ಅಂಕಣ

‘ಬೆಂಗಳೂರು’

 ‘ಬೆಂಗಳೂರು’ – (ಕಾದಂಬರಿ), ಲೇಖಕರು: ಜೋಗಿ

ಮುದ್ರಣವರ್ಷ: ೨೦೧೬, ಬೆಲೆ: ರೂ. ೧೩೦-೦೦

ಪ್ರಕಾಶಕರು: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೪

ಈವತ್ತಿನ ಕನ್ನಡ ಬರಹಗಾರರ ನಡುವೆ ಓದುಗರ ಪ್ರೀತಿ ಗಳಿಸಿದವರಲ್ಲಿ ಜೋಗಿ(ಗಿರೀಶ್‌ರಾವ್) ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಜೋಗಿ ಒಳ್ಳೆಯ ಓದುಗ, ಕತೆಗಾರ, ಇವರ ಕತೆಯೊಂದು ಸಿನೆಮಾ ಆಗಿ ಅದಕ್ಕೆ ರಾಜ್ಯಪ್ರಶಸ್ತಿ ಬಂದಿದೆ, ಅಂಕಣಬರಹ, ಕಾದಂಬರಿ, ಸಿರಿಯಲ್ಲುಗಳಿಗೆ ಸಿನೆಮಾಗಳಿಗೆ ಚಿತ್ರಕತೆ, ಸಂಭಾಷಣೆ, ಹೀಗೆ ಇವರ ಪರಿಚಯ ಮುಂದುವರೆಸಬಹುದಾಗಿದೆ. ಇಂದಿಗೆ ಜೋಗಿ ಬರೆದ ಪುಸ್ತಕಗಳು ಐವತ್ತಕ್ಕೂ ಮಿಕ್ಕಿವೆ. ‘ಬೆಂಗಳೂರು ಮಾಲಿಕೆ’ ಯೋಜನೆಯಲ್ಲಿ ಆರು ಕೃತಿಗಳನ್ನು ತರುವುದು ಜೋಗಿಯವರ ಸಂಕಲ್ಪ. ಆ ಪೈಕಿ ಮೊದಲನೆಯ ಕೃತಿ ಈ ಕಾದಂಬರಿ. ನಂತರ ಬಂದದ್ದು ಬೆಂಗಳೂರು ಕುರಿತ ಲೇಖನಗಳ ಸಂಕಲನ ‘ಬಿ ಕ್ಯಾಪಿಟಲ್’. ಜೋಗಿ ಬರೆದ ಇದಕ್ಕೂ ಮೊದಲಿನ ಕಾದಂಬರಿಯ ಹೆಸರು ‘ವಿರಹದ ಸಂಕ್ಷಿಪ್ತ ಪದಕೋಶ’. ಇವರು ಏನೇ ಬರೆಯಲಿ ಅಲ್ಲೊಂದು ಪ್ರಯೋಗಶೀಲತೆ ಇರುತ್ತದೆ. ಹೊಸತನವಿರುತ್ತದೆ.

‘ಬೆಂಗಳೂರು’ ಕಾದಂಬರಿಯಲ್ಲಿರುವುದು “ತನ್ನ ಯಾತನೆಯ ಬಾಲ್ಯದಿಂದ ಯೌವನಕ್ಕೆ ಹೊರಳಿಕೊಂಡಿರುವ ಮಹಾನಗರದ ಸಿಟ್ಟಿನ ಮುಖ”. ಬೆಂಗಳೂರಿನ ಈ ಸಿಟ್ಟು ಇಲ್ಲಿಯ “ಹುಚ್ಚು ಬಿಸಿಲು, ಹುಚ್ಚು ಧಗೆ”, ಹುಚ್ಚು ಕ್ರೌರ್ಯಗಳಲ್ಲಿ ನಿತ್ಯ ಸ್ಫೋಟಕ್ಕೆ ಕಾದಿರುತ್ತದೆ. “ಬೆಂಗಳೂರೇ ಹಾಗೆ. ತಾಯಿಯಂತಲ್ಲ, ಪ್ರೇಯಸಿಯಂತಲ್ಲ, ಸಖನಂತಲ್ಲ. ಇಲ್ಲಿ ಬೇರು ಬಿಡುತ್ತೇನೆ ಅನ್ನುವುದು ಭ್ರಮೆ. ಬೆಂಗಳೂರು ನೆಲೆಯಲ್ಲ, ಫ್ಲಾಟ್‌ಫಾರ್ಮು. ನೆಲವಲ್ಲ, ರಿಯಲ್ ಎಸ್ಟೇಟು. ಈ ಊರಿಗೆ ನೆನಪುಗಳನ್ನು ಸೃಷ್ಟಿಸುವ ಶಕ್ತಿಯೂ ಇಲ್ಲ. ಇದೊಂದು ಕರ್ಮಭೂಮಿ. ಇಲ್ಲಿಗೆ ಮಂದಿ ದುಡಿಯುವುದಕ್ಕೆ ಬರುತ್ತಾರೆ. ಕೈದಿಗಳಂತೆ ದುಡಿಯುತ್ತಾರೆ. ಮತ್ತೆ ತಮ್ಮೂರಿಗೆ ಮರಳಬೇಕು ಎಂದು ಹಂಬಲಿಸುತ್ತಾರೆ. ಆದರೆ, ಬೆಂಗಳೂರು ಅವರನ್ನು ಮರಳಲು ಬಿಡುವುದಿಲ್ಲ. ಅಭಿಮನ್ಯುವಿನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಈ ಚಕ್ರವ್ಯೂಹದ ಒಳಗೆ ಹೊಕ್ಕವರು ಹೋರಾಡಿಯೇ ಮಡಿಯಬೇಕು. ಯುದ್ಧ ಗೆದ್ದ ಸುದ್ದಿ ತಿಳಿಯುವ ಮೊದಲೇ ಅಸು ನೀಗಬೇಕು.” ಕಾದಂಬರಿಯ ನಾಯಕ ನರಸಿಂಹ ಭಿಡೆ. ಕ್ರೈಮ್ ಪತ್ರಿಕೆಯ ಸಂಪಾದಕನಾಗಿ ಅಭೂತಪೂರ್ವ ಯಶಸ್ಸು, ಹಣ ಎಲ್ಲ ಗಳಿಸುವ ಭಿಡೆಗೆ ಕಾಡುವ ಒಂದು ಪ್ರಶ್ನೆ : “ಗಂಗರು, ಚೋಳರು, ವೀರಬಲ್ಲಾಳರು ಯಾಕೆ ಬೆಂಗಳೂರನ್ನು ತೊರೆದು ಹೋಗಿರಬಹುದು. …ಯಾಕೆ ಇಲ್ಲೊಂದು ಸಾಮ್ರಾಜ್ಯ ಕಟ್ಟಲಿಲ್ಲ. ವಿಜಯನಗರದ ಅರಸರು ಯಾಕೆ ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳಲಿಲ್ಲ. ಕೆಂಪೇಗೌಡ ಬೆಂಗಳೂರನ್ನು ಕಟ್ಟಿದ ನಂತರ ಮರಾಠರು, ಮೊಗಲರು, ಮೈಸೂರು ಅರಸರು, ಹೈದರಾಲಿ, ಟಿಪ್ಪು ಸುಲ್ತಾನರೆಲ್ಲ ಬೆಂಗಳೂರಲ್ಲಿ ಸುಖವಾಗಿದ್ದರಾ? ಬೆಂಗಳೂರಲ್ಲಿ ಸಂತೋಷವಾಗಿದ್ದವರು ಯಾರು? ಬ್ರಿಟಿಷರ ವಿರುದ್ಧ ಬೆಂಗಳೂರು ಯಾಕೆ ಹೋರಾಡಲಿಲ್ಲ? ಬೆಂಗಳೂರಿಗೆ ತನ್ನ ನೆಲದ ಮೇಲೆ ಪ್ರೀತಿಯೇ ಇರಲಿಲ್ಲವೇ? ನದಿಯಿಲ್ಲದ ನೆಲಕ್ಕೆ ದಾಹ ಮಾತ್ರ ಇರುತ್ತದಾ?” (ಪು.೧೨೮-೯). ಆದ್ದರಿಂದ ಬೆಂಗಳೂರಿಗೆ ಪರಮಹಂಸರನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ, ರೌಡಿಸಮ್, ಭಯ,ದುರಾಸೆಗಳನ್ನು ಸೃಷ್ಟಿಸುವುದಷ್ಟೆ ಸಾಧ್ಯವಾಯಿತು.

ಈ ಕಾದಂಬರಿ ನರಸಿಂಹ ಭಿಡೆಯ ಆತ್ಮಕಥೆ. ನರಸಿಂಹ ತನ್ನ ಕಥನದ ಓಘದಲ್ಲಿ ಬೆಂಗಳೂರಿನ ಸದ್ಯದ ಕ್ರೂರ ವಿದ್ಯಮಾನಗಳಿಗೆ ಕಾದಂಬರಿಯ ಉದ್ದಕ್ಕೂ ಹಾಯುತ್ತಲೇ ಧಾವಿಸುತ್ತಾನೆ. ಕಾದಂಬರಿಯ ಮೊದಲ ಪುಟಗಳಲ್ಲಿಯೇ ಬೆಂಗಳೂರಿನ ಕ್ರೌರ್ಯದ ಹಲವು ಘಟನೆಗಳು ಲೇಖಕರ ಸ್ಮೃತಿಪಟಲದಲ್ಲಿ ಬರುತ್ತವೆ. ಕಥಾನಾಯಕ ಮನುಷ್ಯನೂ ಅಲ್ಲದ ಮೃಗವೂ ಅಲ್ಲದ ನರಸಿಂಹ. ನರಸಿಂಹ ಸರಿಯಾಗಿ ಶಾಲೆ ಕಲಿಯಲಾಗದೆ ಹೇಗೋ ಡಿಗ್ರಿ ಪಾಸುಮಾಡಿದ್ದು ದಕ್ಷಿಣಕನ್ನಡದ ಸಿದ್ಧಕಟ್ಟೆಯಲ್ಲಿ. ಅಪ್ಪ ಅಲ್ಲಿ ಕೂಗಿ ಕೂಗಿ ಪ್ರಯಾಣಿಕರನ್ನು ಕರೆದು ಟಿಕೆಟ್ ಮಾರುವ ಬಸ್ ಏಜೆಂಟ್. ಮನೆಯಲ್ಲಿ ಬೀಡಿ ಕಟ್ಟಿ ಬದುಕುವ ತಾಯಿ ಮತ್ತು ಅಕ್ಕ. ನಡುಗಾಲದಲ್ಲಿ ಅಪ್ಪ ಮೋಹಿನಿ ಎನ್ನುವ ಹೆಂಗಸಿನ ಹಿಂದೆ ಹೊರಟುಹೋಗುತ್ತಾನೆ. ಕೊನೆಗೆ ಹುಚ್ಚನಾಗುತ್ತಾನೆ.

ಜೋಗಿ ತುಸು ಹೊಸ ರೀತಿಯಲ್ಲಿ ಅಂದರೆ ಭಿನ್ನ ತಂತ್ರದಲ್ಲಿ ಕಥೆ ಹೆಣೆಯುತ್ತಾರೆ. ನರಸಿಂಹ ಯಾವ ನಿರ್ದಿಷ್ಟವಾದ ಕಾರಣವೂ ಇಲ್ಲದೆ ಹೆಂಡತಿ ಸರೋಜಿನಿಯ ಕೊಲೆ ಮಾಡಿದ್ದಾನೆ; ಕ್ರೈಮ್ ಪತ್ರಿಕೆಯ ಸಂಪಾದಕನಾದ ಕಾರಣ ಅವನಿಗೆ ಎಲ್ಲಾ ಪೋಲೀಸ್ ಅಧಿಕಾರಿಗಳೂ ಗೊತ್ತು. ಫೋನ್ ಮಾಡಿ ಪೋಲಿಸರಿಗೆ ಬರುವಂತೆ ತಿಳಿಸಿದ್ದಾನೆ. ತಾನು ಕೊಲೆ ಮಾಡಿರುವುದನ್ನೂ ತಿಳಿಸಿದ್ದಾನೆ. ಹೆಣದ ಪಕ್ಕ ತಣ್ಣಗೆ ಕುಳಿತು ತನ್ನ ಚರಿತ್ರೆಯನ್ನು ನೆನಪಿಸಿಕೊಳ್ಳುತ್ತಿರುವ ನರಸಿಂಹನಿಗೆ ಹೆದರಿಕೆಯಿಲ್ಲ, ತಾನು ಕೊಲೆ ಮಾಡಿದೆನೆಂಬ ಗಾಬರಿಯಾಗಲೀ ಪಾಪಪ್ರಜ್ಞೆಯಾಗಲೀ ಇಲ್ಲ. ಯಾವ ಆವೇಶವೂ ಇಲ್ಲದೆ ದಿಂಬನ್ನು ನಿಧಾನವಾಗಿ ಎತ್ತಿ ಸರೋಜಿನಿ ನೋಡುತ್ತಿರುವಂತೆಯೇ ಆಕೆಯ ಮುಖಕ್ಕೆ ಒತ್ತಿ ಸಾಯಿಸಿದ್ದಾನೆ. ಆಕೆ ಕಿಂಚಿತ್ತೂ ಕೊಸರಾಡಲಿಲ್ಲ. ಚೂರು ಮಿಸುಕಾಡಿದಳಷ್ಟೆ ಎಂದು ನೆನೆದಾಗ ಅವನಿಗೆ ಆಶ್ಚರ್ಯ.

ಬೆಂಗಳೂರಿಗೆ ಮುಖವೇ ಇಲ್ಲ; ಇರುವುದೆಲ್ಲ ಬರೀ ಮುಖವಾಡ. ನರಸಿಂಹನಿಗೆ ಅದನ್ನು ತಿಳಿಯಲು ಕಲಿಸಿದವರು  ಎಸ್ಪಿ ನಾಗರಾಜಮೂರ್ತಿ. ಅದಕ್ಕೂ ಮೊದಲು ಅವನು ಅಪರಾಧಗಳ ಸುದ್ದಿ ಬರೆಯುತ್ತಿದ್ದ. ಹೆಣ ನೋಡಿ ಕತೆ ಕಟ್ಟಿ ಬರೆಯುತ್ತಿದ್ದ. ಅವನ ಊಹೆಗಳು ಎಷ್ಟೋ ಬಾರಿ ನಿಜವೇ ಆಗಿ ಪೋಲೀಸ್ ಇಲಾಖೆಗೆ ಅವನೆಂದರೆ ಬಹಳ ಗೌರವ.  ಒಮ್ಮೆ ನಾಗರಾಜ ಮೂರ್ತಿಯ ಬಗ್ಗೆ ಒಂದು ಪತ್ರಿಕೆ ಸುಳ್ಳು ಸುದ್ದಿ ಬರೆಯುತ್ತದೆ. ಕೆಂಡಾಮಂಡಲವಾದ ಅವರು ನರಸಿಂಹನಿಗೆ ಬರಹೇಳಿ ಬಂಡವಾಳ ಕೊಡುತ್ತೇನೆ, ನೀನೇ ಸಂಪಾದಕ, ಕ್ರೈಮ್ ಪತ್ರಿಕೆಯೊಂದನ್ನು ಶುರು ಮಾಡು ಎನ್ನುತ್ತಾರೆ. ಅಲ್ಲಿಂದ ನರಸಿಂಹನಿಗೆ ಶುಕ್ರದೆಸೆ. ರಾಜಕಾರಣಿಗಳ ಮೂಖವಾಡ ಕಳಚಿದ, ವೇಶ್ಯೆಯರ ಕರಾಳ ಬದುಕಿನ ಬಗ್ಗೆ ಬರೆದ. ರೌಡಿಗಳನ್ನು ತನ್ನ ಪತ್ರಿಕೆಯ ಮೂಲಕ ತತ್ತರ ನಡುಗಿಸಿ ಬಿಟ್ಟ.

 ಈ ಕಾದಂಬರಿಯ ಮತ್ತೊಂದು ಪಠ್ಯ ಸ್ವತಃ ನರಸಿಂಹ ಪತಿತನಾದದ್ದು, ತನ್ನ ತಪ್ಪುಗಳನ್ನು ನಿರ್ಲಜ್ಜನಾಗಿ ಸಮರ್ಥಿಸಿಕೊಂಡದ್ದು, ತನಗಿಂತ ಹತ್ತು ವರ್ಷ ಹಿರಿಯಳಾದ ಮಂಗಳಾ ಜೊತೆ ಆಕೆಯ ಹಾಸಿಗೆಯಲ್ಲಿ ಉರುಳಾಡಿದ್ದು. ಆದರೆ ಧಗ ಧಗ ಸುಡುವ ಯೌವನವನ್ನು ಆತನಿಗೆ ಪರಿಚಯಿಸಿದವಳು ಆಕೆಯೇ. ಆಕೆ ಎಸ್ಪಿ ನಾಗರಾಜಮೂರ್ತಿಯ ಹೆಂಡತಿ. ಅವನ ಬದುಕಿನಿಂದ ಆಕೆ ನಿರ್ಗಮಿಸಿದ ನಂತರವಷ್ಟೆ ಸರೋಜಿನಿಯನ್ನು ಆತ ಮದುವೆಯಾದ. ಆದರೆ ಆ ಸುಖದ ತುರೀಯ ಪಾಠಗಳನ್ನು ಬೋಧಿಸಿದ ಮಂಗಳಳನ್ನು ಕೊನೆತನಕವೂ ಆತ ಮರೆಯಲಾಗುವುದಿಲ್ಲ. ಆ ನೆನಪಿನಲ್ಲಿ ಕಾಮವಿತ್ತು, ಸುಖವಿತ್ತು, ಪಡೆದು ಮರಳಿಸಿದ ದಾಹವಿತ್ತು. ಪತ್ರಕರ್ತನಾದ ಅವನ ಬದುಕಿನಲ್ಲಿ ಅಸಂಖ್ಯ ಹೆಣ್ಣುಗಳು ಶಯ್ಯೆಗೆ ಬಂದು ಹೋಗುತ್ತಾರೆ; ಆದರೆ ಯಾರೂ ಅವನ ನೆನಪಿನಲ್ಲಿ ನಿಲ್ಲಲಿಲ್ಲ. ಬಳಸಿದ ನಂತರ ಮತ್ತೆ ಕಾಡಲಿಲ್ಲ,  ಬೆಂಗಳೂರು ಅವನನ್ನು ತಿದ್ದಿಬಿಟ್ಟಿತ್ತು. ಅವನು ಚಕ್ರವ್ಯೂಹವನ್ನು ಹೊಕ್ಕಿದ್ದ. ಕಾದಂಬರಿಯ ಕೊನೆಯಲ್ಲಿ ಪೋಲೀಸರ ದಾರಿ ಕಾಯುತ್ತ ಅಸಂಗತ ನಾಟಕದ ಪಾತ್ರದಂತೆ ನರಸಿಂಹ ಹೆಣದ ಪಕ್ಕ ಕೂತಿರುತ್ತಾನೆ, ಪಾಪಕ್ಕೆ ಅಪರಾಧಕ್ಕೆ ಒಳ್ಳೆಯತನಕ್ಕೆ ತಕ್ಷಣ ಸ್ಪಂದಿಸುವ ಆದರೆ ನಿರಾಳವಾಗಿ ಇದ್ದುಬಿಡುವ ಬೆಂಗಳೂರಿನ ಜೀವಂತ ಪ್ರತಿರೂಪವಾಗಿ. ಒಟ್ಟಿನಲ್ಲಿ ಇದೊಂದು ಹಲವು ಪಠ್ಯಗಳಿರುವ ಕಾದಂಬರಿ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!