ಅಂಕಣ

ಹಳೆಯ ಹವಳ-ಹೊಸ ಮುತ್ತು

——-ಈ ಹೊತ್ತಿಗೆ——

`ಹಳೆಯ ಹವಳ-ಹೊಸ ಮುತ್ತು’ (ಸಮೀಕ್ಷಾತ್ಮಕ ಲೇಖನಗಳು)

ಲೇಖಕರು: ಎನ್ಕೆ ಕುಲಕರ್ಣಿ

ಪ್ರಥಮ ಮುದ್ರಣ: 2001, ಪುಟಗಳು: 144, ಬೆಲೆ: ರೂ.80-00

ಪ್ರಕಾಶಕರು: ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ, ಉ.ಕ.


ಸಾಹಿತ್ಯಲೋಕದಲ್ಲಿ `ಎನ್ಕೆ’ ಎಂದೇ ಗುರುತು ಉಳಿಸಿಕೊಂಡಿರುವ ಎನ್.ಕೆ.ಕುಲಕರ್ಣಿಯವರು ಕೆಲವು ವರ್ಷ ಶಿಕ್ಷಕರಾಗಿದ್ದು, ಆಮೇಲೆ ಆಕಾಶವಾಣಿಯಲ್ಲಿ ಉದ್ಯೋಗಿಯಾಗಿ ಬೆಂಗಳೂರು, ಧಾರವಾಡ ಮೊದಲಾದ ಸ್ಥಳಗಳಲ್ಲಿ ವೃತ್ತಿಜೀವನ ನಡೆಸಿದ್ದರು. ಎನ್ಕೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಬರೆಯುವ ಸಿದ್ಧಹಸ್ತರಾಗಿದ್ದರು. ಅವರ ಸಜ್ಜನಿಕೆ ಮತ್ತು ಸ್ನೇಹಶೀಲ ಇನ್ನೂ ಸಹ  ಧಾರವಾಡದ ಹಳೆಯ ತಲೆಮಾರಿನ ಜನರ ನೆನಪಿನಲ್ಲಿದೆ. ಹೊಸ ಪ್ರತಿಭೆಗಳ ಅನ್ವೇಷಣೆ ಮಾಡಿ ಆಕಾಶವಾಣಿಯ ಮೂಲಕ ನಾಡಿಗೆ ಪರಿಚಯಿಸುತ್ತಿದ್ದ ಎನ್ಕೆಯವರಿಗೆ  ಅಸಂಖ್ಯಾತ ಬರಹಗಾರರ ಒಡನಾಟವಿತ್ತು. ತಮ್ಮ ಕೊನೆಯ ದಿನಗಳನ್ನು ಎನ್ಕೆ ಕಳೆದದ್ದು ಅವರ ಪ್ರೀತಿಯ ಧಾರವಾಡದಲ್ಲಿ. ಸಾಹಿತ್ಯ ಅವರ ಪಾಲಿಗೆ ಆಕಾಶವಾಣಿಯ ಉದ್ಯೋಗಕ್ಕೆ ಎಷ್ಟು ಅವಶ್ಯವೋ, ಅಷ್ಟು ಮಾತ್ರ ಆಗಿರದೆ ಪ್ರೀತಿಯ ವ್ಯಸನವೂ ಆಗಿತ್ತು.

ಎನ್ಕೆಯವರ ವಿಸ್ತಾರವಾದ ಓದು ಮತ್ತು ವಿಮರ್ಶನ ಶಕ್ತಿಯ ಫಲ ಈ ಸಮೀಕ್ಷಾಪ್ರಬಂಧಗಳು. ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಒಂಬತ್ತು ಲೇಖನಗಳಿವೆ. ಆದಿಕವಿ ಪಂಪ, ರತ್ನಾಕರವರ್ಣಿ, ಹುಯಿಲಗೋಳ ನಾರಾಯಣರಾಯರು, ಕೆರೂರ ವಾಸುದೇವಾಚಾರ್ಯರು, ಸಿದ್ಧವನಹಳ್ಳಿ ಕೃಷ್ಣಶರ್ಮರು, ಬೇಂದ್ರೆ, ಆನಂದಕಂದ, ಚದುರಂಗ ಮತ್ತು ಹುಕ್ಕೇರಿ ಬಾಳಪ್ಪ -ಹೀಗೆ ಈ ಒಂಬತ್ತು ವ್ಯಕ್ತಿಗಳ ಬದುಕು ಮತ್ತು ಸಾಧನೆಗಳ ಅವಲೋಕನವಿರುವ ಈ ಲೇಖನಗಳನ್ನು ಸಾಹಿತ್ಯಸಮೀಕ್ಷೆ ಎನ್ನುವುದಕ್ಕಿಂತ ವ್ಯಕ್ತಿಚಿತ್ರಗಳೆಂದು ಪರಿಗಣಿಸುವುದೇ ಸೂಕ್ತ. ಈ ಲೇಖನಗಳು ಕೃತಿಯನ್ನೂ ಕೃತಿಕಾರನನ್ನೂ ಅವಿನಾಭಾವದಲ್ಲಿ ಕಾಣುತ್ತ, ಕೃತಿಯಿಂದ ಕೃತಿಕಾರನನ್ನೂ ಕೃತಿಕಾರನಿಂದ ಕೃತಿಯನ್ನೂ ಬೆಳಗುತ್ತ ಕೃತಿಯ ಮಹತಿಯನ್ನು ಗ್ರಹಿಸುವ ಅಪೂರ್ವವಾದ ಪ್ರಯತ್ನ.

ಎರಡನೆಯ ಭಾಗದಲ್ಲಿ ಏಳು ಲೇಖನಗಳಿವೆ. ಈ ಲೇಖನಗಳ ಪ್ರಧಾನ ಧಾತು ಕೃತಿಸಮೀಕ್ಷೆ. ಈ ಲೇಖನಗಳು 1) ಕನ್ನಡದಲ್ಲಿ ಮಹಾಭಾರತಗಳು, 2) ಕುಮಾರವ್ಯಾಸನ ಭಾಷಾಶೈಲಿ ಮತ್ತು ಗ್ರಾಮ್ಯದ ಬೆಡಗು, 3) ಕುಮಾರವ್ಯಾಸನ ಹಾಸ್ಯ ಪ್ರಜ್ಞೆ, 4) ಗದುಗಿನ ಭಾರತ ಮತ್ತು ಮರಾಠಿ ಮಹಾಭಾರತಗಳು, 5)ವ್ಯಾಸರಾಯ ಬಲ್ಲಾಳರ `ಅನುರಕ್ತೆ’, 6) ಸಿಂಪಿ ಲಿಂಗಣ್ಣನವರ ಹಾಸ್ಯ ಶ್ರೀಮಂತಿಕೆಯ ಮೂರು ಗ್ರಂಥಗಳು, ಮತ್ತು 7) ಉತ್ತರಕರ್ನಾಟಕದ ನಾಟಕ ಸಾಹಿತ್ಯ. ಎನ್ಕೆಯವರ ಈ ಲೇಖನಗಳನ್ನು ಓದುತ್ತ ಹೋದಂತೆ ನಮ್ಮಲ್ಲಿ ಉಂಟಾಗುವ ಭಾವನೆ `ನವ್ಯ ಸಾಹಿತ್ಯದ ಕೃತಿಗಳನ್ನಾಗಲೀ ಕೃತಿಕಾರರನ್ನಾಗಲೀ ಎನ್ಕೆ ಗಮನಿಸುವುದಿಲ್ಲ ಮತ್ತು ಇದು ಆಕಸ್ಮಿಕವಾಗಿರಲಿಕ್ಕಿಲ್ಲ’ ಎನ್ನುವುದು. ಎನ್ಕೆಯವರನ್ನು ಗಾಢವಾಗಿ ಕಾಡುವ ಕವಿಗಳು ಇಬ್ಬರೇ, ಕುಮಾರವ್ಯಾಸ ಮತ್ತು ವರಕವಿ ದ.ರಾ.ಬೇಂದ್ರೆ. ಎನ್ಕೆ ಈ ಇಬ್ಬರನ್ನು ಓದುತ್ತ ಬೆಳೆದವರು ಎನ್ನುವುದಕ್ಕೆ ಇಲ್ಲಿರುವ ಲೇಖನಗಳು ಸಾಕ್ಷಿ. ಆದಿಕವಿ ಪಂಪನಿಗೆ ಅರ್ಜುನನನ್ನು ಕಾವ್ಯದ ನಾಯಕನನ್ನಾಗಿ ಕಾಣುವುದು ತನ್ನ ಮಿತ್ರ ಮತ್ತು ಆಶ್ರಯದಾತ ಅರಿಕೇಸರಿಯನ್ನು ಹೊಗಳಿ ಆರಾಧಿಸುವ ಸಲುವಾಗಿ ಅಗತ್ಯವಾಗಿತ್ತು ಎನ್ನುವ ಎನ್ಕೆ ಕುಮಾರವ್ಯಾಸನ ಹರಿಭಕ್ತಿಯಾದರೋ ಅವಿಚಲಿತವಾದದ್ದು; ಪರಮ ಭಾಗವತನಾಗಿದ್ದರೂ ಕುಮಾರವ್ಯಾಸ ಕಾವ್ಯವಶನಾಗಿ ಕರ್ಣನ ಪರವಾಗುತ್ತಾನೆ ಎನ್ನುವ ಸತ್ಯವನ್ನೂ ಶೋಧಿಸಿ ತೆಗೆಯುತ್ತಾರೆ. ಎನ್ಕೆಯವರ ಇಂಥ ಒಳನೋಟಗಳು ಪೂರ್ವಾಗ್ರಹವಿಲ್ಲದೆ ಸಾಹಿತ್ಯವನ್ನು ಓದಬೇಕೆನ್ನುವವರಿಗೆ ಒಳ್ಳೆಯ ಮಾದರಿ. ಕುಮಾರವ್ಯಾಸನ ಭಾಷೆ, ಸೃಜನಶೀಲತೆ, ಪ್ರಭಾವ, ಭಕ್ತಿಗಳ ಕುರಿತು, ಅವನ ಹಾಸ್ಯಪ್ರಜ್ಞೆಯ ಮೇಲೆ, ವಿವರವಾದ ಲೇಖನಗಳು ಇಲ್ಲಿವೆ.

ಎನ್ಕೆಯವರದು ಸಹೃದಯ ವಿಮರ್ಶೆ. ಇದನ್ನು ರಸವಿಮರ್ಶೆ, ಗುಣೋತ್ಕರ್ಷಗಳ ಅವಲೋಕನ ಎಂದರೂ ಸರಿ. ಇದರಿಂದಾಗಿ ಇವರಿಗೆ ಕೃತಿದೋಷಗಳು ಕಾಣುವುದಿಲ್ಲ ಅಥವಾ ಆ ದೋಷಗಳು ಮುಖ್ಯವೆನಿಸುವುದಿಲ್ಲ.  ಬೇಂದ್ರೆ ಇವರಿಗೆ ಅಚ್ಚುಮೆಚ್ಚಿನ ಕವಿ ಮತ್ತು ತಮ್ಮ ಈ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇವರು ಭಾವಾತಿಶಯದಲ್ಲಿ ಉಕ್ಕುತ್ತ ಬೇಂದ್ರೆಯವರನ್ನು  `ಧ್ರುವತಾರೆ’, `ಪೂಜ್ಯ ಬೇಂದ್ರೆ’ ಎಂದು ಮುಂತಾಗಿ ಎತ್ತರಿಸಿ ಕಾಣುತ್ತಾರೆ. ಆ ಕಾಲದ ಕಾವ್ಯಾಸ್ವಾದದ ಪ್ರಾಂಜಲತೆ ಗೊತ್ತಿರುವವರಿಗೆ ಇಂತಹ ಉಕ್ಕೇರುವ ಪ್ರಶಂಸೆಗಳು ಅಸಹಜ ಎನ್ನಿಸುವುದಿಲ್ಲ. ಸಿದ್ಧವನಹಳ್ಳಿ ಕೃಷ್ಣಶರ್ಮರ ವಿಷಯದಲ್ಲಿಯೂ ಎನ್ಕೆಯವರಿಗೆ ಅಪಾರ ಅಭಿಮಾನ. ಆದರೆ ಅವರನ್ನು “ಶ್ರೀ ಕೃಷ್ಣಶರ್ಮರೆಂದರೆ ಗದ್ಯರೂಪೀ ಬೇಂದ್ರೆ” ಎಂದು ಪ್ರತಿಷ್ಠಾಪಿಸುವಾಗ ಅದನ್ನು ವಿವರಿಸಬಹುದಿತ್ತು ಎನ್ನಿಸುತ್ತದೆ. ಯೋಚಿಸಿದರೆ ಇಂತಹ ರೆಟರಿಕ್ ಇಲ್ಲದೆ ಬರೆಯುವುದು/ ಮೆಚ್ಚುಗೆಯನ್ನು ವ್ಯಕ್ತಪಡಿಸುವುದು ಯಾವ ಕಾಲದಲ್ಲಿಯೂ ಸಾಹಿತ್ಯದಲ್ಲಿ ನಡೆದಿರಲಿಲ್ಲ ಎನಿಸುತ್ತದೆ. ಆದರೆ ಮೆಚ್ಚಿ, ಆರಾಧಿಸುವ ನುಡಿಗಳು ಆ ಕಾಲದ ವಾಕ್ಸಂಪ್ರದಾಯಕ್ಕೆ ತಕ್ಕಂತೆ ಬದಲಾಗುತ್ತಿದ್ದವು.

ಎನ್ಕೆಯವರಿಗೆ ಕವಿ ಬೇಂದ್ರೆ ಮಾತ್ರವಲ್ಲ, ಬೇಂದ್ರೆಯವರ ವಿದ್ಯಾಗುರುವಾಗಿದ್ದ ಹುಯಿಲಗೋಳ ನಾರಾಯಣರಾಯರು ಕೂಡ ಅಷ್ಟೇ ಆದರಣೀಯರು. ಆದರೆ, ಎನ್ಕೆ ವ್ಯಕ್ತಿಪೂಜೆಗೂ ಮೊದಲು ಆ ವ್ಯಕ್ತಿಯ ಕೃತಿಪೂಜೆ ಮಾಡಿ ಮುಂದಡಿಯಿಡುವ ಜಾಯಮಾನದವರು ಎಂದು ತಿಳಿದಾಗ, ಅವರ ವಿಷಯದಲ್ಲಿ ಅಭಿಮಾನ ಮೂಡುತ್ತದೆ. ತಮ್ಮ ಗುಣಪಕ್ಷಪಾತವನ್ನು ಅವರು ಹೀಗೆ ವ್ಯಕ್ತಪಡಿಸುತ್ತಾರೆ: “ಒಂದು ಸೋಜಿಗದ ಸಂಗತಿಯೆಂದರೆ-ಹದಿಮೂರು ನಾಟಕಗಳನ್ನು ಬರೆದು, ಅನೇಕ ದೇವರನಾಮಗಳನ್ನು ರಚಿಸಿ, ಶ್ರದ್ಧಾವಂತ ಕಾಂಗ್ರೆಸ್ಸಿಗನೆನಿಸಿ, ಕನ್ನಡ ರಂಗಭೂಮಿಯನ್ನು ಕಟ್ಟಿ ಬೆಳೆಸಿ, ಶಿಕ್ಷಣಸಂಸ್ಥೆಯ ಶಿಲ್ಪಿ ಎನಿಸಿ ಇಂದು ಶ್ರೀ ಹುಯಿಲಗೋಳ ನಾರಾಯಣರಾಯರು ಖ್ಯಾತರಾಗಿರುವುದು `ಉದಯವಾಗಲಿ’ ಗೀತದಿಂದ.” ಕನ್ನಡ ಸಾಹಿತ್ಯದ ಅಭ್ಯಾಸಿಗಳಿಗೆ ಎಲ್ಲ ಕಾಲಕ್ಕೂ ಬೇಕಾಗಿರುವ ಹಲವು ದೈತ್ಯ ಪ್ರತಿಭೆಗಳ ಪೈಕಿ ನಾರಾಯಣರಾಯರಂತಹ, ಎಸ್,ಕೃಷ್ಣಶರ್ಮರಂತಹ, ಬೇಂದ್ರೆಯಂತಹ ಕೆಲವರನ್ನಾದರೂ ಅತ್ಯಂತ ಆಪ್ತವಾಗಿ, ಸೋಗು-ಚೇಷ್ಟೆಗಳ ವಾಗಾಡಂಬರವಿಲ್ಲದೆ ಪರಿಚಯಿಸುವ ಈ ಲೇಖನಗಳು ನಮ್ಮ ಗಮನ ಸೆಳೆಯುವುದು ಎನ್ಕೆಯವರ ವಿದ್ವತ್ತು ಮತ್ತು ಸಹೃದಯತೆಯ ಹಿತವಾದ ಪರಿಪಾಕದಿಂದ. ವಿದ್ವತ್ತು ಪ್ರಧಾನವಾಗಿರುವ ಲೇಖನಗಳಲ್ಲಿ ಕೂಡ , ಉದಾಹರಣೆಗೆ, `ಕನ್ನಡದಲ್ಲಿ ಮಹಾಭಾರತಗಳು’, `ಗದುಗಿನ ಭಾರತ ಮತ್ತು ಮರಾಠಿ ಮಹಾಭಾರತಗಳು’ ಮತ್ತು `ಉತ್ತರಕರ್ನಾಟಕದ ನಾಟಕ ಸಾಹಿತ್ಯ’ಗಳಲ್ಲಿ ಎನ್ಕೆಯವರು ಸರಳವಾದ ನಿರೂಪಣೆ ಮತ್ತು ವಿಷಯದ ಅಗಾಧತೆಗೆ ಸೂಕ್ತ ಗಮನ ಕೊಟ್ಟಿರುತ್ತಾರೆ. ಸುಮಾರು ಇಪ್ಪತ್ತು ಕನ್ನಡ ಮಹಾಭಾರತಕೃತಿಗಳನ್ನು ಪರಾಮರ್ಶೆಗೆ ಎತ್ತಿಕೊಳ್ಳುವ ಲೇಖನ `ಕನ್ನಡದಲ್ಲಿ ಮಹಾಭಾರತಗಳು’ ಮತ್ತು ನಾರಣಪ್ಪನ `ಗದುಗಿನ ಭಾರತ’ದ ಪ್ರಭಾವವನ್ನು ಮರಾಠೀ ಮಹಾಭಾರತ ಕೃತಿಗಳಲ್ಲಿ ಗುರುತಿಸುವ, ಮತ್ತು ಅವುಗಳ ನಡುವಿನ ಕೊಡುಕೊಳ್ಳುವ ಬೆರಗನ್ನು ವಿವರಿಸುವ ಲೇಖನ `ಗದುಗಿನ ಭಾರತ ಮತ್ತು ಮರಾಠಿ ಮಹಾಭಾರತಗಳು’ ಕನ್ನಡದಲ್ಲಿ ಎರಡು ಸ್ವತಂತ್ರವಾದ ಸಂಶೋಧನಕೃತಿಗಳಿಗೆ ಆಹ್ವಾನ ನೀಡುತ್ತವೆ. ಕನ್ನಡಸಾಹಿತ್ಯಕ್ಕೆ ಉತ್ತರಕರ್ನಾಟಕದ ಕೊಡುಗೆಯನ್ನು ಪ್ರಾಮಾಣಿಕವಾಗಿ ವಿವರಿಸುವ ಸಮೀಕ್ಷೆ ಈ ಸಂಕಲನ. ಈ ಕೃತಿ ಪ್ರಕಟವಾಗಿ ಎರಡು ದಶಕಗಳೇ ಸಂದಿವೆ, ಆದರೆ ಇದಿನ್ನೂ ಸಾಹಿತ್ಯಾಸಕ್ತರ ಗಮನಕ್ಕೆ ಸರಿಯಾಗಿ ಬರಬೇಕಾಗಿದೆ ಎನ್ನಲು ವ್ಯಥೆಯಾಗುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!