ಅಂಕಣ

ಬಿಟ್’ಕಾಯಿನ್ ಎಂಬ ವರ್ಚುವಲ್ ಕರೆನ್ಸಿ

ಸಮಯವು ಕಳೆದಂತೆ ನಮ್ಮ ಜಗತ್ತು ವಾಸ್ತವಿಕತೆಯಿಂದ ದೂರವಾಗುತ್ತ ವರ್ಚುವಲ್ ಲೋಕದತ್ತ ಮುಖಮಾಡುತ್ತಿದೆ. ಮೊಬೈಲ್ ಮತ್ತು ಇಂಟರ್ನೆಟ್’ನ ಕ್ರಾಂತಿ ನಮ್ಮ ವ್ಯಾಪ್ತಿಯನ್ನು ಹಿಡಿಮುಷ್ಟಿಗೆ ಸೀಮಿತವಾಗಿಸಿದೆ. ಶಾಪಿಂಗ್, ಶಿಕ್ಷಣ, ಬ್ಯಾಂಕಿಂಗ್ ಮತ್ತು ಸಾಮಾಜಿಕ ಸಂಬಂಧಗಳೆಲ್ಲವೂ ವರ್ಚುವಲ್ ಆಗುತ್ತಿವೆ. ಇವುಗಳ ಮುಂದುವರೆದ ಭಾಗವೇ ವರ್ಚುವಲ್ ಕರೆನ್ಸಿ. ಕಳೆದ ಕೆಲವರ್ಷಗಳಲ್ಲಿ ರಾತೋರಾತ್ರಿ ಬಿಟ್’ಕಾಯಿನ್ ಎಂಬ ವರ್ಚುವಲ್ ಕರೆನ್ಸಿ ಜನರ ಗಮನವನ್ನು ತನ್ನತ್ತ ಸೆಳೆಯಿತು. ಬಿಟ್’ಕಾಯಿನ್ ಎಲ್ಲಿಂದ ಬಂತು, ಇದರ ಸೃಷ್ಟಿಕರ್ತ ಯಾರು ಮತ್ತು ಇದರ ಚಲಾವಣೆಯ ರೀತಿ ನೀತಿಗಳೇನು? ಎಂಬುದರ ಅರಿವು ಸಾಮಾನ್ಯ ಜನತೆಗಿರಲಿಲ್ಲ. ಆದರೂ ಇದನ್ನು ಹೊಂದಬೇಕೆಂಬ ವಿಚಿತ್ರ ಹಂಬಲಕ್ಕೆ ಜನ ಬಿದ್ದರು. ಒಂದು ಕಾಲದಲ್ಲಿ ಬಿಟ್’ಕಾಯಿನೊಂದರ ಬೆಲೆ 20ಲಕ್ಷ ರೂಪಾಯಿಗೆರಿತ್ತು!   ವಿಶ್ವದ ಬಹುತೇಕ ದೇಶಗಳು ಇದನ್ನು ಅಪ್ಪಿಕೊಂಡವು, ಆದರೆ ಭಾರತ ಕಾಲ ಮಿಕ್ಕುವ ಮುನ್ನ ಇದರಲ್ಲಿಯ ಗಂಡಾಂತರಗಳನ್ನು ಅರಿತು ಜವಾಬ್ದಾರಿಯುತವಾಗಿ ವರ್ತಿಸಿತು.

ಏನಿದು ಬಿಟ್ ಕಾಯಿನ್?

ಇಂಟರ್ನೆಟ್ ಜಗತ್ತಿನಲ್ಲಿ ಅನೇಕ ವಸ್ತುಗಳ ಭೌತಿಕ ಅಸ್ತಿತ್ವವಿರುವದಿಲ್ಲ. ಹಣದ ಡಿಜಿಟಲ್ ವ್ಯವಹಾರ ಸಾಮಾನ್ಯವಾಗಿದ್ದರೂ ಡಿಜಿಟಲ್ ಕರೆನ್ಸಿಯ ಅಸ್ತಿತ್ವ ಹೊಸದು. ಭೌತಿಕ ರೂಪದಲ್ಲಿ ಅಸ್ತಿತ್ವವಿಲ್ಲದಿದ್ದರೂ ಈ ಕರೆನ್ಸಿಗೆ ಮೌಲ್ಯವಿರುತ್ತದೆ. ಬಿಟ್’ಕಾಯಿನ್ ಕೂಡ ಡಿಜಿಟಲ್ ಆಗಿ ಮೈನ್ ಮಾಡಿದ ಕ್ರಿಪ್ಟೊ ಕರೆನ್ಸಿ. ಯಾವುದೇ ದೇಶ, ಭೂ ಪ್ರದೇಶ ಆಥವಾ ಸಂಸ್ಥೆ ಅದನ್ನು ನಿಯಂತ್ರಿಸುವದಿಲ್ಲ. ಇದು ಸೀಮಾತೀತವಾದ ಸ್ವಯಂ ನಿಯಂತ್ರಿತ ಕರೆನ್ಸಿಯಾಗಿದೆ. ಬಿಟ್’ಕಾಯಿನ್’ನ ಬಳಕೆ ಮಾಡಲು ಯಾವುದೇ ಬ್ಯಾಂಕ್’ನ ಅವಶ್ಯಕತೆಯಿಲ್ಲ, ಇದನ್ನು ಇಬ್ಬರು ವ್ಯಕ್ತಿಗಳು ತಮ್ಮ ಮಧ್ಯದಲ್ಲಿ ಬೇಕೆಂದಾಗ ಬಳಸಬಹುದು, ಇಂಟರ್ನೆಟ್’ನಲ್ಲಿ ಬೇಡಿಕೆ ಮತ್ತು ಪೂರೈಕೆಯ ಆಧಾರಿತ ಈ ವ್ಯವಹಾರಕ್ಕೆ ಮೈನಿಂಗ್ ಎನ್ನುವರು. ಇದನ್ನು ಬೇಕೆಂದಾಗ ಮಾರಿ ನೈಜ ಕರೆನ್ಸಿಯನ್ನು ಕೊಳ್ಳಬಹುದು ಮತ್ತು ಅನೇಕ ಜಾಲತಾಣಗಳಲ್ಲಿ ವಿವಿಧ ವಸ್ತುಗಳನ್ನು ಖರೀದಿಸಬಹುದು. ಕ್ಯಾಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನವೊಂದರಂತೆ ವಿಶ್ವದಲ್ಲಿ 3 ರಿಂದ 6 ಕೋಟಿ ಜನರು ಕ್ರಿಪ್ಟೊ ಕರೆನ್ಸಿ ವಾಲೆಟ್’ನ್ನು ಹೊಂದಿದ್ದಾರೆ ಅದರಲ್ಲೂ ಬಿಟ್’ಕಾಯಿನ್ ವಾಲೆಟ್ ಹೊಂದಿದವರು ಹೆಚ್ಚು. ಬಿಟ್ ಕಾಯಿನ್’ನ ಮೌಲ್ಯ ಸ್ಥಿರವಾಗಿರುವದಿಲ್ಲ ಮತ್ತು ಯಾವುದೇ ನಿಗಾವಣೆ ಹೊಂದಿರುವದಿಲ್ಲ. ಇದನ್ನು ಅಕ್ರಮ ಚಟುವಟಿಕೆಗಳಿಗೂ ಉಪಯೋಗಿಸಬಹುದು! ಬಹುತೇಕ ಸಾಮಾನ್ಯ ಜನರು ಬಿಟ್’ಕಾಯಿನ್’ನ್ನು ಖರೀದಿಸಿ ಮುಂದಿನ ದಿನಗಳಲ್ಲಿ ಅದರ ಬೆಲೆ ಹೆಚ್ಚಾದಾಗ ಮಾರಬಹುದೆಂಬ ಆಶಯದಲ್ಲಿರುತ್ತಾರೆ. ವಿಚಿತ್ರವೆಂದರೆ ಬಿಟ್’ಕಾಯಿನ್’ನ ವ್ಯವಹಾರದಲ್ಲಿ ಯಾರ ಹೆಸರೂ ಸಾರ್ವಜನಿಕವಾಗುವುದಿಲ್ಲ ಮತ್ತು ಯಾರು, ಯಾರಿಗೆ, ಏಕೆ ಹಣ ನಿಡಿದರೆಂಬುದನ್ನು ಪತ್ತೆ ಮಾಡುವುದು ಕಷ್ಟ. ವಿಶ್ವಕ್ಕೆ ಕೇವಲ ಇವರ ವಾಲೆಟ್ ಐಡಿ ಮಾತ್ರ ಪರಿಚಿತ, ಹಾಗಾಗಿ ಈ ಗೌಪ್ಯತೆ ವಿಶ್ವಾದ್ಯಂತ ಸರ್ಕಾರಗಳ ನಿದ್ದೆಗೆಡಿಸಿದೆ! ಬಿಟ್’ಕಾಯಿನ್’ನಿಂದ ಡ್ರಗ್ಸ್, ಮನಿ ಲಾಂಡ್ರಿ೦ಗ್, ಉಗ್ರವಾದಿ ಚಟುವಟಿಗಳಿಗೆ ಸರಳವಾಗಿ ಹಣ ಸಾಗಿಸಬಹುದೆಂಬುದು ಸರ್ಕಾರಗಳ ಚಿ೦ತೆ. ಕೆಲ ವರ್ಷಗಳ ಹಿಂದೆ ವಿಶ್ವಾದ್ಯಂತ ರ್ಯಾನ್’ಸಮ್’ವೇರ್’ನ ದಾಳಿಗೆ ಅನೇಕ ಕಂಪ್ಯೂಟರ್’ಗಳು ತುತ್ತಾದಾಗ, ಹ್ಯಾಕರಗಳು ಹಣ ಕೇಳಿದ್ದು ಬಿಟ್’‌ಕಾಯಿನ್’ನಲ್ಲಿ. ಬಿಟ್ ಕಾಯಿನ್’ನ ಭವಿಷ್ಯದ ಕುರಿತ  ಅನಿಶ್ಚಿತತೆ ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ.

ಭಾರತದಲ್ಲಿ ಬಿಟ್ ಕಾಯಿನ್

ಒಂದು ಅಂದಾಜಿನತೆ ಭಾರತದಲ್ಲಿ ಸುಮಾರು 50 ಲಕ್ಷ ಜನರು ಬಿಟ್ ಕಾಯಿನ್ ಮತ್ತು ಇತರೆ ವರ್ಚುವಲ್ ಕರೆನ್ಸಿಯ   ಟ್ರೇಡಿಂಗ್’ನಲ್ಲಿ ತೊಡಗಿದ್ದಾರೆ. ಆದರೆ ಇತ್ತೀಚೇಗೆ ಜುಲೈನಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿದಿಂದ ಭಾರತದಲ್ಲಿ ಈ ರೀತಿಯ ವರ್ಚುವಲ್ ಕರೆನ್ಸಿಯ ಟ್ರೇಡಿಂಗ್ ಹೆಚ್ಚು ಕಡಿಮೆ ಅಸಾಧ್ಯವಾಗಿದೆ. ಆರ್.ಬಿ.ಐ. ಏಪ್ರಿಲ್-2018ರಲ್ಲಿ ಎಲ್ಲಾ  ಬ್ಯಾಂಕ್ ಮತ್ತು ಆರ್ಥಿಕ ಸಂಸ್ಥೆಗಳಿಗೆ 3 ತಿಂಗಳಲ್ಲಿ ಈ ವರ್ಚುವಲ್ ಕರೆನ್ಸಿಯ ವಹಿವಾಟನ್ನು ಸ್ಥಗಿತಗೊಳಿಸುವಂತೆ ತಾಕೀತು ಮಾಡಿತ್ತು. ಈ ಗಡುವು ಜುಲೈ 5’ರಂದು ಪೂರ್ಣಗೊಂಡಿತ್ತು. ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ, ಆರ್.ಬಿ.ಐ.ನ ಆದೇಶದ ವಿರುದ್ಧ ಸುಪ್ರೀಮ್ ಮೆಟ್ಟಿಲೇರಿತ್ತು. ಸುಪ್ರೀಮ್ ಕೋರ್ಟ್ ಕೂಡ ಕ್ರಿಪ್ಟೊ ಕರೆನ್ಸಿಯ ಅಪಾಯಗಳನ್ನು ಮನಗ೦ಡು  ಆರ್.ಬಿ.ಐ.ನ ಈ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ಬಿಟ್’ಕಾಯಿನ್ ವಹಿವಾಟುದಾರರಿಗೆ ಚಾಟಿ ಬೀಸಿತ್ತು.

ಅರ್ಥಾತ್ ಜುಲೈ6 2018ರಿಂದ ಕ್ರಿಪ್ಟೊ ಕರೆನ್ಸಿಯ ವಹಿವಾಟು ಭಾರತದಲ್ಲಿ ಸ್ಥಗಿತಗೊಂಡಿತು. ಈ ವಿಷಯದ ಕುರಿತು ಹಣಕಾಸು, ಕಾನೂನು ಹಾಗೂ ಸೂಚನಾ ಮತ್ತು ಪ್ರಸಾರ  ಮಂತ್ರಾಲಯಗಳಿಗೆ ಪ್ರಮಾಣಪತ್ರ  ಸಲ್ಲಿಸುವಂತೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.  ಆರ್.ಬಿ.ಐ ಕಾಲ ಕಾಲಕ್ಕೆ ಕ್ರಿಪ್ಟೊ ಕರೆನ್ಸಿಯ ಅಪಾಯ  ಮತ್ತು ಬಳಕೆದಾರರ ಸ೦ರಕ್ಷಣೆಯಲ್ಲಿಯ ಲೋಪ ದೋಷಗಳು, ಮನಿ ಲಾ೦ಡ್ರಿ0ಗ್ ಮತ್ತು  ಮಾರುಕಟ್ಟೆಯಲ್ಲಿ ಹೇರಾಪೇರಿಯ ಶಂಕೆ ವ್ಯಕ್ತಪಡಿಸಿ,  ಅಧಿಸೂಚನೆ ಹೊರಡಿಸಿ ಜನರಿಗೆ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಎಚ್ಚರಿಕೆ ನೀಡುತ್ತಲೇ ಇತ್ತು.  2018ರ ಬಜೆಟ್ ಭಾಷಣದಲ್ಲಿ ಭಾರತದ ಹಣಕಾಸು ಸಚಿವರೂ ಕ್ರಿಪ್ಟೊ ಕರೆನ್ಸಿಗೆ ಭಾರತದಲ್ಲಿ ಕಾನೂನುಬದ್ಧ ಮನ್ನಣೆ ಇಲ್ಲ   ಮತ್ತು ಇವುಗಳ ಮೂಲಕ ಅಕ್ರಮ ವ್ಯವಹಾರಗಳಲ್ಲಿ ಹಣ ಹೂಡುವದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದಿದ್ದರು.

ಕ್ರಿಪ್ಟೊ ಕರೆನ್ಸಿ ಬಿಟ್’ಕಾಯಿನ್ ರೂಪದಲ್ಲಿ ಭಾರತಕ್ಕೆ ಕಾಲಿಟ್ಟಾಗ, ಕೆಲವರು ಇದು ಭವಿಷ್ಯದ ಸುವರ್ಣಯುಗಕ್ಕೆ ನಾ೦ದಿಯಾಗಲಿದೆಂದರೆ, ಇನ್ನೂ ಕೆಲವರು ಇದು ಕೇವಲ ಮಾರುಕಟ್ಟೆಯ ನೀರ್ಗುಳ್ಳೆ ಎಂದಿದ್ದರು. ಆರ್.ಬಿ.ಐ. ಮತ್ತು ಸುಪ್ರೀಮ್ ಕೋರ್ಟ್ ನಿರ್ಧಾರದಿಂದ ಬಿಟ್’ಕಾಯಿನ್ ಬೆಲೆ ಭಾರಿ ಕುಸಿತ ಕಂಡಿತು. ಆರ್ಥಿಕ ವ್ಯವಹಾರಗಳ ತಜ್ಞರು ಇದನ್ನು ಕ್ರಿಪ್ಟೊ ಕರೆನ್ಸಿಯ ವಿಮುದ್ರಿಕರಣ/ಅನಾಣ್ಯೀಕರಣ ಎನ್ನುತ್ತಾರೆ. ಸರ್ಕಾರ ಮತ್ತು ಆರ್.ಬಿ.ಐ.ನ ಎಚ್ಚರಿಕೆಗೆ ಕಿವಿಗೊಡದೇ ಹಣ ಹೂಡಿದವರಿಗೆ ನಷ್ಟವಾಗಿದೆ. ನಾವು ಒಂದು ಶರ್ಟ್/ ಪ್ಯಾಂಟ್  ಕೊಳ್ಳಲು ಹೋದರೂ ನಾಲ್ಕು ಅಂಗಡಿ ತಿರುಗಾಡಿ ಚೌಕಾಶಿ ಮಾಡಿ ನಂತರ ಖರೀದಿಸುತ್ತೇವೆ. ಆದರೆ ಕ್ರಿಪ್ಟೊ ಕರೆನ್ಸಿಯ ವ್ಯವಹಾರ ಒಂಚೂರು ಪಾರದರ್ಶಕವಾಗಿಲ್ಲ, ಇದರ ಮೌಲ್ಯದಲ್ಲಿ ಆಧಾರ ರಹಿತವಾದ ಏರಿಳಿತ, ಅರ್ಥಹೀನ ಟ್ರೇಡಿಂಗ್’ನಿಂದ ಜನರು ವಂಚನೆಗೊಳಗಾಗದಿರಲಿ ಎಂದು ತಜ್ಞರು ಎಚ್ಚರಿಸುತ್ತಾರೆ. ಬಿಟ್ ಕಾಯಿನ್’ನ ವ್ಯವಹಾರದಲ್ಲಿ ಉಪಯೋಗಿಸುವ ಬ್ಲಾಕ್’ಚೈನ್ ತಂತ್ರಜ್ಞಾನದ ಉಪಯುಕ್ತತೆ ಕುರಿತು ಅಧ್ಯಯನ ನಡೆಸಲು ಸರ್ಕಾರ ಒಂದು ಸಮಿತಿ ರಚಿಸಿದೆ. ಬ್ಲಾಕ್’ಚೈನ್ ವ್ಯವಸ್ಥೆಯಿಂದ ಭೃಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎನ್ನಲಾಗುತ್ತದೆ. ಸರ್ಕಾರ ಕೂಡ ಇದನ್ನು ಅನೇಕ ಆನ್’ಲೈನ್  ಸೇವೆಗಳಿಗೆ ಬಳಸುವ ಸಾಧ್ಯಸಾಧ್ಯತೆಗಳ ಕುರಿತು ಅಧ್ಯಯನ ನಡೆಸುತ್ತಿದೆ.

ಇಂಟರ್ನೆಟ್’ನ ವರ್ಚುವಲ್ ಜಗತ್ತಿನಲ್ಲಿ ಬಿಟ್’ಕಾಯಿನ್ ಮತ್ತು ಇತರೆ ಕ್ರಿಪ್ಟೊಕರೆನ್ಸಿ ಸೃಷ್ಟಿಸಲ್ಪಡುವ  ವಿಧಾನಕ್ಕೆ ಮೈನಿಂಗ್ ಎನ್ನುತ್ತಾರೆ. ಭೂಮಿಯ ಅಂತರಾಳದಲ್ಲಿರುವ ಖನಿಜಗಳನ್ನು ಹೇಗೆ ಗಣಿಗಾರಿಕೆಯಿಂದ ಹೊರ ತೆಗೆಯಲಾಗುತ್ತದೋ, ಅದೇ ರೀತಿ ಇಂಟರ್ನೆಟ್’ನಲ್ಲಿ ಮೈನಿಂಗ್’ನಿಂದ ಬಿಟ್’ಕಾಯಿನ್ ಉತ್ಪಾದಿಸಲಾಗುತ್ತದೆ! ಇಲ್ಲಿ ಬ್ಲಾಕ್ ಚೈನ್ ಅಂದರೆ ಡಿಜಿಟಲ್, ವಿಕೇಂದ್ರೀಕೃತ ಸಾರ್ವಜನಿಕ ಖಾತೆಗಳನ್ನು ಹೆಣೆಯುವ ತಂತ್ರಜ್ಞಾನವನ್ನು ಉಪಯೋಗಿಸಲಾಗುತ್ತದೆ. ಮೈನಿಂಗ್’ನಲ್ಲಿ  ಸೋಲೋ ಮತ್ತು ಪೂಲ್ (ಗ್ರೂಪ್) ಮೈನಿಂಗ್ ಎಂಬ ಎರಡು ವಿಧಗಳಿವೆ. ಸೋಲೋ ಮೈನಿಂಗ್’ನಲ್ಲಿ ಒಬ್ಬ ವ್ಯಕ್ತಿಯೇ ಮೈನಿಂಗ್ ಮಾಡುತ್ತಾನೆ, ಆದರೆ ಇದಕ್ಕೆ ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್’ನ ಅವಶ್ಯಕತೆ ಇದ್ದು ದುಬಾರಿ ವೆಚ್ಚ ತಗಲುತ್ತದೆ. ಅದೇ ಪೂಲ್/ಸಮೂಹ ಮೈನಿಂಗ್’ನಲ್ಲಿ ಅನೇಕ ಜನ ಸೇರಿ ಕಂಪ್ಯೂಟರ್’ಗಳ ಸಮೂಹ ರಚಿಸಿ ಮೈನಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲ ಇದಕ್ಕೆ ಅವಶ್ಯಕವಾದ ಶಕ್ತಿಗಾಗಿ ಕ್ರಿಪ್ಟೊ ಹ್ಯಾಕಿಂಗ್’ನಿಂದ ಅಂತರ್ಜಾಲದಲ್ಲಿರುವ ಸಾಮಾನ್ಯ ಜನರ ಕಂಪ್ಯೂಟರಗಳನ್ನು ಬಳಸಲಾಗುತ್ತದೆ!! ಮೈನಿಂಗ್’ಗಾಗಿ ಒಂದು ವರ್ಚುವಲ್ ವಾಲೆಟ್ ಮತ್ತು ವಿಳಾಸ ನೀಡಲಾಗುತ್ತದೆ. ಮೈನಿಂಗ್’ಗಾಗಿ ಅನೇಕ ಕಂಪನಿಗಳು ಸಾಫ್ಟವೇರ್ ಒದಗಿಸುತ್ತವೆ. ಕ್ರಿಪ್ಟೊ ಕರೆನ್ಸಿಯ ವ್ಯವಹಾರದಲ್ಲಿ ಸಹಕಾರಿಯಾಗುವ /ಮೈನಿಂಗ್  ಮಾಡುವ, ವ್ಯಕ್ತಿಗೆ ಮೈನರ್ ಎಂದು ಕರೆಯುತ್ತಾರೆ. ಮೈನರ್’ಗಳಿಗೆ ಜಟಿಲ ಗಣಿತ ಸಮಸ್ಯೆಗಳನ್ನೊಳಗೊಂಡ ಬ್ಲಾಕ್’ಗಳನ್ನು ಬಗೆಹರಿಸಲು ಪ್ರತಿ ಸೆಕೆಂಡಿಗೆ ಲಕ್ಷಗಟ್ಟಲೇ ಲೆಕ್ಕ ಮಾಡಬೇಕಾಗುತ್ತದೆ. ಈ ರೀತಿ ಪಝಲ್’ಗಳನ್ನು ಬಿಡಿಸುವ ಮೈನರ್’ಗಳಿಗೆ ಬಹುಮಾನ ನೀಡಲಾಗುತ್ತದೆ!

ಕ್ರಿಪ್ಟೊ ಕರೆನ್ಸಿಯ ಇತಿಹಾಸ:

ಬ್ಯಾಂಕ್’ಗಳು ಇಲ್ಲದಿರುವ ಪುರಾತನ ಕಾಲದಲ್ಲಿ  ವ್ಯಾಪಾರ ವಹಿವಾಟು ನಡೆದಾಗ ಕರೆನ್ಸಿಯ ಬದಲಿಗೆ ಟೋಕನ್’ಗಳ  ಉಪಯೋಗ ಜಾರಿಯಲ್ಲಿತ್ತು. ಟೋಕನ್ ಕಾಗದದ ತುಣುಕಿನ ಆಜ್ಞಾಪತ್ರವಾಗಿದ್ದು, ಅದನ್ನು ತೋರಿಸಿ/ನೀಡಿ/ಪಡೆದುಕೊಂಡು   ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿತ್ತು ಅಥವಾ ಮಾರಬಹುದಾಗಿತ್ತು. ವರ್ಗಾಯಿಸಬಹುದಾದ ಈ ಟೋಕನ್’ನ್ನು ಭವಿಷ್ಯದ ಅವಶ್ಯಕತೆಗನುಸಾರವಾಗಿ ಕಾಯ್ದಿರಿಸಿ ಕಾಪಾಡಿಕೊಳ್ಳಬಹುದಿತ್ತು. ಬ್ಯಾಂಕ್’ಗಳ ಆಗಮನದ ನಂತರವೂ ಸಮಾಜದಲ್ಲಿ ಈ ರೀತಿಯ ಮುದ್ರಾರಾಹಿತ ಅನೌಪಚಾರಿಕ ಕರೆನ್ಸಿ/ಟೋಕನ್’ನ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಆದರೆ 1980ರ ದಶಕದಲ್ಲಿ ಪ್ರಥಮ ಬಾರಿಗೆ ಈ ಕಾಗದದ ತುಣುಕಿನ ಬದಲು ಡಿಜಿಟಲ್’ ಕರೆನ್ಸಿಯ ಕುರಿತು ಯೋಚಿಸಲಾಯಿತು. ಎನ್’ಕ್ರಿಪ್ಶನ್ ಅಲ್ಗೊರಿದಮ್ ಆರ್.ಎಸ್.ಎ’ದ ವಿಸ್ತಾರದ ಫಲವಾಗಿ  ಅಮೇರಿಕಾದ ಕ್ರಿಪ್ಟೊಗ್ರಾಫರ್ ಡೇವಿಡ್ ಚಾಮ್ ನೆದರ್ಲ್ಯಾಂಡ್’ನಲ್ಲಿ ಪ್ರಥಮ ಇಂಟರ್ನೆಟ್ ಕರೆನ್ಸಿ ‘ಡಿಜಿಕ್ಯಾಶ್’ನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಕುತೂಹಲ ಕೆರಳಿಸಿದ ‘ಇ ಕ್ಯಾಶ್-ಡಿಜಿ ಕ್ಯಾಶ್’ನ್ನು ವಿಶ್ವದ ಎಲ್ಲ ವಿಂಡೋಸ್ ಕಂಪ್ಯೂಟರ್’ಗಳಲ್ಲಿ ಅಳವಡಿಸಲು ಮೈಕ್ರೋಸಾಫ್ಟ್ ಚಾಮ್’ರ ಕಂಪನಿಗೆ 170 ಮಿಲಿಯನ್ ಡಾಲರಗಳ ಪ್ರಸ್ತಾಪವಿತ್ತಿತ್ತು! 1990ರ ದಶಕದ ಅಂತ್ಯದಲ್ಲಿ ಅಮೇರಿಕಾದ ‘ಪೆ ಪಾಲ್’  ಕಂಪನಿ ವ್ಯಾಪಾರಿಗಳಿಗೆ ಉದ್ಯೋಗಪತಿಗಳಿಗೆ0ದು ಡಿಜಿಟಲ್ ವಹಿವಾಟಿಗಾಗಿ “ಪೀಯರ್ ಟು ಪೀಯರ್ ಮನಿ ಟ್ರಾನ್ಸಫರ್” ವ್ಯವಸ್ಥೆಯನ್ನು ಶುರು  ಮಾಡಿತು. 2008ರಲ್ಲಿ ಅಮೇರಿಕಾದ ಆರ್ಥಿಕ ಸಂಕಟದಿಂದ, ಜನರಲ್ಲಿ ಬ್ಯಾಂಕ್’ನಲ್ಲಿಟ್ಟ ತಮ್ಮ ಹಣದ ಕುರಿತು ಅಸುರಕ್ಷತೆಯ ಭಾವ ಮೂಡಿತ್ತು. ಈ ಸಮಯದಲ್ಲಿ   ಕ್ರಿಪ್ಟೊಕರೆನ್ಸಿಯ ಕುರಿತು ಜನರ ಉತ್ಸುಕತೆ ವೃದ್ಧಿಸಿ ಆದರ ಕುರಿತು ವಿಚಾರಿಸತೊಡಗಿದರು. ಜನವರಿ 2009ರಲ್ಲಿ ಬಿಟ್ ಕಾಯಿನ್’ನ ಬಳಕೆ ಪ್ರಾರಂಭವಾಯಿತು. ಬಿಟ್ ಕಾಯಿನ್’ನ ಜನಕನೆಂದು ಕರೆಸಿಕೊಳ್ಳುವ ವ್ಯಕ್ತಿಯನ್ನು ಜಗತ್ತು ಸತೋಷಿ ನಾಕಾಮೋತು ಎಂಬ ಹೆಸರಿನಿಂದ ಗುರುತಿಸುತ್ತದೆ. ಆದರೆ ಈ ಹೆಸರಿನ ವ್ಯಕ್ತಿಯನ್ನು ಇದುವರೆಗೂ ಯಾರು ನೋಡಿಲ್ಲ!! ಕೆಲವರು ಹೇಳುವಂತೆ ಇದು ಯಾವ ವ್ಯಕ್ತಿಯ ಹೆಸರಾಗಿರದೇ ಬಿಟ್ ಕಾಯಿನ್ ಪ್ರಾಂಭಿಸಿದ ಸಮೂಹದ ಹೆಸರಾಗಿದೆ, ಇನ್ನೂ ಕೆಲವರು ಹೇಳುವಂತೆ ಇದು ಒಬ್ಬ ನೈಜ ವ್ಯಕ್ತಿಯ ಹೆಸರಾಗಿದ್ದು ಈತ ಜಪಾನಿನ ನಗರವೊಂದರಲ್ಲಿ ರಹಸ್ಯವಾಗಿ ಬದುಕುತ್ತಿದ್ದಾನೆ! ಇಂಟರ್ನೆಟ್’ನಲ್ಲಿ ಈ ವ್ಯಕ್ತಿಯ ವಯಸ್ಸು 42ವರ್ಷ ಎಂದು ಹೇಳಲಾಗುತ್ತದೆ, ಅರ್ಥಾತ್ ಬಿಟ್’ಕಾಯಿನ್ ಎಷ್ಟು ರಹಸ್ಯಮಯವಾಗಿದೆಯೋ ಅಷ್ಟೇ ರಹಸ್ಯಮಯ ಇದನ್ನು ಆರಂಭಿಸಿದ ವ್ಯಕ್ತಿ ಕೂಡ!! ಅಕ್ಟೋಬರ್ 2008ರಲ್ಲಿ ನಾಕಾಮೋತು ಮೆಟ್ ಸ್ಟಾವ್ ಡಾಟ್ ಕಾಮ್’ನಲ್ಲಿ ಕ್ರಿಪ್ಟೊಗ್ರಫಿ ಕುರಿತು “ಬಿಟ್ ಕಾಯಿನ್ ಅ ಪೀಯರ್ ಟು ಪೀಯರ್ ಎಲೆಕ್ಟ್ರಾನಿಕ್ ಕ್ಯಾಶ್ ಸಿಸ್ಟಮ್’ ಶೀರ್ಷಿಕೆಯಡಿಯಲ್ಲಿ ಕರಪತ್ರ ಛಾಪಿಸಿ ಬಿಟ್ ಕಾಯಿನ್’ನ ವಿಶಿಷ್ಟತೆಗಳನ್ನು ಬಣ್ಣಿಸಿದ. ಇದರ 3 ತಿಂಗಳ ನಂತರ ಜನವರಿ 3 2009ರಲ್ಲಿ ಬಿಟ್’ಕಾಯಿನ್’ನ ಚಲಾವಣೆ ಪ್ರಾರಂಭವಾಯಿತು ನಂತರ 9 ನೇ ಜನವರಿ 2009ರಂದು ಇದರ 0.1 ವರ್ಷನ್’ನ್ನು ನಾಕಾಮೊತು ಪ್ರಾರಂಭಿಸಿದ. ಬಿಟ್ ಕಾಯಿನ್’ನ ಸಫಲತೆ ಇನ್ನಷ್ಟು ಹೊಸ ಕ್ರಿಪ್ಟೊ ಕರೆನ್ಸಿಗಳಿಗೆ ಜನ್ಮ ನೀಡಿತು, ಇವುಗಳಲ್ಲಿ ಇಥೇರಿಯಮ್,ರಿಪ್ಪಲ್,ಲಿಟ್’ಕಾಯಿನ್, ಡ್ಯಾಶ್,ನಿವೋ,ಮೊನೆರೋ,ಸ್ಟ್ರೆಟೀಸ್ ಮತ್ತು ಝೆಡ್ ಕ್ಯಾಶ್’ಗಳು ಪ್ರಮುಖವಾಗಿವೆ. ಕ್ರಿಪ್ಟೊ ಕರೆನ್ಸಿಯ ಇತಿಹಾಸ ತೀರ ಹಳೆಯದಲ್ಲದಿದ್ದರೂ ಇದರಲ್ಲಿಯ  ಕುತೂಹಲ ಮತ್ತು ಅರ್ಥ ವ್ಯವಸ್ಥೆಯ ಮೇಲೆ ಇದು ಬೀರುವ ಪರಿಣಾಮ ಗಣನೀಯವಾಗಿದೆ.

             

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!