ಇವತ್ತು ಬಹಳಷ್ಟು ಕ್ಷೇತ್ರಕ್ಕೆ ಈ ಮಾತು ಅನ್ವಯವಾಗುತ್ತದೆ. ವಿಷಯದ ತಳ ಮುಟ್ಟುವುದು ಇಂದು ಯಾರಿಗೂ ಬೇಡದ ಕೆಲಸ. ಅಂದಿನ ದಿನ ಜೈ ಎನ್ನಿಸಿಕೊಳ್ಳಲು ಎಷ್ಟು ಬೇಕು ಅಷ್ಟು ಮಾತ್ರ ಮಾಡಿ, ಕೈ ತೊಳೆದುಕೊಂಡರೆ ಸಾಕು ಎನ್ನುವರ ಸಂಖ್ಯೆ ದೊಡ್ಡದಿದೆ. ಇಂತಹ ಸಂದರ್ಭದಲ್ಲಿ ಅಲ್ಪಸ್ವಲ್ಪ ತಿಳಿದುಕೊಂಡವರೇ ಮೇಧಾವಿ ಪಟ್ಟಕ್ಕೆ ಏರಿಬಿಡುತ್ತಾರೆ. ಆಗೆಲ್ಲಾ ಸಾಮಾನ್ಯವಾಗಿ ಅಂತಹ ವ್ಯಕ್ತಿಯ ಕುರಿತು , ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೆ ರಾಜ ಎನ್ನುವ ಮಾತನ್ನ ಬಳಸುತ್ತೇವೆ. ಅರ್ಥ- ಏನೂ ತಿಳಿವಳಿಕೆ ಇಲ್ಲದವರ ಮಧ್ಯೆ, ಅಲ್ಪವಾದರೂ ತಿಳಿದುಕೊಂಡವನು ಎಂದು ಹೇಳುವುದಾಗಿದೆ. ದಿನ ಕಳೆದಂತೆ ಈ ಅಲ್ಪ ಜ್ಞಾನಿಗಳು ಕೂಡ ಪ್ರಚಂಡ ಜ್ಞಾನಿಗಳಂತೆ ಓಡಾಡುವುದಕ್ಕೆ ಶುರು ಮಾಡಿಬಿಡುತ್ತಾರೆ. ಆಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ‘ಹಾಳೂರಿಗೆ ಉಳಿದವನೇ ಗೌಡ’ ಎನ್ನುವ ಇನ್ನೊಂದು ಮಾತನ್ನ ಕೂಡ ನಮ್ಮಲ್ಲಿ ಬಳಸುತ್ತೇವೆ.
ಇಲ್ಲಿ ಇನ್ನೊಂದು ಸೂಕ್ಷ್ಮವನ್ನ ಅರ್ಥ ಮಾಡಿಕೊಳ್ಳಬೇಕು. ನಾವೇನೋ ಈ ಆಡು ಮಾತನ್ನ ಸರಳವಾಗಿ ಹೇಳಿ ಅಷ್ಟೇ ಸಾಮಾನ್ಯ ಎನ್ನುವಂತೆ ಬಿಟ್ಟುಬಿಡುತ್ತೇವೆ. ವಿಷಯ ಜ್ಞಾನವಿಲ್ಲದ ಸಮಾಜದಲ್ಲಿನ ಜನರ ಸಂಖ್ಯೆ, ಹೀಗೆ ಏನೂ ತಿಳಿಯದವರ ಶೋಷಣೆ ಮಾಡಲು ಸದಾ ಸಿದ್ಧರಿರುವ ಅಲ್ಪಸ್ವಲ್ಪ ತಿಳಿದವರ ಸಂಖ್ಯೆ ಎರಡೂ ಬೆಚ್ಚಿ ಬೀಳಿಸುವಷ್ಟಿದೆ. ಈ ಸಂಖ್ಯೆ ಕಡಿಮೆಯಾಗದ ಹೊರತು ಸಮಾಜದ ಬದಲಾವಣೆ ಸಾಧ್ಯವೇ?
ಬಾರ್ಸಿಲೋನಾ ನಗರದಲ್ಲಿ ಆಗಲೇ ಹತ್ತು ವರ್ಷ ಕಳೆದು ಅಲ್ಲಿನ ಭಾಷೆ ಕಲಿತು, ಅಲ್ಲಿನ ಜನರೊಂದಿಗೆ ಬೆರೆತು ಅಲ್ಲಿನ ಗಾದೆಗಳ ಸಂಗ್ರಹಣೆಯಲ್ಲಿ ತೊಡಗಿದ್ದ ದಿನಗಳವು. ನಿತ್ಯವೂ ಒಂದಲ್ಲ ಒಂದು ಹೊಸತು ಕಲಿಯಲು ಸಿಗುತ್ತಿತ್ತು. ಭಾಷೆ ಎನ್ನುವುದು ಹಾಗೆಯೇ, ನನಗೆ ಪೂರ್ಣ ಗೊತ್ತು ಎಂದು ಎದೆ ಉಬ್ಬಿಸಿ ಹೇಳುವ ಹಾಗಿಲ್ಲ! ಒಂದಲ್ಲ ಒಂದು ಹೊಸ ಪದ ಕಲಿಯಲು ಸಿಗುತ್ತದೆ. ಮಾತೃಭಾಷೆಯ ವಿಷಯ ಹೊರತು ಪಡಿಸಿ ನಾವು ಕಲಿಯುವ, ಕಲಿತ ಎನ್ನುವದಕ್ಕಿಂತ ಕಲಿಯುತ್ತಲೇ ಇರುವ ಭಾಷೆಗಳ ವಿಷಯದಲ್ಲಿ ಇದು ಸತ್ಯ. ಗಾದೆಯ ವಿಷಯದಲ್ಲೂ.
ಅಂದು ಹೀಗೆ ಆಯಿತು: ನಮ್ಮ ಸಂಸ್ಥೆಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಅಂದ್ರೆಯ ಎನ್ನುವ ಹುಡುಗಿಗೆ ಬಿಯಟ್ರಿಸ್ ಎನ್ನುವ ಹುಡುಗಿ ಏನನ್ನೋ ತಿಳಿಸಿ ಹೇಳುತ್ತಿದ್ದಳು. ನನ್ನ ವಿಭಾಗದ ಉಪಮುಖ್ಯಸ್ಥೆ, ಗೆಳತಿ ಎವಾ ಅವರನ್ನ ನೋಡಿ ‘ಮಿರಾ * ರಂಗ un ciego guiando a otro ciego (ಉನ್ ಸಿಯಗೊ ಗಿಯಾಂದೋ ಆ ಒತ್ರೋ ಸಿಯಗೊ) ಎಂದಳು. ನಾನು ಏನಾಯ್ತು ಎನ್ನುವಂತೆ ಅವಳತ್ತ ನೋಡಿದೆ. ಅವಳು ಮುಂದುವರಿದು ಬಿಯಟ್ರಿಸ್ ಕೆಲಸಕ್ಕೆ ಸೇರಿ ಇನ್ನು ವಾರ ಆಗಿಲ್ಲ ಆಗಲೇ ಅವಳನ್ನ ನಿನ್ನೆ ಸೇರಿದವಳಿಗೆ ಟ್ರೈನ್ ಮಾಡು ಎನ್ನುವುದು ಎಷ್ಟು ಸಮಂಜಸ? ’ಈಸ್ ಕೊಮೊ ಉನ್ ಸಿಯಗೊ ಗಿಯಾಂದೋ ಆ ಊತ್ರೋ ಸಿಯಗೊ’ ಅಂದಳು. ಅರ್ಥ ಕಣ್ಣಿಲ್ಲದವನು/ವಳು ಇನ್ನೊಬ್ಬ ಕಣ್ಣಿಲ್ಲದವನಿಗೆ/ವಳಿಗೆ ಗೈಡ್ ಮಾಡುವಂತಿದೆ ಎನ್ನುವುದಾಗಿದೆ. ಅಂದರೆ ಈ ಸಂದರ್ಭದಲ್ಲಿ ಅಂದ್ರೆಯ ಮತ್ತು ಬಿಯಟ್ರಿಸ್ ಇಬ್ಬರೂ ಸಂಸ್ಥೆಗೆ ಹೊಸಬರು ಯಾರಿಗೂ ವಿಷಯದ ಮೇಲೆ ಹಿಡಿತವಿಲ್ಲ ಒಬ್ಬಳು ಇನ್ನೊಬ್ಬಳಿಗೆ ಏನು ತಾನೇ ಹೇಳಿಕೊಟ್ಟಾಳು?
ಇನ್ನು ಇಂಗ್ಲಿಷರು ‘The blind leading the blind’ ಎಂದರು. ಜೊತೆಗೆ ‘In the kingdom of the blind, the one-eyed man is king’ ಎನ್ನುವುದು ಕೂಡ ಬಳಸುತ್ತಾರೆ. ಇಂಗ್ಲಿಷ್ ಗಾದೆ ಮತ್ತು ನಮ್ಮ ಕನ್ನಡ ಗಾದೆ ಪೂರ್ಣ ಪ್ರಮಾಣದಲ್ಲಿ ಹೋಲುತ್ತವೆ. ಆದರೆ ಸ್ಪ್ಯಾನಿಷ್ ಗಾದೆಯಲ್ಲಿ ಒಕ್ಕಣ್ಣನ ಉಲ್ಲೇಖವಿಲ್ಲ. ಆದರೇನು ಗಾದೆಯ ಹೂರಣ ಮಾತ್ರ ಅದೇ ಅಲ್ಲವೇ?
ಇವತ್ತು ದೇಶ, ಭಾಷೆ ಗಡಿಗಳ ಮೀರಿ ಜಗತ್ತು ಎದಿರುಸುತ್ತಿರುವ ಮಹಾನ್ ಸಮಸ್ಯೆ ವಿಷಯ ಪರಿಣಿತರ ಅಥವಾ ವಿಷಯದಲ್ಲಿ ಆಸಕ್ತಿ ಇರುವರ ಕೊರತೆ. ಹೇಳಿಕೊಳ್ಳಲು ಜಗತ್ತಿನಲ್ಲಿ ೭೦೦ ಕೋಟಿಗೂ ಮೀರಿದ ಜನಸಂಖ್ಯೆಯಿದೆ. ಆದರೇನು ಕೆಲವೊಂದು ಹುದ್ದೆ ನಿರ್ವಹಿಸಲು ಜನರ ಕೊರತೆಯಿದೆ. ತತ್ಕಾಲಕ್ಕೆ ಯಾರನ್ನೋ ಆ ಜಾಗಕ್ಕೆ ತುಂಬಬಹುದು. ಆದರೆ ಅಲ್ಲಿಗೆ ಬೇಕಾದ ನಿಖರತೆ, ನೈಪುಣ್ಯತೆ ಕೊರತೆ ಇದ್ದೆ ಇರುತ್ತದೆ. ಇವತ್ತು ನಮಗೇನು ಬೇಕು ಅದಾಗಲು ಯಾರ ಅಡ್ಡಿಯೂ ಇಲ್ಲ, ಹಿಂದಿನಂತೆ ನೂರಾರು ಕಷ್ಟಗಳು ಕೂಡ ಇಲ್ಲ. ಹೀಗಿದ್ದೂ ನಾವು ಒಕ್ಕಣ್ಣ ರಾಜರಾಗಬೇಕೇ? ಹಾಗೆ ನೋಡಲು ಹೋದರೆ ಕುರುಡರ ಸಾಮ್ರಾಜ್ಯವೂ ಇರಬಾರದು .
ಸಂಸ್ಕೃತ ಶ್ಲೋಕವೊಂದು ‘ಯಾ ಸುಪ್ತೇಷು ಜಾಗ್ರತ’ ಎನ್ನುತ್ತದೆ. ಮಲಗಿದ್ದರು/ವಿಶ್ರಾಂತಿ ಪಡೆಯುತ್ತಿದ್ದರು ಜಾಗೃತನಾಗಿರು ಎನ್ನುವುದು ಸಂದೇಶ. ಇದನ್ನ ಪಾಲಿಸಿದರೆ ಕುರುಡರ ಸಾಮ್ರಾಜ್ಯ ಇರುವುದಿಲ್ಲ, ಸಾಮ್ರಾಜ್ಯವೇ ಇಲ್ಲದ ಮೇಲೆ ರಾಜನ ಮಾತೆಲ್ಲಿ?
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:
un: ಒಂದು, ಒಬ್ಬ ಎನ್ನುವ ಅರ್ಥ. ಊನ್ ಎನ್ನುವುದು ಉಚ್ಚಾರಣೆ.
ciego: ಕುರುಡ, ಕಣ್ಣು ಕಾಣದವ ಎನ್ನುವ ಅರ್ಥ. ಸಿಯಗೊ ಎನ್ನುವುದು ಉಚ್ಚಾರಣೆ .
guiando: ಗೈಡ್ ಮಾಡುವುದು, ಮಾರ್ಗದರ್ಶನ ಮಾಡುವುದು ಎನ್ನುವ ಅರ್ಥ. ಗಿಯಾಂದೋ ಎನ್ನುವುದು ಉಚ್ಚಾರಣೆ.
a otro: ಇನ್ನೊಂದು, ಇನ್ನೊಬ್ಬ ಎನ್ನುವ ಅರ್ಥ. ಆ ಒತ್ರೋ ಎನ್ನುವುದು ಉಚ್ಚಾರಣೆ.
ciego: ಕುರುಡ, ಕಣ್ಣು ಕಾಣದವ ಎನ್ನುವ ಅರ್ಥ. ಸಿಯಗೊ ಎನ್ನುವುದು ಉಚ್ಚಾರಣೆ.
*ಮಿರಾ ಎಂದರೆ: ನೋಡು, ಲುಕ್ ಎನ್ನುವ ಅರ್ಥ. ನಮ್ಮಲ್ಲಿ ಕೇಳಿಸ್ಕೊ ಇಲ್ಲಿ ಅಥವಾ ನೋಡಿಲ್ಲಿ ಅನ್ನುತ್ತೀವಲ್ಲ ಹಾಗೆ, ಮಿರಾ ರಂಗ ಎಂದರೆ ಲುಕ್ ರಂಗ ಎನ್ನುವ ಅರ್ಥ.