ಅಂಕಣ ಲೋಕವಿಹಾರಿ-ಸಸ್ಯಾಹಾರಿ

ಲಿಸ್ಬನ್: ಹೇರಳವಾಗಿ ಸಿಕ್ಕಿತು ಬ್ರೆಡ್ಡು ,ಬನ್ನು, ಮಾವಿನಹಣ್ಣು 

ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧ ಇರುವ ಯೂರೋಪಿನ ಅತಿ ಹಳೆಯ ದೇಶ ಎನ್ನುವ ಮಾನ್ಯತೆಗೆ ಭಾಜನವಾಗಿರುವ ಪೋರ್ಚುಗಲ್ ನ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷದಷ್ಟು. ಸ್ಪೇನ್ ದೇಶದ ಜೊತೆಗೆ ಉತ್ತರದಲ್ಲಿ 750 ಮೈಲಿಗೂ ಹೆಚ್ಚು ಉದ್ದದ ಗಡಿ ಹಂಚಿಕೊಂಡಿದೆ. ಗಡಿಭಾಗದಲ್ಲಿ ಯಾವುದೇ ತಂಟೆ ತಕರಾರು ಇಲ್ಲದೆ ಶಾಂತಿಯಿಂದ ಕೂಡಿದೆ. ಗಡಿ ಭಾಗದ ಒಂದೆರೆಡು ಹಳ್ಳಿಗಳು ನಮಗೆ ಸೇರಬೇಕು ಎನ್ನುವುದು ಪೋರ್ಚುಗೀಸ್’ನ ವಾದ. 19 ನೇ ಶತಮಾನದಿಂದ ಸ್ಪೇನ್ ಆಳ್ವಿಕೆಗೆ ಒಳಪಟ್ಟಿರುವ ಈ ಹಳ್ಳಿಗಳನ್ನು ಪಡೆಯಲೇಬೇಕು ಎಂದು ಪೋರ್ಚುಗೀಸ್ ಎಂದೂ ಯುದ್ಧಕ್ಕೆ ನಿಂತಿಲ್ಲ, ಮಾತುಕತೆ ಸಾಗುತ್ತಲೇ ಇದೆ. ಲಿಸ್ಬನ್ ಪೋರ್ಚುಗೀಸ್ ದೇಶದ ರಾಜಧಾನಿ. ಹಾಗೆ, ನೋಡಲು ಹೋದರೆ ಇತಿಹಾಸದಲ್ಲಿ ಲಿಸ್ಬನ್ ಅನ್ನು ಎಂದೂ ಪೋರ್ಚುಗೀಸ್’ನ ರಾಜಧಾನಿ ಎಂದು ಉಲ್ಲೇಖಿಸಿಲ್ಲ. ಕಾರ್ಯತಃ (De Facto) ಇದನ್ನು ರಾಜಧಾನಿ ಎಂದು ಎಂದು ಶತಮಾನಗಳಿಂದ ಒಪ್ಪಿಕೊಳ್ಳಲಾಗಿದೆ. ಅದಕ್ಕೆಂದು ಅದ್ದೂರಿ ಸಮಾರಂಭ ನಡೆದಿಲ್ಲ. ಪೋರ್ಚುಗೀಸ್ ಬದುಕಲು ಉತ್ತಮ ದೇಶ ಎನ್ನುವುದು ಆ ದೇಶದಲ್ಲಿ ಅನೇಕ ಗ್ರಾಹಕರನ್ನ ಹೊಂದಿದ್ದ ಮತ್ತು ಕೆಲಸದ ವಿಷಯವಾಗಿ ಹಲವು ಪೋರ್ಚುಗೀಸರೊಡನೆ ಮಾತನಾಡುವ ಅವಕಾಶ ಸಿಕ್ಕ ನನಗೆ ಗೊತ್ತಿತ್ತು. ಆದರೆ ಕುಟುಂಬ ಸಮೇತ ಹೋಗಬೇಕು, ಅಲ್ಲಿಗೆ ಹೋಗಬೇಕು ಅನ್ನಿಸಿದ್ದು ಮಾತ್ರ ವಾಸ್ಕೊಡಗಾಮ ಎನ್ನುವ ನಾವಿಕನಿಂದ.

ಇಂದಿನ ಜಗತ್ತು ಒಂದು ಸಣ್ಣ ಹಳ್ಳಿಯಂತೆ ಮಾರ್ಪಾಡಾಗಲು ವಾಸ್ಕೊ ಡ ಗಾಮ (Vasco da Gama) ಮತ್ತು ಬಾರ್ತಲೋಮಿಯ ದಿಯಾಸ್ (Bartolomeu Dias) ಎನ್ನುವ ಇಬ್ಬರು ಪೋರ್ಚುಗೀಸ್ ನಾವಿಕರು ಕಾರಣ ಎನ್ನುವುದನ್ನು ಎಲ್ಲರು ಒಪ್ಪಲೇಬೇಕಾಗಿರುವ ವಿಷಯ. ವಾಸ್ಕೊ ಡ ಗಾಮ ಭಾರತವನ್ನು ಮತ್ತು ಬ್ರೆಜಿಲ್ ದೇಶವನ್ನು ಕಂಡುಹಿಡಿದದ್ದು; ನಂತರ ಜಗತ್ತಿನಲ್ಲಿ ಆದ ಬದಲಾವಣೆಗೆ ಇತಿಹಾಸ ಸಾಕ್ಷಿ. ಹೀಗೆ ಜಗತ್ತಿನ ಅತ್ಯಂತ ಮಹತ್ತ್ವಪೂರ್ಣ ದೇಶಗಳ ಕಂಡುಹಿಡಿದ ನಾವಿಕರ ದೇಶ ಹೇಗಿದೆ ಎನ್ನುವ ಸಹಜ ಕುತೂಹಲ ನನ್ನ ಲಿಸ್ಬನ್ ನಗರದಲ್ಲಿ ತಂದು ನಿಲ್ಲಿಸಿತ್ತು.

ಲಿಸ್ಬನ್’ನ ಹೂಂಬೆರ್ತೊ ಡೆಲ್ಗಾದೊ ಏರ್ಪೋರ್ಟಿನಲ್ಲಿ ಇಳಿದು ನಾವು ಕಾದಿಸಿರಿದ್ದ ಹೋಟೆಲ್’ಗೆ ಹೋಗಲು ಟ್ಯಾಕ್ಸಿ ಹಿಡಿದೆವು. ಯೂರೋಪಿನ ಯಾವುದೇ ದೇಶಕ್ಕೆ ಹೋಗಲಿ ‘ನಿಮಗೆ ಸ್ಪ್ಯಾನಿಷ್ ಬರುತ್ತದೆಯೇ’ ? ಎಂದು ಕೇಳುವುದು ನನ್ನ ಜಾಯಮಾನ. ಅವರಿಗೆ ಸ್ಪ್ಯಾನಿಷ್ ಬಂದರೆ ಅವರೊಂದಿಗೆ ಸಂವಹನ ಸುಲಭ. ಮುಕ್ಕಾಲು ಪಾಲು ಯೂರೋಪಿನ ದೇಶಗಳಿನ ಜನರಿಗೆ ಇಂಗ್ಲಿಷ್ ಎಂದರೆ ಅಲರ್ಜಿ. ಜೊತೆಗೆ ತಾತ್ಸಾರ! ನನ್ನ ಟ್ಯಾಕ್ಸಿ ಡ್ರೈವರ್ ಅನ್ನು ಹಾಗೆಯೇ ನಿನಗೆ ಸ್ಪ್ಯಾನಿಷ್ ಬರುತ್ತದೆಯೇ ಎಂದೆ. ಆತ ಗತ್ತಿನಿಂದ ‘ಸೊಯ್ ಪೋರ್ಚುಗೀಸ್….’ (ನಾನು ಪೋರ್ಚುಗೀಸ) ಎಂದ. ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಕನ್ನಡ ತೆಲುಗು ಇದ್ದಹಾಗೆ. ಮುಕ್ಕಾಲು ಪಾಲು ಪದಗಳು ಹೋಲಿಕೆ ಇದೆ. ನನ್ನ ಸ್ಪ್ಯಾನಿಷ್ ಮಿಶ್ರಿತ ಪೋರ್ಚುಗೀಸ್’ನಲ್ಲಿ ಹೇಗೋ ಸಂಭಾಳಿಸಿದೆ. ನಾನು ನನ್ನ ದೇಶ ಎನ್ನುವ ಭಾವನೆ ಅದೆಷ್ಟು ಇವರ ರಕ್ತದಲ್ಲಿದೆ ಎನ್ನುವುದಕ್ಕೆ ಈ ವಿಷಯವನ್ನು ಉಲ್ಲೇಖಿಸಬೇಕಾಯಿತು.

ಲಿಸ್ಬನ್ ನಲ್ಲಿ ನೋಡಲೇನಿದೆ?

ಬೆಲಂ ಟವರ್ ಇಲ್ಲಿನ ಆಕರ್ಷಣೆ. ಇದು ಡಿಫೆನ್ಸ್ ಟವರ್ ಎಂದು ಕೂಡ ಪ್ರಸಿದ್ದಿ ಹೊಂದಿದೆ. ಜೆರೋಮಿನಸ್ ಮೊನೆಸ್ಟರಿ (ವಾಸ್ಕೋ ಡ ಗಾಮನ ತಂಗುದಾಣವಾಗಿತ್ತು) ಹತ್ತಾರು ಮ್ಯೂಸಿಯಂಗಳು ಕೋಟೆಗಳು ನೋಡಲು ಸಿಗುತ್ತವೆ. ಎಲ್ಲಕ್ಕೂ ಮುಖ್ಯ ಟ್ರಾಮ್ ಪ್ರಯಾಣಕ್ಕೆ ಇಲ್ಲಿಗೆ ಬರುವ ಪ್ರವಾಸಿಗರು ಮುಗಿಬೀಳುತ್ತಾರೆ. ಅದಕ್ಕೆ ಕಾರಣ ಇವು 1930 ರಿಂದ ಚಾಲನೆಯಲ್ಲಿವೆ. ಟ್ರಾಮ್ 28 ಎನ್ನುವ ಟ್ರಾಮ್ ತಗ್ಗು ದಿಣ್ಣೆಯ ಲಿಸ್ಬನ್’ನಲ್ಲಿ ಚಲಿಸುವ ಮಜಾವನ್ನು ಅದರಲ್ಲಿ ಸವಾರಿ ಮಾಡಿಯೇ ಅನುಭವಿಸಬೇಕು.

ಬೆಲಂ ಟವರ್

ಖರ್ಚಿನ ಲೆಕ್ಕಾಚಾರ ಹೀಗಿದೆ

ಬೆಂಗಳೂರಿನಿಂದ ಲಿಸ್ಬನ್ ನಗರಕ್ಕೆ ೫೫ ರಿಂದ ೬೦ ಸಾವಿರ ರೂಪಾಯಿಯಲ್ಲಿ ಹೋಗಿಬರಲು ಟಿಕೆಟ್ ಸಿಗುತ್ತದೆ. ಉಳಿದಂತೆ ಲಿಸ್ಬನ್ ಯೂರೋಪಿನ ಇತರ ನಗರಗಳಿಗಿಂತ ಒಂದಷ್ಟು ಕಡಿಮೆ ವೆಚ್ಚದ ನಗರವೆಂದೇ ಹೇಳಬಹುದು. ಹೋಟೆಲ್ ಅಥವಾ ಅಪಾರ್ಟ್ ಹೋಟೆಲ್ ಯಾವುದಾದರೂ ಸರಿ ದಿನಕ್ಕೆ ೭೫೦೦ ಸಾವಿರದಂತೆ ಖರ್ಚಾಗುತ್ತದೆ. ಊಟ ತಿಂಡಿ ಬಾಬತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಎಲ್ಲಿ ಮತ್ತು ಏನು ತಿನ್ನಬೇಕು ಎನ್ನುವುದರ ಮೇಲೆ ನಿಗದಿಯಾಗುತ್ತದೆ. ಆದರೂ ಐವರ್ರು ಯುರೋ ಅಂದರೆ ಸರಿಸುಮಾರು ೪/೫ ಸಾವಿರ ರೂಪಾಯಿ ದಿನಕ್ಕೆ ಬೇಕು. ಮ್ಯೂಸಿಯಂ ಮತ್ತಿತರ ಜಾಗಗಳ ಪ್ರವೇಶ ಶುಲ್ಕ ಬೇರೆ. ಈ ಎಲ್ಲಾ ಲೆಕ್ಕಾಚಾರ ನೋಡಿದರೆ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಒಬ್ಬ ವ್ಯಕ್ತಿಗೆ ೫/೬ ದಿನ ಇದ್ದು ಬರಲು ಬೇಕಾಗುತ್ತದೆ.

ಭೇಟಿಗೆ ಯಾವ ಸಮಯ ಬೆಸ್ಟ್?

ಜುಲೈ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಉತ್ತಮ  ಸಮಯ. ಉಳಿದ ಸಮಯದಲ್ಲಿ ಚಳಿಯ ಕಾರಣ ಭಾರತೀಯರಿಗೆ ಇರಿಸುಮುರಿಸು ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ ಅದಕ್ಕೆಂದು ವಿಶೇಷ ಬಟ್ಟೆ ಕೂಡ ಬೇಕಾಗುತ್ತದೆ. ಹೀಗಾಗಿ ಜುಲೈನಿಂದ ಅಕ್ಟೋಬರ್ ಹೋಗುವುದು ಲೇಸು. ವೇಳೆ ವ್ಯತ್ಯಾಸವಿದೆ. ಚಳಿಗಾಲದಲ್ಲಿ ಭಾರತಕ್ಕಿಂದ ನಾಲ್ಕೂವರೆ  ಗಂಟೆ ಹಿಂದಿದೆ. ಬೇಸಿಗೆಯಲ್ಲಿ ಐದೂವರೆ ಗಂಟೆ. ಷೆಗನ್ ವೀಸಾ ಪಡೆದರೆ ಪೋರ್ಚುಗಲ್ ಕೂಡ ಹೋಗಬಹದು ವಿಶೇಷ ವೀಸಾ ಅವಶ್ಯಕತೆಯಿಲ್ಲ.

ಪುಳಿಚಾರಿಗರ ಗತಿಯೇನು

ಹೇಳಿಕೇಳಿ ಇದು ಯೂರೋಪಿನ ನಗರ. ಬಹುತೇಕ ಯೂರೋಪ್ ನಗರಗಳು ಸಸ್ಯಾಹಾರಿಗಳಿಗೆ ಸಾಕಷ್ಟು ಹಿಂಸೆ ನೀಡುತ್ತವೆ. ಇತ್ತೀಚಿಗೆ ಭಾರತದ ಹೆಸರು ಹೇಳಿಕೊಂಡು ಬಾಂಗ್ಲಾದೇಶೀಯರು ಮತ್ತು ಪಾಕಿಸ್ತಾನಿಗಳು ರೆಸ್ಟುರಾಂಟ್ ತೆಗೆದಿದ್ದಾರೆ. ಅವೆಲ್ಲಾ ವಿಧಿಯಿಲ್ಲದೇ ಒಮ್ಮೆ ತಿನ್ನಬಹದುದಾದ ರೆಸ್ಟುರಾಂಟ್ಗಳು. ಬನ್ನು-ಬ್ರೆಡ್ಡು-ಚೀಸು ಜೊತೆಗೆ ಉತ್ತಮ ಗುಣಮಟ್ಟದ ಮಾವಿನಹಣ್ಣು ಹೊಟ್ಟೆ ತುಂಬಿಸುತ್ತದೆ. ಅಪಾರ್ಟ್-ಹೋಟೆಲ್’ನಲ್ಲಿದ್ದರೆ ಬೇಕಾದ್ದು ತಯಾರಿಸಿ ತಿನ್ನಬಹುದು.

ಒಂದಷ್ಟು ಚಕಿತಗೊಳಿಸುವ ಸಂಗತಿಗಳು

ಪೋರ್ಚುಗೀಸರು ಭಾರತೀಯರಂತೆ ಹಣೆಬರಹ (Destiny)ದ ಮೇಲೆ ಬಹಳ ನಂಬಿಕೆಯುಳ್ಳವರು. ನಮ್ಮಲ್ಲಿ ಅನೇಕ ರಾಗಗಳಿರುವಂತೆ ಪೋರ್ಚುಗೀಸರ ಒಂದು ಹಾಡಿನ ಪ್ರಕಾರಕ್ಕೆ ಫಾದೋ (fado) ಎನ್ನುವ ಹೆಸರಿದೆ. ಇದರರ್ಥ ಯಾರೊಬ್ಬರೂ ತಮ್ಮ ಹಣೆಬರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ (One’s fate or destiny cannot be escaped) ಎನ್ನುವುದೇ ಆಗಿದ.

ಪೋರ್ಚುಗಲ್ ಅತಿ ಹೆಚ್ಚು ವರ್ಷ ಮತ್ತು ಅತಿ ಕಡಿಮೆ ಸಮಯ ರಾಜರನ್ನು ಹೊಂದಿದ ದೇಶವಾಗಿದೆ. ಪೋರ್ಚುಗಲ್ ಪ್ರಥಮ ರಾಜ ಅಲ್ಫೋನ್ಸೋ 73 ವರ್ಷ 220 ದಿನಗಳ ಕಾಲ ಈ ದೇಶದ ರಾಜನಾಗಿದ್ದ. 1908 ರಲ್ಲಿ ಈ ದೇಶದ ಉತ್ತರಾಧಿಕಾರಿ ಕಾರ್ಲೋಸ್ ಇಪ್ಪತ್ತು ನಿಮಿಷಗಳ ಕಾಲ ರಾಜ ಪದವಿ ಹೊಂದಿದ್ದ. ಯೂರೋಪಿನ ಅತ್ಯಂತ ಹಳೆಯ ದೇಶ ಎನ್ನುವ ಖ್ಯಾತಿ ಪೋರ್ಚುಗಲ್ಲಿಗೆ ಸೇರುತ್ತದೆ.

ಯೂರೋಪಿನಲ್ಲಿ ಅತಿ ಹೆಚ್ಚು ಸಮಯ ಸರ್ವಾಧಿಕಾರಿ ಆಡಳಿತ ಹೊಂದಿದ್ದ ದೇಶ ಎನ್ನುವ ಕುಖ್ಯಾತಿಗೂ ಈ ದೇಶ ಪ್ರಸಿದ್ಧ. 1926 ರಿಂದ 1974 ರವರೆಗೆ ಸರ್ವಾಧಿಕಾರಿ ಆಳ್ವಿಕೆಗೆ ಪೋರ್ಚುಗಲ್ ಒಳಪಟ್ಟಿತ್ತು.

ಜಗತ್ತಿನ ಪ್ರಸಿದ್ಧ ಅನ್ವೇಷಕರ ಹೆಸರು ಹೇಳಿ ಎಂದರೆ ಮೊದಲು ನೆನಪಿಗೆ ಬರುವ ಹಲವು ಹೆಸರನ್ನು ಕೊಟ್ಟ ದೇಶವಿದು. ಪೋರ್ಚುಗೀಸರು ಮೂಲತಃ ಸಾಹಸಿಗಳು ಅನ್ವೇಷಕರು. ಇವರ ಅನ್ವೇಷಣೆಯ ಗುರುತಾಗಿ 53 ದೇಶಗಳಲ್ಲಿ 600 ವರ್ಷಕ್ಕೂ ಮೀರಿ ಇವರು ಆಳ್ವಿಕೆ ನಡೆಸಿದ್ದಾರೆ. ತಮ್ಮ ಅಧೀನದಲ್ಲಿದ್ದ ದೇಶಗಳಿಗೆ ಪೋರ್ಚುಗೀಸ್ ಸ್ವಂತಂತ್ರ ನೀಡುತ್ತಾ ಬಂದಿತು. ಇತ್ತೀಚಿಗೆ ಅಂದರೆ 1999 ರಲ್ಲಿ ಮಕಾವು ಅನ್ನು ಚೀನಾ ದೇಶಕ್ಕೆ ಬಿಟ್ಟು ಕೊಟ್ಟಿತು. ಜಗತ್ತಿನ ಅತಿ ಹಳೆಯ ಒಪ್ಪಂದ ಪೋರ್ಚುಗಲ್ ಮತ್ತು ಇಂಗ್ಲೆಂಡ್ ನಡುವೆ ಇದ್ದು ಇಂದಿಗೂ ಅದು ಚಾಲನೆಯಲ್ಲಿರುವುದು ವಿಶೇಷ. ಈ ಒಪ್ಪಂದ 1373 ನೇ ಇಸವಿಯಲ್ಲಿ ಮಾಡಿಕೊಂಡ ರಾಜಕೀಯ ಒಪ್ಪಂದವಾಗಿದೆ!

ಪೋರ್ಚುಗಲ್ ಹೊರತುಪಡಿಸಿ ಜಗತ್ತಿನ ಇತರ ೮ ದೇಶಗಲ್ಲಿ ಪೋರ್ಚುಗೀಸ್ ಆಡುಭಾಷೆಯಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಬಳಸಲ್ಪಟ್ಟ ಭಾಷೆಯಲ್ಲಿ ಪೋರ್ಚುಗೀಸ್ ಗೆ ಆರನೇ ಸ್ಥಾನ. ಲಿಸ್ಬನ್ ನಗರ ರೋಮ್ ನಗರಕ್ಕಿಂತ ಹಳೆಯದು. ಪೋರ್ಚುಗೀಸ್ ನಲ್ಲಿ 80 ಕ್ಕೂ ಅಧಿಕ ಜನ ರೋಮನ್ ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರು. ಜಗತ್ ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗೀಸ್ ಪ್ರಜೆ.

ಇಲ್ಲಿನ ಹೆಂಗಸರು ಗಂಡಸರಿಗಿಂತ ಐದರಿಂದ ಆರು ವರ್ಷ ಹೆಚ್ಚು ಬದುಕುತ್ತಾರೆ. ಸರಾಸರಿ 84 ವರ್ಷ ಮಹಿಳೆಯರ ಜೀವಿತಾವಧಿ. ಇತರ ಯೂರೋಪಿಯನ್ ದೇಶಗಳಿಗೆ ಹೋಲಿಸಿದರೆ ಈ ರೀತಿ ಜೀವಿತಾವಧಿ ವ್ಯತ್ಯಾಸ ಇಲ್ಲಿ ಹೆಚ್ಚು.

ತಾಗುಸ್ ನದಿಯ ಮೇಲೆ ಕಟ್ಟಿರುವ ವಾಸ್ಕೋ ದ ಗಾಮ ಬ್ರಿಡ್ಜ್  ಯೂರೋಪಿನಲ್ಲೇ ಅತಿ ಉದ್ದವಾದದ್ದು. ಇದರ ಉದ್ದ ಸರಿಸುಮಾರು ಹತ್ತು ಮೈಲಿ. ಇಂತಹ ಬ್ರಿಡ್ಜ್ ಮೇಲೆ ಓಡಾಡಲು ಒಂದಷ್ಟು ಶುಲ್ಕವನ್ನ ವಿಧಿಸುತ್ತಾರೆ. ಕ್ರೈಸಿಸ್‘ನಿಂದ ಕೆಂಗೆಟ್ಟಿರುವ ಜನ ಇಲ್ಲಿನ ವಾಹನವನ್ನ ಚಲಾಯಿಸುತ್ತಿಲ್ಲ. ಹೀಗಾಗಿ ಈ ಬ್ರಿಜ್ ಖಾಲಿ ಖಾಲಿ.

ಪೋರ್ಚುಗಲ್ ದೇಶ ರಿನ್ಯೂವೆಬಲ್ (ನವೀಕರಿಸಲ್ಪಡುವ) ಇಂಧನ ಉತ್ಪತ್ತಿಯಲ್ಲಿ ಜಗತ್ತಿನ ಅಗ್ರಗಣ್ಯ ಸ್ಥಾನದಲ್ಲಿದೆ. ತಮಗೆ ಬೇಕಾದ ಇಂಧನದ 70 ಕ್ಕೂ ಹೆಚ್ಚು ಇವರು ರಿನ್ಯೂವೆಬಲ್ ಎನರ್ಜಿ ಮೂಲಕ ಪಡೆಯುತ್ತಾರೆ. ಆ ಮೂಲಕ ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಇಟ್ಟಿದೆ.

ಇತರೆ ಯೂರೋಪಿಯನ್ ದೇಶಗಳಿಗೆ ಹೋಲಿಸಿದರೆ ಪೋರ್ಚುಗಲ್ ತುಂಬಾ ಅಗ್ಗ. ಹೀಗಾಗಿ ಜೇಬಿಗೆ ಹೆಚ್ಚು ಭಾರವಿಲ್ಲದೆ ಸುತ್ತಬಹುದಾದ ದೇಶಗಳ ಪಟ್ಟಿಗೆ ಪೋರ್ಚುಗಲ್ ದೇಶವನ್ನು ಸಲೀಸಾಗಿ ಸೇರಿಸಬಹುದು. ವಾರ ಪೂರ್ತಿ ಅವರ ಆತಿಥ್ಯ ಸವೆದು ಅವರಿಗೆ ‘ಒಬ್ರೇಗಾದೊ’ (ಧನ್ಯವಾದ) ಜೊತೆಗೆ ‘ತ ಚೌ’ ( ಬೈ) ಹೇಳಿ ಹೊರೆಟೆವು.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!