಲ್ 1947ರ ಗ್ವಾಲಿಯರ್ ಅಖಿಲ ಭಾರತ ರಾಜ್ಯಗಳ ಪ್ರಜೆಗಳ ಅಧಿವೇಶನಗಳಲ್ಲಿ, “ಯಾವ ರಾಜ್ಯಗಳು ಸಂವಿಧಾನ ಶಾಸನ ಸಭೆಯ ಭಾಗವಾಗುವುದಿಲ್ಲವೋ, ಅವನ್ನು ಭಾರತದ ಶತ್ರುವಾಗಿ ಪರಿಗಣಿಸಲಾಗುವುದು” ಎಂಬ ಗಟ್ಟಿಯಾದ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಆದರೂ ಹೈದರಾಬಾದ್, ಜುನಾಗಡ್‍ನಂತಹ ಪ್ರಾಂತ್ಯದ ನಿಜಾಮರು ಪಾಕಿಸ್ತಾನಕ್ಕೆ ಸೇರುವ ಪ್ರಯತ್ನ ಮಾಡುತ್ತಾರೆ. ತ್ರಾವಂಕೂರು ಭಾರತವನ್ನು ಸೇರಲು ಬಯಸುವುದಿಲ್ಲ. ಕಾಶ್ಮೀರ ಬಾರತಕ್ಕೂ ಸೇರದೆ, ಸ್ವತಂತ್ರವಾಗಿಯೂ ಉಳಿಯದೆ ಅತಂತ್ರವಾಗಿದ್ದ ಸಂದರ್ಭದಲ್ಲಿ ಇವುಗಳನ್ನು ನಾಜೂಕು ಮತ್ತು ನೈಪುಣ್ಯತೆಯಿಂದ ಭಾರತದ ಭಾಗವಾಗಿಸಿದ ಪ್ರಕ್ರಿಯೆಗಳ ಕಥನ ಬೃಹತ್ ಸಂಪುಟಗಳಲ್ಲಿ ವಿವರಿಸಬೇಕಾದ ವಿಚಾರ.

ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮೊದಲೇ ಅಂದರೆ ಜುಲೈ 1947ರಲ್ಲಿ ತ್ರಾವಂಕೂರು ಸಂಸ್ಥಾನ ಭಾರತದಿಂದ ತನ್ನ ಸ್ವಾತಂತ್ರ್ಯವನ್ನು ಘೋಷಿಸುವ ನಿರ್ಣಯ ಮಾಡುತ್ತದೆ. ಅಲ್ಲಿನ ದಿವಾನ ಸಿ.ಪಿ. ರಾಮಸ್ವಾಮಿ ಅಯ್ಯರ್ ಬದಲಾಗುತ್ತಿದ್ದ ಪಟೇಲ್ ಕಣ್ಣಂಚಿನಲ್ಲಿ ನಡೆದ ಆಂತರಿಕ ಬದಲಾವಣೆಗಳು ಹಾಗೂ ವ್ಯಕ್ತಿಯೊಬ್ಬರಿಂದ ಅವರ ಮೇಲಾದ ಮಾರಣಾಂತಿಕ ದಾಳಿಗೆ ಹೆದರಿ ತ್ರವಂಕೂರು ಬಾರತವನ್ನು ಸೇರಲು ನಿರ್ಧರಿಸುತ್ತದೆ.(ನೋಡಿ: ಇಂಡಿಯಾ ಸಿನ್ಸ್ ಇಂಡಿಪೆಂಡೆನ್ಸ್: ಬಿಪಿನ್ ಚಂದ್ರ) ತ್ರಾವಂಕೋರ್‍ನಂತೆಯೇ ಏಕಾಂಗಿಯಾಗಿ ಇರಲು ಬಯಸಿದ್ದ ಭೋಪಾಲದ ನವಾಬನನ್ನು ಸ್ವಾತಂತ್ರ ಭಾರತದ ಮೊದಲ ಶತ್ರುವಾಗಿ ನೋಡಲಾಗುವುದು ಎಂಬ ಪಟೇಲ್ ನಿರ್ಧಾರಕ್ಕೆ ಮಣಿದ ಭೋಪಾಲ್ ರಾಜ್ಯ ಭಾರತವನ್ನು ಸೇರಲು ಒಪ್ಪುತ್ತದೆ. ಪಾಕಿಸ್ತಾನಕ್ಕೆ ಹತ್ತಿರವಾಗಿದ್ದ ಜೋಧ್‍ಪುರ, ಉದಯ್‍ಪುರ ಹಾಗೂ ಜೈಸಲ್ಮೇರ್ ಪ್ರದೇಶಗಳನ್ನು ಕ್ರಮವಾಗಿ ಎಲ್ಲಾ ಬೇಡಿಕೆಗಳಿಗೂ ಒಪ್ಪುವ, ಪಾಕಿಸ್ತಾನದ ವಾಸ್ತವಿಕ ಚಿತ್ರಣ ನೀಡುವ ಹಾಗೂ ಜನಾಂದೋಲನದ ಒತ್ತಡದ ಮೂಲಕ ಅವುಗಳು ಭಾರತದ ಭಾಗವಾಗುವಂತೆ ಪಟೇಲ್ ನೋಡಿಕೊಳ್ಳುತ್ತಾರೆ.

ಪಾಕಿಸ್ತಾನವನ್ನು ಸೇರಲು ಬಯಸಿದ್ದ ಹೈದರಾಬಾದ್ ನಿಜಾಮನನ್ನು ಪೋಲಿಸ್ ಕಾರ್ಯಾಚರಣೆ, ಆಪರೇಶನ್ ಪೋಲೋ, ಮೂಲಕ ಹೆಡೆಮುರಿಕಟ್ಟಿ ಭಾರತವನ್ನು ಸೇರುವಂತೆ ಮಾಡುತ್ತಾರೆ.(ನೋಡಿ: ಇಂಡಿಯಾ ಆಫ್ಟರ್ ಗಾಂಧಿ: ರಾಮಚಂದ್ರ ಗುಹಾ). ಜನಪ್ರಿಯ ಜನಾದೇಶವನ್ನೂ ಲೆಕ್ಕಿಸದೆ ಪಾಕಿಸ್ತಾನದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಜುನಾಗಡ್ ರಾಜ್ಯವನ್ನು “ಜನಮತ ಸಂಗ್ರಹಣೆ”(ರೆಫರೆಂಡಮ್) ಮೂಲಕ ಭಾರತದ ಭಾಗವಾಗಿಸುತ್ತಾರೆ. ಜುನಾಗಡ್‍ನ 91% ಜನರು ಭಾರತದ ಪರವಾಗಿ ಮತಚಲಾಯಿಸುತ್ತಾರೆ. ರಾಜಾ ಹರಿಸಿಂಗ್ ಸ್ವತಂತ್ರವಾಗಿಯೇ ಉಳಿಯಬೇಕೆಂಬ ಹಠಕ್ಕೆ ಬಿದ್ದರೂ, ಪಾಕಿಸ್ತಾನದ ದಾಳಿಯಿಂದ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಬೇರೆ ದಾರಿ ಕಾಣದೆ ಭಾರತದ ಸಹಾಯಹಸ್ತವನ್ನು ಚಾಚುತ್ತಾರೆ. ಮಿಲಿಟರಿ ಸಹಾಯವನ್ನು ಪಡೆಯಲು ಅಕ್ಟೋಬರ್ 1947ರಲ್ಲಿ ರಾಜ ಹರಿಸಿಂಗ್, ಪಟೇಲ್ ಆದೇಶದಂತೆ ಭರತಕ್ಕೆ ಸೇರುವ “ಇಂಷ್ಟ್ರುಮೆಂಟ್ ಆಫ್ ಅಕ್ಸೆಶನ್”ಗೆ ಸಹಿಹಾಕುತ್ತಾರೆ, ಹೀಗೆ ಈ ನಿರ್ಣಯವನ್ನು ಕಾಶ್ಮೀರದ ಜನರ ಮುಂದಿಡುವುದಕ್ಕೆ ಒಪ್ಪಿ ಕಾಶ್ಮೀರವೂ ಭಾರತದೊಂದಿಗೆ ವಿಲೀನವಾಗಲು ನಿರ್ಧರಿಸುತ್ತದೆ. ಮುಂದೆ ಅದಕ್ಕೆ ಸಂವಿಧಾನದಲ್ಲಿ ತಾತ್ಕಾಲಿಕ ಆದರೆ ಸಂಕೀರ್ಣವಾದ “ಸಂವಿಧಾನದ ವಿಧಿ 370ಯ ಅಡಿಯಲ್ಲಿ ವಿಶೇಷ ಸ್ಥಾನಮಾನ”ವನ್ನೂ ನೀಡಲಾಗುತ್ತದೆ. ಹೀಗೆ ಅಧಿಕೃತವಾಗಿ ಕಾಶ್ಮೀರವೂ ಪಟೇಲರ ಪ್ರಯತ್ನದಿಂದ ಭಾರತದ ಭಾಗವಾಗುತ್ತದೆ. ಯುದ್ಧದಲ್ಲಿ ಭಾರತ ಮೇಲುಗೈ ಸಾಧಿಸಿದ್ದರೂ 1948ರ ಪ್ರಾರಂಭದಲ್ಲಿ ಭಾರತ ಕಾಶ್ಮೀರದ ಮೇಲಿನ ದಾಳಿಯನ್ನು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ಎದುರು ತೆಗೆದುಕೊಂಡು ಹೋಗುತ್ತದೆ. ವಿಪರ್ಯಾಸವೆಂದರೆ ಸುಲಭವಾಗಿ ಭಾರತದ ಭಾಗವಾಗಬಹುದಾಗಿದ್ದ ಪೂರ್ಣ ಕಾಶ್ಮೀರ ವಿಶ್ವದ ಸಂಸ್ಥೆಯ ಭದ್ರತಾ ಮಂಡಳಿಯ ದೆಸೆಯಿಂದ ಭಾರತ-ಪಾಕಿಸ್ತಾನ ಸಮಸ್ಯೆಯಾಗಿ ರೂಪಾಂತರಗೊಳ್ಳುತ್ತದೆ. 1949ರಲ್ಲಿ ಕದನವಿರಾಮ ಘೋಷಣೆಯಾದರೂ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಭಾಗವಾಗಿ ಇಂದಿಗೂ ಭಾರತ ಹಾಗೂ ಕಾಶ್ಮೀರದ ಐಕ್ಯತೆಗೆ ತೊಡಕಾಗಿ ಪರಿಣಮಿಸಿದೆ. ಒಟ್ಟಾರೆಯಾಗಿ ಭಾರತವನ್ನು ಐಕ್ಯಗೊಳಿಸಲು ಪಟೇಲ್ ಚಾಣಾಕ್ಯನಂತೆ ತೆಗೆದುಕೊಂಡ ನಿರ್ಧಾರಗಳು, ಜಾರಿಗೊಳಿಸಿದ ಕ್ರಮಗಳೇ ಸುಭದ್ರ ಭಾರತವನ್ನು ನಿರ್ಮಿಸಲು ಸಾಧ್ಯವಾಗಿದ್ದು.

ಕಾಶ್ಮೀರದ ವಿಚಾರದಲ್ಲಿ ಪಟೇಲ್:

ಇತ್ತೀಚೆಗೆ ಲೋಕಾರ್ಪಣೆಗೊಂಡ, ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್‍ರ “ಕಾಶ್ಮೀರ್ ಗ್ಲಿಂಪ್ಸಸ್ ಆಫ್ ಹಿಸ್ಟರಿ ಆಂಡ್ ಸ್ಟೋರಿ ಆಫ್ ಸ್ಟ್ರಗಲ್” ಪುಸ್ತಕದಲ್ಲಿ “ಪಟೇಲ್ ಹೈದರಬಾದ್‍ಗೆ ಬದಲಾಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಆಶಯವನ್ನು ವ್ಯಕ್ತಪಡಿಸಿದ್ದರು” (ಪುಟ ಸಂಖ್ಯೆ 197) ಎಂಬ ತಪ್ಪು ಮಾಹಿತಿ ಬರೆಯುತ್ತಾರೆ. ಇದು ಪಟೇಲರ ವ್ಯಕ್ತಿತ್ವ ಹಾಗೂ ಘನತೆಯನ್ನು ಕುಗ್ಗಿಸುವ ವ್ಯವಸ್ಥಿತ ಪ್ರಯತ್ನದ ಭಾಗ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಮತ್ತೆ ಮತ್ತೆ ಪಟೇಲ್ ಭಾಷಣಗಳಲ್ಲಿ ಪುನರುಚ್ಛರಿಸುತ್ತಿದ್ದ ಸಂಗಂತಿಯೆಂದರೆ “ಏನು ಬೇಕಾದರೂ ಎದುರಾಗಲಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಲಾಗದು” ಎಂಬ ದಿಟ್ಟ ಮಾತುಗಳು. ಕಾಶ್ಮೀರದ ಸೂಕ್ಷ್ಮತೆ ಹಾಗೂ ಅತಂತ್ರತೆ, ಅದರಿಂದ ಭವಿಷ್ಯದಲ್ಲಿ ಎದುರಾಗಬಹುದಾಗಿದ್ದ ತೊಂದರೆಯ ಬಗ್ಗೆ ಜವಾಹರ್‍ಲಾಲ್ ನೆಹರುರವರಿಗೆ ಎಚ್ಚರಿಸುತ್ತಿದ್ದರು. ಪಟೇಲ್ ಸಲಹೆಯಂತೆ ಸೇನೆ ಹಾಗೂ ರಾಜತಾಂತ್ರಿಕತೆಯ ಮೂಲಕ ಸಮಗ್ರ ಕಾಶ್ಮೀರವನ್ನು ಭಾರತದ ಭಾಗವಾಗಿಸಬಹುದಿತ್ತು. ಆದರೆ ನೆಹರು ಮಾತ್ರ ಆ ಸಲಹೆ, ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ತೋರುವುದಿಲ್ಲ. ಅನಗತ್ಯವಾಗಿ ನೆಹರು ವಿಶ್ವಸಂಸ್ಥೆಯ ಬಳಿ ಹೋದರೂ ಇಂದಿಗೂ ಅದರ ಸಮಸ್ಯೆ ಪರಿಹಾರವಾಗಿಲ್ಲ. ಹಾಗಾಗಿಯೇ ಇಂದಿಗೂ ಅನೇಕ ಇತಿಹಾಸಕಾರರು, “ಕಾಶ್ಮೀರ ವಿಚಾರವನ್ನು ಪರಿಹರಿಸಲು ಪಟೇಲ್‍ರಿಗೆ ಮುಕ್ತ ಅವಕಾಶದೊರೆತಿದ್ದರೆ ಭಾರತ ಹಾಗೂ ಕಾಶ್ಮೀರದ ಭವಿಷ್ಯವೇ ಬದಲಾಗುತ್ತಿತ್ತು” ಎಂಬ ಗಂಭೀರ ಮಾತುಗಳನ್ನಾಡುತ್ತಾರೆ.

55 ಕೋಟಿ ಬೇಕಾದಲ್ಲಿ ಮೊದಲು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ:

ಭಾರತದ ಖಜಾನೆಯಿಂದ ಪಾಕಿಸ್ತಾನಕ್ಕೆ 55 ಕೋಟಿ ನೀಡಬೇಕೆಂದು ಗಾಂಧಿ ಮೊದಲಾದವರು ಪಟ್ಟು ಹಿಡಿಯುತ್ತಾರೆ. ಆದರೆ ಅದಾಗಲೇ 20 ಕೋಟಿ ಪಡೆದು ಮುಂದಿನ 55 ಕೋಟಿಯ ಆಸೆಯಲ್ಲಿದ್ದ ಪಾಕಿಸ್ತಾನ ಭಾರತದ ಮೇಲೆ ಕಾಶ್ಮೀರ ನೆಲದಲ್ಲಿ ಆಕ್ರಮಣ ಮಾಡುತ್ತದೆ. ಆಗ ಪಟೇಲ್ ಬಹಳ ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ನೇರ ಸಂದೇಶವನ್ನು ನೀಡುತ್ತಾರೆ. “ಉಳಿದ ಮೊತ್ತ ಬೇಕಾದಲ್ಲಿ ಮೊದಲು ಕೂತು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ, ಇಲ್ಲವಾದಲ್ಲಿ ಆ ಮೊತ್ತವನ್ನೂ ಮರೆತುಬಿಡಿ”. ಅಂದು ಪಟೇಲ್ ತೆಗೆದುಕೊಂಡ ಈ ನಿರ್ಧಾರವನ್ನು ಒಪ್ಪಿದ್ದರೆ ಇಂದು ಕಾಶ್ಮೀರ ಕಣಿವೆ ಬಿಡಿ, ಪಾಕ್ ಆಕ್ರಮಿಕ ಕಾಶ್ಮೀರದ ಭೂಭಾಗವೆಲ್ಲವೂ ಭಾರತದ ಭಾಗವಾಗುದನ್ನು ತಪ್ಪಿಸಲು ಆಗುತ್ತಿರಲಿಲ್ಲ. ಆದರೆ “ಅಹಿಂಸಾಮೂರ್ತಿ” ಗಾಂಧಿ, “ವಿಶ್ವನಾಯಕ” ನೆಹರು ಪಟೇಲರ ವಾದವನ್ನು ಒಪ್ಪಿಕೊಳ್ಳದೆ ಹಣವನ್ನೂ, ಕಾಶ್ಮೀರವನ್ನೂ ಕಳೆದುಕೊಳ್ಳುತ್ತಾರೆ. ಇಂತಹ ಐತಿಹಾಸಿಕ ಪ್ರಮಾದದ ಫಲವನ್ನು ಇಂದಿಗೂ ಕಾಶ್ಮೀರದ ನೆಲದಲ್ಲಿ ಅನುಭವಿಸುತ್ತಿದ್ದೇವೆ.

ಪಟೇಲರ ಕೆಲವು ದಿಟ್ಟ ನಡೆ-ನುಡಿಗಳು:

ಪ್ರತ್ಯೇಕ ಪಾಕಿಸ್ತಾನಪರ ಹೋರಾಟಗಾರರು “ಡೈರೆಕ್ಟ್ ಆಕ್ಷನ್” ಹೆಸರಿನಲ್ಲಿ ಏಕಪಕ್ಷೀಯವಾಗಿ, ಅನಗತ್ಯವಾಗಿ ಹಿಂಸೆಯ ಮಾರ್ಗ ಹಿಡಿದಾಗ, ಗಾಂಧಿ ಮೊದಲಾದವರು ಉಪವಾಸವನ್ನು ಕೈಗೊಂಡಾಗ “ನಿಮ್ಮ ಖಡ್ಗಕ್ಕೆ ನಮ್ಮ ಖಡ್ಗದಿಂದಲೇ ಉತ್ತರ” ಎಂಬ ಎಚ್ಚರಿಕೆಯ ಮಾತುಗಳಾನ್ನಾಡಿದವರು ಪಟೇಲ್. ನೆಹರು ಮೂಲಕ ಗಾಂಧಿ ಪರಿಭಾವಿಸದಂತೆ ಇದು ಪ್ರಚೋದನೆಯ ಮಾತುಗಳಾಗಿ ಕಾಣುವುದಿಲ್ಲ ಬದಲಾಗಿ ದಾರಿತಪ್ಪಿದ್ದ ಭಂಜಕ ಶಕ್ತಿಗಳಿಗೆ ಎಚ್ಚರಿಕೆಯ ಸಂದೇಶವಾಗಿ ತೋರುತ್ತದೆ. ಪಟೇಲ್ ಸ್ಥಾನದಲ್ಲಿ ಯಾವುದೇ ಮಣ್ಣಿನ ಮಗನಿದ್ದರೂ, ಪರಿಸ್ಥಿತಿಯನ್ನು ಸರಿದಾರಿಗೆ ತರಲು ಇಂತಹ ಮಾತುಗಳನ್ನೇ ಆಡಿರುತ್ತಿದ್ದರು. ದೇಶದ ಹಿತಾಸಕ್ತಿಯ ವಿಚಾರ ಬಂದಾಗ ಎಂದಿಗೂ ಹಿಂದೆ ಸರಿಯದೆ, ಅನಿವಾರ್ಯತೆ ಎದುರಾದಾಗ “ಭಾರತ ದೇಶಕ್ಕೆ ನಿಷ್ಟೆಯಿಲ್ಲದ ಮುಸ್ಲಿಮರು ಪಾಕಿಸ್ತಾನಕ್ಕೆ ತೆರಳಿ” ಎಂಬ ದಿಟ್ಟಮಾತುಗಳನ್ನಾಡಿದವರೂ ಪಟೇಲರೇ. ಈ ಹೇಳಿಕೆಯನ್ನು ಸಮಯ, ಸಂದರ್ಭಗಳಿಂದ ಹೊರಗಿಟ್ಟು ಸಂಕುಚಿತವಾಗಿ ನೋಡುವ ದೃಷ್ಟಿಕೋನ ಬದಲಾಗಬಹುದು. ಆದರೆ ದೇಶದ ಹಿತದೃಷ್ಟಿಯಲ್ಲಿ ದೇಶವಾಸಿಗಳ ನಿಷ್ಠೆ ಮೊದಲ ಸ್ಥಾನ ಪಡೆಯುತ್ತದೆ. ಇದರ ಹಿಂದೆ ಯಾವುದೇ ಸಮುದಾಯವನ್ನು ಅವಮಾನಿಸುವ ಯಾವುದೇ ಕಟ್ಟ ಉದ್ದೇಶ ಅಡಗಿರಲಿಲ್ಲ. ಪಾಕಿಸ್ತಾನ ನಿರ್ಮಾಣವಾದದ್ದೇ “ಇಸ್ಲಾಂ” ಆಧಾರದಲ್ಲಿ. ಹಾಗಾಗಿ ಪ್ರಾಯಶಃ ಗೊಂದಲದಲ್ಲಿರುವ ಜನರನ್ನು ಸ್ಪಷ್ಟತೆಯ ಎಡೆಗೆ ಕರೆದೊಯ್ಯುವ ಮಾನಸಿಕತೆಯ ಭಾಗವಾಗಿ ಈ ಹೇಳಿಕೆಯನ್ನು ನೋಡಬೇಕೇ ಹೊರತು ಲಿಯಾಕತ್, ಜಿನ್ನಾ ಮೊದಲಾದವರಿಂದ ಹೊರಬರುತ್ತಿದ್ದ ಸಂಕುಚಿತ, ವಿಷಮ, ಮತಾಂಧತೆಯ ಮಾತುಗಳಂತೆ ನೋಡಬಾರದು.

ಮುಂದೆ ದೆಹಲಿಯ ನಿಜಾಮುದ್ದೀನ್ ಮಸೀದಿಯನ್ನು ನಾಶಗೆಡವಲು ಹೋದ ಭಾರತೀಯರನ್ನು ತಡೆದು ದೇಶಭಕ್ತ ಮುಸ್ಲಿಮರ ಪರವಾಗಿ ಮುಂದೆ ಬಂದು ನಿಂತವರು ಇದೇ ಪಟೇಲರು. ಕಾಶ್ಮೀರದಲ್ಲಿ ಗೋಪಾಲಸ್ವಾಮಿ ಅಯ್ಯಂಗಾರ್ ಮೂಲಕ ನೆಹರು ಆಂತರಿಕ ರಾಜಕಾರಣ ಮಾಡಲು ಹೊರಟಾಗ ಅದನ್ನು ವಿರೋಧಿಸಿ ನೆಹರು ಕ್ಯಾಬಿನೆಟ್‍ನಿಂದ ರಾಜಿನಾಮೆಯನ್ನು ನೀಡುವುದಕ್ಕೂ ಮುಂದಾಗಿದ್ದರು. ಪ್ರತಿಬಾರಿ ಇಂತಹ ಕಠಿಣ ನಿರ್ಧಾರ ಕೈಗೊಂಡಾಗಲೂ ಅವರಿಗೆ ಎದುರಾಗಿದ್ದು ಗಾಂಧೀಜಿ ಮತ್ತು ಗಾಂಧೀವಾದದ ದಾಕ್ಷಿಣ್ಯ. ಹಾಗಾಗಿ ಅದನ್ನು ಮೀರಿ ಯಾವ ಸ್ವಂತ ನಿರ್ಣಯಗಳನ್ನೂ ಕೈಗೊಳ್ಳದಷ್ಟು ಕಟ್ಟುಪಾಡು ಪಟೇಲರನ್ನು ಕಟ್ಟಿಹಾಕಿತ್ತು ಎಂಬುದು ಪರೋಕ್ಷ ಸತ್ಯ. “ಯಾವುದು ಶಕ್ತಿಯಾಗಿರುತ್ತದೆಯೋ ಅದೇ ದೌರ್ಬಲ್ಯವೂ ಆಗಿರುತ್ತದೆ” ಎಂಬ ಮಾತು ಪಟೇಲರ ಗಾಂಧಿ ನಿಷ್ಠೆಯ ವಿಚಾರದಲ್ಲಿಯೂ ಸತ್ಯವಾಗಿದೆ.

ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿನಡೆಸಿದಾಗ ಅದನ್ನು ಯುದ್ಧ ಎಂದು ಪರಿಗಣಿಸಿ, ತಡವಾದರೂ ಸೇನೆ ಹಾಗೂ ವಾಯುದಳವನ್ನು ಕಳುಹಿಸುವ ಮೂಲಕ ಇಂದು ಭಾರತದಲ್ಲೇ ಉಳಿದಿರುವ ಕಾಶ್ಮೀರದ ಭೂಭಾಗವನ್ನು ಉಳಿಸಿಕೊಳ್ಳಲು, ಪಾಕಿಸ್ತಾನವನ್ನು ಕಾಶ್ಮೀರದಿಂದ ಹಿಮ್ಮೆಟ್ಟಿಸಲು ಸಾಧ್ಯವಾಗಿದ್ದು ಪಟೇಲರ ಮತ್ತೊಂದು ಸಾಧನೆ. ಪಟೇಲ್ ವಿಧಿವಶರಾಗುವ ಕೆಲವು ವಾರಗಳ ಮೊದಲು ಅಂದಿನ ಪ್ರಧಾನಿ ನೆಹರುಗೆ ಚೀನಾ ದೇಶದ ಕುರಿತು ಎಚ್ಚರವಾಗಿರುವಂತೆ ಪತ್ರ ಬರೆಯುತ್ತಾರೆ. ಟಿಬೆಟ್ ಅನ್ನು ಜನರ ಆಶಯಗಳಿಗೆ ವಿರುದ್ಧವಾಗಿ ಆಕ್ರಮಿಸಿಕೊಂಡ ಬಗೆಯನ್ನು ನೆನಪಿಸಿ, ಮುಂದೆ ಭಾರತಕ್ಕೂ ತೀವ್ರವಾದಿ ಚೀನಾದಿಂದ ಸಮಸ್ಯೆ ತಪ್ಪಿದ್ದಲ್ಲ ಹಾಗಾಗಿ ಫ್ಯಾಸಿಸಂನಷ್ಟೇ ಗಂಭೀರವಾಗಿ ಚೀನಾವನ್ನೂ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಆದರೂ ಅವರ ಮಾತನ್ನು ಕೇಳದೆ ಹಿಂದಿ-ಚೀನೀ ಭಾಯಿ ಭಾಯಿ ಎಂದು ಬೆನ್ನಿಗೆ ಚೂರಿ ಹಾಕಿಸಿಕೊಂಡಿದ್ದು ಮಾತ್ರ ಇತಿಹಾಸ.

ಭಾರತದ ಶ್ವೇತಕ್ರಾಂತಿಯ ಗ್ರಾಂಡ್‍ಫಾದರ್:

ಭಾರತದಲ್ಲಿ ಶ್ವೇತಕ್ರಾಂತಿಯೆಂದರೆ, ಅದರ ಪಿತಾಮಹ ಎಂದೇ ಹೆಸರಾದ ವರ್ಗಿಸ್ ಕುರಿಯನ್, ಆಪರೇಶನ್ ಫ್ಲಡ್ಸ್, ಅಮೂಲ್ ನೆನಪಾಗುತ್ತವೆ. ಭಾರತ ಇಂದು ಹೈನುಗಾರಿಕೆ ಕ್ಷೇತ್ರದಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ. ಪ್ರಸ್ತುತ ಭಾರತ 176.4 ಮಿಲಿಯನ್ ಮೆಟ್ರಿಕ್ ಟನ್ ಹಾಲನ್ನು ಉತ್ಪಾದಿಸುತ್ತದೆ. ಇದು ತನ್ನ ಹತ್ತಿರದ ಪ್ರತಿಸ್ಪರ್ಧಿ 98 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪಾದಿಸುವ ಅಮೆರಿಕ ದೇಶಕ್ಕಿಂತ ಸರಿಸುಮಾರು ಎರಡುಪಟ್ಟು ಹೆಚ್ಚು. ಬರೀ ಪ್ರತಿಮೆಯ ಎತ್ತರದಲ್ಲಿ ಮಾತ್ರವಲ್ಲ ಪಟೇಲರು ಭಾರತದ ಹೈನುಗಾರಿಕೆಗೆ ಹಾಕಿಕೊಟ್ಟ ಬುನಾದಿಯಿಂದಲೂ ನಾವು ಅಮೆರಿಕಕ್ಕಿಂತ ಮುಂದಿದ್ದೇವೆ. ಆದರೆ ಇವೆಲ್ಲವಕ್ಕೂ ಮೂಲಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್. 1942ರಲ್ಲಿ ಬ್ರಿಟಿಷರು ಸುರಕ್ಷತೆಯ ಕಾರಣದಿಂದ “ಪೊಲ್ಸನ್” ಎಂಬ ಖಾಸಗಿ ಡೈರಿಗೆ ಪರವಾನಗಿ ನೀಡುತ್ತದೆ. ಗುಜರಾತ್‍ನ ಕೈರಾದ ಹೈನುಗಾರರಿಂದ ಅತ್ಯಂತ ಕಡಿಮೆ ಬೆಲೆಗೆ ಹಾಲನ್ನು ಖರೀದಿಸಿ ಬಾಂಬೆಗೆ ಸರಬರಾಜು ಮಾಡುವ ಹಕ್ಕನ್ನು “ಬಾಂಬೆ ಮಿಲ್ಕ್ ಸ್ಕಿಮ್” ಅಡಿಯಲ್ಲಿ ನೀಡಲಾಗುತ್ತದೆ. ಇದರಿಂದ ಹಾಲಿಗೆ ಮಾರುಕಟ್ಟೆ ವಿಸ್ತರಣೆಯಾದರೂ ಪೊಲ್ಸನ್ ಏಕಸ್ವಾಮ್ಯತೆ ರೈತರಿಗೆ ವಿವಿಧ ರೂಪಗಳಲ್ಲಿ ತೀವ್ರ ನಷ್ಟವನ್ನೇ ಉಂಟುಮಾಡುತ್ತಿತ್ತು. 1945ರಲ್ಲಿ ಯಾವುದೇ ದಾರಿಕಾಣದೆ ನೊಂದ ಹೈನುಗಾರರು ಪಟೇಲರನ್ನು ಸಂಪರ್ಕಿಸುತ್ತಾರೆ. ಪಟೇಲರು ತಮ್ಮ ಸಹಾಯಕರಾಗಿದ್ದ ಮೊರಾರ್ಜಿ ದೇಸಾಯಿ ಮೊದಲಾದವರ ನೇತೃತ್ವದಲ್ಲಿ ಅಸಹಕಾರ ಚಳುವಳಿ ಮಾದರಿಯಲ್ಲಿ ಪೊಲ್ಸನ್ ಏಕಸ್ವಾಮ್ಯವನ್ನು ಮುರಿಯಲು ಸೂಚಿಸುತ್ತಾರೆ.

ಅದರಂತೆ ಕೈರಾ ದ ಹಾಲು ಉತ್ಪಾದಕರು ಹಾಲನ್ನು ಪೊಲ್ಸನ್‍ಗೆ ಕಡಿಮೆ ಬೆಲೆಗೆ ಮಾರುವ ಬದಲು ರಸ್ತೆಯ ಮೇಲೆ ಚೆಲ್ಲಲಾರಂಬಿಸುತ್ತಾರೆ. ಇದೇ ಚಳುವಳಿ ಮುಂದೆ ಪೊಲ್ಸನ್ ಎಂಬ ಖಾಸಗಿ ಸ್ವಾಮ್ಯತೆಯನ್ನು ಕೊನೆಗೊಳಿಸಿ ಕೈರಾದ ಹಾಲು ಉತ್ಪಾದಕರಿಗೆ ಬಾಂಬೆಯ ಮಾರುಕಟ್ಟೆಯ ಬಾಗಿಲು ತೆರೆಯುತ್ತದೆ. 1946ರಲ್ಲಿ ಇದು “ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ”ವಾಗಿ ನೋಂದಣಿಯಾಗುತ್ತದೆ. ಮುಂದೆ ವರ್ಗಿಸ್ ಕುರಿಯನ್ ಇದೇ ಸಂಘದ ಜನರಲ್ ಮ್ಯಾನೆಜರ್ ಆಗಿ ನೇಮಕವಾಗುತ್ತಾರೆ. ಕೆಲವು ಸಮಯದಲ್ಲಿಯೇ ಹೆಚ್ಚಿನ ಹಾಲನ್ನು, ಹಾಲಿನ ಪುಡಿಯನ್ನಾಗಿ ತಯಾರುಮಾಡುವ ಘಟಕ ಆನಂದ್‍ನಲ್ಲಿ ಪ್ರಾರಂಭವಾಗುತ್ತದೆ. ಮುಂದೆ ನಡೆಯುವುದೆಲ್ಲವೂ ಶ್ವೇತ ಕ್ರಾಂತಿಯ ಗೆಲುವಿನ ಕಥನ. ಈಗ ಹೇಳಿ ಖಾಸಗಿ ಸ್ವಾಮ್ಯಕ್ಕೆ ವಿರುದ್ಧವಾಗಿ ಸ್ವದೇಶಿ, ಸಹಕಾರಿ ತತ್ವವನ್ನು ಕೃಷಿ, ಹೈನುಗಾರಿಕೆಯಲ್ಲಿ ಅಳವಡಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟು ಕೈರಾ ಹಾಲುಉತ್ಪಾದಕರ ಸಂಘದ ಅಡಿಗಲ್ಲನ್ನು ಹಾಸಿ, ಹಾಲಿನ ಮೂಲಕವೂ ಆರ್ಥಿಕತೆಯ ಶಕ್ತಿ ವೃದ್ಧಿಸಬಹುದು ಎಂದು ತೋರಿಸಿಕೊಟ್ಟು ಇಂದಿನ ಅಮುಲ್‍ನಂತಹ ಸಂಸ್ಥೆಯ ಹುಟ್ಟಿಗೆ ಕಾರಣವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಆಧುನಿಕ ಭಾರತದ ಶ್ವೇತಕ್ರಾಂತಿಯ ನಿಜವಾದ ಗ್ರಾಂಡ್‍ಫಾದರ್ ತಾನೆ?

ರಾಜಕೀಯ ಬಲಿಪಶು:

ಪ್ರಸ್ತುತ ಐತಿಹಾಸಿಕ ರಾಜಕಾರಣವನ್ನು ಅರ್ಥಮಾಡಿಕೊಳ್ಳುವಾಗ ಸೂಕ್ಷ್ಮವಾದ, ಸಮಕಾಲೀನ ಭಾರತಕ್ಕೆ ಅಪರಿಚಿತವಾದ, ಗೌಪ್ಯವಾಗಿ ದಾಖಲಾಗಿರುವ ಮೂರನೇ ಬಾಹ್ಯ ಆಯಾಮವೊಂದು ತೆರೆದುಕೊಳ್ಳುತ್ತದೆ. ಅದೆಂದರೆ ನೂರಕ್ಕೆ ನೂರರಷ್ಟು ಗಾಂಧೀಜಿ ಅನುಯಾಯಿಯಾಗಿ, ಸ್ವಾತಂತ್ರ್ಯ ಚಳುವಳಿಯ ಸಮರ್ಥ ಸೇನಾನಿಯಾಗಿ, ಸಮಾಜದಲ್ಲಿ ಅನೇಕ ಸುಧಾರಣಾ ಚಟುವಟಿಕೆಗಳನ್ನು ಕೈಗೊಂಡು, ದೇಶದ ಬೆನ್ನುಲುಬಾದ ರೈತರ ಜೊತೆ ನಿಂತು ಗ್ರಾಮಗ್ರಾಮಗಳಲ್ಲಿ ಸಂಚರಿಸಿ ಅವರಿಗೆ ಸಮರ್ಪಕ ಪರಿಹಾರವನ್ನೊದಗಿಸುವಲ್ಲಿ ಯಶಸ್ವಿ ಜನನಾಯಕನಾಗಿ, ಸುಭಾಷ್ ಚಂದ್ರ ಬೋಸ್ ನಂತರದ ಕಾಂಗ್ರೆಸ್‍ನ ಅತ್ಯಂತ ಜನಪ್ರಿಯ, ಸಂಘಟನಾ ಚತುರ ಕಾಂಗ್ರೆಸ್ ನಾಯಕನಾಗಿ ಹೊಮ್ಮಿದ್ದರೂ, 1946ರ “ಮಧ್ಯಂತರ ಸರಕಾರ”ಕ್ಕೆ ಪೂರ್ವಭಾವಿಯಾಗಿ ಕಾಂಗ್ರೆಸ್ ಅಧ್ಯಕ್ಷ ಯಾರಾಗಬೇಕೆಂಬ ಪ್ರಶ್ನೆ ಎದುರಾಗುತ್ತದೆ. ಅಂದು ಕಾಂಗ್ರೆಸ್‍ನ ಅಧ್ಯಕ್ಷರಾದವರು ಮಧ್ಯಂತರ ಸರಕಾರದ ನಾಯಕರಾಗುವವರಿದ್ದರು ಹಾಗೂ ಸ್ವತಂತ್ರ ಭಾರತದ ಪ್ರಧಾನಿಯಾಗುವವರಿದ್ದರು. ಅದಾಗಲೇ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಬುಲ್ ಕಲಾಂ ಆಜಾದ್‍ರವರನ್ನು ರಾಜಿನಾಮೆ ನೀಡಲು  ಗಾಂಧೀಜಿ ಒಪ್ಪಿಸುತ್ತಾರೆ. 15 ಪ್ರದೇಶ ಕಾಂಗ್ರೆಸ್ ಸಮಿತಿಗಳಲ್ಲಿ 12 ಸಮಿತಿಗಳಿಂದ ಒಂದೇ ಜನಪ್ರಿಯ ಹೆಸರು ಶಿಫಾರಸ್ಸುಗೊಂಡಿರುತ್ತದೆ. ಅದೇ ಸರ್ದಾರ್ ವಲ್ಲಭಭಾಯಿ ಪಟೇಲ್. ಉಳಿದ ಮೂರು ಸಮಿತಿಗಳಿಂದ ಕೃಪಲಾನಿ ಮೊದಲಾದವರ ಹೆಸರು ಶಿಫಾರಸ್ಸುಗೊಂಡಿರುತ್ತದೆ. ಗಮನಿಸಿ ಇದರಲ್ಲಿ ಒಂದೇ ಒಂದು ಸಮಿತಿಯಿಂದಲೂ ಜವಾಹರ್‍ಲಾಲ್ ನೆಹರು ಹೆಸರು ಸೂಚಿಸಲ್ಪಟ್ಟಿರುವುದಿಲ್ಲ ಆದರೂ ಪಟೇಲ್‍ರನ್ನು ಬದಿಗೆ ಸರಿಸಿ ನೆಹರು ಅಂದಿನ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಮುಂದೆ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಅಚ್ಚರಿಯ ವಿಪರ್ಯಾಸ ಮತ್ತು ಇತಿಹಾಸ!

15ರಲ್ಲಿ 12 ಸಮಿತಿಗಳು ಒಬ್ಬರ ಹೆಸರನ್ನೇ ಸೂಚಿಸುತ್ತಾರೆ ಎಂದರೆ ಗಾಂಧೀಜಿ ನೇತೃತ್ವದ ಕಾಂಗ್ರೆಸ್ ಕಾರ್ಯನಿರತ ಸಮಿತಿಗೆ(ಸಿ.ಡಬ್ಲ್ಯು.ಸಿ) ದೇಶದ ಜನರ ನಾಡಿಮಿಡಿತ ಏನು ಎನ್ನುವುದು ಅರ್ಥವಾಗಬೇಕಿತ್ತು. ಆದರೆ ಅಂದು ಮೊದಲ ಬಾರಿಗೆ ಕಾಂಗ್ರೆಸ್‍ನ ಅಧ್ಯಕ್ಷ ಆಯ್ಕೆಯ ಸುದೀರ್ಘ ಪರಂಪರೆಗೆ ತಿಲಾಂಜಲಿ ಹಾಡಿ ಪ್ರದೇಶ ಸಮಿತಿಗಳ ಹೆಸರನ್ನು ಗಣನೆಗೆ ತೆಗೆದುಕೊಳ್ಳದೆ, “ನೆಹರು ಕೋಪಿಸಿಕೊಳ್ಳುತ್ತಾರೆ, ಅವರೆಂದಿಗೂ ನಂಬರ್ 2 ಆಗಲು ಒಪ್ಪುವುದಿಲ್ಲ, ನೆಹರು ಯಾರ ಅಡಿಯಲ್ಲಿಯೂ ಕೆಲಸ ಮಾಡಲು ಇಚ್ಛಿಸುವುದಿಲ್ಲ” ಎಂಬಿತ್ಯಾದಿ ಕಾರಣ ನೀಡಿ ಕಾಂಗ್ರೆಸ್‍ನ ವರ್ಕಿಂಗ್ ಕಮಿಟಿ ತನ್ನ ಪರಮಾಧಿಕಾರವನ್ನು ಬಳಸಿಕೊಂಡು ಗಾಂಧೀಜಿ, ನೆಹರು ಹಾಗೂ ಕೃಪಲಾನಿಯವರ ನೇತೃತ್ವದಲ್ಲಿ ನೆಹರು ಅವರನ್ನು ಅಧ್ಯಕ್ಷರಾಗಿ ಒಮ್ಮತದಿಂದ ಆರಿಸುತ್ತಾರೆ. ಪಟೇಲರು ಆ ಸಭೆಯಲ್ಲಿ ಹಾಜರಿದ್ದರೂ ಆಗುತ್ತಿದ್ದ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಾಗೂ ಗಾಂಧೀ ನಿಷ್ಟೆ ಅವರನ್ನು ಮೂಕಪ್ರೇಕ್ಷಕನನ್ನಾಗಿಸುತ್ತದೆ. ಇಷ್ಟೇ ಸಾಲದೆಂಬಂತೆ “ನೆಹರು ಅಧ್ಯಕ್ಷರಾಗಲು ನನಗೆ ಯಾವುದೇ ಅಭ್ಯಂತರವಿಲ್ಲ ಹಾಗೂ ಅವರಿಗೆ ನನ್ನ ಪೂರ್ಣ ಬೆಂಬಲವಿದೆ” ಎಂಬ ಮುಚ್ಚಳಿಕೆಯನ್ನೂ ಪಟೇಲರಿಂದ ಬರೆಸಿಕೊಂಡು ಅವಮಾನಿಸಲಾಗುತ್ತದೆ. ಮತ್ತು ಯಾವುದೇ ಪ್ರದೇಶ ಸಮಿತಿಗಳು ಬಂಡಾಯವೇಳದಂತೆ ಮಾಡಲು ಈ ಕ್ರಮವನ್ನು ಅನುಸರಿಸಿರಬಹುದು.

ಹೀಗೆ ನಾಲ್ಕನೇ ಬಾರಿ ಪಟೇಲರು ಅಧ್ಯಕ್ಷಗಾದಿಯ ಉಮೇದುವಾರಿಕೆಯಿಂದ ಹಿಂದೆ ಸರಿಯಬೇಕಾಗುತ್ತದೆ. ಹಿಂದೆ 1939ರಲ್ಲಿ ಪಟ್ಟಾಭಿ ಸೀತಾರಾಮಯ್ಯನವರು ಭೋಸ್ ಎದುರು ಸೋತಾಗ ಗಾಂಧೀಜಿ ರಾಜಿನಾಮೆ ನೀಡಲು ಮುಂದಾಗಿದ್ದರು. ಅಂದು ಸ್ವಾಭಿಮಾನಿ ಬೋಸ್ ಕಾಂಗ್ರೆಸ್ ತ್ಯಜಿಸಿ ಹೊರನಡೆದಿದ್ದರು. ಅಂದು ಗಾಂಧೀಜಿ ಭಾವನಾತ್ಮಕ ದಾಳವನ್ನು ಉರುಳಿಸಿದ್ದರು, ಇಂದು ನೆಹರು ಅದೇ ದಾಳವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರು. ಆದರೆ 1946ರಲ್ಲಿ ಗಾಂಧೀಜಿ ಅನುಯಾಯಿ ಪಟೇಲರು ದೇಶದ ಹಿತಕ್ಕಾಗಿ ಅಂದರೆ ಕಾಂಗ್ರೆಸ್‍ನ ಏಕತೆ ಮತ್ತು ಮುನ್ನೆಲೆಯ ಸ್ವಾತಂತ್ರ್ಯ ಚಳುವಳಿ ಮುರಿದುಹೋಗಬಾರದೆಂಬ ಆಶಯದಿಂದ ನೆಹರು ಆಯ್ಕೆಯನ್ನು ಒಪ್ಪಿ ಮುಂದೆ ನೆಹರು ಮಧ್ಯಂತರ ಸರಕಾರದ ಕ್ಯಾಬಿನೆಟ್ ಸೇರುತ್ತಾರೆ. ಮುಂದೊಂದು ದಿನ ಮೌಲಾನಾ ಅಬುಲ್ ಕಲಾಂ ಆಜಾದ್ ತಮ್ಮ ಆತ್ಮಕಥನದಲ್ಲಿ ಈ ಪ್ರಸಂಗವನ್ನು ನೆನಪಿಸಿಕೊಂಡು “ಇದು ತಮ್ಮ ಜೀವಮಾನದ ಹಾಗೂ ರಾಜಕಾರಣದ ದೊಡ್ಡ ಪ್ರಮಾದ. ಅಂದಿನ ಅಧ್ಯಕ್ಷರ ಚುನಾವಣೆಯಲ್ಲಿ ಪಟೇಲರಿಗೆ ಬೆಂಬಲ ಸೂಚಿಸಬೇಕಿತ್ತು. ಪಟೇಲ್, ಪ್ರಧಾನಿ ನೆಹರು ಮಾಡಿದ ತಪ್ಪುಗಳನ್ನು ಖಂಡಿತಾ ಮಾಡುತ್ತಿರಲಿಲ್ಲ” ಎಂದು ಬದಲಾದ ವರ್ತಮಾನದಲ್ಲಿ ನೋವಿನಿಂದ ಬರೆದುಕೊಳ್ಳುತ್ತಾರೆ.

“ಇಂಡಿಯಾ ಫ್ರಮ್ ಕರ್ಜನ್ ಟು ನೆಹರು ಆಂಡ್ ಆಫ್ಟರ್” ಪುಸ್ತಕದಲ್ಲಿ ದುರ್ಗಾದಾಸ್‍ರಿಗೆ ಗಾಂಧೀಜಿ ಈ ಸಂದರ್ಭವನ್ನು ಹೀಗೆ ವಿವರಿಸುತ್ತಾರೆ. ಈ ವಿವರಣೆಯ ತೂಕವನ್ನು ನೀವೇ ವಿವೇಕ್ಷಿಸಿ. ಜವಾಹರ್‍ಲಾಲ್ ನೆಹರು ಬ್ರಿಟಿಷರ ಜೊತೆಗೆ ಒಪ್ಪಂದ ನಡೆಸಲು ಉತ್ತಮ ಉಪಕರಣ. ಇಂಗ್ಲೀಷರು ಹಾಗೂ ನೆಹರು ಒಂದೇ ನಾಣ್ಣುಡಿಯಲ್ಲಿ ಮಾತನಾಡುತ್ತಾರೆ..  ನೆಹರು ನಮ್ಮ ಕ್ಯಾಂಪ್‍ನಲ್ಲಿರುವ ಇಂಗ್ಲಿಷ್ ಮ್ಯಾನ್”(ಪುಟ ಸಂಖ್ಯೆ:229, ಅಧ್ಯಾಯ: ಕ್ಯಾಬಿನೆಟ್ ಮಿಶನ್.) ಎಂಬ ನೆಹರು ಆಯ್ಕೆಯ ಸಮಜಾಯಿಶಿ ನೀಡುತ್ತಾರೆ. ಪ್ರಾಯಶಃ ಗಾಂಧೀಜಿಯ ಜೊತೆಗಿದ್ದೂ ಗಾಂಧಿಯಂತಾಗದ ನೆಹರು “ಇಂಗ್ಲಿಷ್ ಮ್ಯಾನ್” ಆಗಿ ತೋರಿದ್ದು ಅತಿಶಯೋಕ್ತಿ ಎನಿಸದು. ಹಾಗೆ ನೋಡಿದರೆ ಪಟೇಲರು ಕೂಡ ಇಂಗ್ಲೆಂಡ್‍ನಲ್ಲಿಯೇ ಬ್ಯಾರಿಸ್ಟರ್ ಮುಗಿಸಿರುತ್ತಾರೆ. ಗಾಂಧೀಜಿಯಿಂದ ಪ್ರಭಾವಿತರಾಗಿ ವೇಷ ಭೂಷಣ ಹಾಗೂ ಬದುಕಿನ ಕ್ರಮದಲ್ಲಿ ಸ್ವದೇಶಿ, ಸರಳತೆಯ ಬದಲಾವಣೆ ಮಾಡಿಕೊಳ್ಳುವ ತನಕ ಪಟೇಲರೂ ಹೆಚ್ಚು ಕಡಿಮೆ ಆಂಗ್ಲ ಜೀವನಶೈಲಿಯನ್ನೇ ನಡೆಸುತ್ತಿರುತ್ತಾರೆ. ಗುಜರಾತ್‍ನ ದುಬಾರಿ ವಕೀಲರಾಗಿದ್ದ ಪಟೇಲ್‍ರಿಗೂ ಇಂಗ್ಲೀಷರ ಜೊತೆ ಮಾತಿನ ಬಾಂಧವ್ಯ ಬೆಸೆವ ಇಂಗ್ಲಿಷ್ ನಾಣ್ಣುಡಿಗಳು ಚೆನ್ನಾಗಿಯೇ ಬರುತ್ತಿದವು.

ಈ ಒಂದು ಘಟನೆ ಒಂದು ಮಾದರಿಯಷ್ಟೆ, ಇದಕ್ಕೂ ಪೂರ್ವದಲ್ಲಿ ಹಾಗೂ ಈ ಘಟನೆಯ ತರುವಾಯ ಅನೇಕ ಬಾರಿ ಪಟೇಲರನ್ನು ನೆನೆಗುದಿಗೆ ಸರಿಸುವ ಪ್ರಯತ್ನ ನಡೆದಿವೆ. ಅವೆಲ್ಲ ಎಲ್ಲೆಲ್ಲೋ ಸಣ್ಣದಾಗಿ ದಾಖಲಾಗಿವೆ. ಆಗೆಲ್ಲ ಪಟೇಲ್, ಗಾಂಧಿ-ನೆಹರು ರಾಜಕಾರಣಕ್ಕೆ ಬಲಿಯಾಗದೆ, ಯಾವುದೇ ಮಹತ್ವಾಕಾಂಕ್ಷೆಯನ್ನು ಬಯಸದೇ, ಇರುವ ಅವಕಾಶದಲ್ಲಿ ಮಹತ್ವದ್ದನ್ನು ಸಾಧಿಸುವ ಪ್ರಯತ್ನವನ್ನೇ ಮಾಡಿಕೊಂಡು ಬರುತ್ತಾರೆ. ಆ ಕಾರಣದಿಂದಲೇ ಪಟೇಲರು ಈಗಲೂ ನಮ್ಮ ನಡುವೆ ಪ್ರಚಲಿತರಾಗಿ ಉಳಿದಿದ್ದಾರೆ.

1946ಕ್ಕಿಂತ ಹಿಂದೆಯೂ ನಾಲ್ಕು ಬಾರಿ ವಿವಿಧ ಕಾರಣಗಳಿಂದ ಪಟೇಲ್ ಕಾಂಗ್ರೆಸ್ ಅಧ್ಯಕ್ಷರಾಗದಂತೆ ತಡೆಯಲಾಗಿರುತ್ತದೆ. ಅಂದು ಶುರುವಾದ ಆ ಪರಂಪರೆ ನೆಹರು ನಂತರವೂ ಕಾಂಗ್ರೆಸ್‍ನ ಆಯಕಟ್ಟಿನ ಅಧಿಕಾರವನ್ನು ನೆಹರು ಪರಿವಾರವೇ ಅನುಭವಿಸುವಂತಾಗಿರುವುದು ಕಾಂಗ್ರೆಸ್ ಎಂಬ ಸಮಾಜದ ಆಸ್ತಿ ಸ್ವಂತದ ಆಸ್ತಿಯಾಗಿ ಬದಲಾದ ಜ್ವಲಂತ ನಿದರ್ಶನ ಮತ್ತು ನೋವಿನ ಕಥೆ. ಕೆ.ಕಾಮರಾಜ್, ಮೊರಾರ್ಜಿ ದೇಸಾಯಿ, ಮೊದಲಾದ ಹಿರಿಯರನ್ನು ಅವಮಾನಿಸಿ ಬದಿಗೆ ಸರಿಸಿ ಇಂದಿರಾ ಗಾಂಧಿ ಕಾಂಗ್ರೆಸ್ ಅಧಿಕಾರವನ್ನು ತಮ್ಮದಾಗಿಸಿಕೊಂಡರು. ಸೀತಾರಾಮ್ ಕೇಸರಿ, ಪಿ ವಿ ನರಸಿಂಹರಾವ್ ಬದಿಗೆ ಸರಿಸಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಗಾದಿ ಮತ್ತು ಅಧಿಕಾರ ಕೇಂದ್ರವನ್ನು ತಮ್ಮದಾಗಿಸಿಕೊಂಡರು. ಇತಿಹಾಸಕಾರ ರಾಮಚಂದ್ರ ಗುಹಾ ಸಂದರ್ಶನವೊಂದರಲ್ಲಿ ಹೇಳಿರುವಂತೆ, “ಸೋನಿಯಾ ಗಾಂಧಿಯವರು ಮಹತ್ಮ ಗಾಂಧೀಜಿ ಬಿಟ್ಟರೆ ತಮ್ಮ ಕುಟುಂಬ ಮಾತ್ರ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದೆ ಎಂದು ನಂಬಿದ್ದಾರೆ ಹಾಗಾಗಿಯೇ ಯಾವುದೇ ಯೋಜನೆ, ಆಲೋಚನೆಗಳಿಗೆ ಕೇವಲ ಅವರ ಕುಟುಂಬದವರ ಹೆಸರಷ್ಟೇ ಹಾಕಲಾಗುತ್ತದೆ. ಹೀಗೆ ಪಟೇಲ್, ಶಾಸ್ತ್ರಿಯಂತಹ ಅನೇಕ ದೇಶ ನಿರ್ಮಾತೃಗಳನ್ನು ಕಡೆಗಣಿಸಲಾಗಿದೆ”.

ಉಪಸಂಹಾರ:
ಸ್ವಾತಂತ್ರ್ಯ ಚಳುವಳಿಗಾಗಿ ಕೋಟ್ಯಾಂತರ ಜನರು ನೂರಾರು ಜನನಾಯಕರು ತಮ್ಮ ಬದುಕನ್ನೇ ಭಾರತಕ್ಕಾಗಿ ಅರ್ಪಿಸಿಕೊಂಡಿದ್ದರೂ ಅಂಥವರ ತ್ಯಾಗ, ಬಲಿದಾನಗಳನ್ನು ಕಡೆಗಣಿಸಿ ತಮ್ಮ ಕುಟುಂಬದ ಹೆಸರುಗಳನ್ನಷ್ಟೇ ಮುನ್ನೆಲೆಗೆ ತರುವುದು ಎಂದರೆ ಅದು ಪ್ರತಿಯೊಬ್ಬ ಭಾರತೀಯರಿಗೆ, ಭಾರತಕ್ಕೆ ಮಾಡುವ ಅಪಮಾನ ಮತ್ತು ಆತ್ಮವಂಚನೆಯ ನಂಬಿಕೆ ದ್ರೋಹ. ಹಾಗಾಗಿಯೇ ಕಾಂಗ್ರೆಸ್ ಪಕ್ಷವೇ ದಿವ್ಯ ನಿರ್ಲಕ್ಷ್ಯ ಮಾಡಿದ್ದ ಅವರದ್ದೇ ಪಕ್ಷದ ಪಟೇಲ್, ಬೋಸ್, ಶಾಸ್ತ್ರಿ ಮೊದಲಾದವರ ಸಾಧನೆಗಳನ್ನು ನೆನೆದು, ಅವರನ್ನು ಮುನ್ನಲೆಗೆ ತರುವ ಪ್ರಯತ್ನವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರಕಾರ ಮಾಡುತ್ತಿದೆ. ಇದರಿಂದ ರಾಜಕೀಯವಾಗಿ ಅವರಿಗೆ ಲಾಭವಾಗಬಹುದಾದರೂ, ಭಾರತದ ಮಹಾನ್ ನಿರ್ಮಾತೃರಿಗೆ ಇತಿಹಾಸದ ಸ್ವರ್ಣಲಿಪಿಯಲ್ಲಿ ದೊರಕಬೇಕಾದ ಗೌರವಪೂರ್ಣ ಸ್ಥಾನವನ್ನು ಒದಗಿಸುವ ಮಹತ್ವದ ಕಾರ್ಯ ಎಲ್ಲಕ್ಕಿಂತಲೂ ಅಗ್ರಸ್ಥಾನವನ್ನು ಪಡೆಯುತ್ತದೆ.

“ಕಾಂಗ್ರೆಸ್ ಪಟೇಲರನ್ನು ನಿರಾಕರಿಸಿತು (ತಮ್ಮದಾಗಿಸಿಕೊಳ್ಳಲಿಲ್ಲ) ಮತ್ತು ಬಿಜೆಪಿ ಪಟೇಲರನ್ನು ತಪ್ಪಾಗಿ ತಮ್ಮದಾಗಿಸಿಕೊಳ್ಳುತ್ತಿದೆ” ಎಂಬ ಗೋಪಾಲ್ ಗಾಂಧಿ ಅವರ ಮಾತು ಕೇವಲ ಅರ್ಧಸತ್ಯ. ಪಟೇಲ್ ಕೇವಲ ಕಾಂಗ್ರೆಸಿನ ನಾಯಕರಲ್ಲ. ಭಾರತದ ನಾಯಕರು. ಇತಿಹಾಸದಲ್ಲಿ ಗೌರವ, ಆದರ ಹಾಗೂ ಸೂಕ್ತ ಸ್ಥಾನಗಳಿಂದ ವಂಚಿತರಾದ ಪಟೇಲರಂತಹ ದೇಶ ನಿರ್ಮಾತೃರನ್ನು ಸಮಕಾಲೀನ ಸಂದರ್ಭದಲ್ಲಿ ಪ್ರಸ್ತುತಗೊಳಿಸಿ ಗೌರವಸೂಚಿಸಲು ಯಾವ ಪಕ್ಷವಾದರೇನು? ಅದರಲ್ಲಿ ಆಗಿರುವ ಪ್ರಮಾದವೇನು? ಅದು ಸ್ವಾತಂತ್ರ್ಯ ಹಾಗೂ ಏಕತೆಯ ಗಾಳಿಯನ್ನು ಉಸಿರಾಡುತ್ತಿರುವ ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಸಿದ್ಧ ಮಾದರಿಗಳ ಪೊಳ್ಳುತನವನ್ನು ಬೇಧಿಸುತ್ತಾ ಹೊಸ ಸಾಧ್ಯತೆಗಳ ದೂರದೃಷ್ಟಿಯ ಭವಿಷ್ಯ, ಸಕಾರತ್ಮಕ ಭಾರತದ ತಾತ್ವಿಕ ನಿರೂಪಣೆ, ನ್ಯಾಯಸಮ್ಮತತೆಯ ಅನಿವಾರ್ಯತೆ ಹಾಗೂ ರಾಷ್ಟ್ರ ಎಂಬ ಅಖಂಡ ಚಿತ್ರಣದ ನಿಸ್ವಾರ್ಥತ ಸರ್ವಸ್ವದ ಒಂದು ಮಾದರಿಯೇ ಭಾರತ ರತ್ನ, ಲೋಹಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ. ಪ್ರತಿಮೆಯಿಂದ ಮಾತ್ರವಲ್ಲ. ಭಾರತ ದೇಶ ಇರುವವರೆಗೂ ಪಟೇಲರ ಹೆಸರು ಮತು ಸಾಧನೆ ಚಿರಸ್ಮರಣೀಯ. ವಿಶ್ವವನ್ನೇ ಕೈಬೀಸಿ ಕರೆಯುತ್ತಿರುವ ಮೂರ್ತಿ, ಪಟೇಲರ “ಲೆಗೆಸಿ”ಯನ್ನು ಚಿರಸ್ಥಾಯಿಗೊಳಿಸುವ ಉತ್ತಮ ಪ್ರಯತ್ನವಾಗಿದೆ. ಮತ್ತೆ ದೇಶವನ್ನು ನಮ್ಮ ನಮ್ಮ ನೆಲೆಗಳಲ್ಲಿ ಏಕತೆಯ ಸೂತ್ರದಡಿಯಲ್ಲಿ ಪೋಣಿಸುವ ಕೆಲಸ ಮಾಡೋಣ. ರಾಷ್ಟ್ರೀಯ ಏಕತಾ ದಿನದ ಶುಭಾಶಯಗಳು.

-ಶ್ರೇಯಾಂಕ ಎಸ್ ರಾನಡೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!