Featured ಅಂಕಣ

ನಮ್ಮೂರಿನ ಡಿವಿಜಿ ಕರಿಂಗಾಣ ಡಾಕ್ಟರು

ನನ್ನ (ಈಗಿನ) ವೃತ್ತಿ ಮತ್ತು ಪ್ರವೃತ್ತಿಯಾದ ಕೃಷಿ, ಸಸ್ಯಾಸಕ್ತಿಗಳ ಕಾರಣದಿಂದ ನನಗೆ ಕೆಲವು ಸ್ನೇಹಿತರಿದ್ದಾರೆ. ಅವರಲ್ಲಿ ಅತ್ಯಂತ ಹಿರಿಯರೆಂದರೆ ಕರಿಂಗಾಣ ಡಾ| ಕೆ.ಯಸ್. ಕಾಮತರು. ಕೆ.ಯಸ್ ಎನ್ನುವುದು ಕರಿಂಗಾಣ ಶ್ರೀನಿವಾಸ ಎನ್ನುವುದರ ಹೃಸ್ವರೂಪ. ಕಾಮತರು ಆಯುರ್ವೇದ ಪಂಡಿತರು, ಅಲೋಪತಿ ವೈದ್ಯ, ಸಸ್ಯಜ್ಞಾನಿ, ಕೃಷಿಕ, ರಸಜ್ಞ, ಇತಿಹಾಸಕಾರ, ವಾಗ್ಮಿ ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ತತ್ತ್ವಜ್ಞಾನಿ. ಇವೆಲ್ಲಕ್ಕಿಂತ ಹೆಚ್ಚಾಗಿಎಂದು ಹೇಳಿದ್ದೇಕೆಂದರೆ ಒಂದು ವಿಷಯಕ್ಕೆ ನಾವು ಸ್ಪಂದಿಸುವಾಗ ಒಳದೃಷ್ಟಿ ಇದೆಯೇ ಇಲ್ಲವೇ ಎನ್ನುವುದು ಬಹಳ ಮುಖ್ಯವೆನಿಸುತ್ತದೆ. ಅವರಿಗೆ ಈಗ ಸುಮಾರು ಎಂಭತ್ತು ಚಿಲ್ಲರೆ ವಯಸ್ಸಿರಬಹುದು. ಅವರಿಂದ ನಾನು ಎಷ್ಟೊಂದು ಸಣ್ಣವನೆಂದರೆ ಅವರನ್ನು ಸ್ನೇಹಿತರೆನ್ನುವ ಯೋಗ್ಯತೆಯಿಲ್ಲದಷ್ಟು. ಅವರ ಮಗನೇ ಒಮ್ಮೆ ಕಾಮತರಲ್ಲಿ ಅಪ್ಪಾ ನಿಮಗೆ ಇಲ್ಲಿಯವರೆಗೆ ನಿಮ್ಮ ಮಗನ ವಯಸ್ಸಿನ ಸ್ನೇಹಿತರಿದ್ದರು, ಈಗ ಮೊಮ್ಮಕ್ಕಳ ವಯಸ್ಸಿನ ಸ್ನೇಹಿತರು ಸಿಗುತ್ತಿದ್ದಾರೆ!ಎಂದು ತಮಾಷೆ ಮಾಡಿದ್ದರಿಂದ ನಾನೊಬ್ಬ ಸ್ನೇಹಿತ ಎಂದುಕೊಳ್ಳುವ ದಾರ್ಷ್ಟ್ಯ ತೋರಬಹುದೇನೋ.

ಸ್ವಾಭಾವಿಕತೆ

ಅವರಿಗೆ ಹೆಚ್ಚುಕಮ್ಮಿ ಅಂಕಿತನಾಮವೇ ಆಗಿರುವ ಕರಿಂಗಾಣ ಎಂಬ ಪ್ರದೇಶ ನಮ್ಮ ಕಜೆಬೈಲಿಗೆ ಅಂಟಿಕೊಂಡೇ ಇದೆ; ಕಜೆ ಮುಗಿಯುತ್ತಿದ್ದಂತೆ ಕರಿಂಗಾಣ. ಕಜೆ, ಕರಿಂಗಾಣ, ಪತ್ತುಮುಡಿ, ನಗ್ರಿ – ಇವೆಲ್ಲ ಒಂದೊಕ್ಕೊಂದು ಜೋಡಿಕೊಂಡಿರುವ ಭೂಪ್ರದೇಶಗಳು. ಈಗ ರಸ್ತೆಗಳು ಇವನ್ನು ಒಡೆದು ಇವುಗಳ ಜೋಡಣೆ ನಮಗೆ ತಿಳಿಯದಂತೆ ಮಾಡಿವೆ. ಆದರೆ ಇವು ಒಂದೇ ಕಾಡಿನ ಭಾಗಗಳೆಂದು ನಮಗೆ ತಿಳಿಸುವ ಅಂಶವೆಂದರೆ ಇವುಗಳಲ್ಲಿ ಹರಡಿರುವ ಸಸ್ಯಜಾತಿಗಳು – ಮುಖ್ಯವಾಗಿ ಸಿರಿಹೊನ್ನೆ ಎಂಬ ಸ್ವಲ್ಪ ವಿರಳವೇ ಎನ್ನಬಹುದಾದ ಮರಜಾತಿ. ಈ ಮರ ಕಜೆ, ಕರಿಂಗಾಣ, ಪತ್ತುಮುಡಿ, ನಗ್ರಿಯಲ್ಲೆಲ್ಲ ಸಾಕಷ್ಟು ಇದೆ. ಚಂದಳಿಕೆ ಮರವೂ ಇಲ್ಲೆಲ್ಲ ಕಾಣಸಿಗುವಂಥದ್ದು, ಕರಿಂಗಾಣದಲ್ಲಂತೂ ಅಲ್ಲಲ್ಲಿ.

ತಮ್ಮ ದಿನದ ವೈದ್ಯವೃತ್ತಿ ಮುಗಿಸಿ ಕಾಲ್ನಡಿಗೆಯಲ್ಲಿ ಕುಕ್ಕಾಜೆಯಿಂದ ತಮ್ಮ ಮನೆಗೆ ಶರ್ಟು, ದೊಗಳೆ ಪ್ಯಾಂಟು ಧರಿಸಿ ಒಂದು ಬ್ಯಾಗು ಹಿಡಿದು ಕಾಮತರು ಬರುತ್ತಿದ್ದುದನ್ನು ನಾನು ನನ್ನ ಎಲಿಮೆಂಟರಿ ಶಾಲಾ ದಿನಗಳಿಂದ ಒಮ್ಮೊಮ್ಮೆ ನೋಡಿದ್ದೆ. ಆಗ ಅವರಿಗೆ ಸುಮಾರು ಐವತ್ತು ವರ್ಷಗಳಿದ್ದಿರಬಹುದು. ಅದಾಗಿ ಸುಮಾರು 15-16 ವರ್ಷಗಳೇ ಕಳೆದ ಮೇಲೆ ಅವರಿಗೆ ಸುಪರಿಚಿತವಾದ ‘ಮರಿಕೆ’ ಎಂಬ ಮನೆಯ ಮಗಳೊಂದಿಗೆ ನನ್ನ ಮದುವೆಯಾಯಿತು. ಮದುವೆಗೆ ಕಾಮತರು ಬಂದಿದ್ದಿರಬೇಕು. ಮದುವೆಯಾದ ವರ್ಷ ಒಂದು ಸಮಾರಂಭದಲ್ಲಿ ಸಿಕ್ಕಿದಾಗ ವಿಶ್ವಾಸದಿಂದ ಮಾತನಾಡಿ ನಮ್ಮ ಮಧ್ಯೆ ಹೋಗಿಬರುವಂತಹ ಸ್ನೇಹಸಂಬಂಧ ಇರಲಿ ಎಂದು ಆಶಿಸಿದ್ದರು. ಅದು ಅವರಂದಂತೆಯೇ ಆಯಿತು. ತದನಂತರ ನಾನು ಅದೆಷ್ಟೋ ಬಾರಿ ಅವರಲ್ಲಿಗೆ ಹೋಗಿ ಬಂದಿದ್ದೇನೆ; ಅವರ ಕುಟುಂಬದ ಸ್ನೇಹವಿಶ್ವಾಸದ ಸುಖವನ್ನು ಅನುಭವಿಸಿದ್ದೇನೆ.

ಕಾಮತರು ಬೆಳೆದು ಬಂದ ಹಾದಿ

ಅವರದು ಸುದೀರ್ಘ ವಿದ್ಯಾಭ್ಯಾಸ. ಆರಂಭದಲ್ಲಿ ಕೆಲವು ವರ್ಷ ಸಂಸ್ಕೃತ ಕಲಿತು ಬಳಿಕ ೪ ವರ್ಷದ ಆಯುರ್ವೇದದ ಅಭ್ಯಾಸ. ಆಯುರ್ವೇದ ಕಲಿತ ಮೇಲೆ ಹಲ್ಲು ಕೀಳುವಷ್ಟೂ ಧೈರ್ಯ ಬರಲಿಲ್ಲವೆಂದು ಅಲೋಪತಿಗೆ ಸೇರಿದೆನೆಂದು ಅವರು ನನ್ನಲ್ಲಿ ಅಂದರು. ಹಾಗೆಂದು ಆಯುರ್ವೇದದ ಬಗ್ಗೆ ಅವರಿಗೇನೂ ಅನಾದರ ಇಲ್ಲ. 23ನೇ ವರ್ಷಕ್ಕೆ ಪೀಯೂಸಿ ಮುಗಿದ ಮೇಲೆ ನಾಲ್ಕು ವರ್ಷ ಅಲೋಪತಿ ವ್ಯಾಸಂಗ ಮಾಡಿದರು. ಮುಂದಿನ ೨೪ ವರ್ಷಗಳ ಕಾಲ ಮಂಚಿ ಗ್ರಾಮದ ಕುಕ್ಕಾಜೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು.

ಕಾಮತರ ಕುಟುಂಬದ ಪೂರ್ವಜರ ವೃತ್ತಿ ಲೇವಾದೇವಿ ವ್ಯವಹಾರ. ಹಿಂದೆ ನನ್ನ ಅಜ್ಜನ ತಂದೆ (ಕಜೆ ರಾಮಕೃಷ್ಣ ಭಟ್ಟರು) ಕಾಮತರ ತಂದೆಯವರಿಂದ ಸಾಲ ಪಡೆದಿದ್ದಿರಬೇಕು. ನನ್ನಜ್ಜಿ ಇಂದಿಗೂ ಕರಿಂಗಾಣ ಎಂಬ ಪ್ರಸ್ತಾಪ ಬಂದಾಗಲೆಲ್ಲ ನಮಗೆ ಕಮ್ತಿಯವರಲ್ಲಿ ಏಳುಸಾವಿರ ರೂಪಾಯಿ ಸಾಲವಿತ್ತು ಎಂದು ತಪ್ಪದೇ ನೆನೆಯುತ್ತಾರೆ. ನಾನು ಈ ಬಗ್ಗೆ ಕಾಮತರಲ್ಲಿ ವಿಚಾರಿಸಲಿಲ್ಲ. ಅವರಿಗೆ ಇದು ಗೊತ್ತಿರಬಹುದು. ಏಕೆಂದರೆ ನೂರಿನ್ನೂರು ವರ್ಷಗಳ ಲೆಕ್ಕಪತ್ರಗಳು, ಲೆಡ್ಜರುಗಳು ಅವರಲ್ಲಿ ಇಂದಿಗೂ ಕಾಪಿಡಲ್ಪಟ್ಟಿವೆ. ಲೇವಾದೇವಿ ವ್ಯವಹಾರದ ವಂಶವಾಹಿಯಿಂದ ಡಾ| ಕಾಮತರು ಪಡೆದುದೆಂದರೆ ನಿಖರ ನೆನಪಿನ ಶಕ್ತಿ; ಹಿಂದಿನಪ್ರತಿಯೊಂದು ಘಟನೆಗಳನ್ನು ಇಸವಿ, ಲೆಕ್ಕಾಚಾರದ ಸಹಿತ ಬಣ್ಣಿಸುವ ಸಾಮರ್ಥ್ಯ. ಅವರ ಈ ಕಥೆಗಳು ಬಹಳ ಆಸಕ್ತಿಕರವಾಗಿರುತ್ತವೆ. ಒಂದು ರೀತಿಯಲ್ಲಿ ಹೇಳುವುದಾದರೆ ಅವರು ಹೇಳುವುದೆಲ್ಲ ಒಂದೊಂದು ಕಥೆಯಂತೆಯೇ ಇರುತ್ತದೆ. ಒಂದೆರಡು ಕಥೆಗಳನ್ನು (ನನಗೆ ನೆನಪಿದ್ದಂತೆ) ಹೇಳುತ್ತೇನೆ ಕೇಳಿ.

ಕರಿಂಗಾಣದ ಮನೆ ಒಂದು ನಿಜವಾದ ಗುತ್ತಿನ ಮನೆ. ಈಗ ‘ಗುತ್ತು’ ಎಂಬ ಶಬ್ದ ದಕ್ಷಿಣಕನ್ನಡದಲ್ಲಿ ಗೌರವವನ್ನು ಗಳಿಸಿಕೊಡುವುದೆನ್ನುವ ಕಾರಣಕ್ಕೆ ಎಲ್ಲರೂ ತಮ್ಮ ಮನೆಹೆಸರಿನ ಮುಂದೆ ಒಂದು ‘ಗುತ್ತು’ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ ಜಮೀನುದಾರಿಕೆಯ ಗುತ್ತಿನ ಮನೆಗಳಿಗೆ ಒಂದು ನಿರ್ದಿಷ್ಟ ವಾಸ್ತು, ಮನೆಯೆದುರಿಗೆ ಬೇಸಾಯದ ಗದ್ದೆ, ಮನೆಯ ಒಳಗೆ ಒಂದು ಭೂತದ ಚಾವಡಿ – ಇವಿಷ್ಟು ಇರುವುದು ಅನಿವಾರ್ಯವಂತೆ. ಅದು ‘ಗುತ್ತು’ ಎಂಬುದರ ಡೆಫಿನಿಶನ್. ಹೊರ ಆವರಣ , ಒಳಗೆ ಅಂಗಳ, ಮನೆ, ನಡು ಅಂಗಳದ ವಿನ್ಯಾಸ.

ಗುತ್ತಿನ ಮನೆಯ ಗತ್ತು – ಮನೆ ಎದುರು ಗದ್ದೆ

 

ಭೂತದ ಉಜ್ಜಾಲು (ಉಯ್ಯಾಲೆ)

ಅವರ ಮನೆಯಲ್ಲಿ ಸ್ವಾತಂತ್ರ್ಯ ಪೂರ್ವದ ಬಾಸೆಲ್ ಮಿಷನ್ ನೆಲಹಾಸು ಟೈಲ್ಸ್ ಗಳು ಇವೆ. ಅದನ್ನು ಹಾಸಿದ ಇಸವಿ ಸುಮಾರು 1906 ಎಂದು ಅವರು ಹೇಳಿದ ನೆನಪು. ಈ ಇಸವಿಗೊಂದು ತರ್ಕ ಇದೆ. ಹಿರಿವಯಸ್ಸಿನ ಮೇಸ್ತ್ರಿಯೊಬ್ಬರು ಕಾಮತರ ಮನೆಗೆ ಇತ್ತೀಚೆಗೆ (ಅಂದರೆ ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ಅಂದುಕೊಳ್ಳಿ) ಯಾವುದೋ ಕೆಲಸಕ್ಕೆ ಬಂದಿದ್ದರಂತೆ. ಅವರಿಗೆ ಕಾಮತರ ಮನೆಯ ಗದ್ದೆಯ ಅಂಚಿನಿಂದ ನಡೆದು ಬರುತ್ತಲೂ ತಾನಿಲ್ಲಿಗೆ ಈ ಹಿಂದೆ ಬಂದಿದ್ದೇನೆ ಎಂಬ ನೆನಪಿನ ಮರುಕಳಿಕೆಯಾಯಿತಂತೆ. ಬಹಳ ಹಿಂದೆ ತನ್ನ ಬಾಲ್ಯದಲ್ಲಿ ಆ ಮೇಸ್ತ್ರಿ ತನ್ನ ತಂದೆಯೊಂದಿಗೆ ಬಾಲಮೇಸ್ತ್ರಿಯಾಗಿ ಪರಿಚಾರಿಕೆ ಮಾಡುತ್ತಿದ್ದವರು. ಆಗ ಅವರಿಲ್ಲಿ ಬಂದಿದ್ದಿರಬೇಕು. ಆಮೇಲೆ ಅದೇನೋ ಘಟನೆಗಳು ನಡೆದು ಅವರು ದಕ್ಷಿಣ ಆಫ್ರಿಕಾಕ್ಕೆ ಮೇಸ್ತ್ರಿಕೆಲಸದ ಮೇಲೆ ಹೋದರಂತೆ(ಸ್ವಾತಂತ್ರ್ಯ ಪೂರ್ವದ ಕಾಲ ಅದು, ಬ್ರಿಟಿಷರು ದಕ್ಷಿಣ ಆಫ್ರಿಕಾದಲ್ಲೂ ವಸಾಹತುಮಾಡಿದ್ದರು). ಅಲ್ಲಿ ಬಹುವರ್ಷ ದುಡಿದು ಅದೇಕೋ ಏನೋ ದುಡ್ಡನ್ನು ಕಳೆದುಕೊಂಡು ಮತ್ತೆ ಭಾರತಕ್ಕೆ ಬಂದರಂತೆ. ಮತ್ತೆ ಅದೇ ಕರಿಂಗಾಣ ಮನೆಗೆ ೫೦-೬೦ ವರ್ಷ ಕಳೆದು ಬಂದಾಗ ಅವರಿಗೆ ತಾನಲ್ಲಿಗೆ ಈ ಹಿಂದೆ ಬಂದುದು ನೆನಪಾಯಿತಂತೆ. ಆ ಮೇಸ್ತ್ರಿಯ ವಿವರಣೆಯ ಮೇಲೆ ಕಾಮತರು ಹಿಂದಿನ ಮನೆಕೆಲಸ ನಡೆದುದರ ಇಸವಿ ಲೆಕ್ಕಾಚಾರ ಮಾಡಿದ್ದಾರೆ. ಇದೊಂದು ಸಣ್ಣಕಥೆ. ಅವರ ಮನೆಯ ರಿಪೇರಿಯ ವಿವರ ನಮಗೆ ಮುಖ್ಯವೋ ಅಮುಖ್ಯವೋ, ಆದರೆ ಅಷ್ಟು ಸಣ್ಣ ಎಳೆಯಿಂದ ಐದುನಿಮಿಷದ ಆಸಕ್ತಿಕರ ಮಾತುಕತೆಯಂತೂ ಆಗುವುದಷ್ಟೆ? ಅದು ಕಾಮತಜ್ಜನನ್ನು ಭೇಟಿಯಾದಾಗ ಸಿಗುವ ಸುಖ.

ಬಾಸೆಲ್ ಮಿಷನ್ ನೆಲಹಾಸು (ಟೈಲ್ಸ್)

ನಾನೊಮ್ಮೆ ಅವರ ಮನೆಗೆ ಸಂಜೆಯ ಹೊತ್ತಿಗೆ ಹೋಗಿ ಪಟ್ಟಾಂಗ ಹೊಡೆಯುತ್ತಾ ಕುಳಿತೆ. ಗಂಟೆ ಸುಮಾರು ಏಳಾಗುವ ಹೊತ್ತಿಗೆ ನಾನಿನ್ನು ಹೊರಡುವೆನೆಂದೆ. ಅದಕ್ಕೆ ಕಾಮತಜ್ಜ “ತಾನೂ ಅದೇ ಹೇಳುವವನಿದ್ದೆ – ಒಂದೋ ಇನ್ನು ರಾತ್ರಿಗೆ ಉಳಿಯಬೇಕು, ಅಥವಾ ಹೊರಡುವುದು ಒಳ್ಳೆಯದು” ಎಂದರು. ಈ ಮಾತಿನ ಹಿನ್ನೆಲೆಯಲ್ಲೂ ಒಂದು ಕಥೆ ಹೇಳಿದರು. ಪತ್ತುಮುಡಿ ಪಟೇಲರಿಗೂ ಕಾಮತರ ಹಿರಿಯರಿಗೂ ಬಹಳ ಸಖ್ಯವಿತ್ತಂತೆ. (ಪತ್ತುಮುಡಿ ಮತ್ತು ನೂಜಿಪ್ಪಾಡಿ ಮಂಚಿಗ್ರಾಮದ ಎರಡು ಪ್ರಸಿದ್ಧ ಕೋಟಸ್ಥ ಬ್ರಾಹ್ಮಣಮನೆತನಗಳು. ಕಾಮತರ ಕಥೆಯಲ್ಲಿ ಬಂದುದು ಪತ್ತುಮುಡಿಯೋ ನೂಜಿಪ್ಪಾಡಿಯೋ ನನಗೆ ನೆನಪಿಲ್ಲ. ಆದರೆ ಇಲ್ಲಿ ಕಥೆಯಷ್ಟೇ ಮುಖ್ಯವಾದ್ದರಿಂದ ಮಾಹಿತಿಯ ಸತ್ಯಾಸತ್ಯತೆಗಳು ಅಮುಖ್ಯ). ಆ ಹಿರಿಯರೊಮ್ಮೆ ಕರಿಂಗಾಣಕ್ಕೆ ಬಂದು ಮಾತನಾಡುತ್ತಾ ರಾತ್ರಿಯವರೆಗೆ ಕುಳಿತುಬಿಟ್ಟರಂತೆ. ಧಾರಾಕಾರ ಮಳೆ ಬರುವ ಕಾಲ. ರಾತ್ರಿ ಹತ್ತರ ನಂತರ ವಾಪಸು ಹೊರಟು ಆ ಕಾಲಕ್ಕೆ ಸಹಜವಾಗಿದ್ದ ಕಾಲ್ನಡಿಗೆಯಲ್ಲಿ ಹೋದರು. ದಾರಿಯ ಮಧ್ಯೆ ಎಲ್ಲೋ ಆಯತಪ್ಪಿದ್ದಾರೆ ಅಥವಾ ಮಳೆಗೆ ಅದೇನೋ ಅವಘಡ ಸಂಭವಿಸಿ ಬಿದ್ದಿದ್ದಾರೆ. ಬಿದ್ದವರಿಗೆ ಛಳಿ ಏರಿ ಬೆಳಗಾಗುವಾಗ ಅಲ್ಲಿಯೇ ಪಡ್ಚ, ಮನುಷ್ಯ ಖಲಾಸ್. ಅಲ್ಲಿಂದ ನಂತರ ಸಂಜೆಯ ಹೊತ್ತಿಗೆ ಮನೆಗೆ ಬಂದವರಿಗೆ ಈ ಎಚ್ಚರಿಕೆ.

ಹಿಂದೂ ಧರ್ಮದಲ್ಲಿ ಬಾಗಿಲಿನ ಹೊಸ್ತಿಲಿಗೆ ಒಂದು ವಿಶೇಷ ಪ್ರಾಮುಖ್ಯತೆ ಇದೆ – ಹೊಸ್ತಿಲಿಗೆ ತುಳಿಯುವಂತಿಲ್ಲ, ಹೊಸ್ತಿಲಿನ ಪೂಜೆಇತ್ಯಾದಿ. ಹೊಸ್ತಿಲಿನ ಆ ಬದಿ ಇರುವವರಿಗೆ ಈ ಬದಿಯಿಂದ ವಸ್ತುಗಳನ್ನು ಕೊಡುಕೊಳ್ಳುವುದು, ನಮಸ್ಕರಿಸುವುದು ಇತ್ಯಾದಿಗಳೂ ನಿಷಿದ್ಧ. ಕಾಮತರ ಮನೆಯಲ್ಲೊಂದು ಸ್ವಲ್ಪ ಅಗಲವಾದ ಕಿಟಕಿ ಇದೆ. ಅದರ ಆ ಬದಿ ಲೆಕ್ಕಾಚಾರ ಮಾಡುವ, ದುಡ್ಡು ಕೊಡುವ, ಬಡ್ಡಿ, ಅಸಲುಗಳನ್ನು ಇಸಕೊಳ್ಳುವ ಮನೆಯೊಡೆಯ ಕುಳಿತುಕೊಳ್ಳುವ ಜಾಗ. ಹೊರಭಾಗದಲ್ಲಿ ಸಾಲಗಾರರು ನಿಲ್ಲುವ ಜಾಗ. ಈ ಒಂದು ಕಿಟಕಿಗೆ ‘ಒಳಹೊರಗಿನ ನಿಷೇಧ’ ಇಲ್ಲವಂತೆ. ಇದೊಂದು ಪುಟ್ಟ ಸ್ವಾರಸ್ಯ, ಅನುಕೂಲ ಶಾಸ್ತ್ರ.

ಮನೆಯ ಹೊರಸುತ್ತಿಗೆ ಕಿರೀಟದಂತೆ ಒಂದು ಮುಖಮಂಟಪ ಇದೆ. ಆ ಮುಖಮಂಟಪದ ಮೇಲೊಂದು ಮಾಳಿಗೆ ಇದೆ. ಹಿಂದೆ ಗದ್ದೆಯಲ್ಲಿ ಯಕ್ಷಗಾನ ನಡೆಯುತ್ತಿದ್ದಾಗ ಮನೆಯ ಹೆಂಗಸರು ಕುಳಿತು ನೋಡುತ್ತಿದ್ದ ಜಾಗ ಅದು. ಈಗ ಯಕ್ಷಗಾನ ನಡೆಯುವುದನ್ನು ನಿಲ್ಲಿಸಲಾಗಿದೆ. ಅದೇಕೆಂದರೆ ಬಹಳ ಹಿಂದೊಮ್ಮೆ ಯಕ್ಷಗಾನಕ್ಕೆಂದು ಗದ್ದೆಯಲ್ಲಿ ಮೇಳ ಬೀಡುಬಿಟ್ಟಿತ್ತು. ಆ ಹೊತ್ತಿಗೆ ಕಲೆಕ್ಟರನಿಗೆ ಯಕ್ಷಗಾನ ನೋಡುವ ಬಯಕೆಯಾಗಿಬಿಟ್ಟಿತಂತೆ. ತಕ್ಷಣವೇ ಮೇಳ ಬರಲಿ ಎಂದು ಆಜ್ಞಾಪಿಸಿಬಿಟ್ಟ. ಬೇರೊಂದೆಡೆ ದೇವರಿಗೆ ದೀಪ ಹಚ್ಚಿ ಶುರುವಾಗಿಬಿಟ್ಟಿದೆ ಎಂದರೆ ಅವನು ಕೇಳಲು ತಯಾರಿರಲಿಲ್ಲ. ಕೊನೆಗೆ ಬೇರೆ ದಾರಿಕಾಣದೆ ಗಂಟುಕಟ್ಟಿ ಕಳಿಸಿಕೊಡಲಾಯಿತು. ಅಲ್ಲಿಂದ ನಂತರ ಇಲ್ಲಿ ಆಟ ಆಡುವುದು ನಿಷಿದ್ಧ.

ಮುಖಮಂಟಪದ ಎದುರು ನಾಲ್ಕು ಸಣ್ಣ ಕಟ್ಟೆಗಳಿವೆ. ಆ ಕಟ್ಟೆಗಳ ಮೇಲೆ ಹಲಗೆಗಳನ್ನಿಟ್ಟು ಬೆಂಚ್ ನಂತೆ ಕುಳಿತುಕೊಳ್ಳುವ ವ್ಯವಸ್ಥೆಮಾಡುವಂತೆ ಗಚ್ಚುಗಳಿವೆ. ಆ ಬೆಂಚುಗಳಿರುವುದು ಯಾವುದಾದರೂ ತಗಾದೆಗಳಿದ್ದರೆ ಪರಿಹರಿಸಲು. ಊರಿನ ಜಗಳಗಳು, ಪಾಲುತಗಾದೆಗಳು ಇತ್ಯಾದಿ ನ್ಯಾಯ ತೀರ್ಮಾನ ಮಾಡುವುದಿದ್ದರೆ ವಾದಿ, ಪ್ರತಿವಾದಿಗಳು ಆ ಬೆಂಚುಗಳ ಮೇಲೆ ಕೂರಬೇಕು. ಮನೆಯ ಯಜಮಾನ ಮುಖಮಂಟಪದ ಮೇಲೆ ಕುಳಿತು ಆಲಿಸಿ ತೀರ್ಪುಕೊಡಬೇಕು; ಇದು ಅಂದು ನಡೆಯುತ್ತಿದ್ದ ವ್ಯವಸ್ಥೆ. ಅವರಕುಟುಂಬಕ್ಕೆ ಸಾವಿರಾರು ಮುಡಿ ಅಕ್ಕಿ ಗೇಣಿ ಬರುವ ಆಸ್ತಿ ಇತ್ತು. ಅದಕ್ಕೆ ಸಾಕ್ಷಿಯಾಗಿ ಸಾವಿರಮುಡಿ ಅಕ್ಕಿ ಇಡುವಂಥ, ಅಗಲಗಲತೊಲೆಗಳ ಮರದ ಮುಚ್ಚಿಗೆ ಇರುವ ಸುಭದ್ರ ಅಟ್ಟ ಊಟದ ಕೋಣೆಯ ಮೇಲೆ ಇದೆ. ಭೂಮಸೂದೆಯ ಕಾಲಕ್ಕೆ ಅದೆಲ್ಲ ಪರಾಭಾರೆಯಾಗಿದೆ. ಒಕ್ಕಲು ಮಸೂದೆಯಲ್ಲಿ ಭೂಮಿ ಕಳೆದುಕೊಂಡವರು ಅದಕ್ಕಾಗಿ ವಿಷಾದಿಸುವುದು ಸಾಮಾನ್ಯ. ಆದರೆಕಾಮತರ ಮಾತಿನಲ್ಲಿ ಅಂಥ ವಿಷಾದವನ್ನು ನಾನು ಒಮ್ಮೆಯೂ ನೋಡಿಲ್ಲ. ಆಯಾ ಕಾಲದ ಸತ್ಯಗಳನ್ನು ಅವರು ತೆರೆದಮನಸ್ಸಿನಿಂದ ಸ್ವೀಕರಿಸಿದ್ದಾರೆ.

ಚಾವಡಿಯಿಂದ ಕಾಣುವ ಸುತ್ತುಪೌಳಿ, ಅದರ ಹೊರಗೆ ಗದ್ದೆ.

ಒಮ್ಮೆ ನನಗೂ ಕಾಮತರಿಗೂ ಒಂದು ಮಾತುಕತೆ ನಡೆಯಿತು, ಇಬ್ಬರು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ. ಅವರಲ್ಲೊಬ್ಬರು ಒಂದು ಪುಸ್ತಕವನ್ನು ಬರೆದು ತಮ್ಮ ಜ್ಞಾನಕ್ಕೆ ಹೆಸರಾದವರು. ‘ಅವರು ಅಷ್ಟೆಲ್ಲ ಬರೆದಿರಬಹುದು, ಆದರೆ ಅವರ ಮಾತುಗಾರಿಕೆ ಬಹಳ ನೀರಸ’ ಎಂಬ ಅಭಿಪ್ರಾಯ ನಮ್ಮ ಚರ್ಚೆಯಲ್ಲಿ ಬಂತು. ಅದಕ್ಕೆ ಕಾಮತಜ್ಜನ ಮರುಉತ್ತರವನ್ನು ನಾನೆಂದೂ ಮರೆಯಲಾರೆ. ಅವರಂದರು – ‘ಈ ತಾತ್ವಿಕ ಪ್ರಶ್ನೆ ಹಿಂದಿನಿಂದಲೂ ಇದ್ದುದೇ, ಲೇಖಕ ದೊಡ್ಡವನೋ? ಅವನ ಬರಹ ದೊಡ್ಡದೋ? ಪುಸ್ತಕದೊಡ್ಡದೋ? ಅದರ ಬರಹಗಾರ ದೊಡ್ಡವನೋ? ಎಂಬುದು ತಕ್ಕಡಿಯಂತೆ ಆಯಾ ಲೇಖಕ-ಬರಹ ಜೋಡಿಗಳಿಗೆ ಆಚೀಚೆತೂಗುವ ವಿಷಯ’ – ಎಂಬರ್ಥ ಬರುವಂತಹ ಉತ್ತರವನ್ನು ಅವರು ಹೇಳಿದರು. ಈ ಕೊನೆಯ ವಾಕ್ಯ ನಮ್ಮ ಚರ್ಚೆಯನ್ನು ಬರಿಯ ಸಾಮಾನ್ಯ ಮಟ್ಟದ ಚಾಡಿಮಾತುಕತೆಯಿಂದ ಎತ್ತರಕ್ಕೆ ಕೊಂಡೊಯ್ಯಿತು. ಈ ಕೊನೆಯ ಪ್ರಶ್ನೆಗೆ ಒಂದು ಫಿಲಾಸಾಫಿಕಲ್ ಆಂಗಲ್ಇದೆ. ಬರಹಗಾರನೊಬ್ಬ ಬರಹದಲ್ಲಿ ತೋರ್ಪಡಿಸಿದ ಆದರ್ಶಕ್ಕೆ, ತೂಕಕ್ಕೆ ಸಮಗಟ್ಟುವಂತೆ ಜೀವಿಸಬೇಕಾದುದೋ? ಅಥವಾ ಸ್ವತಃ ಸಹಜ ವಿಷಯ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿ ಪಾರದರ್ಶಕವಾಗಿ ತನ್ನ ಅಭಿಪ್ರಾಯವನ್ನು ಬರೆದು ಬರವಣಿಗೆಯೊಂದು ಘನತೆಯನ್ನು ತಾನಾಗಿ ಪಡೆಯಬೇಕಾದುದೋ? ಎಂಬ ಕೆಲವು ಸೂಕ್ಷ್ಮತೆಗಳನ್ನು ಅವರ ಪ್ರಶ್ನೆ ಹಾದುಹೋಯಿತು. ಇದು ಡಾ| ಕಾಮತರೊಂದಿಗೆ ಮಾತನಾಡುವಾಗ ಸಿಗುವ ಅನುಭವ.

ಹೀಗೆ ಕಾಮತರ ಮನೆಗೆ ಹೋದರೆ ಮಾತುಮಾತಿಗೆ ಕಥೆಗಳು ಬರುತ್ತವೆ, ಸ್ವಾರಸ್ಯಕರ ನಿರೂಪಣೆಯೊಂದಿಗೆ. ಈ ಕಥೆಗಳಲ್ಲೆಲ್ಲ ಅಡಕವಾಗಿ ಒಂದೊಂದು ಮೌಲ್ಯವಿರುತ್ತದೆ. ಗಂಭೀರ ಮಾತುಕತೆಗಳಲ್ಲಾಗಲೀ, ಹಾಸ್ಯಚಟಾಕಿಗಳಲ್ಲಾಗಲೀ ಸುಸಂಸ್ಕೃತ, ಸಾಹಿತ್ಯಿಕ ಘೃತದ ಘಮ ಇದ್ದೇ ಇರುತ್ತದೆ. ಇತ್ತೀಚೆಗೆ ಕಾಮತರಲ್ಲಿಗೆ ಹೋಗಿದ್ದಾಗ ಮರಿಕೆಯಲ್ಲಿ(ನನ್ನ ಹೆಂಡತಿಯ ತವರುಮನೆ) ಹೋಳಿಗೆಗೆ ಸಕ್ಕರೆಯ ಬದಲಾಗಿ ಸಾವಯವ ಬೆಲ್ಲ ಉಪಯೋಗಿಸಿದುದನ್ನು ನಾನು ಪ್ರಸ್ತಾಪಿಸಿ, ಹೋಳಿಗೆಯಲ್ಲಿ ಮೈದಾದ ಬದಲಿಗೆ ಗೋಧಿಯ ಪ್ರಯೋಗ ಸೋತುದರ ಬಗ್ಗೆಯೂ ತಿಳಿಸಿದೆ. ಅವರದಕ್ಕೆ ಪ್ರತಿಕ್ರಿಯಿಸಿ ‘ಮೈದಾದ ಉಪಯೋಗ ಕಳೆದ ಒಂದು ಶತಮಾನದಲ್ಲಿ ಬಂತು, ಆದರೆ ಹೋಳಿಗೆ ಎಂಬ ತಿಂಡಿಯ ಬಗ್ಗೆ ಬಹಳ ಹಿಂದಿನಿಂದ ಉಲ್ಲೇಖ ಇದೆ. ಹಾಗಿದ್ದರೆ ಹಿಂದಿನಕಾಲದಲ್ಲಿಮೈದಾದ ಬದಲಿಗೆ ಕಣಕಕ್ಕೆ ಏನನ್ನು ಉಪಯೋಗಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತಿಲ್ಲ’ ಎಂದರು. ಮುಂದುವರೆಸಿ, ‘ಹೋಳಿಗೆ ಮಾಡುವಾಗ ಹೂರಣವನ್ನು ಕಣಕದೊಳಗೆ ಅಡಕವಾಗಿಸುವ ಕ್ರಿಯೆಯು ಸ್ತ್ರೀಪುರುಷ ಸಂಯೋಗವನ್ನು ಹೋಲುವಂಥದ್ದು, invagination ಗೆ ಸಮನಾದುದು. ಶಿವಲಿಂಗ ಕುಳಿತಿರುವ ಪಾಣಿಪೀಠವೂ ಯೋನೀಸಂಕೇತ. ಭೂಮಿ-ಆಕಾಶಗಳೂ ಸ್ತ್ರೀಪುರುಷಸಂಕೇತಗಳೇ’ ಎಂಬಿತ್ಯಾದಿ ಹಲವು ವಿಷಯಗಳನ್ನು ಹೇಳಿದರು. ಮೈದಾ ಹೋಳಿಗೆಯ ನೆಪದಲ್ಲಿ ಇಷ್ಟು ಆಳವಾದ ಜೀವಜನ್ಮರಹಸ್ಯವನ್ನು ವಿವರಿಸಬಲ್ಲವರು ನನಗೆಷ್ಟು ಮಂದಿ ಸಿಗಬಲ್ಲರು ಹೇಳಿ? ಸಮಾನ ಮನಸ್ಕ ಸ್ನೇಹಿತರ ವಿರಳ ಲಭ್ಯತೆಯ ಬಗ್ಗೆಯೂ ಅವರು ಹಿಂದೊಮ್ಮೆ ‘I starve for like minded people’ ಎಂದಿದ್ದರು – ಎಷ್ಟು ಸುಂದರ ವಾಕ್ಯ! ಎಷ್ಟೊಂದು ಸಾಂದ್ರ ಮತ್ತು ಅರ್ಥಪೂರ್ಣ.

ರಸಜ್ಞ

ಕಾಮತರಿಗೆ ರಸಜ್ಞ ಎಂಬ ವಿಶೇಷಣವನ್ನು ನಾನು ಬಳಸಿದುದು ಮುಖ್ಯವಾಗಿ ಅಡುಗೆಯ ಸ್ವಾದಗ್ರಹಣದ ಅವರ ಸಾಮರ್ಥ್ಯಕ್ಕಾಗಿ. ಎಲ್ಲಾ ರೀತಿಯ ತಿಂಡಿಗಳ ತಯಾರಿಕೆಯಲ್ಲಿ ಅವರ ಶ್ರೀಮತಿಯವರು ಮತ್ತು ಸೊಸೆ ಬಹಳ ಪಳಗಿದವರು. ಒಂದೊಂದು ತಿಂಡಿಗೂ ಒಂದು ಸಣ್ಣ ‘ಕಾಮತ್ ಟಚ್’ ಕೊಟ್ಟು ಅದನ್ನು ಇನ್ನಷ್ಟು ಸ್ವಾದಿಷ್ಟವಾಗಿಸುವುದರಲ್ಲಿ ಅತ್ತೆಸೊಸೆಯರದು ಅದ್ಭುತ  ಸಾಮರ್ಥ್ಯ. ನನ್ನ ಪತ್ನಿ ಅಲ್ಲಿಗೆ ಹೋದಾಗಲೆಲ್ಲ ಹೊಸ ತಂತ್ರಗಾರಿಕೆಗಳನ್ನು ಕಲಿತೇ ಬರುತ್ತಾಳೆ. ಪ್ರತಿಯೊಂದು ತಿಂಡಿಯನ್ನು ಹೀಗೇ ತಯಾರಿಸಬೇಕು, ಇದೇ ಕಾಂಬಿನೇಷನ್ ಜೊತೆಗೆ ತಿನ್ನಬೇಕು ಎಂಬುದನ್ನೆಲ್ಲ ತಾನೇ ಅವುಗಳನ್ನು ಮಾಡಿರುವುದೆಂಬಷ್ಟು ನಿಖರವಾಗಿ ಡಾ|ಕಾಮತರೂ ಬಲ್ಲರು. ನಾನು ಪ್ರತೀಬಾರಿ ಅವರಲ್ಲಿಗೆ ಹೋದಾಗ ಅವರ ಪ್ರೀತ್ಯಾದರಗಳ ಒತ್ತಾಯದ ಜೊತೆಗೆ ಹೊಟ್ಟೆತುಂಬ ತಿಂದು, ಹೃತ್ಪೂರ್ವಕ ಅವರ ತಯಾರಿಕೆಗಳನ್ನು ಮೆಚ್ಚಿ(ಮುಖಸ್ತುತಿಗಲ್ಲ) ಬಂದಿದ್ದೇನೆ. ಪೇಟೆತಿಂಡಿ, ಮೈದಾ, ಸಾವಯವ/ವಿಷಾಕ್ತ ಇತ್ಯಾದಿಗಳ ಗುಣಾವಗುಣಗಳನ್ನು ಚೆನ್ನಾಗಿ ಬಲ್ಲ ಸ್ವತಃ ವೈದ್ಯರು ಅವರಾದರೂ ರುಚಿಯಾಗಿ ತಿನ್ನುವ ವಿಷಯಕ್ಕೆ ಬಂದಾಗ ನಾಲಿಗೆಗೆ ಒಂದಷ್ಟು ಸೋಲುವುದರಲ್ಲಿ ಅವರಿಗೆ ಹಿಂಜರಿಕೆಯಿಲ್ಲ, ನಿಯಮ-ನಿಬಂಧನೆಗಳ ತೊಡಕು-ಸಿಕ್ಕುಗಳಿಲ್ಲ. ಸಸ್ಯಾಹಾರ ಮತ್ತು ಧಾರ್ಮಿಕ ಮಡಿಗಳ ಬೌಂಡರಿಯ ಮಿತಿಯಲ್ಲಿ ಅವರದು ಮುಕ್ತವಾದ ಬ್ಯಾಟಿಂಗ್!

ನನ್ನಂಥ ‘ನಿನ್ನೆ ಬಂದ ಮಳೆಗೆ ಇಂದು ಹುಟ್ಟಿದ ಅಣಬೆ’ಯಂಥವರಿಗೆ ಕಾಮತರು ಆತ್ಮೀಯರಾಗಿರುವುದು ಅವರ ಸಸ್ಯಪ್ರೇಮದಿಂದ. ಹಣ್ಣು, ತರಕಾರಿಗಳು ಅವರಿಗೆ ಅತ್ಯಾಸಕ್ತಿಯ ಕ್ಷೇತ್ರ. ನಾವೆಲ್ಲ ಕಳೆದ ದಶಕದಲ್ಲಿ ಮ್ಯಾಂಗೊಸ್ಟೀನ್ ನೆಟ್ಟಿದ್ದರೆ ಕಾಮತರು ೧೯೪೭ ಆಗಸ್ಟ್ ೧೫ ರಂದು ನೆಟ್ಟಿದ್ದರೆಂದರೆ  ಕಾಮತರ ಬೇರುಗಳ ಆಳವನ್ನು ಊಹಿಸಿ.

ಐವತ್ತು ವರ್ಷ ಹಳೆಯ ಸುಸ್ಥಿತಿಯ ಫ್ಯಾನು, ರೆಗುಲೇಟರು. ಅದರ ಪಕ್ಕ ನೂರುವರ್ಷ ಹಳೆಯ ಫೋಟೊ.

ಗಿಡಗಳ ಸಂಗ್ರಹ, ಅಧ್ಯಯನ, ವೈಜ್ಞಾನಿಕ ವಿಶ್ಲೇಷಣೆ, ಹಂಚೋಣ, ಆಸಕ್ತರೊಂದಿಗೆ ವಿಚಾರ ವಿನಿಮಯ – ಅವರ ಆಸಕ್ತಿಯ ಕ್ಷೇತ್ರಗಳು. ಇಪ್ಪತ್ತೈದು ವರ್ಷ ಹಳೆಯ ಪುತ್ತೂರಿನ ‘ಸಮೃದ್ಧಿ ಗಿಡಗೆಳೆತನ ಸಂಘ’ದ ಸ್ಥಾಪಕ ಸದಸ್ಯರು ಅವರು. ನನಗೆ ಅವರೊಮ್ಮೆ ಫೊನ್ ಮಾಡಿ ‘ನಿಮ್ಮಲ್ಲಿ ಹೊಳೆತುಪ್ರ ಉಂಟೋ? – gyrospyrous malabaricum. ನಿಮ್ಮ ಸಂಗ್ರಹಕ್ಕೆ ಸೇರಬೇಕಾದ ಗಿಡ ಅದು’ – ಎಂದಿದ್ದರು. ‘ನಿಮ್ಮಲ್ಲಿ ಮನೋರಂಜಿನಿ ಉಂಟೋ? ಪಾದರಿ ಮರ ಉಂಟೋ? ನಿಮಗೆ ನಾನು  ಗಿಡ ಮಾಡಿಕೊಡುತ್ತೇನೆ’ ಎಂದು ಹಿಂದೆ ಅವರು ಹೇಳಿದ್ದರು. ಹಳ್ಳಿಯ ಪಾರಂಪರಿಕ ಹೆಸರುಗಳು ಮತ್ತು ಉಪಯೋಗಗಳು, ವೈಜ್ಞಾನಿಕ ವಿವರಗಳು, ಗಿಡಗಳಮೂಲ ಮತ್ತು ರಚನಾ ಸೂಕ್ಷ್ಮ ಗಳು ಇವೆಲ್ಲವುಗಳ ಸಂಗ್ರಹದ ರೂಪಕವಾಗಿ ಅವರ ಈ ಪ್ರಶ್ನೆಯನ್ನು ನೋಡಬೇಕಾಗಿದೆ. ಹೀಗೊಂದು ಪ್ರಶ್ನೆಯನ್ನು ಕೇಳಬಲ್ಲ ಜ್ಞಾನ ನಮ್ಮಲ್ಲಿ ಎಷ್ಟು ಜನರಿಗೆ ಉಳಿದಿದೆ?.

ಪರುವಲ್ ಎನ್ನುವ ತರಕಾರಿಯ ಸಂಗ್ರಹಕ್ಕಾಗಿ ಅವರು 30 ವರ್ಷ ಹುಡುಕಾಡಿದ್ದಾರಂತೆ. ಕೊನೆಗೂ‌ ಶ್ರೀಪಡ್ರೆಯವರ ಮೂಲಕ ಸಿಕ್ಕಬೀಜದ ಬಳ್ಳಿಗಳು ಗಂಡು ಬಳ್ಳಿಗಳೆಂದು ಸಾಬೀತಾದಾಗ ಅವರು ಹೇಳಿದ ಮಾತು – ‘ನನ್ನ 30 ವರ್ಷಗಳ ಹುಡುಕಾಟವನ್ನು 50% ಮುಗಿಸಿಬಿಟ್ಟಿದ್ದೀರಿ ನೀವು!’ – ನೋಡಿ ಕಲಿಯಬೇಕಾದ ಅದಮ್ಯ ಜೀವನೋತ್ಸಾಹ ಅವರದು.

ಅಂದು-ಇಂದುಗಳ ಕೊಂಡಿ

ಕಾಮತಜ್ಜ ಇತಿಹಾಸದ ಒಂದು ಕೊಂಡಿ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೋತ್ತರ ಇತಿಹಾಸಗಳನ್ನು ಇಸವಿ ಸಮೇತ ಬಿಚ್ಚಿಡಬಲ್ಲ historian ಅವರು. ದೇವಾರಾಧನೆ, ಭೂತಾರಾಧನೆ, ಪೂಜಾ ವಿಧಿವಿಧಾನಗಳು – ಇವೆಲ್ಲದರ ಬಗ್ಗೆಸಾಂದರ್ಭಿಕವಾಗಿ authentic ಆಗಿ ವಿವರಿಸಬಲ್ಲರು. ಧಾರ್ಮಿಕ ಆಚರಣೆಗಳನ್ನು ಆಚರಿಸುವಾಗ ನೈಷ್ಠಿಕವಾಗಿ ಪಾಲಿಸಿದರೂ ಅವನ್ನು ವಿಶ್ಲೇಷಿಸುವಾಗ ನಿಷ್ಠುರತೆ, ನಿರ್ದಿಷ್ಟತೆ, ವೈಚಾರಿಕತೆಗೆ ಎಳ್ಳಷ್ಟೂ ಕೊರತೆ ಮಾಡುವವರಲ್ಲ. ಇತ್ತೀಚೆಗೆ ಹೋಗಿದ್ದಾಗಶ್ರಾದ್ಧದ ಊಟದ ಪ್ರಸ್ತಾಪ ಬಂತು. ಶ್ರಾದ್ಧದ ದಿನ ಹವ್ಯಕರಲ್ಲಿ ಮತ್ತು ಇತರೆ ಒಂದಷ್ಟು ಬ್ರಾಹ್ಮಣ ಪದ್ಧತಿಗಳಲ್ಲಿ ಊಟ ತಡವಾಗುವುದು ಪದ್ಧತಿ. ‘ಕುತುಪ ಕಾಲ’ ಎಂಬುದು ಶ್ರಾದ್ಧ ಮಾಡುವ ಸಮಯವಂತೆ. ಮಧ್ಯಾಹ್ನ ಹನ್ನೆರಡೂ ಮೂವತ್ತಕ್ಕೆ ಶ್ರಾದ್ಧ ಶುರುಮಾಡಿ ಮೂರೂವರೆಗೆ ಕೊನೆಯ ಪಂಕ್ತಿ ಮುಗಿಯಬೇಕಂತೆ. ರೋಹಿಣೀ ಲಗ್ನವನ್ನು ದಾಟಬಾರದು – ‘ರೋಹಿಣ್ಯಂ ನಲಂಘಯೇತ್’ ಎಂದು ಸಂಸ್ಕೃತೋಕ್ತಿಯೊಂದಿಗೆ ವಿವರಿಸಿದರು ಅವರು. ‘ಆದರೆ ಇದೆಲ್ಲ ಒಂದು ಶಿಸ್ತನ್ನು ಹೇರುವ ಉದ್ದೇಶದಿಂದಷ್ಟೆ, ಬೇರೆ ಕಾರಣವೇನಿಲ್ಲ, ಈ ಶಿಷ್ಟಾಚಾರಗಳು ನಮ್ಮಲ್ಲಿ ಶಿಸ್ತುಂಟು ಮಾಡುವುದೆಂಬ ಸದುದ್ದೇಶವನ್ನು ಜಿ.ಟಿ.ನಾರಾಯಣರಾಯರೂ ಒಪ್ಪುತ್ತಿದ್ದರು’ ಎಂದು ತಿಥಿ ಊಟದ ಆಚರಣೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರವರು.

ಇವೆಲ್ಲ ಬಹುಪರಾಕುಗಳಲ್ಲದೆ ‘ಸಮೃದ್ಧಿ’ಯ ಗೆಳೆಯರಿಗೆ ಕಾರಂತರು ವಿಶೇಷ ಕಾರಣಕ್ಕೆ ಅಚ್ಚುಮೆಚ್ಚು – ಅವರ ಹಾಸ್ಯಚಟಾಕಿಗಳಿಗಾಗಿ. ಸರಳ ಬಾಣಗಳಿಂದ ಹಿಡಿದು ಪಾಶುಪತಾಸ್ತ್ರದವರೆಗೆ ಅವರ ಬತ್ತಳಿಕೆಯಲ್ಲಿ ಎಲ್ಲವೂ ಉಂಟು.

ಇಬ್ಬರು ಗಂಡುಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೊಂದಿಗಿನ ಸಪತ್ನೀಕ  ಸಂತೃಪ್ತ ಜೀವನ ಅವರದು. ಈಗೀಗ ವಯಸ್ಸುಅವರ ದೈಹಿಕ ಚುರುಕುತನವನ್ನು ಸ್ವಲ್ಪ ಕಡಿಮೆ ಮಾಡಿದರೂ ಮನಸ್ಸಿನ ಚುರುಕುತನ, ನೆನಪಿನ ಶಕ್ತಿ ಮಾಸಿಲ್ಲ. ನನಗೆ ಅವರಪರಿಚಯವಾಗುವುದು ಇಷ್ಟು ತಡವಾಗಬಾರದಿತ್ತು ಎಂದು ನನಗೆ ಒಮ್ಮೊಮ್ಮೆ ಅನಿಸುವುದಿದೆ. ನಾನೂ ಅವರೂ ಸ್ವಲ್ಪಸಮಕಾಲೀನರಾಗಿದ್ದರೆ, ನಮ್ಮ ಮಧ್ಯೆ ವಯಸ್ಸಿನ ಅಂತರ ಇಷ್ಟಿಲ್ಲದಿದ್ದರೆ ಅವರ ಸ್ನೇಹವನ್ನು ಇನ್ನಷ್ಟು ದೀರ್ಘಾವಧಿಗೆಅನುಭವಿಸಬಹುದಾಗಿತ್ತು. ಆದರೆ ನಮ್ಮ ಈಗಿನ ಮಾತುಕತೆಗೆ ನಮ್ಮ ವಯಸ್ಸಿನ ಅಂತರವೆಂದೂ ಅಡ್ಡಿ ಬಂದಿಲ್ಲ.

ಲೇಖಕ ವಸಂತ್ ಕಜೆ ತನ್ನ ಹಿರಿಯ ಸ್ನೇಹಿತ ಕಾಮತರೊಂದಿಗೆ

ಡಾ|ಕಾಮತರದು ಡಿವಿಜಿಯಂತೆ ಇಳಿವಯಸ್ಸು, ಬೊಚ್ಚುಬಾಯಿ, ಬಹುಮುಖೀ ಪಾಂಡಿತ್ಯ. ಡಿವಿಜಿಯವರಂತೆ ಅವರ ವೈಚಾರಿಕ ವಿಶ್ಲೇಷಣೆಯಲ್ಲೊಂದು ಸಮಚಿತ್ತ, (ಈಗಿನ ವಿಚಾರವಾದಿಗಳಂತಲ್ಲದೆ) ಪರಂಪರೆಯನ್ನು ತರಿದು ಹಾಕುವ ‘ಏಕೋದ್ದೇಶವಿಲ್ಲದ ವಿಶ್ಲೇಷಣೆ-ವಿವರಣೆ, ಪ್ರೌಢ ಹಾಸ್ಯಪ್ರಜ್ಞೆ. ಡಿವಿಜಿಯವರಿಗೆ ಸಾಮ್ಯವೆನಿಸುವ ಇನ್ನೊಂದು ಮುಖ್ಯ ಅಂಶ ತಿಂಡಿ-ತಿನಿಸುಗಳ ಮೇಲಿನಪ್ರೀತಿ, ಅವುಗಳನ್ನು ತಿನ್ನುವುದು ಮಾತ್ರವಲ್ಲದೆ ವಿವರಿಸಲೂ ಅಷ್ಟೇ ಆಸಕ್ತಿ. ನಮ್ಮ ಹಳ್ಳಿಯ ಡಿವಿಜಿ ಡಾ|ಕಾಮತರ ಸ್ನೇಹ ನನ್ನ ಭಾಗ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!