ಅಂಕಣ ಸ್ಪ್ಯಾನಿಷ್ ಗಾದೆಗಳು

ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ

ಈವತ್ತು ನಮ್ಮ ಬದುಕು, ನಮ್ಮ ಹಿರಿಯರು ಬದುಕಿದ ರೀತಿಗಿಂತ ಬಹಳ ಭಿನ್ನವಾಗಿದೆ. ಅವರು ವಿಷಯ ಯಾವುದೇ ಇರಲಿ ಅದನ್ನು ಸಲೀಸಾಗಿ ತೆಗೆದುಕೊಳ್ಳುತ್ತಿರಲಿಲ್ಲ. ವಿಷಯ ಸಾಧನೆ ಆಗುವವರೆಗೆ ಗೆದ್ದೆವೆಂದು ಬೀಗುತ್ತಿರಲಿಲ್ಲ. ಸಮಾಜದಲ್ಲಿ ಎಂದಿನಿಂದಲೂ ಒಂದಷ್ಟು ಸಂಖ್ಯೆಯ ಜನ ಕೆಲಸ ಆಗುವುದಕ್ಕೆ ಮುಂಚೆಯೇ ವಿಜಯಿಯಾದಂತೆ ಮರೆದಾಡುವವರು ಇದ್ದರು. ಅಂತವರನ್ನು ಕುರಿತು ಗೆಲುವಿಗೆ ಮುಂಚೆಯೆ ಗೆಲುವನ್ನು ಆಚರಿಸುವುದು ತರವಲ್ಲ ಎಂದು ಹೇಳುವುದಕ್ಕೆ ಮಗು ಹುಟ್ಟುವ ಮುಂಚೆಯೇ ಅದಕ್ಕೆ ಬಟ್ಟೆ ಸಿದ್ಧಪಡಿಸಿದಂತಿದೆ ಎನ್ನುವ ಮಾತನ್ನು ಹೇಳಲು ಶುರು ಮಾಡಿದರು. ಇದಕ್ಕೆ ಪೂರಕವಾಗಿ ಒಂದು ಕಥೆಯಿದೆ. ಒಂದೂರಿನಲ್ಲಿ ಒಬ್ಬ ಭಿಕ್ಷುಕನಿದ್ದ, ಆತ ಊರೆಲ್ಲಾ ಅಲೆದು ಎರಡು ಸೇರು ರಾಗಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿದ. ಮಧ್ಯಾಹ್ನದ ಹೊತ್ತು ಮಲಗಿ ಆ ರಾಗಿಯನ್ನ ಮಾರಿ ಒಂದು ಕೋಳಿ ಕೊಂಡಂತೆ; ಒಂದು ಹತ್ತಾದಂತೆ ಅದನ್ನ ಮಾರಿ ಹಸು ಕೊಂಡಂತೆ.. ಹೀಗೆ ಕೊನೆಗೆ ಇಡೀ ಊರೇ ಅವನದಾತನಂತೆ ಕನಸು ಕಾಣುತ್ತ ಖುಷಿಯಲ್ಲಿ ಕಾಲು ಜಾಡಿಸಿ ಕಷ್ಟಪಟ್ಟು ಸಂಗ್ರಹಿಸಿದ್ದ ರಾಗಿ ಮಣ್ಣು ಪಾಲಾಗುತ್ತದೆ,  ಎನ್ನುವಲ್ಲಿಗೆ ಆ ಕಥೆ ಮುಗಿಯುತ್ತದೆ. ನಾವೇನಾದರೂ ಬಯಸಿದಂತೆ ಆಗಬೇಕಿದ್ದರೆ ಅದಕ್ಕೆ ಕಷ್ಟಪಡಬೇಕು ಹೊರತು, ಹಗಲು ಕನಸು ಕಾಣುವುದು, ಅಥವಾ ಪ್ರಾರಂಭದಲ್ಲೇ ಗೆಲುವು ಸಿಕ್ಕಿತ್ತೆಂದು ಬೀಗುವುದರಿಂದ ಕೊನೆಗೆ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ.

ನಮ್ಮ ಹಿರಿಯರು ಮುಂಚಿತವಾಗಿ ಸಂಭ್ರಮಿಸುವುದನ್ನ ಎಂದೂ ಬೆಂಬಲಿಸಿದವರಲ್ಲ. ತಾಳ್ಮೆಯಿಂದ ಕಾದು ನಿಜಕ್ಕೂ ಗೆದ್ದವೆಂದ ಮೇಲೆ ಅರೆಕ್ಷಣ ಅದನ್ನ ಅನುಭವಿಸಲು ಬೇಡವೆನ್ನುತ್ತಿರಲಿಲ್ಲ. ಅದರಲ್ಲೂ ಅತಿಯಾದ ಸಂಭ್ರಮ, ಆಚರಣೆಗೆ ಕೂಡ ಅವರ ಸಮ್ಮತ ಇರುತ್ತಿರಲಿಲ್ಲ. ಈಗೇನಾಗಿದೆ ನೋಡಿ ಎಲ್ಲವೂ ಉಲ್ಟಾ. ಮಾರುಕಟ್ಟೆಯಲ್ಲಿ ನಿನ್ನೆ ಮೊನ್ನೆ ಶುರುವಾದ ಕಂಪೆನಿಗಳನ್ನ ಅತ್ಯಂತ ಶ್ರೇಷ್ಠ ಮತ್ತು ಯಶಸ್ವಿ ಕಂಪನಿಗಳು ಎಂದು ಬಿಂಬಿಸಲಾಗುತ್ತದೆ. ನಂತರದ್ದು ಬೇರೆಯದೇ ಕಥೆ. ಇರಲಿ. ಇದು ಸಂಸ್ಥೆಗೆ ಸೀಮಿತವಾಗಿ ಉಳಿದಿಲ್ಲ. ಇಂದು ಎಲ್ಲರೂ ತಮ್ಮ ತಮ್ಮ ಸಾಧನೆ, ಯಶಸ್ಸನ್ನ ಹಿಗ್ಗಿಸಿ ಬಿಂಬಿಸಿಕೊಳ್ಳುವುದರಲ್ಲಿ ಮಗ್ನರು.

ನಮ್ಮ ಮನೋವೈದ್ಯರು ಜಯಗಳಿಸಿದಂತೆ ಕನಸು ಕಾಣಲು ಹೇಳುತ್ತಾರೆ. ಜಯಸಿಕ್ಕ ನಂತರದ ಹಾವಭಾವ ತಮ್ಮದಾಗಿಸಿಕೊಳ್ಳಿ. ನೀವೇನಾಗಬೇಕು ಅದನ್ನ ಕಲ್ಪಿಸಿಕೊಳ್ಳಿ, ಅದರಂತೆ ನಿತ್ಯವೂ ನಿಮ್ಮ ನಡೆಯಿರಲಿ ಎನ್ನುತ್ತಾರೆ. ಇವೆಲ್ಲಾ ಏನು ಬಯಸಿದ್ದಿರೋ ಅದು ಆಗುವುದಕ್ಕೆ ಮುಂಚಿನ ಕಥೆ. ಇದಕ್ಕೆ ಇವರಿಟ್ಟ ಹೆಸರು ಪ್ರೊ- ಆಕ್ಟಿವ್. ಅಂದರೆ ಆಗುವುದಕ್ಕೆ ಮುಂಚೆಯೆ ನೀವು ಅದಕ್ಕೆ ಪ್ರತಿಕ್ರಿಯಿಸುವುದು. ಎಕ್ಸಾಮ್ ಪಾಸಾದಂತೆ ಆ ಖುಷಿಯನ್ನ ಸ್ನೇಹಿತರ ಜೊತೆಗೂಡಿ ಆಚರಿಸಿದಂತೆ ಇತ್ಯಾದಿ. ನಮ್ಮ ಹಿರಿಯರಿಗೂ, ಇಂದಿನ ಪೀಳಿಗೆಗೂ ಇರುವ ದೊಡ್ಡ ವ್ಯತ್ಯಾಸ ಇದು. ಗೆಲುವಿಗೆ ಮುಂಚೆ ಗೆಲುವನ್ನ ಸಂಭ್ರಮಿಸುವುದು ಇರಲಿ, ಗೆದ್ದ ನಂತರ ಸಿಕ್ಕಾಪಟ್ಟೆ ಬೀಗುವುದನ್ನ ಕೂಡ ಅವರು ಬೇಡವೆನ್ನುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಬಹಳಷ್ಟು ದೇಶದಲ್ಲಿ ಹುಟ್ಟುವ ಮಗು ಹೆಣ್ಣೋ ಗಂಡೋ ಎಂದು ಕೂಡ ಹೇಳಿರುತ್ತಾರೆ. ಮಗು ಹುಟ್ಟುವುದಕ್ಕೆ ಮುಂಚೆ ಅದಕ್ಕೆ ಡಜನ್ ಗಟ್ಟಲೆ ಬಟ್ಟೆ ತಂದು ಮಗುವಿಗೆ ಎಂದು ಕಾದಿರಿಸಿದ ಕೋಣೆಯಲ್ಲಿ ಇಟ್ಟಿರುತ್ತಾರೆ.

ಇದನ್ನೇ ಅಂದಿನ  ಸ್ಪಾನಿಷ್ ಜನ  ‘No vendas la piel del oso antes de cazarlo’ ( ನೊ ವೆಂದಾಸ್ ಲ ಪಿಯಲ್ ದೆಲ್ ಓಸೋ ಅಂತೆಸ್ ದೆ ಕಸರ್ಲೊ) ಎಂದರು. ಕರಡಿಯ ಬೇಟೆಯಾಡುವ ಮುನ್ನವೇ ಅದರ ಚರ್ಮವನ್ನ ಮಾರಬೇಡ ಎನ್ನುವುದು ಯಥಾವತ್ತು ಅನುವಾದ. ಇದರ ಮೂಲಾರ್ಥ ಕೂಡ ಯಥಾವತ್ತು ಅನುವಾದಕ್ಕಿಂತ ಭಿನ್ನವೇನಲ್ಲ. ಅಂದಿನ ದಿನಗಳಲ್ಲಿ ನಮ್ಮೆಲ್ಲಾ ಹಿರಿಯರ ಭಾವನೆಗಳು ಅದೆಷ್ಟು ಹೊಂದುತ್ತಿದ್ದವು. ಸೂಕ್ಷ್ಮವಾಗಿ ಗಮನಿಸಿ ಇಲ್ಲಿಯೂ ಅವರು ಹೇಳುವುದು ಕೆಲಸವಾಗುವುದಕ್ಕೆ ಮುಂಚೆ ಆಯಿತೆಂದು ಹೇಳಿಕೊಂಡು ತಿರುಗಬೇಡ  ಎನ್ನುವುದೇ ಆಗಿದೆ. ಮೊದಲು ಬೇಟೆ, ಅದರಲ್ಲಿ ಗೆಲುವು ಸಿಕ್ಕ ನಂತರವಷ್ಟೆ ಕರಡಿಯ ಚರ್ಮ ಮಾರಲು ಸಾಧ್ಯ ಅಲ್ಲವೇ?

ಇನ್ನು ಇಂಗ್ಲಿಷ್ ಭಾಷಿಕರು ‘Don’t sell the bear’s hide before you hunt it’  ಎಂದರು.  ಜೊತೆಗೆ ‘Don’t count your chickens before they hatch’ ಎಂದು ಕೂಡ ಹೇಳುತ್ತಾರೆ. ಅಂದರೆ ಮೊಟ್ಟೆ ಒಡೆಯುವ ಮುನ್ನವೇ ಕೋಳಿ ಎಷ್ಟೆಂದು ಲೆಕ್ಕ ಹಾಕಬೇಡ ಎನ್ನುವ ಅರ್ಥ. ಎಲ್ಲಾ ಮೊಟ್ಟೆಗಳು ಮರಿಯಾಗುತ್ತವೆಯೇ? ಹಾಗೆಯೇ ಕೈಹಿಡಿದ ಎಲ್ಲ ಕೆಲಸದಲ್ಲೂ ಜಯ ಸಿಗುತ್ತದೆ ಎನ್ನುವಂತಿಲ್ಲ. ಹೀಗಾಗಿ ಜಯ ಸಿಗುವುದಕ್ಕೆ ಮುಂಚೆ ಅದರ ಬಗ್ಗೆ ಮಾತನಾಡುವುದು ಕೂಡ ತಪ್ಪೆನ್ನುವಂತಿತ್ತು ಅಂದಿನ ಸಮಾಜ.

ವಸ್ತು ವಿಷಯ ಯಾವುದೇ ಇರಲಿ ಎಲ್ಲವನ್ನೂ ಪ್ರಶ್ನಿಸುವ, ಹಳೆಯದೆಲ್ಲವೂ ಔಟ್ ಡೇಟೆಡ್ ಎನ್ನುವ ಮಾನಸಿಕ ಸ್ಥಿತಿಯ ಇಂದಿನ ಕಾಲಘಟ್ಟದಲ್ಲಿ, ಅಂದಿನ ಗಾದೆಯಂತೆ ನಡೆಯಿರಿ ಎಂದು ಹೇಳುವ ಮನೋಬಲ ಇಂದಿನ ಹಿರಿಯರು ಕಳೆದುಕೊಂಡಿದ್ದಾರೆ. ಹೇಳಿದರೂ ಕೇಳದೆ ನನ್ನ ಜೀವನ, ಇರುವುದೊಂದು ಜೀವನ ನನ್ನಿಚ್ಛೆಯಂತೆ ಬದುಕುವೆ ಎನ್ನುವ ಯುವಜನೆತೆಗೆ, ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’, ‘ತುತ್ತು ತಲೆ ಸುತ್ತ ಮೂರು ಸುತ್ತು ಸುತ್ತಿದರೂ ಬಾಯಿಗೆ ಇಡಬೇಕು’ ಎಂದು ಹೇಳುವ ದಾಷ್ಟಿಕತೆ  ಬೆಳೆಸಿಕೊಳ್ಳುವ ಆವಶ್ಯಕತೆ ಹೆಚ್ಚಾಗಿದೆ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:

No vendas: ಮಾರಬೇಡ, ಡೋಂಟ್ ಸೆಲ್ ಎನ್ನುವ ಅರ್ಥ. ನೊ ವೆಂದಾಸ್ ಎನ್ನುವುದು ಉಚ್ಚಾರಣೆ.

la piel: ಚರ್ಮ. ಸ್ಕಿನ್ ಎನ್ನುವ ಅರ್ಥ. ಲ ಪಿಯಲ್ ಎನ್ನುವುದು ಉಚ್ಚಾರಣೆ.

del oso: ಕರಡಿ, ಕರಡಿಯ ಎನ್ನುವ ಅರ್ಥ. ದೆಲ್ ಓಸೋ ಎನ್ನುವುದು ಉಚ್ಚಾರಣೆ.

antes: ಮುಂಚೆ, ಮುಂಚಿತವಾಗಿ, ಮೊದಲೇ ಎನ್ನುವ ಅರ್ಥ. ಅಂತೆಸ್ ಎನ್ನುವುದು ಉಚ್ಚಾರಣೆ.

de cazarlo: ಬೇಟೆ, ಬೇಟೆಗೆ ಎನ್ನುವ ಅರ್ಥ ಕೊಡುತ್ತದೆ. ದೆ ಕಸರ್ಲೊ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!