ಅಂಕಣ ಸ್ಪ್ಯಾನಿಷ್ ಗಾದೆಗಳು

ಮುಳ್ಳಿಲ್ಲದ ಗುಲಾಬಿ ಉಂಟೆ? 

ಬದುಕೆಂದರೆ ಅದೊಂದು ಸುಖ-ದುಃಖದ ಮಿಶ್ರಣ. ಸುಖದ ಮಹತ್ತ್ವ ತಿಳಿಯಲು ದುಃಖದ ಆವಶ್ಯಕತೆಯಿದೆ. ದುಃಖವೇ ಇರದಿದ್ದರೆ ಸುಖಕ್ಕೆ ಅರ್ಥವೇ ಇರುತ್ತಿರಲಿಲ್ಲ. ಜನ ಸುಖವನ್ನ ಬಯಸುತ್ತಲೂ ಇರಲಿಲ್ಲ. ಆ ಮಟ್ಟಿಗೆ ಸುಖದ ಆಸ್ವಾದನೆಗೆ, ಸುಖದ ಮಹತ್ತ್ವದ ಅರಿವು ಸಿಗಲಾದರೂ ಒಂದಷ್ಟು ದುಃಖ ಬದುಕಿಗೆ ಬೇಕು. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಚಿನ್ನ. ಪೂರ್ಣ ಚಿನ್ನದಿಂದ  ಆಭರಣ ಮಾಡಲು ಸಾಧ್ಯವಿಲ್ಲ. ಅದಕ್ಕೆ ಒಂದಷ್ಟು ಅಂಶದ ಇತರ ಲೋಹದ ಬೆರಕೆ ಮಾಡಲೇಬೇಕು. ಆಗಲೇ ಅದು ಆಭರಣ ಮಾಡಲು ಯೋಗ್ಯ ಚಿನ್ನವೆನ್ನಿಸಿಕೊಳ್ಳುತ್ತದೆ. ಹಾಗೆಯೇ ಪೂರ್ಣಸುಖದ ಜೀವನ ಕೂಡ ಉತ್ತಮ ಜೀವನ ನಡೆಸಲು ಸಹಕಾರಿಯಾಗುವುದಿಲ್ಲ. ನಾವು ಯುಗಾದಿ ಹಬ್ಬವನ್ನು ಆಚರಿಸುತ್ತೇವೆ. ಅಲ್ಲಿ ನಾವು ಬದುಕಿನ ಏಳು-ಬೀಳುಗಳ ಸಮಚಿತ್ತದಿಂದ ಸ್ವೀಕರಿಸಬೇಕು ಎನ್ನುವುದನ್ನ ಸಾಂಕೇತಿಕವಾಗಿ ಬೇವು-ಬೆಲ್ಲ ತಿನ್ನುವುದರ ಮೂಲಕ ಆಚರಿಸುತ್ತೇವೆ. ಬದುಕೆಂದರೆ ಎಲ್ಲವೂ ಸಿಹಿಯಾಗಿರುವುದಿಲ್ಲ; ಅಲ್ಲಿ ಕಹಿಯೂ ಇರುತ್ತದೆ ಎನ್ನುವುದು ಸಾರ. ಸುಖದ ಹಿಂದೆ ನೆರಳಿನಂತೆ ದುಃಖವೂ, ದುಃಖದ ಹಿಂದೆ ಸುಖವೂ ಹಿಂಬಾಲಿಸುತ್ತಲೇ ಇರುತ್ತದೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಈ ಸಾರ್ವಕಾಲಿಕ ಸತ್ಯವನ್ನ ನಮ್ಮ ಹಿರಿಯರು ‘ಮುಳ್ಳಿಲ್ಲದ ಗುಲಾಬಿ ಉಂಟೆ?’ ಎಂದರು. ಗುಲಾಬಿ ಕೀಳುವಾಗ ಬದಿಯಲ್ಲೇ ಇರುವ ಮುಳ್ಳು ತಾಗಿ ನೋವಾಗುವುದು ಎಷ್ಟು ಸಹಜವೋ, ಬದುಕಿನಲ್ಲಿ ಸುಖದ ಅನ್ವೇಷಣೆಯಲ್ಲಿ ದುಃಖವೂ ಅಷ್ಟೇ ಸಹಜ. ಸುಖ-ದುಃಖ ಎರಡೂ ಒಂದನ್ನ ಇನ್ನೊಂದು ಬಿಟ್ಟಿರಲಾರದ ಗುಲಾಬಿ ಮತ್ತು ಮುಳ್ಳಿನಂತೆ. ಒಂದನ್ನ ಬಯಸಿದರೆ ಇನ್ನೊಂದು ಹಿಂದೆಯೇ ಹುಡುಕಿಕೊಂಡು ಬರುತ್ತದೆ ಎನ್ನುವುದನ್ನ ನಮ್ಮ ಹಿರಿಯರು ಮಾರ್ಮಿಕವಾಗಿ ಹೇಳಿದ್ದಾರೆ.
ಭಾಷೆ ಕಲಿಯುತ್ತಾ  ಹೋದಂತೆ, ನಾವೆಲ್ಲ ಒಂದೇ ಎನ್ನುವ ಭಾವನೆ ಹೆಚ್ಚಾಗುತ್ತಾ ಹೋಗುತ್ತದೆ. ನಮ್ಮ ಆಡುಮಾತುಗಳು, ಗಾದೆಗಳು ಇನ್ನೊಂದು ಭಾಷೆಯ ಗಾದೆಗಳಿಗೆ ಎಷ್ಟೊಂದು ಸನಿಹವಾಗಿವೆ ಎನ್ನುವುದು ಅಚ್ಚರಿಯ ಜೊತೆಗೆ ಇವೆರಡನ್ನೂ ಬೆಸೆಯುವ ಭಾಗ್ಯ ಭಗವಂತ ಕೊಟ್ಟನಲ್ಲ ಎನ್ನುವ ಖುಷಿಯೂ ಹುಟ್ಟುತ್ತದೆ. ಇರಲಿ, ಈ ಆಡುಮಾತನ್ನ ಸ್ಪಾನಿಷ್ ಜನರು ‘No hay rosa sin espinas’  ( ನೊ ಹಾಯ್ ರೋಸ ಸಿನ್ ಎಸ್ಪಿನಾಸ್ ) ಎಂದರು. ಮುಳ್ಳಿಲ್ಲದ ಗುಲಾಬಿಯಿಲ್ಲ ಎನ್ನುವುದು ಯಥಾವತ್ತು ಅನುವಾದ.
ಸುಖ ಎನ್ನುವುದು ಎಂದಿಗೂ ಪೂರ್ಣವಲ್ಲ, ಜೊತೆಜೊತೆಯಲ್ಲೇ ದುಃಖ ನಮ್ಮ ಹಿಂದೆಯೇ ಇರುತ್ತದೆ. ಗುಲಾಬಿ ಜೊತೆಯಲ್ಲಿನ ಮುಳ್ಳಿನಂತೆ, ಸುಖ-ದುಃಖ ಒಂದೇ ನಾಣ್ಯದ ಎರಡು ಮುಖಗಳು  ಎನ್ನುವುದು ಗಾದೆಯ ನಿಜವಾದ ಒಳಾರ್ಥ .
ಮೆಕ್ಸಿಕೋ ದೇಶದಲ್ಲಿ ಸಹ ಸ್ಪ್ಯಾನಿಷ್ ಭಾಷೆ ಮಾತನಾಡುತ್ತಾರೆ, ಅಲ್ಲಿ ‘Nunca falta un pelo en la sopa’ (ನುಂಕ ಫಾಲ್ತಾ  ಉನ್  ಫೆಲೊ ಇನ್ ಲ ಸೊಪ ) ಅಂದರೆ ಸೂಪಿನಲ್ಲಿ ಸದಾ ಒಂದು ಕೂದಲು ಇದ್ದೆ ಇರುತ್ತೆ ಎಂದರ್ಥ. ಒಳಾರ್ಥ ಮಾತ್ರ ಸೇಮ್! ಬಾಯಿ ಚಪ್ಪರಿಸುವ ಸೂಪು  ಇದ್ದರೂ, ಅದರಲ್ಲಿ ಸಿಕ್ಕ ಕೂದಲು ಹೇಗೆ ಪೂರ್ಣ ಆಸ್ವಾದನೆಗೆ ಕಲ್ಲು ಹಾಕುತ್ತೋ; ಹಾಗೆ ಬದುಕಲ್ಲಿ ಕೂಡ ಪೂರ್ಣ ಸುಖ, ಸಂತೋಷ ಎನ್ನುವುದಿಲ್ಲ.  ಬದುಕು ಕಷ್ಟ ಸುಖಗಳ ಮಿಶ್ರಣ ಎನ್ನುವುದನ್ನ ಸಾರುವುದೇ ಇಲ್ಲಿಯ ಉದ್ದೇಶ ಕೂಡ .
ಇದನ್ನೇ ನಮ್ಮ ಇಂಗ್ಲಿಷ್ ಭಾಷಿಕರು,  `Every rose has its thorn’ ಎಂದು ಮತ್ತು  ‘Happiness is never quite perfect. There’ll always be some trouble or displeasure’ ಎನ್ನುವ ಮಾತುಗಳನ್ನ ಬಳಸುತ್ತಾರೆ. ಭಾಷೆ ಬೇರೆಯಾದರೇನು ಭಾವವೊಂದೇ.
ಬೇವು ಬೇಡ, ಬೆಲ್ಲ ಸಾಕು ಎನ್ನುವ ಇಂದಿನ ಯುವಜನರ ಮನಸ್ಥಿತಿ ಸಮತೋಲನವಿಲ್ಲದ್ದು. ಸಮತೋಲನವಿಲ್ಲದ ಜೀವನ ಆಸ್ವಾದಿಸುವುದಾದರೂ ಹೇಗೆ ? ಈ ಸತ್ಯವ ಅರಿತಷ್ಟು ನಮಗೆ ಒಳ್ಳೆಯದು .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ: 
No hay: ಹಾಯ್ ಎಂದರೆ ಇದೆ ಎಂದರ್ಥ. ನೊ ಹಾಯ್ ಎಂದರೆ ಇಲ್ಲ ಎನ್ನುವ ಆರ್ಥ ನೀಡುತ್ತದೆ. ನೊ ಹಾಯ್ ಎನ್ನುವುದು ಉಚ್ಚಾರಣೆ. 
rosa: ರೋಸ್ , ಗುಲಾಬಿ ಎನ್ನುವ ಅರ್ಥ. ರೋಸ ಎನ್ನುವುದು ಉಚ್ಚಾರಣೆ. 
sin: ವಿಥ್ ಔಟ್, ಇಲ್ಲದ ಎನ್ನುವ ಅರ್ಥ. ಸಿನ್ ಎನ್ನುವುದು ಉಚ್ಚಾರಣೆ. 
espinas: ಮುಳ್ಳು, ಚುಚ್ಚಲು, ನೋವು ಮಾಡಲು ಬಳಸುವ ಮೊನಚಾದ ಕಡ್ಡಿ ಎನ್ನುವ ಅರ್ಥ ಕೊಡುತ್ತದೆ. ಎಸ್ಪಿನಾಸ್ ಎನ್ನುವುದು ಉಚ್ಚಾರಣೆ. 

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!