ಅಂಕಣ

ಸ್ವದೇಶಿ ನ್ಯಾವಿಗೇಶನ್ ವ್ಯವಸ್ಥೆ ನಾವಿಕ್ (NavIC)

ಮೊಬೈಲ್’ನ ನಿರಂತರ ಬಳಕೆ ಮತ್ತು ಮೊಬೈಲ್ ನೆಟ್ವರ್ಕ್’ನ ವಿಸ್ತಾರದಿಂದ ಜಿ.ಪಿ.ಎಸ್’ನ ಉಪಯೋಗವೂ ನಮ್ಮ ಜೀವನವನ್ನು ಬದಲಿಸಿದೆ.ರಸ್ತೆಯನ್ನು ಹುಡುಕುವದರಿಂದ ಹಿಡಿದು ಲೋಕೇಶನ್ ಗುರುತಿಸುವದು ಮತ್ತು ಟ್ರಾಫಿಕ್’ನ ಮಾಹಿತಿ ಪಡೆಯುವದನ್ನು ಜಿ.ಪಿ.ಎಸ್. ಸರಳಗೊಳಿಸಿದೆ. ಸ್ಮಾರ್ಟ್ ಫೋನ್’ನಲ್ಲಿ ಕಾಲಿಂಗ್ ಮತ್ತು ಸಾಮಾಜಿಕ ಜಾಲತಾಣಗಳ ತರುವಾಯ ಅತಿ ಹೆಚ್ಚು ಉಪಯೋಗಿಸಲ್ಪಡುವ ಆೄಪ್ ಜಿ.ಪಿ.ಎಸ್’ನ ಸಹಾಯದಿಂದ ಕಾರ್ಯನಿರ್ವಹಿಸುವ ಮ್ಯಾಪ್ ಮತ್ತು ಲೋಕೇಶನ್.  ಯಾವುದೇ ಸ್ಥಾನವನ್ನು ತಿಳಿಯಲು ಅಥವಾ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ನಮ್ಮ ಮೊಬೈಲ್’ನಲ್ಲಿರುವ ಗೂಗಲ್ ಮ್ಯಾಪ್’ನ್ನು ಬಳಸುವದು ಸಾಮಾನ್ಯ.  ಇದರ ಸಹಾಯದಿಂದ ನಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಮೂಡುವ ಮಾರ್ಗದ ನಕಾಶೆ ನಿಖರ ಮಾಹಿತಿ ನೀಡಿ ತಲುಪ ಬೇಕಾದ ಸ್ಥಳಕ್ಕೆ ತಲುಪಿಸುತ್ತದೆ. ಜಿ.ಪಿ.ಎಸ್’ನ ಸಹಾಯದಿಂದ ಕೇವಲ ಪ್ರಯಾಣಕ್ಕಾಗಿ ವೈಕಲ್ಪಿಕ ಮಾರ್ಗಗಳಿಗಾಗಿ ಮಾತ್ರವಲ್ಲದೇ, ನಕಾಶೆಗಳನ್ನು ತಯಾರಿಸಲು, ಭೂಪ್ರದೇಶಗಳ  ಮೋಜಣಿ ಮಾಡಲು, ಕ್ಯಾಬ್ ಮತ್ತು ಕುರಿಯರ್’ಗಳ ಸ್ಥಾನವರಿಯಲು, ಜನರ ಚಲನವಲನಗಳ ಮೇಲೆ ಕಣ್ಣಿಡಲು, ಬಸ್, ಹಡಗು ಮತ್ತು ವಿಮಾನಗಳಿಗೆ ದಿಶಾದರ್ಶನ ಮಾಡಲು ಅಷ್ಟೇ ಏಕೆ ದಾರಿ ತಪ್ಪಿ ಕಳೆದು ಹೋದವರನ್ನೂ ಹುಡಕಲು ಬಳಸಲಾಗುತ್ತದೆ.

ಜಿ.ಪಿ.ಎಸ್’ನ ಇತಿಹಾಸ ಮತ್ತು ಕಾರ್ಯನಿರ್ವಹಿಸುವ ಬಗೆ:

ಜಿ.ಪಿ.ಎಸ್. ಅರ್ಥಾತ್ ಗ್ಲೋಬಲ್ ಪೋಸಿಷನಿಂಗ್ ಸಿಸ್ಟಮ್ ಒಂದು ಉಪಗ್ರಹ ಆಧಾರಿತ ತಂತ್ರಜ್ಞಾನ  ವ್ಯವಸ್ಥೆ. ಪ್ರಪ್ರಥಮವಾಗಿ 1960ರಲ್ಲಿ ಅಮೇರಿಕಾದ ಸೇನೆಯ ಉಪಯೋಗಕ್ಕೆಂದು ಗ್ಲೋಬಲ್ ನ್ಯಾವಿಗೇಶನ್ ಸೆಟಲೈಟ್ ಸಿಸ್ಟಮ್  ಹೆಸರಿನಲ್ಲಿ ಪ್ರಾರಂಭವಾದ ಈ ವ್ಯವಸ್ಥೆಯಲ್ಲಿ 33 ಉಪಗ್ರಹಗಳ ಸಮೂಹ ಭೂಮಿಯಿಂದ ಸುಮಾರು 20000ಕಿಲೋಮೀಟರ್ ಎತ್ತರದಲ್ಲಿ ಪೃಥ್ವಿಯ ಕಕ್ಷೆಯಲ್ಲಿ ಸುತ್ತುತ್ತ ಲೋಕೇಶನ್’ನ ನಿಖರ ಮಾಹಿತಿಯನ್ನು ನೀಡುತ್ತದೆ. 27 ಏಪ್ರಿಲ್ 1995ರಿಂದ ಈ ಸೇವೆಯನ್ನು ಅಮೇರಿಕಾದ ಜನ ಸಾಮಾನ್ಯರಿಗೂ ವಿಸ್ತರಿಸಲಾಯಿತು.

ತಾಂತ್ರಿಕವಾಗಿ ಜಿ.ಪಿ.ಎಸ್’ನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಸ್ಪೇಸ್ ಸೆಗ್ಮೆಂಟ್ ಅಥವಾ ಬಾಹ್ಯಾಕಾಶ ವಿಭಾಗ  ಅರ್ಥಾತ್ ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಉಪಗ್ರಹಗಳ ನಿಯಂತ್ರಣ ವಿಭಾಗ, ಭೂಮಿಯ ಮೇಲೆ ಉಪಗ್ರಹ ಸಂಕೇತಗಳನ್ನು ನಿಯಂತ್ರಿಸುವ ಕೇಂದ್ರ ಮತ್ತು ಕೊನೆಯದಾಗಿ ಬಳಕೆದಾರರ (ಯೂಸರ್ ಸೆಗ್ಮೆಂಟ್) ವಿಭಾಗ. ಸರಳ ಭಾಷೆಯಲ್ಲಿ ಹೇಳುವಾದದರೆ ಬಾಹ್ಯಾಕಾಶದಲ್ಲಿಯ ಹೈ ಡೆಫಿನಿಷನ್ ಕ್ಯಾಮೆರಾಗಳು ನಮ್ಮ ಭೂಭಾಗದ ಉದ್ದಗಲಕ್ಕೂ ಹದ್ದಿನ ಕಣ್ಣಿಡುತ್ತವೆ. ಪ್ರಥ್ವಿಯ ಮೇಲಿನ ನಿಯಂತ್ರಣ ಕಕ್ಷಗಳು ಈ ಉಪಗ್ರಹಗಳಲ್ಲಿಯ ಉಪಕರಣಗಳ ಸಂಚಾಲನೆಯ ಕಾರ್ಯವನ್ನು ನೋಡಿಕೊಳ್ಳುತ್ತವೆ. ಉಪಗ್ರಹಳಿಂದ ಪ್ರಾಪ್ತ ದತ್ತಾಂಶದ ಗಣನೆಗಾಗಿ ಜಿ.ಪಿ.ಎಸ್. ರಿಸೀವರ್’ಗಳ ಅವಶ್ಯಕತೆ ಇದ್ದು, ನಮ್ಮ ಮೊಬೈಲ್’ಗಳು ರಿಸೀವರ್’ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಯಾವುದೇ ಲೋಕೇಶನ್ ಅಥವಾ ಸ್ಥಾನವನ್ನು ನಿಖರವಾಗಿ ಪತ್ತೆ ಹಚ್ಚಲು ಕನಿಷ್ಠ 3 ಉಪಗ್ರಹಗಳ ಸಹಾಯ ಪಡೆಯಲಾಗುತ್ತದೆ. ಈ ರೀತಿ ಮೂರು ಉಪಗ್ರಹಗಳ ಸಹಾಯದಿಂದ ನಿಖರವಾದ ಸ್ಥಾನವನ್ನು ಅಂದಾಜಿಸುವ ರೇಖಾಗಣಿತದ ಪದ್ಧತಿಗೆ ತ್ರಿಭುಜನ (ಟ್ರೈ೦ಗ್ಯುಲೇಶನ್) ಮತ್ತು ತ್ರಿಪದಿತ್ವ (ಟ್ರೈಲೆಟರೇಶನ್) ಎಂದು ಕರೆಯುವರು.  ಮೂರು ಉಪಗ್ರಹಗಳು ಒಮ್ಮಿಲೆ ಅಭಿಗ್ರಾಹಕಗೆ (ರಿಸೀವರ್) ನೀಡುವ ಲೋಕೇಶನ್’ನ ಸಂಕೇತ 2Dಯಲ್ಲಿ ಅಕ್ಷಾಂಶ ಮತ್ತು ರೇಖಾಂಶದ ರೂಪದಲ್ಲಿರುತ್ತದೆ. ನಿರ್ದಿಷ್ಟ ಸ್ಥಾನದ ಕರಾರುವಾಕ್ಕಾದ ಮಾಹಿತಿಗಾಗಿ 4 ಉಪಗ್ರಹಗಳ ಸಂಕೇತದ ಅವಶ್ಯಕತೆಯಿರುತ್ತದೆ, ಈ ನಾಲ್ಕನೆಯ ಉಪಗ್ರಹದ ಸಹಾಯದಿಂದ 3ನೇ (3D) ಆಯಾಮವಾದ ಎತ್ತರವೂ ದೊರೆಯುತ್ತದೆ. ಉಪಗ್ರಹಗಳು ಜಿ.ಪಿ.ಎಸ್. ಟ್ರ್ಯಾಕರ್’ಗಳ ಮುಖಾಂತರ ಮಾಹಿತಿಯನ್ನು ಕಲೆಹಾಕಿ ರಿಸೀವರ್’ಗಳಿಗೆ ಕಳುಹಿಸುತ್ತವೆ.ಜಿ.ಪಿಎಸ್’ನ ಉಪಕರಣ ಉಪಗ್ರಹಗಳಿಂದ ದೊರೆತ ಸಂಕೇತಗಳಿಂದ ಆ ಸ್ಥಾನವನ್ನು ನಕಾಶೆಯಲ್ಲಿ ತೋರಿಸುತ್ತವೆ.

ಸ್ವದೇಶಿ ಜಿ,ಪಿ.ಎಸ್’ನ ಅವಶ್ಯಕತೆ ಮತ್ತು ವಿಕಾಸ:

ಜಿ.ಪಿ.ಎಸ್.ಸೇವೆಗಳಿಗಾಗಿ ನಾವು ಅವಲಂಬಿಸುತ್ತಿರುವದು ಅಮೇರಿಕೆಯ ಗೂಗಲ್’ನ್ನು, ಭವಿಷ್ಯದಲ್ಲಿ ಅಮೇರಿಕಾದೊಂದಿಗೆ ಭಾರತದ ಬಾಂಧವ್ಯ ಹದಗೆಟ್ಟು ಅಥವಾ ಗೂಗಲ್ ಯಾವುದೇ ನೆಪವೊಡ್ಡಿ ತನ್ನ ಸೇವೆಗಳನ್ನು ನಿರಾಕರಿಸಿದರೆ ನಮ್ಮ ಗತಿ ಏನು? ನಮ್ಮ ಜನಜೀವನದ ವೇಗ ಸ್ತಭ್ದವಾಗಿಬಿಡಬಹುದು! ವ್ಯಾಪಾರ ವಹಿವಾಟು ಮತ್ತು ದೇಶದ ಅಭಿವೃದ್ಧಿಯ ಪಥದಲ್ಲಿ ಸ೦ಕಷ್ಟಗಳನ್ನು ಎದುರಿಸಬೇಕಾಗಬಹುದು. ಮೇ 1999ರಲ್ಲಿ ಉಗ್ರವಾದಿ ನುಸುಳುಕೋರರ ರೂಪದಲ್ಲಿ ಕಾಶ್ಮೀರಕ್ಕೆ ಬಂದ ಪಾಕಿಸ್ತಾನಿ ಸೈನಿಕರು ಕಾರ್ಗಿಲ್’ನ ಉಚ್ಚ ಪರ್ವತ  ಶ್ರೇಣಿಗಳನ್ನು ಆಕ್ರಮಿಸಿ ಅವಿತುಕೊಂಡಿದ್ದರು. ಭಾರತೀಯ ಸೈನ್ಯಕ್ಕೆ ಈ ನುಸುಳುಕೋರರ ನಿಖರವಾದ ಸ್ಥಳ ಪತ್ತೆಹಚ್ಚುವದು ಕಷ್ಟವಾಗತೊಡಗಿತ್ತು. ಅಂದಿನ ಭಾರತ ಸರ್ಕಾರ ಅಮೇರಿಕಾದ ನೆರವು ಕೋರಿತ್ತು, ಅಮೇರಿಕಾ ತನ್ನ ಜಿ.ಪಿ.ಎಸ್. ಉಪಗ್ರಹಗಳ ಸಹಾಯದಿಂದ ಪಾಕಿಸ್ತಾನಿ ನುಸುಳುಕೋರರ ಅಡಗಿ ಕುಳಿತ  ನಿಷ್ಕೃಷ್ಟ ಸ್ಥಾನದ ಪತ್ತೆ ಹಚ್ಚಿ ಹೇಳುತ್ತದೆ ಎಂಬ ಆಶಯ ಈಡೇರಲಿಲ್ಲ. ಒಂದು ವೇಳೆ ಅಮೇರಿಕಾ ನೆರವು ನೀಡಿದ್ದರೆ ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೈನ್ಯಕ್ಕಾದ ಹಾನಿಯ ಪ್ರಮಾಣವನ್ನು ತಗ್ಗಿಸಬಹುದಿತ್ತು ಮತ್ತು ಯುದ್ಧದ ಅವಧಿಯೂ ಕಡಿಮೆಯಾಗುತ್ತಿತ್ತು!  

ಇಂಥ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಭಾರತ ತನ್ನ ಸ್ವದೇಶಿ ದಿಶಾದರ್ಶನ ವ್ಯವಸ್ಥೆ (Navigation System) ಹೊಂದಲು 1990ರಲ್ಲಿಯೇ ಕಾರ್ಯ ಪ್ರವೃತ್ತ ವಾಗಿದ್ದರೂ, ಅದಕ್ಕೆ ಗತಿ ದೊರೆತದ್ದು 2೦೦೦ದ ದಶಕದಲ್ಲಿ. ಇಸ್ರೋದ ಭಾರತೀಯ ಕ್ಷೇತ್ರಿಯ ದಿಶಾದರ್ಶನ  ಉಪಗ್ರಹ ಪ್ರಣಾಳಿಯ (Indian Regional Navigation Satellite System -IRNSS) ಸರಣಿಯ 8ನೆಯ ಉಪಗ್ರಹ ಕ್ರಿಯಾತ್ಮಕವಾಗುತ್ತಿದ್ದಂತೆ ಸ್ವದೇಶಿ ನ್ಯಾವಿಗೇಶನ್ ಸಿಸ್ಟಮ್  ಕಾರ್ಯಾರಂಭಮಾಡಲಿದೆ.

ಕಾರ್ಗಿಲ್ ಯುದ್ಧಕ್ಕೆ ಇನ್ನೇನು 20 ವರ್ಷ ತುಂಬಲಿವೆ, ಈ 20 ವರ್ಷಗಳಲ್ಲಿ ಭಾರತ ಸ್ವದೇಶಿ ಜಿ.ಪಿಎಸ್. ಹೊಂದುವತ್ತ ದಾಪುಗಾಲಿತ್ತಿದೆ. ಇಸ್ರೋ ಕೇವಲ ಜಿ.ಪಿಎಸ್ ಅಷ್ಟೇ ಅಲ್ಲದೆ ಮ್ಯಾಪಿಂಗ್, ಜಿಯೋ ಲೋಕೇಶನ್ ಮತ್ತು ನ್ಯಾವಿಗೇಶನ್’ಗೆ ಸಂಬಧಿಸಿದ  ಸಂಪೂರ್ಣ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ, IRNSS-1A, 1B, 1C, 1D, 1E, 1F, 1G ಮತ್ತು 1I ಉಪಗ್ರಹಗಳನ್ನು ಇಸ್ರೋ ಬಾಹ್ಯಾಕಾಶದಲ್ಲಿ ಸ್ತಾಪಿಸಿದೆ.  2016ರಲ್ಲಿ IRNSS-1Gಯ ಉಪಗ್ರಹದ ಉಡಾವಣೆಯ ತರುವಾಯ ಪ್ರಧಾನಿ ಮೋದಿ ಸ್ವದೇಶಿ ಜಿ.ಪಿ.ಎಸ್’ಗೆ  ’”ನಾವಿಕ್” (NavIC- Navigation with Indian Constellation) ಎಂದು ನಾಮಕರಣ ಮಾಡಿದರು. 2013ರಲ್ಲಿ ಹಾರಿಬಿಟ್ಟ IRNSS-1A ಆಟೋಮಿಕ್ ಕ್ಲಾಕ್’ಗಳ ವಿಫಲತೆಯಿಂದ ಹೆಚ್ಚು ಕಡಿಮೆ ನಿಷ್ಪ್ರಯೋಜಕವಾಗಿದ್ದು ಮತ್ತು ಕಳೆದ ವರ್ಷ ಹಾರಿಬಿಟ್ಟ IRNSS-1H ತನ್ನ ನಿಗದಿತ ಕಕ್ಷೆಯನ್ನು ತಲುಪವಲ್ಲಿ ವಿಫಲವಾಗಿದ್ದು ಈ ಮಹತ್ವಾಕಾಂಕ್ಷೆಯ ಯೋಜನೆ ವಿಳಂಬವಾಗುವಂತೆ ಮಾಡಿತು. ವಿಜ್ಞಾನಿಗಳು ಹೇಳುವಂತೆ ಭಾರತದ ಸಮಸ್ತ ಭೂಭಾಗವನ್ನು ಬಾಹ್ಯಾಕಾಶದಿಂದ ಸುತ್ತುವರೆದು  ಅವಲೋಕಿಸಲು 7 ಉಪಗ್ರಹಗಳ ಅವಶ್ಯಕತೆ ಇದೆ. ನಮ್ಮ ಈ ಸಿಸ್ಟಮ್ ಕಾರ್ಯಪ್ರವತ್ತವಾದರೆ ವಿಶ್ವವ್ಯಾಪ್ತಿಯುಳ್ಳ ನ್ಯಾವಿಗೇಶನ್ ವ್ಯವಸ್ಥೆಗಳಾದ ಅಮೇರಿಕಾದ ‘ಜಿ.ಪಿಎಸ್’ (G,P.S) ರಷಿಯಾದ ‘ಗ್ಲೋನಾಸ್’ (GLONASS). ಯುರೋಪನ ‘ಗೆಲಿಲಿಯೋ’(GALILEO), ಚೀನಾದ ‘ಬಡೇನ್’ (Bei Dou) ಸಾಲಿಗೆ ‘ನಾವಿಕ್’ ಸೇರಲಿದೆ. ನಾವಿಕ್ ಭಾರತ ಮತ್ತು ಸುತ್ತಮುತ್ತಲಿನ ಪ್ರದೇಶದ ರಿಯಲ್ ಟೈಮ್ ಲೋಕೇಶನ್ ಮತ್ತು ಟೈಮಿಂಗ್’ನ ನಿಖರ ಮಾಹಿತಿ ನೀಡಲಿದೆ. ಇದು ಭಾರತದ ಸುತ್ತ ಸರಿಸುಮಾರು 1500 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ನ್ಯಾವಿಗೇಶನ್ ಸಿಸ್ಟಮ್’ನಲ್ಲಿ 7 ಉಪಗ್ರಹಗಳ ಸಮೂಹ ಕಾರ್ಯನಿರ್ವಹಿಸುತ್ತದೆ, ಭೂಮಿಯ ಮೇಲಿನ ಎರಡು ಹೆಚ್ಚುವರಿ ಉಪಗ್ರಹಗಳು ಸ್ಟ್ಯಾಂಡ್ ಬೈ ಮೋಡ್’ನಲ್ಲಿರುತ್ತವೆ. 7 ರಲ್ಲಿ ಮೂರು ಉಪಗ್ರಹಗಳು ಪ್ರಥ್ವಿಯ  ಜಿಯೋ ಸ್ಟೇಷ್ನರಿ (ಭೂಸ್ಥಾಯಿ) ಕಕ್ಷೆಯಲ್ಲಿ ಮತ್ತು ನಾಲ್ಕು ಉಪಗ್ರಹಗಳು ಜಿಯೋ’ಸಿಂಕ್ರೊನಸ್ ಕಕ್ಷೆಯಲ್ಲಿ ಸ್ಥಾಪಿತವಾಗಿವೆ. ಪ್ರತಿ ಉಪಗ್ರಹದ ಭಾರ ಸರಿ ಸುಮಾರು 1330 ಕಿಲೋಗ್ರಾಂ ಇದ್ದು ಪ್ರತಿಯೊಂದು ಉಪಗ್ರಹ 1400ವ್ಯಾಟ್ ಉತ್ಪಾದನಾ ಸಾಮರ್ಥ್ಯದ ಸೌರ ಫಲಕಗಳನ್ನು ಹೊಂದಿವೆ.  ನಾವಿಕ್ ಎರಡುಬಗೆಯ ಸೇವೆಗಳನ್ನು ಒದಗಿಸಲಿದ್ದು, ಸರ್ವರಿಗೂ ಮುಕ್ತವಾದ ಸ್ಟ್ಯಾಂಡರ್ಡ್ ಪೋಸಿಷನಿಂಗ್ ಸಿಸ್ಟಮ್ (SPS) ಮತ್ತು ಕೇವಲ ಅಧಿಕೃತ ಬಳಕೆದಾರರಿಗೆಂದು ರಿಸ್ಟ್ರಿಕ್ಟೆಡ್ ಸರ್ವಿಸ್ (RS). ಈ ಸಿಸ್ಟಮ್’ನ ಸಂಚಾಲನೆ ಮತ್ತು ನಿರ್ವಹಣೆಗಾಗಿ ಭಾರತದಲ್ಲಿ 18 ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜಿ.ಪಿ.ಎಸ್’ನಲ್ಲಿ ಕೇವಲ ‘L’ ಬ್ಯಾಂಡ್ ಇದ್ದು ನಮ್ಮ ನಾವಿಕ್  ‘S’ ಮತ್ತು L’ ಎರಡೂ ಬ್ಯಾಂಡ್’ಗಳನ್ನೊಳಗೊಂಡಿದೆ. ಇದರಿಂದ ವಾಯುಮಂಡಲದಲ್ಲಿ ಅವರೋಧ ಉಂಟಾದಾಗಲೂ ನಿಖರವಾದ ಸ್ಥಿತಿ,ಸ್ಥಾನ ಮತ್ತು ನ್ಯಾವಿಗೇಶನ್ ಮಾಹಿತಿ ದೊರೆಯುವಲ್ಲಿ ತೊಂದರೆಯಾಗುವದಿಲ್ಲ.

ನಾವೀಕ್’ನ ಉಪಯೋಗಗಳು:

ನಾವಿಕ್’ನಿಂದ ಮೀನುಗಾರಿಗೆ ಚಂಡಮಾರುತ ಮತ್ತು ಸಮುದ್ರದ ಏರಿಳಿತದ ನಿರ್ದಿಷ್ಟ ಮುನ್ಸೂಚನೆ ದೊರೆಯಲಿದೆ. ದೇಶದ ವಿವಿಧ ಭಾಗಗಳಲ್ಲಿಯ ಸರಕಾರಿ ಪರಿಯೋಜನೆಗಳ ಪ್ರಗತಿಯ ಕುರಿತ ರಿಯಲ್ ಟೈಮ್ ಮಾಹಿತಿ ಲಭ್ಯವಾಗಲಿದೆ, ರೈಲು,ರಸ್ತೆ,ವಿಮಾನಯಾನ ಮತ್ತು ನೌಕಾಯಾನದಲ್ಲೂ ಇದರ ಉಪಯೋಗವಾಗಲಿದೆ, ಟ್ರಾಫಿಕ್ ಜಾಮ್ ಮತ್ತು ವಿಳಂಬವಾಗಿ ಓಡುತ್ತಿರುವ ರೈಲುಗಳ ರಿಯಲ್ ಟೈಮ್ ಟ್ರ್ಯಾಕಿಂಗ್ ಸಾಧ್ಯವಾಗಲಿದೆ. ಭೂಕಂಪ, ಸುನಾಮಿ ಮತ್ತು ಇನ್ನಿತರ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಮುನ್ಸೂಚನೆ ಮತ್ತು ಎಚ್ಚರಿಕೆ ನೀಡುವ ಭಾರತದ ಸಾಮರ್ಥ್ಯ  ಮತ್ತು ವಿಶ್ವಾಸರ್ಹತೆ ಗಣನೀಯವಾಗಿ ಹೆಚ್ಚಲಿವೆ. ಸೈನಿಕ ಮತ್ತು ಸ್ಟ್ರ್ಯಾಟಜಿಕ್ ಉದ್ದೇಶಕ್ಕಾಗಿ, ಅಕ್ಕಪಕ್ಕದ ದೇಶಗಳಿಗೆ ಈ ಸೌಲಭ್ಯ ನೀಡಿ ಸಂಬಂಧ ಸುಧಾರಿಸಬಹುದು, ಆರ್ಥಿಕ ಲಾಭ ಪಡೆಯಬಹುದು. ದಾರಿ ತಪ್ಪಿದ ವಾಹನ ಮತ್ತು ವಿಮಾನಗಳನ್ನು ಹುಡುಕುವಲ್ಲಿಯೂ ಸಹಕಾರಿಯಾಗಲಿದೆ.ಸರಕಾರದ ಇ-ವೇಬಿಲ್ ಮತ್ತು ಇತರೆ ಯೋಜನೆಗಳ ಗತಿವೀಕ್ಷಣೆಗೆ ಅನುಕೂಲವಾಗುವದು.

ನಮ್ಮ ಸ್ವದೇಶಿ ‘ನಾವಿಕ್(NavIC)’ ಶೀಘ್ರದಲ್ಲಿ ಕಾರ್ಯಾರಂಭ ಮಾಡಿ ನಮ್ಮ ಮೊಬೈಲ್’ಗಳಲ್ಲಿ ಸ್ವದೇಶಿ ಜಿ.ಪಿ.ಎಸ್. ಸಿಗ್ನಲ್ ದೊರಕುವಂತಾಗಲೆಂದು ಆಶಿಸೋಣ.

          

(ವಿಶ್ವವಾಣಿ ಪ್ರಕಟಿತ ಬರಹ)

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!