ತುಂಬು ಕುಟುಂಬದಲ್ಲಿ ತಾಯಿಗೆ ತನ್ನ ಮಗಳ ಮನೆಗೆ ಹೋಗಬೇಕೆಂದರೆ ಏನಾದರೂ ಕಾರಣ ಇರಬೇಕು. ಹಾಗೆಲ್ಲಾ ಸುಮ್ಮಸುಮ್ಮನೆ ಹೋಗೋದಕ್ಕೆ ಆಗೋದಿಲ್ಲ. ಪರ್ಮೀಷನ್ನು ಸಿಗೋದಿಲ್ಲ. ತಾಯಿ ಒಳೊಳಗೆ ತನ್ನ ಆಸೆ ಇರೋದನ್ನು ಅಡಗಿಸಿಕೊಂಡು. “ನನ್ನ ಮಗಳಿಗೆ ಅಮ್ಮನ ಕಾಣದೇ ಇದ್ರೆ ರಾಶಿ ಬೇಜಾರು ಬತ್ತೆ, ಒಂದು ಸರ್ತಿ ಹೋಗಿ ನೋಡ್ಕಂಡು ಬರದೆಯಾ. ಕನಸಲ್ಲೆಲ್ಲಾ ಬಂದೀಗೀದು. ಎಷ್ಟು ನೆನಪು ಮಾಡ್ಕತ್ತಾ ಇದ್ದ ಎಂತನ?” ಹೀಗೆ ಒಂದು ಪೊಗದಸ್ತಾದ ಸುಳ್ಳು ಹೇಳಿಕೊಂಡು ತನ್ನ ಮಗಳ ಮನೆಗೆ ಹೋಗೊ ಅಭ್ಯಾಸ ನನ್ನ ಅಮ್ಮನಿಗೆ ಅವರ ಜೀವಿತಾವಧಿಯಲ್ಲಿ; ತನ್ನ ಬಯಕೆ ಮುಚ್ಚಿಟ್ಟುಕೊಂಡು.
ಹೀಗೆ ನಮ್ಮ ಶ್ರೀಮತಿ ರೇಣುಕಾ ರಮಾನಂದರವರ ‘ಮೀನು ಪೇಟೆಯ ತಿರುವು’ ಕವನ ಸಂಕಲನ ಓದಿದಾಗ ಮನಸ್ಸಿಗೆ ಕಾಡಿದ್ದು, ‘ಹಚ್ಚಿಕೊಂಡ ಸಮುದ್ರ’ ಕವನ. ಕಡಲತಡಿಯಲ್ಲೇ ಮನೆ ಮಾಡಿದವರು, ಕಡಲಿಗೆ ಆಗಾಗ ಹೋಗದೇ ಬಿಡುವುದುಂಟೆ! ಮನಸ್ಸು ಕಳೆದು ಹೋಗುವಷ್ಟು ಸುಖವಿದೆ ಅಲ್ಲಿ. ಆದರೆ ಕವಯಿತ್ರಿ ತನಗೇನಿಲ್ಲಪ್ಪಾ, “ನಾಳೆ ಮತ್ತೆ ಬರ್ತೀನಿ ಅಂದರೂ ತಬ್ಬಿಕೊಂಡು ಗೋಗರೆಯುತ್ತದೆ ಸಮುದ್ರ” ಅಂತ ತಮ್ಮಾಸೆಯನ್ನು ಅಡಗಿಸಿಟ್ಟುಕೊಂಡು ಕವನ ರಚಿಸಿದ ಪರಿ ಅಮೋಘ. ಓದಿ ನಗು ಬರೋದು ಗ್ಯಾರಂಟಿ.
‘ಭತ್ತ ಬೆಳೆಯುವುದೆಂದರೆ…’ ಈ ಕವನವಂತೂ ಅದೆಷ್ಟು ಸಾರಿ ಓದಿದರೂ ಮತ್ತೆಮತ್ತೆ ಓದಿ ಮೆಲುಕು ಹಾಕುವಂತಾಗುತ್ತದೆ. ಚಿಕ್ಕಮಗುವಿಗೆ ತಮ್ಮ ಬುದ್ಧಿ ಶಕ್ತಿಯನ್ನೆಲ್ಲ ಪ್ರಯೋಗಿಸಿ ತಾಯಿ ವಾಸ್ತವದ ಅರಿವಾಗಿಸುವ ಶೈಲಿ ಚಿಕ್ಕವಳಿರುವಾಗ ನನ್ನ ಮಗಳು “ಅಮ್ಮಾ ಬಾಳೆಹಣ್ಣು ಯಾವ ಪ್ಯಾಕ್ಟ್ರರಿಯಲ್ಲಿ ಮಾಡ್ತಾರಮ್ಮಾ? ನಾ ನೋಡಬೇಕು” ಅಂದಿದ್ದು ನೆನಪಾಗಿ ನಗುಬಂತು. ಮಕ್ಕಳೆಂದರೆ ಹಾಗೆ ಅರಿಯುವ ಕುತೂಹಲ. ಅರಿತಾದ ಮೇಲೆ ತಾವೂ ಮಾಡಬೇಕೆನ್ನುವ ಆಸಕ್ತಿ. ಪದಗಳನ್ನು ಅದೆಷ್ಟು ಚಂದ ಹೆಣೆದಿದ್ದಾರೆ.
ಅವರ ಕವನಗಳನ್ನು ಓದುತ್ತಿದ್ದರೆ ಮಾತಾಡುತ್ತಲೇ ಕವನ ರಚಿಸಿಬಿಡುತ್ತಾರಾ ಇವರು? ಅನ್ನುವಂತಾಗುತ್ತದೆ. ಅಷ್ಟು ಆಪ್ತವಾದ ಉತ್ತರಕನ್ನಡದ ಆಡು ಭಾಷೆಯ ಪದಗಳು ಹಾಸು ಹೊಕ್ಕಾಗಿವೆ. ವಾಸ್ತವದಲ್ಲಿ ಅನುಭವಿಸಿದ ಅನುಭವಗಳನ್ನು ಹೆಚ್ಚಿನ ಕವನಗಳಲ್ಲಿ ಕಾಣಬಹುದು. ಕಲ್ಪನೆಗಿಂತಲೂ ಅನುಭವದ ಬರಹ ಓದುಗರ ಹೃದಯ ತಟ್ಟಬಲ್ಲದು ಎಂಬುದು ಸುಳ್ಳಲ್ಲ ಎಂಬ ಮನವರಿಕೆ ಇವರ ಕವನಗಳನ್ನು ಓದಿದಾಗ ಅನಿಸದೇ ಇರದು.
47 ಕವನಗಳನ್ನು ಒಳಗೊಂಡ ಇವರ ಕವನ ಸಂಕಲನದಲ್ಲಿ ನನ್ನನ್ನು ಕಾಡಿದ ಇನ್ನೊಂದು ಕವನ ‘ಸುತ್ತು’. ಇದರಲ್ಲಿ ಹಲವು ಕಾರಣಗಳಿಂದ ಎತ್ತಿಟ್ಟ ಕಾಲುಂಗುರ ಮಹಿಳೆಯರಿಂದ ಕೇಳಬೇಕಾದ ಮಾತು, ಕುತೂಹಲ, ಅವರಿಗೆ ಅರಿವಾಗಿಸಲು ಸೆಟಕೊಂಡ ರೀತಿ ಕೊನೆಗೆ ತಮ್ಮವರಾರೂ ಏನೂ ಅಂದೇ ಇಲ್ಲ, ಹೊರಗಿನವರಿಗೇ ಹೆಚ್ಚು ಆಸಕ್ತಿ ಎಂಬುದನ್ನು ಬದುಕಿನ ದಿನಚರಿಯಲ್ಲಿ ನಡೆಯುವ ಅನೇಕ ಸೂಕ್ಷ್ಮತೆ, ನಮ್ಮತನ ಬಿಟ್ಟು ಪರರಿಗಾಗಿ ಬದುಕಬೇಕಾದ ಅನಿವಾರ್ಯತೆ, ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಗಾದೆ ಎಲ್ಲವೂ ಅರಿವಿಗೆ ಬರುವಂತೆ ಮಾಡುತ್ತದೆ. ಈ ಕವನ ನಾನೂ ಒಂದು ಕವನ ಬರೆಯಲು ಕಾರಣವಾಯಿತು, ಆದರೆ ಪೂರ್ತಿ ಮಾಡಲು ಸೋತೆ; ಕಾರಣ ಅವರ ಕವನದ ಗುಂಗು ನನ್ನ ಇನ್ನೂ ಕಾಡುತ್ತಿದೆ. ಅವರೇ ಹೇಳಿದಂತೆ ಇನ್ನೊಂದು ಚುಟುಕು:
“ಆಗಾಗ
ಮುಟ್ಟಿ ಮುದ್ದಿಸಿ
ನವಿರಾಗಿ ಎದೆಗೊತ್ತಿಕೊಳ್ಳುವ
ಸುಃಖ ಬೇಕೆನಿಸಿದರೆ
ಮುಗಿಸಬೇಡಿ
ಅರ್ಧ ಬರೆದಿಟ್ಟ ಪ್ರೇಮ ಕವಿತೆಗಳನ್ನು”
ನಿಜ, ಯಾವುದೇ ಕವನ ಬರೆಯಲಿ ಅದು ಪೂರ್ತಿ ಆದರೆ ಅದರ ಕಡೆ ಗಮನ ಕೊಡುವುದು ಯಾವಾಗಲೋ ಒಮ್ಮೆ. ಅದೇ ಅಪೂರ್ವವಾದ ಕವನಗಳು ನಮ್ಮನ್ನು ಹೆಚ್ಚು ಕಾಡಿ, ಬೇಡಿ, ಕೊಸರಾಡುತ್ತಲೇ ಇರುತ್ತವೆ. ಪೂರ್ತಿಗೊಳಿಸಿದಾಗ ಸಿಗುವ ಆನಂದವೇ ಬೇರೆ. ಆ ಕವನದ ನೆನಪು ಶಾಶ್ವತ. ಇದು ನನ್ನ ಅನುಭವಕ್ಕೆ ಬಂದ ಅರಿವು ಈ ಚುಟುಕು ಓದಿದಾಗ “ಹೌದಲ್ಲಾ” ಅಂತ ಉದ್ಗರಿಸಿದೆ.
ಒಳ ಪುಟದಲ್ಲಿ ನೆನಪಿಸಿಕೊಂಡ ಅಣ್ಣ, ಅಪ್ಪ. ಛೆ! ಅಮ್ಮನ ಹೆಸರೇ ಇಲ್ಲ ಬರೀ ಚಿತ್ರ ಅಂತ ಅನಿಸಿತು ಒಮ್ಮೆ ಕವನ ಪುಸ್ತಕ ತೆರೆದಾಗ. ಆದರೆ ಒಳಗಡೆ ‘ಅವ್ವ ಮತ್ತು ಬೆಕ್ಕು’ ಇವಳು ನನ್ನವ್ವ, ಮಗುವಿಂತಹ ಅಪ್ಪ’ ಈ ಕವನಗಳಲ್ಲಿ ಅವ್ವನ ವರ್ಣಿಸಿದ ಬಗೆ ಬಹಳ ಚಂದ. ‘ಭತ್ತ ಕುಟ್ಟಿ ಜಡ್ಡುಗಟ್ಟಿದ ಅವ್ವನ ಕೈ ಒಲೆಯ ಮೇಲಿನ ಬಿಸಿ ತಪ್ಪಲೆ ಬರಿಗೈಯಲ್ಲಿ ಇಳಿಸಲಿಕ್ಕೆ’ ಅಬ್ಬಾ! ಎಂತಹ ಸಾಲುಗಳು! ವಾಸ್ತವಕ್ಕೆ ಹಿಡಿದ ಕನ್ನಡಿ.
ಕವಿತೆಯೊಂದಿಗೆ ಮಾತು, ಹಳೆಗೆಳೆಯನ ಚುಡಾಯಿಸುವಂತೆ ಬರೆದ ಸಾಲುಗಳು, ಪೇಪರ್ ಮಾರುವ ಹುಡುಗನ ಬಗ್ಗೆ ಇರುವ ಕಳಕಳಿ, ಗಿಡಮರಗಳನ್ನು ಹೆಣ್ಣಿಗೆ ಹೋಲಿಸಿ ಅಳಲನ್ನು ವ್ಯಕ್ತ ಪಡಿಸಿದ ರೀತಿ, ಮೀನು ಪೇಟೆಯ ತಿರುವು, ಹಾಲಕ್ಕಿ ಹಾಡು ಹೀಗೆ ಹೆಚ್ಚಿನ ಎಲ್ಲ ಕವನಗಳೂ ಮತ್ತೆ ಮತ್ತೆ ಓದಬೇಕೆನಿಸುವುದಂತೂ ಸುಳ್ಳಲ್ಲ.
ಮೊದಲ ಬಾರಿ ‘ಅವಧಿ’ಯಲ್ಲಿ ಅವರ ಕವನ ‘ಹೇಗಿದ್ದಿ ಎಂದೆ…’ ಓದಿದಾಗ ಅವಕ್ಕಾದೆ. ನೇರವಾಗಿ ಮಾತಾಡಿದಂತೆ ಪದಗಳ ಜೋಡಿಸಿದ ರೀತಿ ಓದುತ್ತ ಹೋದಂತೆ ತುಂಬಾ ಖುಷಿಯಿಂದ ನಗು ಬಂತು. ಅಂದಿನಿಂದ ರೇಣುಕಾರ ಕವಿತೆಯ ಅಭಿಮಾನಿ ನಾನಾದೆ. ಕವನ ಬರೆಯುವಾಗೆಲ್ಲ ಅವರ ಕವಿತೆಗಳನ್ನು ನೆನಪಿಸಿಕೊಳ್ಳುತ್ತೇನೆ. ಆದರೆ ಅವರಂತೆ ಕವನ ಬರೆಯಲು ಅವರೇ ಸೈ. ಅವರ ಕವನ ಪುಸ್ತಕದಲ್ಲಿ ಅವರ ಅಭಿಮಾನಿಯಾಗಿ ನನ್ನ ಹೆಸರು! ನಿಜಕ್ಕೂ ಆಶ್ಚರ್ಯ, ಪುಸ್ತಕ ಅವರ ಮುದ್ದಾದ ಅಕ್ಷರದಲ್ಲಿ “ಮುದ್ದು ಗೀತಕ್ಕನಿಗೆ ಪ್ರೀತಿಯಿಂದ” ನನ್ನ ಕೈ ಸೇರಿದಾಗ. ತಕ್ಷಣ ನನಗನಿಸಿದ್ದು ಹೀಗೆ ಅದರಲ್ಲಿ ಅವರ ಫೋಟೋ ಕಂಡಾಗ. ಬರೆದು Fbಯಲ್ಲಿ ಪೋಸ್ಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದೆ.
“ಅಚ್ಚ ಬಿಳಿಯ
ಹಾಲು ಗಲ್ಲದ ಹಸುಳೆ ನೀನು
ಗುಂಗುರು ಹೆರಳ ಹಿಂದಕ್ಕಟ್ಟಿ
ನಗೆ ಮೊಗದ ಅಂಗನೆ
ಚಿತ್ತಾರ ಬಿಡಿಸಿದೆಯಿಂದು
ನನ್ನ ಕಣ್ಣಗಲದ ತುಂಬ
ನಿನ್ನದೆ ಮಾತು
ಮೌನದ ಕವನದ ಗುಂಗು
ಜಡಿ ಮಳೆಯ ಅಬ್ಬರದಲ್ಲೂ
ತಂಪಾದ ಗಾಳಿ
ಮೈ ಮನ ಪುಳಕಿಸುವಂತಹ
ಸೋಂಪಾದ ಕವನಗಳ ನಾಟ್ಯ
ಆಹಾ! ಏನೆಂದು ಹೇಗೆ ಬಣ್ಣಿಸಲಿ
ಇರು ಕೊಂಚ ಸವುಡು ಮಾಡಿಕೊಂಡೋದಿ
ಬರೆಯುವೆ ತಲ್ಲಣಿಸದಿರು ತಾಳು ” ರೇಣೂ”
ಪುಸ್ತಕ ಕೈ ಸೇರಿ ಮೂರು ತಿಂಗಳಾದರೂ ಇನ್ನೂ ಟೇಬಲ್ ಬಿಟ್ಟು ಕದಲಲಿಲ್ಲ. ಆಗಾಗ ಓದುತ್ತ ಅವರ ಸಾಲುಗಳು ಮುದ ನೀಡುತ್ತವೆ.
“ಬದುಕಲು ಇನ್ನೇನು ಬೇಕು
ಅಪರೂಪಕ್ಕೆ ಬರೆದ
ಕವಿತೆಯೊಂದು
ವಿಳಾಸವೇ ಗೊತ್ತಿಲ್ಲದ
ಯಾವುದೋ ಹೃದಯದ
ಕರೆಗಂಟೆ ಒತ್ತಿದರೆ
ಅಷ್ಟೇ ಸಾಕು”
ಎಷ್ಟು ನಿಜ ಅಲ್ವಾ? ಸಾಮಾನ್ಯವಾಗಿ ಎಲ್ಲ ಬರಹಗಾರರು ಬಯಸುವುದೂ ಇದನ್ನೇ. ಆ ಸಾಲಿನಲ್ಲಿ ನಾನೂ ಒಬ್ಬಳಾಗಿರೋದು ಅವರಿಗಿನ್ನೂ ಗೊತ್ತು ಮಾಡಿಲ್ಲ. ಅದಕ್ಕೆ ಇಲ್ಲಿ ಒಂದೆರಡು ಮಾತು ಬರೆಯುವ ಪ್ರಯತ್ನ ಮಾಡಿದ್ದೇನೆ.
ಅತ್ಯುತ್ತಮವಾದ ಕವನಗಳನ್ನು ಒಳಗೊಂಡ ಈ ಕವನ ಸಂಕಲನ ಎಲ್ಲರೂ ಓದಲೇಬೇಕಾದ ಪುಸ್ತಕ. ಅವರ ಕವನಗಳನ್ನು ಓದಿ ಅವರ ಬಗ್ಗೆ ಅಭಿಮಾನ, ಪ್ರೀತಿ, ವಾತ್ಸಲ್ಯದಿಂದ ನಮ್ಮ ಕರಾವಳಿಯ ಹೆಣ್ಣು ಮಗಳೆಂಬ ಅಭಿಮಾನ ನನಗೆ. ’ತುಸು ತಿಂದರೂ ಕಸ ತಿನ್ನಬೇಡ’ ಎಂಬ ನಾಣ್ಣುಡಿಯಂತೆ ಅಪರೂಪದ ಕವನ ಕಟ್ಟಿ ಅನೇಕ ಬಹುಮಾನ, ಪುರಸ್ಕಾರ ಮುಡಿಗೇರಿಸಿಕೊಂಡ ಕವನ ಸಂಕಲನ “ಮೀನು ಪೇಟೆಯ ತಿರುವು” ಇನ್ನಷ್ಟು ಬಹುಮಾನ ಗೆಲ್ಲಲಿ, ಅವರಿಂದ ಇನ್ನಷ್ಟು ಕವನ ಸಂಕಲನ ಹೊರ ಬರಲಿ ಎಂಬುದು ನನ್ನ ಆಶಯ.
- Geetha G Hegade