ಅಂಕಣ

‘ಕಂಬಗಳ ಮರೆಯಲ್ಲಿ’

‘ಕಂಬಗಳ ಮರೆಯಲ್ಲಿ’—(ಕಥೆಗಳು)

ಲೇಖಕಿ: ಸುನಂದಾ ಪ್ರಕಾಶ ಕಡಮೆ

ಮುದ್ರಣವರ್ಷ: ೨೦೧೩, ಪುಟಗಳು: ೧೫೨, ಬೆಲೆ: ರೂ.೧೩೦-೦೦

ಪ್ರಕಾಶಕರು: ಅಂಕಿತ ಪುಸ್ತಕ, ೫೩, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್,

ಗಾಂಧಿಬಜಾರ್, ಬಸವನಗುಡಿ, ಬೆಂಗಳೂರು-೦೦೪


ಕನ್ನಡದ ಸಣ್ಣಕಥಾಪ್ರಕಾರಕ್ಕೆ ಕೆಲವು ಮಹತ್ತ್ವದ ಕತೆಗಳನ್ನು ನೀಡಿರುವ ಲೇಖಕಿ ಸುನಂದಾ ಕಡಮೆಯವರ ಕಥಾಸಂಕಲನ ‘ಕಂಬಗಳ ಮರೆಯಲ್ಲಿ’ ಪ್ರಕಟವಾಗಿ, ಅದೀಗ ಹಳೆಯ ಸುದ್ದಿ. ಆದರೆ, ಕೆರೆಗೆ ಹರಿದು ಕೂಡುವ ಹೊಸ ನೀರಿನಂತೆ ಇರುವ ಕಡಮೆಯವರ ಕತೆಗಳು ಕನ್ನಡಕತೆಗಳ ನಡುವೆ ಪ್ರತ್ಯೇಕವಾಗಿಯೇ ಕಾಣುತ್ತ ಮತ್ತೆ ಮತ್ತೆ ಕುತೂಹಲ ಹುಟ್ಟಿಸುತ್ತವೆ. ಕತೆಯೊಂದು ಕಾಲಪರೀಕ್ಷೆಯಲ್ಲಿ ಗೆಲ್ಲುತ್ತ ಸಾಗುವಾಗ ಮತ್ತೆ ಓದಿಸಿಕೊಳ್ಳುವುದು ಸಹಜ. ಇದು ಕೃತಿಯೊಂದರ ತಾಜಾತನ ಮತ್ತು ಕಾಲಕ್ಷಮತೆಯ ಸಂಕೇತ.  ಇದಕ್ಕೂ ಮುನ್ನ ಪ್ರಕಟವಾದ ಇವರ ‘ಪುಟ್ಟ ಪಾದದ ಗುರುತು’ ಮತ್ತು ‘ಗಾಂಧಿ ಚಿತ್ರದ ನೋಟು’ ಸಂಕಲನದ ಕತೆಗಳು ಕೂಡ ಇಷ್ಟೇ ನವೀನವಾಗಿದ್ದವು.

ಸುನಂದಾ ಅವರ ‘ಕಂಬಗಳ ಮರೆಯಲ್ಲಿ’ ಸಂಕಲನದಲ್ಲಿ ಹದಿನೈದು ಕತೆಗಳಿವೆ. ತನ್ನ ಪರಕೀಯತೆಯ ಭಾವನೆಯನ್ನೂ ಕೀಳರಿಮೆಯನ್ನೂ ಮಗ ಮತ್ತು ಸೊಸೆ ತೋರುವ ಔದಾರ್ಯದಲ್ಲಿ ದೂರಮಾಡಿಕೊಳ್ಳುವ ‘ಸುಭದ್ರಕ್ಕ’, ಮಗುವೊಂದನ್ನು ಬಾಡಿಗೆಯ ತಾಯಿಯ ಮೂಲಕ ಪಡೆಯುವ ಕತೆ ಹೇಳುತ್ತ ಮಾನವೀಯ ಸ್ವಭಾವದ ಸಂಕೀರ್ಣತೆಯನ್ನು ಬಹಿರಂಗ ಪಡಿಸುವ ‘ನಡುಹಗಲಿನ ಮೌನ’, ಸ್ವಾರ್ಥವನ್ನು ಸಾಧಿಸಲು ಹೋಗಿ ವಿಫಲಗೊಳ್ಳುವ ವಸ್ತುವಿರುವ ಕತೆ ‘ಕುಡಿ ಕಟ್ಟಿದ ದೀಪ’, ಹಗೆತನಕ್ಕೆ ತಣ್ಣಗೆ ನೀರೆರೆಯುತ್ತ ಕೊನೆಗೂ ಅದನ್ನು ಬೆಳೆಸಲಾಗದೆ ಸೋಲುವ, ಉದಾಸೀನ ಭಾವವೇ ವಸ್ತುವಾಗುವ ‘ಹೆಜ್ಜೆ ಸಾಗದ ಹಾದಿ’, ಮುಂತಾದ ಕತೆಗಳಲ್ಲಿ ಕಥನ ಮತ್ತು ಕಥಾವಸ್ತು ಎರಡನ್ನೂ ಸುನಂದಾ ಕಡಮೆಯವರು ಹದವಾಗಿ ತೂಗಿಸುತ್ತಾರೆ. ಸುನಂದಾ ಕಡಮೆಯವರ ಕತೆಗಾರಿಕೆ ತೀವ್ರಗತಿಯಲ್ಲಿ ಬೆಳೆಯುವ ಕಥನವಲ್ಲ. ಅಂತಹ ಉತ್ಕರ್ಷಕ್ಕೆ ಅಗತ್ಯವಾದ ಭಯ, ಆತಂಕ, ನೋವುಗಳು ಇಲ್ಲಿ ಇರುತ್ತವೆಯಾದರೂ ಅವು ಕೊನೆಗೆ ಬದುಕಿನ ಲಯದ ಸುಸ್ವರವೇ ಆಗಿಬಿಡುತ್ತವೆ. ಇನ್ನುಳಿದ ‘ಜೀವ ಗೋಡೆಯ ನಡುವೆ’, ‘ಹುಟ್ಟುಹಬ್ಬದ ನೆರಳು’, ‘ಕಸದ ಬಾಗಿನ’, ಗೋಡೆಯೇರಿದ ತೇವ’, ‘ಸುದರ್ಶನ ಚಕ್ರ’, ‘ಬೇರು ಕಳಚುವ ಮುನ್ನ’, ‘ಕಂಬಗಳ ಮರೆಯಲ್ಲಿ’ ಕತೆಗಳಲ್ಲಿಯೂ ಕತೆಗಾರಿಕೆಯ ಈ ಸೋಜಿಗ ಮುಂದುವರೆಯುತ್ತದೆ. ಈ ಕತೆಗಳಲ್ಲಿ ಬದುಕಿನ ಸಾರ್ಥಕತೆಗೆ ಅಗತ್ಯವಾದ ಶ್ರುತಿಯನ್ನು ಸಾಧ್ಯವಾಗಿಸುವುದು ಸುನಂದಾ ಕಡಮೆಯವರ ಕತೆಗಾರಿಕೆಯ ಸೃಜನಶೀಲತೆ ಎನ್ನಬಹುದು. ಇದಕ್ಕೆ ಅವರು ನಮ್ಮ ಪ್ರೀತಿಯ ಮೂಲವನ್ನು ದುಡಿಸುತ್ತಾರೆ. ಇದನ್ನು ತುಸು ವಿಸ್ತರಿಸಿ ಹೇಳಬಹುದಾದರೆ, ಈ ಕತೆಗಳಲ್ಲಿ ಎರಡು ವಿಭಿನ್ನ ಮನಸ್ಥಿತಿಗಳು ಸಂಘರ್ಷಾತ್ಮಕವಾಗಿ ಮುಖಾಮುಖಿಯಾಗುತ್ತವೆ; ಆದರೆ ಸಂಘರ್ಷ ನಡೆಯುವುದು ಆವೇಶದ ಮಾತುಗಳಿಂದಲ್ಲ; ಅವರವರ ಮನೋಗತದಲ್ಲಿ, ಅಂತರಂಗ ಮತ್ತು ಅಂತಃಕರಣದಲ್ಲಿ ಏಳುವ ಸಂದೇಹ, ಉದ್ವೇಗ ಮತ್ತು ಪ್ರಶ್ನೆಗಳ ಮೂಲಕ. ಎರಡು ಕೋಮುಗಳ ಮನಸ್ಥಿತಿಯನ್ನು ಚಿತ್ರಿಸುವಾಗ ಕೂಡ, ಉದಾಹರಣೆಗೆ ‘ಬೇರು ಕಳಚುವ ಮುನ್ನ’ ಕತೆಯಲ್ಲಿ, ಈ ಎಚ್ಚರವನ್ನು ಕತೆಗಾರ್ತಿ ಕೌಶಲ್ಯದಿಂದಲೇ ನಿಭಾಯಿಸುತ್ತಾರೆ.

ಮೂರು ವರ್ಷಗಳ ಹಿಂದೆ ಈ ಕತೆಗಳನ್ನು ನಾನು ಮೊದಲನೆಯ ಬಾರಿ ಓದಿದಾಗ ವ್ಯಂಗ್ಯ ಮತ್ತು         ರೂಪಕಗಳಿಲ್ಲದ ಈ ಕಥಾಭಾಷೆ ಸಶಕ್ತ ಅರ್ಥಗಳನ್ನು ಒಡ್ಡಲಾರದೆ ಸೊರಗಿದಂತೆ ತೋರಿತ್ತು. ಆದರೆ ಇಂತಹ ರೆಟರಿಕ್‌ಗಳ ಬೆನ್ನು ಬೀಳುವ ಕತೆಗಾರ ಕತೆಯೊಳಗೆ ತಾನೇ ಮುನ್ನುಗ್ಗುವುದನ್ನು ಇತ್ತೀಚೆಗೆ ಕಂಡುಕೊಂಡ ನಂತರ, ಈ ಕತೆಗಳೊಳಗೆ ನುಗ್ಗಿ ಠಳಾಯಿಸದ ಕಡಮೆಯವರ ಕತೆಗಾರಿಕೆ ಹೆಚ್ಚು ಸಾರ್ಥಕವೆನಿಸುತ್ತಿದೆ. ಈ ಸಂಕಲನದ ಕತೆಗಳ ಶೀರ್ಷಿಕೆಗಳನ್ನು ಗಮನಿಸಿದರೆ ಇವರು ರೆಟರಿಕ್‌ಗಳನ್ನು ಹಠಪೂರ್ವಕವಾಗಿ ತ್ಯಜಿಸುತ್ತಾರೆ ಎಂದೂ ಹೇಳಲಾರೆ. ಆದರೆ ಕಡಮೆಯವರು ಸೋಲುವ ಕತೆಗಳೂ ಇಲ್ಲಿವೆ. ಉದಾಹರಣೆಗೆ, ಸ್ವಗತದಂತೆ ನಿರೂಪಿಸುವ ಕತೆ ‘ನನ್ನೊಳಗಿನ ಕಿಟಕಿ’ಯಲ್ಲಿ ಕಾಲ-ದೇಶಗಳ ಒತ್ತಾಸೆಗೆ ಒಳಪಟ್ಟ ಮೂರ್ತರೂಪದ ಸಂದರ್ಭಗಳಿಲ್ಲ. ನಿದ್ದೆ ಮತ್ತು ಎಚ್ಚರಗಳ ನಡುವೆ ಸಾಗುವ, ಅರ್ಥವನ್ನು ಸುಲಭಕ್ಕೆ ಬಿಟ್ಟುಕೊಡಲಾರದ ಇಂತಹ ಕತೆಗಳು ಕಡಮೆಯವರ ಕೈಯಲ್ಲಿ ಸೋಲುತ್ತವೆ. ಭಾವುಕ ಕ್ಷಣವೊಂದರ ಅನಿಸಿಕೆಯಂತಿರುವ ಕತೆ ‘ಏಳು ಬಣ್ಣ ಸೇರಿ’ ಕೂಡ ಈ ಕಾರಣಕ್ಕಾಗಿಯೇ ನಿಸ್ಸಾರವೆನಿಸುತ್ತದೆ. ‘ಪೇಟೆ ಬಂಧನದೊಳಗೆ’ ಇಂತಹ ಮತ್ತೊಂದು ಕತೆ. ಈ ಕತೆಗಳು ಅರ್ಥಪೂರ್ಣವಾದ ಯಾವ ನಿರೀಕ್ಷೆಗಳನ್ನೂ ಹುಟ್ಟಿಸುವುದಿಲ್ಲ.

ಈ ಸಂಕಲನದ ಅತ್ಯಂತ ಯಶಸ್ವೀ ಕಥೆ ‘ಸುದರ್ಶನ ಚಕ್ರ’. ಇದು ಕನ್ನಡದ ಅಪೂರ್ವವಾದ ಕತೆಗಳೊಡನೆ ನಿಲ್ಲಬೇಕಾದದ್ದು. ಈ ಕತೆ ಕಾನು, ಗುಣಿ ಮತ್ತು ಬಾಲು ಈ ಮೂರೇ ಪಾತ್ರಗಳಿಂದ ನಡೆಯುತ್ತದೆ. ಬಾಲ್ಯದಿಂದ ಬುದ್ಧಿಮಂಕನಾದ ಕಾನು ನೋಡಲು ಚೆಲುವ. ಆದರೆ ತಲೆ-ಗಡ್ಡ ಬೋಳಿಸಿಕೊಳ್ಳದೆ ಊರ ಜನರಿಗೆ ಅಕರಾಳ-ವಿಕರಾಳ ಕಾಣುವ ಮನುಷ್ಯ. ಊರ ಮಕ್ಕಳ ದೃಷ್ಟಿಯಲ್ಲಂತೂ ಕಾನು ಒಬ್ಬ ಹುಚ್ಚ. ಕೆಲವು ವರ್ಷಗಳ ಹಿಂದೆ ತೀರಿಕೊಂಡ ತಾಯವ್ವ ಅವನ ತಾಯಿ. ಆದರೆ ಅವನಿಗೆ ತಾಯಿಯ ಮೌಲ್ಯ ತಿಳಿಯದು. ಅಸಾಧ್ಯ ಸೆಕೆಯೆಂದು ವರ್ಷಗಳ ಹಿಂದೆ ಅವನ ಅತ್ತಿಗೆ ಗುಣಿ ಮನೆಯೊಳಗೆ ಒಂದು ಸಿಲಿಂಗ್ ಫ್ಯಾನ್ ಕೂರಿಸುತ್ತಾಳೆ. ಮಕ್ಕಳಂತೆ ಹಟ ಮಾಡುವ ಕಾನುವನ್ನು ಅದರ ಕೆಳಗೆ ಕೂರಿಸಿ ತನ್ನ ಮನೆಗೆಲಸಕ್ಕೆ ಅವಳು ಅನುವು ಮಾಡಿಕೊಳ್ಳುತ್ತಾಳೆ. ಚಕ್ರದಂತೆ ತಿರುಗುವ ಫ್ಯಾನ್ ಕ್ರಮೇಣ ಕಾನುವಿಗೆ ಆಕರ್ಷಣೆಯೆನಿಸಿ ಅವನು ಸುಲಭವಾಗಿ ನಿದ್ದೆ ಹೋಗುವುದು ರೂಢಿಯಾಗುತ್ತದೆ. ಎಚ್ಚರಾದಾಗ ಒಮ್ಮೊಮ್ಮೆ ಅವನಿಗೆ ತಾಯವ್ವ ನೆನಪಾಗುತ್ತಾಳೆ. ತಾನು ಗಡ್ಡ ಬೋಳಿಸಿಕೊಳ್ಳುವುದೇ ಸರಿ ಎನ್ನಿಸುತ್ತದೆ. ಗುಣಿ ಅವನ ಗಡ್ಡ ಮತ್ತು ತಲೆಗೂದಲು ತೆಗೆಸಿದ ನಂತರವಂತೂ ತಾನು ಬೇರೆ ಎನ್ನಿಸತೊಡಗುತ್ತದೆ ಅವನಿಗೆ. ಮೇಲೆ ತಿರುಗುವ ಫ್ಯಾನ್ ನೋಡುವಾಗ ಅವನಿಗೆ ತನ್ನ ಪಕ್ಕ ಬಂದು ಎಂದಾರೊಮ್ಮೆ ಮಲಗಿ ತನ್ನನ್ನು ಗುಣಿ ಯಾಕೆ ಮುದ್ದಿಸುತ್ತಾಳೆ ಎನ್ನುವ ಪ್ರಶ್ನೆ ಕಾಡುತ್ತದೆ. ಅವನ ವರ್ತನೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಗುಣಿ ಗಮನಿಸುತ್ತಾಳೆ, ಬಾಲು ಗಮನಿಸುತ್ತಾನೆ. ಆದರೆ ಅತ್ತ, ಅವನ ಅಣ್ಣ ಬಾಲುವಿನ ಬುದ್ಧಿ ಸ್ತಿಮಿತ ಕಳೆದುಕೊಳ್ಳುತ್ತದೆ. ಫ್ಯಾಕ್ಟರಿಯ ಕೆಲಸಗಳಲ್ಲಿ ಸರಿಯಾಗಿ ಮನಸ್ಸು ನಿಲ್ಲುವುದಿಲ್ಲ. ಬಾಲ್ಯದಲ್ಲಿ ಅಪಘಾತವೊಂದರಲ್ಲಿ ತಾನು ಕಳೆದುಕೊಂಡ ಪುರುಷತ್ವವನ್ನು ನೆನೆದು ಅಸಹಾಯಕನಾಗುತ್ತಾನೆ. ತಮ್ಮ ಕಾನು ತನ್ನ ಬದುಕಿನಲ್ಲಿ ದುರ್ವಿಧಿಯಂತೆ ಬಂದಿದ್ದಾನೆ ಎನ್ನುವ ದಿಗಿಲು ಅವನಿಗೆ. ದಿನ ಕಳೆದಂತೆ ಫ್ಯಾನ್ ಅಡಿಯಲ್ಲಿ ನಿದ್ದೆ ಹೋಗುವುದು ಸುಖವೆನಿಸುತ್ತದೆ.

ಇದೊಂದು ಅದ್ಭುತವಾದ ಕತೆ. ತಲೆಯ ಮೇಲೆ ತಿರುಗುವ ಫ್ಯಾನ್ ಸಂಕೇತವೂ ಆಗುವ ವಾಸ್ತವವೂ ಆಗುವ ತಂತ್ರಸಿದ್ಧಿ ಈ ಕತೆಯೊಳಗಿದೆ. ತಮ್ಮನ ಹುಚ್ಚು ಬಿಡುವ ಕ್ರಮ ಹಾಗೂ ಅಣ್ಣ ನಿಧಾನವಾಗಿ ಮಂಕಾಗುತ್ತ ಸಾಗುವ ವಿಧಿಯ ಚಿತ್ರಣ ಈ ಕತೆಯ ಶಕ್ತಿ. ಲೈಂಗಿಕತೆಯ ನೆರಳು ಕೂಡ ಚಾಚಿಕೊಂಡ ಈ ಕತೆಗೆ ಹಲವು ಆಯಾಮಗಳಿಂದ  ಅರ್ಥಶಕ್ತಿ ಒಗ್ಗೂಡುತ್ತದೆ. ಹೀಗೆ ಕಡಮೆಯವರ ಈ ಕಥಾಸಂಕಲನದಿಂದ ಅವರ ಕತೆಗಾರಿಕೆಯಲ್ಲಿ ನಮ್ಮ ನಿರೀಕ್ಷೆ ಹೆಚ್ಚುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!