ಅಂಕಣ

`ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ’ – ಜಿಡ್ಡು ಕೃಷ್ಣಮೂರ್ತಿ


`ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ’

(ಸಂಕಟದ ಸಮಯದಲ್ಲಿ ಬದುಕು ನಮಗೆ ಕಲಿಸುವ ಪಾಠಗಳು)

ಮೂಲ: ಜಿಡ್ಡು ಕೃಷ್ಣಮೂರ್ತಿ, ಸಂಪಾದಕರು: ಡೇವಿಡ್ ಸ್ಕಿಟ್

ಕನ್ನಡಕ್ಕೆ: ಮಹಾಬಲೇಶ್ವರ ರಾವ್

ಮುದ್ರಣವರ್ಷ: 2016, ಪುಟಗಳು: 196, ಬೆಲೆ ರೂ.150-00


ಜೆ.ಕೆ. ಎಂದೇ ಖ್ಯಾತರಾದ ಜಿಡ್ಡು ಕೃಷ್ಣಮೂರ್ತಿ (1895-1986) ಕಳೆದ ಶತಮಾನದಲ್ಲಿ ಆಗಿಹೋದ ಪ್ರಸಿದ್ಧ ತತ್ತ್ವಜ್ಞಾನಿ ಮತ್ತು ಚಿಂತಕರು. ಜನ್ಮತಃ ಭಾರತೀಯರಾಗಿದ್ದ ಜಿಡ್ಡು, ಕಾಲ ಮತ್ತು ಭೌಗೋಳಿಕ ಮೇರೆಗಳನ್ನು ಮೀರುವ ತಮ್ಮ ಚಿಂತನೆಗಳಿಂದ ವಿಶ್ವಮಾನವರೆನ್ನಿಸಿಕೊಂಡರು. ಐದು ದಶಕಗಳಿಗಿಂತ ಹೆಚ್ಚು ಕಾಲ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತ, ತಮ್ಮ ಚಿಂತನೆ ಮತ್ತು ಬೋಧನೆಗಳನ್ನು ಮಾತುಕತೆಗಳ ಮೂಲಕ ಜನರೊಡನೆ ಹಂಚಿಕೊಳ್ಳುತ್ತ ಬಂದ ಜೆ.ಕೆ, ‘ನಾನು ಗುರುವಲ್ಲ’ ಎನ್ನುತ್ತ ಜನರನ್ನು ಯಾವುದೇ ‘ಇಸಂ’ಗಳಿಗೆ ಬಂಧಿತರಾಗದಂತೆ ಎಚ್ಚರಿಸಿದ ವಿಲಕ್ಞಣ ತತ್ತ್ವಜ್ಞಾನಿ. ಆದರೆ 1986ರಲ್ಲಿ ಇವರು ಕ್ಯಾಲಿಫೋರ್ನಿಯಾದಲ್ಲಿ ತೀರಿಕೊಂಡಾಗ ಇವರನ್ನು ಜನ ಬಣ್ಣಿಸಿದ್ದು ಮಾತ್ರ ವಿಶ್ವಗುರು ಎಂದೇ.

ಜಿಡ್ಡು ಕೃಷ್ಣಮೂರ್ತಿಯವರು ಜನಿಸಿದ್ದು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ. ಇವರಿಗೆ ಯಾವುದೇ ಸಾಂಪ್ರದಾಯಿಕ ಶಿಕ್ಷಣ ಇರಲಿಲ್ಲ. ಮದ್ರಾಸಿನ ಥಿಯಸಾಫಿಕಲ್ ಸೊಸೈಟಿಯ ಆ್ಯನಿ ಬೆಸೆಂಟ್ ಬಾಲಕನಾಗಿದ್ದ ಕೃಷ್ಣಮೂರ್ತಿಯವರ ಪ್ರತಿಭೆಯನ್ನು ಗುರುತಿಸಿದ್ದು ಇವರ ಜೀವನದಲ್ಲಿ `ಮಹಾ ತಿರುವು’ ಎನ್ನಿಸಿಕೊಂಡಿತು. ಬಾಲಕ ಕೃಷ್ಣಮೂರ್ತಿಯನ್ನು ‘ವಿಶ್ವಗುರು’ವನ್ನಾಗಿ ರೂಪಿಸಬೇಕೆನ್ನುವ ಆ್ಯನಿ ಬೆಸೆಂಟ್‍ರ ಪ್ರಯತ್ನಕ್ಕೆ ಥಿಯಸಾಫಿಕಲ್ ಸೊಸೈಟಿಯ ಲೆಡ್‍ಬೀಟರ್ ಅವರ ಸಂಪೂರ್ಣ ಬೆಂಬಲವಿತ್ತು. ಆದರೆ ಥಿಯಾಸಾಫಿಕಲ್ ಸೊಸೈಟಿಯ ತರಬೇತಿ ಮತ್ತು ಶಿಕ್ಷಣದ ಆಶಯಕ್ಕಿಂತ ಜಿಡ್ಡು ವಿಧಿ ಬೇರೆಯದೇ ದಿಕ್ಕಿನಲ್ಲಿ ನಿಶ್ಚಿತವಾಗಿತ್ತೆಂದು ತೋರುತ್ತದೆ. ಜಿಡ್ಡು ಅಲ್ಲಿಂದ ನಿರ್ಗಮಿಸುವಾಗ ಅದರ ಅಂಗಸಂಸ್ಥೆ `ಆರ್ಡರ್ ಆಫ್ ದ ಸ್ಟಾರ್ ಇನ್ ದ ಈಸ್ಟ್’ನ ಮುಖ್ಯಸ್ಥರಾಗಿದ್ದರು. ಅನಂತರ ನಡೆದದ್ದು ಇಂದಿನ ಹಿರಿಯ ತಲೆಮಾರಿನ ಜನರಿಗೆ ತಿಳಿದದ್ದೇ. ವೈಚಾರಿಕತೆ ಮತ್ತು ಬೌದ್ಧಿಕ ಬದುಕಿನ ಉತ್ತುಂಗಕ್ಕೇರಿದ ಜಿಡ್ಡು ಜಿಜ್ಞಾಸುಗಳಿಗೆ ಮಾರ್ಗದರ್ಶಿಯಾದರು, ಬೌದ್ಧಿಕ ಸ್ವಾತಂತ್ರ್ಯವನ್ನು ಪ್ರೀತಿಸುವವರ ಪರಮಗುರುವಾದರು.

ಸ್ವತಃ ಜೆ.ಕೆ. ಅಂತಹ ಗುರುಪೀಠವನ್ನು ತಿರಸ್ಕರಿಸುತ್ತಾರೆ. “ನಾನು ಗುರುವಲ್ಲ; ನನ್ನ ಅನುಯಾಯಿಗಳಾಗಬೇಡಿ. ನನ್ನ ಆಲೋಚನೆಗಳ ಬೆಳಕಿನಲ್ಲಿ ನಿಮ್ಮದೇ ಆಲೋಚನೆಗಳನ್ನು ರೂಪಿಸಿಕೊಳ್ಳಿ; ನಿಮ್ಮದೇ ಮಾರ್ಗ ಹಿಡಿಯಿರಿ” ಎನ್ನುತ್ತಾರೆ. ಜೆ.ಕೆ. ಧಾರ್ಮಿಕವಾಗಿ, ವೈಚಾರಿಕವಾಗಿ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಾವು ಯಾವೊಬ್ಬನಿಗೂ ಅಡಿಯಾಳಾಗಬಾರದು ಎನ್ನುವ ಜೆ.ಕೆ., ತಮ್ಮ ಜೀವಮಾನದ ಉದ್ದಕ್ಕೂ ‘ನಿಮ್ಮ ಅಂತರಂಗದಲ್ಲಿ ನಿಮ್ಮನ್ನು ಅರಿಯುವ ಸರ್ವ ಸಂಪತ್ತು ಹುದುಗಿದೆ’ ಎಂದು ಎಚ್ಚರಿಸುವ ಮಾತನಾಡುತ್ತ ಬಂದಿದ್ದಾರೆ. ‘ಮನುಷ್ಯ ಕಾನೂನು ಪಾಲನೆಯ ವಿಷಯವೊಂದನ್ನು ಹೊರತುಪಡಿಸಿ ಜಿಜ್ಞಾಸೆಯ ಮತ್ತೆಲ್ಲ ಕ್ಷೇತ್ರಗಳಲ್ಲಿ ನಿರಂಕುಶಮತಿಯಾಗಬೇಕು; ಇಲ್ಲದಿದ್ದರೆ, ನಮ್ಮ ನಂಬಿಕೆ, ರಾಷ್ಟ್ರೀಯತೆ ಮತ್ತು ಸಂಪ್ರದಾಯದ ಮೂಲಕ ಇತರ ಮಾನವಕೋಟಿಯಿಂದ ನಮ್ಮನ್ನು ನಾವು ಪ್ರತ್ಯೇಕಿಸಿಕೊಳ್ಳುತ್ತೇವೆ; ಇದು ಹಿಂಸೆಗೆ ಎಡೆಮಾಡಿಕೊಡುತ್ತದೆ’ ಎನ್ನುತ್ತಾರೆ

ಜೆ.ಕೆ. `ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ’ಯಲ್ಲಿ ಈ ತತ್ತ್ವಗಳ ವಿಸ್ತೃತ ರೂಪವನ್ನು ಕಾಣುತ್ತೇವೆ. ಈ ಪುಸ್ತಕದಲ್ಲಿ ಹದಿಮೂರು ಲೇಖನಗಳಿದ್ದು ಇವು ಜೆ.ಕೆ. ಅಲ್ಲಲ್ಲಿ ಮಾಡಿದ ಪ್ರವಚನಗಳ ಸಾರಸಂಗ್ರಹ. ಈ ಸಂಕಲನದಲ್ಲಿ ಎರಡು ಭಾಗಗಳಿವೆ; ಮೊದಲನೆಯ ಭಾಗದಲ್ಲಿ 1) ಏಕಾಂಗಿ, 2) ಸೃಜನಶೀಲ ಬದುಕು, 3) ಆಲೋಚನೆ ಮೂಡಿಸಿದ ಬಿಂಬಗಳು, 4) ಮಾನಸಿಕ ನೋವು ಶಮನ, 5) ಶಿಕ್ಷಣ, ವಿಜ್ಞಾನ, ರಾಜಕೀಯ ಹಾಗೂ ಧರ್ಮದ ಸೋಲು, 6) ಭಯವು ಅನುರಕ್ತಿಯ ಸೃಷ್ಟಿಕರ್ತ, 7) ಧಾರ್ಮಿಕ ಜೀವನ-ಈ ಏಳು ಲೇಖನಗಳಿವೆ. ಎರಡನೆಯ ಭಾಗದಲ್ಲಿ 1) ಸಮಸ್ಯೆಗಳಿಂದ ಬಿಡುಗಡೆ, 2) ಕಾಲ ಮತ್ತು ಚಿಂತನೆಯ ಮಿತಿಗಳು, 3) ಪ್ರಶ್ನೋತ್ತರಗಳು-1, 4) ಪ್ರಶ್ನೋತ್ತರಗಳು-2, 5) ಪ್ರೀತಿ, ಸ್ವಾರ್ಥತ್ಯಾಗ ಹಾಗೂ ದುಃಖ, 6) ಬದುಕನ್ನು ಅರಿಯುವುದೆಂದರೆ ಸಾವನ್ನು ಅರಿತಂತೆ- ಈ ಆರು ಲೇಖನಗಳಿವೆ. ಕೊನೆಗೆ ಅನುಬಂಧದಲ್ಲಿ ಜೆ.ಕೆ.ಅವರ ಕೃತಿಗಳ ಕನ್ನಡಾನುವಾದಗಳ ಪಟ್ಟಿ ಕೊಡಲಾಗಿದ್ದು, ಹೆಚ್ಚಿನ ಕುತೂಹಲವುಳ್ಳವರಿಗೆ ಉಪಯುಕ್ತವಾಗುವ ಹಲವು ಅಂತರ್ಜಾಲತಾಣಗಳ ವಿಳಾಸ ಒದಗಿಸಲಾಗಿದೆ.

ಜೆ.ಕೆ.ಹೇಳುತ್ತಾರೆ: ಕೊನೆಯಿರದ ಕಲಿಕೆಯೇ ಜೀವಂತವಾಗಿರುವಿಕೆ. ಇದು ನಮ್ಮ ಸಹಜ ಎಚ್ಚರದ ಅನಾವರಣ. ನಾವು ಗಂಭೀರವಾಗಿ ಬದುಕಬೇಕು ಏಕೆಂದರೆ ನಮ್ಮ ಬದುಕೇ ನಮಗೆ ಬೋಧನೆ; ನಮ್ಮ ಬದುಕನ್ನು ನಾವೇ ಪರಾಮರ್ಶಿಸಿಕೊಳ್ಳಬೇಕು; ಓರ್ವ ಗುರು ಅಥವಾ ಗುರುವಿನ ಬೋಧನೆಗಿಂತ ಬದುಕು ವಿಸ್ತಾರದಲ್ಲಿ ದೊಡ್ಡದು. ನಮಗೆ ಬೇಕಾದ ಸರ್ವಸಂಪತ್ತು ನಮ್ಮ ಅಂತರಂಗದಲ್ಲಿದೆ. ನಾವೇ ಜಗತ್ತು, ನಾವು ಬದಲಾಗದೆ ಹೊರಗಿನ ಯಾವುದೂ ಬದಲಾಗದು-ಇದು ಜಿಡ್ಡು ಕೃಷ್ಣಮೂರ್ತಿಯವರ ವೈಚಾರಿಕತೆಯ ಸಾರ.

ಜೆ.ಕೆ.ಯವರ ಪ್ರವಚನವೆಂದರೆ ಅಲ್ಲಿ ನಿರರ್ಗಳವಾದ ಮಾತು ಇರುವುದಿಲ್ಲ. ಸಂವಾದರೂಪದ ಮಾತುಕತೆಯಿರುತ್ತದೆ. ಮಾತನಾಡುತ್ತ ಜೆ.ಕೆ.ಶ್ರೋತೃಗಳನ್ನು ಒಳಗೊಳ್ಳುವ ಪರಿ ಕೂಡ ಅಪೂರ್ವವಾದದ್ದೆನಿಸುತ್ತದೆ.  ಅವರ ಮಾತುಕತೆಗಳನ್ನು ಸಂಗ್ರಹಿಸಿದ ಡೇವಿಡ್ ಸ್ಕಿಟ್ ಪ್ರಕಾರ “ಅವರನ್ನು ಮೊದಲ ಬಾರಿಗೆ ಓದುವ ಓದುಗನಿಗೆ ಅವರ ಮುಕ್ತ ಪ್ರವಚನಗಳು ಸೂತ್ರರಹಿತವೆಂಬಂತೆ ತೋರಬಹುದು…. (ಅವರು) ಉಪನ್ಯಾಸಗಳ ಮಧ್ಯೆ ಶ್ರೋತೃಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. (ಪ್ರಶ್ನೆ ಅಪ್ರಸ್ತುತವಾಗಿದ್ದರೂ) ತಪ್ಪದೆ ಪ್ರತಿಕ್ರಿಯೆ ನೀಡುತ್ತಾರೆ. ಈಗಾಗಲೇ ಹಲವು ಬಾರಿ ಹೇಳಿರುವಂತೆ, ಶ್ರೋತೃಗಳು ಅವರಿಗೆ ಕೇಳುವ ಪ್ರಶ್ನೆಗಳು ಕಡಿಮೆ; ಬದಲಾಗಿ ಅವರೇ ಶ್ರೋತೃಗಳಿಗೆ ಪ್ರಶ್ನೆಗಳನ್ನು ಕೇಳುತ್ತಾರೆ…. ಯಾವುದನ್ನೇ ಆಗಲಿ ನಿಮ್ಮ ಅನುಭವದ ಬೆಳಕಿನಲ್ಲಿ ನೀವು ಪರಿಶೀಲಿಸಿ ಎನ್ನುತ್ತಾರೆ.” ಜೆ.ಕೆ.ಶೈಲಿ ಸರಳ ಮತ್ತು ನೇರ.

ಈ ಕೃತಿಯ ಅನುವಾದಕರಾದ ಡಾ. ಮಹಾಬಲೇಶ್ವರರಾವ್ ಜಿಡ್ಡು ಕೃಷ್ಣಮೂರ್ತಿಯವರ ಹಲವಾರು ಪುಸ್ತಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಹಾಬಲೇಶ್ವರರಾವ್ ಶೈಕ್ಷಣಿಕ ಚಿಂತಕರು, ಹಲವು ಪ್ರಕಾರಗಳಲ್ಲಿ ಬರವಣಿಗೆ ಮಾಡಿದವರು. ಮಹಾಬಲೇಶ್ವರರಾವ್ ಅನುವಾದಿಸಿರುವ ಜಿಡ್ಡು ಅವರ `ಬಾಳಿಗೊಂದು ಭಾಷ್ಯ’ ಮೂರು ಸಂಪುಟಗಳನ್ನು ಒಳಗೊಂಡಿದ್ದು, ಇವು ನಮಗೆ ಜೆ.ಕೆ. ಚಿಂತನೆಗಳನ್ನು ಇನ್ನೂ ನಿಕಟವಾಗಿ ಪರಿಚಯಿಸುವ ಕೃತಿಗಳು. ಹೊಸ ದಾರಿಯನ್ನು ಹುಡುಕಬಯಸುವವವರಿಗೆ ಜಿಡ್ಡು ಕೃಷ್ಣಮೂರ್ತಿಯವರ ಚಿಂತನೆಗಳು ಪ್ರೇರಣೆಯಾಗಬಲ್ಲವು ಎನ್ನುವ ಕಾರಣಕ್ಕೆ ಜಿಡ್ಡು ನಮ್ಮ ಧ್ಯಾನದಲ್ಲಿ ಇರಬೇಕಾದ ತತ್ತ್ವಜ್ಞಾನಿ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!