ಅಂಕಣ

‘ರಾಜಕೀಯದ ಮಧ್ಯೆ ಬಿಡುವು’

‘ರಾಜಕೀಯದ ಮಧ್ಯೆ ಬಿಡುವು’

ಲೇಖಕರು: ರಾಮಮನೋಹರ ಲೋಹಿಯಾ

ಕನ್ನಡಕ್ಕೆ: ಕೆ.ವಿ.ಸುಬ್ಬಣ್ಣ,

ಎರಡನೆಯ ಮುದ್ರಣ: ೧೯೮೬, ಪುಟಗಳು: ೨೮೪, ಬೆಲೆ: ರೂ.೨೫-೦೦

ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ


ಲೋಹಿಯಾವಾದ ಎನ್ನುವ ಅಸದೃಶವಾದ ಸಾಮಾಜಿಕ ಮತ್ತು ರಾಜಕೀಯ ಚಿಂತನೆಯನ್ನು ಸಾಂಸ್ಕೃತಿಕ ಆಲೋಚನೆಗಳಿಗೂ ಪರಿಭಾಷೆಯನ್ನಾಗಿ ಮಾಡಿದ ಡಾ. ರಾಮಮನೋಹರ  ಲೋಹಿಯಾ(೧೯೧೦-೧೯೬೭) ಇಂಗ್ಲಿಷ್‌ನಲ್ಲಿ ಬರೆದ  ಈ ಪುಸ್ತಕವನ್ನು ಕೆ.ವಿ ಸುಬ್ಬಣ್ಣ ೧೯೭೦ರ ದಶಕದಲ್ಲಿಯೇ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕ ಲೋಹಿಯಾ ಅವರ ಇಡೀ ವ್ಯಕ್ತಿತ್ವಕ್ಕೆ ಕನ್ನಡಿಯ ಹಾಗಿದೆ. ಓರ್ವ ಭಾರತೀಯ ಬುದ್ಧಿಜೀವಿ ಮತ್ತು ರಾಜಕೀಯ ಕಾರ್ಯಕರ್ತ ಏನನ್ನು ಆದರ್ಶಪ್ರಾಯವಾಗಿ ಚಿಂತಿಸಿ ಕಾರ್ಯರೂಪಕ್ಕೆ ತರಲು ಯತ್ನಿಸಬೇಕಾಗಿದೆಯೋ ಅದೆಲ್ಲವನ್ನೂ ಮಾಡಿ ಬದುಕಿ ತೋರಿಸಿದ ಲೋಹಿಯಾ ಅವರದು ನನ್ನ ದೃಷ್ಟಿಯಲ್ಲಿ ಇಂಡಿಯಾದಲ್ಲಿ ಗಾಂಧೀಜಿಯ ನಂತರದ ಉನ್ನತ ಸ್ಥಾನ. ಲೋಹಿಯಾ ಪ್ರಣೀತ ಸಮಾಜವಾದಕ್ಕೆ ಕರ್ನಾಟಕದಲ್ಲಿಯೂ ಚಾರಿತ್ರಿಕವಾಗಿ ಸ್ಥಾನವಿದೆ. ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಎಸ್.ಬಂಗಾರಪ್ಪ, ಗೋಪಾಲಗೌಡರು, ಕೆ.ವಿ.ಸುಬ್ಬಣ್ಣ, ಜೆ.ಎಚ್.ಪಟೇಲ್ ಹಾಗೂ ಇನ್ನೂ ಹಲವರು  ಒಂದು ಕಾಲದಲ್ಲಿ ಈ ಗುಂಪಿನ ಸಮಾಜವಾದಿಗಳಾಗಿದ್ದರು. ಇವರೇ ಕವಲಾಗಿ ನಂತರದ ದಿನಗಳಲ್ಲಿ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಿಂಚಿದ್ದು ಈಗ ಮರೆತುಹೋಗಿರಬಹುದಾದಷ್ಟು ಹಳೆಯ ಘಟನೆಯಲ್ಲ. ಕ್ರಮೇಣ ಲೋಹಿಯಾವಾದದಲ್ಲಿಯ ಆಕರ್ಷಣೆ ಬೌದ್ಧಿಕ ಮತ್ತು ಸಾಹಿತ್ಯಿಕ ಸಂವಾದಗಳಿಗೆ ಮಾತ್ರ ಸೀಮಿತಗೊಂಡಿತೆನ್ನುವುದು ನಮ್ಮ ರಾಜಕೀಯ ಕ್ಷೇತ್ರದ ದುರಂತ. ನೆಹರೂಪ್ರಣೀತ ರಾಜಕಾರಣದ ಕಟು ಟೀಕಾಕಾರರಾಗಿ ಲೋಹಿಯಾ ಗಮನ ಸೆಳೆದದ್ದು ಕೂಡ ಈ ತಲೆಮಾರಿನ ಜನರಿಗೆ ನೆನಪಿರಲಿಕ್ಕಿಲ್ಲ. ರಾಜಕೀಯವಾಗಿ ಸಮಾಜವಾದಿಗಳ ಧ್ವನಿ ಕುಗ್ಗಲು ಕಾಂಗ್ರೆಸ್ ತನ್ನ ಒಡಲೊಳಕ್ಕೆ ಸಮಾಜವಾದಿ ತತ್ವಗಳನ್ನು ಸೇರಿಸಿಕೊಂಡುದು ಪ್ರಧಾನ ಕಾರಣವಾಯಿತು ಎನ್ನುವುದು ನನ್ನ ಎಣಿಕೆ. ಇಂತಹ ರಾಜಕೀಯ ಆಪೋಶನಗಳನ್ನೆಲ್ಲ ಧಿಕ್ಕರಿಸಿ ಜೀವಧಾರಣೆ ಮಾಡಿಕೊಂಡಿರುವ ಲೋಹಿಯಾಚಿಂತನೆಗಳು ಮಾತ್ರ ಇಂದಿಗೂ ನಮ್ಮ ಸಾಮಾಜಿಕ ಚಿಂತನೆಯ ಗಟ್ಟಿ ನೆಲೆಯಾಗಿವೆ.

ಲೋಹಿಯಾ ತಮ್ಮ ಬದುಕಿನುದ್ದಕ್ಕೂ ನಡೆಸಿದ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳು ಅಸಂಖ್ಯ. ಸೈದ್ಧಾಂತಿಕವಾಗಿ ಕಾಂಗ್ರೆಸ್‌ನಿಂದ ದೂರಸರಿದ ಮೇಲಷ್ಟೆ ಅವರ ಚಿಂತನಧಾರೆಯ ಅನನ್ಯತೆ ಹೆಚ್ಚು ಬೆಳಕಿಗೆ ಬಂದಿತೆನ್ನಬೇಕು. ವೈಚಾರಿಕವಾಗಿ ಅವರದು ವಿಶ್ವದೃಷ್ಟಿ. ಅವರು ಯುರೋಪಿನಲ್ಲಿ ಓದಿದವರಾದರೂ ಮಾಡಿದ್ದು ಮಾತ್ರ ಭಾರತೀಯತೆಯ ಅರ್ಥದ ಹುಡುಕಾಟ. ತಮ್ಮ ವಿಚಾರಧಾರೆಯನ್ನು ಲೋಹಿಯಾ ಮೂವತ್ತಕ್ಕಿಂತ ಹೆಚ್ಚು ಕೃತಿಗಳನ್ನು ಬರೆದು ಭಾರತೀಯರೊಡನೆ ಮಾತ್ರವಲ್ಲ, ಜಗತ್ತಿನ ಎಲ್ಲ ಚಿಂತನಶೀಲರೊಡನೆ ಹಂಚಿಕೊಂಡಿದ್ದಾರೆ. ಅಂತಹ ಅಪೂರ್ವವಾದ ಕೃತಿಗಳಲ್ಲಿ ಸದ್ಯದ ‘ರಾಜಕೀಯದ ಮಧ್ಯೆ ಬಿಡುವು’ ಕೂಡ ಒಂದು. ಈ ಕೃತಿಯಲ್ಲಿ ಹದಿನೇಳು ಅಧ್ಯಾಯಗಳೂ ಕೊನೆಯಲ್ಲೊಂದು ವಿಶಿಷ್ಟ ಪದಗಳನ್ನು  ವಿವರಿಸುವ ಟಿಪ್ಪಣಿಯೂ ಇವೆ. ನನ್ನನ್ನು ಹಲವು ಬಾರಿ ಓದಿಸಿದ ಕೃತಿ ಇದು. ಇಲ್ಲಿರುವ ಬರಹಗಳೆಲ್ಲ ಬಿಡಿ ಲೇಖನಗಳು. ಜಗತ್ತಿನ ರಾಜಕೀಯ ಮತ್ತು ಚಾರಿತ್ರಿಕ ವಿದ್ಯಮಾನಗಳು, ನಮ್ಮ ಅವತಾರಗಳ ಕಲ್ಪನೆ, ಇಂಡಿಯಾದ ನದಿಗಳು, ನಮ್ಮ ವಿಶ್ವವಿದ್ಯಾಲಯಗಳು, ದಿಲ್ಲಿ, ಕ್ರಿಕೆಟ್, ಬ್ರಿಟಿಷ್ ಪತ್ರಿಕೋದ್ಯಮ, ಸೌಂದರ್ಯ ಮತ್ತು ಮೈಬಣ್ಣ, ಭಾರತದ ಏಕತೆ, ವಶಿಷ್ಠರು, ವಾಲ್ಮೀಕಿಯರು, ಪುಸ್ತಕಾವಲೋಕನ ಹೀಗೆ ವೈವಿಧ್ಯಮಯ ವಿಷಯಗಳಿರುವ ಈ ಲೇಖನಗಳೆಲ್ಲ ಅಖೈರಾಗಿ ಇಂಡಿಯಾದ ವಿವಿಧತೆಯಲ್ಲಿನ ಏಕತೆಯ ಚಿಂತನೆಗೇ ತಿರುಗುತ್ತವೆ.

ಲೋಹಿಯಾ ಪಾಶ್ಚಿಮಾತ್ಯ ದೇಶಗಳನ್ನೂ ಅಲ್ಲಿಯ ನಾಗರಿಕತೆಗಳನ್ನೂ ಮೆಚ್ಚುವುದು ಅವುಗಳ ಸ್ವಾತಂತ್ರ್ಯದ ಪರಿಕಲ್ಪನೆಗಳಿಗಾಗಿ. ಆದರೆ ಅವು ಪೂರ್ವದೇಶಗಳಲ್ಲಿ ಮತ್ತು ಆಫ್ರಿಕೆಯಲ್ಲಿ ನಡೆಸಿದ ಭೀಕರವಾದ ಹಿಂಸೆ, ಪೈಪೋಟಿ, ಜಗತ್ತಿನಾದ್ಯಂತ ಕೈಗೊಂಡ ಅನಾಗರಿಕವಾದ ಆತ್ಮಪ್ರತಿಷ್ಠಾಪನೆ, ಪೂರ್ವದೇಶಗಳ ಬಗ್ಗೆ ಮತ್ತು ಪೂರ್ವದೇಶಗಳ ನಾಗರಿಕತೆ-ಸಂಸ್ಕೃತಿಗಳ ಬಗ್ಗೆ ಅವು ಬರೆದ ಸುಳ್ಳು ಇತಿಹಾಸಗಳಿಗಾಗಿ ಅಷ್ಟೇ ಕಠೋರವಾದ ಶಬ್ದಗಳಿಂದ ಖಂಡಿಸುತ್ತಾರೆ. ಅದಕ್ಕೆ ವಿಪರೀತವಾಗಿ ಇಂಡಿಯಾದ ಜಾತಿವ್ಯವಸ್ಥೆ, ವರ್ಗವ್ಯವಸ್ಥೆ, ರಾಜಕೀಯ ಕಪಟ, ಜಾಳು ಮನಸ್ಸುಗಳನ್ನು ಖಂಡಿಸುತ್ತ ನಮ್ಮ ಭಾಷಾವೈವಿಧ್ಯ, ರಾಮ, ಕೃಷ್ಣ, ಶಿವ, ಶಿಲ್ಪ, ನದಿಗಳು ಮೊದಲಾದ ನೆಲೆಗಳಿಂದ ಭಾರತೀಯರಿಗೆ ಒಗ್ಗಟ್ಟಿನ ಅಪಾರ ಸಾಧ್ಯತೆಗಳಿರುವುದನ್ನೂ ಎತ್ತಿ ತೋರಿಸುತ್ತಾರೆ. ಇಂಡಿಯಾದಲ್ಲಿ ನೆಹರೂಗಿಂತ ಮಿಗಿಲಾಗಿ ಲೋಹಿಯಾ ಏಕತೆಯನ್ನೂ ವಿಶ್ವದೃಷ್ಟಿಯನ್ನೂ ಸ್ಥಾಪಿಸಲು ಯತ್ನಿಸಿದರೆಂದರೆ ಇಂದು ಬುದ್ಧಿಯ ಕ್ಷೇತ್ರಗಳಲ್ಲಿ ಮುಂದುವರೆದ ಯಾರಿಗಾದರೂ ಇದು ಅರ್ಥವಾಗುತ್ತದೆ. ನೆಹರೂ ಯುಗದ ಸೋಗಿನ ರಾಜಕಾರಣ ಮತ್ತು ಮುರಾರ್ಜಿ ಅಂಥವರ ಶುಷ್ಕ ನೈತಿಕ ನಿಲುವುಗಳಿಗೆ ಸಭ್ಯ ಧಿಕ್ಕಾರವಷ್ಟೆ ಲೋಹಿಯಾ ಅವರ ಪ್ರತಿಕ್ರಿಯೆಯಾಗಿತ್ತು.

ಲೋಹಿಯಾ ಅವರ ಚಿಂತನೆಯೇ ಅವರ ವ್ಯಕ್ತಿತ್ವ. ಅಂತರಂಗಶುದ್ಧಿಯು ಬಹಿರಂಗಶುದ್ಧಿಯೂ ಆಗಿರಬೇಕೆಂಬ ಹಂಬಲ ಅವರು ನೆಹರೂ ಆಸ್ಥಾನದಿಂದ, ಕಾಂಗ್ರೆಸ್ ರಾಜಕಾರಣದಿಂದ ಹೊರಬೀಳಲು ಕಾರಣ. ಪ್ರತಿಫಲವಾಗಿ ಅವರಿಗೆ ಸ್ವತಂತ್ರ ಭಾರತದಲ್ಲಿ ಸಿಕ್ಕಿದ್ದು ದೀರ್ಘ ಕಾಲದ ಜೈಲುವಾಸ. ಇದಕ್ಕೆ ದಾಖಲೆಯಾಗಿ ನಿಲ್ಲುವ ಒಂದು ಲೇಖನ ಈ ಕೃತಿಯಲ್ಲಿರುವ ‘ವಶಿಷ್ಠರುಗಳು ಮತ್ತು ವಾಲ್ಮೀಕಿಯರು’. ವಾಸ್ತವದಲ್ಲಿ ಲಖನೌ ಜೈಲಿನಿಂದ ೧೦-೧೨-೧೯೫೭ರಂದು ಲೋಹಿಯಾ ಉತ್ತರಪ್ರದೇಶದ ಜೈಲುಮಂತ್ರಿಗೆ ಬರೆದ ಪತ್ರ, ಈ ಲೇಖನ. ಇದರಲ್ಲಿ ಲೋಹಿಯಾ ಅಂದಿನ ನ್ಯಾಯವ್ಯವಸ್ಥೆ, ಸರಕಾರದ ಧೋರಣೆ, ಅಧಿಕಾರಸ್ಥರ ನಿಧಾನದ್ರೋಹ ಮತ್ತು ಜಡ್ಡುಗಟ್ಟಿದ ನೈತಿಕತೆಗಳ ಮೇಲೆ ತಪ್ತ ಮನಸ್ಸಿನಿಂದ ಬರೆಯುತ್ತಾರೆ. ಇಷ್ಟು ದೃಢವಾದ ವಾಚ್ಯ-ವ್ಯಂಗ್ಯಗಳ ಶೈಲಿಯನ್ನು ಮತ್ತೆಲ್ಲೂ ನೋಡಲಾರೆವು ಎನ್ನಿಸುತ್ತದೆ. ಸಮಗ್ರತೆ, ಸಮಾನತೆ ಮತ್ತು, ಋಜುದೃಷ್ಟಿ ಲೋಹಿಯಾಚಿಂತನೆಗಳ ಪ್ರಧಾನ ಮುದ್ರೆಗಳು ಎಂದು ಇಲ್ಲಿರುವ ಯಾವ ಲೇಖನ ಓದಿದರೂ ಸ್ಪಷ್ಟವಾಗುತ್ತದೆ. ‘ಪ್ರಪಂಚದ ಸುತ್ತು’, ‘ರಾಮ ಕೃಷ್ಣ ಶಿವ’, ‘ಇಂಡಿಯಾದ ನದಿಗಳು’, ‘ಡೆಲ್ಹಿ ಎಂದು ಕರೆಯುವ ದಿಲ್ಲಿ’, ‘ಸೌಂದರ್ಯ ಮತ್ತು ಮೈಬಣ್ಣ’ ಇವುಗಳಲ್ಲಿ ಒಂದೊಂದೂ ನಮಗೆ ಹಿಡಿದ ಕನ್ನಡಿಯಂಥ ಲೇಖನಗಳು. ಆದ್ದರಿಂದ ಲೋಹಿಯಾ ದಿಲ್ಲಿಯನ್ನು ಪ್ರಪಂಚದ ದೊಡ್ಡ ನಾಯಕಸಾನಿ ಎಂದು ತಲೆಪಟ್ಟಿ ಅಂಟಿಸಿದಾಗ, ಕಪ್ಪು ವರ್ಣದ ಸೌಂದರ್ಯಮೀಮಾಂಸೆ ಮಾಡಿದಾಗ, ಕಪಟ ಬೌದ್ಧಿಕತೆಯನ್ನು ವಶಿಷ್ಠ ಎಂದೂ ಪ್ರಾಂಜಲ ಬೌದ್ಧಿಕತೆಯನ್ನು ವಾಲ್ಮೀಕಿ ಎಂದೂ ಸಂಕೇತಿಸಿ ಬೇರ್ಪಡಿಸಿದಾಗ  ಅಲ್ಲೊಂದು ತಲಸ್ಪರ್ಶೀ ಒಳನೋಟ ಸಿಗುತ್ತದೆ.

  ಕನ್ನಡದ ನವ್ಯಸಾಹಿತ್ಯ ಚಳುವಳಿಗೆ ಅಗತ್ಯವಾದ ಒಂದಷ್ಟು ಮೂಲದ್ರವ್ಯ ಲೋಹಿಯಾವಾದದಿಂದ ಪ್ರಾಪ್ತವಾಯಿತೆನ್ನುವುದು ನನ್ನ ಅನಿಸಿಕೆ. ಅದರ ಮುಖ್ಯ ವಾಹಿನಿಯಾಗಿ ಅಂದು ಕನ್ನಡಕ್ಕೆ ಬಂದದ್ದು ಈ ಕೃತಿ. ಇದು ನನ್ನ ವಾದವೂ ಅಲ್ಲ, ಸಿದ್ಧಾಂತವೂ ಅಲ್ಲ. ಒಂದು ಅನಿಸಿಕೆ ಮಾತ್ರ. ಪ್ರಸ್ತುತ ‘ರಾಜಕೀಯದ ಮಧ್ಯೆ ಬಿಡುವು’ ಕೃತಿಯನ್ನು ಓದಿದ ಯಾರೂ ನನ್ನಂತೆ ಭಾವಿಸಬಹುದು ಎನ್ನುವ ವಿಶ್ವಾಸ ನನಗಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!