ತುಕ್ಕು ಹಿಡಿದ ನಗುವನ್ನೂ ಬಚ್ಚಿಟ್ಟಿರುವೆನು
ಉಜ್ಜಿ ಹೊಸದಾಗಿಸಲಾಗದು
ಇರುವುದನ್ನಾದರೂ ಉಳಿಸಿಕೊಳ್ಳಬೇಕಿದೆ;
ಬಿತ್ತಿ ಬೆಳೆಸಲಾಗುವುದಿಲ್ಲ
ಇರುವುದನ್ನೇ ಜೋಪಾನಮಾಡಿಕೊಳ್ಳಬೇಕಿದೆ.
ಒಳಗೊಳಗೇ ನಕ್ಕು ಖುಷಿಯಾಗಿದ್ದರೂ
ಸಹಿಸುವುದಿಲ್ಲ ಈ ಜನ,
ತಿರುಗಿ ಕೊಡುವುದಂತೂ ಇಲ್ಲ
ಕಂಡರೆ ಕದಿಯಲು ಹಾತೊರೆಯುತ್ತಾರೆ.
ತಲೆಯೆತ್ತಿ ನೋಡಲೂ ಸಮಯವಿಲ್ಲ
ಈ ಜನರಿಗೆ,
ನೋಡಿದರೆ ಬಿಡುವುದಿಲ್ಲ
ಗುಜರಿಯ ಗಂಟನ್ನೂ ಜಾಲಾಡುತ್ತಾರೆ
ನಗುವಿನ ಚೂರಾದರೂ ಸಿಗುವುದೆಂಬ ಆಶೆಯಲ್ಲಿ.
ನಗುವಿನ ತುಣುಕುಗಳು ಆಗಾಗ ಬರುತ್ತವೆ
ಮೊಬೈಲ್ ಸಂದೇಶಗಳಲ್ಲಿ
ಆದರೇನು?
ಅವು ನಮ್ಮವಾಗುವುದಿಲ್ಲ.
ಪ್ರಾಣಿಗಳು ನಗಲು ಬಾರದೆಯೂ
ಖುಷಿಯಾಗಿರುತ್ತವೆ,
ನನ್ನ ತುಕ್ಕು ಹಿಡಿದ ನಗು ನನ್ನನ್ನೇ ಹೀಯಾಳಿಸುತ್ತದೆ.
–ಶ್ರೀಕಲಾ ಹೆಗಡೆ ಕಂಬ್ಳಿಸರ