ಅಂಕಣ ಸ್ಪ್ಯಾನಿಷ್ ಗಾದೆಗಳು

ಮರಳಿ ಯತ್ನವ ಮಾಡು ನೀ ಮನುಜ 

ಬದುಕು ಹರಿಯುವ ನೀರಿನಂತೆ ಇರಬೇಕು. ನಿಂತ ನೀರಿನಲ್ಲಿ ಕ್ರಿಮಿಗಳು ಜನಿಸಲು ಶುರುವಾಗುತ್ತವೆ, ವಾಸನೆ ಬೀರಲು ಕೂಡ ಪ್ರಾರಂಭವಾಗುತ್ತದೆ. ಹರಿಯುವ ನೀರಿನಲ್ಲಿ ಈ ಸಮಸ್ಯೆಗಳು ಇರುವುದಿಲ್ಲ. ಬದುಕೆಂದರೆ ಸದಾ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಕೂಡ ಬರುವುದಿಲ್ಲ. ಸಹಜವಾಗೇ ಏಳುಬೀಳುಗಳು ಇದ್ದೆ ಇರುತ್ತವೆ. ಸೋಲು ಮತ್ತು ಗೆಲುವು ಒಂದರ ಹಿಂದೆ ಇನ್ನೊಂದು ಸಜ್ಜಾಗಿ ನಿಂತಿರುತ್ತದೆ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ನಡೆಯುವುದೇ ನಿಜವಾದ ಜೀವನ. ಆದರೇನು ಜಗತ್ತಿನ ೯೫ ಪ್ರತಿಶತ ಜನ ಸೋತಾಗ ಕುಗ್ಗಿ ಹೋಗುತ್ತಾರೆ. ಮುಂದೇನು? ಎನ್ನುವ ಭೀತಿ ಅವರಲ್ಲಿನ ಶಕ್ತಿಯನ್ನ ಕುಗ್ಗಿಸಿಬಿಡುತ್ತದೆ. ಗೆದ್ದಾಗ ಹಿಂದೆ ಮುಂದೆ ಜೈಕಾರ ಹಾಕುತ್ತಿದ್ದ ಜನರೆಲ್ಲಾ ಸೋತಾಗ ಮಾಯವಾಗಿ ಬಿಡುತ್ತಾರೆ. ಸೋಲು, ನಮ್ಮೊಂದಿಗೆ ನಿಜವಾಗಿಯೂ ಯಾರು ನಿಂತಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಇದೊಂದರ ಜರಡಿ ಹಿಡಿದ ಹಾಗೆ ಟೊಳ್ಳು ಸಂಬಂಧಗಳು ಹಾರಿ ಹೋಗಿ ಗಟ್ಟಿಯಾದವು ಮಾತ್ರ ನಿಲ್ಲುತ್ತವೆ. ಗೆದ್ದಾಗ ಇದ್ದ ಆತ್ಮ ಬಲ ಸೋತಾಗ ಮಂಗಮಾಯವಾಗಿಬಿಡುತ್ತದೆ. ಇದಕ್ಕೆ ಬಹತೇಕರು ಹೊರತಲ್ಲ. ಬಿದ್ದ ನಂತರ ಮತ್ತೆ ಎದ್ದು ಬದುಕು ಕಟ್ಟಿಕೊಳ್ಳುವುದು ಇದೆಯಲ್ಲ ಅದು ನಿಜಕ್ಕೂ ಕಷ್ಟದ ಕೆಲಸ. ಕೆಲವರಿಗೆ ಮೊದಲ ಯತ್ನದಲ್ಲಿ ಜಯ ಸಿಕ್ಕಿರುತ್ತದೆ. ನಂತರ ಸೋಲು ಅವರನ್ನ ಕೆಳೆಗೆ ಬೀಳಿಸಿರುತ್ತದೆ. ಇನ್ನು ಕೆಲವರಿಗೆ ಹತ್ತಾರು ಬಾರಿ ಪ್ರಯತ್ನ ಪಟ್ಟರೂ ಜಯದ ರುಚಿ ಸಿಕ್ಕಿರುವುದಿಲ್ಲ. ಅವರೆಲ್ಲರಿಗೂ ನಮ್ಮ ಹಿರಿಯರು ಹೇಳುವ ಜಯದ ಮಂತ್ರ  ‘ಮರಳಿ  ಯತ್ನವ ಮಾಡು ನೀ ಮನುಜ ಗುರಿ ಮುಟ್ಟುವ ತನಕ, ಇರುವುದೊಂದು ಬದುಕು ಬಿಡಬೇಡ ಗೆಲ್ಲುವ ತವಕ.’

ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ನೀವು ಕೈಚೆಲ್ಲಿ ಕೂರುವವರೆಗೆ ಸೋಲು ಸೋಲೇ ಅಲ್ಲ, ಸಾಕು ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ನೀವು ನಿರ್ಧರಿಸಿದ ಮರುಕ್ಷಣದಿಂದ ಅದು ಸೋಲು. ನಮ್ಮಲ್ಲಿ ಹುರಿಯಾಳುಗಳ ಮನೋಸ್ಥೈರ್ಯ ಹೆಚ್ಚಿಸಲು ‘ಸೋಲೇ ಗೆಲುವಿನ ಸೋಪಾನ’ ಎನ್ನುವ ನಾಣ್ನುಡಿಯನ್ನ ಕೂಡ ಬಳಸುತ್ತೇವೆ. ಒಟ್ಟಿನಲ್ಲಿ ಬಿಡದೆ ಮರಳಿ ಪ್ರಯತ್ನವ ಮಾಡಿದರೆ ಗೆಲುವು ಶತಸಿದ್ಧ ಎನ್ನುವುದು ನಮ್ಮಲ್ಲಿರುವ ನಂಬಿಕೆ.

ಸ್ಪಾನಿಷ್ ಜನರಲ್ಲಿ ಕೂಡ ಇದೆ ನಂಬಿಕೆ ಬೇರೂರಿದೆ. ಅವರು ಹೇಳುತ್ತಾರೆ ‘El que la sigue la consigue’ (ಎಲ್ ಕೆ ಲ ಸೀಗೆ ಲ ಕೋನ್ಸಿಗೆ ). ಅಂದರೆ ಯಾರು ಬಿಡದೆ ಹಿಂಬಾಲಿಸುತ್ತಾರೆ ಅವರಿಗೆ ಅವರು ಬಯಸಿದ್ದು ಸಿಗುತ್ತದೆ  ಎಂದರ್ಥ.  ಅದೆಷ್ಟು ನಿಜ ನೋಡಿ, ಬಿಡದೆ ಯಾವುದರ ಹಿಂದೆ ತಪ್ಪಸ್ಸಿನಂತೆ ಏಕಚಿತ್ತದಿಂದ ಬೀಳುತ್ತೇವೆಯೋ ಅದು ನಮಗೆ ದಕ್ಕಿಯೇ ತಿರುತ್ತದೆ. ಬದುಕಿನಲ್ಲಿ ಮೊದಲ ಹೆಜ್ಜೆ, ಏನು ಬೇಕು ಎನ್ನುವುದರ ನಿಖರ ಅರಿವು, ಎರಡನೆಯದು ಬಿಡದೆ ಅದರ ಕಾರ್ಯಸಾಧನೆಯೆಡೆಗೆ ನಡೆಯುವುದು. ಇಷ್ಟಾದರೆ ಸಾಕು ಜಯವು ನಮ್ಮದೆ. ಇಂದಿಗೂ ಸ್ಪಾನಿಷ್ ಜನರ ಆಡು ಮಾತಿನಲ್ಲಿ ಈ ಗಾದೆ ಜೀವಂತವಾಗಿದೆ. ಇಂದಿನ ದಿನದಲ್ಲಿ ಶಾಲೆಯಿಂದ ಮತ್ತು ಕಾಲೇಜ್ ನಿಂದ ನಪಾಸಾಗಿಯೋ ಅಥವಾ ಬೇರಾವುದೋ ಕಾರಣಕ್ಕೆ ಹೊರಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಮಕ್ಕಳಿಗೆ ಕನಿಷ್ಠ ಪದವಿಯನ್ನಾದರೂ ಮುಗಿಸಿ, ಹಿಡಿದ ಕಾರ್ಯ ಅರ್ಧಕ್ಕೆ ಬಿಡುವುದು ಒಳ್ಳೆಯದಲ್ಲ, ಇವತ್ತು ಬಿಡದೆ ಮುಂದುವರಿಸಿದರೆ ನಾಳಿನ ನಿಮ್ಮ ಭವಿಷ್ಯಕ್ಕೆ ಒಳ್ಳೆಯದು ಎನ್ನುವ ಅರ್ಥ ಬರುವಂತೆ ಅವರಿಗೆ ಬುದ್ದಿ ಹೇಳಲು ಈ ಗಾದೆ ಮಾತನ್ನ ಬಳಸುತ್ತಾರೆ.

ಇನ್ನು ಇಂಗ್ಲೀಷ್ ಭಾಷಿಕರು, ‘If at first you don’t succeed, try, and try again’ ಎಂದು ಮತ್ತು `Winner will never quit and quitter will never win’ ಎನ್ನುವ ಮಾತುಗಳನ್ನ ಹೇಳುತ್ತಾರೆ. ಇವೆಲ್ಲುವುಗಳ ಅರ್ಥ ಮಾತ್ರ ಒಂದೇ. ಬಿಡದೆ ಛಲದಿಂದ ಪ್ರಯತ್ನಿಸಿದರೆ ನಾವು ಬಯಸಿದ್ದು ನಮಗೆ ಸಿಗುತ್ತದೆ ಎನ್ನುವುದು ಸಾರ.

ಇದೊಂದು ,ಅತ್ಯಂತ ಸತ್ಯವಾದ ಮತ್ತು ಬದುಕಿಗೆ ಹತ್ತಿರವಾದ ಮಾತು ನನ್ನ ಮಟ್ಟಿಗೆ, ಏಕೆಂದರೆ ೨೩ ಹರೆಯದಲ್ಲಿ ಸ್ಪೇನ್ ದೇಶ ಸೇರಿದಾಗ ಸ್ಪಾನಿಷ್ ಭಾಷೆಯ ಅ, ಆ, ಇ, ಈ ತಿಳಿಯದ ನನಗೆ ಆ ದೇಶ ಬಿಟ್ಟು ಭಾರತಕ್ಕೆ ಓಡಿ ಬರುವ ಬಯಕೆ ಒಂದಲ್ಲ ಹತ್ತು ಸಾರಿ ಮನದಲ್ಲಿ ಸುಳಿದು ಹೋಗುತ್ತಿತ್ತು. ಮನಸ್ಸು ಗಟ್ಟಿಮಾಡಿ ಪ್ರಯತ್ನಪಟ್ಟು ಸ್ಪಾನಿಷ್ ಭಾಷೆ ಕಲಿತದ್ದು; ಬದುಕು ಹಸನಾಗಿಸಿತು. ಎಲ್ಲಕ್ಕೂ ಹೆಚ್ಚಾಗಿ ಎರಡು ದೇಶದ ಸಂಸೃತಿಯ ಜೋಡಿಸಲು ಕೊಂಡಿಯಾಗುವ ಭಾಗ್ಯ ನನ್ನದಾಯಿತು .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

El que: ಸಾಮಾನ್ಯವಾಗಿ ಸ್ಪ್ಯಾನಿಷ್ ಭಾಷೆಯಲ್ಲಿ ಎಲ್ ಕೆ ಎಂದರೆ  ವಾಟ್ ಅಥವಾ ಏನು? ಎನ್ನುವ ಅರ್ಥ ಕೊಡುತ್ತದೆ. ಆದರೆ ಇಲ್ಲಿನ ಸಂದರ್ಭದಲ್ಲಿ ಯಾರು ಎನ್ನುವ ಅರ್ಥ ಕೊಡುತ್ತದೆ. ಎಲ್ ಕೆ ಎನ್ನುವುದು ಉಚ್ಚಾರಣೆ.

la sigue: ಹಿಂಬಾಲಿಸು, ಫಾಲೋ ಎನ್ನುವ ಅರ್ಥ ಕೊಡುತ್ತದೆ. ಲ ಸೀಗೆ ಎನ್ನುವುದು ಉಚ್ಚಾರಣೆ.

la consigue.: ಪಡೆಯುತ್ತಾರೆ. ಪಡೆಯುವುದು. ಟು ಗೆಟ್ ಎನ್ನುವ ಅರ್ಥ ಕೊಡುತ್ತದೆ. ಲ ಕೋನ್ಸಿಗೆ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!