ಅಂಕಣ

‘ನೆರೆ’ಯ ನೆನೆಯುತ

ಕಳೆದ ಕೆಲವು ದಿನಗಳಿಂದ ದೇವರ ನಾಡು ಕೇರಳ ಅಕ್ಷರಶಃ ನರಕಸದೃಶವಾಗಿದೆ. ಪ್ರಕೃತಿ ಆರಾಧಕರ ಊರಾದ ಕೊಡಗು ಪ್ರಕೃತಿಮಾತೆಯ ಮುನಿಸಿಗೆ ಸಿಕ್ಕಿ ನಲುಗಿ ಹೋಗಿದೆ. ಕರ್ನಾಟಕದ ಕರಾವಳಿ ಭಾಗಗಳೂ ಕೊಂಚಮಟ್ಟಿಗೆ ಹಾನಿಗೀಡಾಗಿವೆ. ಕೇರಳ ಸರ್ಕಾರ ಆಗಸ್ಟ್ ೧೮ರಂದು ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ಅಲ್ಲಿ ೨೧೭ ಜನ ಮಳೆಯ ಕಾರಣದಿಂದಾಗಿ ಮೃತಪಟ್ಟಿದ್ದಾರೆ. ಸುಮಾರು 1,೪೩,೨೨೦ ಜನರನ್ನು ೧೭೯೦ ವಸತಿ ಶಿಬಿರಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಈಗ ಚಿ೦ತೆಯಿರುವುದು ಅಷ್ಟೊಂದು ಜನರಿಗೆ ಸಿಗಬೇಕಾಗಿರುವ ಮೂಲಸೌಕರ್ಯಗಳ ಬಗ್ಗೆ. ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಹೊದೆಯಲು ಹೊದಿಕೆ, ಕುಡಿಯಲು ನೀರು. ಇಷ್ಟು ಜನರಿಗೆ ವ್ಯವಸ್ಥೆಗಳನ್ನು ಕಲ್ಪಿಸುವುದು ನಿಜಕ್ಕೂ ಸವಾಲೇ ಸರಿ. ಇಂದು ಕೇರಳ, ಕೊಡಗುಗಳು, ನಮ್ಮ ಸರದಿ ಯಾವಾಗಲೋ ಗೊತ್ತಿಲ್ಲ. ಪ್ರಕೃತಿಯ ಮೇಲೆ ಮನುಷ್ಯ ನಿರಂತರವಾಗಿ ನಡೆಸಿದ ಬಲಾತ್ಕಾರದ ಪ್ರತಿಫಲವನ್ನು ಇಂದು ಉಣ್ಣುತ್ತಿದ್ದಾನೆ. ಆಕೆಯ ತಾಳ್ಮೆಗೂ ಮಿತಿಯಿದೆಯಲ್ಲವೇ?!.

ಹಾಗೆ ನೋಡಿದರೆ ಕೇರಳದ ಇಂದಿನ ಸ್ಥಿತಿ ಅನಿರೀಕ್ಷಿತವಲ್ಲ, ಆಕಸ್ಮಿಕವೂ ಅಲ್ಲಪ್ರಕೃತಿಯ ಮೇಲೆ ಮನುಷ್ಯ ನಿರಂತರವಾಗಿ ಮಾಡುತ್ತಿದ್ದ ಶೋಷಣೆಯ ವಿರುದ್ಧ ಇಂದು ಆಕೆ ಸೆಟೆದು ನಿಂತಿದ್ದಾಳೆ ಅಷ್ಟೇ. ಕೇರಳದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಸಾಕಷ್ಟು ಭಾಗ ಜೈವಿಕ ಸೂಕ್ಷ್ಮ ಪ್ರದೇಶವಾಗಿದೆಯೆಂದೂ, ಭಾಗದಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಮರಗಳ ಮಾರಣಹೋಮವನ್ನು ತಕ್ಷಣ ನಿಲ್ಲಿಸಬೇಕೆಂದೂ ೨೦೧೧ ರಲ್ಲಿಯೇ ಭಾರತೀಯ ವಿಜ್ಞಾನ ಸಂಸ್ಥೆ (IISC) ಬೆಂಗಳೂರು, ಇದರ ಪರಿಸರ ವಿಜ್ಞಾನಿಗಳಾದ ಮಾಧವ ಗಾಡ್ಗಿಲ್ ರವರ ನೇತೃತ್ವದ ತಂಡವೊಂದು ಅಂದಿನ ಕೇರಳ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ ಸರ್ಕಾರ ಮಾತ್ರ ವರದಿಯ ಬಗ್ಗೆ ಕಿಂಚಿತ್ತೂ ಗಮನ ಹರಿಸಲಿಲ್ಲ.

ಇದು ಕೇವಲ ಕೆರಳದ ಪರಿಸ್ಥಿತಿಯಲ್ಲ, ತಮ್ಮ ಲಾಭಕ್ಕೋಸ್ಕರ ಪ್ರಕೃತಿಯನ್ನು ಶೋಷಿಸುತ್ತಿರುವ ಎಲ್ಲರ ಪರಿಸ್ಥಿತಿಯೂ ಇದೇ ಆಗಿರಲಿದೆ. ದಕ್ಷಿಣ ಭಾರತದ ಮಟ್ಟಿಗೆ ಪಶ್ಚಿಮ ಘಟ್ಟಗಳು ಪ್ರಾಕೃತಿಕವಾಗಿ ಅತ್ಯಂತ ಮಹತ್ತ್ವವನ್ನು ಪಡೆಯುತ್ತವೆ. ಸಾವಿರಾರು ಚದರ ಮೈಲಿ ಪ್ರದೇಶ ಘಟ್ಟಗಳ ಕೃಪೆಯಿಂದ ಮಳೆ ಪಡೆಯುತ್ತದೆ. ಘಟ್ಟ ಸಾಲುಗಳು ಜಗತ್ತಿನಲ್ಲಿ ಎಲ್ಲೂ ಕಾಣದ ಸಾಕಷ್ಟು ಹೊಸ ಬಗೆಯ ಜೀವಿಗಳಿಗೆ ಆಶ್ರಯ ತಾಣವಾಗಿವೆ. ಆದರೆ ಇಲ್ಲಿರುವ ಕೋಟ್ಯ೦ತರ ಮರಗಳನ್ನು ಕಡಿದು, ಮಾರಿ ಮೂಲಕ ಹಣ ಮಾಡುವ ಕನಸಿಟ್ಟುಕೊಂಡು ಸಾಕಷ್ಟು ಟಿಂಬರ್ ಲಾಭಿ ದಂಧೆಗಳು ಸರಕಾರದ ಮೂಲಕ ಹೊಸ ಯೋಜನೆಗಳನ್ನು ಹೊರಡಿಸುತ್ತಿವೆ. ಕೆಲ ರಾಜಕಾರಣಿಗಳು, ಕಾಂಟ್ರ್ಯಾಕ್ಟರ್ ಗಳು, ಬಿಲ್ಡರ್ ಗಳು ಹಾಗೂ ಟಿಂಬರ್ ಲಾಭಿ ದಂಧೆಯಲ್ಲಿರುವವರು ಇದರ ಲಾಭವನ್ನು ಪಡೆದರೆ, ಇಂತಹ ಪರಿಸರ ಮಾರಕ ಯೋಜನೆಗಳು ಬಹಳಷ್ಟು ಜನ ಅಮಾಯಕರ ಬದುಕನ್ನು ಬೀದಿಗೆ ತರುತ್ತಿರುವುದು ಮಾತ್ರ ಸುಳ್ಳಲ್ಲ. ಉಳ್ಳವರ ಹಣದ ದಾಹಕ್ಕೆ ಇಲ್ಲದವರು ಬಲಿಯಾಗುತ್ತಿದ್ದಾರೆ. ಇಂತಹ ಪ್ರಳಯಗಳಾದಾಗ ಬಹಳಷ್ಟು ಸಿರಿವಂತರು ಬಹುಮಹಡಿಯ ಅಂತಸ್ತಿನ ತಮ್ಮ ಅಪಾರ್ಟ್ಮೆಂಟ್ ಗಳಲ್ಲಿ ವಸ್ತುಗಳನ್ನು ಸುರಕ್ಷಿತವಾಗಿಟ್ಟು ಬರುತ್ತಾರೆ. ನೆರೆ ಮುಗಿದ ಕೂಡಲೇ ಅವರ ಜೀವನ ಬೇಗನೇ ಸಹಜ ಸ್ಥಿತಿಗೆ ಬರುತ್ತದೆ. ಆದರೆ ಸಣ್ಣ ಪುಟ್ಟ ಮನೆಗಳಲ್ಲಿ, ಜೋಪಡಿಗಳಲ್ಲಿ ವಾಸಿಸುವ ಬಡವ ಏನು ಮಾಡಬೇಕು? ಕಷ್ಟಪಟ್ಟು ಸಂಪಾದಿಸಿ, ಹಣ ಹೊಂದಿಸಿ ಕೊಂಡಿದ್ದ ವಸ್ತುಗಳು, ಕಟ್ಟಿದ್ದ ಮನೆ, ಎಲ್ಲವೂ ನಿರುಪಾಲು. ‘ಉಳ್ಳವರ ದಾಹ, ಇಲ್ಲದವರ ದಾಹಕ್ಕಿಂತಲೂ ಘೋರ ಪರಿಣಾಮವನ್ನುಂಟುಮಾಡುತ್ತದೆ.’

ಎಲ್ಲಾ ವಿಷಯಗಳಲ್ಲಿ ಸರ್ಕಾರಗಳನ್ನು ಮಾತ್ರ ದೂರಿ ಪ್ರಯೋಜನವಿಲ್ಲ. ಇಂದಿನ ಸ್ಥಿತಿಗೆ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ರೀತಿಯಲ್ಲಿ ತನ್ನ ಕೊಡುಗೆಗಳನ್ನು ನೀಡಿದ್ದಾನೆನೀಡುತ್ತಿದ್ದಾನೆಇಂತಹ ಒಂದೆರಡು ಘಟನೆಗಳಾದಾಗ ನಾಲ್ಕು ದಿನಗಳವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರವಿಡಿಯೋಗಳನ್ನು ಹರಿಯಬಿಡುತ್ತಾ ಸಂತಾಪ ಸೂಚಿಸುತ್ತೇವೆಯೇ ಹೊರತು, ಮುಂದೆ ರೀತಿ ಆಗದಂತೆ ತಡೆಯಲು ತಾನೇನು ಮಾಡಬೇಕು ಎಂದು ಯಾರೊಬ್ಬನೂ ಯೋಚಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ನಡೆದ ಜಲಪ್ರಳಯದಿಂದ ನಾವು ಪಾಠ ಕಲಿತಂತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಸಿಕ್ಕ ಸಿಕ್ಕಲ್ಲಿ ಕಟ್ಟಡಗಳನ್ನೆಬ್ಬಿಸಿ ನೆಲಕ್ಕೆ ಕಾಂಕ್ರೀಟ್ ಬಳಿದು, ನೀರು ಇಂಗಲು ಅಥವಾ ಸರಾಗವಾಗಿ ಹರಿದು ಹೋಗಲು ಇರುವ ಎಲ್ಲಾ ದಾರಿಗಳನ್ನೂ ಮುಚ್ಚಿಬಿಟ್ಟಿದ್ದೇವೆ. ಇರುವ ಸಣ್ಣ ಪುಟ್ಟ ಕಾಲುವೆಗಳ ತುಂಬಾ ಪ್ಲಾಸ್ಟಿಕ್ ಗಳನ್ನು ತುರುಕಿಬಿಟ್ಟಿದ್ದೇವೆ. ಅಗತ್ಯವಿದ್ದಲ್ಲಿಇಲ್ಲದಿದ್ದಲ್ಲಿ ಮರಗಳನ್ನು ಕಡಿದು, ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಬೇರುಗಳಿಲ್ಲದೇ ಗುಡ್ಡ ಕುಸಿತಗಳಾಗುತ್ತಿವೆ. ಇದು ಅಭಿವೃದ್ಧಿಯೋ?, ಅಧಃಪತನವೋ? ಯೋಚಿಸುವ ಕಾಲ ಸನ್ನಿಹಿತವಾಗಿದೆ.

ಆದದ್ದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮುಂದಾಗಬಹುದಾದ ಘೋರ ದುರಂತಗಳನ್ನು ತಪ್ಪಿಸುವ ಕರ್ತವ್ಯ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನದ್ದು. ಸಾಕಷ್ಟು ವಿರೋಧಗಳ ನಡುವೆ ಎತ್ತಿನಹೊಳೆ ಯೋಜನೆ ಈಗಾಗಲೇ ಲಕ್ಷಾಂತರ ಮರಗಳನ್ನು ಆಪೋಷಣಗೈದಿದೆ. ಮತ್ತೊಂದು ಕಡೆ ಮೈಸೂರುತಳಸೇರಿ ರೈಲ್ವೆ ಕಾಮಗಾರಿಗೆ ಸದ್ದಿಲ್ಲದೇ ಕೊಡಗಿನಲ್ಲಿ ಸರ್ವೇ ಕಾರ್ಯ ಪ್ರಾರಂಭವಾಗಿದೆಮಗದೊಂದೆಡೆ ಅವಶ್ಯಕತೆಯಿಲ್ಲದಿದ್ದರೂ ಶಿಶಿಲಭದ್ರಾಪುರ ಹೆದ್ದಾರಿ ಯೋಜನೆ ರೂಪುಗೊಳ್ಳುತ್ತಿದೆ. ಯಾವುದೂ ನಮ್ಮ ಮನೆಯ ಸಮಸ್ಯೆಯಲ್ಲಆದರೆ ಸಮಸ್ಯೆ ನಮ್ಮ ಮನೆಯ ಅಂಗಳದವರೆಗೂ ಬಂದು ಬಾಗಿಲು ತಟ್ಟುವ ಮುನ್ನ ನಾವೆಲ್ಲಾ ಎಚ್ಛೆತ್ತುಕೊಳ್ಳಬೇಕಾದ ಅಗತ್ಯವಿದೆಪ್ರಕೃತಿಮಾತೆಯನ್ನು ಉಳಿಸಿಕೊಂಡು ಆ ಮೂಲಕ ಆಕೆಯನ್ನು ಒಲಿಸಿಕೊಳ್ಳಬೇಕಿದೆ.

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೇ ಬಂದಳೋ,

ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲೇ ನಿಂದಳೋ,

ಎಲ್ಲಿ ಮುಗಿಲಲಿ ಮಿಂಚಿನೊಳ್ ಕಾವೇರಿ ಹೊಳೆ ಹೊಳೆ ಹೊಳೆವಳೋ,

ಎಲ್ಲಿ ಹೊಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ,

ಅಲ್ಲಿ ಕಡೆ ನೋಡಲಾ,

ಅಲ್ಲಿ ಕೊಡವರ ನಾಡಲಾ,

ಅಲ್ಲಿ ಕೊಡವರ ಬೀಡಲಾ,”

ಎಂಬ ಪಂಜೆಯವರ ಮಾತಿನಂತೆ ಮತ್ತೆ ಕೊಡವರ ಬೀಡು, ದೇವರ ನಾಡು, ಯಥಾಸ್ಥಿತಿಗೆ ಬರಲೆಂದು ಪ್ರಾರ್ಥಿಸೋಣ.

  • ವೀರೇಂದ್ರ ನಾಯಕ್, ಚಿತ್ರಬೈಲು

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!