Featured ಅಂಕಣ

ಕೊಳವೆಬಾವಿಗಳಿಗೆ ಪುನರ್ಜನ್ಮ ನೀಡುತ್ತಿರುವ – ರೆಬೆಲ್ಲೊ

ನೀರು ನಮ್ಮ ಮೂಲಭೂತ ಅಗತ್ಯ. ಇದು ಪ್ರಕೃತಿಯಿಂದ ಉಚಿತವಾಗಿ ಸಿಗುವ ಸಂಪನ್ಮೂಲ. ಆದರೆ ನೀರನ್ನು ಉಳಿಸುವ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀರಾ? ಇತ್ತೀಚಿನ ದಿನಗಳಲ್ಲಂತೂ ಮಾರ್ಚ್-ಏಪ್ರಿಲ್ ಬಂದರೆ ಸಾಕು ಕುಡಿಯಲು ನೀರಿಲ್ಲ ಎಂಬ ಕೂಗು. “ಕೆರೆಯ ನೀರನು ಕೆರೆಗೆ ಚೆಲ್ಲಿ” ಎಂಬಂತೆ ಮಳೆ ನೀರನ್ನು ಪುನಃ ಭೂಮಿಗೆ ಇಂಗಿಸಿದರೆ ಹೇಗೆ? ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಇಂತಹ ಒಂದು ಯೋಚನೆ ಜೋಸೆಫ್ ರೆಬೆಲ್ಲೊ ಅವರಿಗೆ ಬಂದು, ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರೆಬೆಲ್ಲೋ ಉಡುಪಿ ಜಿಲ್ಲೆಯ ಕಲ್ಯಾಣಪುರದವರು. ಇವರಿಗೆ ಓದುವುದರಲ್ಲಿ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ ಪೋಷಕರ ಒತ್ತಾಯಕ್ಕೆ ಮಣಿದು ಡಿಪ್ಲೋಮಾ ಮುಗಿಸಿದರು. ಆದರೂ ಆತ್ಮತೃಪ್ತಿ ಕಾಣಲಿಲ್ಲ. ಅದೇ ಸಮಯದಲ್ಲಿ ಉಡುಪಿ ತಾಲೂಕು ಪಂಚಾಯತ್ ವತಿಯಿಂದ ಗ್ರಾಮೀಣ ಅಭಿವೃದ್ಧಿ ಎಂಬ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಕೃತಿಯ ಬಗ್ಗೆ, ನೀರಿನ ಬಗ್ಗೆ ಮತ್ತು ಇವುಗಳನ್ನು ಉಳಿಸುವುದರ ಬಗ್ಗೆ ಹಲವಾರು ಮಾಹಿತಿ ಕೊಟ್ಟರು. ಆಗ ಇವರಿಗೆ ಅನಿಸಿತು, ಯಾಕೆ ಎಲ್ಲರೂ ಭಾಷಣವನ್ನಷ್ಟೇ ಮಾಡುತ್ತಾರೆ? ಯಾರೂ ಪ್ರಾಯೋಗಿಕವಾಗಿ ಏನೂ ಮಾಡುವುದಿಲ್ಲ? ಎಂದು. ಪ್ರತಿ ವರ್ಷವೂ ವನಮಹೋತ್ಸವವನ್ನು ಆಚರಿಸುತ್ತಾರೆ ಮತ್ತು ಫೋಟೋಗೆ ಪೋಸ್ ನೀಡಲು ಒಂದು ಗಿಡವನ್ನು ನೆಡುತ್ತಾರೆ. ಆದರೆ ಇವರು ಸ್ವತಃ ಪ್ರತಿ ವರ್ಷವೂ ೧೦೦ ಗಿಡಗಳನ್ನು ನೆಡುತ್ತಾರೆ. ಹೀಗೆ ನೆಟ್ಟ ಗಿಡಗಳೆಷ್ಟೋ?

ಇನ್ನು ಮಳೆಗಾಲ ಮುಗಿಯಿತೆಂದರೆ ನೀರಿಲ್ಲ ಎನ್ನುವ ಕೂಗು. ಮೊದಲೆಲ್ಲಾ‌ ಬಾವಿ ತೋಡುತ್ತಿದ್ದರು. ಏಪ್ರಿಲ್ ಮೇನಲ್ಲಿ ನೀರು ಖಾಲಿಯಾದರೂ ಮಳೆಗಾಲದಲ್ಲಿ ನೀರು ತುಂಬುತ್ತಿತ್ತು. ಈಗೆಲ್ಲಾ ಕೊಳವೆ ಬಾವಿಗಳ ಭರಾಟೆ. ಎಷ್ಟು ಪಾತಾಳ ಕೊರೆದರೂ ನೀರಿಲ್ಲ ಎಂಬ ಒದ್ದಾಟ. ಅಂತರ್ಜಲ ಮಟ್ಟ ಕುಸಿದಿದೆ ಎನ್ನುವುದು ತಜ್ಞರ ಅಭಿಪ್ರಾಯ. ಅಂತರ್ಜಲ ಮಟ್ಟ ಹೆಚ್ಚಿಸುವ ಬಗೆ ಹೇಗೆ? ಸರ್ಕಾರವೇನೋ ಇಂಗುಗುಂಡಿಗಳ ರಚನೆಯ ಮಾಹಿತಿಯನ್ನು ಒದಗಿಸುತ್ತದೆ, ಆದರೆ ಮಾಡುವವರಾರು? ಇವರು ನಿಂತು ನಿರ್ಮಿಸಿದ ಇಂಗುಗುಂಡಿಗಳು ೧೦೦೦ ತಲುಪಿದೆ.

ಕೊಳವೆ ಬಾವಿಯ ನೀರಿನ ಮಟ್ಟವನ್ನು ಹೆಚ್ಚಿಸುವ ಜಲಮರುಪೂರಣದ ವಿವರ ಅವರ ಮಾತು ನನ್ನ ಪದಗಳಲ್ಲಿ: 

ಕೊಳವೆ ಬಾವಿಯ ಸುತ್ತ ೧೦ ಅಡಿ ಉದ್ದ ಮತ್ತು ಅಗಲವಾಗಿ ಅಗೆಯಬೇಕು. ಕೊಳವೆ ಬಾವಿಯ ಪೈಪಿಗೆ ೫mm ರಂಧ್ರ ಮಾಡಬೇಕು.   ಇದರ ಉದ್ದೇಶ ಭೂಮಿಯ ನೀರು ಕೊಳವೆ ಬಾವಿಯ ಒಳಗೆ ಇಳಿಯಲು. ಆದರೆ ಈ ರಂಧ್ರದ ಮೂಲಕ ಕಸ ಕಡ್ಡಿಗಳು ಹೋದರೆ? ಟ್ರಾಫಿಕ್ ಜಾಮ್ ಆಗುತ್ತದೆ ಅಲ್ವಾ? ಅದಕ್ಕೆ ಆ ರಂಧ್ರದ ಸುತ್ತಲೂ ೩ ತರಹದ ಬಲೆಯನ್ನು ಸುತ್ತಬೇಕು. ಇದು ಫಿಲ್ಟರ್ ಆಗಿ ಕೆಲಸ ಮಾಡುತ್ತದೆ. ಇದರಿಂದ ಕೇವಲ ಭೂಮಿಯ ಶುದ್ಧ ನೀರು ಮಾತ್ರ ಕೊಳವೆ ಬಾವಿಯ ಒಳಗೆ ಸೇರುತ್ತದೆ. ಈ ಮೆಶನ್ನು ಬದಲಾಯಿಸಲು ಅದಕ್ಕೊಂದು ರಿಂಗ್ ಹಾಕಬೇಕು. ಮೆಶಲ್ಲಿ  ಕಸ ಕಡ್ಡಿಗಳು ಸಿಕ್ಕಿ ಹಾಕಿಕೊಂಡರೆ, ಅದನ್ನು ತೆಗೆದು ಮೆಶನ್ನು ಬದಲಾಯಿಸಬಹುದು. ಇನ್ನು  ೧೦ ಅಡಿ ಆಳದ ಹೊಂಡವನ್ನು ಮುಚ್ಚುವ ಬಗೆ ಹೇಗೆ? ಮಣ್ಣನ್ನು ತುಂಬಿ ಮುಚ್ಚಿದ್ರೆ ಆಯ್ತು ಅಂತ ಅಂದ್ಕೊಳ್ಬೇಡಿ, ಹಾಗಲ್ಲ. ಈ ಹೊಂಡವನ್ನು ಮುಚ್ಚಲು ಕಲ್ಲು, ಜೆಲ್ಲಿ ಮತ್ತು ಹೊಯಿಗೆ ಸಮ ಪ್ರಮಾಣದಲ್ಲಿ ಹಾಕಿ ಮುಚ್ಚಬೇಕು. ಮನೆಯ ಮಾಡಿಯ ನೀರನ್ನು ಪೈಪ್ ಮೂಲಕ ತಂದು ಈ ೧೦ ಅಡಿಯ ( ಕಲ್ಲು, ಜೆಲ್ಲಿ, ಹೊಯಿಗೆಯಿಂದ ಮುಚ್ಚಿದ) ಹೊಂಡದ ಮೇಲೆ ಬಿಡಬೇಕು. ಇದರಿಂದಾಗಿ ಮಳೆನೀರು ವ್ಯರ್ಥವಾಗಿ ಹರಿದು ಸಮುದ್ರವನ್ನು ಸೇರುವುದು ತಪ್ಪುತ್ತದೆ.

ಇವರಿಂದ ಬರೋಬ್ಬರಿ ೧೫೦ಕ್ಕೂ ಮೇಲೆ ಬರಿದಾದ ಬೋರ್ ವೆಲ್ ಗಳು ಮತ್ತು ಸಾವಿರಾರು ಬಾವಿಗಳು ಜಲ ಮರುಪೂರಣದಿಂದ ಪುನರ್ಜೀವ ಪಡೆದಿವೆ. ಇವರು ಕೇವಲ ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಕಾರವಾರ, ಬೀದರ್, ಶಿವಮೊಗ್ಗ, ಹಾಸನ, ಕೋಲಾರ, ಗುಲ್ಬರ್ಗ, ಮೈಸೂರು ಹೀಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಬಾವಿಗಳು ಮತ್ತು ಕೊಳವೆಬಾವಿಗಳು ಇಂದು ತುಂಬಿಕೊಂಡಿವೆ. ಯಾಕೆ ನೀವೊಮ್ಮೆ ಇದರ ಪ್ರಯೋಜನ ಪಡೆಯಬಾರದು?

ಇವರು ಸರಕಾರದಿಂದ ೨೦೧೪ರಲ್ಲಿ ಅತ್ಯುತ್ತಮ ಭಾರತ್ ನಿರ್ಮಾಣ್ ವೈಯುಕ್ತಿಕ ಪ್ರಶಸ್ತಿ ಮತ್ತು ೨೦೧೭ರಲ್ಲಿ “ರತ್ನಶ್ರೀ” ಪ್ರಶಸ್ತಿ ಪಡೆದವರು. ಇವರು ಜಲ ಸಂರಕ್ಷಣೆ ಮತ್ತು ಜಲಮರುಪೂರಣದ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಇದಲ್ಲದೆ ಸ್ವತಃ ತಾವೇ ನಿಂತು ಕೊಳವೆ ಮತ್ತು ಬಾವಿಯ ಜಲಮರುಪೂರಣ ಕಾರ್ಯವನ್ನು ನಿರ್ವಹಿಸುತ್ತಾರೆ. ಕಳೆದ ವರ್ಷ ೨೫೦ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವರಿಗೆ ೫೦ಕ್ಕೂ ಮಿಕ್ಕಿ ಸನ್ಮಾನಗಳು ಹುಡುಕಿಕೊಂಡು ಬಂದಿವೆ. ಇವರನ್ನು ನವಯುಗದ ಭಾಗೀರಥ ಎಂದು ಕರೆದರೆ ತಪ್ಪಾಗಲಾರದು. ಹಾಗಾದರೆ ಜಲಮರುಪೂರಣ ಇವರ ಉದ್ಯೋಗವೇ? ಖಂಡಿತಾ ಅಲ್ಲ. ಇವರು ಬಂಟಕಲ್ ಕಾಲೇಜಿನ  ಬಸ್ ಡ್ರೈವರ್ ಆಗಿ ದುಡಿಯುತ್ತಿದ್ದಾರೆ.

ಇವರನ್ನು ಸಂಪರ್ಕಿಸಲು ಫೇಸ್‌ಬುಕ್‌ ನಲ್ಲಿ “ಜೋಸೆಫ್ ಜಿ ಎಮ್ ರೆಬೆಲ್ಲೊ” ಎಂದು ಹುಡುಕಿದರೆ ಸಿಗುತ್ತಾರೆ. ಫೋನ್ ನಂಬರ್: 9964100520

 

  • ರಕ್ಷಿತ ಪ್ರಭು ಪಾಂಬೂರು, ಉಡುಪಿ

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!