ಪ್ರಚಲಿತ

ಪುತ್ತೂರಿನಲ್ಲಿ ಮೊದಲ 24×7 ಐಟಿ ಸಂಸ್ಥೆ ‘ದ ವೆಬ್ ಪೀಪಲ್’ನ ನೂತನ ಕಾರ್ಯಾಲಯ ಉದ್ಘಾಟನೆ

ತಂತ್ರಜ್ಞಾನದ ಜೊತೆಗೆ ಬೆಳೆಯಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ, ಎಂದು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಅವರು ಪುತ್ತೂರಿನ ಮೊದಲ 24×7  ಐಟಿ ಕಂಪನಿ ‘ದ ವೆಬ್ ಪೀಪಲ್’ನ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುವ ಹಾಗಾಗಿರುವುದಕ್ಕೆ ಇಲ್ಲಿನ ತಂತ್ರಜ್ಞಾನ ಶಿಕ್ಷಣ ಮತ್ತು ಯುವಜನತೆಯ ತೊಡಗಿಸಿಕೊಳ್ಳುವುದರಿಂದಾಗಿದೆ. ತಂತ್ರಜ್ಞಾನದ ಶಿಕ್ಷಣ ಪಡೆದವರು ಇಂದು ಉದ್ಯೋಗಿಗಳಾಗುವುದು ಮಾತ್ರವಲ್ಲದೇ ಉದ್ಯೋಗ ಸೃಷ್ಟಿಕರ್ತರಾಗಿಯೂ ಮುಂದುವರೆಯುತ್ತಿರುವುದು ಉತ್ತಮ ವಿಚಾರವಾಗಿದೆ. ಅಂತಹಾ ಪ್ರಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆಯೇ ‘ದ ವೆಬ್ ಪೀಪಲ್’ ಮುಂದಡಿಯಿಟ್ಟಿದೆ, ಎಂದವರು ವಿಶ್ಲೇಷಿಸಿದರು.

‘ಇದುವರೆಗೆ ಬೆಂಗಳೂರು ತಂತ್ರಜ್ಞಾನದ ನಗರವಾಗಿ ವಿದೇಶಿ ಸಂಸ್ಥೆಗಳಿಗೆ ತಂತ್ರಜ್ಞಾನದ ಸಹಯೋಗ ಹೊಂದಿದ್ದರೆ, ಪುತ್ತೂರು ಕೂಡಾ ಅದೇ ರೀತಿಯಲ್ಲಿ ಮುಂದುವರೆಯುವ ಸೂಚನೆಗಳು ಕಾಣಿಸುತ್ತಿವೆ’ ಎಂದವರು ನುಡಿದರು. ಯುವಕರ ಶ್ರಮದ ಮೂಲಕ ದೇಶದ ಸಮಗ್ರ ಅಭಿವೃದ್ಧಿಯ ಕೊಡುಗೆ ಅಗತ್ಯವಿದೆ. ಹೀಗಾಗಿ ಇಂತಹಾ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಗಳು ಬೆಳೆಯಬೇಕೆಂದು ಆಶಿಸಿದರು.

ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಮಾತನಾಡಿ, ಪುತ್ತೂರಿನ ಯುವಕರು ತಂತ್ರಜ್ಞಾನದಲ್ಲಿ ಮುಂದುವರೆದಿದ್ದಾರೆ ಎನ್ನುವುದಕ್ಕೆ 24×7 ಐಟಿ ಸಂಸ್ಥೆಯೊಂದು ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿರುವುದೇ ಸೂಕ್ತ ಉದಾಹರಣೆಯಾಗಿದೆ. ಈ ಮೂಲಕ ತಂತ್ರಜ್ಞಾನ ಶಿಕ್ಷಣ ಪಡೆದ ಇಲ್ಲಿನ ಯುವಕರಿಗೆ ಇಲ್ಲೇ ಉದ್ಯೋಗ ದೊರಕುವಂತಾಗಲಿ. ಸಂಸ್ಥೆಯ ಸ್ಥಾಪಕರ ಸಮಗ್ರ ಆಶಯಗಳು ನೆರವೇರಲಿ, ಎಂದರು.

ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಮಾತನಾಡಿ, ಉದ್ಯೋಗ ಸೃಷ್ಟಿಯಲ್ಲಿ ಪುತ್ತೂರಿನ ಪಾಲೂ ಕೂಡಾ ದೇಶ-ವಿದೇಶಕ್ಕೆ ದೊರೆಯಲಿದೆ. ಈ ಮೂಲಕ ಪ್ರತಿಭಾವಂತರಿಗೆ ಉದ್ಯೋಗ ದೊರಕಿ ಯುವಜನರು ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರೆಯುವಂತಾಗಲಿ,ಎಂದು ಹಾರೈಸಿದರು.

‘ದ ವೆಬ್ ಪೀಪಲ್’ ಸಂಸ್ಥೆಯ ಸಿಓಓ ಶ್ರೀ ಶರತ್ ಶ್ರೀನಿವಾಸ್, ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡುತ್ತಾ, ಈಗಾಗಲೇ ಸಂಸ್ಥೆಯು ದೇಶೀಯ ಮತ್ತು ವಿದೇಶಿ ಕಂಪನಿಗಳಿಗೆ ತಂತ್ರಜ್ಞಾನದ ಸಹಯೋಗವನ್ನು ೨೪x೭  ಒದಗಿಸುತ್ತಿದೆ. ಹಾಗೆಯೇ ಈಗಾಗಲೇ ಹಲವು ಸಂಸ್ಥೆಗಳಿಗೆ ಅಂತರ್‌ಜಾಲ ತಾಣಗಳನ್ನು, ವ್ಯವಹಾರೋದ್ಯಮ ಅಭಿವೃದ್ಧಿಗಾಗಿ ಮೊಬೈಲ್ ಆಪ್, ಡಿಜಿಟಲ್ ಮಾರ್ಕೆಟಿಂಗ್ ಸೇರಿದಂತೆ ವ್ಯವಹಾರ ಸಂಬಂಧಿ ವಿನ್ಯಾಸಗಳನ್ನು ಒದಗಿಸಿಕೊಟ್ಟಿರುತ್ತದೆ. ಹಾಗೆಯೇ ವಿದೇಶಿ ಸಂಸ್ಥೆಗಳಿಗೆ ಬಿಪಿಓ ಮತ್ತಿತರ ಆನ್‌ಲೈನ್ ಸೇವೆಗಳನ್ನು ಒದಗಿಸುತ್ತಿದೆ, ಎಂದು ವಿವರಿಸಿದರು. ‘ದ ವೆಬ್ ಪೀಪಲ್’ ಸಂಸ್ಥೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ(CEO) ಶ್ರೀ ಆದಿತ್ಯ ಕಲ್ಲೂರಾಯ ಧನ್ಯವಾದ ಸಮರ್ಪಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಜೊತೆಯಾಗಿರುವ ಸಮಸ್ತರನ್ನೂ ಸ್ಮರಿಸಿದರು. ಜೊತೆಗೆ ಮುಂದೆಯೂ ಸರ್ವರ ಸಹಕಾರ ಅಗತ್ಯವಿದೆ ಎಂದರು.

ಕ್ಯಾಂಪ್ಕೋದ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಆರ್. ರಂಗಮೂರ್ತಿ, ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂ. ನಾ. ಖಂಡಿಗೆ, ‘ದ ವೆಬ್ ಪೀಪಲ್’ನ ಮತ್ತೋರ್ವ ಪ್ರವರ್ತಕರಾದ  ಶ್ರೀ ಉಜ್ವಲ್ ಪ್ರಭು, ರೀಡೂ ಕನ್ನಡದ ಸಂಪಾದಕ ಶಿವಪ್ರಸಾದ್ ಭಟ್, ಆರಭಿ ಮ್ಯೂಸಿಕ್ ಅಕಾಡೆಮಿಯ ಡೈರೆಕ್ಟರ್ ಅನೀಶ್ ವೀ ಭಟ್ ಮತ್ತಿತರರು ಉಪಸ್ಥಿತರಿದ್ದರು. ಬಿ ನಿತ್ಯಾನಂದ ಶೆಟ್ಟಿ, ನನ್ಯ ಅಚ್ಯುತ ಮೂಡತ್ತಾಯ, ರೋಟರೀ ಅಧ್ಯಕ್ಷರಾದ ವಾಮನ ಪೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡು ಕಂಪೆನಿಗೆ ಶುಭ ಹಾರೈಸಿದರು.

ಏನಿದು ‘ದ ವೆಬ್ ಪೀಪಲ್’? 

ಪುತ್ತೂರಿನ ಮೊದಲ 24×7 ಐಟಿ ಕಂಪೆನಿ, ‘ದ ವೆಬ್ ಪೀಪಲ್’ (The Web People) ಈಗಾಗಲೇ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಸೇವೆಗಳನ್ನು ಒದಗಿಸುವಲ್ಲಿ ಹೆಸರುವಾಸಿಯಾಗಿದೆ. ‘ಯೋಜನೆ, ವಿನ್ಯಾಸ, ಪ್ರಸಾರ ಮತ್ತು ಸಹಯೋಗ’ ಎನ್ನುವ ಕಾರ್ಯನುಡಿಯೊಂದಿಗೆ ‘ನಿಮ್ಮ ಉದ್ಯಮಕ್ಕೆ ನಮ್ಮ ತಂತ್ರಜ್ಞಾನದ ಸಾಥ್’ ಎಂಬುದಾಗಿ ಕಾರ್ಯನಿರ್ವಹಿಸುವ ಈ ಸಂಸ್ಥೆಯು ಸುಂದರ ಮತ್ತು ಅತ್ಯಾಕರ್ಷಕ ಅಂತರ್ಜಾಲ ತಾಣಗಳನ್ನು ರೂಪಿಸುವುದು, ಮೊಬೈಲ್ ಆ್ಯಪ್ ಸಿದ್ಧಪಡಿಸುವುದು, ವ್ಯವಹಾರಕ್ಕೆ ಸಂಬಂಧಿಸಿದ ಆ್ಯಪ್ ಸಿದ್ಧಪಡಿಸುವುದು,  ಮತ್ತು ತಾಂತ್ರಿಕ ಮಾಹಿತಿ ಒದಗಿಸುವುದು, ಸ್ಟಾರ್ಟ್‍ಅಪ್ ರೂಪಿಸುವುದು, ವಿದೇಶಿ ಸಂಸ್ಥೆಗಳಿಗೆ ಆನ್‍ಲೈನ್ ತಾಂತ್ರಿಕ ಬೆಂಬಲ, ವ್ಯವಹಾರ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಮಾರ್ಗದರ್ಶನ ಮತ್ತು ಅನುಷ್ಠಾನ, ಬಿಪಿಓ, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ತಂತ್ರಜ್ಞಾನ ಸಂಬಂಧಿ ಕಾರ್ಯಗಳನ್ನು ನಿರ್ವಹಿಸುತ್ತದೆ. ತಮ್ಮ ಸಹಯೋಗಿ ಸಂಸ್ಥೆಗಳ ಹಾಗೂ ಪ್ರಮುಖ ಗ್ರಾಹಕರ ಬೇಡಿಕೆಯ ಆಧಾರದಲ್ಲಿ ಪುತ್ತೂರಿನಲ್ಲಿಯೇ ವಿಶಾಲವಾದ ಕಛೇರಿಯನ್ನು ಹೊಂದಲು ತೀರ್ಮಾನಿಸಿ ಇದೀಗ ಹೊಸ ಸುಸಜ್ಜಿತ ಮತ್ತು ಕಾರ್ಪೊರೇಟ್ ಶೈಲಿಯ ಕಾರ್ಯಾಲಯಕ್ಕೆ ಕಾಲಿಟ್ಟಿದೆ. ಇದೇ ತಂಡವು ’ರೀಡೂ ಕನ್ನಡ’ ಜಾಲತಾಣವನ್ನು ಅಭಿವೃದ್ಧಿಪಡಿಸಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!