ಅಂಕಣ ಲೋಕವಿಹಾರಿ-ಸಸ್ಯಾಹಾರಿ

ಶ್ರೀಮಂತ ಅನುಭವಗಳ ಧಾರೆಯೆರೆದ ಶ್ರೀಲಂಕಾದ ಹಾರ್ಟನ್ ಪ್ಲೈನ್ಸ್!  

ಪ್ರವಾಸ ಹೊರಡುವುದು ಎಂದರೆ ಅವ್ಯಕ್ತ ಆನಂದ. ಇಂತಹ ಆನಂದ ತಿಂಗಳುಗಟ್ಟಲೆ ಇರುತ್ತದೆ. ಅದಕ್ಕೆ ಕಾರಣ ಎಲ್ಲಿ ಹೋಗಬೇಕು, ಎನ್ನುವುದನ್ನು ನಿರ್ಧಾರ ಮಾಡುವುದರಿಂದ ಪ್ರಾರಂಭವಾಗಿ ಹೋಗಬೇಕಾದ ಸ್ಥಳದ ಮಾಹಿತಿ ಸಂಗ್ರಹ ಮಾಡುವುದು; ನಂತರ ಅಲ್ಲಿನ ವಾಸ್ತವ್ಯ, ಏರ್ ಟಿಕೆಟ್ ನಿಂದ ಹಿಡಿದು ಎಲ್ಲಾ ಸೌಕರ್ಯಗಳ ಕಾಯ್ದಿರಿಸುವ ಪ್ರಕ್ರಿಯೆ. ಹೀಗೆ ತಿಂಗಳುಗಳು ಕಳೆದದ್ದು ತಿಳಿಯುವುದೇ ಇಲ್ಲ. ಇರಲಿ, ಹೀಗೆ ಒಂದು ದಿನ ಮಾತಿಗೆ ಕೂತಾಗ ರಮ್ಯ ಶ್ರೀಲಂಕಾಗೆ ಹೋಗೋಣ ಎಂದಳು. ಪಾಪ ಅವಳು ಈ ಮಾತನ್ನು ಕಳೆದ ಎರಡು ವರ್ಷದಿಂದ ಹೇಳುತ್ತಾ ಬಂದಿದ್ದಾಳೆ. ನನಗೆ ಶ್ರೀಲಂಕಾ ಎಂದರೆ ನಮ್ಮ ತಮಿಳುನಾಡಿನ ಚಿತ್ರ ಕಣ್ಣಿನ ಮುಂದೆ ಬರುತ್ತಿತ್ತು. ಕೆಲವೊಮ್ಮೆ ನಾವು ಕಂಡು ಕೇಳರಿಯದ ಜಾಗಗಳ ಬಗ್ಗೆ ನಾವು ಕಟ್ಟಿಕೊಳ್ಳುವ ಚಿತ್ರಣವಿದೆಯಲ್ಲ ಅದೆಷ್ಟು ಬಾಲಿಶ ಅನ್ನಿಸುತ್ತದೆ. ಒಟ್ಟಿನಲ್ಲಿ  ‘ಶ್ರೀಲಂಕಾ’ ಎಂದರೆ ಒಂದು ರೀತಿಯ ಅಸಡ್ಡೆ. ಪಕ್ಕದಲ್ಲೇ ಇದೆಯಲ್ಲ ಎನ್ನುವ ಕಾರಣವೂ ಇರಬಹುದು. ಅನನ್ಯಳಿಗೆ ಶಾಲೆಗೆ ದಸರಾ ರಜಾ ಇದ್ದದ್ದು ಕೇವಲ ಒಂದುವಾರ. ಈ ವಾರದಲ್ಲಿ ದೂರದ ಪ್ರದೇಶಕ್ಕೆ ಹೋಗಿಬರುವುದು ಆಗದ ವಿಷಯ. ಹೀಗಾಗಿ ಶ್ರೀಲಂಕಾಕ್ಕೆ ಜೈ ಅನ್ನೋಣ ಅನ್ನುವ ನಿರ್ಧಾರಕ್ಕೆ ಬಂದದ್ದು ಸುಳ್ಳಲ್ಲ. ಶ್ರೀಲಂಕಾ ನನ್ನೆಲ್ಲಾ ತಪ್ಪುಗ್ರಹಿಕೆಗಳ ದೂರ ಮಾಡಿ ಮತ್ತೆ ಬರುವಂತೆ ಮಾಡುವ ಮೋಡಿ ಮಾಡುತ್ತದೆ ಎನ್ನುವ ಕಿಂಚಿತ್ತು ಅರಿವು ಅಂದಿರಲಿಲ್ಲ. ಅಲ್ಲಿಗೆ ಹೋದೆವು, ಒಂದಷ್ಟು ಜೀವನ ಪಾಠ ಕಲಿತೆವು. ನಮ್ಮ ಬಳಿ ಎಷ್ಟೇ ದುಡ್ಡಿರಲಿ, ಎಷ್ಟೇ ಅಧಿಕಾರವಿರಲಿ ಪ್ರಕೃತಿ ಮಾತೆಯ  ಎದಿರು ನಾವೆಷ್ಟು ಕುಬ್ಜರು ಎನ್ನುವ ಪ್ರತ್ಯಕ್ಷ ಅನುಭವ ಪಡೆದೆವು. ಒಂದೇ ದೇಶದಲ್ಲಿ ಚಳಿ, ಬಿಸಿಲು, ಮಳೆ ಜೊತೆಗೆ ಅಬ್ಬರದ ಗುಡುಗು ಸಿಡಿಲು ಬಹಳ ಹತ್ತಿರದಿಂದ ಕಂಡೆವು. ಬೆಟ್ಟ ಹತ್ತಿದೆವು, ಬೆಟ್ಟ ಮುಚ್ಚುವ ಮೋಡವನ್ನ ನಾವು ಕೈಲಿಡಿದೆವು, ಪ್ರಪಂಚದ ಕೊನೆ ನೋಡಲು ಹೋಗಿ ನಮ್ಮ ಅಂತ್ಯವಾಗುತ್ತದೆಯೇ? ಎನ್ನುವ ಸಂಶಯದಲ್ಲಿ ಅರ್ಧತಾಸು ಕಳೆದೆವು. ರಿವರ್ ಸಫಾರಿ, ಉದ್ದವಳವೇ ನ್ಯಾಷನಲ್ ಪಾರ್ಕ್ ವೈಲ್ಡ್ ಲೈಫ್ ಸಫಾರಿ ಮಾಡಿದೆವು. ಹಾಗೆ ರಾಮಾಯಣದ ಕುರುಹುಗಳ ನೀಡುವ ಜಾಗಗಳ ಕಂಡೆವು. ಬೆಂಟೋಟದ ಬೀಚ್ ನಲ್ಲಿ ಮನಸೋ ಇಚ್ಛೆ  ನಲಿದೆವು. ಒಟ್ಟಿನಲ್ಲಿ ಒಂದೇ ದೇಶದಲ್ಲಿ ಬೆಟ್ಟ-ಗುಡ್ಡ-ನದಿ-ಪರ್ವತ-ಸಮುದ್ರ-ಜಲಾಶಯ-ಪ್ರಾಣಿ-ಪಕ್ಷಿ ಜೊತೆಗೆ  ಅಲ್ಲಿನ ಅತ್ಯುತ್ತಮ ಹೋಟೆಲ್ಗಳಲ್ಲಿ  ನೆಲೆಸಿದ್ದೆವು. ಒಂದು ವಾರದಲ್ಲಿ, ತಿಂಗಳ ದೈಹಿಕ ಕಸರತ್ತು ಮಾಡಿ ಮೈಕೈ ನೋಯಿಸಿಕೊಂಡು ಮನದ ತುಂಬಾ ಅನುಭವಗಳ ತುಂಬಿಕೊಂಡು ಖಾಲಿ ಕೈಲಿ ಬರದೆ ಶ್ರೀಲಂಕಾ ದೇಶದ ಸಂಸ್ಕೃತಿ ತಿಳಿಸುವ ಪುಸ್ತಕ ಮತ್ತು ರಾವಣ ಕಿಂಗ್ ಆಫ್ ಲಂಕಾ ಎನ್ನುವ ಪುಸ್ತಕವನ್ನೂ ಕೊಂಡುಬಂದೆವು. ಇವೆಲ್ಲವ ವಿವರವಾಗಿ ಬರೆಯುವ ಮುಂಚೆ ಒಂದಷ್ಟು ಲೆಕ್ಕಾಚಾರದ ಮಾತಾಡಿ ಬಿಡೋಣ ಅದರ ಜೊತೆಗೆ ಒಂದಷ್ಟು ಮೂಲಭೂತ ವಿಷಯವನ್ನ ಕೂಡ ತಿಳಿದುಕೊಂಡರೆ ನೀವು ಶ್ರೀಲಂಕಾ ಹೋಗಲು ನಿರ್ಧಾರ ಮಾಡಲು ತಡವಾಗುವುದಿಲ್ಲ.

ಶ್ರೀಲಂಕಾಗೆ ಹೋಗಲು ಬಹಳ ಇಷ್ಟ ಆದರೆ ಖರ್ಚು ಕಷ್ಟವೇ?

ನಮ್ಮಲ್ಲಿ ಬಹಳಷ್ಟು ಜನರಿಗೆ ಶ್ರೀಲಂಕಾ ಹೋಗಿಬರಲು ಖಂಡಿತ ಸಾಧ್ಯವಿದೆ. ಆದರೆ ಮಾಹಿತಿ ಕೊರತೆಯಿಂದ ವಿದೇಶ ಪ್ರಯಾಣವೆಂದರೆ ಅದೊಂದು ದುಬಾರಿ ವೆಚ್ಚದ ಬಾಬತ್ತು ಎನ್ನುವ ನಂಬಿಕೆ ಬೇರೂರಿದೆ. ಸತ್ಯ ಹೇಳಬೇಕೆಂದರೆ ನಾವು ಯಾವ ದೇಶ ಹೋಗಬೇಕು ಎಂದು ಬಯಸುತ್ತೇವೆ ಅಲ್ಲಿಗೆ ಹೋಗಬಹುದು. ಅದಕ್ಕೆ ಪ್ರಬಲ ಇಚ್ಛೆ ಬೇಕಷ್ಟೆ. ಉಳಿದದ್ದು ಹಣ. ಅದರ ಲೆಕ್ಕಾಚಾರ ನಿಮಗೆ ಹೇಳುತ್ತೇನೆ ಕೇಳಿ.

ಶ್ರೀಲಂಕಾಗೆ ಹೋಗಲು ಒಂದಲ್ಲ ಹಲವಾರು ಏರ್’ಲೈನ್’ಗಳಿವೆ. ನಾವು ಶ್ರೀಲಂಕಾ ಏರ್ಲೈನ್ ಅನ್ನು ಆಯ್ಕೆ ಮಾಡಿಕೊಂಡೆವು. ಒಂದಷ್ಟು ಮುಂಚಿತವಾಗಿ ಕಾಯ್ದಿರಿಸಿದರೆ ೧೮ ರಿಂದ ೨೦ ಸಾವಿರ ರೂಪಾಯಿಯಲ್ಲಿ ಹೋಗಿ ಬರಲು ಟಿಕೆಟ್ ಸಿದ್ದವಾಗುತ್ತದೆ. ಪ್ರಯಾಣದ ವೇಳೆ ಒಂದೂವರೆ ಗಂಟೆ ಎಂದು ಹೇಳುತ್ತಾರೆ. ಐವತ್ತರಿಂದ ಅರವತ್ತು ನಿಮಿಷದಲ್ಲಿ ನೀವು ಬೆಂಗಳೂರಿನಿಂದ ಕೊಲಂಬೋ ತಲುಪಬಹುದು. ಇನ್ನು ನೀವು ಭಾರತೀಯರಾದರೆ ೨೦ ಡಾಲರ್ ಹಣ ನೀಡಿ ವೀಸಾ ಪಡೆಯಬೇಕು. ಮೂವತ್ತು ದಿನಕ್ಕೆ ಪರವಾನಿಗೆ ನೀಡುವ ಒಂದು ಸಣ್ಣ ಚೀಟಿಯನ್ನು ಅಲ್ಲಿಳಿದಾಗ ನಿಮ್ಮ ಪಾಸ್ಪೋರ್ಟ್’ನಲ್ಲಿ ಅಂಟಿಸುತ್ತಾರೆ. ಭಾರತ ಸಾರ್ಕ್ ಒಕ್ಕೂಟದಲ್ಲಿ ಬರುತ್ತದೆ. ಹೀಗಾಗಿ ೨೦ ಡಾಲರ್ ಹಣ ಇಲ್ಲದಿದ್ದರೆ ಈ ಹಣ ೩೫ ಡಾಲರ್. ಜನವರಿಯಿಂದ ಏಪ್ರಿಲ್ ನಂತರ ಜುಲೈ ನಿಂದ ಸೆಪ್ಟೆಂಬರ್ ಇಲ್ಲಿಗೆ ಬರಲು ಉತ್ತಮ ಸಮಯ. ಜುಲೈ ಅಂತ್ಯದಿಂದ ಅಕ್ಟೋಬರ್’ವರೆಗೆ ಮಾನ್ಸೂನ್ ಯಾವಾಗ ಮಳೆ ಬರುತ್ತದೆ ಎಂದು ನಿಖರವಾಗಿ ಹೇಳಲಾಗದು. ಹಾಗೆಂದ ಮಾತ್ರಕ್ಕೆ ಅಕ್ಟೋಬರ್’ನಿಂದ ಡಿಸೆಂಬರ್ ಹೋಗಲು ಸಾಧ್ಯವಿಲ್ಲ ಎನ್ನುವಂತಿಲ್ಲ. ಶ್ರೀಲಂಕಾ ವರ್ಷ ಪೂರ್ತಿ ಯಾವಾಗ ಬೇಕಾದರೂ ಭೇಟಿ ನೀಡಬಹುದು. ಆದರೆ ಮಳೆಗಾಲದಲ್ಲಿ ಒಂದಷ್ಟು ಸಮಯ ವ್ಯರ್ಥವಾದೀತು. ಹೀಗಾಗಿ ಒಂದಷ್ಟು ಎಚ್ಚರಿಕೆ ಒಳ್ಳೆಯದು. ಇನ್ನು ಹೋಟೆಲ್ ಠಿಕಾಣಿ  ೧೫ ರಿಂದ ೨೦ ಸಾವಿರ ಭಾರತೀಯ ರೂಪಾಯಿಯಲ್ಲಿ ವಾರದ ಹೋಟೆಲ್ ವ್ಯವಸ್ಥೆಯಾಗುತ್ತದೆ. ಊಟ ತಿಂಡಿಗೆ ಇನ್ನೊಂದು ಹದಿನೈದು, ಲೋಕಲ್ ಪ್ರವಾಸಕ್ಕೆ ಹದಿನೈದರಿಂದ ಇಪತ್ತು ಸಾವಿರ, ಒಂದತ್ತು ಸಾವಿರ ಗೊತ್ತಿಲ್ಲದ ಖರ್ಚು ಎಂದು ಕೊಂಡರೂ ೬೦ ರಿಂದ ೭೫ ಸಾವಿರ ಭಾರತೀಯ ರೂಪಾಯಿ ವ್ಯಯಿಸಿ ಒಬ್ಬ ವ್ಯಕ್ತಿ ಒಂದುವಾರ ಇದ್ದು ಬರಬಹುದು.  ಶ್ರೀಲಂಕಾ ಕರೆನ್ಸಿ ಹೆಸರು ಕೂಡ ರೂಪಾಯಿ. ಭಾರತೀಯ ೧ ರೂಪಾಯಿ ಕೊಟ್ಟರೆ ಶ್ರೀಲಂಕಾದ ೨ ರೂಪಾಯಿ ೨೫ ಪೈಸೆ ಸಿಗುತ್ತದೆ. ವೇಳೆಯಲ್ಲಿ ಬದಲಾವಣೆ ಇಲ್ಲ. ಅಂದರೆ ಭಾರತದಲ್ಲಿ ಈಗೆಷ್ಟು ಗಂಟೆಯೋ ಶ್ರೀಲಂಕಾದಲ್ಲೂ ಅಷ್ಟೇ.

ಈ ಖರ್ಚು ಎನ್ನುವುದು ಆಯಾ ವ್ಯಕ್ತಿಗೆ ಸಂಬಂಧ ಪಟ್ಟ ವಿಚಾರ ಮೇಲೆ ಹೇಳಿರುವ ಬಜೆಟ್ ಒಂದು ಅಂದಾಜು ಅಷ್ಟೇ. ಏಳುದಿನಕ್ಕೆ ಏಳು ಲಕ್ಷವೂ ಖರ್ಚು ಮಾಡಬಹುದು. ಅದು ಅವರವರ ಜೋಬಿನ ತಾಕತ್ತು ಅವಲಂಬಿಸಿರುತ್ತೆ. ಸಾಧಾರಣವಾಗಿ ಹೆಚ್ಚಿನ ಅಬ್ಬರವಿಲ್ಲದೆ ನೋಡಬೇಕಾದ ಸ್ಥಳಗಳ ನೋಡಲು ಇಷ್ಟು ಖರ್ಚಾಗುತ್ತದೆ ಎನ್ನುವ ಒಂದು ಸಣ್ಣ ಲೆಕ್ಕಾಚಾರವಷ್ಟೇ. ಉಳಿದಂತೆ ನಿಮಗೇನು ಬೇಕು ಅದು ನಿಮಗೆ ಬಿಟ್ಟದ್ದು.

ಎಲ್ಲೆಲ್ಲಿ ಸಾಗಿತ್ತು ಪಯಣ?

ಕೊಲಂಬೋ ಇಳಿದು ನೆಗೊಂಬೊ ಎನ್ನುವ ಒಂದು ತಾಸಿನ ಅವಧಿಯಲ್ಲಿ ಸಿಗುವ ನಗರಕ್ಕೆ ಪ್ರಯಾಣ ಮಾಡಿದೆವು. ಅಲ್ಲಿ ಒಂದು ರಾತ್ರಿ ಇದ್ದೆವು. ಮರುದಿನ ಕಾಂಡಿ ನಗರದ ಮೇಲೆ ಹಾದು  ತಲುಪಿದ್ದು ನುವಾರ ಎಲಿಯಾ ಎನ್ನುವ ಹಿಲ್ ಸ್ಟೇಷನ್. ಶ್ರೀಲಂಕಾದಲ್ಲಿ ೨೯ ರಿಂದ ೩೦ ಡಿಗ್ರಿ ಬಿಸಿಲ ತಾಪಮಾನ ತೋರಿಸುತ್ತಿತ್ತು. ಆದರೆ ನುವಾರದಲ್ಲಿ ೧೮. ನಿಜಕ್ಕೂ ಒಂದು ಸ್ವೇಟರ್ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುವಷ್ಟು ಚಳಿ. ಮನಸ್ಸಿಗೆ ಹಿತ ನೀಡುವ ವಾತಾವರಣ. ನಮ್ಮದು ರೋಡ್ ಟ್ರಿಪ್. ಹೀಗಾಗಿ ಇಲ್ಲಿಗೆ ತಲುಪುವ ಮುನ್ನ ದಾರಿಯಲ್ಲಿ ಬುದ್ಧನ ಮಂದಿರ, ಭಾರತೀಯ ದೇವಸ್ಥಾನದ ಜೊತೆಗೆ ಕಣ್ಮನ ಸೆಳೆಯುವ ಜಲಾಶಯ, ಟೀ ಗಾರ್ಡನ್’ಗಳನ್ನ ಭೇಟಿ ನೀಡಿ ಬಂದೆವು. ಇಲ್ಲಿಗೆ ತಲುಪುವ ವೇಳೆಗೆ ಸಾಯಂಕಾಲ ಆರರ ಸಮಯ, ಆಗಲೇ ‘ಧೋ’ ಎಂದು ಮಳೆ ಸುರಿಯಲು ಪ್ರಾರಂಭವಾಗಿತ್ತು. ನಮ್ಮ ಗೈಡ್ ‘ಈ ಮಳೆ ಇಂದು ನಿಲ್ಲುವ ಸಾಧ್ಯತೆ ಕಡಿಮೆ, ಬೇಗ ಮಲಗಿ ನಾಳೆ ಐದು ಗಂಟೆಗೆ ಇಲ್ಲಿಂದ ಹೊರಡಬೇಕು.  ಹೋರ್ಟನ್ ಪ್ಲೈನ್ಸ್ ಕರೆದುಕೊಂಡು ಹೋಗುತ್ತೇನೆ’ ಎಂದರು. ಸರಿ, ಮಳೆಯ ಮುಂದೆ ನಮ್ಮ ಆಟ ಏನು ನಡೆದೀತು? ಹೋಟೆಲ್’ನ ರೂಮ್ ಅತ್ಯಂತ ಸುಂದರವಾಗಿತ್ತು. ರಾತ್ರಿ ಊಟಕ್ಕೆ ಭಾರತೀಯ ತಿನಿಸುಗಳು ಇದ್ದವು. ಸಸ್ಯಾಹಾರಿಗಳಿಗೆ ಶ್ರೀಲಂಕಾ ನಿರಾಸೆ ಮಾಡುವುದಿಲ್ಲ. ಕೆಲವು ಹೋಟೆಲ್’ಗಳಲ್ಲಿ ಸಾರು (ರಸಂ), ಸಾಂಬಾರು, ಅಕ್ಕಿರೊಟ್ಟಿ, ಚಟ್ನಿ ಕೂಡ ತಿನ್ನಲು ಸಿಕ್ಕಿತು. ಶ್ರೀಲಂಕಾದ ಹದವಾದ ಟೀ ಮತ್ತು ಕಾಫಿ ಸವಿಯುವುದೇ ಒಂದು ಮಜಾ.

ಜಗತ್ತಿನ ಕೊನೆ ಅಥವಾ ವರ್ಡ್ಸ್ ಎಂಡ್

ನಮ್ಮ ಏಳು ದಿನದ ಪ್ರವಾಸಕ್ಕೆ ಮುಂಚಿತವಾಗಿ ಕಾರು ಮತ್ತು ಅದನ್ನ್ ಚಲಾಯಿಸಲು ಚಾಲಕ; ಜೊತೆಗೆ ಗೈಡ್ ಆಗಿ ಕೆಲಸ ಮಾಡುವ ಒಬ್ಬ ನುರಿತ ವ್ಯಕ್ತಿ ಬೇಕಾಗಿತ್ತು. ನಮಗೆ ಸಿಕ್ಕ ಡ್ರೈವರ್ ಕಮ್ ಗೈಡ್  ರಾಜ ವಿಕ್ರಮ ದಸನಾಯಕೆ. ಇನ್ನೊಂದು ನಾಲ್ಕು ವರ್ಷದಲ್ಲಿ ಹಿರಿಯ ನಾಗರಿಕ ಪಟ್ಟಏರಲು ಅಣಿಯಾಗುತ್ತಿರುವ ಸಂಭಾವಿತ, ಜೊತೆಗೆ ಸಾಕಷ್ಟು ವಿಷಯಗಳ ತಿಳಿದುಕೊಂಡಿರುವ ಜ್ಞಾನಿ. ಯಾವುದನ್ನೂ ಹೆಚ್ಚು ಉತ್ಪ್ರೇಕ್ಷೆ ಮಾಡದೆ ನಿಧಾನವಾಗಿ ಸ್ಪುಟವಾಗಿ ಇಂಗ್ಲಿಷ್ನಲ್ಲಿ ವಿವರಿಸುತ್ತಿದ್ದರು. ಗುಂಪಿನಲ್ಲಿ ಕಂಡಕ್ಟೆಡ್ ಟೂರ್ ನಾವು ಹೋಗದ ಕಾರಣ ಅಲ್ಲಿ ನಮಗೆ ಸಿಗದ ಫ್ಲೆಕ್ಸಿಬಿಲಿಟಿ. ಬೆಳಿಗ್ಗೆ ನಾಲ್ಕಕ್ಕೆ ಎದ್ದು ನಿತ್ಯ ಕರ್ಮ ಮುಗಿಸಿ ರಮ್ಯಳ ಎಬ್ಬಿಸಿದೆ, ಅವಳ ನಂತರ ಕೊನೆಯಲ್ಲಿ ಅನನ್ಯಳ ಸರದಿ. ‘ಅನ್ನಿ’ ಎಂದ ತಕ್ಷಣ ಯಸ್ ಪಪ್ಪಾ ಎಂದು ಕಿಂಚಿತ್ತೂ ತೊಂದರೆ ಕೊಡದೆ ಎದ್ದಳು, ಹಾಗೆಯೇ ನಮಗಿಂತ ಬೇಗ ತಯಾರಾದಳು. ರಾಜ ವಿಕ್ರಮ ಹೇಳಿದಂತೆ ಐದು ಗಂಟೆಗೆ ನಾವು ಹೋಟೆಲ್ ರಿಸೆಪ್ಶನ್’ನಲ್ಲಿದ್ದೆವು. ಆತ ಮೂರು ನಿಮಿಷ ತಡವಾಗಿ ಬಂದು ನಮ್ಮನ್ನು ಸೇರಿದ. ಹೇಳಿದ ಟೈಮಿಗೆ ಬರುವರು ಬಹಳ ಕಡಿಮೆ ಜನ ಎಂದ. ಹೋಟೆಲ್’ನವರು ನಮಗಾಗಿ ವೆಜ್ ಸ್ಯಾಂಡ್ವಿಚ್ ಜೊತೆಗೆ ಒಂದಷ್ಟು ಹಣ್ಣಿನ ರಸ ತಯಾರಿಸಿ ಪ್ಯಾಕ್ ಮಾಡಿಕೊಟ್ಟರು. ಅದನ್ನ ಪಡೆದು ನುವಾರ ಎಲಿಯಾದಿಂದ ಸುಮಾರು ೨೦ ಕಿಲೋಮೀಟರ್ ದೂರವಿರುವ ಹಾರ್ಟನ್ ಪ್ಲೈನ್ಸ್ ನೋಡಲು ಹೊರೆಟೆವು.

ಹಾರ್ಟನ್ ಪ್ಲೈನ್ಸ್ ಶ್ರೀಲಂಕಾ ದೇಶದ ಮಧ್ಯದಲ್ಲಿದೆ. ಇದೊಂದು ನ್ಯಾಷನಲ್ ಪಾರ್ಕ್. ಸರಿಸುಮಾರು ೭೫೦೦ ಅಡಿ ಎತ್ತರವನ್ನು ಏರಬೇಕಾಗುತ್ತದೆ. ಜಿಂಕೆಗಳು, ಬಣ್ಣಬಣ್ಣದ ಚಿಟ್ಟೆಗಳ ಜೊತೆಗೆ ಇಲ್ಲಿ ವಿವಿಧ ಜೀವಜಂತುಗಳು. ಅಲ್ಲದೆ ವಿವಿಧ ರೀತಿಯ ಮರಗಿಡಗಳನ್ನ ಹೊಂದಿದೆ. ನಮ್ಮ ಗೈಡ್ ರಾಜ ವಿಕ್ರಮ ಅರ್ಧ ಕಿಲೋಮೀಟರ್ ನಮ್ಮ ಜೊತೆ ಬಂದವನು ‘ನಾನು ಹಾರ್ಟ್ ಪೇಶಂಟ್ ಇನ್ನು ಹೆಚ್ಚು ನಡೆಯಲು ಆಗುವುದಿಲ್ಲ, ಇಲ್ಲಿ ನಿಮಗಾಗಿ ಕಾಯುತ್ತೇನೆ. ರೌಂಡ್ ಟ್ರಿಪ್ ೧೨ ಕಿಲೋಮೀಟರ್ ಆಗುತ್ತೆ ಎಂದವನು, ರಸ್ತೆ ಬಹಳ ಕೆಟ್ಟದಾಗಿರುತ್ತದೆ ಹುಷಾರು’ ಎಂದು ಕೂಡ ಸೇರಿಸಿದ. ನಿತ್ಯವೂ ಐದಾರು ಕಿಲೋಮೀಟರ್ ನಡೆದು ಅಭ್ಯಾಸವಿದ್ದ ನಮಗೆ ಆ ಗಳಿಗೆಯಲ್ಲಿ ೧೨ ಕಿಲೋಮೀಟರ್ ಏನು ಮಹಾ ಎನ್ನಿಸಿತು, ಜೊತೆಗೆ ಈತ ಬರೆದಿದ್ದರೆ ಏನಂತೆ? ನಾವು ಹೋಗಿ ಬರುತ್ತೇವೆ ಎನ್ನುವ ಧೈರ್ಯ. ರಾಜ ವಿಕ್ರಮನಿಗೆ ಬೈ ಹೇಳಿ ಹೊರಟೆವು. ನಮ್ಮೊಂದಿಗೆ ಹದಿನೈದು ಯೂರೋಪಿಯನ್ ಮತ್ತು ಅಮೆರಿಕನ್ನರು ಇದ್ದರು. ಮೊದಲ ಎರಡು ಕಿಲೋಮೀಟರ್ ಸಪಾಟು ರಸ್ತೆ! ಹಾಡುತ್ತ ಕುಣಿಯುತ್ತಾ ಸಾಗಿತು. ಬೆಳಿಗ್ಗೆಯ ಎನರ್ಜಿ ಬೇರೆ ಮೈಯಲ್ಲಿ ಹರಿಯುತ್ತಿತ್ತು. ಜೊತೆಗೆ ಆರು ಘಂಟೆ ಮೂರು ನಿಮಿಷಕ್ಕೆ ಸೂರ್ಯನ ಮೊದಲ ಕಿರಣಗಳು ನಮ್ಮ ಸ್ಪರ್ಶಿಸಿ ಪುಳಕ ಉಂಟುಮಾಡಿದ್ದವು. ದಾರಿ ಸಾಗಿದಂತೆ ರಸ್ತೆ ಕಡಿದಾಗುತ್ತಾ ಹೋಯಿತು. ಈ ನ್ಯಾಷನಲ್ ಪಾರ್ಕ್’ನಲ್ಲಿ ಮಿನಿ ವರ್ಡ್ಸ್ ಎಂಡ್, ವರ್ಡ್ಸ್ ಎಂಡ್ ಮತ್ತು ಬೇಕರ್ಸ್ ಫಾಲ್ಸ್ ಎನ್ನುವ ಮೂರು ಮುಖ್ಯ ಆಕರ್ಷಣೆಗಳಿವೆ. ಒಂದು ಗಂಟೆಯ ಅವಧಿಯಲ್ಲಿ ಕಲ್ಲು ಮುಳ್ಳಿನ ದಾರಿಯನ್ನ ಸವೆಸಿ ಮಿನಿ ವರ್ಡ್ಸ್ ಎಂಡ್ ತಲುಪಿದಾಗ ಏನೋ ಸಾಧನೆ ಮಾಡಿದ ಸಂಭ್ರಮ. ಇಲ್ಲಿಯವರೆಗೆ ಬಂದ ದಾರಿಯನ್ನ ಕ್ರಮಿಸಿ ಅಯ್ಯಪ್ಪ ಎಂದಿದ್ದ ನಮಗೆ ಮುಂದಿನ ದಾರಿಯ ಸುಳಿವು ಕೂಡ ಇರಲಿಲ್ಲ. ಒಂದೈದು ನಿಮಿಷ ಅಲ್ಲಿ ನಿಂತು ಫೋಟೋಗಳ ಕ್ಲಿಕ್ಕಿಸಿ ನಡೆಯಲು ಶುರು ಮಾಡಿದೆವು. ಅದು ಇನ್ನೊಂದು ಎತ್ತರಕ್ಕೆ ನಮ್ಮನ್ನ ಕರೆದೊಯ್ಯುತ್ತಿತ್ತು. ಸಾಲದ್ದಕ್ಕೆ ಕಲ್ಲುಮುಳ್ಳುಗಳ ಜೊತೆಗೆ ರಸ್ತೆ ಮರೆಮಾಚಿ ಬೆಳೆದು ನಿಂತ ಗಿಡಗಳು ಸ್ವಲ್ಪ ಆಯಾ ತಪ್ಪಿದರೂ ಪ್ರಪಾತ. ಹೇಗೋ ಕಷ್ಟಪಟ್ಟು ಸಾಗುತ್ತಿದ್ದೆವು. ಅಷ್ಟರಲ್ಲಿ ಕಲ್ಲುಗಳ ಮೇಲೆ ಹೆಜ್ಜೆಯನ್ನ ಅಳೆದು ತೂಗಿ ಇಡುತ್ತಿದ್ದ ರಮ್ಯ ಆಯತಪ್ಪಿ ಬಿದ್ದಳು. ಅವಳ ಎಡಗಾಲು ಬುರ್ರನೆ ಊದಿತು. ನಡೆಯಲು ಆಗದೆ ರಮ್ಯ ಕುಳಿತಳು. ನಮ್ಮ ಜೊತೆ ಬಂದ ಜನರು ಚದುರಿದರು. ಕೊನೆಗೆ ಉಳಿದವರು ನಾವು ಮೂವರು ಮಾತ್ರ. ಹತ್ತು ನಿಮಿಷದಲ್ಲಿ ರಮ್ಯಾಳಿಗೆ ಪರಿಸ್ಥಿತಿಯ ಅರಿವಾಗಿತ್ತು, ನಡೆಯೋಣ ನಡೆ ಎಂದಳು. ಕುಂಟುತ್ತಾ ನಡೆಯಲು ಶುರು ಮಾಡಿದೆವು. ಅನತಿ ದೂರ ಸಾಗಿದ ಮೇಲೆ ರಸ್ತೆ ಬಲಕ್ಕೂ ಮತ್ತು ಎಡಕ್ಕೂ ತೆರೆದುಕೊಂಡಿತ್ತು. ಎತ್ತ ಸಾಗುವುದು? ನಾನು ಬಲಕ್ಕೆ ಹೋಗೋಣ ಎಂದು, ರಮ್ಯಾ ಎಡಕ್ಕೆ ಎಂದಳು. ಕೊನೆಗೆ ನಾನು ಬಲಕ್ಕೆ ಒಂದು ಕಿಲೋಮೀಟರ್ ನಡೆದೆ, ನಡೆದ್ದದ್ದಷ್ಟೇ ಲಾಭ ಅಲ್ಲಿ ಯಾರ ಸುಳಿವಿಲ್ಲ. ರಮ್ಯಾ ಎಡಕ್ಕೆ ಹೋಗೋಣ ಎಂದಳು; ಮತ್ತೆ ವಾಪಸ್ಸು ಹೊರಟೆವು. ಎರಡು ದಾರಿ ವಿಭಜಿಸುವ ಕಡೆಗೆ ಬಂದೆವು ಮತ್ತೆ ರಮ್ಯಾ ಹೇಳಿದ ಕಡೆ ಒಂದರ್ಧ ಕಿಲೋಮೀಟರ್ ನಡೆದೆವು ಮತ್ತೆ ಶೂನ್ಯ ಸಂಪಾದನೆ. ಇಷ್ಟರಲ್ಲಿ ನಾವು ಬಹಳ ತಲ್ಲಣಗೊಂಡಿದ್ದೆವು. ಅನ್ನಿ ಪಪ್ಪಾ ಆರ್ ವೀ ಲಾಸ್ಟ್? ಎಂದಳು. ಆರ್ ವೀ ಗೋಯಿಂಗ್ ಟು ಡೈ? ಎನ್ನುವ ಪ್ರಶ್ನೆಯೂ ತೂರಿಬಂತು. ಕೈಲಿರುವ ಮೊಬೈಲ್ ನೆಟ್ವರ್ಕ್ ಇಲ್ಲದೆ ಒಂದು ಆಟಿಕೆಯಂತೆ ಕಂಡಿತು. ಧ್ವನಿ ಏರಿಸಿ ‘ಯಾರಾದರೂ ಇದ್ದೀರಾ? ಹೆಲ್ಪ್… ಹೆಲ್ಪ್ ಎಂದು ಕೂಗಹತ್ತಿದೆವು. ಕೊನೆಗೆ ರಮ್ಯಾ ರಸ್ತೆ ವಿಭಜಕದ ಬಳಿ ಹೋಗಿ ಕಾಯೋಣ ಯಾರಾದರೂ ಖಂಡಿತ ಬರುತ್ತಾರೆ ಎಂದಳು. ಸರಿ ಎನ್ನಿಸಿ ವಾಪಸ್ಸು ರಸ್ತೆ ವಿಭಜಕದ ಬಳಿ ಬಂದು ನಿಂತೆವು. ಹತ್ತು ಹದಿನೈದು ನಿಮಿಷದಲ್ಲಿ ಒಂದು ಹೆಣ್ಣು ಒಂದು ಗಂಡು ಜೋಡಿ ಬಂದಿತು. ಅವರಿಗೆ ಹಾಯ್ ಹೇಳಿ ನಮ್ಮ ಕಥೆ ಹೇಳಿಕೊಂಡೆವು. ಅವರು, ಪ್ಯಾನಿಕ್ ಆಗುವ ಅವಶ್ಯಕತೆಯಿಲ್ಲ. ನೀವು ಬಲಕ್ಕೆ ಹೋಗಿದ್ದು ಸರಿ ಇತ್ತು ಎಂದರು. ಮತ್ತು ನಮ್ಮೊಂದಿಗೆ ಹೆಜ್ಜೆ ಹಾಕಿದರು. ಅವರು ಅರಬ್ಬೀ ನವದಂಪತಿಗಳು. ಇಪ್ಪತ್ತರ ಹರೆಯದ ಅವರಲ್ಲಿ ಇದ್ದ ಜೋಶ್,  ಅವರ ನಡಿಗೆಯ ವೇಗವನ್ನು ಬೇಡವೆಂದರೂ ಹೆಚ್ಚಿಸುತ್ತಿತ್ತು. ಅನನ್ಯಾಳಿಗೆ ಒಂದು ಚಾಕೊಲೇಟ್ ಬಾರ್ ತೆಗೆದು ಇದನ್ನ ತಿನ್ನು ಶಕ್ತಿ ಬರುತ್ತದೆ ಎಂದರು. ಯಾರೋ ಕಂಡು ಕಾಣದ ಜನ ಬಂದರು ರಸ್ತೆ ತೂರಿದರು, ಚಾಕೊಲೇಟ್ ಕೊಟ್ಟರು. ನಕ್ಕು ಕೈ ಬೀಸಿ ಮುಂದೆ ಹೋದರು. ನಾವು ನಿಧಾನಕ್ಕೆ ವರ್ಡ್ಸ್ ಎಂಡ್ ತಲುಪಿದೆವು. ಅಬ್ಬಾ! ಅದೆಂತಹ ದೃಶ್ಯ. ಅಚಾನಕ್ಕಾಗಿ ರಸ್ತೆ ಕೊನೆಯಾಗುತ್ತದೆ. ಕಣ್ಣು ಹೋಗುವಷ್ಟು ಖಾಲಿ ಜಾಗ ದೂರದಲ್ಲೆಲ್ಲೋ ಇನ್ನೊಂದು ಬೆಟ್ಟ ಕಾಣುತ್ತಿದೆ. ಅಲ್ಲಿನ ನಿಶಬ್ದದ ಶಬ್ದವನ್ನು ಹೌದು ನಿಶಬ್ದದ ಶಬ್ದವನ್ನು ವಿವರಿಸುವುದು  ಹೇಗೆ? ನಿಶಬ್ದದ ನೀರವತೆ ಅನುಭವಿಸಿಯೇ ತೀರಬೇಕು. ಅಲ್ಲಿನ ನೋಟವನ್ನು ಯಾವ ಕ್ಯಾಮರಾ ಕೂಡ ಕಟ್ಟಿಕೊಡಲಾರದು. ಯಾವ ಪದಗಳು ಕೂಡ ಅಲ್ಲಿನ ವರ್ಣನೆ ಮಾಡಲು ಸಾಲದು. ಅದೊಂದು ಅನಂತ ಅನುಭಾವ! ಅದನ್ನು ಅನುಭವಿಸಿಯೇ ಸವಿಯಬೇಕು. ಇಷ್ಟೆಲ್ಲಾ ಕಷ್ಟಪಟ್ಟು ಇಲ್ಲಿಗೆ ಬಂದದ್ದು ಸಾರ್ಥಕ ಅನ್ನಿಸಿತು. ಇನ್ನು ಇಳಿಯುವಿಕೆ ಮಧ್ಯದಲ್ಲಿ ಬೇಕರ್ಸ್ ಫಾಲ್ಸ್ ನೋಡಿಕೊಂಡು ನಮ್ಮ ಕಾರು ತಲುಪುವುದಷ್ಟೇ. ಹೇಳಲು ಮತ್ತು ಕೇಳಲು ಎಷ್ಟು ಸಲೀಸಾಗಿದೆ. ಆದರೆ ನಮ್ಮ ಪ್ರಯಾಣ ಇನ್ನೂ ಮುಗಿದಿರಲಿಲ್ಲ. ಅನನ್ಯ ಬೀಳುವುದು ಬಾಕಿಯಿತ್ತು, ರಮ್ಯಾ ಇನ್ನೊಂದು ಬಾರಿ ಕೆಸರಲ್ಲಿ ಬೀಳುವುದು ಬಾಕಿಯಿತ್ತು. ಇವರ ಜೊತೆಗೆ ಅಲ್ಲಿಂದ ನಮ್ಮ ಜೊತೆಯಾದ ನಾಲ್ವರು ಯೂರೋಪಿಯನ್ ಮಹಿಳೆಯರು ಕೂಡ ಬೀಳುವುದು ಬಾಕಿಯಿತ್ತು.

ಅನನ್ಯ ಇಲ್ಲಿಯವರೆಗೆ ಚಕಾರವೆತ್ತದೆ ನಡೆದವಳು, ಇನ್ನು ನನ್ನಿಂದ ಸಾಧ್ಯವಿಲ್ಲ ಬೇಕಾದರೆ ನನ್ನ ಎತ್ತಿಕೊಂಡು ಹೋಗು ಎಂದು ಕುಳಿತುಬಿಟ್ಟಳು. ನಿಧಾನವಾಗಿ ಅವಳಿಗೆ ಜೀವನದ ಪಾಠ ಅಲ್ಲಿಯೇ ಹೇಳಿಕೊಟ್ಟೆವು. ಅಮ್ಮ ಬಿದ್ದರೂ ಕಾಲು ನೋವಾದರೂ ಆಗೋಲ್ಲ ಎನ್ನದೆ ನಡೆಯುತ್ತಿಲ್ಲವೇ? ವೀ ಶುಡ್ ನೆವರ್ ಗಿವ್ ಅಪ್ ಎನ್ನುವ ಬೋಧನೆ ಮಾಡಿದೆವು. ಪಾಪ ಒಂಬತ್ತರ ಕೂಸು ಬಿದ್ದಳು, ಅತ್ತಳು. ಆದರೆ ಬಾಯಲ್ಲಿ ಮಾತ್ರ ‘ಐ ವಿಲ್ ನೆವರ್ ಗಿವ್ ಅಪ್ ಪಾಪಿ’ ಎನ್ನುವ ಪದ ಮಾತ್ರ ಬಿಡಲಿಲ್ಲ. ನಾನು ಶ್ರೀಲಂಕಾ ನಿರ್ನಾಮವಾಗಿ ಹೋಗಲಿ ಅಂತ ಶಾಪ ಕೊಡುತ್ತೇನೆ ಎಂದು ಆ ಕ್ಷಣದಲ್ಲಿ ಉದ್ವೇಗದಿಂದ ನುಡಿದಳು. ಅಂತೂ ಇಂತೂ ಕಷ್ಟಪಟ್ಟು ನಾಲ್ಕೂವರೆ ತಾಸಿನಲ್ಲಿ ನಮ್ಮ ಸಾಹಸ ಚಾರಣ ಮುಗಿಸಿ ರಾಜ ವಿಕ್ರಮನ ಸೇರಿದಾಗ ನಮಗಾದ ಅನುಭವ ಹೇಳಿಕೊಂಡೆವು. ಆತ ನಾನು ಹೇಳಿದೆ ರಸ್ತೆ ಸರಿಯಿಲ್ಲ ಅಂತ ಎಂದ, ಜೊತೆಗೆ ಮೆಲ್ಲಗೆ ತಿಂಗಳ ಹಿಂದೆ ಸ್ವಿಸ್ ಹುಡುಗಿಯೊಬ್ಬಳು ಸತ್ತಳು ಎಂದ, ನಾರ್ವೆಯ ಮೂವರನ್ನು ಹೇಗೋ ಬಚಾವು ಮಾಡಿದರು. ಇಲ್ಲಿ ನಾಪತ್ತೆ ಆದವರನ್ನು ಹುಡುಕಲು ಹೆಲಿಕ್ಯಾಪ್ಟರ್ ಬಳಸುತ್ತಾರೆ. ಬೇರೆ ದಾರಿಯೇ ಇಲ್ಲ ಎಂದ. ಚಾರಣ ಹೋಗಲು ಬೇಕಾಗುವ ಸಾಮಗ್ರಿಗಳು ಒಂದು ಕ್ಯಾಂಪಸ್ ಯಾವುದೋ ಇಲ್ಲದೆ ಅದ್ಯಾವ ಭಂಡ ಧೈರ್ಯ ನಮ್ಮನ್ನ ಅಲ್ಲಿಗೆ ಹೋಗಲು ಪ್ರೇರೇಪಿಸಿತೊ? ಅದ್ಯಾವ ಶಕ್ತಿ ಅಲ್ಲಿರುವ ಹಾವು ಚೇಳು, ಝರಿಗಳು ನಮ್ಮ ಕಡಿಯದೆ, ಪ್ರಪಾತಕ್ಕೆ ಬೀಳಿಸದೆ ನಮ್ಮ ಸುರಕ್ಷಿತವಾಗಿ ಕರೆತಂದಿತೋ ತಿಳಿಯದು. ಬದುಕಲ್ಲಿ ನಾವೆಷ್ಟೇ ಯಶಸ್ಸು ಪಡೆದಿರಲಿ, ಹಣವಿರಲಿ, ಅಧಿಕಾರವಿರಲಿ ನನ್ನ ಮುಂದೆ ನೀವೇನೋ ಅಲ್ಲ ಎಂದು ಪ್ರಕೃತಿ ನುಡಿದಂತೆ ಭಾಸವಾಯಿತು. ಬದುಕು ನಿಮಗೆ ನಾನು ಕೊಟ್ಟಿರುವ ಭಿಕ್ಷೆ ಸರಿಯಾಗಿ ಬಾಳಿ ಎಂದುಸುರಿದಂತಾಯಿತು. ಮರುದಿನ ಉದ್ದನವಲೆ ನ್ಯಾಷನಲ್ ಪಾರ್ಕ್ ನಮಗೆ ಇನ್ನೊಂದು ಬದುಕಿನ ಪಾಠ ಕಲಿಸಲು ಸಿದ್ಧವಾಗಿತ್ತು. ಅದರ ಎಳ್ಳಷ್ಟೂ ಅರಿವಿಲ್ಲದ ನಾವು ಅಬ್ಬಾ ಬದುಕಿದೆವು ಎಂದು ಹೋಟೆಲ್ ಸೇರಿದೆವು.

ಮುಂದಿನ ಸಂಚಿಕೆಯಲ್ಲಿ ಉದ್ದನವಲೆ ನ್ಯಾಷನಲ್ ಪಾರ್ಕ್ನಲ್ಲಿ ಮೈ ಜುಮ್ಮೆನ್ನಿಸುವ ಅನುಭವವನ್ನ ಹಂಚಿಕೊಳ್ಳುವೆ. ಅಲ್ಲಿಯವರೆಗೆ .. ಅಲ್ಪವಿರಾಮ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!