ಅಂಕಣ ಸ್ಪ್ಯಾನಿಷ್ ಗಾದೆಗಳು

ಲೋಕೋ ಭಿನ್ನ ರುಚಿಃ

ಯಾವ ಪುಸ್ತಕ ಎನ್ನುವುದು ನೆನಪಿಲ್ಲ ಆದರೆ ನಮ್ಮ ಹೆಚ್ ನರಸಿಂಹಯ್ಯನವರು ಹಲವಾರು ವರ್ಷ ಮೂರು ಹೊತ್ತು ಉಪ್ಪಿಟ್ಟು ತಿಂದುಕೊಂಡು ಜೀವಿಸಿದ್ದರು ಎನ್ನುವುದು ಓದಿದ್ದು ಮಾತ್ರ ನೆನಪಿನಲ್ಲಿದೆ . ಬಾರ್ಸಿಲೋನಾಗೆ ಬಂದ ಹೊಸತು ನನಗೆ ಅಡುಗೆ ಮಾಡಿ ಅಭ್ಯಾಸವಿಲ್ಲ . ಮೊದಲು ಮಾಡಲು ಕಲಿತದ್ದು ಉಪಿಟ್ಟು! ನಂತರ ಹಾಗೂ ಹೀಗೂ ಮಾಡಿ ಹೊಟ್ಟೆಯೆಂಬ ಎಂದೂ ತುಂಬದ ಉಗ್ರಾಣವ ತುಂಬಿಸಲು ಹಲವಾರು ಖಾದ್ಯಗಳ ಮಾಡಲು ಕಲಿತೆ ಅದು ಬೇರೆಯ ಕಥೆ. ಆದರೂ ಮದುವೆಯಾಗುವವರೆಗೆ ಉಪಿಟ್ಟು ತಿನ್ನದ ದಿನವಿಲ್ಲ. ಮಾಡಲು ಬಹಳ ಸುಲಭ ಅಲ್ಲದೆ ಅದನ್ನ ಮಾಡಲು ಹೆಚ್ಚು ಪಾತ್ರೆಯ ಅವಶ್ಯಕತೆಯಿಲ್ಲ. ಮಾಡುವುದು ಮತ್ತು ತಿನ್ನುವುದು ಒಂದಾದರೆ ಮಾಡಿದ ಪಾತ್ರೆ ತೊಳೆಯುವುದು ಇನ್ನೊಂದು ದೊಡ್ಡ ಯುದ್ಧ. ಹೀಗಾಗಿ ಉಪಿಟ್ಟು ಮಾಡಲು ಶುರುವಾದದ್ದು ನಂತರದ ದಿನಗಳಲ್ಲಿ ಮುಂದಿನ ಆರೇಳು ವರ್ಷ ಅದಿಲ್ಲದ ದಿನವಿಲ್ಲ ಎನ್ನುವಂತಾಯಿತು. ಈ ವಿಷಯ ಏಕೆ ಬಂತೆಂದರೆ ಕೆಲವರಿಗೆ ಉಪಿಟ್ಟು ಎಂದರೆ ಅಲರ್ಜಿ. ಅದನ್ನ ತಿನ್ನುವುದಿರಲಿ ಅದರ ಹೆಸರು ಕೇಳಿದರೆ ಸಾಕು ಮುಖ ಕಿವುಚಿ ಎದ್ದೋಡ್ಡುತ್ತಾರೆ. ಇದು ಕೇವಲ ಉಪ್ಪಿಟ್ಟಿಗೆ ಸೀಮಿತ ಎನ್ನುವುದಾದರೆ ಅದು ತಪ್ಪು. ಏಕೆಂದರೆ ನಮಗೆ ಅತಿ ಇಷ್ಟವಾದ ತಿಂಡಿ ಅಥವಾ ಊಟ ಇನ್ನೊಬ್ಬರಿಗೆ ಎಳ್ಳಷ್ಟೂ ರುಚಿಸದೆ ಹೋಗಬಹುದು. ಒಮ್ಮೆ ಹೀಗೆ ಆಯ್ತು , ಬೆಂಗಳೂರಿನಿಂದ ಅಮ್ಮ ಮಾಡಿ ಕೊಟ್ಟ ಕೋಡುಬಳೆಯನ್ನ ನನ್ನ ಸಹೋದ್ಯೋಗಿ ಅಲೆಕ್ಸ್ ಗೆ ಕೊಟ್ಟೆ ಏನಿದು ಅಂದನಾತ , ನಾನು ಕೋಡುಬಳೆ ಎಷ್ಟು ಪ್ರಸಿದ್ಧ ತಿಂಡಿ ಎನ್ನುವುದನ್ನ ವಿವರಿಸಿದೆ ಕೊನೆಗೂ ನನ್ನ ಮಾತಿನಿಂದ ಪ್ರೇರಿತನಾಗಿ ಒಂದು ತುಂಡು ಕೋಡುಬಳೆ ತಿಂದವನು ಅರೆಕ್ಷಣದಲ್ಲಿ ತುಪುಕ್ ಎಂದು ಉಗಿದ. ಆತನಿಗೆ ಕೋಡುಬಳೆ ಇಷ್ಟವಾಗಲಿಲ್ಲ . ಅಮ್ಮ ಮಾಡುವ ಕೋಡುಬಳೆ ನಮ್ಮ ಬಳಗದಲ್ಲಿ ಜಗದ್ವಿಖ್ಯಾತಿ ಆದರೂ ಅದು ಅಲೆಕ್ಸ್ ಗೆ ರುಚಿಸಲಿಲ್ಲ.

ಇದೆಲ್ಲದರ ಅರ್ಥ ಬಹಳ ಸರಳ ‘ನಾವು ಯಾವುದು ತುಂಬಾ ಇಷ್ಟ ಎನ್ನುತ್ತೇವೋ ಆ ಖಾದ್ಯ ಇತರಿರಿಗೆ ಹಾಗೆ ಇಷ್ಟವಾಗಬೇಕೆಂದಿಲ್ಲ’ ಅವರವರ ರುಚಿ ಅವರವರದು . ಇದನ್ನೇ ನಮ್ಮ ಹಿರಿಯರು “ಲೋಕೋ ಭಿನ್ನ ರುಚಿ:” ಎಂದರು. ಹಾಗೆಯೇ ನಮ್ಮಲ್ಲಿ ‘ಊಟ ತನ್ನಿಚ್ಚೆ ನೋಟ ಪರರಿಚ್ಚೆ ‘ ಎಂದರು. ಇದರಲ್ಲಿನ ತಿರುಳು ಕೂಡ ಸೇಮ್ . ಊಟ ಮಾತ್ರ ಯಾರ ಬಲವಂತಕ್ಕೂ ಮಾಡುವ ವಿಷಯವಲ್ಲ . ಅದೇನಿದ್ದರೂ ನಮ್ಮ ನಾಲಿಗೆ ನಮ್ಮ ಹೊಟ್ಟೆಗೆ ಸಂಬಂದಿಸಿದ್ದು .

ಇದೆ ಮಾತನ್ನ ಸ್ಪ್ಯಾನಿಷ್ ಸಮಾಜದಲ್ಲಿ ಕೂಡ ನೀವು ಕೇಳಬಹದು . ಇಲ್ಲಿನ ಸಮಾಜದಲ್ಲಿ ‘Sobre los gustos no hay nada escrito’ (ಸೊಬ್ರೆ ಲಾಸ್ ಗುಸ್ತೋಸ್ ನೋ ಹಾಯ್ ನಾದ ಎಸ್ಕ್ರಿತೊ ) ಎನ್ನುತ್ತಾರೆ. ಅಂದರೆ ಇಷ್ಟಗಳ ಬಗ್ಗೆ ಇಷ್ಟೇ ಸರಿ ಎಂದು ಏನೂ ಬರೆದಿಟ್ಟಿಲ್ಲ ಎನ್ನುವುದು ಯಥಾವತ್ತು ಅನುವಾದ. ಇದನ್ನ ಬಿಡಿಸಿ ನೋಡಿದರೆ ನಮ್ಮ ಗಾದೆಯ ಅರ್ಥವೇ ಸಿಗುತ್ತದೆ . ಇಂತವರಿಗೆ ಇದು ಇಷ್ಟ ಅಥವಾ ಹೀಗಿದ್ದರೆ ಹೀಗಾಗುತ್ತೆ ಎಂದು ಇಷ್ಟಗಳ ಅಥವಾ ರುಚಿಯ ಬಗ್ಗೆ ಬರೆದಿಡಲು ಸಾಧ್ಯವೇ ? ಇಲ್ಲವಷ್ಟೆ ಹಾಗಾಗಿ ಇಷ್ಟಗಳ ಬಗ್ಗೆ ಇಷ್ಟೇ ಸರಿ ಅಂತ ಯಾರೂ ಬರೆದಿಟ್ಟಿಲ್ಲ ಎನ್ನುತ್ತದೆ ಸ್ಪ್ಯಾನಿಷ್ ಗಾದೆ.

ಇನ್ನು ಇಂಗ್ಲಿಷ್ ಭಾಷಿಕರು ಇದನ್ನೇ There’s no accounting for tastes ಎನ್ನುತ್ತಾರೆ . ಜಗತ್ತಿನಲ್ಲಿ ಎಷ್ಟು ಜನರಿದ್ದಾರೆ ಅಷ್ಟು ರುಚಿಯಿದೆ . ಇಂದು ಇಷ್ಟವಾದ ರುಚಿ ನಾಳೆ ಇಷ್ಟವಾಗದೇ ಹೋಗಬಹದು ಅಲ್ಲವೇ ? ಹೀಗಾಗಿ ನಿಖರವಾಗಿ ಜಗತ್ತಿನಲ್ಲಿ ಇಷ್ಟು ರುಚಿಯಿದೆ ಎಂದು ಲೆಕ್ಕವಿಡಲು ತಾನೇ ಹೇಗೆ ಸಾಧ್ಯ ? ನಮ್ಮ ಕನ್ನಡ ಗಾದೆ ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಗಾದೆಗಳಿಗಿಂತ ಅತ್ಯಂತ ಪ್ರಬುದ್ಧವೂ ಮತ್ತು ಹೆಚ್ಚು ವಿಶಾಲವೂ ಆಗಿದೆ . ಜಗತ್ತಿನಲ್ಲಿ ಒಬ್ಬರಂತೆ ಒಬ್ಬರಿಲ್ಲ , ಒಬ್ಬರ ರುಚಿ ಒಬ್ಬರದಲ್ಲ ಎನ್ನುವುದನ್ನ ಕೇವಲ “ಲೋಕೋ ಭಿನ್ನ ರುಚಿ:” ಎನ್ನುವ ಒಂದು ವಾಕ್ಯದಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಬದುಕೆಂದರೆ ಒಂದಷ್ಟು ಹೊಂದಾವಣಿಕೆ ಬೇಕು ಎನ್ನುವ ಮಾತನ್ನ ಹೇಳಿ ಬೆಳಸುತ್ತಿದ್ದ ಹಿಂದಿಗಿಂತ ಇಂದು ಕಾಲ ಬಹಳ ಬದಲಾಗಿದೆ . ಬದಲಾದ ಕಾಲಕ್ಕೆ ತಕ್ಕಂತೆ ಈ ಗಾದೆ ಹೆಚ್ಚು ಮಾನ್ಯತೆ ಪಡೆಯುತ್ತಿದೆ .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
Sobre : ಸಂದರ್ಭಕ್ಕೆ ತಕ್ಕಂತೆ ಈ ಪದದ ಅರ್ಥ ಬದಲಾಗುತ್ತದೆ .ಇಂಗ್ಲಿಷ್ ಭಾಷೆಯ , ಆನ್ , ಓವರ್ , ಅಬೌಟ್ , ಅರೌಂಡ್ ಹೀಗೆ ಹಲವಾರು ಅರ್ಥಕ್ಕೆ ಸ್ಪ್ಯಾನಿಷ್ ಭಾಷೆಯಲ್ಲಿ ಈ ಪದವನ್ನ ಬಳಸುತ್ತಾರೆ . ವಾಕ್ಯದ ಮೇಲೆ ಅರ್ಥವನ್ನ ಕಲ್ಪಿಸಬೇಕಾಗುತ್ತದೆ . ಇಲ್ಲಿನ ಸಂದರ್ಭದಲ್ಲಿ ಅಬೌಟ್ ಎನ್ನುವ ಅರ್ಥ ಕೊಡುತ್ತದೆ . ಕನ್ನಡದಲ್ಲಿ ಬಗ್ಗೆ ಎನ್ನುವ ಅರ್ಥ ಸೂಕ್ತ . ಉದಾಹರೆಣೆಗೆ ರುಚಿಗಳ ಬಗ್ಗೆ … ಸೊಬ್ರೆ ಎನ್ನುವುದು ಉಚ್ಚಾರಣೆ .

los gustos : ಇಷ್ಟ , ಇಷ್ಟವಾದವು ಎನ್ನುವ ಅರ್ಥ . ಇಲ್ಲಿನ ಸಂದರ್ಭದಲ್ಲಿ ರುಚಿ ಇಷ್ಟವಾಯ್ತಾ ? ಎನ್ನುವ ಅರ್ಥ. ಲಾಸ್ ಗುಸ್ತೋಸ್ ಎನ್ನುವುದು ಉಚ್ಚಾರಣೆ.

no hay nada : ಏನೇನು ಇಲ್ಲ ಎನ್ನುವುದು ಅರ್ಥ. ನೋ ಹಾಯ್ ನಾದ ಎನ್ನುವುದು ಉಚ್ಚಾರಣೆ.

escrito: ಲಿಪಿ , ಬರೆಯುವುದು , ಬರೆದಿಡು ಎನ್ನುವ ಅರ್ಥ . ಎಸ್ಕ್ರಿತೊ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!