Featured ಅಂಕಣ

“ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ ಸರಕಾರಕ್ಕೆ 75.”

ಬೋಸ್ ಹಾಗೂ ಐಎನ್‍ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಟರು” ಎಂದು ಬ್ರಿಟಿಷ್‍ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್‍ಲ್ಯಾಂಡ್ ಪ್ರಕಾಶನ, 1964, ಪುಟ: 93.

ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ತುದಿಗಾಲಲ್ಲಿ ನಿಂತಿದ್ದ ಸಂದರ್ಭ. ಒಂದೆಡೆ ಗಾಂಧೀಜಿಯೇ ಸ್ವಾತಂತ್ರ್ಯ ದೊರಕಲು ಹಳೆಯ ಮಾರ್ಗಗಳಿಗೆ ಶುಭವಿದಾಯ ಹೇಳಿ, 1942ರಲ್ಲಿ “ಮಾಡು ಇಲ್ಲವೆ ಮಡಿ: ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ಕರೆ ನೀಡಿದ್ದರೆ, ಮತ್ತೊಂದೆಡೆ ಅದಕ್ಕೆ ಪರೋಕ್ಷ ಉತ್ತೇಜನ ಮತ್ತು ಅಂತಹ ಹೋರಾಟಕ್ಕೆ ಅನಿವಾರ್ಯತೆಯನ್ನು ಸೃಷ್ಟಿಸುವ ಪ್ರಕ್ರಿಯೆ ವಿದೇಶಿ ನೆಲದಲ್ಲಿ ನೆಲೆಸಿದ್ದ ಭಾರತೀಯ ಹೋರಾಟಗಾರರಿಂದ ನಡೆಯುತ್ತಿತ್ತು.

ಬರೀ ಶಾಂತಿ, ಸತ್ಯಾಗ್ರಹ, ಅಸಹಕಾರ, ಕರ ನಿರಾಕರಣೆ, ಕಾನೂನು ಭಂಗ ಇತ್ಯಾದಿ ಸತ್ಯ, ತಾಳ್ಮೆ, ಶಾಂತಿ ಮತ್ತು ಅಹಿಂಸೆಯ ರಾಜಕೀಯ ಮಾರ್ಗಗಳು ದಪ್ಪ ಚರ್ಮದ, ರಕ್ತ ಹೀರುವ ಬ್ರಿಟೀಷ್ ವಸಾಹತುಶಾಹಿಗಳಿಗೆ ಅರ್ಥವಾಗುವುದಿಲ್ಲ ಮತ್ತು ಬ್ರಿಟೀಷರನ್ನು ಭಾರತೀಯ ಸೇನೆಯ ಸಹಾಯದಿಂದ ಯುದ್ಧದಿಂದಲೇ ಹೊರಗಟ್ಟಲು ಇದು ಪಕ್ವವಾದ ಸಮಯ ಎಂದು ನಂಬಿದವರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರಮುಖರು. ಮತ್ತು ಆ ದೆಸೆಯಲ್ಲಿ ಕೇವಲ ವೈಚಾರಿಕ ಭಾಷಣಕ್ಕೆ ಸೀಮಿತಗೊಳ್ಳದೆ ಭಾರತವನ್ನು ಬ್ರಿಟಿಷರ ಮುಷ್ಠಿಯಿಂದ ಬಿಡಿಸುವ ದಿಟ್ಟ ಪ್ರಯತ್ನವನ್ನೂ ಮಾಡಿದರು. ಆ ಪ್ರಕ್ರಿಯೆಯ ಫಲವೇ ಅಕ್ಟೋಬರ್ 21, 1943, ಸಿಂಗಾಪುರದಲ್ಲಿ ರೂಪತಳೆದ “ಆಜಾದ್ ಹಿಂದ್ ಸರಕಾರ” ಭಾರತದ ಮೊದಲ ಸ್ವತಂತ್ರ, ಸ್ವದೇಶಿ, ದಾಸ್ಯಮುಕ್ತ ಸರಕಾರ. ಆಜಾದ್ ಹಿಂದ್ ಅಂದರೆ ದಾಸ್ಯ ಮುಕ್ತ, ಸ್ವತಂತ್ರ ಭಾರತ ಎಂದರ್ಥ. ಈ ಸರಕಾರ ರಚನೆಯ ಹಿನ್ನೆಲೆ ಮತ್ತು ಕಾರ್ಯಚಟುವಟಿಕೆಯ ಮುನ್ನಲೆಗಳು ಸುಭಾಷ್ ಚಂದ್ರ ಬೋಸರ ಜೀವನದಷ್ಟೇ ನಿಗೂಢ ಹಾಗೂ ಪ್ರೇರಕ.

ಶಾಂತಿಯಿಂದ ಸ್ವಾತಂತ್ರ್ಯ ಲಭಿಸುವುದಿಲ್ಲ ಎಂದು ನಂಬಿದವರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊದಲಿಗರಲ್ಲ. 1857ರಿಂದಲೇ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಹಾಗೂ ತದನಂತರ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಪರಿಕಲ್ಪನೆಯ ಅನೇಕ ಹೋರಾಟಗಳು ನಡೆದಿವೆ. ಅನೇಕ ಕ್ರಾಂತಿಕಾರಿಗಳು ವಿವಿಧ ಪ್ರಾಂತ್ಯಗಳಲ್ಲಿ ಸ್ವರಾಜ್ಯಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿದ್ದಿದೆ. ವಿದೇಶಗಳಲ್ಲಿದ್ದುಕೊಂಡೂ ವ್ಯಾಂಕೊವರ್‍ನಿಂದಲೇ “ಗದರ್”ನಂತಹ ಸಂಘಟನೆಗಳು ಭಾರತ ನೆಲದಲ್ಲಿ ಬ್ರಿಟಿಷರ ವಿರುದ್ಧ ಅನೇಕ ವಿಪ್ಲವಗಳನ್ನು ಸೃಷ್ಟಿಸಿವೆ. ಲಂಡನ್‍ನಲ್ಲಿಯೇ ಭಾರತದ ಸ್ವಾತಂತ್ರ್ಯದ ಪ್ರಣಾಳಿಯನ್ನು ಸಾರುತ್ತ ಅನೇಕ ಕ್ರಾಂತಿಕಾರಿಗಳಿಗೆ ಪ್ರೇರಣೆ ನೀಡಿದ್ದ ಶ್ಯಾಮಜಿ ಕೃಷ್ಣವರ್ಮರ “ಇಂಡಿಯಾ ಹೌಸ್” ಮತ್ತೊಂದು ಉದಾಹರಣೆ.

ಆಗೆಲ್ಲ ಕಾಲದ ಪಕ್ವತೆಯ ಕೊರತೆಯೋ ಅಥವಾ ಬ್ರಿಟಿಷ್ ಸಾಮಾಜ್ರ್ಯದ ಉಚ್ಛ್ರಾಯತೆಯ ಕಾರಣದಿಂದಲೋ ಅಥವಾ ಸಮಗ್ರ ಭಾರತದಲ್ಲಿ ಪಕ್ವವಾದ ಸ್ವಾತಂತ್ರ್ಯದ ಪರಿಕಲ್ಪನೆ ಮೂಡದಿದ್ದ ಕಾರಣದಿಂದಲೋ ಒಟ್ಟಾರೆ ಅವರೆಲ್ಲರ ಪ್ರಯತ್ನಗಳು ಆ ಕಾಲಕ್ಕೆ ವಿಫಲ ಯತ್ನಗಳಂತೆ ತೋರಿದರೂ, ಸುಮಾರು 90 ವರ್ಷಗಳ ಸ್ವಾತಂತ್ರ್ಯ ಹೋರಾಟವೆಂಬ ಸಾಗರದಲ್ಲಿ ಅಲ್ಲಲ್ಲಿ ಹೊಳೆಯುವ ಇಂತಹ ಎಡೆಬಿಡದ ಕ್ರಾಂತಿಕಾರಿ ಪ್ರಯತ್ನಗಳು ಹೊಳೆಯುವ ಮುತ್ತು, ರತ್ನಗಳಂತೆ ಕಂಡಿವೆ, ಬ್ರಿಟಿಷರನ್ನು ಕಾಡಿವೆ, ತಲೆಮಾರುಗಳನ್ನು ಪ್ರೇರೇಪಿಸಿವೆ. ಅಂತಹ ಜೀವಂತವಾಗಿ ಮುಂದುವರೆಯುತ್ತಿರುವ ಸ್ವಕೀಯತೆ ಎಂಬ ಬಿತ್ತಿದ ವಿಚಾರಧಾರೆಗಳಿಂದ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ರೂಪುಗೊಂಡ ಅಂತಹ ಒಂದು ಸಂಘಟಿತ ಸೇನಾ ಚಳುವಳಿಯೇ ಆಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಶನಲ್ ಆರ್ಮಿ. 19ನೇ ಶತಮಾನದ ಭಾರತ, ರಾಜಕೀಯ ಚಳುವಳಿಗಳಿಂದ ಸುಕ್ಕುಗಟ್ಟಿದ್ದ ಸ್ವಾತಂತ್ರ್ಯ ಸಂಗ್ರಾಮವೆಂಬ ಸಂಹಿತೆಯಲ್ಲಿ “ಇಂಡಿಯನ್ ನ್ಯಾಶನಲ್ ಆರ್ಮಿ” ಎಂಬ ಭರವಸೆಯ ಕಿಡಿ ಹೊತ್ತಿಸಿದ ಕಥನ ರೋಚಕವಾದದ್ದು.

ಐಎನ್‍ಎ ಹುಟ್ಟು

ಇಂಡಿಯನ್ ನ್ಯಾಶನಲ್ ಆರ್ಮಿ (ಭಾರತೀಯ ರಾಷ್ಟ್ರೀಯ ಸೇನೆ)ಯ ಪರಿಕಲ್ಪನೆ ಮೊದಲು ರೂಪುಗೊಂಡಿದ್ದು 1942ರಲ್ಲಿ. ಎರಡನೇ ವಿಶ್ವಯುದ್ಧದ ಸಂದರ್ಭ, ಮಲಯಾ ದ್ವೀಪ ಸಮೂಹದಲ್ಲಿ ಬ್ರಿಟಿಷರನ್ನು ಹಿಮ್ಮೆಟಿಸುತ್ತಾ ಆಗ್ನೇಯಾ ಏಷ್ಯಾವನ್ನು ಜಪಾನ್ ಗೆಲ್ಲುತ್ತಿದ್ದ ಸಮಯವದು. ದ್ವಿತೀಯ ಮಹಾಯುದ್ಧದಲ್ಲಿ ಬ್ರಿಟನ್‍ನ ಪರಿಸ್ಥಿತಿಯನ್ನು ಅರಿತ ಅಂದಿನ ಬ್ರಿಟಿಷ್ ಭಾರತೀಯ ಸೇನೆಯಲ್ಲಿದ್ದ ಕ್ಯಾಪ್ಟನ್ ಮೋಹನ್ ಸಿಂಗ್ ಮಲಯಾದಿಂದ ಹಿಂದೆ ಹೊರಟಿದ್ದ ಬ್ರಿಟಿಷ್ ಸೇನೆಯನ್ನು ಸೇರದಿರಲು ನಿರ್ಧರಿಸುತ್ತಾರೆ ಮತ್ತು ಸಹಾಯಕ್ಕಾಗಿ ಜಪಾನ್ ಸಹಾಯವನ್ನು ಆಶಿಸುತ್ತಾರೆ.

ಅದಾಗಲೇ ಯುದ್ಧದೊಂದಿಗೆ ಅನೇಕ ಭಾರತೀಯ ಸಿಪಾಯಿಗಳನ್ನು ಬಂಧಿಯಾಗಿಸಿದ್ದ ಜಪಾನ್, ಕ್ಯಾಪ್ಟನ್ ಮೋಹನ್ ಸಿಂಗ್ ಕೋರಿಕೆಯ ಮೇರೆಗೆ ಬಂಧಿತ ಸಿಪಾಯಿಗಳನ್ನು ಮುಕ್ತಿಗೊಳಿಸಲು ಒಪ್ಪುತ್ತದೆ. ಅವರನ್ನಲೆಲ್ಲ ಒಪ್ಪಿಸಿ ಒಂದು ಸೇನೆಯನ್ನು ಕಟ್ಟುವುದು ಸಣ್ಣ ಸಂಗತಿಯಲ್ಲ. ಇಲ್ಲಿಂದಲೇ ಐಎನ್‍ಎ ಹುಟ್ಟು ಪ್ರಾರಂಭವಾಗುವುದು. ಸಿಂಗಾಪುರ ಜಪಾನ್‍ನ ಕೈಸೇರುತ್ತಲೇ ಹೆಚ್ಚುವರಿಯಾಗಿ 45,000 ಭಾರತೀಯ ಸಿಪಾಯಿಗಳು ಮುಕ್ತವಾಗುತ್ತಾರೆ. ಸೆಪ್ಟೆಂಬರ್ ಹೊತ್ತಿಗೆ 16,300 ಜನರ ಮೊದಲ ತುಕಡಿ ರೂಪಪಡೆಯುತ್ತದೆ. 1942ರ ಕೊನೆಗೆ ಹಾಗೂ ಹೀಗೂ ಬ್ರಿಟಿಷ್ ಸೇನೆಯಲ್ಲಿದ್ದ ಸುಮಾರು 40,000 ಭಾರತೀಯರು ಐಎನ್‍ಎ ಸೇರಲು ಒಪ್ಪುತ್ತಾರೆ.

ಇಷ್ಟು ಸೇನಾಬಲ, ಜಪಾನ್‍ನ ಸಹಾಯಬಲವಿದ್ದರೂ ಅಂದಿನ ಆರ್ಮಿ ಭಾರತದ ಜನರ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಆಮಂತ್ರಣ ದೊರೆತರೆ ಮಾತ್ರ ಮುಂದಿನ ಹೆಜ್ಜೆಯಿಡುವ ಇಂಗಿತವನ್ನು ವ್ಯಕ್ತಪಡಿಸುತ್ತದೆ. ಆದರೂ ಆರ್ಮಿ ನಿರೀಕ್ಷಿಸುತ್ತಿದ್ದ ಆಮಂತ್ರಣ ಬರುವುದೇ ಇಲ್ಲ. ಅಷ್ಟುಹೊತ್ತಿಗಾಗಲೇ ಜಪಾನ್ ಮತ್ತು ಮೋಹನ್ ಸಿಂಗ್ ನಡುವೆ ಐಎನ್‍ಎ ಪಾತ್ರದ ಬಗ್ಗೆ ಮನಸ್ತಾಪ ಮೂಡುತ್ತದೆ. ಜಪಾನ್‍ಗೆ ಬ್ರಿಟಿಷ್ ಆಡಳಿತದ ಭಾರತದ ಮೇಲೆ ಯುದ್ಧಮಾಡಲು ಭಾರತೀಯ ಮುಖಚರ್ಯೆಯ ಸುಮಾರು 2,000 ಜನರ ಸಂಘಟನೆಯೊಂದರ ಅವಶ್ಯಕತೆಯಿರುತ್ತದೆಯೇ ಹೊರತು ಸಕ್ಷಮ ಸೇನೆ ಅಲ್ಲ. ಆದರೆ ತಗಲುವ ಖರ್ಚಿನ ಹೊರತಾಗಿಯೂ ಮೋಹನ್ ಸಿಂಗ್ ನೇತೃತ್ವದ ಅಧಿಕಾರಿ ವರ್ಗಕ್ಕೆ ಆರ್ಮಿಯನ್ನು 2,00,000 ಜನರ ಬೃಹತ್ ಸಂಘಟನೆಯಾಗಿ ಬೆಳೆಸುವ ಇಂಗಿತವಿರುತ್ತದೆ. ಆದರೆ ಮೋಹನ್ ಸಿಂಗ್ ಕಾಲದಲ್ಲಿ ಹೆಚ್ಚಿನ ಬೆಳವಣಿಗೆಗಳು ಕಂಡುಬರುವುದಿಲ್ಲ. ಇದು ಐಎನ್‍ಎಯ ಮೊದಲ ಅಥವಾ ಶೈಶವಾವಸ್ಥೆಯ ಘಟ್ಟ.

ಐಎನ್‍ಎ ಎರಡನೇ ಕಾಲಘಟ್ಟ: ಸುಭಾಷ್ ಚಂದ್ರ ಬೋಸರ ನಾಯಕತ್ವ
ಕಾಂಗ್ರೆಸ್, ಗಾಂಧೀಜಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣ, ಕಾಂಗ್ರೆಸ್ ಹಾಗೂ ದೇಶದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ತೊರೆದು 1940ರಲ್ಲಿ “ಫಾರ್ವರ್ಡ್ ಬ್ಲಾಕ್” ಸ್ಥಾಪಿಸುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಚುರುಕಿನ ಚಟುವಟಿಕೆಯನ್ನು ದಮನಿಸಲು ಅವರನ್ನು ಗೃಹಬಂಧನದಲ್ಲಿರಿಸಲಾಗುತ್ತದೆ. ಪಾದರಸದಂತಹ ವ್ಯಕ್ತಿತ್ವದ ಬೋಸರು ಇಂತಹ ಗೃಹಬಂಧನಗಳಿಗೆ ಜಗ್ಗುವವರೇ ಅಲ್ಲ. ಬದಲಾಗಿ ಅತ್ಯಂತ ಜಾಣ್ಮೆಯಿಂದ ಮಾರ್ಚ್ 1941ರಲ್ಲಿ ಮಾರುವೇಷದಲ್ಲಿ ಗೃಹಬಂಧನದಿಂದ ತಪ್ಪಿಸಿಕೊಂಡು ಭಾರತವನ್ನು ಮುಕ್ತಿಗೊಳಿಸಲು ಅಂದಿನ ಸೋವಿಯತ್ ಯೂನಿಯನ್(ಇಂದಿನ ರಷ್ಯಾ) ಸಹಾಯಹಸ್ತವನ್ನು ಚಾಚುತ್ತಾರೆ. ಆದರೆ ಜೂನ್ 1941ರಲ್ಲಿ ಬದಲಾದ ಭೂರಾಜಕಾರಣದ ಪರಿಸ್ಥಿತಿಯಲ್ಲಿ ಸೋವಿಯತ್ ಒಕ್ಕೂಟ “ಅಲೈಸ್”(ಬ್ರಿಟನ್, ಫ್ರಾನ್ಸ್, ಅಮೆರಿಕ ಮೊದಲಾದವರ ಮಿತ್ರಕೂಟ)ಪರ ಯುದ್ಧವನ್ನು ಸೇರಿಕೊಳ್ಳುತ್ತದೆ. ಇದು ಸಮಾಜವಾದ, ಕ್ರಾಂತಿ ಮೊದಲಾದ ಚಿಂತನೆಗಳಿಗೆ ತೆರೆದುಕೊಂಡಿದ್ದ, ಸೋವಿಯತ್ ಭಾರತದ ಮಿತ್ರ ಎಂದು ಭಾವಿಸಿದ್ದ ಬೋಸ್‍ರಿಗೆ ಕೊಂಚ ನಿರಾಶೆಯನ್ನುಂಟುಮಾಡಿದರೂ, ನೇತಾಜಿ ಧೃತಿಗೆಡುವುದಿಲ್ಲ.

ಅಷ್ಟಕ್ಕೇ ಹತಾಶರಾಗದೆ ರಷ್ಯಾದಿಂದ ಬೋಸ್ ನೇರವಾಗಿ ಬ್ರಿಟನ್‍ನ ಶತ್ರುಪಾಳಯದಲ್ಲಿದ್ದ ಜರ್ಮನಿಗೆ ಹೋಗಿ ಮುಂದೆ ಜಪಾನ್‍ಗೆ ತೆರಳುತ್ತಾರೆ. ಭಾರತವನ್ನು ವಸಾಹತು ದಾಸ್ಯದಿಂದ ಜಪಾನ್‍ನ ಸಹಾಯವನ್ನು ದೃಢಪಡಿಸಿಕೊಳ್ಳುತ್ತಾರೆ. “ಏಷ್ಯಾ ಫಾರ್ ಏಷಿಯನ್ಸ್” ಎಂದು ಕರೆಕೊಟ್ಟು ಏಷ್ಯಾದ ನಾಯಕನಾಗಲು ಹೊರಟಿದ್ದ ಜಪಾನ್‍ಗೂ ವಾಸ್ತವದಲ್ಲಿ ಅದೇ ಬೇಕಿರುತ್ತದೆ. ಅದರಂತೆ ಜುಲೈ 1943ರಲ್ಲಿ ದೊಡ್ಡ ಗುರಿಗೆ ಸಜ್ಜಾಗಿ ಬೋಸ್ ಸಿಂಗಾಪುರವನ್ನು ಸೇರುತ್ತಾರೆ. ಅದಾಗಲೇ ಐಎನ್‍ಎ ಸದಸ್ಯರು, ನಿರಾಶ್ರಿತ, ವಲಸಿತ ಭಾರತೀಯರು, ಮಲಯ-ಸಿಂಗಾಪುರ-ಬರ್ಮಾದಲ್ಲಿ ಯುದ್ಧ ಬಂಧಿಗಳಾಗಿದ್ದ ಭಾರತೀಯರು ಇವರೆಲ್ಲರೂ ಭಾರತವೆಂಬ ಜಗದ್ಶಕ್ತಿಯನ್ನು ದಾಸ್ಯದಿಂದ ಬಿಡುಗೊಳಿಸುವ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂಬ ಹೆಬ್ಬಯಕೆಯೊಂದಿಗೆ ಹೊಸ ನಾಯಕನೊಬ್ಬನ ಬರುವಿಕೆಗಾಗಿ ಕಾಯುತ್ತಿರುತ್ತಾರೆ.


ಆಜಾದ್ ಹಿಂದ್ ಎಂಬ ಅವಿಭಜಿತ ಭಾರತದ ಮೊದಲ ಸ್ವತಂತ್ರ ಸರಕಾರ
ಆಗ್ನೇಯ ಏಷ್ಯಾದಲ್ಲಿ ಸ್ವಾತಂತ್ರ್ಯದ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದ ಭಾರತೀಯರ ನಿರೀಕ್ಷೆಗೆ ತಕ್ಕಂತೆ ಬೋಸ್ ಎಂಬ ಮಹಾನಾಯಕ ಅವರ ಮುಂದೆ ಹಾಜರಾಗುತ್ತಾರೆ. ಅವರಿಗೆಲ್ಲ ಮಾರ್ಗದರ್ಶಕರಾಗಿ ಸಿಕ್ಕಿದ್ದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಶ್‍ಬಿಹಾರಿ ಬೋಸ್. ಐಎನ್‍ಎ ಪರಾಕ್ರಮ, ದೇಶಭಕ್ತಿ, ಸ್ವಾತಂತ್ರ್ಯದ ಕಿಚ್ಚು, ಹೋರಾಟದ ಕೆಚ್ಚು, ಬೋಸರ ಕೋಲ್ಮಿಂಚಿನ ವ್ಯಕ್ತಿತ್ವ ಐಎನ್‍ಎ ಆಜಾದ್ ಹಿಂದ್ ಸರಕಾರ ಗರಿಗೆದರಲು ಮತ್ತಿನ್ನೇನೂ ಬೇಕಿರಲಿಲ್ಲ. ಇಂದಿಗೆ ಸರಿಯಾಗಿ 75 ವರ್ಷಗಳ ಹಿಂದೆ ಅಂದರೆ ಅಕ್ಟೋಬರ್ 21, 1943 ಮೊದಲಬಾರಿಗೆ ಸುಭಾಷ್ ಚಂದ್ರ ಬೋಸ್, ಇಡೀ ಬ್ರಿಟಿಷ್ ಸಾಮ್ರಾಜ್ಯಶಾಹಿ, ಸೂರ್ಯಮುಳುಗದ ನಾಡು ಎಂದು ಗರ್ವಪಡುತ್ತಿದ್ದ ಬೃಹತ್ ಶಕ್ತಿಗೆ ಸೆಡ್ಡುಹೊಡೆದು ಅದಕ್ಕೆ ಪರ್ಯಾಯವಾದ ಸ್ವತಂತ್ರ ಭಾರತದ ಪ್ರಾಂತೀಯ (ಭಾರತ) ಸರಕಾರವನ್ನು ಸ್ಥಾಪಿಸುತ್ತಾರೆ. ಅದನ್ನು “ಅರ್ಝಿ ಹುಕುಮತ್-ಇ-ಹಿಂದ್ ಆಜಾದ್” ಸರಕಾರ ಎಂದೂ ಕರೆಯಲಾಗುತ್ತದೆ. ಮತ್ತು ಆ ಸರಕಾರದ ಮೊದಲ ಪ್ರಾಧಾನಿ, ಯುದ್ಧಮಂತ್ರಿಯೂ ಆಗುತ್ತಾರೆ. ಅಷ್ಟಕ್ಕೇ ನಿಲ್ಲದೆ, ಐಎನ್‍ಎ ತುಕಡಿಯಲ್ಲಿದ್ದ ಮಹಿಳೆಯರನ್ನು ಒಗ್ಗೂಡಿಸಿ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ನೇತೃತ್ವದಲ್ಲಿ “ರಾಣಿ ಝಾನ್ಸಿ ರೆಜಿಮೆಂಟ್” ಅನ್ನು ಜಾರಿಗೆ ತರಲಾಗುತ್ತದೆ. ಜುಲೈ 1944ರಲ್ಲಿ ಬೋಸ್ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ “ಭಾರತದ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ” ಗಾಂಧೀಜಿಯ ಆಶಿರ್ವಾದವನ್ನೂ ಕೇಳುತ್ತಾರೆ.

ಆಜಾದ್ ಹಿಂದ್ ಸರಕಾರ ನೇರವಾಗಿ ಯುದ್ಧಕ್ಕೆ ಹೋಗುವ ಮುನ್ನ ಮೂರು ಮುಖ್ಯ ಕೆಲಸಗಳಲ್ಲಿ ನಿರತವಾಗುತ್ತದೆ. ಒಂದು, ಪ್ರಚಾರ: ದೇಶ ಹಾಗೂ ವಿದೇಶಗಳಲ್ಲಿ ಭಾರತದ ಸ್ವಾತಂತ್ರ್ಯದ ಕುರಿತಾಗಿ, ಸೇನೆಯ ಆಕ್ರಮಣದ ಕುರಿತಾಗಿ ಪ್ರಚಾರ ನಡೆಸುವುದು, ಸರಕಾರದ ಪರವಾಗಿ ಬೆಂಬಲನ್ನು ಸಂಪಾದಿಸುವುದು. ಬ್ರಿಟಿಷ್ ಭಾರತದ ಮೇಲಿನ ಆಕ್ರಮಣಕ್ಕೆ ಭಾರತೀಯರನ್ನು ಮಾನಸಿಕವಾಗಿ ಅಣಿಗೊಳಿಸುವುದು. ಎರಡು, ಯುದ್ಧಕ್ಕೆ ಬೇಕಾದ ಆರ್ಥಿಕ ಹಾಗೂ ಮನುಷ್ಯಬಲವನ್ನು ಕ್ರೋಢೀಕರಿಸುವುದು. ಮೂರು, ಕ್ರೋಢೀಕರಿಸಿದ ಸೇನೆ ಮತ್ತು ಸಂಪತ್ತನ್ನು ಸಂಘಟಿಸಿ ಯುದ್ಧಕ್ಕೆ ತಯಾರಿಗೊಳಿಸುವುದು ಜೊತೆಗೆ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಮೇಲೆ ಭಾರತದಲ್ಲಿ ಸ್ವತಂತ್ರ ಸರಕಾರ ಸ್ಥಾಪನೆಯ ಪೂರ್ವತಯಾರಿ.

ಬ್ರಿಟಿಷ್ ವಸಾಹತು ಪ್ರದೇಶವಾಗಿದ್ದ ಮಲಯಾ, ಸಿಂಗಾಪುರ ದ್ವೀಪಸಮೂಹದಲ್ಲಿ ಭಾರತದ್ದೇ ಸ್ವಂತ ಸರಕಾರವನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ನಾಗರಿಕ ಹಾಗೂ ಮಿಲಿಟರಿ ಅಧಿಕಾರವನ್ನು ಸ್ಥಾಪಿಸಿದ್ದು ಪ್ರಾಂತೀಯ ಸ್ವತಂತ್ರ ಸರಕಾರದ ಸಾಧನೆ. ಸ್ವಂತ ನಾಣ್ಯದ ಚಲಾವಣೆ, ನಾಗರಿಕ ಸಂಹಿತೆ ಮತ್ತು ನ್ಯಾಯಾಲಯವನ್ನು ಜಾರಿಗೆ ತರುವ ಮೂಲಕ ಇದೊಂದು ಪೂರ್ಣಕಾಲಿಕ, ಪೂರ್ನಸ್ವರೂಪದ ಸರಕಾರವಾಗಿ ಆಯೋಜನೆಗೊಳ್ಳುತ್ತದೆ. ಸ್ವತಂತ್ರ ಸರಕಾರ ಜಾರಿಗೆ ಬರುವುದರಿಂದ ವಾಸ್ತವವಾಗಿ ಬ್ರಿಟಿಷರನ್ನು ಭಾರತದಿಂದ ತೊಲಗಿಸುವ ಹೋರಾಟಕ್ಕೆ ನ್ಯಾಯಸಮ್ಮತತೆ ದೊರಕುತ್ತದೆ. 1943ರಲ್ಲಿ ಜಪಾನ್‍ನಿಂದ ಪಡೆದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಹಾಗೂ ಮಣಿಪುರ ಹಾಗೂ ನಾಗಾಲ್ಯಾಂಡಿನ ಕೆಲವು ಭಾಗಗಳ ಮೇಲೆ ಸಾರ್ವಭೌಮತೆಯನ್ನೂ ಸಾಧಿಸುತ್ತದೆ.

ಆಜಾದ್ ಹಿಂದ್ ಸರಕಾರದ ಉದ್ದೇಶ ಹಾಗೂ ಸಮಗ್ರ ಸನ್ನದು(ಇಂಗ್ಲಿಷ್: ಚಾರ್ಟರ್) ಸಂಪೂರ್ಣವಾಗಿ ಭಾರತ ಮತ್ತು ರಾಷ್ಟ್ರೀಯತೆಯ ಕೇಂದ್ರಿತವಾದದ್ದು. ಮೇಲಾಗಿ ಅದು ಯಾವುದೇ ಹೊರಗಿನವರ ಹಂಗು, ಮಧ್ಯಸ್ತಿಕೆ, ರಾಜಕಾರಣವಿಲ್ಲದೇ ವಿಶೇಷವಾಗಿ ಕೇವಲ ಭಾರತೀಯರಿಂದ ಭಾರತಕ್ಕಾಗಿ ರೂಪುಗೊಂಡ “ಸ್ವರಾಜ್ಯ”ದ ಸರಕಾರ. ಪ್ರಾಂತೀಯ ಸರಕಾರದ ಮುಖೇನ ಜಾತಿ, ಮತ, ಧರ್ಮ, ಪ್ರಾಂತಿಯತೆ ಇತ್ಯಾದಿ ಯಾವುದೇ ಬಗೆಯ ತಾರತಮ್ಯವಿಲ್ಲದೆ “ಒಂದೇ ಮಾತೃಭೂಮಿಯ ಅಣ್ಣತಮ್ಮಂದಿರು ನಾವು” ಎಂದು ಸಾರಿ ಅದನ್ನು ನೈಜ ಕಾರ್ಯದಲ್ಲಿಯೂ ಜಾರಿಗೆ ತಂದ ಭಾರತೀಯ ರಾಷ್ಟ್ರೀಯ ಸೇನೆಯ ಪ್ರತಿಯೊಬ್ಬರೂ ನಿಜಾರ್ಥದಲ್ಲಿ ಆ ಕಾಲದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿದ್ದ “ಭಾರತ ವಿಭಜನೆ ಆಂದೋಲನಕ್ಕೆ” ಸೆಡ್ಡುಹೊಡೆಯುವಂತಹ ಸಂದೇಶವನ್ನು ನೀಡಿದಂತಿತ್ತು.

ಇಲ್ಲಿ ಪ್ರಮುಖವಾದ ಸಂಗತಿಯನ್ನು ಗಮನಿಸುವುದು ಬಹುಮುಖ್ಯ. ಇದಕ್ಕೆ ಎರಡು ಕಾರಣಗಳನ್ನು ಕಂಡುಕೊಳ್ಳಬಹುದು. ಒಂದು, ಬೋಸ್‍ರಂತಹ ಸಮರ್ಥ ನಾಯಕತ್ವ ಸರಿಯಾದ ದಾರಿಯನ್ನೇ ತೋರಿಸುತ್ತದೆ. ಮಾತೃಭೂಮಿಯನ್ನು ಏಕತೆಯ ಹಾದಿಯಲ್ಲಿ ಕೊಂಡೊಯ್ಯಲಾಗದ (ಅ)ರಾಜತಾಂತ್ರಿಕ ಪೊಳ್ಳು ನಾಯಕರು ವಿಭಜನೆಯ ಹಾದಿಗೂ ಪರೋಕ್ಷ ಕಾರಣವಾಗುತ್ತಾರೆ. ಎರಡು, ಆಜಾದ್ ಹಿಂದ್ ಫೌಜ್ ಹಾಗೂ ಪ್ರಾಂತೀಯ ಸರಕಾರದಲ್ಲಿಯೂ ಅನೇಕ ಮುಸ್ಲಿಂಮರು ಅಪಾರ ಸಂಖ್ಯೆಗಳಲ್ಲಿ ಹಾಗೂ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅಲ್ಲಿ ಎಂದಿಗೂ, ಯಾವುದೇ ಕಾರಣಕ್ಕೂ ಭಾರತ ವಿಭಜನೆಯ ಧ್ವನಿ ಮೊಳಗುವುದೇ ಇಲ್ಲ. ಅಸಲಿಗೆ ಅದು ಭಾರತದಲ್ಲಿ ಸುರಕ್ಷಿತವಾಗಿದ್ದುಕೊಂಡು ಅಧಿಕಾರಕ್ಕಾಗಿ ಮೇಲ್ಸ್ತರದ ರಾಜಕಾರಣಮಾಡಿದ್ದುಕೊಂಡವರಿಗೆ ಮುಖ್ಯವಾಗಿತ್ತೇ ವಿನಃ ಸ್ವಾತಂತ್ರ್ಯಕ್ಕಾಗಿ ತಪಸ್ಸಿನಂತೆ ಜೀವವನ್ನು ಸವೆಸುತ್ತಿದ್ದವರಿಗಲ್ಲ. ಈ ಹೊತ್ತಿನಲ್ಲಿ ಅಂದಿನ ಇತಿಹಾಸವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾದ ನಮಗೆ ಇದೊಂದು ಬಹುಮುಖ್ಯ ಕಾಣ್ಕೆಯಾಗಬೇಕು. ಪ್ರಾಂತೀಯ ಸರಕಾರದ ಅಂದಿನ ಸಾಧನೆ, ಬಾಹ್ಯಚಹರೆಯಲ್ಲಿ “ಧರ್ಮನಿರಪೇಕ್ಷ” ಎಂಬ ಹಣೆಪಟ್ಟಿಯನ್ನು ಹಣೆಗೆ ಅಂಟಿಸಿಕೊಳ್ಳುವ ಹಿಂದಿನ, ಇಂದಿನ ಹಾಗೂ ಮುಂದಿನ ಎಲ್ಲಾ ಕಾಲದ ಸರಕಾರಗಳಿಗೂ ಪಾಠವಾಗಬೇಕು. ಭಾರತ ಶ್ರೇಷ್ಠವಾಗುವುದು ಅದರ ಏಕತೆ, ಐಕ್ಯತೆ ಮತ್ತು ಸರ್ವರ ಪಾಲ್ಗೊಳ್ಳುವಿಕೆಯಿಂದ, ಸ್ವಾರ್ಥತೆಯ ಅಧಿಕಾರ ಕೇಂದ್ರಿತ ರಾಜಕಾರಣದಿಂದಲ್ಲ.

ಪ್ರಾಂತೀಯ ಸರಕಾರ ರಚನೆಯಾದ ಸುದ್ದಿಯೊಂದೇ ಭಾರತೀಯರಲ್ಲಿ ಒಂದು ಬಗೆಯ ಮಿಂಚಿನ ಸಂಚಲನವನ್ನು ಉಂಟುಮಾಡಿತು. ಅಂತಹ ಒಂದು ಸಾಧನೆ ಸ್ವಾತಂತ್ರ್ಯ ಚಳುವಳಿ ಸಾಗುತ್ತಿದ್ದ ದಿಕ್ಕು ಹಾಗೂ ಅದರ ನೋಟವನ್ನೇ ಬದಲಾಯಿಸುತ್ತದೆ. ಭಾರತೀಯರಲ್ಲಿ ಸ್ವಾತಂತ್ರ್ಯದ ತೀವ್ರತೆ ಮತ್ತಷ್ಟು ಚುರುಕುಪಡೆಯುತ್ತದೆ. ಪರಿಣಾಮ 1942-1945ರ ಅವಧಿಯಲ್ಲಿ ಅನೇಕ ಪರ್ಯಾಯ ಸರಕಾರಗಳು ಜಾರಿಗೆ ಬರುತ್ತವೆ. ಅವುಗಳಲ್ಲಿ, ಆಗಸ್ಟ್ 1942ರಲ್ಲಿ ಉತ್ತರಪ್ರದೇಶದ ಬಲಿಯಾ ಎಂಬಲ್ಲಿ ಚಿತ್ತು ಪಾಂಡೆ ನೇತೃತ್ವದಲ್ಲಿ ಒಂದು ವಾರಗಳ ನಡೆದ ಪರ್ಯಾಯ ಸರಕಾರ, 1942ರಿಂದ 1944ರ ವರೆಗೆ ಪಶ್ಚಿಮ ಬಂಗಾಳ ಮಿಡ್ನಾಪುರ್ ಪ್ರಾಂತ್ಯದ ತಮ್ಲುಕ್ ಎಂಬಲ್ಲಿ ಜಾರಿಯಲ್ಲಿದ್ದ ಪರ್ಯಾಯ ಸರಕಾರ, ಮಹಾರಾಷ್ಟ್ರದ ಸತಾರದಲ್ಲಿ 1943ರಿಂದ 1945ರ ವರೆಗೆ ಜಾರಿಯಲ್ಲಿದ್ದ “ಪ್ರತಿಸರಕಾರ” ಪ್ರಮುಖವಾದವು. ಅವಕ್ಕೆಲ್ಲ ಬೋಸರ ಸಿಂಗಾಪುರದ ಪ್ರಾಂತೀಯ ಸರಕಾರ ನೇರವಾಗಿ ಕಾರಣವಲ್ಲದಿರಬಹುದು ಆದರೆ ಪರೋಕ್ಷ ಪ್ರೇರಣೆ ನೀಡಿರಬಹುದಾದ್ದನ್ನು ಅಲ್ಲಗಳೆಯುವಂತಿಲ್ಲ.

ಒಗ್ಗೂಡುವಿಕೆಗೆ ಕರೆ
ವಿದೇಶಿ ನೆಲದಲ್ಲಿ ಸ್ವದೇಶಿ ಪ್ರಜ್ಞೆಯನ್ನು ಜಾಗೃತಗೊಳಿಸಿ ಸಮಸ್ತ ಭಾರತೀಯರನ್ನೂ ಒಗ್ಗೂಡಿಸಿದ ಭಾರತದ ಪ್ರಥಮ “ಲೋಹ ಪುರುಷ”-

ಪ್ರಾಂತೀಯ ಸರಕಾರದ ಸ್ಥಾಪನೆಯ ಹಿನ್ನಲೆಯಲ್ಲಿ ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸಲು ನೀಡಿದ ಮಿಂಚಿನ ಕಂಠದ ಭಾಷಣ ಅವಿಸ್ಮರಣೀಯ. ಬ್ರಿಟಿಷರನ್ನು ಭಾರತದ ನೆಲದಿಂದ ಒದ್ದೋಡಿಸಲು ಪ್ರಾಂತೀಯ ಸರಕಾರವನ್ನು ರಚಿಸುತ್ತಿರುವುದಾಗಿಯೂ ಹಾಗೂ ಪ್ರಾಂತೀಯ ಸರಕಾರವೇ ಹೋರಾಟವನ್ನು ಮುನ್ನಡೆಸಲಿದೆ ಎಂದು ಬೋಸ್ ಪುನರುಚ್ಛರಿಸುತ್ತಾರೆ. ಅಂದರೆ ಸರಕಾರದ ಉದ್ದೇಶ ಆಡಳಿತವನ್ನು ಮೀರಿದ್ದು ಎಂಬುದು ಸ್ಪಷ್ಟ. “ಸಮಯ ಬಂದಿದೆ. ಈಗ ಆಗ್ನೇಯಾ ಏಷ್ಯಾದಲ್ಲಿ ವಾಸಿಸುತ್ತಿರುವ ಮೂರು ಮಿಲಿಯನ್(ಮೂವತ್ತು ಲಕ್ಷ) ಭಾರತೀಯರು ತಮ್ಮ ಸಮಸ್ತ ಸಂಪತ್ತಿನೊಂದಿಗೆ ಒಗ್ಗೂಡಬೇಕು. ತನು, ಮನ, ಧನಗಳಿಂದ ಈ ಮಹಾ ಹೋರಾಟಕ್ಕೆ ಸಜ್ಜಾಗಬೇಕಿದೆ. ಇದರಲ್ಲಿ ಅರ್ಧ ಮನಸ್ಸಿನ ಪಾಲ್ಗೊಳ್ಳುವಿಕೆಯಿಂದ ಫಲವಿಲ್ಲ.. ಸೇರಿರುವ ಸಮಸ್ತರಲ್ಲಿ ಕನಿಷ್ಟ ಮೂರು ಲಕ್ಷ ಸೇನಾನಿಗಳು ಹಾಗೂ 3 ಕೋಟಿಯಷ್ಟು ಧನ ಸಂಗ್ರಹಣೆ ಆಗಬೇಕಿದೆ..” ಎಂಬ ದೃಢ ಸಂಕಲ್ಪದ ಮಾತುಗಳು ಅಲ್ಲಿನ ಸರ್ವ ಭಾರತೀಯರನ್ನು ಪ್ರಾಂತೀಯ ಸರಕಾರವೆಂಬ ಒಂದು ಸಂಘಟನೆಯ ಅಡಿಯಲ್ಲಿ ಬರುವಂತೆ ಮಾಡಿತು.

“ನಿಷ್ಠೆ, ಕರ್ತವ್ಯ ಮತ್ತು ತ್ಯಾಗವನ್ನು ಸೇನಾನಿಗಳಾದ ನೀವು ಕೊಟ್ಟರೆ ನಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ. ಈ ಯುದ್ಧದಲ್ಲಿ ವೈಯ್ಯಕ್ತಿಕವಾಗಿ ನಮ್ಮಲ್ಲಿ ಎಷ್ಟು ಜನರು ಬದುಕಿರುತ್ತೇವೆಯೋ ತಿಳಿದಿಲ್ಲ, ಆದರೆ ಗೆಲುವು ನಮ್ಮದೇ. ಬದುಕುಳಿದ ಕೊನೆಯ ವ್ಯಕ್ತಿಗಳು ವಿಜಯದಿಂದ ಬ್ರಿಟಿಷ್ ಸಾಮ್ರಾಜ್ಯದ ಕೊನೆಯ ಸ್ಮಶಾನ- ದೆಹಲಿಯ ಕೆಂಪುಕೋಟೆಯ ಮೇಲೆ ಪಥಸಂಚಲನ ನಡೆಸುವ ತನಕ ನಮ್ಮ ಹೋರಾಟ ನಿಲ್ಲಬಾರದು..” “ನಿಮ್ಮ ಕತ್ತಲು-ಬೆಳಕು, ನೋವು-ನಲಿವು, ಸೋಲು-ಗೆಲುವಿನಲ್ಲಿ ನಾನು ನಿಮ್ಮ ಜೊತೆಯಲ್ಲಿ ನಿಲ್ಲುತ್ತೇನೆ. ಸ್ವಾತಂತ್ರ್ಯದ ಹಸಿವು, ಬಾಯಾರಿಕೆ, ಅನಿವಾರ್ಯ ಯುದ್ಧ ಹಾಗೂ ಸಾವನ್ನು ಹೊರತುಪಡಿಸಿ ಪ್ರಸ್ತುತ ನನ್ನ ಬಳಿ ಕೊಡುವುದಕ್ಕೆ ಏನೂ ಉಳಿದಿಲ್ಲ, ಆದರೆ ನೀವು ನನ್ನನ್ನು ಹಿಂಬಾಲಿಸಿದರೆ, ನನಗೆ ಆ ನಂಬಿಕೆಯಿದೆ, ನಾನು ನಿಮ್ಮನ್ನು ಜಯ ಮತ್ತು ಸ್ವಾತಂತ್ರ್ಯವನ್ನು ದಕ್ಕಿಸಿಕೊಡುತ್ತೇನೆ.. (ಸುಭಾಷ್ ಚಂದ್ರ ಬೋಸ್)” ಪ್ರೇರಣೆ, ಸ್ಪಷ್ಟತೆ, ಸಂಕಲ್ಪ ಹಾಗೂ ನಾಯಕತ್ವದ ಮೇರು ವ್ಯಕ್ತಿತ್ವದಿಂದ ಕೂಡಿದ್ದ ಸುಭಾಷ್ ಚಂದ್ರ ಬೋಸರ ಧೀಮಂತಿಕೆಯ ಮಾತುಗಳು ಆಜಾದ್ ಹಿಂದ್ ಸರಕಾರಕ್ಕೆ ಪೂರಕವಾದ ಸಾಮಾಜಿಕ ಹಾಗೂ ಸಾಂಸ್ಥಿಕ ಮನೋಭೂಮಿಕೆಯನ್ನು ಸಿದ್ಧಪಡಿಸುವುದರ ಜೊತೆಗೆ ಸರಕಾರ ರಚನೆಗೆ ಹಾಗೂ ಐಎನ್‍ಎ ಮುಖೇನ ಸ್ವಾತಂತ್ರ್ಯ ಯುದ್ಧಕ್ಕೆ ಜನರನ್ನು ಮಂತ್ರಮುಗ್ಧತೆಯಿಂದ ಹಿಂಬಾಲಿಸುವಂತೆ ಮಾಡಿದ್ದವು.

ಸರಕಾರ ರಚನೆಯ ಯಶಸ್ಸಿನಿಂದ ಅದರ ಮುಂದಿನ ಭಾಗ ಬ್ರಿಟಿಷ್ ಭಾರತವನ್ನು ಗೆಲ್ಲುವ ಶಸ್ತ್ರಸಜ್ಜಿತ ಯುದ್ಧದ ತಯಾರಿ ಗರಿಗೆದರತೊಡಗಿತು. ಬೋಸ್ ಪಾಲ್ಗೊಳ್ಳುತ್ತಿದ್ದ ಸಭೆಗಳಲ್ಲಿ ಭಾರತೀಯರು ಕಿಕ್ಕಿರಿದು ಸೇರಿರುತ್ತಿದ್ದರು. ಬೋಸ್ ಆಶಯದಂತೆ ಬರ್ಮಾ, ಥೈಲ್ಯಾಂಡ್, ಮಲಯಾಗಳಲ್ಲಿ ನೆಲೆಸಿದ್ದ ಭಾರತೀಯರು, ಶ್ರೀಮಂತರು-ಬಡವರನ್ನದೆ ಅಪಾರ ಪ್ರಮಾಣದಲ್ಲಿ ಧನ, ವಸ್ತ್ರ, ಆಹಾರವನ್ನೊದಗಿಸುತ್ತಿದ್ದರು. ಮಹಿಳೆಯರೂ ತಮ್ಮ ಚಿನ್ನಾಭರಣಗಳನ್ನು ದಾನ ನೀಡುತ್ತಿದ್ದರು. ಭಾರತೀಯ ಸಮುದಾಯದಿಂದ ದಾನವಾಗಿ ಬರುತ್ತಿದ್ದ ಹಣಕಾಸು, ಸಂಪತ್ತಿನ ಪ್ರಮಾಣ ಎಷ್ಟರ ಮಟ್ಟಿಗೆ ಇತ್ತೆಂದರೆ ಏಪ್ರಿಲ್ 1944ರಲ್ಲಿ ಅವುಗಳ ನಿರ್ವಹಣೆಗೆಂದೇ ರಂಗೂನ್‍ನಲ್ಲಿ “ಆಜಾದ್ ಹಿಂದ್ ಬ್ಯಾಂಕ್”ಅನ್ನು ತೆರೆಯಬೇಕಾಯಿತು. ಸುಭಾಷ್ ಚಂದ್ರ ಬೋಸರ ಸಾಧನೆಯ ಹಿಂದೆ ಇವರೆಲ್ಲರ ಅಳಿಲು ಸೇವೆಯೂ ಅಡಗಿದೆ. ಜನರು ಸಾಂಘಿಕವಾಗಿ, ಸಂಘಟಿತರಾಗಿ ಮತ್ತು ಸಾಮಾಹಿಕವಾಗಿ ಈ ಬಗೆಯ ಸಕ್ರಿಯ ಕೊಡುಗೆಯನ್ನು ನೀಡಿದ್ದರು ಎಂದರೆ ಅಂದರೆ ಸ್ವಾತಂತ್ರ್ಯ ಚಳುವಳಿಯ ಜ್ವಾಲೆ, ಬೋಸ್ ಮೇಲಿನ ನಂಬಿಕೆ ಹಾಗೂ ವಿದೇಶಿ ನೆಲದಲ್ಲಿಯೂ ಭಾರತವನ್ನು ಗೆದ್ದು ಸ್ವಾರಾಜ್ಯವನ್ನು ದಕ್ಕಿಸಿಕೊಳ್ಳುವ ಹೋರಾಟಕ್ಕೆ ಅಗತ್ಯವಾಗಿದ್ದ ಜನಕೇಂದ್ರಿತ ತಯಾರಿಯನ್ನು ಇದು ಸೂಚಿಸುತ್ತದೆ.

ಬ್ರಿಟಿಷ್ ಸಾಮ್ರಾಜ್ಯದ ಸಾರ್ವಭೌಮತೆಗೆ ಸವಾಲೆಸೆದ ಈ ಪ್ರಾಂತೀಯ ಸರಕಾರ ಇಂದಿಗೆ ಸಣ್ಣ ಪ್ರಯತ್ನವಾಗಿ ಕಂಡರೂ ಅಂದು ಅದರ ಮಹತ್ವ ಎಷ್ಟಿತ್ತೆಂದರೆ, ಜಪಾನ್, ಜರ್ಮನಿ, ಇಟಲಿ ನೇತೃತ್ವದ “ಆಕ್ಸಿಸ್” ಮಿತ್ರಕೂಟ ಸೇರಿದಂತೆ ವಿಶ್ವದ ಅನೇಕ ದೇಶಗಳು ಈ ಸ್ವಂತಂತ್ರ ಪ್ರಾಂತೀಯ ಸರಕಾರವನ್ನು ಅಧಿಕೃತವಾಗಿ ಒಪ್ಪಿ ಅಂಗೀಕರಿಸುತ್ತವೆ. ಮೇಲಾಗಿ ಸರಕಾರ ರಚನೆಯ ಇಂತಹ ಒಂದು ದಿಟ್ಟ ಕ್ರಮವೇ ಜಪಾನ್‍ನಂತಹ ಸಾಮ್ರಾಜ್ಯವೂ ಈ ಸರಕಾರವನ್ನು ತನಗೆ ಸಮಾನಾದ ದೃಷ್ಟಿಯಲ್ಲಿ ಕಾಣತೊಡಗುತ್ತದೆ. ಆ ಹೊತ್ತಿಗೆ ಪರ್ಯಾಯ ಸರಕಾರವೊಂದು ಈ ಬಗೆಯ ಮನ್ನಣೆ ಪಡೆಯಲು ಭಾರತದ ವಿಮುಕ್ತಿಯೆಂಬ ದಿವ್ಯ ಮಂತ್ರದ ಜೊತೆಗೆ ಬೋಸ್‍ರ ವರ್ಚಸ್ಸು, ತಂತ್ರಗಾರಿಕೆ ಮತ್ತು ನಾಯಕತ್ವವೂ ಅಷ್ಟೇ ಪ್ರಮುಖವಾದ ಕಾರಣ.

ಭಾರತದ ಮೊದಲ ಸ್ವತಂತ್ರ ಸರಕಾರದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಅಂದರೆ ಜವಾಹರ್‍ಲಾಲ್ ನೆಹರುರವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗುವುದಕ್ಕೂ ಮುನ್ನವೇ ಸುಭಾಷ್ ಚಂದ್ರ ಬೋಸ್ ಅವಿಭಜಿತ ಅಖಂಡ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಾರೆ. ಸ್ವಾತಂತ್ರ್ಯ ನಂತರದಲ್ಲಿ ಬಂದ ಪ್ರಧಾನಿಗಳಿಗೆ ಸುರಕ್ಷಿತ ದೇಶವೆಂಬ ಭೌತಿಕ ಚೌಕಟ್ಟಿನಲ್ಲಿ ಅನೇಕ ಸವಲತ್ತುಗಳಿದ್ದವು ಆದರೆ ಬೋಸರಿಗೆ ವಿದೇಶಿ ನೆಲದಲ್ಲಿ ಸ್ವದೇಶಿ ಪ್ರಜೆÐಯನ್ನು ಜಾಗೃತಿಯಲ್ಲಿಟ್ಟು ಪ್ರತೀ ಕ್ಷಣವೂ ಸಾವು ಬದುಕಿನ ಜೊತೆ ಹೋರಾಡಬೇಕಾದ, ಭಾರತದಲ್ಲಿನ ಹಾಗೂ ವಿದೇಶದಲ್ಲಿನ ಜನರನ್ನು ಭಾರತದ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜುಗೊಳಿಸುವ ಅನಿವಾರ್ಯತೆಯಿತ್ತು. ಒಂದರ್ಥದಲ್ಲಿ ದಾಸ್ಯಮುಕ್ತಿಯ ಹಾದಿಯಲ್ಲಿ ಕ್ಷಣಕ್ಷಣಕ್ಕೂ ಎದುರಾಗುತ್ತಿದ್ದ ಸಂಕೀರ್ಣ ಸವಾಲುಗಳೇ ಅವರನ್ನು ಮಹಾನಾಯಕನನ್ನಾಗಿಸಿದವು ಎಂದು ತೋರುತ್ತದೆ.

ನನಸಾಗದ ಕನಸು:
ಭಾರತ-ಬರ್ಮಾ(ಮ್ಯಾನ್ಮಾರ್)ಗಡಿಯಲ್ಲಿ ಐಎನ್‍ಎಯ ಜನರಲ್ ಶಾ ನವಾಜ್ ನೇತೃತ್ವದಲ್ಲಿ ಐಎನ್‍ಎ ಜಪಾನ್ ತುಕಡಿಯನ್ನು ಸೇರಿಕೊಂಡು ಜೊತೆಯಾಗಿ “ಇಂಫಾಲ ದಂಡಯಾತ್ರೆ” ಕೈಗೊಳ್ಳಲಾಗುತ್ತದೆ. ಉದ್ದೇಶ ಭಾರತವನ್ನು ಮುಕ್ತಿಗೊಳಿಸುವುದಾಗಿದ್ದರೂ, ಎರಡನೇ ವಿಶ್ವಯುದ್ಧದಲ್ಲಿ ಅಮೆರಿಕದ ಬರುವಿಕೆ ಹಾಗೂ ಹಿರೋಶಿಮಾ, ನಾಗಾಸಾಕಿ ಮೇಲೆ ಹಾಕಲಾದ ಆಟಂಬಾಂಬ್ ಪರಿಣಾಮ ಜಪಾನ್ ಯುದ್ಧದಲ್ಲಿ ಹಿನ್ನಡೆಯುಂಟಾಗುತ್ತದೆ. ಅಲ್ಲಿಂದ ಜಪಾನ್‍ಗೆ ಭಾರತವೊಂದು ದಂಡಯಾತ್ರೆಯಾಗಿ ನಿಧಾನವಾಗಿ ಭಾರತದಿಂದಲೂ ಹಿಂದೆಸರಿಯುತ್ತದೆ. 1945ರ ಮಧ್ಯದ ಹೊತ್ತಿಗೆ ಜಪಾನ್ ಆಗ್ನೇಯ ಏಷ್ಯಾದಲ್ಲಿ ಬ್ರಿಟಿಷರಿಗೆ ಸಂಪೂರ್ಣವಾಗಿ ಶರಣಾಗುತ್ತದೆ.

ಆದರೆ ಐಎನ್‍ಎ ಸೇನಾನಿಗಳು ಬದಲಾದ ಸ್ಥಳೀಯ-ಜಾಗತಿಕ ಪರಿಸ್ಥಿತಿಯಲ್ಲಿ ಏಕಾಂಗಿ ಹೋರಾಟವನ್ನು ನಡೆಸಬೇಕಾಗುತ್ತದೆ. ಆದರೆ ಅದಾಗಲೇ ಜಪಾನ್ ಪತನದೊಂದಿಗೆ ಬ್ರಿಟನ್ ಮಿತ್ರಕೂಟಗಳ ಕೈ ಮೇಲಾಗಿರುತ್ತದೆ. ಮೇಲಾಗಿ ಭಾರತೀಯರನ್ನು ಸ್ವಭಾವ, ಆಹಾರ, ಆಯುಧ, ಕ್ಷಾತ್ರ ಮತ್ತು ಕಾರ್ಯದಲ್ಲಿ ದ್ವಿತೀಯ ದರ್ಜೆಯವರಂತೆ ಕಂಡ ಜಪಾನ್ ಸೇನೆಯ ವರ್ತನೆಯಿಂದ ಐಎನ್‍ಎ ಸೇನಾನಿಗಳೂ ಮಾನಸಿಕವಾಗಿ ಕುಗ್ಗಿರುತ್ತಾರೆ. ಆದರೂ ಏಕಾಂಗಿ ಹೋರಾಟ ಮುಂದುವರೆಯುತ್ತದೆ. ಅಲೈಡ್ ಮಿತ್ರಕೂಟದ ವಿಜಯದಿಂದ ಐಎನ್‍ಎಯ ಎಲ್ಲಾ ಯುದ್ಧ ಖೈದಿಗಳೂ, ಐಎನ್‍ಎ ಹೋರಾಟಗಾರರನ್ನು ಬಂಧಿಯಾಗಿಸಿ ಕೆಂಪುಕೋಟೆಯಲ್ಲಿ ವಿಚಾರಣೆಯನ್ನು ನಡೆಸಲಾಗುತ್ತದೆ. ಮೊದಲ ಬಾರಿಗೆ ಭಾರತವೆಲ್ಲ ಏಕ ಧ್ವನಿಯಲ್ಲಿ ಅವರನ್ನು ವಿಚಾರಣೆಗೊಳಪಡಿಸಿ ಶಿಕ್ಷಿಸುವುದರ ವಿರುದ್ಧ ಪ್ರತಿಭಟಿಸುತ್ತದೆ. ಅಲ್ಲಿಂದ ಐಎನ್‍ಎ ಸಾಹಸಗಾಥೆ ಮತ್ತು ತ್ಯಾಗ, ಬಲಿದಾನದ ಕಥನ ಭಾವನಾತ್ಮಕ, ಪ್ರೇರಣಾತ್ಮಕವಾಗಿ ಮನೆಮನೆಗೂ ತಲುಪುತ್ತದೆ. (ಪೂರಕವಾಗಿ ನೋಡಿ: ಹಿಂದಿ ಚಲನಚಿತ್ರ “ರಾಗ್ ದೇಶ್”).

ಮುಂದೆ ಐಎನ್‍ಎ, ಇಂಫಾಲ ದಂಡಯಾತ್ರೆಯಲ್ಲಿ ಸೋಲನ್ನು ಅನುಭವಿಸಿದ ನಂತರ ಅಂಡಮಾನ್, ನಿಕೋಬಾರ್, ನಾಗಲ್ಯಾಂಡ್, ಮಣಿಪುರ ಪ್ರಾಂತ್ಯಗಳನ್ನು ಬ್ರಿಟಿಷರಿಗೆ ಮರಳಿ ಹಸ್ತಾಂತರಿಸಲಾಗುತ್ತದೆ. ಸುಭಾಷ್ ಚಂದ್ರ ಬೋಸರು ಸಂಚರಿಸುತ್ತಿದ್ದ ವಿಮಾನ ಪತನದ ಸುದ್ದಿಯಿಂದ ಐಎನ್‍ಎ ಪಯಣ ಸಂಪೂರ್ಣವಾಗಿ ನಿಂತುಹೋಗುತ್ತದೆ. ಆಜಾದ್ ಹಿಂದ್‍ನ ನಾಗರಿಕ ಸರಕಾರವೂ ಐಎನ್‍ಎಯ ಪತನದೊಂದಿಗೆ ಸಹಜವಾಗಿ ತೆರೆಮರೆಗೆ ಸರಿಯುತ್ತದೆ. ಈ ಎಲ್ಲಾ ಸಾಧನೆಗಳನ್ನು ಹೊರತುಪಡಿಸಿಯೂ ಆಜಾದ್ ಹಿಂದ್‍ನ ಪ್ರಾಂತೀಯ ಸರಕಾರ ಅನೇಕ ಸಂಗತಿಗಳಿಗೆ ಜಪಾನ್ ಮೇಲೆ ಹೆಚ್ಚಾಗಿ ಅವಲಂಬಿತವಾಗಿತ್ತು ಎಂಬುದಾಗಿ ಅನೇಕ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಐಎನ್‍ಎ ಹಾಗೂ ಆಜಾದ್ ಹಿಂದ್ ಪ್ರಾಂತೀಯ ಸರಕಾರದ ಸಾಧನೆಯನ್ನು ಬ್ರಿಟಿಷರು ಮೊದಲಿಗೆ “ದೇಶದ್ರೋಹ” ಎಂದು ಪರಿಗಣಿಸಿದರು ಆದರೆ ಐಎನ್‍ಎ ಜೊತೆಯಲ್ಲಿ ನಿಂತ ಸಮಸಸ್ತ ಭಾರತೀಯರು ಹಾಗೂ ಬ್ರಿಟಿಷ್ ಭಾರತೀಯ ಸೇನೆಯಲ್ಲಿದ್ದ ಸೇನಾನಿಗಳ ಮನಸ್ಥಿತಿಯನ್ನು “ಕೆಂಪುಕೋಟೆ ವಿಚಾರಣೆ”ಯ ಸಂದರ್ಭದಲ್ಲಿ ಅರಿತ ಬ್ರಿಟಿಷ್ ಸರಕಾರ ಹಾಗೂ ಬ್ರಿಟಿಷ್ ಇತಿಹಾಸಕಾರರು, ಇಂಡಿಯನ್ ನ್ಯಾಶನಲ್ ಆರ್ಮಿಯ ಸಾಧನೆಯನ್ನು “ದಿ ಗ್ರೇಟೆಸ್ಟ್ ಎಮಾಂಗ್ ದಿ ಪೇಟ್ರಿಯೆಟ್ಸ್ (ಅಂದರೆ ದೇಶಭಕ್ತರಲ್ಲೇ ಶ್ರೇಷ್ಟರು)” ಎಂಬುದಾಗಿ ಬಣ್ಣಿಸಿ ಹೊಗಳಿದ್ದಾರೆ. ಒಂದು ವೇಳೆ ಅವರನ್ನು ದೇಶದ್ರೋಹಿಗಳು ಎಂದು ಕಂಡಿದ್ದರೆ ಬ್ರಿಟಿಷರ ವಿರುದ್ಧ ಇಡೀ ಭಾರತಕ್ಕೆ ಭಾರತವೇ ಕ್ಷಿಪ್ರಗತಿಯಲ್ಲಿ ದಂಗೆಯೇಳಬಹುದಾದ ಸಾಂಭ್ಯವತೆಯಿತ್ತು.

ಒಂದು ರೀತಿಯಲ್ಲಿ 41-42ರ ಹೊತ್ತಿಗೆ ಜನಸಾಮಾನ್ಯರಲ್ಲಿ ಬೇಗುದಿಯಲ್ಲಿದ್ದ ಹತಾಶೆ, ಬೋಸ್‍ರ ಸೇನೆಕಟ್ಟುವ ಪ್ರಕ್ರಿಯೆ ಇವನ್ನೆಲ್ಲ ಗ್ರಹಿಸುತ್ತಿದ್ದ ಗಾಂಧೀಜಿಯವರಿಗೆ ಮಾಡು ಇಲ್ಲವೇ ಮಡಿ ಎಂಬ ಉದ್ಘೋಶವನ್ನು ನೀಡದೇ ಬೇರೆ ವಿಧಿಯಿರಲಿಲ್ಲವೆಂದು ತೋರುತ್ತದೆ. ಇಲ್ಲವಾದಲ್ಲಿ ಬೋಸ್ ಹಾಗೂ ಐಎನ್‍ಎಯಿಂದ ಪ್ರೇರಣೆಗೊಂಡು ಭಾರತದಾದ್ಯಂತ ವಿವಿಧ ಜನನಾಯಕರು ತಮ್ಮದೇ ಸೇನೆಗಳನ್ನು ಸಜ್ಜುಗೊಳಿಸಿ ಬ್ರಿಟಿಷರ ವಿರುದ್ಧ ಹೋರಾಡುವ ಮನಸ್ಥಿತಿಯಲ್ಲಿದ್ದಂತೆ ತೋರುತ್ತದೆ. ಅಷ್ಟೇ ಏಕೆ ಬ್ರಿಟಿಷ್ ಭಾರತೀಯ ಸೇನೆಯ ತುಕಡಿಗಳು ಮಿಲಿಟರಿ ಬಂಡೇಳಲು ಸಜ್ಜಾಗಿರುತ್ತವೆ. ಉದಾಹರಣೆಗೆ, ಮುಂದೆ ಫೆಬ್ರವರಿ 16, 1946ರಲ್ಲಿ, ಬಂಧಿತ ಐಎನ್‍ಎ ಸೇನಾನಿಗಳ ವಿಚಾರಣೆಗಳನ್ನು ಖಂಡಿಸಿ, ಬಾಂಬೆಯ ರಾಯಲ್ ಇಂಡಿಯನ್ ರೇಟಿಂಗ್ಸ್‍ನ “ಎಚ್‍ಎಮ್‍ಐಎಸ್ ತಲ್ವಾರ್” ತುಕಡಿ ಸರಕಾರದ ವಿರುದ್ಧವೇ ಮುಷ್ಕರಕ್ಕಿಯುತ್ತದೆ. ಇದು ಸ್ವಾತಂತ್ರ್ಯ ಹೋರಾಟದ ಕೊನೆಯ ಘಟ್ಟದಲ್ಲಿ ಹೊಸ ಕೆಚ್ಚನ್ನು ಗರಿಗೆದರಿಸಿದ ಮತ್ತೊಂದು ಅವಿಸ್ಮರಣೀಯ ಅಧ್ಯಾಯ.

ವಿಶ್ವದ ಇತಿಹಾಸದಲ್ಲಿ ಯಾವುದೇ ದೇಶಕ್ಕೆ ಸ್ವಾತಂತ್ರ್ಯ ಶಾಂತಿಯಿಂದ ಲಭಿಸಲೇ ಇಲ್ಲ. ಅಮೆರಿಕ, ಫ್ರಾನ್ಸ್, ಜರ್ಮನಿ.. ಯಾವ ದೇಶವೂ ಹೋರಾಡದೇ ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡಿಲ್ಲ. ಹಾಗೆಂದು ಶಾಂತಿ ಮಾರ್ಗ ಕಳಪೆ ಎಂದೂ ಅಲ್ಲ, ಅಥವಾ ಶಾಂತಿ ಮಾರ್ಗ ಭಾರತಕ್ಕೆ ವರದಾಯಕವಾಗಿಲ್ಲ ಎಂದೂ ಅಲ್ಲ. ಬದಲಾಗಿ ಶಾಂತಿ ಮಾರ್ಗವೊಂದರಿಂದಲೇ ಸ್ವಾತಂತ್ರ್ಯ ಲಭಿಸಿದೆ ಎನ್ನುವಾಗ ನಾವು ಅನೇಕ ಸತ್ಯಗಳನ್ನು ಸಮಾಧಿಮಾಡಿರುತ್ತೇವೆ. ಅಹಿಂಸೆಯ ಮಾರ್ಗವೆಂದು ತೋರುವ ಮಾರ್ಗ ಶಕ್ತವಾಗುವುದೇ ಶಕ್ತಿಯ ನಿಜ ಸ್ವರೂಪವನ್ನು ಪ್ರಚುರಪಡಿಸಿದಾಗ. ಅಂದಹಾಗೆ ಅಹಿಂಸೆಯ ಮಾರ್ಗದಿಂದ ದೊರೆತ ಜಯವೆಂಬ ಏಕಮುಖ ಚರ್ಯೆಯಲ್ಲಿ ಅದೆಷ್ಟೋ ಅಸಂಖ್ಯ ಬಲಿದಾನಗಳು ಮರೆಮಾಚಿಹೋಗಬಾರದಲ್ಲ. ಅಂತಹ ಅವಗಾಹನೆಗೆ ತೆಗೆದುಕೊಳ್ಳಬೇಕಾದ ಐಎನ್‍ಎಯ ಸಾಹಸ ಕಥನ ನಮಗೆ ಮುಖ್ಯ. ಶಸ್ತಾಸ್ತ್ರಗಳ ಯುದ್ಧದಿಂದ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಪ್ರಾರಂಭಿಸಿದ ಪ್ರಾಂತೀಯ ಸರಕಾರ ಅದರ ಒಂದು ಪ್ರಮುಖ ಮೈಲಿಗಲ್ಲು.

2015ರಲ್ಲಿ ತಡವಾಗಿ ಬಹಿರಂಗಗೊಂಡ ಸರಕಾರದ ಗುಪ್ತಚರ ಇಲಾಖೆಯ ಎರಡು ಕಡತಗಳ ಆಧಾರದಲ್ಲಿ ಹೇಳುವುದಾದರೆ, 1947ರ ಸ್ವಾತಂತ್ರ್ಯದ ತರುವಾಯವೂ ಇಂತಹ ಮಹಾನ್ ನಾಯಕನ ಮನೆಯವರ ಮೇಲೆ, ಬದುಕಿದ್ದರೆ ಬೋಸರ ಮೇಲೂ ನೆಹರೂ ನೇತೃತ್ವದ ಸರಕಾರ ಬೇಹುಗಾರಿಕೆಯನ್ನು ನಡೆಸುತ್ತದೆ ಎಂದರೆ ಅದನ್ನು ನಾವೆಲ್ಲರೂ ಖೇದ, ಅವಮಾನ, ವಿಶ್ವಾಸದ್ರೋಹ ಮತ್ತು ನಾಚಿಕೆಗೇಡಿನಿಂದ ನಿಬ್ಬೆರಗಾಗಬೇಕಾದ ಸಂಗತಿ. ಅಷ್ಟೇ ಏಕೆ, ನೇತಾಜಿ ಕಥನವನ್ನು ಕೇಳಿದ ಮಾತ್ರಕ್ಕೆ ರೋಮಾಂಚನಗೊಳ್ಳುವ ಭಾರತೀಯ ಮನಸ್ಸುಗಳಿಗೆ, ಆ ಮನಸ್ಸುಗಳೇ ಆರಿಸಿ ಕಳುಹಿಸಿದ ಸರಕಾರಗಳಿಗೆ ಆಜಾದ್ ಹಿಂದ್ ಫೌಜ್‍ನ ಸಾಧನೆಯನ್ನು ಸ್ಮರಿಸಿಕೊಳ್ಳುವ, ಅಂತಹ ಯುಗಪ್ರವರ್ತಕ ಪ್ರಯತ್ನಗಳ ಹಿಂದಿನ ಉತ್ಕಟ ದೇಶಪ್ರೇಮ, ಚಿಂತನೆ ತ್ಯಾಗ, ಸಾಹಸ, ಬಲಿದಾನ, ಸೇವೆ ಮೊದಲಾದ ವೀರಗಾಥೆಗಳನ್ನು ಆಚರಿಸಬೇಕು, ಮುಂದಿನ ಪೀಳಿಗೆಗೆ ದಾಟಿಸಬೇಕು; ಅಂತಹ ಚಿರಸ್ಮರಣೀಯ ಬಿಂಬಗಳನ್ನು ನವ ಭಾರತದ ಪುನರ್ನಿಮಾಣದಲ್ಲಿ ಪ್ರತಿಬಿಂಬಗಳಾಗಿಸಿಕೊಂಡಾಗ ಮಾತ್ರವೇ ಭಾರತ ಆಂತರ್ಯದಲ್ಲಿಯೂ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸದಿಂದ ವಿಕಸಿತಗೊಳ್ಳಲು ಸಾಧ್ಯ ಎಂಬ ಸತ್ಯದ ಸಾಕ್ಷಾತ್ಕಾರವೂ ಆಗಲಿಲ್ಲ, ಇಂತಹ ಅಸಂಖ್ಯ ಕೋಟಿಗಳ ಬಲಿದಾನಗಳು ಮುಖ್ಯವೂ ಆಗಲಿಲ್ಲ.

ಅಂದು ಚರಕವನ್ನು ಮಧ್ಯದಲ್ಲಿ ಹೊಂದಿದ್ದ ತ್ರಿವರ್ಣ ಧ್ವಜವನ್ನು ಹಾರಿಸಿ ವಿದೇಶಿ ನೆಲದಲ್ಲಿ ಮೊದಲ ಸ್ವತಂತ್ರ ಸರಕಾರವನ್ನು ರಚಿಸಿದ್ದ ಬೋಸ್ ಹಾಗೂ ಆಜಾದ್ ಹಿಂದ್ ಸರಕಾರದ ಸಾಧನೆಯನ್ನು ಗುರುತಿಸುವುದಕ್ಕೆ 75ವರ್ಷಗಳೇ ಬೇಕಾಯಿತು. ಇದೇ ಮೊದಲ ಬಾರಿಗೆ ಅಕ್ಟೋಬರ್ 21ರಂದು ದೆಹಲಿಯ ಕೆಂಪುಕೋಟೆಯಲ್ಲಿ ಭಾರತದ ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ 75ವರ್ಷಗಳ ಹಿಂದಿನ ಆ ದಿನವನ್ನು ಸ್ಮರಿಸುವ, ಆಚರಿಸುವ ಶ್ಲಾಘನೀಯ ಪ್ರಯತ್ನವೊಂದು ನಡೆಯುತ್ತಿದೆ. 75ವರ್ಷಗಳ ಹಿಂದೆ, ಈ ದಿನದಂದು ನೇತಾಜಿಯವರು ನೀಡಿದ್ದ, ಬ್ರಿಟಿಷರನ್ನು ಮಣಿಸಿ “ದೆಹಲಿ ಚಲೋ- ದೆಹಲಿಯ ಕೆಂಪುಕೋಟೆಗೆ ಹೋಗೋಣ” ಎಂಬ ಅಂದಿನ ಘೋಷವಾಕ್ಯ ಇಂದು ಕೆಂಪುಕೋಟೆಯ ಅಷ್ಟದಿಕ್ಕುಗಳಿಂದ ಸಮಸ್ತ ಭಾರತೀಯರ ಮನೆ-ಮನಸ್ಸುಗಳಲ್ಲಿ ಅನುರಣಿಸಲಿ. ಮತ್ತು ಸಮಂಜಸವಾಗಿಯೇ ಅದು ಸ್ವಾತಂತ್ರ್ಯದ ಸಂಕಥನದ ಪುನರ್ವಾಖ್ಯೆಗೆ ನಾಂದಿಹಾಡಲಿ. ಅಸಂಖ್ಯ ಬಲಿದಾನಗಳಿಗೆ ಪ್ರಣಾಮ ಸಲ್ಲಿಸಿ, ಹೊಸಕಾಲದಲ್ಲಿ ಅಮರ ಭಾರತದ ಸಂಕಲ್ಪವನ್ನು ಮುನ್ನಡೆಸುವ ದಾರಿಯಲ್ಲಿ ಜೊತೆಯಾಗೋಣ.


–ಶ್ರೇಯಾಂಕ ಎಸ್ ರಾನಡೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!