ಅಂಕಣ

ಏರೆಗಾವುಯೆ ಈ ಕಿರಿ ಕಿರಿ!

ಮಳೆಗಾಲ ಎಂದ ಮೇಲೆ ಮಳೆ ಬರಲೇಬೇಕು. ರಸ್ತೆಯ ‘ಇಂಗು’ಗುಂಡಿಗಳಲ್ಲಿ ನೀರು ತುಂಬಿರುತ್ತದೆ. ಆದರೆ ಈ ವಾಹನ ಚಾಲಕರಿಗೆ ಈ ರಸ್ತೆಯ ಮೇಲೆ ನಿಂತಿರುವ ನೀರು ಕಾಣುವುದಿಲ್ಲವೆಂದು ತೋರುತ್ತದೆ ಅಥವಾ ಆ ನೀರನ್ನು ಕಾಣುವಾಗ ವೇಗವನ್ನು ಹೆಚ್ಚಿಸುವ ಮನಸ್ಸಾಗುತ್ತದೆಯೋ ಏನೋ. ಇದರಿಂದ ಅವಸ್ಥೆ ಅನುಭವಿಸುತ್ತಿರುವವರು ಮಾತ್ರ ದಾರಿಹೋಕರು.

ಬೆಳಂಬೆಳಗ್ಗೆ ಬಟ್ಟೆಗಳಿಗೆಲ್ಲಾ ಚೆನ್ನಾಗಿ ಇಸ್ತ್ರಿ ಮಾಡಿ ನೀಟಾಗಿ ಮನೆಯಿಂದ ಹೊರಟ ಕೂಡಲೇ ವರುಣದೇವ ನಮ್ಮ ಜೊತೆಯಾಗುವುದು ನಿಯಮ. ರಸ್ತೆಗಿಳಿದ ಮೇಲಂತೂ ದಾರಿ ನೋಡಿಕೊಂಡು ನಡೆಯುವುದಾ ಅಥವಾ ಈ ವಾಹನಗಳ ಎರೆಚುವ ಕೆಸರಿನ ಹೋಳಿಯಿಂದ ತಪ್ಪಿಸಿಕೊಂಡು ನಡೆಯುವುದಾ ಎಂಬ ಗೊಂದಲ, ಏರೆಗಾವುಯೆ ಈ ಕಿರಿಕಿರಿ ಎಂಬ ಮಾತು ತುಟಿಯಮೇಲೆ ಬಾರದಿದ್ದರೆ ಹೇಳಿ.

ಶುಭ್ರವಾದ ಈ ಸಮವಸ್ತ್ರಗಳನ್ನು ಮಳೆಗೆ ಒದ್ದೆಯಾದರೆ ಹೇಗಾದರೂ ಸ್ವಲ್ಪ ಹೊತ್ತಿನಲ್ಲಿ ಒಣಗುತ್ತದೆ. ಮುಂಜಾನೆಯೇ ಈ ಕೆಸರೆರೆಚಾಟಕ್ಕೆ ಒಳಗಾದರೆ ಮುಂದೆ ಸಾಗುವುದೊ ಅಥವಾ ಹಿಂತಿರುಗಿ ಮನೆಗೆ ನಡೆಯುವುದೋ ಎಂಬ ಯಕ್ಷಪ್ರಶ್ನೆ ಎದುರಾಗುವುದು ಸಹಜ. ಆಫೀಸಿಗೆ ಹೋಗುವ ಮಂದಿ ಹೇಗಾದರೂ ಸಂಭಾಳಿಸುತ್ತಾರೆ. ಈ ಶಾಲಾ-ಕಾಲೇಜಿಗೆ ಹೋಗುವವರ ಪಾಡೇನು ಸ್ವಾಮಿ? ಅಕಸ್ಮಾತ್ ಆ ವಾಹನ ಚಾಲಕರೇ ಪಾದಾಚಾರಿಗಳಾಗಿದ್ದರೆ, ಅವರಂತೆಯೆ ಇನ್ನೊಬ್ಬ ವಾಹನ ಚಾಲಕ ಅವರ ಮೇಲೆ ಕೆಸರು ಎರೆಚಿಕೊಂಡು ಹೋಗಿದ್ದರೆ, ಅವರು ಚಾಲಕನ ಮೇಲೆ ಹರಿಹಾಯದೇ ಉಳಿಯುತ್ತಿದ್ದರೇ. ಅವರು ಚಾಲಕನ ಸ್ಥಾನದಲ್ಲಿರುವಾಗ ಪಾದಾಚಾರಿಗಳ ಚಿಂತೆ ಯಾಕೆ ಬರುತ್ತದೆ.

ಉದ್ಯೋಗಸ್ಥರಾದವರಿಗಾದರು ಪರವಾಗಿಲ್ಲ. ಅವರನ್ನು ಕಂಡ ನಂತರ ಗೌರವದಿಂದ ಸ್ವಲ್ಪ ಜಾಗರೂಕತೆಯಿಂದ ವಾಹನ ಓಡಿಸುವವರಿದ್ದಾರೆ. ಹಾಗೆಯೆ ‘ಸಮವಸ್ತ್ರ’ ಕಂಡಕೂಡಲೇ ಅದೇನೋ ಮೈಮೇಲೆ ಬಂದಂತೆ ಬೇಕಾಗಿಯೇ ಕೆಸರು ಎರಚಿ, ‘ಸಂತ್ರಸ್ತರ’ ಪಾಡನ್ನು ನೋಡಿ ಸಂತಸಪಟ್ಟುಕೊಂಡು ಹೋಗುವವರಿಗೇನೂ ಕಡಿಮೆಯಿಲ್ಲ.

ಅವಸರ ಎಲ್ಲರಿಗೂ ಇರುತ್ತದೆ. ಆಂಬ್ಯುಲೆನ್ಸ್ ಚಾಲಕರೆ ಎಷ್ಟೇ ತುರ್ತಿದ್ದರೂ ನಾಗರಿಕರಿಗೆ ಹಾನಿಯಾಗದಂತೆ ಹೋಗುತ್ತಾರೆ. ಅವರಿಗಿಂತಲೂ ಗಡಿಬಿಡಿಯಾಗಿ ಚಲಾಯಿಸುವ ಅವಶ್ಯಕತೆ ಇವರಿಗೇನಿದೆ. ಎಲ್ಲಾ ಚಾಲಕರೂ ಹೀಗೇ ಮಾಡುತ್ತಾರೆಂದಲ್ಲ. ಕೆಲವರಿಗೆ ಕೆಲವು ಸಂದರ್ಭದಲ್ಲಿ ಹೀಗೆ ಕೆಸರಿನ ಹೋಳಿಯಾಡುವ ಮನಸ್ಸಾಗುತ್ತದೆ. ಇನ್ನು ಕೆಲವರಿಗೆ ಇದೇ ಮನೋರಂಜನೆ ಮಳೆಗಾಲದಲ್ಲಿ. ಆ ಪಾದಾಚಾರಿಗೂ ಅದೇನೋ ಅಗತ್ಯದ ಅವಸರದ ಕೆಲಸವಿದ್ದಿರ ಬಹುದೆಂದು ಇವರ ಪ್ರಜ್ಞಾವಲಯಕ್ಕೆ ಬರುವುದಿಲ್ಲವೇನೋ.

ಒಂದೊಂದು ಬಾರಿ ಅರಿವಿಲ್ಲದೇ ಹೀಗಾಗುತ್ತದೆ ಎನ್ನೋಣ. ಓಕೆ. ಗೊತ್ತಾದಾಗ ಗಾಡಿ ನಿಲ್ಲಿಸಿ, ಆ ಪಾದಾಚಾರಿಯನ್ನು ವಿಚಾರಿಸಿ ಹೋದರೆ ನಿಮ್ಮ ಗಂಟೇನೂ ಹೋಗುವುದಿಲ್ಲ. ಗೊತ್ತಿದ್ದೂ ಮಾಡುವ ತಪ್ಪಿಗೆ ಕ್ಷಮೆಯಿಲ್ಲ. ನಿಮಗನ್ನಿಸ ಬಹುದು, ಇದಕ್ಕೆ ಯಾವುದೇ ಪನಿಶ್‍ಮೆಂಟ್ ಆಗ್ಲೀ, ಫೈನ್ ಆಗ್ಲೀ ಇಲ್ಲ. ಅಂದಮೇಲೆ ಇದ್ಯಾಕೆ ಅಂತ. ಯಾಕಂದ್ರೆ ನಾವು ಮನುಷ್ಯರು, ಮಾನವೀಯತೆ ಎಂಬುದರ ಒಂದು ಅಂಶವಾದರೂ ನಮ್ಮಲ್ಲಿ ಇರಬೇಕಲ್ವ ಅದಕ್ಕೆ.

ಮೊದಲೇ ಮಳೆಗಾಲ. ಬೀಸುವ ಗಾಳಿಗೆ, ಸುರಿಯುವ ಮಳೆಗೆ ನಮ್ಮನ್ನು ನಾವು ಸಂಭಾಳಿಸಿಕೊಂಡು ಹೋಗುವುದೇ ಕಷ್ಟ. ಇನ್ನು ಈ ಕೆಸರಿನಿಂದ ತಪ್ಪಿಸಿಕೊಂಡು ಹೋಗಬೇಕಂದ್ರೆ ಇರುವುದು ಎರಡೇ ದಾರಿ.

  1. ವಾಹನ ಚಾಲಕರು ಜಾಗೃತೆ ವಹಿಸಬೇಕು. ವೇಗ ಕಡಿಮೆಗೊಳಿಸಬೇಕು
  2. ಸರ್ಕಾರ ಈ ರಸ್ತೆಗಳ ಮೇಲಿರುವ ಇಂಗುಗುಂಡಿಗಳನ್ನು ಮುಚ್ಚಿ, ರಸ್ತೆಯ ಮೇಲೆ ಹರಿಯದಂತೆ ಮಾಡಬೇಕು.

ಇದಕ್ಕೆ ಹೊರತಾಗಿ ಬೇರೇನಾದರೂ ‘ಐಡಿಯಾಗಳು’ ನಿಮ್ಮ ಬಳಿ ಇದ್ದರೆ ದಯವಿಟ್ಟು ವಾಹನ ಚಲಾಯಿಸುವಾಗ ಅನುಸರಿಸಿ, ಪಾದಾಚಾರಿಗಳು ಈ ಕೆಸರಾಟದ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿ.

– ಸೀಮಾ ಪೋನಡ್ಕ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!