Featured ಅಂಕಣ ಲೋಕವಿಹಾರಿ-ಸಸ್ಯಾಹಾರಿ

ಮನಸ್ಸಿಗೆ  ಮುದ ನೀಡಿದ ಸಿನಮಮ್ ಐಲ್ಯಾಂಡ್ ; ಉದಾರತೆಯಿಂದ ಜೀವಭಿಕ್ಷೆ ನೀಡಿದ ಉದವಳವೇ! 

ನುವಾರ ಎಲಿಯಾದ ಸುಂದರ ಪ್ರಕೃತಿ ಸೌಂದರ್ಯ ಸವಿದು, ಅಲ್ಲಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಹಾರ್ಟನ್ ಪ್ಲೈನ್ಸ್ ಎನ್ನುವ ನ್ಯಾಷನಲ್ ಪಾರ್ಕ್ ನಲ್ಲಿ ಚಾರಣ ಮಾಡಿ ಬದುಕಿಗೆ ಬೇಕಾಗುವ ಅತಿ ಅವಶ್ಯಕ ಅನುಭವ ಪಾಠ ಕಲಿತು, ರಾತ್ರಿ ದಿಂಬಿಗೆ ತಲೆ ಕೊಟ್ಟದಷ್ಟೇ ನೆನಪು ದಣಿದ ದೇಹವನ್ನ ನಿದ್ರಾದೇವಿ ಯಾವಾಗ ಅವರಿಸಿಕೊಂಡಳೋ ತಿಳಿಯದು. ಮರುದಿನ ಬೆಳಿಗ್ಗೆ ನೂರಾರು ವರ್ಷ ಹಳೆಯ ಆಮೆಯನ್ನ ನೋಡಲು, ಆಮೆಯನ್ನ ಸಂರಕ್ಷಿಸುವ ಸ್ಥಳಕ್ಕೆ ಭೇಟಿ ಕೊಡುವುದು; ಜೊತೆಗೆ ರಿವರ್ ಸಫಾರಿಯಲ್ಲಿ ಸಿನಮಮ್ ಐಲ್ಯಾಂಡ್ ನೋಡುವುದು ಮತ್ತು ಉದ್ದವಳವೇ ನ್ಯಾಷನಲ್ ಪಾರ್ಕ್ ನಲ್ಲಿ ವೈಲ್ಡ್ ಸಫಾರಿ. ಅಂದರೆ ಪ್ರಾಣಿ ಪಕ್ಷಿಗಳು ಸ್ವಚಂದವಾಗಿ ಯಾವುದೇ ರೀತಿಯ ಕಟ್ಟು ಕಟ್ಟಳೆಯಿಲ್ಲದೆ ಓಡಾಡಿಕೊಂಡಿರುತ್ತವೆ. ಅವನ್ನು ನೋಡಲು ತೆರೆದ ಜೀಪಿನಲ್ಲಿ ವೀಕ್ಷಕರನ್ನ ಕರೆದುಕೊಂಡು ಹೋಗುವ ಒಂದು ಕಾರ್ಯಕ್ರಮ. ಹೀಗೆ ಒಟ್ಟು ಮುಖ್ಯವಾಗಿ ಮೂರು ನೋಡಬೇಕಾದ ಸ್ಥಳಗಳ ಪಟ್ಟಿ ನಮ್ಮ ಕೈಯಲ್ಲಿತ್ತು. ಬೆಳಿಗ್ಗೆ ಎದ್ದು ದೈನಂದಿನ ಕೆಲಸಗಳ ಮುಗಿಸಿ, ನಾವಿದ್ದ ಹೋಟೆಲ್ ಉದ್ದವಳವೇ ರೆಸಾರ್ಟ್ ಹೋಟೆಲ್ ನಲ್ಲಿ ಉಪಹಾರ ಸ್ವೀಕರಿಸಿ, ಆ ಹೋಟೆಲ್ ನಲ್ಲಿ ವಿವಿಧ ದೇಶದ ಕ್ರಿಕೆಟ್ ಆಟಗಾರರು ತಂಗಿದ್ದರು ಎನ್ನುವುದನ್ನ ಒತ್ತಿ ಹೇಳುವ ಪ್ರದರ್ಶನಕ್ಕಿಟ್ಟ ಆಟಗಾರರ ಸಹಿಯುಳ್ಳ ಬ್ಯಾಟ್ಗಳ ಫೋಟೋ ತೆಗೆದುಕೊಂಡು ಹೊರೆಟೆವು.

ಆಮೆಗಳ ಸಂರಕ್ಷಣಾ ಕೇಂದ್ರಕ್ಕೆ ಭೇಟಿ :

ಆಮೆಗಳ ಸಂತತಿ ಕಡಿಮೆಯಾಗುತ್ತಿದೆಯಂತೆ ಅದಕ್ಕೆ ಕಾರಣ ಆಮೆಗಳು ಸಮುದ್ರ ತೀರಕ್ಕೆ ಬಂದು ನೂರಾರು ಮೊಟ್ಟೆಗಳನ್ನ ಇಡುತ್ತದೆ ಮತ್ತು ಮರಳಿ ಸಮುದ್ರ ಸೇರುತ್ತದೆ. ಇಂತಹ ಮೊಟ್ಟೆಗಳನ್ನ ಹಲವು ಜೀವ ಜಂತುಗಳು ಕಬಳಿಸುತ್ತವೆ. ಉಳಿದಂತೆ ಜೀವ ಕಂಡ ಆಮೆಗಳು ಸಮುದ್ರ ಸೇರುವ ದಾರಿಯಲ್ಲಿ ಅಲ್ಲಿರುವ ಪಕ್ಷಿಗಳ ಹೊಟ್ಟೆಗೆ ಆಹಾರವಾಗುತ್ತವೆಯಂತೆ. ಹೀಗಾಗಿ ಒಂದು ಬಾರಿ ನೂರಾರು ಮೊಟ್ಟೆಯಿಟ್ಟರೂ ಉಳಿಯುವ ಸಂಖ್ಯೆ ಅತಿ ಕಡಿಮೆ. ಹೀಗಾಗಿ ಅಲ್ಲಿನ ಸರಕಾರ ಹಲವಾರು ಆಮೆ ಸಂರಕ್ಷಣಾ ಕೇಂದ್ರಗಳನ್ನ ತೆರೆದಿದೆ. ಸಮುದ್ರ ತೀರದಲ್ಲಿ ಇರುವ ಮೊಟ್ಟೆಗಳನ್ನ ತಂದು ೪೮ ದಿನಗಳ ಕಾಲ ಮರಳಿನಲ್ಲಿ ಹುದುಗಿಸಿ ಅವುಗಳನ್ನ ಮರಿ ಮಾಡುತ್ತಾರೆ. ಇಂತಹ ಮರಿಗಳನ್ನ ನೀರಿನಲ್ಲಿ ಬಿಟ್ಟು ಅವುಗಳನ್ನ ಪಾಲಿಸುತ್ತಾರೆ. ಅವು ಬಲಿತು ತಮ್ಮ ಬದುಕ ತಾವು ನಡೆಸಬಲ್ಲವು ಎನ್ನುವ ನಂಬಿಕೆ ಬಂದಾಗ ಅವುಗಳನ್ನ ಮತ್ತೆ ಸಮುದ್ರಕ್ಕೆ ಬಿಡುತ್ತಾರಂತೆ. ನಾವು ಇಂತಹ ಒಂದು ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದೆವು. ಅಲ್ಲಿ ೨೦೦ ವರ್ಷಕ್ಕೂ ಹೆಚ್ಚು ವಯಸ್ಸಿನ ಒಂದು ಆಮೆಯನ್ನ ಕಂಡೆವು. ನೂರು ವಯಸ್ಸಿನ ಒಂದೆರಡು ಅಮೆಯನ್ನ ಕೂಡ ನೋಡಿದೆವು. ಐದಾರು ವರ್ಷ ವಯಸ್ಸಿನ ನಾಲ್ಕೈದು ಆಮೆಯನ್ನ ಕೂಡ ಅಲ್ಲಿ ನೋಡಲು ಸಿಕ್ಕಿತು. ಏನಾದರೂ ದೈಹಿಕ ನೂನ್ಯತೆಯಿದ್ದರೆ ಮಾತ್ರ ಇವುಗಳನ್ನ ಇಲ್ಲಿಯೇ ಉಳಿಸಿಕೊಳ್ಳುತ್ತಾರೆ. ಎಲ್ಲವೂ ಚೆನ್ನಾಗಿದ್ದರೆ ಅವುಗಳನ್ನ ಸಮುದ್ರಕ್ಕೆ ಬಿಟ್ಟು ಬಿಡುತ್ತಾರೆ.

ಅನ್ನಿ ಎರಡು ಮೂರು ದಿನದ ಮತ್ತು ವಾರದ ಹಿಂದೆ ಜನಿಸಿದ ಪುಟ್ಟ ಆಮೆಗಳನ್ನ ಕೈಯಲ್ಲಿ ಹಿಡಿಯಲು ಬಹಳ ಭಯಪಟ್ಟಳು. ಒಮ್ಮೆ ಮುಟ್ಟಿದ ನಂತರ ಅಲ್ಲಿಂದ ವಾಪಸ್ಸು ಬರಲು ಸಿದ್ಧವಿರಲಿಲ್ಲ. ‘ಪಾಪ ಇವಕ್ಕೆ ಅವರ ಅಮ್ಮ ಯಾರು ಅಂತ ಗೊತ್ತಿಲ್ಲ ‘ ಅಂತ ಮರಿಗಳ ಕೈಲಿಡಿದು ಮಮ್ಮಲ ಮರುಗಿದಳು.   ‘ಪಪ್ಪಾ ಮೊಟ್ಟೆಯಿಂದ ಮರಿಯಾಗುವ ಎಲ್ಲಾ ಪ್ರಾಣಿ ಪಕ್ಷಿಗಳು ಪಾಪ ಅಲ್ವಾ? ಅವಕ್ಕೆ ಅವರ ಪಪ್ಪಾ, ಮಮ್ಮಾ ಯಾರು ಅಂತ ಗೊತ್ತಿರುವುದಿಲ್ಲ. ಅವುಗಳನ್ನ ಯಾರು ಸಾಕುತ್ತಾರೆ? ಅವಕ್ಕೆ ಹೊಟ್ಟೆ ಹಸಿವಾದರೆ ಏನು ಮಾಡುತ್ತವೆ? ವಾಟ್ ಇಫ್ ಆ ಎನಿಮಿ ಅಟಾಕ್ಸ್ ದೆಮ್? ಹೀಗೆ ಪ್ರಶ್ನೆಗಳ ಸರಮಾಲೆ ಎದುರಿಗಿಟ್ಟಳು ಅನನ್ಯ. ಮೊಟ್ಟೆಯಿಂದ ಮರಿಯಾಗುವ ಎಲ್ಲಾ ಪ್ರಾಣಿ ಪಕ್ಷಿಗಳು ತಂದೆತಾಯಿ ಪ್ರೀತಿಯಿಂದ ವಂಚಿತವಾಗುವುದಿಲ್ಲ, ಜೊತೆಗೆ ಎಲ್ಲಾ ಮೊಟ್ಟೆಗಳು ಮರಿಯಾದರೆ ಭೂಮಿಯ ಮೇಲೆ ಸಮತೋಲನ ಇರುವುದಿಲ್ಲ, ಹೀಗಾಗಿ ಪ್ರಕೃತಿ ಅದನ್ನ ನಿರ್ಧರಿಸುತ್ತೆ ಎನ್ನುವುದನ್ನ ಅವಳಿಗೆ ಬಿಡಿಸಿ ಹೇಳಿದೆ. ಶ್ರೀಲಂಕಾ ದೇಶದ ಕೋಸ್ಟಲ್ ಬೆಲ್ಟ್ ನಲ್ಲಿ ನೀವು ಪ್ರಯಾಣಿಸುವರಿದ್ದರೆ ಇಂತಹ ಹಲವು ಸಂರಕ್ಷಣಾ ಕೇಂದ್ರಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ನಿಮ್ಮ ಜೊತೆಯಲ್ಲಿ ಹತ್ತು ಅಥವಾ ಹನ್ನೆರಡು ವಯಸ್ಸಿಗಿಂತ ಕಡಿಮೆ ವಯೋಮಾನದ ಮಕ್ಕಳಿದ್ದರೆ ಇಂತಹ ಕೇಂದ್ರ ಭೇಟಿ ಕಡ್ಡಾಯ.

ಸಿನಮಮ್ ಐಲ್ಯಾಂಡ್ ನಲ್ಲಿ ಒಂದು ಸುತ್ತು  

ಆಮೆ ಸಂರಕ್ಷಣಾ ಕೇಂದ್ರದಿಂದ ಒಂದೈದು ಕಿಲೋಮೀಟರ್ ದೂರದಲ್ಲಿ ಸಿಕ್ಕಿದ್ದು ರಿವರ್ ಸಫಾರಿ. ನಾಲ್ಕೈದು ಜನ ಕೂರುವ ಬೊಟ್ ಗಳಿಗೆ ಯಮಹ ಅಥವಾ ಮಿಟ್ಸುಬಿಷಿ ಮೋಟಾರ್ ಅಳವಡಿಸಿರುತ್ತಾರೆ. ಅವುಗಳಲ್ಲಿ ಕುಳಿತು ನೀರನ್ನ ಸೀಳಿಕೊಂಡು ಹೋಗುವ ಮಜಾ ಇದೆಯಲ್ಲ ಅದು ವರ್ಣಾತೀತ. ಈಜು ಹೇಳಿಕೊಳ್ಳುವಷ್ಟು ಬಾರದಿದ್ದರೂ ಮೊಂಡು ಧೈರ್ಯ ಜೊತೆಗೆ ನಮ್ಮೊಂದಿಗೆ ಇರುವವರು ಸ್ಥಳೀಯರು, ನೀರಿನಲ್ಲಿ ನಿತ್ಯ ಜೀವನ ಕಳೆಯುವರು ಎನ್ನುವ ನಂಬಿಕೆ ನಮ್ಮನ್ನ ಈ ಪ್ರಯಾಣ ಹೆಚ್ಚು ಆಸ್ವಾದಿಸಲು ಅನುವು ಮಾಡಿಕೊಟ್ಟಿತು. ಒಂದು ಗಂಟೆಯ ಬೋಟ್ ಪ್ರಯಾಣ ನಮ್ಮನ್ನ ಸಿನಮಮ್ ಐಲ್ಯಾಂಡ್’ಗೆ ಕರೆತಂದಿತು. ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ಮಿನುಗಳನ್ನ ಇಟ್ಟುಕೊಂಡು ಅವುಗಳಿಂದ ಟ್ರೀಟ್ಮೆಂಟ್ ಕೊಡಿಸುತ್ತೇವೆ ಎನ್ನುವ ಒಂದಷ್ಟು ಬೋಟ್ಗಳು ಕಂಡವು. ನಮ್ಮ ಕಾಲಿನಲ್ಲಿರುವ ಬೇಡದ ವಸ್ತುಗಳನ್ನ ತಿಂದು ಕಾಲನ್ನ ಸ್ವಚ್ಛ ಮಾಡುತ್ತವೆ. ಅಲ್ಲದೆ ಏನಾದರೂ ಚರ್ಮ ರೋಗವಿದ್ದರೆ ಅದಕ್ಕೆ ಮೀನಿನಿಂದ ಕಚ್ಚಿಸಿ, ತಿನ್ನಿಸಿ ಟ್ರೀಟ್ಮೆಂಟ್ ಕೊಡುತ್ತೇವೆ ಎನ್ನುವುದು ಅವರ ಪ್ರಣಾಳಿಕೆ. ನಾವು ಇದಕ್ಕೆ ಬೇಡವೆಂದವು. ಸಿನಮಮ್ ಐಲ್ಯಾಂಡ್ ನಮ್ಮ ಆದ್ಯತೆ.

ಇಲ್ಲಿರುವ ಮರಗಳೆಲ್ಲ ಚಕ್ಕೆ ಮರಗಳು. ಈ ಮರದ ತೊಗಟೆಯ ಮೊದಲ ಎರಡು ಅಥವಾ ಮೂರು ತಿರುಳು ಮಾತ್ರ ಚಕ್ಕೆ! ಉಳಿದದ್ದು ಬೇರೆಯದಕ್ಕೆ ಉಪಯೋಗಿಸುತ್ತಾರೆ. ಈ ಚಕ್ಕೆಯಿಂದ ಎಣ್ಣೆ ತಯಾರಿಸುತ್ತಾರೆ. ಎಲ್ಲಾ ರೀತಿಯ ನೋವುಗಳಿಗೆ ಇದನ್ನ ಬಳಸಬಹದು. ಚಕ್ಕೆಯ ಗುಣ ಮತ್ತು ಅವುಗಳ ಉಪಯೋಗ ತಿಳಿಸಿಹೇಳುವ ಹತ್ತರಿಂದ ಹದಿನೈದು ನಿಮಿಷದ ಮಾತುಕತೆಯ ನಂತರ ಇಷ್ಟವಿದ್ದರೆ ಅಲ್ಲಿನ ಪದಾರ್ಥಗಳ ಕೊಳ್ಳಬಹುದು. ಬಂದ ಅತಿಥಿಗಳ ಆದರಿಸಲು ಉಚಿತವಾಗಿ ಚಕ್ಕೆಯ ಟೀ ಅಥವಾ ಕಾಫೀಯನ್ನ ನೀಡುತ್ತಾರೆ. ದಟ್ಟಕಾಡಿನ ನಡುವೆ ಅದೇ ಮರದ ಘಮದ ನಡುವೆ ಚಕ್ಕೆ ಟೀ ಕುಡಿದು ಅಲ್ಲಿನ ಒಂದಷ್ಟು ಪದಾರ್ಥಗಳ ಕೊಂಡು ಸಿನಮಮ್ ಐಲ್ಯಾಂಡಿಗೆ ವಿದಾಯ ಹೇಳಿ ಹೊರೆಟೆವು. ದಾರಿಯ ಮಧ್ಯದಲ್ಲಿ ಲೋಕದ ಗೊಡವೆ ಮರೆತು ಧ್ಯಾನಸ್ಥನಾಗಿದ್ದ ಪ್ರಶಾಂತ ಬುದ್ಧನ ಮೂರ್ತಿ ಕಂಡಿತು. ಜೊತೆಗೆ ಸಿನಮಮ್ ಐಲ್ಯಾಂಡಿಗೆ ಹೊಂದಿಕೊಂಡಂತಿರುವ ಐಲ್ಯಾಂಡ್ ಒಂದು ಮಾರಾಟಕ್ಕಿದೆ, ಎನ್ನುವುದು ಒಂದಷ್ಟು ಕುತೊಹಲ ಮತ್ತು ಆಶ್ಚರ್ಯ ಹುಟ್ಟಿಸಿತು. ನಾಲ್ಕು ತಾಸಿನ ಈ ಪ್ರಯಾಣ ಮರೆಯಲಾದ ಅನುಭವದ ಬುತ್ತಿಯನ್ನ ಕಟ್ಟಿಕೊಟ್ಟಿದೆ.

ಮೈ ನಡುಕ ಹುಟ್ಟಿಸಿದ ಉದ್ದವಳವೇ ನ್ಯಾಷನಲ್ ಪಾರ್ಕ್!

ಆಮೆ ಸಂರಕ್ಷಣಾ ಕೇಂದ್ರ ಮತ್ತು ರಿವರ್ ಸಫಾರಿ ಮಾಡಿ ಹಸಿದಿದ್ದ ಹೊಟ್ಟೆಗೆ ಆಹಾರ ತುಂಬಿಸಿ, ಉದ್ದವಳವೇ ವೈಲ್ಡ್ ಸಫಾರಿ ಹೊರಟಾಗ ಸಮಯ ಮಧ್ಯಾಹ್ನದ ಮೂರುಗಂಟೆ ಮೂವತ್ತು ನಿಮಿಷ. ನಮ್ಮ ಸಾರಥಿ ಹಾಗೂ ಗೈಡ್ ಇದು ಅಕ್ಟೋಬರ್ ತಿಂಗಳು ಯಾವಾಗ ಬೇಕಾದರೂ ಮಳೆ ಬರಬಹುದು, ಹೇಳಿಕೇಳಿ ಇದು ೨೩ ಸಾವಿರ ಎಕರೆಗೂ ಮೀರಿದ ಅರಣ್ಯ ಎಚ್ಚರಿಕೆ, ನಾಳೆ ಬೆಳಿಗ್ಗೆ ಬೇಕಾದರೆ ಇದಕ್ಕೆ ಬರೋಣ, ಹೋಟೆಲ್ಗೆ  ಹೋಗಿಬಿಡೋಣ ಎಂದ. ಮಧ್ಯಾಹ್ನ ನಾಲ್ಕಕ್ಕೆ ಹೋಟೆಲ್ ರೂಮ್ ಸೇರಿ ವೇಳೆ ಕಳೆಯುವುದು ನನಗೆ ಇಷ್ಟವಾಗದ ಮಾತು. ಇಲ್ಲ ಇವತ್ತೇ ಹೋಗೋಣ ಎಂದು ಒತ್ತಾಯಿಸಿದೆ. ನನ್ನ ಒತ್ತಾಯಕ್ಕೆ ಕಟ್ಟು ಬಿದ್ದು ಯಸ್ ಎಂದದ್ದು ರಾಜ ವಿಕ್ರಮ ದಸನಾಯಕೆ. ಸ್ಥಳೀಯರ ಮಾತು ಕೇಳಬೇಕು ಅವರಿಗೆ ಅಲ್ಲಿನ ನೆಲ, ಅಲ್ಲಿನ ಪ್ರಕೃತಿ ಹೇಗೆ ಎನ್ನವುದು ಗೊತ್ತು. ಆದರೇನು ಪ್ರಕೃತಿ ನಮಗೆ ಇನ್ನೊಂದು ಬಹು ಮುಖ್ಯ ಜೀವನಪಾಠ ಕಲಿಸುವುದಿತ್ತು. ಹೀಗಾಗಿ ದಸನಾಯಕೆಯ ಮಾತು ನಮಗೆ ರುಚಿಸಲಿಲ್ಲ. ವೈಲ್ಡ್ ಸಫಾರಿ ಒಟ್ಟು ಮೂರು ತಾಸಿನ ಕಾರ್ಯಕ್ರಮ. ಬಣ್ಣ ಬಣ್ಣದ ಪಕ್ಷಿಗಳು, ಆನೆ, ಜಿಂಕೆ, ನವಿಲುಗಳನ್ನ ಕಂಡೆವು. ಮರದ ರಂಬೆಯ ಬಣ್ಣವನ್ನ ಹೋಲುವ, ಹಸಿರು ಎಲೆಯಂತೆ ಕಾಣುವ ಪಕ್ಷಿಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಮಾತ್ರ ಕಾಣುತ್ತವೆ.

ಹೀಗೆ ಪ್ರಕೃತಿಯ ಅನನ್ಯ ಸೃಷ್ಟಿಯ ಸವಿಯುತ್ತಾ ಸಾಗುತ್ತಿದ್ದೆವು. ಒಮ್ಮೆಲೇ ಮಳೆ ಶುರುವಾಯಿತು. ಸಫಾರಿ ಶುರುವಾಗಿ ಒಂದು ತಾಸಿನ ಮೇಲೆ ಒಂದೈದು ನಿಮಿಷ ಕಳೆದಿರಬಹುದಷ್ಟೆ! ಧೋ ಎಂದು ಸುರಿಯಲು ಶುರುವಾದ ಮಳೆ ನಿಲ್ಲುವ ಲಕ್ಷಣ ಕಾಣಲಿಲ್ಲ. ಮಳೆ ಅದೆಷ್ಟು ಬಿರುಸಾಗಿ ಬರುತ್ತಿತ್ತು ಎಂದರೆ ಅರ್ಧ ತಾಸಿನಲ್ಲಿ ಜೀಪಿನ ಅರ್ಧ ಚಕ್ರ ಮುಳುಗವಷ್ಟು ನೀರು ರಸ್ತೆಯಲ್ಲಿತ್ತು. ಇದರ ಜೊತೆಗೆ ಮಿಂಚು ಮತ್ತು ಸಿಡಿಲು. ಅಬ್ಬಾ ಅದೊಂದು ಮರೆಯಲಾದ ಅನುಭವ. ಕಣ್ಣ ಮುಂದೆಯೆ ಆಕಾಶವನ್ನ ಸೀಳಿ ಬರುವ ಆ ಬೆಳಕು. ಜೀವನದಲ್ಲಿ ಪ್ರಥಮ ಬಾರಿಗೆ ಮಿಂಚನ್ನ ಅಷ್ಟೊಂದು ಹತ್ತಿರದಿಂದ ಕಂಡದ್ದು. ಮರಗಿಡಗಳು ಸಿಡಿಲನ್ನ ಬೇಗ ಆಕರ್ಷಿಸುತ್ತವೆ ಎನ್ನುವ ಅರಿವು ಮನದಲ್ಲಿ ಇನ್ನಷ್ಟು ಭಯ ಉಂಟುಮಾಡಿತು. ಪ್ಯಾರಿಸ್ ನಗರದ ಬಳಿ ಇರುವ ಡಿಸ್ನಿಲ್ಯಾಂಡ್ ನಲ್ಲಿ ಹಾಲಿವುಡ್ ಚಲಚಿತ್ರಗಳಲ್ಲಿ ಗುಡುಗು ಮತ್ತು ಸಿಡಿಲು, ಮಿಂಚು ಹೇಗೆ ಸೃಷ್ಟಿಸುತ್ತಾರೆ ಎನ್ನುವುದನ್ನ ತೋರಿಸುತ್ತಾರೆ. ಅದನ್ನ ನೋಡಿದ ಅನುಭವ ಬಿಟ್ಟರೆ ಹೀಗೆ ಭೂಮಿ ಆಕಾಶದ ಮಧ್ಯೆ ೨೩ ಸಾವಿರ ಎಕರೆ ಮರಗಳ ಮಧ್ಯೆ ಮುಂದೆ ಹಿಂದೆ ಚಲಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿ ಜೀಪಿನಲ್ಲಿ ಕುಳಿತು ಕಣ್ಣ ಮುಂದೆಯೇ ಎರಗುವ ಸಿಡಿಲನ್ನ ನೋಡುವುದಿದೆಯಲ್ಲ! ಒಂದರ್ಧ ಗಜ ಹೆಚ್ಚು ಕಡಿಮೆಯಾದರೆ ಅದು ನಮಗೆ ಬಡಿಯಬಹದು! ಇಂತಹ ದೃಶ್ಯವನ್ನ ಕೇವಲ ಇಂಗ್ಲಿಷ್ ಚಲಚಿತ್ರದಲ್ಲಿ ಕಂಡಿದ್ದೆವು, ನಾವೇ ಈ ರೀತಿಯ ಒಂದು ಅನುಭವ ಪಡೆಯುತ್ತೇವೆ ಎಂದು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ. ಅನ್ನಿ ‘ಪಪ್ಪಾ ಆರ್ ವಿ ಗೋಯಿಂಗ್ ಟು ಡೈ?’  ಎಂದು ಪ್ರಶ್ನಿಸಿದಳು. ಇಲ್ಲ ಮಗಳೇ ಎಂದೇನಾದರೂ ಮನಸ್ಸಿನಲ್ಲಿ ದೈವೇಚ್ಛೆಯಿದ್ದರೆ ಮಾತ್ರ! ಎಂದು ಉಸುರಿಕೊಂಡೆ. ಅನನ್ಯ ತನಗೆ ತಿಳಿದ ಎಲ್ಲಾ ಶ್ಲೋಕಗಳನ್ನ ಹೇಳಿಕೊಳ್ಳಲು ಶುರುಮಾಡಿದಳು. ರಾಜವಿಕ್ರಮನ ಮಾತು ಕೇಳಬೇಕಾಗಿತ್ತು ಎಂದು ಮನಸ್ಸು ಕೂಗಿ ಹೇಳತೊಡಗಿತು. ಸಮಯ ಮೀರಿ ಹೋಗಿತ್ತು. ಮಳೆಯ ಜೊತೆಗೆ ಬಿರುಗಾಳಿ ಸೇರಿಕೊಂಡು ಜೀಪಿಗೆ ಕಟ್ಟಿದ್ದ ಟಾರ್ಪಲ್ ಮೆಲ್ಲಗೆ ಕಿತ್ತು ಬರತೊಡಗಿತು. ಸಿಕ್ಕ ಸಣ್ಣ ಜಾಗದಲ್ಲಿ ನುಸುಳಿ ಬಂದ ಗಾಳಿ ಮೈಯಲ್ಲಿ ಸಣ್ಣಗೆ ನಡುಕ ತಂದಿತು. ನಾಲ್ಕೂವರೆ ಅಥವಾ ಐದಕ್ಕೆ ಕಗ್ಗತ್ತಲು. ಗಾಳಿಯ ಜೊತೆಗೆ ಬರುತ್ತಿದ ನೀರಿನ ಹನಿಗಳು ನಮ್ಮನ್ನ ಅರ್ಧ ತೋಯಿಸಿದ್ದವು. ನಮ್ಮ ಜೊತೆ ಇನ್ನು ನಾಲ್ಕು ಜೀಪುಗಳಿದ್ದವು. ಆದರೆ ಅವರಲ್ಲಿ ಯಾರು ಮೊದಲು ಹೋಗಲು ಧೈರ್ಯ ತೋರದೆ ನಿಂತುಬಿಟ್ಟರು. ರಸ್ತೆಯಲ್ಲಿ ಒಂದು ಬದಿಗೆ ಪುಟ್ಟಪುಟ್ಟ ಹೊಂಡಗಳಿದ್ದವು, ಈಗ ಮಳೆಯ ನೀರು ತುಂಬಿ ರಸ್ತೆ ಯಾವುದು? ಹೊಂಡ ಯಾವುದು? ಎನ್ನುವುದು ನಿಖರವಾಗಿ ತಿಳಿಯುತ್ತಿರಲಿಲ್ಲ. ನಮ್ಮ ಡ್ರೈವರ್ ಬಹಳ ಧೈರ್ಯವಂತ. ಮೊದಲು ಹೊರಟ. ಆತನ ಹಿಂದೆ ಉಳಿದವರು ಹಿಂಬಾಲಿಸತೊಡಗಿದರು. ನನಗೆ ಇದೊಳ್ಳೆ ಕೆಲಸವಾಯ್ತಲ್ಲ ಎಂದು ಮನಸ್ಸಿನಲ್ಲಿ ಪೀಕಲಾಟ ಶುರುವಾಯ್ತು. ರಾಜಾವಿಕ್ರಮನಿಗೆ ಇಷ್ಟೊಂದು ರಿಸ್ಕ್ ನಾನು ತೆಗೆದುಕೊಳ್ಳಲು ತಯಾರಿಲ್ಲ, ನಮಗೆ ಈಜು ಬೇರೆ ಬರುವುದಿಲ್ಲ, ಜೀಪನ್ನ ನಿಲ್ಲಿಸುವಂತೆ ಹೇಳು ಎಂದೆ. ರಾಜಾವಿಕ್ರಮ ಮಾತ್ರ ಇದೆಲ್ಲಾ ಮಾಮೂಲು ಎನ್ನುವಂತೆ ಶಾಂತವಾಗಿದ್ದ. ಈ ಡ್ರೈವರ್ಗೆ ರಸ್ತೆ ಯಾವುದು ಎನ್ನುವುದು ಗೊತ್ತಿದೆ ನೆಮ್ಮದಿಯಾಗಿರು ಎಂದ. ಉಳಿದ ಜೀಪಿನ ಡ್ರೈವರ್ಗಳು ಕೂಡ ನಮ್ಮ ಡ್ರೈವರ್ನನ್ನ ನಾಯಕನಂತೆ ಕಂಡದ್ದು ತುಸು ನೆಮ್ಮದಿ ತಂದಿತು. ಭಗವಂತನ ದೆಯೆ ನಾವು ಸುರಕ್ಷಿತವಾಗಿ ಎಂಟ್ರನ್ಸ್ ತಲಪಿದೆವು. ಜೀಪಿನಿಂದ ಇಳಿದು ಮೊಣಕಾಲು ಮೀರಿ ನಿಂತಿದ್ದ ನೀರಿನಲ್ಲಿ ನಡೆದುಕೊಂಡು ನಮ್ಮ ಕಾರಿದ್ದ ಕಡೆಗೆ ನಡೆದೆವು.

ಹಾಗೆ ನೋಡಲು ಹೋದರೆ ಹಾರ್ಟನ್ ಪ್ಲೈನ್ಸ್ ಆಗಲಿ ಉದ್ದವಳವೆ ನ್ಯಾಷನಲ್ ಪಾರ್ಕನಲ್ಲಿ ಆಗಲಿ ಇಂತಹ ರಿಸ್ಕ್ ಬೇಕೆಂದು ತೆಗೆದುಕೊಂಡದ್ದಲ್ಲ. ಅನನ್ಯಳನ್ನ ಕರೆದುಕೊಂಡು ಇಂತಹ ದುಸ್ಸಹಾಸ ಮಾಡುವ ಧೈರ್ಯ ನನಗಿಲ್ಲ. ಆದರೇನು ಅಂತಹ ಒಂದು ಅನುಭವ ನಮಗಾಯಿತು. ಬದುಕು ಎಲ್ಲಾ ನೀನೆಂದುಕೊಂಡಂತೆ ಅಲ್ಲ ಎನ್ನುವುದನ್ನ ಭಗವಂತ ತಿಳಿಸಿಹೇಳಬೇಕಿತ್ತು. ಪುಟ್ಟ ಅನನ್ಯಳಿಗೆ ಮುಂಬರುವ ದಿನಗಳ ಮೆಟ್ಟಿ ಜಗತ್ತಿನಲ್ಲಿ ತನ್ನ ಸ್ಥಾನ ಕಲ್ಪಿಸಿಕೊಳ್ಳಲು ಒಂದು ಅಡಿಪಾಯ ಬೇಕಿತ್ತು. ಎಲ್ಲಕ್ಕೂ ಮಿಗಿಲಾಗಿ ಪ್ರೃತಿಯ ಮುಂದೆ ನಾವೇನು ಅಲ್ಲ ಎನ್ನುವುದರ ಅರಿವು ನಮಗಾಬೇಕಿತ್ತು. ನಾವು ಬೇರೆಯವರು ಹೇಳಿದ್ದು ಸಾವಿರ ಕೇಳಬಹುದು, ಓದಬಹುದು. ಆದರೆ ಸ್ವಾನುಭವ ಇದೆಯಲ್ಲ ಅದರ ಮುಂದೆ ಎಲ್ಲವೂ ಸಪ್ಪೆ. ಗಳಿಗೆಯಾದರೂ ಸರಿಯೇ ನಮ್ಮಲ್ಲಿ ಎರಡು ದಿನದಲ್ಲಿ ಎರಡು ಬಾರಿ ‘ ನಮ್ಮ ಕಥೆ ಮುಗಿಯಿತು ‘ ಎನ್ನುವ ಭಾವ ಬಂದದ್ದು ಸುಳ್ಳಲ್ಲ.

ಜೀವನ ಪಾಠ  

ನಾವು ನಂಬಲಿ ಅಥವಾ ಬಿಡಲಿ ನಮ್ಮ ಮೀರಿದ ಒಂದು ದೈತ್ಯ ಶಕ್ತಿ ಇಲ್ಲಿದೆ. ಅದು ನಮ್ಮೆಲ್ಲರ ನಡೆಸುತ್ತಿದೆ. ನಾನು, ನಾವು ಎನ್ನುವ ನಾನು ಅಥವಾ ನಾವು ಅದರ ಮುಂದೆ ಏನೇನು ಅಲ್ಲ ಎನ್ನುವ ಪಾಠ. ಬದುಕನ್ನ, ಪ್ರತಿಕ್ಷಣವನ್ನ ಪ್ರೀತಿಸಬೇಕು ಆ ಪ್ರೀತಿಯಲ್ಲಿ ಇತರರ ಬಗ್ಗೆ ಒಂದು ಸಂವೇದನೆ, ಭೂತದಯೆ ಇರಬೇಕು. ಗೆದ್ದವರಷ್ಟೇ ಅಲ್ಲ ಸೋತವರು, ಯಶಸ್ಸು ಕಾಣದವರು ಕೂಡ ನಮ್ಮಂತೆ ಎನ್ನುವ, ಯಾವ ಕ್ಷಣದಲ್ಲಿ ಕೂಡ ನೀನು ಕಟ್ಟಿ ಕೊಂಡ ಬದುಕನ್ನ ಬದಲಿಸಬಲ್ಲೆನು ಎನ್ನುವ ಕಿವಿಮಾತ ಆ ದೈತ್ಯ ಶಕ್ತಿ ಬಹಳ ಹತ್ತಿರ ಬಂದು ಕಿವಿಯಲ್ಲಿ ಉಸಿರಿದಂತೆ ಭಾಸವಾಗುತ್ತಿದೆ. ಆ ಕಲಿತ ಪಾಠವ ಮರೆಯದೆ ಪಾಲಿಸಬೇಕಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!