ಅಂಕಣ ಸ್ಪ್ಯಾನಿಷ್ ಗಾದೆಗಳು

ಬರಿ ಕೈಗಿಂತ ಹಿತ್ತಾಳೆ ಕಡಗ ವಾಸಿ

ಬದುಕಲ್ಲಿ ನಾವು ಬಯಸಿದ್ದೆಲ್ಲಾ ಖಂಡಿತ ಸಿಗುವುದಿಲ್ಲ. ಹಾಗೆಂದು ನಿರಾಶರಾಗಬೇಕಿಲ್ಲ. ಬದುಕಿನ ನಿಯಮವೇ ಅದು. ಬಯಸಿದ್ದೆಲ್ಲ ಸಿಕ್ಕರೆ ಅದಕ್ಕೆ ನಾವು ಕೊಡುವ ಗೌರವ ಕೂಡ ಕಡಿಮೆಯಾಗುತ್ತದೆ. ಕೊನೆಗೂ ಬದುಕೆಂದರೆ ಪ್ರಯತ್ನವಷ್ಟೆ. ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರಬೇಕು, ನಾವು ಅಂದು ಕೊಂಡದ್ದ ಮಾಡಲು ಸದಾ ಶ್ರಮಿಸುತ್ತಿರಬೇಕು. ಆ ದಾರಿಯಲ್ಲಿ ಹಲವು ಬಾರಿ ನಿರೀಕ್ಷಿತ ಫಲಿತ ದೊರೆಯದೆ ಹೋಗಬಹುದು; ಆದರೂ ಪೂರ್ಣವಾಗಿ ಸೋಲುವುದಕ್ಕಿಂತ ಇನ್ನೊಂದು ಪ್ರಯತ್ನ ಮಾಡುವಷ್ಟು ಸಫಲತೆ ನಮ್ಮದಾದರೆ, ಅದು ಕೂಡ ಒಂದರ್ಥದಲ್ಲಿ ಗೆಲುವೇ. ಇದನ್ನೇ ನಮ್ಮ ಹಿರಿಯರು ಸೂಕ್ಷ್ಮವಾಗಿ ಬರಿ ಕೈಗಿಂತ ಹಿತ್ತಾಳೆ ಕಡಗ ವಾಸಿ ಎಂದರು.

ನಮ್ಮ ಹಿರಿಯರ ಚಿಂತನೆ ಅದೆಷ್ಟು ವಿಶಾಲವಾಗಿತ್ತು ಎನ್ನುವುದನ್ನು ಈ ಗಾದೆ ಮಾತು ತಿಳಿಸಿಕೊಡುತ್ತದೆ. ಗಮನಿಸಿ, ನಿಮಗೆ ಕೈಗೆ ಬಂಗಾರದ ಕಡಗ (ಬಳೆ) ಹಾಕಬೇನ್ನುವ ಆಸೆ ಇರುತ್ತದೆ. ಕಾರಣವೇನೇ ಇರಲಿ, ನಿಮಗೆ ಬಂಗಾರದ ಕಡಗ ಹಾಕಲು ಅಥವಾ ಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಹಿತ್ತಾಳೆ ಕಡಗ ಕೊಳ್ಳುವ ಶಕ್ತಿ ನಿಮ್ಮಲಿದೆ. ಹಾಗಿದ್ದಾಗ ಖಾಲಿ ಕೈಯಲ್ಲಿ ಭಣ ಭಣ ಎನ್ನುವಂತೆ ಓಡಾಡುವುದಕ್ಕಿಂತ ಹಿತ್ತಾಳೆಯೇ ಸರಿ. ಕೈಯಂತೂ ಖಾಲಿ ಇರುವುದಿಲ್ಲವಲ್ಲ?

ನಮ್ಮ ಪೂರ್ವಜರು ಮಾರ್ಕೆಟಿಂಗ್ ಕಲಿಯಲಿಲ್ಲ, ಎಂಬಿಎ ಆಗ ಇರಲಿಲ್ಲ, ಬಿಸಿನೆಸ್, ಸ್ಟ್ರಾಟರ್ಜಿ ಮುಂತಾದುವುದು ಇರಲಿಲ್ಲ. ಆದರೇನು ಬದುಕಲು ಏನು ಬೇಕು, ಅಷ್ಟು ಸಾಮಾನ್ಯ ಜ್ಞಾನ ಮಾತ್ರ ಅವರಲ್ಲಿ ಹೇರಳವಾಗಿತ್ತು. ಪ್ಲಾನ್ ಎ ಕೈ ಕೊಟ್ಟರೆ ಪ್ಲಾನ್ ಬಿ  ರೆಡಿಯಾಗಬೇಕು ಅಂತ. ಪ್ಲಾನ್ ಎ ಮೊದಲ ಆದ್ಯತೆ ನಿಜ, ಆದರೆ ಅದು ಸಾಧ್ಯವಾಗದೆ ಹೋದರೆ ನೆಕ್ಸ್ಟ್ ಬೆಸ್ಟ್ ಯಾವುದು? ಅದನ್ನ ಮಾಡೋಣ ಅನ್ನುವುದು ಇಂದಿನ ಮ್ಯಾನೇಜ್ಮೆಂಟ್ ಗುರುಗಳು ಹೇಳುವ ಮಾತಲ್ಲವೇ? ಇದನ್ನ ನಮ್ಮ ಹಿರೀಕರು ಸಾವಿರಾರು ವರ್ಷಗಳ ಹಿಂದೆಯೇ ಬದುಕೆಂಬ ಪಾಠ ಶಾಲೆಯಲ್ಲಿ ಕಲಿತು, ಅದನ್ನು ಮುಂದಿನ ಜನಾಂಗಕ್ಕೂ ಗಾದೆಗಳ ಮತ್ತು ಆಡುಮಾತಿನ ರೂಪದಲ್ಲಿ ಬಿಟ್ಟು ಹೋಗಿದ್ದಾರೆ. ಅದನ್ನು ಸಾವಧಾನವಾಗಿ ಅರ್ಥೈಸಿಕೊಂಡು ಇಂದಿನ ಬದುಕಿಗೆ ಬೇಕಾದಂತೆ ಮಾರ್ಪಡಿಸಿಕೊಂಡು ಬದುಕಿದರೆ ಬದುಕು ನಿಜಕ್ಕೂ ಸುಂದರ.

ಇದನ್ನು ಸ್ಪಾನಿಷ್ ಜನತೆಯ ಪೂರ್ವಜರು ‘Algo es algo; menos es nada’ (ಅಲ್ಗೊ ಈಸ್ ಅಲ್ಗೊ ಮೆನೋಸ್ ಈಸ್ ನಾದ) ಎಂದರು. ಏನು ಇಲ್ಲ ಎನ್ನುವುದಕ್ಕಿಂತ ಸ್ವಲ್ಪವಾದರೂ ಇದೆ, ಎನ್ನುವುದು ಎಷ್ಟೋ ವಾಸಿ ಎನ್ನುವುದು ಗಾದೆಯ ಅರ್ಥ. ಬೆಳಿಗ್ಗೆ ಎದ್ದು ಆಹಾರ ಅರಸಿ ಹೊರಟವರು ಬರಿಕೈಲಿ ಏನೂ ಸಿಗಲಿಲ್ಲ ಎಂದು ಬರುವುದಕ್ಕಿಂತ ಕೈಲಿ ಒಂದು ಪುಟ್ಟ ಹಣ್ಣು ಹಿಡಿದು ಬಂದರೂ ಸಾಕು. ಅದು ಏನೂ ಇಲ್ಲ ಎನ್ನುವ ನೆಗಟಿವ್ ಅರ್ಥ ಕೊಡುವುದಿಲ್ಲ, ಸಿಕ್ಕಿದೆ ಆದರೆ ನಾವು ಎಣಿಕೆ ಮಾಡಿದಷ್ಟು ಸಿಕ್ಕಿಲ್ಲ ಎನ್ನುವುದರ ಮೂಲಕ ಮರಳಿ ಯತ್ನ ಮಾಡುವುದಕ್ಕೆ ಬೇಕಾಗುವ ಒಂದು ಪಾಸಿಟಿವ್ ಮನಸ್ಥಿತಿ ನೀಡುತ್ತದೆ. ಏನೂ ಇಲ್ಲ ಎನ್ನುವುದು ಋಣಾತ್ಮಕ. ಸ್ವಲ್ಪವಿದೆ ಎನ್ನುವುದು ಧನಾತ್ಮಕ. ಇವೆರೆಡರ ನಡುವಿನ ಅಂತರ ಬದುಕನ್ನು ಬದಲಿಸಬಲ್ಲದು.

ಇದನ್ನೇ ನಮ್ಮ ಇಂಗ್ಲಿಷ್ ಭಾಷಿಕರು ‘Half a loaf is better than no bread’ ಎಂದರು. ಅರ್ಥ ಮಾತ್ರ ಸೇಮ್. ದೇಶ ಭಾಷೆ ಗಡಿಗಳ ಮೀರಿ ಜಗತ್ತಿನ ತುಂಬೆಲ್ಲಾ ತುಂಬಿದ್ದ ಬದುಕಿನ ಬಗ್ಗೆಯ ಆಸಕ್ತಿ, ಪ್ರೀತಿ, ಕಾಳಜಿ ಗಾದೆಮಾತುಗಳಲ್ಲಿ ಅನುರಣಿಸುತ್ತದೆ. ಇವತ್ತಿಗೂ ನಮ್ಮ ಬೆಸೆಯುವ ವಿಷಯಗಳು ಹೆಚ್ಚಿವೆ. ಆದರೂ ನಮ್ಮ ನಡುವೆ ಕಂದಕ ಸೃಷ್ಟಿಸುವ ವಿಷಯಗಳೇ ಏಕೆ ಹೆಚ್ಚು ಸದ್ದು ಮಾಡುತ್ತವೆ? ನಿಮಗಿರುವ ಒತ್ತಡ, ಕೆಲಸಗಳ ನಡುವೆ, ಒಮ್ಮೆ ಅರೆಗಳಿಗೆ ಕಣ್ಣು ಮುಚ್ಚಿ ಯೋಚಿಸಿ ನೋಡಿ. ಬದಲಾಗಿರುವುದು ಕಾಲವೋ? ಅಥವಾ ನಾವೋ? ಉತ್ತರ ಸಿಕ್ಕರೆ, ಅದು ಇಂಗ್ಲಿಷರು ಹೇಳುವಂತೆ `Something is better than nothing’. ಇಲ್ಲವೇ ಇಲ್ಲ ಎನ್ನುವುದಕ್ಕಿಂತ ಏನೊ ಇದೆ ಎನ್ನುವುದು ನೆಮ್ಮದಿ ಕೊಡುವ ವಿಚಾರ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

Algo es algo:  ಸಂಥಿಂಗ್, ಏನೋ, ಏನು  ಎನ್ನುವ ನಿಖರತೆಗಿಂತ ಏನೋ ಇದೆ ಎನ್ನುವುದು ಮುಖ್ಯ, ಎನ್ನುವ ಅರ್ಥ ಕೊಡುತ್ತದೆ. ಅಲ್ಗೊ ಈಸ್ ಅಲ್ಗೊ ಎನ್ನುವುದು ಉಚ್ಚಾರಣೆ.

menos es nada: ಕಡಿಮೆ ಎನ್ನುವುದು ಇಲ್ಲದಕ್ಕೆ ಸಮ ಎನ್ನುವ ಅರ್ಥ ಕೊಡುತ್ತದೆ. ಆದರೆ ಗಾದೆ ಮಾತನ್ನ ಪೂರ್ಣವಾಗಿ ನೋಡಿದಾಗ ಏನೋ ಇಲ್ಲ ಎನ್ನುವುದಕ್ಕಿಂತ ಏನೋ (ಅಲ್ಪಸ್ವಲ್ಪವಾದರೂ, ಸಂಥಿಂಗ್ ಎನ್ನುವ ಅರ್ಥದಲ್ಲಿ) ಇದೆ, ಎನ್ನುವುದು ವಾಸಿ ಎನ್ನುವ ಅರ್ಥ ಕೊಡುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!