ಅಂಕಣ

ದೊಡ್ಡವರ ದೊಡ್ಡತನ ಮತ್ತು ಸಣ್ಣವರ ಸಣ್ಣತನ

ಲಾರ್ಡ್ ಮೌಂಟ್ ಬ್ಯಾಟನ್ ನೆನಪಿರಬಹುದು. ಇವರು  ಭಾರತದ ಕೊನೆಯ ವೈಸ್ ರಾಯ್. ಅವರ ಪತ್ನಿ ಎಡ್ವಿನಾ ಕೂಡ ರೋಚಕ ವ್ಯಕಿತ್ವ ಹೊಂದಿದವರು. ಅವರ ಮತ್ತು ನೆಹರುರವರ ಚಿತ್ರಗಳು ಇಂದಿಗೂ ಚರ್ಚೆಗೆ ಒಳಪಡುತ್ತಿವೆ. ಆದರೆ  ಹೇಳಹೊರಟಿರುವ ವಿಷಯ ಈ ದಂಪತಿಗಳದ್ದಲ್ಲ. ಮೌಂಟ್ ಬ್ಯಾಟನ್ ಮತ್ತು ಎಡ್ವಿನಾರವರ ಮಗಳು ಪಮೇಲಾ ಹಿಕ್ಸ್ ರವರದು. ಪಮೇಲಾ ಹಿಕ್ಸ್, ತಂದೆ ಮತ್ತು ತಾಯಿಯ ಕಡೆಯಿಂದ ಹಲವಾರು ದೇಶಗಳ ರಾಜಮನೆತನಕ್ಕೆ ರಕ್ತಸಂಬಂಧ ಹೊಂದಿದವರು. ರಾಣಿ ಎರಡನೇ ಎಲಿಜಬೆತ್ ಮದುವೆಯ ದಿನ, ಇದೆ ಪಮೇಲಾ  ಅಧಿಕೃತವಾಗಿ ಮಧುಮಗಳ ಜೊತೆ ಇರುವುದಕ್ಕೆ ಆಯೋಜಿತವಾಗಿದ್ದರು. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ, ಪಮೇಲಾ ಹಿಕ್ಸ್ ರವರು ಇಂಗ್ಲೆಂಡಿನ ಅತಿ ಪ್ರತಿಷ್ಠಿತ ರಾಜವಂಶಸ್ಥರು ಎಂದು ಮನವರಿಕೆ ಮಾಡುವುದಕ್ಕೆ.

ಜನವರಿ ತಿಂಗಳು 2018ರಲ್ಲಿ, 88 ವರ್ಷದ ಪಮೇಲಾ ಹಿಕ್ಸ್ ಶ್ವಾಸಕೋಶದ ಸೋಂಕಿಗೆ ಒಳಗಾಗಿ ಮನೆಯಲ್ಲಿ ಕುಸಿದು ಬಿದ್ದರು. ಮಗಳು ಇಂಡಿಯಾ ಹಿಕ್ಸ್,  ಇವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆ ಆಸ್ಪತ್ರೆಯ ತುರ್ತುವಿಭಾಗದಲ್ಲೂ ಜನವೋ ಜನ. ಪಮೇಲಾರವರದು ಇಂಗ್ಲೆಂಡ್ ದೇಶದ ಅತಿ ಪ್ರತಿಷ್ಠಿತ ಮತ್ತು ಶ್ರೀಮಂತ ಕುಟುಂಬ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ, ಆಸ್ಪತ್ರೆಯ ನಿಯಮದಂತೆ  ಇವರನ್ನು ಸಾಮಾನ್ಯ ಪ್ರಜೆಯಂತೆ ಸರದಿಯಲ್ಲಿ ತುರ್ತು ವಿಭಾಗದಲ್ಲಿ ಮೊದಲು ಚಿಕಿತ್ಸೆ ನೀಡಲಾಯಿತು. ರೋಗಿಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅಡ್ಮಿಟ್ ಮಾಡಿಕೊಳ್ಳಲು ವೈದ್ಯರು ನಿರ್ಧರಿಸಿದ್ದಾರೆ. ಆದರೆ ಏನುಮಾಡುವುದು? ಆ ಆಸ್ಪತ್ರೆಯಲ್ಲಿ ಯಾವುದೇ ಹಾಸಿಗೆಗಳು ಖಾಲಿ ಇರಲಿಲ್ಲ. ಸರಿಸುಮಾರು 20 ಘಂಟೆಗಳ ಕಾಲ ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿ ಪಮೇಲಾ, ಆಸ್ಪತ್ರೆಯ ಹಾಸಿಗೆ ಖಾಲಿಯಾಗುವವರೆಗೂ  ಕಾದಿದ್ದಾರೆ. ಇಪ್ಪತ್ತು ಘಂಟೆ ಕಾದ ನಂತರ ಒಂದು ಹಾಸಿಗೆ ಅವರಿಗೆ ಸಿಕ್ಕಿದೆ. ನಂತರ ಅವರಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸಾಮಾನ್ಯ ಪ್ರಜೆಯಂತೆ ಇಪ್ಪತ್ತು ಘಂಟೆ ಆಸ್ಪತ್ರೆಯ ಕಾರಿಡಾರಿನಲ್ಲಿ ಕಾದು ಚಿಕಿತ್ಸೆ ಪಡೆದ ಪಮೇಲಾರವರು, ಬಿಡುಗಡೆಯ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಆಸ್ಪತ್ರೆ ಸಿಬ್ಬಂದಿಯ ಕೆಲಸದ ಒತ್ತಡವನ್ನು ಅರಿತಿದ್ದ ಪಮೇಲರವರು, ಪತ್ರಿಕೆಯವರು ಎಷ್ಟೇ ಕೆಣಕಿದರೂ,  ತಮ್ಮ ವೈಯಕ್ತಿಕ ತೊಂದರೆ ಬಗ್ಗೆ, ಬಾಯಿ ತಪ್ಪಿಯೂ ಎಲ್ಲಿಯೂ ದೂರು ಹೇಳಿಕೊಳ್ಳಲಿಲ್ಲ. ಇವರು ಮನಸ್ಸು ಮಾಡಿದ್ದರೆ ತಮ್ಮ ಕೆಲಸವನ್ನು ಪ್ರಭಾವ ಬಳಸಿ ಮಾಡಿಕೊಳ್ಳಬಹುದಿತ್ತು. ಆಸ್ಪತ್ರೆಯ ಆಡಳಿತವೂ ಕೂಡ, ನಿಯಮ ಮುರಿಯದೆ ವಿಶೇಷ ಸೌಲಭ್ಯವನ್ನು ನೀಡದೆ, ಸಾಮಾನ್ಯ ರೋಗಿಯಂತೆ ನಡೆಸಿಕೊಂಡಿತು. ಪಮೇಲರವರು ಕೂಡ, ತಾವು ಆಗರ್ಭ ಶ್ರೀಮಂತ ಮತ್ತು ಪ್ರಭಾವಿ ಕುಟುಂಬ ಎಂಬುದನ್ನು ತೋರಿಸಿಕೊಳ್ಳದೆ, ತಮ್ಮ ಅಧಿಕಾರ ದುರುಪಯೋಗ ಮಾಡದೆ ಸಾಮಾನ್ಯರಂತೆ ಸೇವೆ ಪಡೆದುಕೊಂಡರು. ದೊಡ್ಡವರ ಗುಣ, ಅವರ ಸರಳತನದಲ್ಲಿ ಮತ್ತು ಇತರ ಪ್ರಜೆಗಳಂತೆ ಸಂಸ್ಥೆಗಳ ನಿಯಮ ಪಾಲಿಸುವುದರಲ್ಲಿ ಕಂಡು ಬಂತು. ಇಂತಹದ ಘಟನೆಯನ್ನು ಭಾರತದಲ್ಲಿ ಕಾಣಸಿಗುವುದು ಅಸಾಧ್ಯ.

ಇದಕ್ಕೆ ವ್ಯತರಿಕ್ತವಾದ ಘಟನೆಯೊಂದು ಕರ್ನಾಟದಲ್ಲಿ ನಡೆದಿದೆ. ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಮಹದೇವ್ ರವರಿಗೆ, 18.09.2018  ರಾತ್ರಿ 9.15 ಸಮಯದಲ್ಲಿ ಸಣ್ಣ ಪ್ರಮಾಣದ ಅಸ್ವಸ್ಥತೆ ಕಾಣಿಸಿಕೊಂಡಿದೆ. ಮನೆಯಿಂದ ನೂರು ಮೀಟರ್ ದೂರದಲ್ಲಿರುವ ಸರ್ಕಾರೀ ಆಸ್ಪತ್ರೆಗೆ ಸ್ವತಃ ಹೋಗದೆ, ಒಬ್ಬ ಆಟೋ ಚಾಲಕನ್ನ, ವೈದ್ಯರನ್ನು ಕರೆತರಲು  ಕಳುಹಿಸಿದ್ದಾರೆ. ಅದೇ ರಾತ್ರಿ ಕರ್ತವ್ಯದಲ್ಲಿದ್ದ ಪ್ರಸೂತಿ ತಜ್ಞೆ ಡಾ. ವೀಣಾ ಸಿಂಗ್ ರವರು, ಇಡೀ ಆಸ್ಪತ್ರೆಯ ಒಳರೋಗಿಗಳ ಜವಾಬ್ಧಾರಿ, ತುರ್ತುವಿಭಾಗದ ಕೆಲಸವೂ ಇರುವುದರಿಂದ, ಶಾಸಕರ ಮನೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಅದೂ ಅಲ್ಲದೆ ಯಾವ ಗಳಿಗೆಯಲ್ಲಾದರೂ ಹೆರಿಗೆಯಾಗಬಹುದಾಗಿದ್ದ, ಗರ್ಭಿಣಿಯರು ಆಸ್ಪತ್ರೆಯಲ್ಲಿ ಇದ್ದುದ್ದರಿಂದ, ಕೆಲಸದ ಒತ್ತಡವೂ ಈ ಮಹಿಳಾ ವೈದ್ಯರಿಗೆ ಹೆಚ್ಚಾಗಿಯೇ ಇತ್ತು. ವೈದ್ಯರು ತಮ್ಮ ಮನೆಗೆ ಬಂದು ಚಿಕಿತ್ಸೆ ನೀಡದಿರುವುದು ಶಾಸಕರಿಗೆ ಸಿಟ್ಟು ತರಿಸಿದೆ. ಮಾರನೆಯ ದಿನ ಶಾಸಕರು, ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರೊಂದಿಗೆ, ಆಸ್ಪತ್ರೆಗೆ ಬಂದು  ವೈದ್ಯರೊಂದಿಗೆ ಕೂಗಾಡಿ ಹೋಗಿದ್ದಾರೆ. ದಿನಬೆಳಗಾಗುವುದರೊಳಗೆ ಶಾಸಕರು ಮಾರನೇ ದಿನವೇ ಕೂಗಾಡುವಷ್ಟು ಚೇತರಿಸಿಕೊಂಡಿದ್ದರಿಂದ, ಅವರ ರಾತ್ರಿ ಸಮಯದ ಅಸ್ವಸ್ಥತೆಯ ಗಂಭೀರತೆಯನ್ನು ಊಹಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಶಾಸಕರು ಅಷ್ಟೇ ಚುರುಕಾಗಿ ಎಲ್ಲಾ ವಿಭಾಗಗಳಿಗೆ ಪತ್ರಗಳನ್ನು ಬರೆದು, ವೈದ್ಯರ ದುರ್ನಡತೆಗೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಕರ್ನಾಟಕದಲ್ಲಿ  ಎಷ್ಟು ತ್ವರಿತ ರೀತಿಯಲ್ಲಿ ಕೆಲಸ ನಡೆಯುತ್ತಿದೆ ಎಂದರೆ, ಘಟನೆ ನಡೆದ 15 ದಿನಕ್ಕಿಂತ ಮೊದಲೇ, ಶಿಸ್ತು ಕ್ರಮದ ಜೊತೆಗೆ, ಡಾ ವೀಣಾ ಸಿಂಗ್ ರವರಿಗೆ, ವರ್ಗಾವಣೆ ಭಾಗ್ಯ ಸಿಕ್ಕಿದೆ. ಪಿರಿಯಾಪಟ್ಟಣದ ಜನತೆಗೆ ಪ್ರಸೂತಿ ವೈದ್ಯರಿರದಿದ್ದರೂ ಪರವಾಗಿಲ್ಲ, ಶಾಸಕರ ಗೌರವಕ್ಕೆ ಚ್ಯುತಿ ಬರಬಾರದು ಎಂಬ ಸದುದ್ದೇಶದಿಂದ ಈ ತ್ವರಿತ ಕ್ರಮ ಕೈಗೊಳ್ಳಲಾಗಿದೆ!

ದುರ್ನಡತೆಯ ಬಗ್ಗೆ ಕ್ರಮ ಕೈಗೊಂಡಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ನಡೆಯ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಬೇಕಿದೆ

1) ನೂರು ಮೀಟರ್ ದೂರದಲ್ಲಿರುವ ತಮ್ಮ ನಿವಾಸಕ್ಕೆ ವೈದ್ಯರು ಬರಲಿಲ್ಲ ಎಂದು ದೂರಿರುವ ಶಾಸಕರು, ಅದೇ ನೂರು ಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಏಕೆ ಬರಲಿಲ್ಲ? ನೂರಾರು ರೋಗಿಗಳಿರುವ ಆಸ್ಪತ್ರೆಯನ್ನು ಬಿಟ್ಟು  ವೈದ್ಯರು ಶಾಸಕರ ಮನೆಗೆ ಹೋಗಬೇಕು ಎಂಬ ವಾದ ತರ್ಕಬದ್ಧವಾಗಿದೆಯಾ ಅಥವಾ ಸಾಧಾರಣ ಕಾಯಿಲೆಯಿಂದ ಬಳಲಿದ ಶಾಸಕರು ಆಸ್ಪತ್ರೆಗೆ ಬರಬೇಕು ಎನ್ನುವುದು ತರ್ಕಬದ್ಧವಾಗಿದೆಯಾ?.

2) ಶಾಸಕರ ಮನೆಗೆ ಬಂದು ಚಿಕಿತ್ಸೆ ನೀಡಬೇಕೆಂಬ ನಿಯಮವಿದೆಯೇ? ಹಾಗೇನಾದರೂ ನಿಯವಿದ್ದರೆ, ವೈದ್ಯರು ಹೊರಹೋದ ಸಮಯದಲ್ಲಿ, ಆಸ್ಪತ್ರೆಯ ಒಳರೋಗಿಗಳಿಗೆ ಅಥವಾ ತುರ್ತುವಿಭಾಗದ ರೋಗಿಗಳಿಗೆ ಹಾನಿಯಾದರೆ, ಯಾರು ಹೊಣೆಗಾರರು?

3) ರಾತ್ರಿಸಮಯದಲ್ಲಿ ವೈದ್ಯರನ್ನು ಕರೆಯಲು ಬಂದಿದ್ದ ಆಟೋಚಾಲಕ, ಶಾಸಕನ ಕಡೆಯವನೆಂದು ಮಹಿಳಾ ವೈದ್ಯರಿಗೆ ಹೇಗೆ ಗೊತ್ತಾಗಬೇಕು? ರಾತ್ರಿ ಸಮಯದಲ್ಲಿ, ಆಸ್ಪತ್ರೆಯ ಹೊರಗೆ ಮಹಿಳಾವೈದ್ಯರಿಗೆ ಏನಾದರು ತೊಂದರೆಯಾದರೆ, ಯಾರು ಜವಾಬ್ದಾರರು?

4) ಸಣ್ಣಪುಟ್ಟ ತೊಂದರೆಗೆ ಮನೆಗೆ ಬಂದು ಚಿಕಿತ್ಸೆ ನೀಡದಿರುವುದು ದುರ್ನಡತೆಯಾದರೆ, ಕರ್ತವ್ಯನಿರತ ಮಹಿಳಾ ವೈದ್ಯರ ಮೇಲೆ ಇಪ್ಪತ್ತಕ್ಕಿಂತಲೂ ಹೆಚ್ಚು ಬೆಂಬಲಿಗರೊಂದಿಗೆ ಬಂದು, ಆಸ್ಪತ್ರೆಯಲ್ಲಿ ಕೂಗಾಡುವುದು ಸನ್ನಡತೆಯೇ?

ನಮ್ಮ ರಾಜಕೀಯ ಪುಢಾರಿಗಳು ಸಾಮಾನ್ಯವಾಗಿ ಸರ್ಕಾರೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಸರ್ಕಾರೀ ಆಸ್ಪತ್ರೆಗಳಲ್ಲಿ ಶಿಫಾರಸ್ಸು ಪತ್ರವನ್ನು ಪಡೆದುಕೊಂಡು, ಖಾಸಗಿ ಆಸ್ಪತ್ರೆಗಳಲ್ಲಿ, ಸರ್ಕಾರೀ ಖರ್ಚಿನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಈ ಹಿಂದೆ  ಮಾಜಿ ಅರೋಗ್ಯ ಸಚಿವರು ಕೋಲಾರದಲ್ಲಿ ವಾಂತಿಯಾಗಿದ್ದಕ್ಕೆ, ಕೋಲಾರದಲ್ಲಿ ವಾಂತಿಗೆ ಚಿಕಿತ್ಸೆಗೆ ಸಾಧ್ಯವಿಲ್ಲ ಎಂಬ ಶಿಫಾರಸು ಪತ್ರವನ್ನು ತೆಗೆದುಕೊಂಡು, ಬೆಂಗಳೂರಿನಲ್ಲಿ ದಾಖಲಾಗಿದ್ದರು. ಇಂತಹ ಘಟನೆಗಳ ಹಿನ್ನಲೆಯಲ್ಲಿ ನೋಡಿದಾಗ, ಪಿರಿಯಾಪಟ್ಟಣದ ಶಾಸಕರು ಸರ್ಕಾರೀಆಸ್ಪತ್ರೆಯಲ್ಲಿ, ಅದೂ ಪ್ರಸೂತಿ ತಜ್ಞರ ಕೈಯಲ್ಲಿ ಚಿಕಿತ್ಸೆ ಪಡೆಯುವುದು ದೂರದ ಮಾತು. ಇಂಗ್ಲೆಂಡ್ನಲ್ಲಿ  ಆಂಬುಲೆನ್ಸ್ ನಲ್ಲಿ ಬಂದು, ಇಪ್ಪತ್ತು ಗಂಟೆ ಕಾದು, ಚಿಕಿತ್ಸೆಪಡೆದ 88 ಪಮೇಲಾ ಹಿಕ್ಸ್ ರವರ ನಡೆತೆಯನ್ನು, ನಮ್ಮ ಶಾಸಕರ ನಡೆತೆಯೊಂದಿಗೆ ಹೋಲಿಸಿ ನೋಡಿ. ದೊಡ್ಡವರ ದೊಡ್ಡತನ ಮತ್ತು ಸಣ್ಣವರ ಸಣ್ಣತನ ಕಣ್ಣಿಗೆ ಕಟ್ಟುತ್ತದೆ. ಒಬ್ಬ ಮನುಷ್ಯ ತನ್ನ ಕೆಳಗಿನವರನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ಗುಣ ನಿರ್ಧಾರವಾಗುತ್ತದೆಯೇ ಹೊರತು, ಆತ ತನಗಿಂತ ದೊಡ್ಡವರ ಮುಂದೆ ಹೇಗೆ ನಡೆದುಕೊಳ್ಳುತ್ತಾನೆ ಎಂಬುದರ ಮೇಲೆ ಅಲ್ಲ.  

ಒಂದು ಕಡೆ ಸರ್ಕಾರೀಕೆಲಸಗಳಿಗೆ ವೈದ್ಯರು ಹೋಗುತ್ತಿಲ್ಲ. ಅದರಲ್ಲೂ ಮಹಿಳಾ ಪ್ರಸೂತಿ ವೈದ್ಯರ ಕೊರತೆ ತೀವ್ರವಾಗಿದೆ; ಟೆಂಡರ್ ಮೂಲಕ ತಜ್ಞ ವೈದ್ಯರನ್ನು ನೇಮಿಸಿಕೊಳ್ಳಲು ಸರಕಾರ ಹೆಣಗಾಟ ನಡೆಸುತ್ತಿದ್ದರೆ, ಮತ್ತೊಂದಡೆ ಈಗಿರುವ ವೈದ್ಯರನ್ನು ಕೆಟ್ಟದಾಗಿ ನಡೆಸಿಕೊಳ್ಳಾಗುತ್ತಿದೆ. ಎಷ್ಟೋ ವೈದ್ಯರುಗಳು ರಾಜಕಾರಣಿಗಳ ಹಸ್ತಕ್ಷೇಪದಿಂದ ಬೇಸತ್ತು ಸರಕಾರಿ ಕೆಲಸ ತೊರೆದಿದ್ದಾರೆ. ತಾವು ಕರೆದಾಗ ಬರಲಿಲ್ಲ ಎನ್ನುವ ಒಂದೇ ಕಾರಣಕ್ಕೆ, ತಮ್ಮ ಪ್ರತಿಷ್ಠೆಯನ್ನೇ ದೊಡ್ಡದು ಮಾಡಿ, ಜನರ ಹಿತವನ್ನು ಕಡೆಗಣಿಸಿ ವರ್ಗಾವಣೆ ಮಾಡಿಸಿರುವುದು ಖಂಡನೀಯ. ಇಂತಹದ್ದೇ ಪರಿಸ್ಥಿತಿ ಮುಂದುವರೆದರೆ, ಸರ್ಕಾರೀ ಕೆಲಸಕ್ಕೆ ಯಾವ ವೈದ್ಯರೂ ಬಾರದೆ ಇರುವ ಪರಿಸ್ಥಿತಿ ತಲೆದೋರಬಹುದು. ರಾಜಕಾರಣಿಗಳೇನೋ  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಆದರೆ ಸಾಮಾನ್ಯರ ಗತಿ?

ಒಬ್ಬ ಶಾಸಕನ್ನು ತೃಪ್ತಿಪಡಿಸಲು ಇಡೀ ಸರ್ಕಾರೀಯಂತ್ರವೇ ಬಾಗಿದ ರೀತಿ ಗಾಬರಿ ಹುಟ್ಟಿಸುತ್ತದೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ಪೊಲೀಸ್ ಅಧಿಕಾರಿ ವೈದ್ಯರ ಮೇಲಿನ ಹಲ್ಲೆ ಪ್ರಕರಣದಲ್ಲಿ, ಮಿಕ್ಕ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಳ್ಳಲು ಬಿಡಲೇಇಲ್ಲ. ಅಂತಹ ಒಗ್ಗಟ್ಟು ವೈದ್ಯರಲ್ಲಿ ಕಾಣಿಸುತ್ತಿಲ್ಲ. ಆಧಾರವಿಲ್ಲದ, ಕ್ಷುಲ್ಲಕ ಕಾರಣಗಳಿಗೆ ವೈದ್ಯರನ್ನು ವರ್ಗಾವಣೆಮಾಡಲು, ಆಡಳಿತಾಧಿಕಾರಿ ವೈದ್ಯರುಗಳು ಹಿಂದೆಮುಂದೆ ನೋಡದೆ ಸಹಿ ಹಾಕುತ್ತಾರೆ ಎಂದರೆ, ಇವರುಗಳ ನೈತಿಕಮಟ್ಟ ಅರಿತುಕೊಳ್ಳಬಹುದು. ತಮ್ಮ ಸಹೋದ್ಯೋಗಿಯನ್ನು ಸಕಾರಣವಿದ್ದಾಗಲೂ ರಕ್ಷಿಸಲು ಇವರಿಗೆ ಬೆನ್ನುಮೂಳೆ ಇಲ್ಲದಂತಾಗಿದೆ.

ಇದು ಒಂದು ಸರಕಾರಿ ವೈದ್ಯರ ತೊಂದರೆ ಎಂದು ಸೀಮಿತ ದೃಷ್ಟಿಯಿಂದ ನೋಡುವ ಘಟನೆಯಲ್ಲ. ದೂರದರ್ಶಿತ್ವವಿಲ್ಲದ ರಾಜಕಾರಣಿಗಳು, ತಮ್ಮ ಸ್ವಾರ್ಥಕೋಸ್ಕರ ವ್ಯವಸ್ಥೆಯನ್ನ ಬುಡಮೇಲು ಮಾಡಿರುವ ಘಟನೆ. ಈ ಘಟನೆಯನ್ನು  ಸರ್ಕಾರೀ ವೈದ್ಯರು, ಖಾಸಗಿ ವೈದ್ಯರು ಮತ್ತು ಸಾರ್ವಜನಿಕರು ಒಟ್ಟಿಗೆ ನಿಂತು ಪ್ರತಿಭಟಿಸಬೇಕಿದೆ. ಇಂತಹ ಸಂಕುಚಿತ ಬುದ್ಧಿಯ ಪುಡಾರಿಗಳ ವಿರುದ್ಧ ‘ದಂಗೆ’ ಏಳಬೇಕಾದ ಅವಶ್ಯಕತೆ ಖಂಡಿತ ಇದೆ. ಇಂತಹ ಶಾಸಕರ ನಡತೆಗಳು ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ ಒಳ್ಳೆಯ ಇಮೇಜ್ ತಂದುಕೊಡುವುದಿಲ್ಲ ಎಂಬ ಅರಿವು ಸರ್ಕಾರ ನಡೆಸುವವರಿಗೆ ಇರಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Dayananda Linge Gowda

ರೇಡಿಯೊಲೊಜಿಸ್ಟ್
ಲೇಖಕರು ಮತ್ತು ಕಾದಂಬರಿಕಾರರು

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!