ಅಂಕಣ

ಮೀಟೂ ಅಭಿಯಾನದ ಸುತ್ತಒಂದು ಪ್ರಶ್ನೆ: ಈಗ್ಯಾಕೆ?

‘ಇಷ್ಟು  ವರ್ಷ ಇಲ್ಲದ್ದು ಈಗ್ಯಾಕಂತೆ ಅವಳಗೀ ಆರೋಪ ಮಾಡುವ ಹಟ?’

ಹದಿನಾಲ್ಕು ವರ್ಷದ ಮಗಳಿರುವ ವೃತ್ತಿಯಲ್ಲಿ ವೈದ್ಯೆಯಾಗಿರುವ ಗೆಳತಿಯೊಬ್ಬಳು ಹೀಗೆ ಕೇಳಿದಾಗ ಮಾತಾಡಲು ಏನೂ ತೋಚದೆ ಕೋಪದಿಂದ ಪೋನ್ ಕಟ್ ಮಾಡಿಕೂತೆ. ಎಸ್, ನಾವು ಮಾತಾಡುತ್ತಿದ್ದುದು ಈಗ  ಶುರುವಾಗಿರುವ ಮೀಟೂ ಹೋರಾಟಕ್ಕೆ ನಾಂದಿ ಹಾಡಿದ ತನುಶ್ರೀದತ್ತಾ,  ನಾನಾ ಪಾಟೇಕರ್ ಮೇಲೆ ಮಾಡಿದ ಲೈಂಗಿಕ ಕಿರುಕುಳದ ಆರೋಪದ ಬಗ್ಗೆಯೆ!  ತನುಶ್ರೀ ಎಂಬ ಹೆಣ್ಣು ಮಗಳು ಮಾಡಿದ   ಆರೋಪಕ್ಕೂ ತನಗೂ ಸಂಬಂದವೇ ಇಲ್ಲದಂತೆ ಮಾತಾಡಿದ ಗೆಳತಿಯ ಮೇಲೆ, ಅದಕ್ಕೂ ಮೀರಿ ಅವಳ ಈಗ್ಯಾಕೆಯಂತೆ? ಎಂಬ ಉಡಾಫೆಯ ಮಾತು ಪೋನ್ ಕಟ್ ಮಾಡುವಷ್ಟು ನನ್ನ ಕೆರಳಿಸಿದ್ದು ನಿಜ.

ಅವಳು ಮಾತ್ರವಲ್ಲ ಬಗ್ಗೆ ಮಾತಾಡುವ ಬಹಳಷ್ಟು ಜನರ ಪ್ರಶ್ನೆ ಒಂದೇನೆ?ಇಷ್ಟು ವರ್ಷದ ನಂತರ ಅದನ್ನು ಯಾಕೆಬಹಿರಂಗ ಪಡಿಸುವುದು ಅನ್ನುವುದು? ಹಾಗಾದರೆ  ಒಬ್ಬಳ ಮೇಲೆ ಲೈಂಗಿಕ ಹಲ್ಲೆ ಕಿರುಕುಳ ಆದ ನಂತರ ಎಷ್ಟು ನಿಮಿಷ,ಎಷ್ಟು ಗಂಟೆ, ಎಷ್ಟು ದಿನ, ಎಷ್ಟು ವಾರ, ಎಷ್ಟು ತಿಂಗಳು ಎಷ್ಟು ವರ್ಷಗಳ ಅವಧಿಯಲ್ಲಿ ಅದನ್ನು ಬಹಿರಂಗ ಪಡಿಸಬೇಕು ಮತ್ತೆ   ದೂರು ದಾಖಲು ಮಾಡಬೇಕು ಎನ್ನುವಂತಹ ಮಾನದಂಡಗಳೇನಾದರು ಇವೆಯಾ? ಹಾಗಂತ ಬಹಳ ಜನರನ್ನು ಕೇಳಿದೆ. ಯಾರೂ ಉತ್ತರಿಸಲಿಲ್ಲ. ಅತ್ಯಾಚಾರದಂತಹ ಪ್ರಕರಣಗಳಲ್ಲಿ ಸಾಕ್ಷಿನಾಶವಾಗುವ ಮುಂಚೆ ದೂರು ನೀಡಬೇಕೆನ್ನುವುದು ನಿಜವಾದರು ಮಿಕ್ಕಂತಹ ಪ್ರಕರಣಗಳಲ್ಲಿ ಕಿರುಕುಳಕ್ಕೆ ಒಳಗಾದ ಹೆಣ್ಣುಮಗಳ ವೃತ್ತಿ ಸ್ಥಿತಿ, ವೈವಾಹಿಕ ಸ್ಥಿತಿ, ಕೌಟುಂಬಿಕ ಸ್ಥಿತಿ ಅವಳ ಬದುಕಿನ ಭದ್ರತೆಗಳೆಲ್ಲವು ಯಾವಾಗ ಅದನ್ನು ಅವಳು ಬಹಿರಂಗಗೊಳಿಸಬೇಕೆಂಬುದನ್ನು ನಿರ್ದರಿಸುತ್ತವೆ. ಯಾಕೆಂದರೆ ದುಡಿಯುವ ಹೆಣ್ಣುಮಕ್ಕಳಿಗೆ ಅವರು ಕೆಲಸ ಮಾಡುವ ಕಡೆಯೇ ಇಂತಹ ದಾಳಿಗಳು ನಡೆದಾಗಲೂ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಬಹಿರಂಗಗೊಳಿಸಿ ಕೆಲಸ ಬಿಟ್ಟು ಹೊರಬಂದರೆ  ತಕ್ಷಣಕ್ಕೆ ಬೇರೆಲ್ಲೂ ಉದ್ಯೋಗ ದೊರೆಯುವುದು ಕಷ್ಟ. ಇನ್ನು ಮಾಧ್ಯಮ, ಜಾಹಿರಾತು, ಸಿನಿಮಾದಂತಹ ಕ್ಷೇತ್ರಗಳಲ್ಲಿ ಬಾಯಿ ಬಿಟ್ಟರೆ ಮತ್ತೊಂದು ಅವಕಾಶವನ್ನು ಅಲ್ಲಿ ಆಕೆ ನಿರೀಕ್ಷಿಸುವಂತೆಯೇ ಇರುವುದಿಲ್ಲ, ಮಟ್ಟಿಗೆ ಆಕೆಯ ಚಾರಿತ್ರಹರಣ ಮಾಡಲಾಗುತ್ತದೆ. ಹೊರಗಿರಲಿ ಬಹುತೇಕ ತುಂಬಿದ ಕುಟುಂಬಗಳಲ್ಲಿ ಬಾವ, ಮೈದುನ, ಮಾವ, ದೂರದ ಕಜಿನ್ನುಗಳಿಂದ ನಡೆಯುವ ಇಂತಹ ಪ್ರಕರಣಗಳ ಬಗ್ಗೆಯೂ ಅವಳು ಬಾಯಿಬಿಟ್ರೆ ಮುಂದೆ ಕುಟುಂಬದಲ್ಲಿ ಸಂಸಾರ ನಡೆಸುವುದೇ ದುಸ್ತರವಾಗಿ ಬಿಡುತ್ತದೆ.

ನನಗೆ ಪರಿಚಯವಿದ್ದ ಶ್ರೀಮಂತ ಅವಿಭಕ್ತ ಕುಟುಂಬದಲ್ಲಿ ತಮ್ಮನ ಹೆಂಡತಿಯ ಮೇಲೆ ಕಣ್ಣಿಟ್ಟಿದ್ದ ಅವಳ ಬಾವ ಪದೇ ಪದೇ ಯಾರೂ ಇಲ್ಲದಾಗ ಆಕೆಗೆ ಲೈಂಗಿಕ ಕಿರುಕುಳ ನೀಡುವುದನ್ನು ಮಾಡುತ್ತಿದ್ದ, ಹಿಂದಿನಿಂದ ಹೋಗಿ ತಬ್ಬಿಕೊಳ್ಳುವುದು, ಅಚಾನಕ್ಕಾಗಿ ಮುತ್ತಿಡುವುದು ಹೀಗೆ.  ಮೊದಲೆರಡು ಮೂರು ಬಾರಿ ಸಹಿಸಿಕೊಂಡ ಆಕೆ ಒಂದು ದಿನ ಮನೆಯವರೆಲ್ಲರೂ ಇರುವಾಗ ಬಹಿರಂಗವಾಗಿ ಈವಿಷಯವನ್ನು ತೆರೆದಿಟ್ಟಾಗ ಆಕೆಯ ಅತ್ತೆ ಮಾವನಿಂದ ಆಕೆಗೆ ಮನೆಯ ಮರ್ಯಾದೆ ತೆಗೆದಳೆಂಬ ಅಪವಾದ. ಆಕೆಯ ಗಂಡನಿಂದ ಸಹ  ಇದನ್ನು ಬಹಿರಂಗವಾಗಿ ಹೇಳಿ ನಮ್ಮಣ್ಣನಮನಸ್ಸಿಗೆ ಘಾಸಿ ಮಾಡಿದೆ, ಮುಚ್ಚಿಟ್ಟುಕೊಂಡು ತೆಪ್ಪಗಿದ್ದರೆ ಏನಾಗುತ್ತಿತ್ತೆಂಬ ಬಯ್ಗುಳ. ಇಂತಹ ಸ್ಥಿತಿಯಲ್ಲಿ ಆಕೆ ಯಾವಾಗ ಹೇಳಿದರೇನು ವ್ಯತ್ಯಾಸವಾಗುತ್ತದೆ?

 ಕೇವಲ ವಿಚಾರವೆಂದೇನು ಅಲ್ಲ ಲಿಂಗಭೇದವಿರದೆ ಕಚೇರಿಯಲ್ಲೊ ಇನ್ನೆಲ್ಲೊ ನಮಗೆ ಅವಮಾನಗಳು ಅನ್ಯಾಯಗಳು ಆದಾಗ ನಾವ್ಯಾರು ತಕ್ಷಣಕ್ಕೆ ಪ್ರತಿಕ್ರಿಯಿಸುವುದಿಲ್ಲ.  ಯಾಕೆಂದರೆ ಕ್ಷಣಕ್ಕೆ ಅದರಿಂದ ಹೊರಬರುವುದಷ್ಟೆ ನಮಗೆ ಮುಖ್ಯವಾಗಿರುತ್ತದೆ. ನಂತರ ಪರಿಸ್ಥಿತಿ ತಿಳಿಯಾದಾಗಲೇ ನಾವು ನಡೆದದ್ದನ್ನೆಲ್ಲ ರೀಕಲೆಕ್ಟ್ ಮಾಡಿ ಇನ್ನೊಬ್ಬರ ಮುಂದೆ ಹೇಳಿಕೊಳ್ಳುವುದು. ಇದು ಹೆಣ್ಣು ಗಂಡು ಇಬ್ಬರಿಗೂ ಅನ್ವಯಿಸುತ್ತದೆ.

ಈಗ ಮೀಟೂ ಅಭಿಯಾನದಲ್ಲಿ ತಮ್ಮ ಅನುಭವಗಳನ್ನು ಹೊರಹೇಳುತ್ತಿರುವ ಬಹುತೇಕ ಹೆಣ್ಣುಮಕ್ಕಳು ಸಹ ಅಂತಹದೊಂದು ಆಘಾತದಿಂದ ಹೊರಬಂದು ಈಗ ನಮ್ಮ ಮುಂದೆ  ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿರಬಹುದು.

ಇಂತಹ ಸನ್ನಿವೇಶದಲ್ಲಿ  ‘ಅವನು  ಹಂಗ್ಯಾಕೆಮಾಡಿದ?’ ಅಂತ ಕೇಳಬೇಕೇ ಹೊರತು ಬದಲಿಗೆಇವಳಿಗೆ ಈಗ್ಯಾಕೆ ಹೇಳಿದೆ?’ಅಂತ ಕೇಳುವುದು ತರವಲ್ಲ. ಅಕಸ್ಮಾತ್ ಹಾಗೆ ಇವಳಿಗೆ  ಈಗ ಯಾಕೆ ಅಂತ ಕೇಳುವುದೇ ಅವಳ ಮೇಲೆ ನಾವು ಎಸಗಬಹುದಾದ ಇನ್ನೊಂದು ದೌರ್ಜನ್ಯವಾಗಿಬಿಡಬಲ್ಲುದು.

ಏನು ಹೇಳದೆ ಪೋನ್ ಕಟ್ ಮಾಡಿದ್ದಕ್ಕೆ ಬೇಸರಗೊಂಡಿರಬಹುದಾದ  ವೈದ್ಯೆ ಗೆಳತಿಗೆ ಕರೆಮಾಡಿ ಬೆಳಿಗ್ಗೆ ಕಾಲ್ ಕಟ್ ಮಾಡಿದ್ದಕ್ಕೆ ಸಾರಿಎನ್ನುವಷ್ಟರಲ್ಲಿ ಅವಳೇ ಸಾರಿಕಣೊ ನಾನು ಈಗ್ಯಾಕೆ ಅಂತ ಕೇಳಿದ್ದು ಸರಿಯಲ್ಲ. ಬಹಳಷ್ಟು ಸಾರಿ ನಮಗೆ ಅನ್ಯಾಯವಾದಾಗ ತಕ್ಷಣಕ್ಕೆ  ಏನು ಮಾಡಬೆಕೆಂಬುದು ಗೊತ್ತಾಗಲ್ಲ ಅನ್ನೋದು ಸತ್ಯ ಕಣೊ. ನಾನು ಓದುವಾಗ ಇಂಟರ್ನಲ್ ಮಾರ್ಕ್ಸ್ ಹಾಕುವಾಗ ತಮ್ಮ ಕೊಠಡಿಯಲ್ಲಿ ನನ್ನ ಒಬ್ಬಳೇ ನಿಲ್ಲಿಸಿಕೊಂಡ ಫ್ರೊಫೇಸರೊಬ್ಬರು, ‘ನೀನು ಹೂ ಅಂದರೆ ಔಟ್ ಆಫ್ ಔಟ್  ಹಾಕುತ್ತೇನೆಅಂದಿದ್ದರು. ನಾನು ಏನೂ ಹೇಳದೆ ಅವರ ರೂಮಿಂದ ಹೊರಬಂದುಬಿಟ್ಟಿದ್ದೆ.ಮತ್ತದನ್ನು ಇವತ್ತಿವರೆಗು ಯಾರಿಗೂ ಹೇಳಿರಲಿಲ್ಲ. ಅಕ್ಷರಶ: ಅದನ್ನು ಮರೆತೇ ಬಿಟ್ಟಿದ್ದೆ. ಇವತ್ತು ಬೆಳಿಗ್ಗೆ ನೀನು ಅಬ್ರಪ್ಟಾಗಿ ಕಾಲ್ ಕಟ್ ಮಾಡಿದಾಗ ತಕ್ಷಣ ಅದು ನೆನಪಾಯಿತು.  ನಾನು ಯಾವುದಕ್ಕೆ ಹೂ ಅನ್ನಬೇಕಿತ್ತು ಅನ್ನುವುದನ್ನು ಅವತ್ತೇ   ಮನುಷ್ಯನನ್ನು ಕೊರಳಪಟ್ಟಿ ಹಿಡಿದು ಕೇಳಬೇಕಿತ್ತು ಅಂತ ಹೀಗನ್ನಿಸುತ್ತಿದೆ. ಒಂದೇ ಉಸಿರಿಗೆ ಒದರಿದವಳಿಗೆ ಈಗ ನೀನು ಮೀಟೂ ಅಂತ ಅನುಭವ ಬರಿ ಅಂದೆ. ಅದಕ್ಕವಳು ಬಡ್ಡಿಮಗ ಸತ್ತು ಬಹಳಾನೇ ವರ್ಷವಾಯಿತು ಬಿಡು ಅಂತ ಪೋನಿಟ್ಟಳು.

ಬಹುಶ: ನನಗನಿಸುತ್ತೆ ಯಾವುದೇ  ಪ್ರತಿಭಟನೆ ಹೋರಾಟಕ್ಕೆ ನಮ್ಮೊಳಗಿನ ಸುಪ್ತ ಮನಸ್ಸು ಸದಾ ಕಾಯುತ್ತಿರುತ್ತದೆ. ಅದಕ್ಕೊಂದು ನಿಮಿತ್ತ ಮಾತ್ರದ ಪ್ರಚೋದನೆ ದೊರೆತೊಡನೆ ನಮ್ಮೊಳಗಿನ ಆಕ್ರೋಶಗಳು ಹೊರಹೊಮ್ಮುತ್ತವೆ  ಅನ್ನಿಸುತ್ತದೆ. ಈಗ ನಮ್ಮ ಹೆಣ್ಣುಮಕ್ಕಳಲ್ಲಿ ಅಂತಹದೊಂದು ಕಿಚ್ಚು  ಹೊತ್ತಿಕೊಂಡಿದೆ. ಬೆಂಕಿಯಿಂದ ಸಮಾಜದ  ಕಾಮುಕ ಮನಸ್ಥಿತಿಯಲ್ಲಿ ಕಿಂಚಿತ್ತಾದರೂ ಬದಲಾವಣೆಯಾದರೆ ಸಾವಿರಾರು ಹೆಣ್ಣುಮಕ್ಕಳ ಮೀಟೂ ಹೋರಾಟಕ್ಕೆ ಜಯ ಸಿಕ್ಕಂತೆ.

  • ಕು..ಮಧುಸೂದನರಂಗೇನಹಳ್ಳಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!