ಅಂಕಣ

ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು – ಕಾರಣವೇನು? ಪರಿಹಾರವೇನು?

ಹಾಸ್ಟೆಲ್ ವಿದ್ಯಾಭ್ಯಾಸ ನಿಜವಾಗಿಯೂ ವಿದ್ಯಾರ್ಥಿನಿಯರಿಗೆ ಕಷ್ಟವಾಗುತ್ತಿದೆಯೇ ಅಥವಾ ಪ್ರಸ್ತುತ ಶೈಕ್ಷಣಿಕ ಮಾನದಂಡಗಳು ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದೆಯೇ ಎಂಬ ಮೂಲಭೂತ ಪ್ರಶ್ನೆ ಎದುರಾಗುವಂತೆ ಮಾಡುತ್ತಿದೆ ಆಗಾಗ್ಗೆ ವರದಿಯಾಗುತ್ತಿರುವ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು. ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಮತ್ತು ತಾವು ಫೇಲಾಗಿದ್ದೇವೆ ಎಂದು ಅವಮಾನ ಎದುರಿಸುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ತುಂಬಾ ಹಿಂದಿನದ್ದಾದರೆ, ಇತ್ತೀಚಿನ ವರದಿಗಳು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಕುರಿತದ್ದಾಗಿದೆ.  ಹೆತ್ತ ತಾಯಿ, ಸಲಹುವ ತಂದೆ, ಪ್ರೀತಿ ತೋರುವ ಕುಟುಂಬಿಕರು, ನೋವುಗಳಿಗೆ ಸ್ಪಂದಿಸುವ ಸಖ್ಯವರ್ಗ… ಹೀಗೆ ಯಾರೂ ಸಹಿಸದ ಘಟನೆಗಳು, ಆತ್ಮಹತ್ಯೆಗೊಳಗಾಗುವ ಹದಿಹರೆಯದ ಜೀವಗಳ ಕ್ಷಣಿಕ ನಿರ್ಧಾರಕ್ಕೆ ಎಲ್ಲರನ್ನೂ ನೆನೆದೂ ನೆನೆದೂ ಕೊರಗುವಂತೆ ಮಾಡುತ್ತಿವೆ.

 ಯಾವುದೇ ಒಂದು ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆತ್ಮಹತ್ಯೆಗೈದು ಸಾವಿಗೀಡಾದ ಕೂಡಲೇ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುವ ಅಭಿಪ್ರಾಯ ನೇರವಾಗಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ವಿರುದ್ಧವಾಗಿ ಇರುತ್ತದೆ. ಮೇಲ್ನೋಟದ ಅಭಿಪ್ರಾಯ ಸಾಮಾನ್ಯವಾಗಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿ, ಆ ವಿದ್ಯಾಸಂಸ್ಥೆಯ ಹಾಸ್ಟೆಲ್‌ಗಳಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಮೇಲೆ ಅವರ ತಂದೆ-ತಾಯಿ ಅನಗತ್ಯ ಭಯದಿಂದ ಭೀತಿಗೊಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಒಬ್ಬ ವಿದ್ಯಾರ್ಥಿಯ ಅಥವಾ ವಿದ್ಯಾರ್ಥಿನಿಯ ದುಡುಕಿದ ನಿರ್ಧಾರ ಸಾವಿರಾರು ಮಂದಿ ವಿದ್ಯಾರ್ಥಿಗಳ ಹೆತ್ತವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿಬಿಡುತ್ತದೆ. ಮುಂದೆ ಬರುವ ಯಾವುದೇ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬ್ರೇಕಿಂಗ್ ನ್ಯೂಸ್ ಹೆತ್ತವರು ಹೃದಯವನ್ನು ಕೈಯಲ್ಲಿ ಹಿಡಿದು ಗಮನಿಸುವಂತೆ ಮಾಡುತ್ತದೆ.

ಕಾರಣಗಳು

ಕಳೆದ ೨೦೧೦ ರಿಂದ ಇದುವರೆಗೆ ನಡೆದ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿರುವ ಹಲವಾರು ಶಿಕ್ಷಣ ತಜ್ಞರು ಆತ್ಮಹತ್ಯೆಗಳಿಗೆ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನೆಲೆ ಕಾರಣವಲ್ಲ. ಬದಲಾಗಿ ವಿದ್ಯಾರ್ಥಿಗಳು ಹಾಸ್ಟೆಲ್ ಜೀವನಕ್ಕೆ ಒಗ್ಗಿಕೊಳ್ಳದೇ ಇರುವುದು ಮತ್ತು ಅವರ ಮೇಲೆ ಒಳ್ಳೆಯ ಮಾರ್ಕ್ಸ್‌ಗಳಿಸುವಂತೆ ಇರುವ ಒತ್ತಡವೇ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ. ಆರಂಭಿಕವಾಗಿ ಮಾಧ್ಯಮಗಳಲ್ಲಿ ಈ ಆತ್ಮಹತ್ಯೆ ಪ್ರಕರಣಗಳು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದುದಾಗಿಯೂ, ಕಾಲೇಜುಗಳ ಹಾಸ್ಟೆಲ್ ಆಡಳಿತದ ಕಟ್ಟುಪಾಡಿನ ನಿಯಮಗಳು ಕಾರಣವೆಂದೂ ಬಿಂಬಿಸಲಾಗಿತ್ತು. ಆದರೆ ತಜ್ಞರ ಪ್ರಕಾರ ವಿದ್ಯಾರ್ಥಿಗಳಿಗೆ ವಿಪರೀತ ಒತ್ತಡ ಪೋಷಕರ ಕಡೆಯಿಂದಲೇ ಬರುತ್ತದೆ. ಪೋಷಕರು ನೇರವಾಗಿ ಕಾಲೇಜಿನ ಆಡಳಿತದ ಜೊತೆ ಸಂಪರ್ಕವಿರಿಸಿಕೊಂಡು ಕೇವಲ ಮಾರ್ಕ್ಸ್ ಬಗ್ಗೆ ಮಾತ್ರ ಕೇಳುತ್ತಾರೆ ಮತ್ತು ತಮ್ಮ ಮಕ್ಕಳಿಗೆ ಮಾರ್ಕ್ಸ್ ಕೊರತೆಯಾದ ಬಗ್ಗೆ ಮಾತ್ರ ಎಚ್ಚರಿಕೆ ನೀಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಂದುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಖಾಸಗಿ ಕಾಲೇಜೊಂದರ ನಿವೃತ್ತ ಪ್ರಾಂಶುಪಾಲ ಪ್ರೊ. ನಟರಾಜನ್ ಹೇಳುವಂತೆ, ವಿದ್ಯಾಭ್ಯಾಸದ ಶೈಲಿಯೇ ಬದಲಾಗಿದೆ. ಮಕ್ಕಳನ್ನು ಗೂಡಿನಲ್ಲಿ ಕಟ್ಟಿ ಹಾಕಿ ವಿದ್ಯಾಭ್ಯಾಸ ಕೊಡಿಸುವ ಭ್ರಮೆಯಿಂದ ಪೋಷಕರು ಹೊರಗೆ ಬರಬೇಕಾಗಿದೆ. ಹದಿಹರೆಯದ ಮಕ್ಕಳು ದಾರಿ ತಪ್ಪದಂತೆ ನೋಡುವುದೇ ಪೋಷಕರ ಗುರಿಯಾಗಬೇಕಿದೆ. ಮಕ್ಕಳು ತಮಗೆ ಇಷ್ಟಬಂದ ವಿದ್ಯೆಯನ್ನು ಕಲಿಯಲಿ ಎನ್ನುವುದು ಪೋಷಕರ ನಡೆಯಾಗಬೇಕಿದೆ. “ಕೇವಲ ಡಾಕ್ಟರು, ಇಂಜಿನಿಯರು ಮತ್ತು ವಿಜ್ಞಾನಿಗಳನ್ನು ರೂಪಿಸುವುದೇ ಶಿಕ್ಷಣವಾದರೆ ಸಂಗೀತಗಾರ, ಚಿತ್ರ ಕಲಾವಿದ, ಆಟಗಾರ, ಕುಶಲಕರ್ಮಿಗಳಂತಹಾ ವ್ಯಕ್ತಿಗಳು ಹೇಗೆ ಹುಟ್ಟುತ್ತಾರೆ?’ ಎಂದು ಪ್ರಶ್ನಿಸುತ್ತಾರವರು.

ಸಾಮಾಜಿಕ ಕಾರ್ಯಕರ್ತ ಅಜೋಯ್ ಡಿ’ಸಿಲ್ವ ಅವರ ಪ್ರಕಾರ ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ಅಂಕ ಗಳಿಸುವುದಕ್ಕಷ್ಟೇ ವಿಸ್ತೃತವಾದ ಕಾಲೇಜು ಕಟ್ಟಡಗಳು ಇವೆಯೆಂದಾದರೆ ವಾಹನಗಳ ಟೈರ್ ಪಂಕ್ಚರ್ ಆದಾಗ ರಿಪೇರಿ ಮಾಡುವ ವ್ಯಕ್ತಿಗೆ ಬೆಲೆ ಎಲ್ಲಿರುತ್ತದೆ. ದಿನಾ ಶ್ರೀಮಂತರ ಗಾರ್ಡನ್‌ಗೆ ನೀರು ಹಾಕುವ ಕೆಲಸಗಾರ ಎಲ್ಲಿ ಹೋಗಬೇಕು. ಹೀಗಿರುವಾಗ ವಿದ್ಯಾರ್ಥಿಗಳ ಆತ್ಮಹತ್ಯೆಯ ಜೊತೆಗೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನೂ ಪ್ರಶ್ನಿಸಬೇಕು. “ಯಾರಾದರೂ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅಥವಾ ಇತರರ ಶೈಕ್ಷಣಿಕ ಅರ್ಹತೆ ಕೇಳುತ್ತೀರಾ? ಸಂಗೀತಗಾರ ಎ.ಆರ್.ರೆಹಮಾನ್ ಯಾವ ವಿಶ್ವವಿದ್ಯಾನಿಲಯದ ಪದವಿ ಪಡೆದಿದ್ದಾರೆ ಎಂದು ಯಾರಾದರೂ ಪ್ರಶ್ನಿಸುತ್ತಾರಾ?” ಎಂದು ಕೇಳುತ್ತಾರೆ.

ಚೆನ್ನೈ ಮೂಲದ ಮನಶಾಸ್ತ್ರ ಸಂಶೋಧನಾ ವಿಧ್ಯಾರ್ಥಿ ಸ್ಮಿತಾ ಕಿರಣ್ ಅಭಿಪ್ರಾಯದಂತೆ ಹಾಸ್ಟೆಲ್‌ಗಳಲ್ಲಿದ್ದು ವಿದ್ಯಾಭ್ಯಾಸ ನಡೆಸುವ ವಿದ್ಯಾರ್ಥಿಗಳು ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಾರೆ. ಅವರಿಗೆ ಪ್ರೇರಣಾದಾಯಕ ಶಿಕ್ಷಣದ ಕೊರತೆ ಇರುತ್ತದೆ. ಹಾಸ್ಟೆಲ್ ಬಿಟ್ಟು ಹೊರಗೆ ಹೋಗಿ ತಮ್ಮ ಹವ್ಯಾಸದತ್ತ ಗಮನಹರಿಸಲು ಅವಕಾಶ ಇರುವುದಿಲ್ಲ. ಅವರ ಗುರಿಯನ್ನು ಕೇವಲ ಮಾರ್ಕ್ಸ್‌ಗಳಿಸುವ ಕಡೆಗೇ ಮೀಸಲಾಗಿ ಇರಿಸಲಾಗುತ್ತದೆ. ಒಬ್ಬಳು ಸಂಗೀತಾಸಕ್ತೆ ಅಥವಾ ಚೆಸ್ ಆಟಗಾರ್ತಿ ಹಾಸ್ಟೆಲ್‌ನಿಂದ ಹೊರಗಡೆ ಹೋಗಲೂ ಅವಕಾಶ ಇಲ್ಲದಂತೆ ಹಲವಾರು ವಿದ್ಯಾಸಂಸ್ಥೆಗಳು ನಿಯಮಗಳನ್ನು ರೂಪಿಸಿರುತ್ತವೆ. “ ಹದಿಹರೆಯದ ಮಕ್ಕಳಿಗೆ ತಮ್ಮ ಭವಿಷ್ಯದ ಬಗ್ಗೆ ಹಲವಾರು ಗೊಂದಲಗಳಿರುತ್ತವೆ ಮತ್ತು ಅವರಿಗೆ ತಮ್ಮಿಷ್ಟದ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಲು ಅವಕಾಶಗಳ ಕೊರತೆ ಇರುತ್ತದೆ”ಎನ್ನುತ್ತಾರೆ.

ಹಾಗೆಯೇ ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡುವ ಕಾರಣಕೊಟ್ಟು ಪೋಷಕರು ಸೆರೆವಾಸದ ಅನುಭವ ನೀಡುತ್ತಾರೆ ಎನ್ನುವುದು ಮಕ್ಕಳ ಅಭಿಪ್ರಾಯವಾಗಿದೆ. ಈ ವಿಚಾರದಲ್ಲಿ ಮಕ್ಕಳು ತಮ್ಮ ಅಭಿಪ್ರಾಯವನ್ನು ಅಂದರೆ ತಮಗೆ ಭವಿಷ್ಯದಲ್ಲಿ ಏನಾಗಬೇಕು ಎಂಬ ವಿಚಾರವನ್ನು ತಮ್ಮ ಪೋಷಕರಿಗೆ ಸರಿಯಾಗಿ ಮನವರಿಕೆ ಮಾಡಿಲ್ಲ ಅಥವಾ ಪೋಷಕರು ತಮ್ಮ ಮಕ್ಕಳನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎನ್ನುವುದು ಬೆಳಕಿಗೆ ಬರುತ್ತದೆ. “ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರವಲ್ಲ ಎನ್ನುವುದು ಹಳೆಯ ಮಾತಾದರೆ, ಆತ್ಮಹತ್ಯೆಯಿಂದ ಜಗತ್ತು ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಳ್ಳುತ್ತದೆ ಎನ್ನುವ ವಿಚಾರವನ್ನು ಪ್ರಸ್ತುತಪಡಿಸಬೇಕಿದೆ” ಎನ್ನುತ್ತಾರೆ ಸ್ಮಿತಾ ಕಿರಣ್.

ಮಾಡಬೇಕಾದುದೇನು?

ಶೈಕ್ಷಣಿಕ ವ್ಯವಸ್ಥೆ ಬದಲಾಗಲು ಇನ್ನಷ್ಟು ವರ್ಷಗಳು ಬೇಕಾದೀತು. ಆದರೆ ಅದಕ್ಕಿಂತ ಮೊದಲು ಹಾಸ್ಟೆಲ್‌ಗಳಲ್ಲಿ ‘ಜೀವಿಸುವ’ ವಿದ್ಯಾರ್ಥಿಗಳ ಜೊತೆ ನಿಕಟ ಸಂಪರ್ಕದ ಜೊತೆಗೆ ಅವರ ಒಳ್ಳೆಯ ಹವ್ಯಾಸಗಳನ್ನು ಪ್ರೋತ್ಸಾಹಿಸುವ, ಬೇಕು-ಬೇಡಗಳನ್ನು ಅರಿಯುವ ವ್ಯಕ್ತಿಗಳು ಹಾಸ್ಟೆಲ್ ವಾತಾವರಣದಲ್ಲಿರಬೇಕು. ವಾರ್ಡನ್‌ರ ಶಿಸ್ತಿಗಿಂತ ಬದಲಾಗಿ ಅಮ್ಮನ ಪ್ರೀತಿ ನೀಡಿ, ತಂದೆಯ ರೀತಿ ಸಲಹೆ ನೀಡಿ ಸಲಹುವ ಪರಿಸರ ನಿರ್ಮಾಣವಾಗಬೇಕು. ಪೋಷಕರೂ ಕೂಡಾ ಅಂಕಪಟ್ಟಿಯ ಬದಲಿಗೆ ತಮ್ಮ ಮಕ್ಕಳ ಆರೋಗ್ಯದಲ್ಲಿನ ಬದಲಾವಣೆಗಳತ್ತ ಗಮನ ಹರಿಸಬೇಕು. ನೆನಪಿಡಿ: ಶೈಕ್ಷಣಿಕ ಸಾಧನೆಯೇ ಜೀವಮಾನದ ಸಾಧನೆ ಖಂಡಿತಾ ಅಲ್ಲ!

  • ರಾಜೇಶ್ ಶೆಟ್ಟಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!