ಮಟ ಮಟ ಮಧ್ಯಾಹ್ನ, ಸುಡು ಬಿಸಿಲು. ಸೂರ್ಯನ ಬೆಳಕು ಕಾಂಕ್ರೀಟ್ ರಸ್ತೆಗೆ ತಾಕಿ, ಪ್ರತಿಫಲಿಸಿ ಇಡಿ ವಾತಾವರಣವನ್ನು ಬಿಸಿಯಾಗಿಸಿದೆ. ಎಲ್ಲಿಂದಲೋ ಹಾರಿಬಂದ ಗುಬ್ಬಚ್ಚಿಯೊಂದು ತಾನು ತಂದಿದ್ದ ಕಾಳನ್ನು ಮರಿಯ ಬಾಯಿಗೆ ಹಾಕಿತು. ಬೆಳಗ್ಗಿನಿಂದ ಹಸಿವಿನಿಂದ ಒದ್ದಾಡುತ್ತಿದ್ದ ಆ ಮರಿಯು ಗಬಗಬನೇ ಆ ಕಾಳನ್ನು ನುಂಗಿ, ಮತ್ತೆ ಬಾಯ್ತೆರೆದು ನಿಂತಿತು. ತಾಯಿ ಹಕ್ಕಿಯಾದರೂ ಏನು ಮಾಡೀತು? ಇಡೀ ಪಟ್ಟಣದಲ್ಲಿ ಉದ್ಯಾನವನದ ಹೆಸರಿನಲ್ಲಿ ಉಳಿಸಿದ್ದ ಕೇವಲ ನಾಲ್ಕೈದು ಧೂಳು ಹಿಡಿದಿದ್ದ ಮರಗಳಲ್ಲಿ ಒಂದು ಮರವನ್ನಾರಿಸಿ, ಅದು ತನ್ನ ಸಂಗಾತಿಯೊಡಗೂಡಿ ಗೂಡು ಕಟ್ಟಿ ಮೊಟ್ಟೆಯಿಟ್ಟಿತ್ತು. ಇದ್ದ ಮೂರು ಮರಿಗಳಲ್ಲಿ ಎರಡು ಮರಿಗಳು ಹೊಟ್ಟೆಗೆ ಸಾಲದೇ, ನೀರಿಲ್ಲದೇ, ಸತ್ತು ಹೋಗಿದ್ದವು. ಈ ಒಂದು ಮರಿಯನ್ನಾದರೂ ಶತಾಯಗತಾಯ ಬದುಕಿಸಬೇಂದು ಆ ತಾಯಿ ಅದೆಷ್ಟೋ ದೂರ ಹಾರಿ, ಎಲ್ಲಿಂದಲೋ ಹುಡುಕಿ, ನೀರು, ಆಹಾರ ತಂದುಕೊಡುತ್ತಿದ್ದಾಳೆ. ತನ್ನ ಕಷ್ಟಗಳನ್ನು ತೋಡಿಕೊಳ್ಳೋಣವೆಂದರೆ ಜೊತೆಗೆ ಸಂಗಾತಿಗಳಿಲ್ಲ. ಒಂದು ಕಾಲದಲ್ಲಿ ತನ್ನೊಡನೆ ಕೂಡಿ, ಹಾಡಿ, ನಲಿದಿದ್ದ ತನ್ನ ಓರಗೆಯ ಗೆಳತಿಯರೆಲ್ಲಾ ಕಣ್ಣೆದುರೇ ಬಂಜೆಯರಾಗಿ ಸತ್ತು ಹೋದರು. ಕೆಳಗೆ ನೋಡಿದರೆ ಮನುಷ್ಯನೊಬ್ಬ ತನ್ನ ಸಂಗಾತಿಯೊಂದಿಗೆ ಮೊಬೈಲ್ ನಲ್ಲಿ ಅದೇನನ್ನೋ ಪಿಸುಗುಡುತ್ತಿದ್ದಾನೆ. ಮೊಬೈಲ್ ಗೂ ತನಗೂ ಆ ಜನ್ಮ ವೈರ ಎಂದು ತಾಯಿ ಗುಬ್ಬಿ ಮರದಿಂದ ಅದೆಷ್ಟು ಬೊಬ್ಬಿಕ್ಕಿದರೂ, ಅವನಿಗೆ ಕೇಳುತ್ತಿಲ್ಲ.
ತನ್ನ ಕಂದ ಹಸಿವಿನಿಂದ ಒದ್ದಾಡುತ್ತಿರುವುದನ್ನು ಕಂಡು, ತಾಳಲಾರದೇ, ತಿನ್ನಲು ಏನನ್ನಾದರೂ ತರೋಣ ಎಂದು ತಿರುಗುವಷ್ಟರಲ್ಲಿ, ಅಗೋ ಬಂದರಲ್ಲ ಇಬ್ಬರು ಮನುಷ್ಯರು, ಕೈಯಲ್ಲೊಂದು ಗರಗಸ, ಕತ್ತಿಯನ್ನು ಹಿಡಿದುಕೊಂಡು. ಅವರು ಓಡಾಡಲು ಈಗ ಇರುವ ರಸ್ತೆ ಸಾಲುತ್ತಿಲ್ಲವಂತೆ, ಅದನ್ನು ಅಗಲಿಸಲು ಹೊರಟಿದ್ದಾರೆ. ಅವರು ತನ್ನ ಈ ವಾಸದ ಮನೆಯನ್ನು ಕಡಿಯುವುದಕ್ಕಾಗಿಯೇ ಬಂದಿದ್ದಾರೆ ಎಂದು, ಅವರ ಸಂಭಾಷಣೆಯಿಂದ ಆ ತಾಯಿಗೆ ತಿಳಿಯಿತು. ಈಗ ಮಾಡುವದಾದರೂ ಏನು? ಇನ್ನೂ ರೆಕ್ಕೆ ಬಲಿಯದ ಆ ಪುಟ್ಟ ಕಂದಮ್ಮನನ್ನು ರಕ್ಷಿಸುವುದಾದರೂ ಹೇಗೆ? ಕರೆದುಕೊಂಡು ಹೋಗುವುದಾದರೂ ಎಲ್ಲಿಗೆ? ಹೀಗೇ ಯೋಚಿಸುವಷ್ಟರಲ್ಲಿ ಅದಕ್ಕೆ ಭೂಕಂಪವಾದ ಅನುಭವ. ನೋಡ ನೋಡುತ್ತಿದ್ದಂತೆಯೇ ತನ್ನ ಮನೆ ಧರಾಶಾಹಿಯಾಗುತ್ತಿದೆ. ಏನು ಮಾಡಬೇಕೆಂದು ತೋಚದೇ ತಾನು ರೆಕ್ಕೆ ಬಿಚ್ಚಿ ಹಾರಿತು. ತಿರುಗಿ ನೋಡುವಾಗ, ತನ್ನ ಪುಟ್ಟ ಕಂದಮ್ಮ, ಕಷ್ಟಪಟ್ಟು ಬದುಕಿಸಿದ್ದ ಒಂದೇ ಒಂದು ಮಗು, ಬಿದ್ದಿದ್ದ ಕೊಂಬೆಯ ಕೆಳಗೆ ಸಿಕ್ಕು ವಿಲ ವಿಲ ಒದ್ದಾಡುತ್ತಿದೆ. “ಅದನ್ನು ರಕ್ಷಿಸಿ” ಎಂದು ಎಷ್ಟು ಬೊಬ್ಬಿರಿದರೂ ಆ ಮನುಷ್ಯರಿಗೆ ಕೇಳುತ್ತಿಲ್ಲ. ನೋಡ ನೋಡುತ್ತಿದ್ದಂತೆಯೇ ಒಬ್ಬ ಆ ಕಂದನ ಮೇಲೆಯೇ ಕಾಲಿಟ್ಟುಬಿಟ್ಟನಲ್ಲ. ಹೆತ್ತ ಕರುಳು ಹೇಗೆ ತಾನೇ ಸಹಿಸಿಕೊಂಡೀತು! ದು:ಖವನ್ನು ಹೇಳಿಕೊಳ್ಳೋಣವೆಂದರೆ ಯಾರೂ ಜೊತೆಗಾರರಿಲ್ಲ. ಆ ಮಾತೆ, ಜೋರಾಗಿ ರೋಧಿಸತೊಡಗಿದಳು. ಆದರೆ ಆ ಪಟ್ಟಣದ ವಾಹನಗಳ ಗದ್ದಲದ ನಡುವೆ, ಆ ತಾಯಿಯ ಕೂಗು ಯಾರಿಗೆ ತಾನೇ ಕೇಳಿಸೀತು? ಅತ್ತು, ಅತ್ತು ತನಗೆ ತಾನೇ ಸಮಾಧಾನ ಮಾಡಿಕೊಂಡಳು.
ಇನ್ನು ಇಲ್ಲಿದ್ದರೆ ತನಗೂ ಉಳಿಗಾಲವಿಲ್ಲ ಎಂದುಕೊಂಡು, ಪಟ್ಟಣದಿಂದ ದೂರ, ಸದ್ದು ಗದ್ದಲಗಳಿಲ್ಲದ ಹಳ್ಳಿಯನ್ನರಸುತ್ತಾ ಹೊರಟಳು. ಹಾರಿ, ಹಾರಿ ಬಾಯಾರಿದಾಗ, ನೀರು ಕುಡಿಯೋಣ ಎಂದರೆ, ನೀರಾದರೂ ಎಲ್ಲಿದೆ? ಈ ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ, ಅದೆಷ್ಟೋ ಶತಮಾನಗಳ ಕಾಲ, ಅನೇಕ ಪ್ರಾಣಿ, ಪಕ್ಷಿಗಳಿಗೆ, ಕೃಷಿ, ಗದ್ದೆಗಳಿಗೆ ನೀರುಣಿಸುತ್ತಿದ್ದ ಕೆರೆಗಳನ್ನೆಲ್ಲಾ ಮುಚ್ಚಿ, ಅದರ ಮೇಲೆ ಕಟ್ಟಡಗಳಾನ್ನೆಬ್ಬಿಸಿದ್ದಾನಲ್ಲ.
ಕಷ್ಟಪಟ್ಟು ಹಾರಿ, ಹಾರಿ ಸುಸ್ತಾಗಿ, ಹಿಗೆಯೇ ಕೆಳಕ್ಕೆ ನೋಡಿದರೆ, ಎಲ್ಲೆಲ್ಲೂ ಮರ–ಗಿಡ, ಹೊಲ ಗದ್ದೆಗಳು ಕಾಣಿಸುತ್ತಿವೆ. “ಬಹುಶ: ಇದು ಯಾವುದೋ ಹಳ್ಳಿಯೇ ಇರಬೇಕು” ಎಂದು ಮನದಲ್ಲೇ ಸಂತೋಷಪಟ್ಟು, ತನ್ನ ಆಯಾಸ ಪರಿಹಾರಕ್ಕೆ ನೀರಿನ ಸೆಲೆಯನ್ನು ಹುಡುಕಲಾರಂಭಿಸಿತು. ಹಾಗೆಯೇ ಹುಡುಕುತ್ತಾ, ಒಂದು ತೊರೆಯ ಬದಿಗೆ ಬಂದಾಗ ಅದರ ಆನಂದಕ್ಕೆ ಪಾರವೇ ಇರಲಿಲ್ಲ. ಕುಣಿದು ಕುಪ್ಪಳಿಸಿ ತನ್ನ ಕೊಕ್ಕಿನಿಂದ ನೀರಿನ ಹನಿಗಳ ಮುತ್ತನ್ನು ಹೀರಲಾರಭಿಸಿತು. ನೀರು ಕುಡಿಯುವಾಗ, ಅದೇಕೋ ತಲೆ ಸುತ್ತಿದ ಅನುಭವ, ಹಿಗೇ ತಲೆ ಎತ್ತಿ ಮುಂದೆ ನೋಡಿದರೆ, ಅನತಿ ದೂರದಲ್ಲಿ ರೈತನೊಬ್ಬ ತನ್ನ ಹೊಲಕ್ಕೆ ರಾಸಾಯನಿಕ ಸಿಂಪಡಿಸಿದ್ದ ಪಾತ್ರೆಯನ್ನು ನೀರಿನಲ್ಲಿ ತೊಳೆಯುತ್ತಿದ್ದಾನೆ. ಅದಾಗಲೇ ಅಲ್ಪ ಉಳಿದಿದ್ದ ಔಷಧಿಯನ್ನು, ಆ ನೀರಿನಲ್ಲೇ ಚೆಲ್ಲಿದ್ದಾನೆ. ಅಯ್ಯೋ ದುರ್ವಿಧಿಯೇ, ಪಟ್ಟಣದಲ್ಲಿ ತನಗೆ ಉಳಿಗಾಲವಿಲ್ಲವೆಂದು, ಹಳ್ಳಿಯನ್ನರಸುತ್ತಾ ಬಂದರೆ, ಇಲ್ಲೂ ಅದೇ ಕತೆಯಾಯಿತಲ್ಲ! ಹೀಗೆ ಯೋಚಿಸುತ್ತಿರುವಾಗಲೇ, ಅದು ನಿಧಾನಕ್ಕೆ ಧರೆಗೊರಗಿತು. ಕೆಲವೇ ಕ್ಷಣಗಳಲ್ಲಿ ಆ ಪಕ್ಷಿಯ ಪ್ರಾಣ ಪಕ್ಷಿ ಹಾರಿ ಹೊಯಿತು….!
- ವೀರೇಂದ್ರ ನಾಯಕ್, ಚಿತ್ರಬೈಲು
ಚಿತ್ರ: ಪ್ರತೀಕ್ ಪುಂಚತ್ತೋಡಿ