ಅಂಕಣ

ಸ್ವತಂತ್ರ ಭಾರತದಲ್ಲಿ ಮನರಂಜನೆಯ ಏಳು ದಶಕಗಳ ಪಯಣ!

ಇಪ್ಪತ್ತೈದು ವರ್ಷಗಳ ಹಿಂದೆ ಮನರಂಜನೆ ಎನ್ನುವುದಕ್ಕೆ ಏನಿತ್ತು? ಊರಲ್ಲಿ ಒಂದು ಟಿವಿ ಇರುತ್ತಿತ್ತು, ವಾರಕ್ಕೆ ಒಂದು ರಾಮಾಯಣ ಧಾರಾವಾಹಿ ಬರುತ್ತಿತ್ತು, ರೇಡಿಯೋದಲ್ಲಿ ವಾರ್ತೆ ಕೇಳುತ್ತಿದ್ದರು, ಅದರಲ್ಲೇ ಹಾಡುಗಳೂ ಬರುತ್ತಿದ್ದವು. ಪ್ರತಿಯೊಂದು ಮನೆಗೂ ಪೇಪರ್ ಎನ್ನುವ ಕಾನ್ಸೆಪ್ಟ್ ಇರಲೇ ಇಲ್ಲ. ಪೇಪರ್ ಓದಬೇಕು ಅಂದರೆ ಊರಿನ ಗ್ರಂಥಾಲಯಕ್ಕೆ ಹೋಗಬೇಕಿತ್ತು. ನಂತರ ಸಾವಕಾಶವಾಗಿ ಎಲ್ಲರ ಮನೆಗೂ ದೂರದರ್ಶನ ಲಗ್ಗೆ ಹಾಕತೊಡಗಿತು. ಬುಧವಾರದ ಚಿತ್ರಹಾರ, ಮಂಗಳವಾರದ ಶಕ್ತಿಮಾನ್, ಒಂಬತ್ತು ಗಂಟೆಗೆ ಬರುವ ವಾರ್ತೆ, ರವಿವಾರದ‌ ಮುಂಜಾನೆಯ ರಂಗೋಲಿ, ಸಂಜೆಯ ಸುರಭಿ ಇವೆಲ್ಲ ಇನ್ನೂ ಆಗಿನ ಪೀಳಿಗೆಯ ಜನರಿಗೆ ನೆನಪಿರುವ ಮನರಂಜನಾ ಕಾರ್ಯಕ್ರಮಗಳು. ನಂತರ ಶುರುವಾಗಿದ್ದು ಲೈವ್ ಟೆಲಿಕಾಸ್ಟ್. ಎಲ್ಲೋ ನಡೆಯುತ್ತಿದ್ದುದ್ದನ್ನು ಇಲ್ಲಿ ಕೂತು ನೋಡ ಬಹುದಿತ್ತು. ಟಿವಿಯಲ್ಲಿ ಒಂದೇ ಚಾನೆಲ್. ಕ್ರೀಡೆ, ಕಾರ್ಟೂನ್, ವಾರ್ತೆ, ಧಾರವಾಹಿ, ಭಜನೆ, ಭಾಷಣ ಎಲ್ಲದಕ್ಕೂ ಒಂದೇ. ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದರೆ ಉಳಿದ ಕಾರ್ಯಕ್ರಮ ನೋಡುವ ಹಾಗಿರಲಿಲ್ಲ. ವಾರ್ತೆಯ ಸಮಯದಲ್ಲಿ  ಮ್ಯಾಚ್ ನೋಡುವುದು ತಪ್ಪಿಹೋಗುತ್ತಿತ್ತು. ಒಂದು ಚಾನೆಲ್ ಇದ್ದ ದೇಶದಲ್ಲಿ ಇಂದು ಒಂದು ಸಾವಿರಕ್ಕೂ ಹೆಚ್ಚು ಚಾನೆಲ್ ಗಳಾಗಿವೆ. ಲೈವ್ ಟೆಲಿಕಾಸ್ಟ್, ರೆಕಾರ್ಡೆಡ್ ಟೆಲಿಕಾಸ್ಟ್, ರಿಪೀಟೆಡ್ ಟೆಲಿಕಾಸ್ಟ್ ಹೀಗೆ ನೀವು ಏನು ಬೇಕೋ ಯಾವಾಗ ಬೇಕೋ ಆವಾಗ ನೋಡಬಹುದು. ಸಂಜೆಯಿಂದ ರಾತ್ರಿಯ ತನಕ ಯಾರ ಮನೆಯ ಹೆಂಗಸರಾದರೂ ಫ್ರೀ ಇರುತ್ತಾರೆಯೇ ನೋಡಿ? ಎಲ್ಲರೂ ಟಿವಿಯ ಮುಂದೆ ಕೂತಿರುತ್ತಾರೆ. ಅಷ್ಟೊಂದು ಬದಲಾವಣೆಗಳಾಗಿವೆ ಮನರಂಜನಾ ಉದ್ಯಮದಲ್ಲಿ!

ದೂರದರ್ಶನ

1984ರಲ್ಲಿ ಮೊದಲು ಶುರುವಾಗಿದ್ದು ಧಾರವಾಹಿ ಎನ್ನುವ ಒಂದು ಕಾನ್ಸೆಪ್ಟ್. ‘ಹಮ್ ಲೋಗ್’ ಎನ್ನುವ ಧಾರವಾಹಿ ದೂರದರ್ಶನದಲ್ಲಿ ಬರುತ್ತಿತ್ತು. ಪ್ರತಿ ವಾರ 25 ನಿಮಿಷಗಳ ಕಾಲ ಟೆಲಿಕಾಸ್ಟ್ ಆಗುವ ಅದರಲ್ಲಿ 184 ಸಂಚಿಕೆಗಳಿದ್ದವು. ಅಮೆರಿಕಾ ಹಾಗೂ ಇಂಗ್ಲೆಂಡ್ ದೇಶದ ಹಾಗೆ ನಮ್ಮ ದೇಶದಲ್ಲಿ ಬಾನುಲಿಯಲ್ಲಿ ಧಾರವಾಹಿ ಪ್ರಸಾರ ಆಗಿದ್ದೇ ಇಲ್ಲ, ನೇರವಾಗಿ ದೃಶ್ಯವಾಹಿನಿಯಲ್ಲೇ ಪ್ರಸಾರವಾಗಿತ್ತು. ನಂತರದಲ್ಲಿ ಯಾವಾಗ ಟಿವಿ ಮನೆ ಮನೆಗೆ ತಲುಪುತ್ತಾ ಹೋಯಿತೋ ಹಾಗೆ ಹೊಸ ಹೊಸ ಖಾಸಗಿ ಚಾನೆಲ್ ಗಳು, ಹೊಸ ಹೊಸ ಕಾರ್ಯಕ್ರಮಗಳು  ಬರುತ್ತಾ ಹೋದವು. ಟಿವಿ ಇಂಡಸ್ಟ್ರಿ ಗೆ ಮಹತ್ವದ ತಿರುವು ಸಿಕ್ಕಿದ್ದು 2000ರಲ್ಲಿ. ಎಕ್ತಾ ಕಪೂರ್ ಅವರ ‘ಕಭೀ ಸಾಸ್ ಭೀ ಬಹು ಥಿ’ ಎನ್ನುವ ಧಾರವಾಹಿ ಸಣ್ಣ ಪರದೆಯ ಮೇಲೆ ಶುರುವಾಯಿತು. ಇದು ಎಷ್ಟು ಜನಪ್ರಿಯ ಆಯಿತು ಅಂದರೆ ಭಾರತದ ಮನರಂಜನಾ ಉದ್ಯಮದಲ್ಲಿ ಕ್ರಾಂತಿ ನಡೆಯಿತು. ಇದರ 1833 ಸಂಚಿಕೆಗಳು ಪ್ರಸಾರವಾಗಿದ್ದವು. ಇಂದು ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವದಾದ್ಯಂತ ಭಾರತೀಯ ‘ಡೇಲಿ ಸೋಪ್ ಓಪ್ರಾ’ ಅತ್ಯಂತ ಜನಪ್ರಿಯ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಗಲ್ಫ್ ಅಲ್ಲದೇ ಇನ್ನೂ ಹಲವಾರು ದೇಶಗಳಲ್ಲಿ ಅವರ ಭಾಷೆಗೆ ಅನುವಾದ ಮಾಡಿ ನಮ್ಮ ದೇಶದ ಕೆಲವು ಜನಪ್ರಿಯ ಡೇಲಿ ಸೋಪ್ ಓಪ್ರಾವನ್ನು ಜನರು ನೋಡುತ್ತಾರೆ. ಚೈನಾದಲ್ಲಿ ಕೂಡ ನಮ್ಮ ದೇಶದ ‘ಸಾಸ್- ಬಹು’ ಸೀರಿಯಲ್ ನ್ನು ಜನರು ನೋಡುತ್ತಾರೆ ಎಂದರೆ ನಂಬುವಿರಾ?

ಚಲನಚಿತ್ರ

ನಮ್ಮ ದೇಶದ ಒಂದು ಪರಿಚಯ ಅಂದರೆ ಅದು ಬಾಲಿವುಡ್. ಅಲ್ಲಿಯ ದುಬಾರಿ ಸೆಟ್, ಅದರಲ್ಲಿ ತುಂಬಿರುವ ಭಾರತೀಯ ಸಂಸ್ಕೃತಿ, ಹಾಡು,‌ ಸಂಗೀತ, ಭಾವನಾತ್ಮಕ ಕಥೆಗಳು ಜಗತ್ತನ್ನೇ ಗೆದ್ದಿದೆ. ಜಪಾನಿನಲ್ಲಿ ರಜನಿಕಾಂತ್ ಫೇಮಸ್ ಆದರೆ, ಶಹಾ-ರುಖ್ ಖಾನ್ ಇಂಗ್ಲೇಂಡಿನಲ್ಲಿ. ಹೀಗೆ ಭಾರತದ ಸಿನೇಮಾ ಇಂಡಸ್ಟ್ರಿ ನಡೆದು ಬಂದ ದಾರಿ ಬಹಳ ದೂರ. “ಭಾರತದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಸಿಗುವ ಮನರಂಜನೆ ಅಂದರೆ ಸಿನೇಮಾ” ಎನ್ನುವ ಮಾತೊಂದಿದೆ.‌ ನಿಜಕ್ಕೂ ಹೌದು ಅದು. ಒಂದು ಕಾಲದಲ್ಲಿ ಸಿನೇಮಾ ನೋಡಬೇಕು ಅಂದರೆ ಪೇಟೆಗೆ ಹೋಗಬೇಕಿತ್ತು. ಮುಂಬಯಿಯಲ್ಲಿ ಇವತ್ತು ಸಿನೇಮಾ ರಿಲೀಸ್ ಆದರೆ ನಮ್ಮೂರಿಗೆ ಬರಲು ಒಂದು ತಿಂಗಳು ಬೇಕಿತ್ತು. ಇನ್ನು ಹಾಲಿವುಡ್ ಮೂವೀಸ್ ಪ್ರಶ್ನೆಯೇ ಇಲ್ಲ. ಟೈಟಾನಿಕ್ ಸಿನೇಮಾದ ಉದಾಹರಣೆ ತೆಗೆದುಕೊಂಡರೆ ವಿದೇಶಗಳಲ್ಲಿ ಅದು ರಿಲೀಸ್ ಆಗಿ, ಆಸ್ಕರ್ ಪ್ರಶಸ್ತಿಯನ್ನು ಪಡೆದು ಎಷ್ಟೋ ಸಮಯ ಕಳೆದ ಮೇಲೆ ಭಾರತಕ್ಕೆ ಬಂದಿತ್ತು. ಇದು ನಿಮ್ಮ ಗಮನಕ್ಕೂ ಬಂದಿರಬಹುದು. ಈಗ ಕೆಲವೊಂದು ಚಲನಚಿತ್ರ ಭಾರತದಲ್ಲಿ ಮೊದಲು, ಆಮೇಲೆ ಅಮೇರಿಕಾದಲ್ಲಿ ರಿಲೀಸ್ ಆಗುತ್ತದೆ. ಇಂದು ಫಿಲ್ಮ್ ಹಾಗೂ ಟಿವಿ ಉದ್ಯಮಗಳು ಎಷ್ಟು ಬೆಳೆದಿವೆ ಅಂದರೆ ಹಾಲಿವುಡ್ ನಟ, ನಟಿಯರು ಭಾರತದಲ್ಲಿಯೇ ಬೀಡು ಬಿಟ್ಟಿದ್ದಾರೆ! ಇಂದು ಪ್ರಿಯಾಂಕಾ ಚೋಪ್ರಾ ಸೇರಿ ಹಲವಾರು ಬಾಲಿವುಡ್ ನಟ ನಟಿಯರು ಹಾಲಿವುಡ್‌ ನಲ್ಲಿ ನಟಿಸುತ್ತಿದ್ದಾರೆ. ಕೇನ್ಸ್, ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಭಾರತದ ಕಲಾವಿದರು ಅತಿಥಿಯಾಗಿ ಹೋಗುತ್ತಿದ್ದಾರೆ. ಆಶ್ಚರ್ಯ ಎನಿಸಬಹುದು ಭಾರತದ ಸಾಕಷ್ಟು ಸಿನಿಮಾಗಳಲ್ಲಿ ಬಳಸುವ ತಂತ್ರಜ್ಞಾನ ವಿದೇಶದಿಂದ ಬರುತ್ತದೆ. ಮರಾಠಿಯಲ್ಲಿ ಇತ್ತೀಚಿನ ಬಹಳ ಯಶಸ್ವಿ ಸಿನೇಮಾ ಸೈರಾಟ್. ಅದರ ಹಾಡು ಹಾಗೂ ಸಂಗೀತವಂತೂ ತುಂಬಾನೇ ಜನಪ್ರಿಯ. ಸಂಗೀತದ ಸಂಯೋಜನೆ, ಸಂಸ್ಕರಣೆ ಎಲ್ಲಾ ಆಗಿದ್ದು ಅಮೇರಿಕಾದಲ್ಲಿರುವ ಸೋನಿ ಲ್ಯಾಬ್ಸ್ ನಲ್ಲಿ. ಅವತಾರ್ ಎನ್ನುವ ಒಂದು ಅದ್ಭುತ ಹಾಲಿವುಡ್ ಸಿನೇಮಾದ ಅನಿಮೇಷನ್ ಮಾಡಲು ಸಹಾಯ ಮಾಡಿದ್ದು ನಮ್ಮ ಬೆಂಗಳೂರಿನ ಐಟಿಪಿಎಲ್ ನಲ್ಲಿರುವ ಒಂದು ಕಂಪನಿ ಎನ್ನುವ ವಿಷಯ ಗೊತ್ತಾದರೆ ತಿಳಿದು ನೀವು ಆಶ್ಚರ್ಯಚಕಿತರಾಗುವಿರಿ. ಭಾರತ ಹಾಗೂ ವಿಶ್ವ ಇಂದು ಎಂಟರ್ಟೈನ್ಮೆಂಟ್ ವರ್ಲ್ಡ್ ನಲ್ಲಿ ಜೊತೆ ಜೊತೆಯಾಗಿ ಕೆಲಸ ಮಾಡುತ್ತಿದೆ. ಐಟಿಯಲ್ಲಿ ಭಾರತದ ಏನು ಸಾಧನೆ ಇದೆಯೋ ಅದನ್ನು ಬಾಲಿವುಡ ಹಾಗೂ ಹಾಲಿವುಡ್ ಎರಡೂ ಬಳಸಿಕೊಳ್ಳುತಿವೆ. ಭಾರತದ ಫಿಲ್ಮ್ ಇಂಡಸ್ಟ್ರಿ ಹಾಲಿವುಡ್ ಗಿಂತ ದೊಡ್ಡದು ಗೊತ್ತಾ?

ಜಗತ್ತಿನ ಅತ್ಯಂತ ಹಳೆಯ ಉದ್ಯಮದಲ್ಲಿ ಭಾರತದ ಸಿನೇಮಾ ಕೂಡ ಒಂದು. ಸಿನೇಮಾ ಶುರುವಾದಗಲೇ ಅದು ಭಾರತದಲ್ಲಿ ಶುರುವಾಗಿತ್ತು. ಸ್ವಾತಂತ್ರ್ಯದ ಮೊದಲೇ ಭಾರತದಲ್ಲಿ ಚಲನಚಿತ್ರ ಜನಪ್ರಿಯ ಆಗಿದ್ದರೂ ಕೂಡ ದೇಶವ್ಯಾಪಿಯಾಗಿದ್ದು ಸ್ವಾತಂತ್ರ್ಯದ ನಂತರ. ಇಂದು ಜಗತ್ತಿನ ಅತೀ ದೊಡ್ಡ ಸಿನೇಮಾ ಉದ್ಯಮವು ಭಾರತದಲ್ಲಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಭಾರತದ ಸಿನೇಮಾದ 390,00,00,000 ಟಿಕೇಟ್ ಗಳು ಮಾರಾಟವಾಗುತ್ತವೆ. ಹಾಲಿವುಡ್ ಗಿಂತ ಹತ್ತು ಲಕ್ಷ ಹೆಚ್ಚು! ಹಿಂದಿನ ವರ್ಷ ಎಲ್ಲಾ ಭಾಷೆಗಳ ಒಟ್ಟೂ 1,986 ಸಿನೇಮಾ ಬಿಡುಗಡೆಯಾಗಿದೆ. ದೇಶಾದ್ಯಂತ ಹನ್ನೊಂದು ಸಾವಿರಕ್ಕೂ ಹೆಚ್ಚು ಸಿನೇಮಾ ಮಂದಿರಗಳಿವೆ. ಇಡೀ ಉದ್ಯಮ ಸೇರಿ ಸುಮಾರು ಎರಡು ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ನಡೆಸುತ್ತವೆ. ಜಗತ್ತಿನ ದೊಡ್ಡ ದೊಡ್ಡ ಪ್ರೊಡಕ್ಷನ್ಸ್ ಹೌಸ್ ಇಂದು ಭಾರತದಲ್ಲಿವೆ. ಸೋನಿ, ಡಿಸ್ನಿ, ಪಾಕ್ಸ್, ವಾರ್ನರ್ ಇವರೆಲ್ಲ ಹಾಲಿವುಡ್‌ನ್ನು ಆಳುವವರು. ಇವರೆಲ್ಲ ಇಂದು ಭಾರತದಲ್ಲಿ ಹಣವನ್ನು ಹೂಡಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ತಮಿಳುನಾಡಿಗೆ ಹೋದಾಗ ಒಂದು ಸಿನೇಮಾ ಮಂದಿರಕ್ಕೆ ಹೋಗಿದ್ದೆ. ಅಲ್ಲಿ ಮಾರ್ವೆಲ್ ಸ್ಟುಡಿಯೋ ಅವರ ಎವೆಂಜರ್ಸ್ ಸಿನೇಮಾ ಓಡುತ್ತಿತ್ತು. ನಿಮಗೆ ಆಶ್ಚರ್ಯ ಆಗಬಹುದು,‌ ತಮಿಳು ಸಿನೇಮಾ ಟಿಕೇಟ್ ಸಿಗುತ್ತಿತ್ತು ಆದರೆ ಇಂಗ್ಲೀಷ್ ಸಿನೇಮಾ ಮಾತ್ರ ಹೌಸ್ ಫುಲ್. ಎವೆಂಜರ್ಸ್ ಸಿನೇಮಾ ಭಾರತದಲ್ಲಿ ಸುಮಾರು ಇನ್ನೂರಾ ಐವತ್ತು ಕೋಟಿ ವ್ಯಾಪಾರ ನಡೆಸಿದೆ. ಇಡೀ ವಿಶ್ವಕ್ಕೆ ಭಾರತದ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ ಮೇಲೆ ಒಂದು ಕಣ್ಣಿದೆ, ಅದು ಯಾಕೆ ಗೊತ್ತೇ? ಇಲ್ಲಿ ಗಳಿಕೆ ಇದೆ!  2000ರ ತನಕ ಸಿನೇಮಾ ಇಂಡಸ್ಟ್ರಿಯ ಆದಾಯ 1.3 ಬಿಲಿಯನ್ ಡಾಲರ್ ಆಗಿತ್ತು. ಕೇವಲ ಎರಡು ದಶಕಗಳಲ್ಲಿ ಅದು ಡಬಲ್ ಆಗಿದೆ. ಭಾರತದ ಸಿನೇಮಾ ಜೊತೆ ಹಾಡುಗಳು ಕೂಡ ಅಷ್ಟೇ ಜನಪ್ರಿಯ. ಒಟ್ಟೂ ಆದಾಯದ 5% ಮ್ಯೂಸಿಕ್‌ ಇಂಡಸ್ಟ್ರಿಯಿಂದ ಬರುತ್ತದೆ. ಪ್ರಿಂಟ್, ಟಿವಿ, ಮೀಡಿಯಾ, ಸಿನೇಮಾ, ಮ್ಯೂಸಿಕ್ ಹೀಗೆ ಇಂಡಸ್ಟ್ರಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹಳ ದೂರ ಬಂದಿದೆ. ಇವತ್ತು ಫಿಲ್ಮ್ಸ ಹಾಗೂ ಮೀಡಿಯಾದಿಂದಾಗಿ ಭಾರತದಲ್ಲಿ ಸುಮಾರು ಅರವತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ವಿದೇಶಿ ಬಂಡವಾಳ ಏಳು ಬಿಲಿಯನ್ ಡಾಲರ್ ತಲುಪಿದೆ. ಭಾರತದಲ್ಲಿ ಆಗಿರುವ ಬೆಳವಣಿಗೆಯನ್ನು ನಾವು ಸಿನೇಮಾ ಉದ್ಯಮದಲ್ಲಿ ಕಾಣಬಹುದು. ಈ ಅಭಿವೃಧ್ದಿಯ ಫಿಲ್ಮ್ ಅಭಿ ಭೀ ಬಾಕಿ ಹೇ…

ಪ್ರಿಂಟ್ ಮೀಡಿಯಾ

ಭಾರತವು ಬೆಳೆದಂತೆ ಪ್ರಿಂಟ್ ಮೀಡಿಯಾ ಕೂಡಾ ಚುರುಕಾಗತೊಡಗಿತು. ಹಳ್ಳಿಯಲ್ಲಿ ಹತ್ತು ಮನೆಯಲ್ಲಾದರೂ ಪತ್ರಿಕೆ ಬರುತ್ತಿತ್ತು. ಒಂದು ದಿನ ತಡವಾಗಿ ಬಂದರೂ ಪರವಾಗಿಲ್ಲ ಜನರು ಆಸಕ್ತಿಯಿಂದ ಪುಟ ಪುಟವನ್ನು ಬಿಡದೆ ಓದುತ್ತಿದ್ದರು. ಕನ್ನಡಕ್ಕೆ ಬಂದರೆ ದಿನಪತ್ರಿಕೆಗಳ ಜೊತೆಗೆ ಸುಧಾ, ತರಂಗ, ಕಸ್ತೂರಿ, ಮಯೂರ ಹೀಗೆ ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಜನ ಸಾಮಾನ್ಯರೂ ಕೂಡ ಮನೆಗೆ ತರಿಸಲು ಶುರು ಮಾಡಿದರು. ನೋಡುನೋಡುತ್ತಿದ್ದಂತೆ ಒಂದು ದಶಕದಲ್ಲಿ ನಮ್ಮ ದೇಶದ ಪ್ರಿಂಟ್ ಮೀಡಿಯಾ ಹಾಗೂ ಅಲ್ಲಿಯ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ ಬೇರು ಗೊತ್ತಾಗದ ಆಲದ ಮರದ ಹಾಗೆ ಬೆಳೆದು ಬಿಟ್ಟಿತು. ನಮಗೆ ಸ್ವಾತಂತ್ರ್ಯ ಸಿಕ್ಕಾಗ 214 ಪತ್ರಿಕೆಗಳು ಇದ್ದವು, ಈಗ ಒಂದು ಲಕ್ಷಕ್ಕೂ ಹೆಚ್ಚು ಸುದ್ದಿಮನೆಗಳಿವೆ. ಪ್ರತಿ ವರ್ಷ ಪ್ರಿಂಟ್ ಮೀಡಿಯಾ 12% ನಷ್ಟು ಬೆಳೆಯುತ್ತಿದೆ. ಉಳಿದ ಪಾಶ್ಚಿಮಾತ್ಯದ ಪ್ರಜಾಪ್ರಭುತ್ವ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಪ್ರತಿ ವರ್ಷ ಪತ್ರಿಕೆಗಳ ಮುದ್ರಣ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಹೆಚ್ಚುತ್ತಿರುವ ಜನಸಂಖ್ಯೆ ಕೂಡ ಕಾರಣ. ಅದಲ್ಲದೆ ನಮ್ಮ ದೇಶದ ಸರಾಸರಿ ವಯಸ್ಸು ಬಹಳ ಕಡಿಮೆ ಇದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತದ ಸಾಕ್ಷರತೆ ಕೂಡ ಹೆಚ್ಚಿದೆ. ಹೇಗೆ ಭಾರತ ಬೆಳೆಯುತ್ತಿದೆಯೋ ಹಾಗೆಯೇ ಜಾಹೀರಾತು ಕೂಡ ಹೆಚ್ಚುತ್ತಿದೆ. ಪಾಕಿಸ್ತಾನದ ಪತ್ರಿಕೆಯ ಬೆಲೆ 20-25 ರುಪಾಯಿ, ನಮ್ಮ ದೇಶದಲ್ಲಿ ಪತ್ರಿಕೆಯ ಬೆಲೆ ಐದರಿಂದ ಆರು ರುಪಾಯಿ. ಈ ನಾಲ್ಕು ಪಟ್ಟು ಹೆಚ್ಚಳಕ್ಕೆ ಕಾರಣ ದೇಶದ ಆರ್ಥಿಕ ಬೆಳವಣಿಗೆ, ಜಾಹೀರಾತು ಹಾಗೂ ಹಂಚಿಕೆಯ ಅಂಕೆ ಸಂಖ್ಯೆ. ವರ್ಲ್ಡ್ ಎಕನಾಮಿಕ್ ಫೋರಮ್‌ ಪ್ರಕಾರ ಜಗತ್ತಿನಲ್ಲಿ ಎಲ್ಲಾ ಕಡೆ ಪ್ರಿಂಟ್ ಮೀಡಿಯಾ ಅಳಿವಿನ ಅಂಚಿನಲ್ಲಿದೆ ಆದರೆ ಭಾರತದಲ್ಲಿ ಮಾತ್ರ ಅದು ಬೆಳೆಯುತ್ತಿದೆ. ಇಂದು ಜಗತ್ತಿನಲ್ಲಿ ಅತೀ ಹೆಚ್ಚು ಪತ್ರಿಕೆಗಳು ಭಾರತದಲ್ಲಿವೆ. ಅಮೇರಿಕಾದಲ್ಲಿ ಪ್ರತಿ ವರ್ಷವೂ ಒಂದಿಷ್ಟು ಸುದ್ದಿ ಮನೆ ಮುಚ್ಚಿ ಹೋದರೆ, ಭಾರತದಲ್ಲಿ ಅದರ ಹತ್ತು ಪಟ್ಟು ಸುದ್ದಿ ಮನೆಗಳು ಬಾಗಿಲು ತೆರೆಯುತ್ತವೆ. ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ ಪ್ರಕಾರ ಇಪ್ಪತ್ತು ವರ್ಷಗಳಲ್ಲಿ ಪತ್ರಿಕೆಗಳ ವಿತರಣೆ 60% ಹೆಚ್ಚಿದೆ. 2016ರಲ್ಲಿ ಒಂದು ದಿನಕ್ಕೆ ಆರು ಕೋಟಿಗಿಂತಲೂ ಹೆಚ್ಚು ಪತ್ರಿಕೆಗಳು ಮುದ್ರಣಗೊಂಡಿವೆಯಂತೆ. ಗಮನಿಸಬೇಕಾದ ವಿಷಯ ಅಂದರೆ ಭಾರತದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚುತ್ತಿದ್ದರೂ ಕೂಡ ಅದು ಪ್ರಿಂಟ್ ಮೀಡಿಯಾದ ಮೇಲೆ ಇನ್ನೂ ತನಕ ಪ್ರಭಾವ ಬೀರಿಲ್ಲ. ಕಳೆದ ಎಪ್ಪತ್ತು ವರ್ಷಗಳ ಸಾಧನೆಯನ್ನು ನಮ್ಮ ಪ್ರಿಂಟ್ ಮೀಡಿಯಾ ಬಿಟ್ಟು ಬೇರೆ ಯಾರು ಬಲ್ಲರು? ಮೊದಲ ಬಾರಿ ಕೆಂಪು ಕೋಟೆಯ ಮೇಲೆ ಧ್ವಜ ಹಾರಾಡಿದ್ದರಿಂದ ಹಿಡಿದು ರೆಡ್ ಪ್ಲಾನೆಟ್ ತನಕ ನಮ್ಮ‌ ಇಸ್ರೋ ಹೋಗಿದ್ದನ್ನು ಮೊದಲ ಪುಟದಲ್ಲಿ ದಾಖಲಿಸಿದ್ದಾರೆ!

ಮೊಬೈಲ್ ಹಾಗೂ ಇಂಟರ್ನೆಟ್

ಭಾರತದ ಒಂದು ವಿಶೇಷತೆ ಎಂದರೆ, ಕಳೆದ ಎಪ್ಪತ್ತು ವರ್ಷಗಳಲ್ಲಿ ಕೆಲವೊಂದು ಕ್ಷೇತ್ರದಲ್ಲಿ ಎಷ್ಟು ವೇಗವಾಗಿ ಬೆಳೆದಿದೆ ಅಂದರೆ ಬಹಳಷ್ಟು ಟೆಕ್ನಾಲಜಿಯನ್ನು ಬಳಸಲು ನಮಗೆ ಅವಕಾಶವೇ ಸಿಗಲಿಲ್ಲ. ನಮ್ಮ ದೇಶ ಪೇಜರ್ ಎನ್ನುವುದು ಏನು ಎಂದು ನೋಡುವುದರೊಳಗೆ ಮೊಬೈಲ್ ಬಂದಿತ್ತು. ರೇಡಿಯೋ ಕೇಳಿದ್ದಕ್ಕಿಂತ ಹೆಚ್ಚು ಜನ ಇಲ್ಲಿ ಟಿವಿ ನೋಡಿದ್ದಾರೆ. ಕಂಪ್ಯೂಟರ್ ನಲ್ಲಿ ಇಂಟರ್ನೆಟ್ ಬಳಸಿದ್ದಕ್ಕಿಂತ ಹೆಚ್ಚು ಜನರು ಮೊಬೈಲ್ ನಲ್ಲಿ ಇಂಟರ್ನೆಟ್ ಬಳಸುತ್ತಿದ್ದಾರೆ. ಇಂದು ಭಾರತ ವಿಶ್ವ ಮಟ್ಟದಲ್ಲಿ ಡಿಜಿಟಲ್‌ ಎಂಟರ್ಟೈನ್ಮೆಂಟ್ ನ ಹೊಸ ಬೇಡಿಕೆಯನ್ನು ಸೃಷ್ಟಿಸಿದೆ. ಇವತ್ತು ಭಾರತ ಗೂಗಲ್, ಫೇಸ್ಬುಕ್, ಟ್ವಿಟರ್ ಗಳನ್ನು ಬಳಸುವುದನ್ನು ನಿಲ್ಲಿಸಿತು ಅಂದರೆ ಆ ಕಂಪನಿಗಳು ಒಂದು ತಿಂಗಳು ಕೂಡ ಬದುಕುಳಿಯುವುದು ಕಷ್ಟ. ಇಂಟರ್ನೆಟ್ ದರ ಕಡಿಮೆಯಾದಾಗಿನಿಂದ ಭಾರತದಲ್ಲಿ ಪ್ರಿಂಟ್ ಮೀಡಿಯಾ, ಸಿನೇಮಾ, ಟಿವಿ ಎಲ್ಲವೂ ಮೊಬೈಲ್ ನಲ್ಲೇ ಸೇರಿ ಹೋಗಿದೆ. ಎಲ್ಲೇ ನೋಡಿದರು ಜನರು ಮೊಬೈಲ್ ಮನರಂಜನೆಯ ದಾಸರಾಗಿದ್ದಾರೆ.  ಇದಕ್ಕಾಗಿಯೇ ಜಗತ್ತಿನ ಅತೀ ದೊಡ್ಡ ಟೆಕ್ನಾಲಜಿ ಕಂಪನಿಗಳಾದ ಆ್ಯಪಲ್‌, ಅಮೇಜಾನ್, ಯು-ಟ್ಯೂಬ್, ನೆಟ್ ಫ್ಲಿಕ್ಸ್ ಎಲ್ಲವೂ ಭಾರತವನ್ನು ಟಾರ್ಗೆಟ್ ಮಾಡಿರುವುದು. ಈ ಲೇಖನ ಓದುತ್ತಿರುವವರಲ್ಲಿ 50% ಓದುಗರು ನೆಟ್ ಫ್ಲಿಕ್ಸ್ ಬಳಸುತ್ತಿದ್ದೀರಿ, 30% ಓದುಗರು ಅಮೇಜಾನ್ ಪ್ರೈಂ ಬಳಸುತ್ತಿದ್ದೀರಿ. ಈ ಸಂಖ್ಯೆ ಇನ್ನೂ ಹೆಚ್ಚಲಿದೆ. ಇವತ್ತು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವುದು ಅಂದರೆ ಡಿಜಿಟಲ್ ಮಾರ್ಕೆಟಿಂಗ್. ಉದಾಹರಣೆಗೆ ಒಂದು ಪೇಪರಿನ ಮುಖಪುಟದಲ್ಲಿ ಜಾಹೀರಾತು ಕೊಡಲು ಎಷ್ಟು ಖರ್ಚಾಗುತ್ತದೆಯೋ ಅದರ ಹತ್ತರಲ್ಲಿ ಒಂದು ಭಾಗ ಇಲೆಕ್ಟ್ರಾನಿಕ್ ಜಾಹಿರಾತಿಗೆ ಸಾಕು. ಇನ್ನು ಪ್ರಿಂಟ್ ಮೀಡಿಯಾಗಿಂತ ನೂರು ಪಟ್ಟು ಹೆಚ್ಚು ಜನರನ್ನು ರೀಚ್ ಆಗುವುದು ಅದರ ಖಾಸ್ ಬಾತ್! ಮುಂದಿನ ಐದು ವರ್ಷಗಳಲ್ಲಿ ಟಿವಿ, ಪ್ರಿಂಟ್ ಇವೆಲ್ಲ 10 -15% ದಷ್ಟು ಬೆಳವಣಿಗೆ ಕಂಡರೆ ಡಿಜಿಟಲ್ ಎಡ್ವರ್ಟೈಸ್ಮೆಂಟ್ 30% ದಷ್ಟು ಬೆಳೆಯಲಿದೆ. ದಿನದಿಂದ ದಿನಕ್ಕೆ ಭಾರತ ಬೆಳೆಯುತ್ತಿದೆ ಅದರ ಜೊತೆ ಜನರ ‘ತಲಾ ಆದಾಯ’ ಕೂಡ ಹೆಚ್ಚುತ್ತಿದೆ. ಆದಾಯ ಹೆಚ್ವಿದಂತೆ ವೆಚ್ಚವೂ ಹೆಚ್ಚುತ್ತದೆ. ವೆಚ್ಚದಲ್ಲಿ ಮನರಂಜನೆ ಕೂಡ ಪರಿಗಣಿಸಬೇಕಾದ ಅಂಶ. ನೀರು, ಗಾಳಿ, ಆಹಾರ ಹೇಗೆಯೋ ಹಾಗೆ ಮನುಷ್ಯನಿಗೆ ಮನರಂಜನೆ ಕೂಡ ಅಷ್ಟೇ ಮುಖ್ಯ. ಇಂದು ನೆಟ್ ಫ್ಲಿಕ್ಸ್ ತರಹದ ಕಂಪನಿಗಳು ಭಾರತದಲ್ಲಿ ಹೇರಳವಾಗಿ ಹೂಡಿಕೆ ಮಾಡುತ್ತಿರಲು ಇದೇ ಕಾರಣ. ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತವು ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಉತ್ಕೃಷ್ಟತೆಯನ್ನು ತಲುಪಿದೆ. ಅಮೇರಿಕಾದಲ್ಲಿ ಬಾಹುಬಲಿ ಸಿನೇಮಾ ನೋಡುತ್ತಾರೆ, ಭಾರತದಲ್ಲಿ ನೆಟ್ ಫ್ಲಿಕ್ಸ್ ಮೂಲಕ ಇಂಗ್ಲೀಷ್ ಸಿರಿಯಲ್‌ ವೀಕ್ಷಿಸುತ್ತಾರೆ, ಬ್ರೆಜಿಲ್ ತನಕ ದೆಹಲಿಯ ನ್ಯೂಸ್ ತಲಪುತ್ತದೆ, ಚೀನಾದ ಕಂಪನಿಗಳು ಭಾರತದ ಪತ್ರಿಕೆಗಳ ತುಂಬಾ ಜಾಹೀರಾತು ಪ್ರಕಟಿಸುತ್ತವೆ, ಎಲ್ಲರ ಕೈಲಿ ಮೊಬೈಲ್ ಇದೆ ಇನ್ನೇನು ಬೇಕು. ಭಾರತ ನಿರೀಕ್ಷೆಗೆ ಮೀರಿ ಸಾಧಿಸಿದೆ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!