ಅಂಕಣ ಸ್ಪ್ಯಾನಿಷ್ ಗಾದೆಗಳು

ಏರಿದ್ದು ಇಳಿಯಲೇಬೇಕು ಇದು ಪ್ರಕೃತಿ ನಿಯಮ

ಕತ್ತಲ ನಂತರ ಬೆಳಕಾಗಲೇ ಬೇಕಲ್ಲವೇ? ಇದೆಂತಹ ಪ್ರಶ್ನೆ ಅದು ಸಹಜವಲ್ಲವೇ? ಹಾಗೆಯೇ ಬದುಕಿನಲ್ಲಿ ಏರಿಳಿತಗಳು ಕೂಡ! ಇಂದಿನ ದಿನದ ಸ್ಥಿತಿ ಸದಾ ಇರುವುದಿಲ್ಲ. ಬದುಕಿನಲ್ಲಿ ಬದಲಾವಣೆಯೊಂದೇ ನಿರಂತರ . ಬದುಕಿನ ಹಾದಿಯಲ್ಲಿ ನಮಗೆ ತೀರಾ ಬೇಕಾದವರನ್ನ ಕಳೆದುಕೊಳ್ಳುತ್ತೇವೆ. ಅಂದಿನ ದಿನದ ದುಃಖ ಸದಾ ಇದ್ದಿದ್ದರೆ? ನಾವು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲಾಗದೆ ಅದೇ ದುಃಖದಲಿ ನಮ್ಮ ಜೀವನ ಪಯಣವನ್ನೂ ಮುಗಿಸಬೇಕಿತ್ತು ಅಲ್ಲವೇ? ಆದರೆ ಬದುಕು ಜೀವನ್ಮುಖಿ. ಹಾಗೆ ಆಗಲು ಬಿಡುವುದಿಲ್ಲ. ನೋವಿನ ನಂತರ ಏನಾದರೊಂದು ಬದುಕಿಗೆ ಆಶಾಭಾವನೆಯನ್ನ ನೀಡುತ್ತದೆ . ನಾವು ಬದುಕಲೇ ಬೇಕು ಎನ್ನುವುದಕ್ಕೊಂದು ಕಾರಣವನ್ನೂ ಕೊಡುತ್ತದೆ . ಸುಖವೇ ಇರಲಿ ದುಃಖವೇ ಇರಲಿ ಯಾವುದೂ ಈ ಬದುಕಿನಲ್ಲಿ ಶಾಶ್ವತವಲ್ಲ ಎನ್ನುವುದನ್ನ ನಮ್ಮ ಹಿರಿಯರು ಏರಿದ್ದು ಇಳಿಯಲೇಬೇಕು ಎಂದರು .
ಸೋಲು  ಎನ್ನುವುದು ಮನುಷ್ಯನನ್ನ ಹತಾಶೆಗೆ ದೂಡುತ್ತದೆ. ಆದರೆ ಸೋಲಿನ ಹಿಂದೆಯೇ ನೆರಳಿನಂತೆ ಗೆಲುವು ಕೂಡ ಇರುತ್ತದೆ . ಗೆಲುವು ಸೋಲು ಎರಡೂ ಒಂದೇ ನಾಣ್ಯದ ಎರಡು ಮುಖಗಳು . ಅಥವಾ ಒಂದನ್ನೊಂದು ನೆರಳಿನಂತೆ ಹಿಂಬಾಲಿಸುತ್ತಲೇ ಇರುತ್ತವೆ . ಇಂತಹ ಉತ್ತಮ ಸಂದೇಶ ನೀಡುವ ಮಾತನ್ನ ನಾವು ಗೆದ್ದಾಗ ಅಥವಾ ಗೆಲುವಿನಲ್ಲಿರುವರಿಗೆ ಹೇಳುವುದಿಲ್ಲ ಬದಲಿಗೆ ಸಂಕಷ್ಟದಲ್ಲಿರುವರಿಗೆ , ಸೋತವರಿಗೆ ಉದಾಹರಣೆಯಂತೆ ರಾತ್ರಿಯ ನಂತರ ಬೆಳಕಾಗಬೇಕಲ್ಲವೇ ? ಎನ್ನುವ ಅರ್ಥ ಬರುವ ರೀತಿಯಲ್ಲಿ ಹೇಳುತ್ತೇವೆ . ಆದರೆ ಈ ಮಾತನ್ನ ಸದಾ ನೆನಪಲ್ಲಿಟ್ಟು ಕೊಂಡರೆ ಉತ್ತಮ .

ಇನ್ನು ಸ್ಪಾನಿಶರು Después de la tormenta, siempre llega la calma ( ದಿಸ್ಪೊಯೆಸ್ ದೆ ಲ ತೊರ್ಮೆಂತ ಸಿಯಂಪ್ರೇ ಯೇಗ ಲ ಕಾಲ್ಮಾ ) ಎನ್ನುತ್ತಾರೆ . ಅಂದರೆ ಚಂಡಮಾರುತದ  ನಂತರ ಖಂಡಿತ ಶಾಂತಿ ನೆಲೆಸುತ್ತದೆ ಎಂದರ್ಥ . ಚಂಡಮಾರುತದ  ಸ್ಥಿತಿ ಸದಾ ಇರಲು ಹೇಗೆ ಸಾಧ್ಯ ? ಅಲ್ಲವೇ ? ಅಂದರೆ ಕಷ್ಟವೇ ಇರಲಿ ಸುಖವೇ ಇರಲಿ ಅದು ಕ್ಷಣಿಕ ಅದರ ನಂತರ ಬದಲಾವಣೆ ಇದ್ದೆ ಇರುತ್ತದೆ ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತದೆ . ಇಲ್ಲಿ ಕೂಡ ಗೆಲುವಿನಲ್ಲಿ ತಮ್ಮ ಕೆಲಸದ ಉತ್ತುಂಗದಲ್ಲಿರುವರಿಗೆ ಇದನ್ನ ಹೇಳುವುದಿಲ್ಲ ಬದಲಿಗೆ ನೊಂದವರಿಗೆ  , ಸೋತವರಿಗೆ , ಇದರ ನಂತರ ಗೆಲುವು ನಿನ್ನದೆ ಎನ್ನುವ ಅರ್ಥದಲ್ಲಿ ತಿಳಿ ಹೇಳುತ್ತಾರೆ.
ಬದುಕು ಅದೆಷ್ಟೇ ಕಟ್ಟಿಕೊಳ್ಳಲು ಆಗದ ಮಟ್ಟಿಗೆ ಮುರಿದು ಹೋಗಿರಲಿ; ಮತ್ತೆ ಅದನ್ನ ತನ್ನಿಚ್ಚೆಯಂತೆ ಕಟ್ಟಿಕೊಳ್ಳಲು ಸಾಧ್ಯ ಎನ್ನುವುದನ್ನ ತಿಳಿಸಿ ಹೇಳಲು ಈ ಮಾತನ್ನ ಬಳಸಲಾಗಿದೆ. ಜಪಾನ್ , ಶ್ರೀಲಂಕಾ , ಭಾರತ ಮುಂತಾದ ದೇಶದಲ್ಲಿ ಚಂಡಮಾರುತ ಅಪ್ಪಳಿಸಿ ನಗರದ ನಕ್ಷೆಯನ್ನ ಬದಲಿಸಿ ಬಿಟ್ಟಿತು ಆದರೇನು ಅವರು ಮರಳಿ ಬದುಕನ್ನ ಕಟ್ಟಿಕೊಂಡಿದ್ದಾರೆ . ಪ್ರಕೃತಿ ಕೂಡ ಇನ್ನೊಂದು ಹೊಡೆತ ಕೊಡುವ ಮುನ್ನ ಬಹಳಷ್ಟು ಸಮಯ ಕೊಡುತ್ತದೆ. ತಪ್ಪು ತಿದ್ದಿಕೊಂಡು ಬದುಕ ಕಟ್ಟಿಕೊಳ್ಳುವುದು ಮಾತ್ರ ನಮ್ಮ ಕೈಲಿದೆ.

ಇನ್ನು ಇಂಗ್ಲಿಷರು  ‘After a storm comes a calm’ ಎನ್ನುತ್ತಾರೆ. ಅಂದರೆ ದೊಡ್ಡದೊಂದು ನೋವು ಅಥವಾ ಸೋಲಿನ ನಂತರ ಬದುಕು ಒಂದು ಗೆಲುವು ಅಥವಾ ಅವಕಾಶ ಕೊಡುತ್ತದೆ ಎನ್ನುವ ಅರ್ಥ . ಸದಾ ನೋವಿನಲ್ಲೇ , ಸೋಲಿನಲ್ಲೇ ಬದುಕು ಕಳೆದು ಹೋಗುವುದಿಲ್ಲ ಎನ್ನುವುದನ್ನ ಹಿರಿಯರು ಪ್ರತಿಮೆಗಳ ಮೂಲಕ ಹೇಳಿದ್ದಾರೆ.


ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :  
Después    : ನಂತರ , ಆನಂತರ , ಆಮೇಲೆ ಎನ್ನುವ ಅರ್ಥ . ದಿಸ್ಪೊಯೆಸ್ ಎನ್ನುವುದು ಉಚ್ಚಾರಣೆ .
de la tormenta  : ಚಂಡಮಾರುತ , ಸುಂಟರಗಾಳಿ ಎನ್ನುವ ಅರ್ಥ . ದೆ ಲ ತೊರ್ಮೆಂತ ಎನ್ನುವುದು ಉಚ್ಚಾರಣೆ.
siempre  : ಯಾವಾಗಲೂ , ಸದಾ ಎನ್ನುವ ಅರ್ಥ. ಸಿಯಂಪ್ರೇ ಎನ್ನುವುದು ಉಚ್ಚಾರಣೆ.
llega : ಬರುವುದು, ಬರುತ್ತದೆ ಎನ್ನುವ ಅರ್ಥ . ಯೇಗ ಎನ್ನುವುದು ಉಚ್ಚಾರಣೆ.
la calma  : ಶಾಂತಿ , ಶಾಂತತೆ ಎನ್ನುವ ಅರ್ಥ . ಲ ಕಾಲ್ಮಾ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!