ಅಂಕಣ

ನೀರಿಗಿಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?

ಅದು ೨೦೦೩ರ ಡಿಸೆಂಬರ್ ತಿಂಗಳ ಕೊನೆಯ ದಿನ. ವರ್ಷದ ಕೊನೆಯ ದಿನದಂದು ಜಗತ್ತಿನೆಲ್ಲೆಡೆ ವಿವರಿಸಲಾಗದ ಹುಚ್ಚು ಉನ್ಮಾದ. ಜಗತ್ತನ್ನು ಗೆದ್ದೇ ಬಿಟ್ಟೆವು ಎನ್ನುವಂತ ಹುಮ್ಮಸ್ಸು. ಯುವಜನತೆಯಂತೂ ನಾಳೆ ಕಂಡವರಾರು ಎನ್ನುವ ಫಿಲಾಸಫಿ ಯಲ್ಲಿ ನಿತ್ಯ ಬದುಕುವರು. ಇನ್ನು ವರ್ಷದ ಕೊನೆಯ ದಿನ ಅಂದ ಮೇಲೆ ಕೇಳುವುದಿನ್ನೇನು? ೨೦೦೩ರ ವೇಳೆಗೆ ನಾನು ಬಾರ್ಸಿಲೋನಾ ಸೇರಿ ಆಗಲೇ ನಾಲ್ಕು ವರ್ಷ ಕಳೆದಿತ್ತು. ಆದರೂ ಡಿಸೆಂಬರ್ ೩೧ ನನ್ನ ಪಾಲಿಗೆ ವರ್ಷದ ಎಲ್ಲಾ ದಿನದಂತೆ ಇನ್ನೊಂದು ದಿನವಷ್ಟೇ! ರಾತ್ರಿ ೧೦ ಗಂಟೆಗೆ ನಿದ್ರೆ ಮಾಡುವುದು. ೨೦೦೩ರಲ್ಲಿ ಮಾತ್ರ ನನ್ನ ಸ್ಪಾನಿಷ್ ಗೆಳೆಯರ ಒತ್ತಾಯಕ್ಕೆ ಕಟ್ಟು ಬಿದ್ದು ಲಾಸ್ ರಾಂಬ್ಲಾಸ್ ರಸ್ತೆಗೆ ಹೋಗಿದ್ದೆ. ಇದು ಅಮೆರಿಕಾದ ಟೈಮ್ ಸ್ಕ್ವೇರ್ ನಷ್ಟೇ ಪ್ರಸಿದ್ದಿ ಪಡೆದ ಜಾಗ ಬಾರ್ಸಿಲೋನಾದಲ್ಲಿ. ರಸ್ತೆಯಲ್ಲಿ ಅಲ್ಲಲ್ಲಿ ಪುಕ್ಕಟೆ ಬಿಯರ್ ಹಂಚುತ್ತಿದ್ದರು. ಜನ ನಿನ್ನೆ-ನಾಳೆಗಳ ಮರೆತು ಕೇವಲ ಆ ಕ್ಷಣದಲ್ಲಿ ಜೀವಿಸುತ್ತಿರುವರಂತೆ ಕಂಡು ಬರುತ್ತಿದ್ದರು. ನಾನು ಮಾತ್ರ ಪೂರ್ಣವಾಗಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಚಡಪಡಿಸುತ್ತಲೇ ಇದ್ದೆ. ಜೊತೆಗೆ ನಿತ್ಯವೂ ಹತ್ತಕ್ಕೆ ಮುಂಚೆ ಮಲಗಿ ಅಭ್ಯಾಸವಾಗಿದ್ದರಿಂದ ನಿದ್ರಾದೇವಿಯ ಸೆಳೆತ ಕೂಡ ಜೋರಾಗೆ ಇತ್ತು. ನನ್ನ ಗಮನಿಸಿದ ಗೆಳೆಯ ಕಾರ್ಲೋಸ್ “ರಂಗ ‘ನೋ ಥೇ ಪ್ರೊಕ್ಯೂಪೆಸ್( Ya que estamos en el baile, bailemos.)ಯಾ  ಕೆ ಎಸ್ತಮೋಸ್ ಇನ್ ಎಲ್ ಬೈಲೆ , ಬೈಲಾಮೊಸ್’” ಎಂದ. ಅಂದರೆ “ರಂಗ ಚಿಂತಿಸಬೇಡ, ನಾವು ನೃತ್ಯ ಮಾಡಲು ಬಂದಾಗಿದೆ, ನೃತ್ಯ ಮಾಡೋಣ” ಎಂದರ್ಥ. ಅಂದು ನನಗೆ ಮುಂದೊಂದು ದಿನ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಅಂಕಣ ಬರಹ ಬರೆಯುತ್ತೇನೆ ಎನ್ನುವ ಯಾವ ಐಡಿಯಾ ಇರಲಿಲ್ಲ. ನಂತರದ ದಿನಗಳಲ್ಲಿ ನಮ್ಮ ಭಾಷೆ ಸ್ಪಾನಿಷ್ ಭಾಷೆ ನಡುವಿನ ಸಾಮ್ಯತೆಗಳ ನಡುವಿನ ಹುಡುಕಾಟ ಶುರು ಮಾಡಿದ ಮೇಲೆ ಅರಿವಾದದ್ದು ನಾವೆಲ್ಲ ಹೆಸರಿಗಷ್ಟೇ ಬೇರೆ ಬೇರೆ ಮೂಲದಲ್ಲಿ ನಮ್ಮ ಭಾವನೆಯೊಂದೇ ಎಂದು.

‘ಯಾ ಕೆ ಎಸ್ತಮೋಸ್ ಇನ್ ಎಲ್ ಬೈಲೆ, ಬೈಲಾಮೊಸ್’ ಎಂದರೆ ನೃತ್ಯ ಮಾಡಲು ಹೋಗುವ ಮುನ್ನ ಚಿಂತಿಸಬೇಕು ನೃತ್ಯ ಬರುತ್ತದೆಯೇ? ಹೋಗಬೇಕೆ? ಬೇಡವೇ? ಎಂದು. ಒಮ್ಮೆ ನೃತ್ಯ ಮಾಡುವ ಸ್ಥಳ ತಲುಪಿದ ಮೇಲೆ ಚಿಂತಿಸಿ ಫಲವಿಲ್ಲ, ತೋಚಿದ ಹಾಗೆ ಕುಣಿಯುವುದು ಅಥವಾ ಹೆಜ್ಜೆ ಹಾಕುವುದಷ್ಟೇ ಉಳಿದಿರುವುದು ಎನ್ನುವುದು ಗಾದೆಯ ಹೂರಣ.

ಕನ್ನಡದಲ್ಲಿ ಇದಕ್ಕೆ ನೂರಕ್ಕೆ ನೂರು ಹೊಂದುವ ಗಾದೆ ‘ನೀರಿಗಿಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?’ ಎನ್ನುವುದು. ಇಲ್ಲಿಯೂ ಅರ್ಥ ಮಾತ್ರ ಸೇಮ್! ಚಿಂತೆ, ಭಯ, ಸಂಶಯ ಎಲ್ಲವೂ ಕೆಲಸ ಪ್ರಾರಂಭಿಸುವುದಕ್ಕೆ ಮುಂಚೆ ಒಮ್ಮೆ ಕೆಲಸಕ್ಕೆ ಇಳಿದ ಮೇಲೆ ಗೆಲುವು ಸೋಲಿನ ಚಿಂತೆಯೇಕೆ? ಅಥವಾ ಎಷ್ಟು ದೊಡ್ಡ ಕಷ್ಟ ಬಂದರೇನು ಅದನ್ನ ಎದುರಿಸಬೇಕು ಎನ್ನುವುದು ಸಾರ. ನೀರಿಗಿಳಿದ ಮೇಲೆ ಮನುಷ್ಯ ಒದ್ದೆಯಾಗುತ್ತಾನೆ. ಆದ್ದರಿಂದ ಚಳಿ ಆಗೇ ಆಗುತ್ತದೆ . ಆಮೇಲೆ ಹೊಸದಾಗಿ ಮಳೆ ಬಂದರೇನು ಹೊಸ ಸಮಸ್ಯೆ ಸೃಷಿಯಾಗುವುದಿಲ್ಲ. ಹೊಸದಾಗಿ ಬಂದ ಮಳೆಗೆ, ಚಳಿಗೆ ಹೆದರುವ ಆವಶ್ಯಕತೆಯಿಲ್ಲ. ಅವನ್ನು ನಿಂತು ಎದುರಿಸಬೇಕು. ಬದುಕಿನ ಸಂಕಷ್ಟಗಳು ಇವಕ್ಕೆ ಹೊರತಾಗಿಲ್ಲ.

ಇನ್ನು ಇಂಗ್ಲಿಷರು ‘In for a penny, in for a pound’ ಭಾಷೆ ಬೇರೆ .ಭಾವವೊಂದೇ. ಚಿಲ್ಲರೆಯಲ್ಲಿ ಭಾಗಿಯಾದವನು ನೋಟಿನಲ್ಲಿ ಭಾಗಿಯಾಗುವುದಿಲ್ಲವೇ ಎನ್ನುವ ಅರ್ಥ ಕೊಡುತ್ತದೆ. ಒಳಾರ್ಥ ಕನ್ನಡ ಮತ್ತು ಸ್ಪ್ಯಾನಿಷ್ ಗಾದೆಗಿಂತ ಭಿನ್ನವೇನಲ್ಲ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

Ya que estamos : ನಾವಾಗಲೇ ಎನ್ನುವ ಅರ್ಥ. ಯಾ  ಕೆ  ಎಸ್ತಮೋಸ್.

en el baile,: ನೃತ್ಯದಲ್ಲಿ , ನೃತ್ಯ ಮಾಡುವ ಜಾಗದಲ್ಲಿ ಎನ್ನುವ ಅರ್ಥ. ಇನ್ ಎಲ್ ಬೈಲೆ ಎನ್ನುವುದು ಉಚ್ಚಾರಣೆ.

bailemos.  : ನೃತ್ಯ ಮಾಡೋಣ . ಲೆಟ್ಸ್ ಡಾನ್ಸ್ ಎನ್ನುವ ಅರ್ಥ. ಬೈಲಾಮೊಸ್ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!