ಅಂಕಣ ಸ್ಪ್ಯಾನಿಷ್ ಗಾದೆಗಳು

ಬೆಳ್ಳಗಿರುವುದೆಲ್ಲ ಹಾಲಲ್ಲ! 

ನಾವು ಬದುಕಿನಲ್ಲಿ ನೂರಾರು ಜನರ ಸಂಪರ್ಕಕ್ಕೆ ಬರುತ್ತೇವೆ. ಹಲವರು ಒಳ್ಳೆಯವರು, ಹಲವರು ಕೆಟ್ಟವರು. ಎಲ್ಲರನ್ನೂ ಒಳ್ಳೆಯವರು ಎಂದು ತೀರ್ಮಾನಿಸುವ ಹಾಗಿಲ್ಲ. ನೋಡಲು ಸುಭಗರಂತೆ ಕಂಡರೂ ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ನಮ್ಮ ಹಿರಿಯರು ಈ ರೀತಿ ಸಂಪರ್ಕಕ್ಕೆ ಬಂದವರನೆಲ್ಲ ಒಳ್ಳೆಯವರು ಎಂದುಕೊಂಡು ಬೇಸ್ತು ಬಿದ್ದಿರುವುದು ಸತ್ಯ. ನಾವು ಮಾಡಿದ ತಪ್ಪು ನಮ್ಮ ಮುಂದಿನ ಜನಾಂಗ ಮಾಡದಿರಲಿ ಎನ್ನುವ ಉದ್ದೇಶದಿಂದ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂದು ಮಾರ್ಮಿಕವಾಗಿ ನುಡಿದರು. ಅರ್ಥ ಇಷ್ಟೇ ನಮ್ಮ ಸಂಪರ್ಕಕ್ಕೆ ಬಂದವರೆಲ್ಲ ಒಳ್ಳೆಯವರಲ್ಲ ಎನ್ನುವುದು. ಅಥವಾ ಯಾವುದಕ್ಕೂ ಸ್ವಲ್ಪ ಹೆಚ್ಚಿನ ಜಾಗ್ರತೆಯಿಂದ ಇರುವುದು ಒಳ್ಳೆಯದು ಎನ್ನುವ ಉದ್ದೇಶ. ಗಾದೆ ಮಾತು ಎಷ್ಟೇ ನಮಗೆ ಜಾಗ್ರತೆಯಾಗಿ ಇರಲು ಹೇಳಿದರೂ ನಾವು ಹಲವು ಸಲ ಜನರನ್ನ ನಂಬುತ್ತೇವೆ ನಂತರ ಅವರಿಂದ ನಮಗೆ ನಷ್ಟ ಅಥವಾ ನಂಬಿಕೆ ದ್ರೋಹವಾದಾಗ ನಾವು ಮರಳಿ ಇದೆ ಗಾದೆಯನ್ನ ಉಚ್ಛರಿಸುತ್ತೇವೆ. ಇಂದಿನ ದಿನದಲ್ಲಿ ಎಲ್ಲವೂ ಎಷ್ಟು ಚನ್ನಾಗಿ ನಕಲು ಮಾಡುತ್ತಾರೆ ಎಂದರೆ ಅಸಲಿ ಯಾವುದು? ನಕಲಿ ಯಾವುದು? ಎನ್ನುವ ಸಂಶಯ ಬರುವಷ್ಟು. ಇರಲಿ.

ಇಲ್ಲಿ ಗಾದೆಯ ಉದ್ದೇಶ ಮನುಷ್ಯನ ಅಥವಾ ಸಂಬಂಧಗಳ ಮೇಲೆ ಸಂಶಯಪಡಿ ಎಂದು ಹೇಳುವುದಲ್ಲ ಅಥವಾ ಯಾರನ್ನು ನಂಬಬೇಡಿ ಎಂದು ಹೇಳುವುದು ಕೂಡ ಖಂಡಿತ ಅಲ್ಲ. ಬದಲಿಗೆ ಬದುಕಿನಲ್ಲಿ ಒಂದಂಶ ಹೆಚ್ಚಿನ ಜಾಗ್ರತೆ ಅಸಲಿ-ನಕಲಿಗಳ ನಡುವಿನ ರೂಪವನ್ನ ಬಿಚ್ಚಿಡಲು ಸಹಾಯ ಮಾಡುತ್ತದೆ ಎನ್ನುವುದೇ ಆಗಿದೆ.

ಇನ್ನು ಇದನ್ನು ನಮ್ಮ ಸ್ಪಾನಿಷ್ ಜನತೆ ‘No todo lo que brilla es oro’ (ನೊ ತೊದೊ ಲೊ ಕೆ ಬ್ರಿಯ್ಯ ಈಸ್ ಓರೋ) ಎನ್ನುತ್ತಾರೆ. ಅಂದರೆ ಹೊಳೆದದ್ದೆಲ್ಲ ಚಿನ್ನವಲ್ಲ ಎನ್ನುವುದು ಯಥಾವತ್ತು ಅನುವಾದದ ಅರ್ಥ.  ಗಾಜಿನ ತುಂಡು ಕೂಡ ಸೂರ್ಯನ ಬೆಳಕು ಬಿದ್ದಾಗ ಪ್ರಜ್ವಲಿಸುತ್ತದೆ ಅಲ್ಲವೇ? ಹಾಗೆಯೇ ಕೆಲವೊಂದು ಸಂಧರ್ಭದಲ್ಲಿ ವ್ಯಕ್ತಿ ಅತ್ಯಂತ ದಕ್ಷನೂ, ಬುದ್ದಿವಂತನೂ ಮತ್ತು ಸಭ್ಯಸ್ಥನೂ ಆಗಿ ಕಾಣುತ್ತಾನೆ. ಆದರೆ ಆತ ಯಾವಾಗಲು ಹಾಗೆಯೇ ಇರುತ್ತಾನೆಯೇ? ಅಥವಾ ಇದ್ದಾನೆಯೇ? ಎಂದು ವಿವೇಚಿಸಿ ಒಂದಷ್ಟು ಪೂರ್ವಾಪರಗಳ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ನಂತರ ಭ್ರಮನಿರಸನ ಕಟ್ಟಿಟ್ಟ ಬುತ್ತಿ. ಮನುಷ್ಯನ ನಿಜ ಸ್ವಭಾವ ತಿಳಿದುಕೊಳ್ಳದೆ ಅವರು ಒಳ್ಳೆಯವರು ಎಂದು ನಿರ್ಧರಿಸುವುದು ಒಳ್ಳೆಯದಲ್ಲ ಎನ್ನುವುದನ್ನು ಗಾದೆ ಮಾತು ಹೇಳುತ್ತದೆ.

ಇಂಗ್ಲಿಷ್ ಭಾಷಿಕರು ‘All that glitters is not gold’ ಎನ್ನುತ್ತಾರೆ. ಇದು ಸ್ಪಾನಿಷ್ ಭಾಷೆಯ ಯಥಾವತ್ತು ಅನುವಾದದಂತಿದೆ. ಹೊಳೆಯುವುದೆಲ್ಲ ಚಿನ್ನವಲ್ಲ ಎನ್ನುವುದು ಅರ್ಥ. ಗಮನಿಸಿ ಭಾಷೆ ಯಾವುದೇ ಇರಲಿ ಉಪಮೆಯಾಗಿ ವಸ್ತುವನ್ನು ಬಳಸುತ್ತಾರೆ. ಆದರೆ ಅದರ ನಿಜವಾದ ಅರ್ಥ ನಮ್ಮ ಜೀವನದೊಂದಿಗೆ ಬೆಸುಗೆ ಹಾಕಿಕೊಂಡಿರುತ್ತದೆ. ಇವತ್ತಿನ ಸಾಮಾಜಿಕ ಜಾಲತಾಣ ಯುಗದಲ್ಲಿ ಈ ಗಾದೆ ಮಾತು ಹೆಚ್ಚು ಸಮಂಜಸ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ: 

No todo: ಎಲ್ಲವೂ ಅಲ್ಲ. ನಾಟ್ ಎವೆರಿತಿಂಗ್ ಎನ್ನುವ ಅರ್ಥ. ನೊ ತೊದೊ ಎನ್ನುವುದು ಉಚ್ಚಾರಣೆ.

lo que brilla: ಹೊಳೆಯುವುದು, ಪ್ರಜ್ವಲಿಸುವುದು. ಶೈನಿಂಗ್ ಎನ್ನುವ ಅರ್ಥ. ಲೊ ಕೆ ಬ್ರಿಯ್ಯ ಎನ್ನುವುದು ಉಚ್ಚಾರಣೆ.

es oro: ಬಂಗಾರ, ಗೋಲ್ಡ್ ಎನ್ನುವ ಅರ್ಥ. ಈಸ್ ಓರೋ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!