Featured ಅಂಕಣ

ನಾಯಕತ್ವದ ಒಂದು ತೆರೆದ ಪುಸ್ತಕ ನೆಲ್ಸನ್ ಮಂಡೇಲಾ!

ಕಾಲ ಯಾರಿಗೂ ನಿಲ್ಲುವುದಿಲ್ಲ ಎನ್ನುತ್ತಾರೆ. ಆದರೆ ಮಂಡೇಲಾ ಅವರಕಾಲ’ ಒಂದು ಕಾಲದಲ್ಲಿ ನಿಂತೇ ಹೋಗಿತ್ತು. ಬ್ರಿಟಿಷರು ಅವರನ್ನು ಇಪ್ಪತ್ತೇಳು ವರ್ಷಗಳ ಕಾಲ ಜೈಲಿನ ಒಂದು ಚಿಕ್ಕ ಕೋಣೆಯಲ್ಲಿ ಬಂಧಿಯಾಗಿಸಿದ್ದರು. ಒಂದೇ ಜನ್ಮದಲ್ಲಿ ಎರಡು ಬಾರಿ ಜೀವ ತಾಳಿದ ಮಹಾತ್ಮ ನೆಲ್ಸನ್ ಮಂಡೇಲಾ. ಅವರು ಮತ್ತೊಮ್ಮೆ ಜೈಲಿನಿಂದ ಜೀವಂತ ಹೊರಗೆ ಬರುತ್ತಾರೆ, ಎಂದು ದಕ್ಷಿಣ ಆಫ್ರಿಕಾದ ಜನರು ನಿರೀಕ್ಷಿಸಿರಲಿಲ್ಲ. ಜೈಲಿನಲ್ಲಿ ಮಂಡೇಲಾರಿಗೆ ಹೊರಗಿನ ಆಗುಹೋಗುಗಳ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿರಲಿಲ್ಲ. ಒಂದು ಅರ್ಥದಲ್ಲಿ ಹೇಳುವುದಾದರೆ ಅವರ ಜಗತ್ತು ಚಲಿಸುವುದನ್ನೇ ನಿಂತಿತ್ತು ಅಂದುಕೊಳ್ಳಿ. ಆದರೆ ವಾಸ್ತವದಲ್ಲಿ ಜಗತ್ತು ಬಹಳ ವೇಗವಾಗಿ ಓಡುತ್ತಿತ್ತು. ಅವರು ಜೈಲಿನಿಂದ ಹೊರಗಡೆ ಬಂದಾಗ ಅವರು ಕಂಡಿದ್ದ ಜಗತ್ತೇ ಬೇರೆ ಈಗ ನೋಡುತ್ತಿರುವ ಜಗತ್ತೇ ಬೇರೆಯಾಗಿತ್ತು. ಮೂರು ದಶಕದಲ್ಲಿ ಪರಿಸ್ಥಿತಿ ನೂರು ಪಟ್ಟು ಬದಲಾಗಿತ್ತು. ಅವರು ಹಚ್ಚಿ ಹೋಗಿದ್ದ ಸ್ವಾತಂತ್ರ್ಯದ ಕಿಚ್ಚು ಜ್ವಾಲೆಯಾಗಿ ಉರಿಯುತ್ತಿತ್ತು. ಕರಿಯರ ಹಾಗೂ ಬಿಳಿಯರ ನಡುವಿನ ಸಂಘರ್ಷಕ್ಕೆ ಕೊನೆಯೇ ಇರಲಿಲ್ಲ. ಬ್ರಿಟಿಷರ ಎಂದೂ ಮುಳುಗದ ಸಾಮ್ರಾಜ್ಯದ ಪತನವಾದರೂ ಕೂಡ ದಕ್ಷಿಣ ಆಫ್ರಿಕಾದಲ್ಲಿನ ಕರಿಯರಿಗೆ ಮಾನವ ಹಕ್ಕು ಪ್ರಾಪ್ತಿಯಾಗಿರಲಿಲ್ಲ. ಆದರೆ ಅವರು ತಮ್ಮ ಆ ಇಳಿವಯಸ್ಸಿನಲ್ಲೂ ಆಫ್ರಿಕಾದ ಜನರಿಗಾಗಿ ಹೋರಾಡಲು ಸಿದ್ಧರಾಗಿದ್ದರು. ಈ ವರ್ಷ ಇಂತಹ ಮಹಾನ್ ನಾಯಕನೊಬ್ಬ ಜನಿಸಿ ನೂರು ವರ್ಷಗಳಾಗುತ್ತವೆ. ಜಗತ್ತಿಗೇ ಮಾದರಿಯಾದ ನಾಯಕತ್ವ ನೆಲ್ಸನ್ ಮಂಡೇಲಾರದ್ದು. ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟದ ರೆಕ್ಕೆ ಬಡಿದವರು ನೆಲ್ಸನ್ ಮಂಡೇಲಾ. ರಾಜಕೀಯ, ಕೈಗಾರಿಕಾ ಕ್ಷೇತ್ರ, ಸೇವಾ ಸಂಸ್ಥೆಗಳು, ಪತ್ರಿಕೋದ್ಯಮ, ಕ್ರೀಡೆ ಯಾವುದನ್ನೇ ತಗೆದುಕೊಂಡರು ಇಂದು ನಾಯಕತ್ವದ ಕೊರತೆ ಎದ್ದು ಕಾಣುತ್ತದೆ. ಹೀಗಿರುವಾಗ ಇತಿಹಾಸವನ್ನು ಪನರಾವಲೋಕನ ಮಾಡಿ ಮಂಡೇಲಾರವರ ಕೆಲವೊಂದು ಪ್ರಮುಖ ನಾಯಕತ್ವದ ಗುಣಗಳನ್ನು ನಮ್ಮ‌ ಬದುಕಿನಲ್ಲಿ ಯಾಕೆ ಅಳವಡಿಸಿಕೊಳ್ಳಬಾರದು? ನಮ್ಮೆದರು ಇಂದು ದಕ್ಷಿಣ ಆಫ್ರಿಕಾದ ಪರಿಸ್ಥಿತಿ ಇಲ್ಲದೇ ಇರಬಹುದು ಆದರೆ ಏನಾದರೂ ಬದಲಾಯಿಸಬೇಕು ಅಂದರೆ ಅದಕ್ಕೆ ಮಂಡೇಲಾ ಕಲಿಸಿಹೋದ ನಾಯಕತ್ವದ ಪಾಠಗಳು ಸಹಾಯಕ.

ಮಂಡೇಲಾರವರು ನಡೆದಬದಲಾವಣೆಎನ್ನುವ ದಾರಿ ಸುಲಭವಾಗಿರಲಿಲ್ಲ

ಬದಲಾವಣೆ ಎನ್ನುವುದು ಕಲ್ಲು ಮುಳ್ಳುಗಳು ತುಂಬಿರುವ ದಾರಿ. ಅಲ್ಲಿ ನಡೆಯುವುದು ಅದು ಅಷ್ಟೊಂದು ಸರಾಗವಾಗಿದ್ದರೆ ಎಲ್ಲರೂ ನಡೆಯುತ್ತಿದ್ದರು. ಬದಲಾವಣೆಯ ವಿಷಯ ಬಂದಾಗಲೆಲ್ಲ ಪ್ರತಿರೋಧವೇ ಹೆಚ್ಚು. ಶಾಲೆಯಲ್ಲಿನ ಮುಖ್ಯೋಪಾಧ್ಯಾಯರಾಗಲಿ, ಕಂಪನಿಯ ಸಿಇಓ ಆಗಿರಲಿ ನಡೆದು ಬರುತ್ತಿರುವ ಪದ್ಧತಿಯಲ್ಲಿ ಬದಲಾವಣೆ ತರಬೇಕು ಅಂದರೆ ಹರಿಯುತ್ತಿರುವ ಪ್ರವಾಹವನ್ನೇ ಎದುರು ಹಾಕಿಕೊಳ್ಳಬೇಕು. ಅಂತಹ ಪ್ರವಾಹವನ್ನು ಎದುರು ಹಾಕಿಕೊಂಡು ಹೋರಾಡಿದರು ಮಂಡೇಲಾ. ಅವರು ಮನಸ್ಸು ಮಾಡಿದ್ದರೆ ತನ್ನ ಜೊತೆಗಾರನ ಲಾ ಫರ್ಮಿನಲ್ಲಿ ಕೆಲಸ ಮಾಡುತ್ತ ಕೋಟ್ಯಧಿಪತಿಯಾಗಿ ಆರಾಮದಲ್ಲಿ ಜೀವನ ಮಾಡಬಹುದಿತ್ತು ಆದರೆ ಹಾಗೆಂದೂ ಮಾಡಲಿಲ್ಲ. ಕಷ್ಟ-ಇಷ್ಟದ ವಿಷಯವಲ್ಲ, ಇದು ಬದಲಾವಣೆಗೆ ಕಾಲ ಎಂದು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಸಮಾಜದಲ್ಲಿ ಒಂದು ಬದಲಾವಣೆ ತರಬೇಕು, ಎಂದು ಆ ಗುರಿಯ ಹಿಂದೆ ಬಿದ್ದಾಗಿನಿಂದ ಅವರ ವೈಯಕ್ತಿಕ ಜೀವನ, ವ್ಯಾವಹಾರಿಕ ಬದುಕು ಎಲ್ಲವೂ ಸರ್ವನಾಶವಾದವು. ವಕೀಲಿ ವೃತ್ತಿಯಲ್ಲಿ ಬೇಕಾದಷ್ಟು ಗಳಿಸಿ ಅರಮನೆಯಲ್ಲಿ ಇರಬೇಕಾದ ಮಂಡೇಲಾ ಜೈಲಿನ ಪುಟ್ಟ ಕೋಣೆಯಲ್ಲಿ ಕಲ್ಲು ಕೆತ್ತುತ್ತಾ ಜೀವನ ಕಳೆದರು. ಇದೇ ನಾವು ಒಂದು ಬದಲಾವಣೆಯನ್ನು ತರಲು ಪಡಬೇಕಾದ ಕಷ್ಟ. ಇಂದು ನಮ್ಮೆದುರು ಎಷ್ಟು ಜನರು ತಾವು ರಾಜಕೀಯ ಪದ್ಧತಿಯನ್ನು ಬದಲಾಯಿಸುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ, ಬಡವರ ಪರವಾಗಿ ಹೋರಾಡುತ್ತೇವೆ ಎಂದು ಸಾಮಾಜಿಕ ಜೀವನದಲ್ಲಿ ಧುಮುಕುತ್ತಾರೆ. ನಂತರ ಕೆಲವೇ ದಿನಗಳಲ್ಲಿ ವಿರೋಧದ ಪ್ರವಾಹವನ್ನು ಎದುರಿಸಲಾಗದೇ ಎತ್ತಿಕೊಂಡ ಕಾರ್ಯವನ್ನು ಕೈಬಿಡುತ್ತಾರೆ. ಆದರೆ ಮಂಡೇಲಾರವರ ಜೀವನವನ್ನು ಒಮ್ಮೆ ನೋಡಿ, ಎಷ್ಟೇ ಕಷ್ಟಗಳು ಎದುರಾದರೂ ಅವರು ತಮ್ಮ ನೆಲದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಯನ್ನು ತರುವ ತನಕ ಬಿಡಲಿಲ್ಲ. ಈ ತರಹದ ದೃಢ ಹಾಗೂ ಅವಿರತ ಹೋರಾಟಕ್ಕೆ ಊರ್ಜಸ್ವಿತೆ ಎಲ್ಲಿಂದ ಬರುತ್ತದೆ?

ಮಂಡೇಲಾರ ಇಡೀ ಜೀವನವೇ ಒಂದು ಸಂಘರ್ಷ

ಮಂಡೇಲಾರವರ ಜೀವನವನ್ನು ನೋಡಿದಾಗ ಅಲ್ಲಿ ಕಾಣುವುದು ಕೇವಲ ಸಂಘರ್ಷ ಮಾತ್ರ. “The struggle is my life. I will continue fighting for freedom until the end of my days” ಎನ್ನುತ್ತಾರೆ. ಇಂದು ಯಾವುದೇ ರಂಗವಿರಲಿ ನಮ್ಮ ಉದ್ದೇಶ ಏನು ಎನ್ನುವ ಸ್ಪಷ್ಟತೆ ಇರಬೇಕು. ಆ ಸ್ಪಷ್ಟತೆ ನಮ್ಮಲ್ಲಿ ಉತ್ಸಾಹವನ್ನು ತುಂಬುತ್ತದೆ. ನಮ್ಮಲ್ಲಿ ಉತ್ಸಾಹದ ಕಾರಂಜಿಯನ್ನು ಕೊನೆಯ ತನಕ ಜೀವಂತವಾಗಿಡುವುದು ಬಹಳ ಮುಖ್ಯ. ಎಷ್ಟೇ ಕಷ್ಟ ಬರಲಿ ನಮ್ಮಲ್ಲಿರುವ ಉತ್ಸಾಹವು ಎದುರಾದ ಎಲ್ಲ ಅಡೆತಡೆಗಳನ್ನು ಮೀರಿ ಮುನ್ನುಗ್ಗಲು ಸಹಾಯವಾಗುತ್ತದೆ. ಸೋಲು, ಅಪಮಾನ ಇವೆಲ್ಲ ನಮ್ಮ ಆ ಗುರಿಯ ನಡುವೆ ಸಣ್ಣದಾಗುತ್ತಾ ಹೋಗುತ್ತದೆಯೇ ವಿನಃ ಎಂದಿಗೂ ಅದು ನಮ್ಮನ್ನು ತಡೆಯುವುದಿಲ್ಲ. ಕೊನೆ ಮುಟ್ಟುವ ತನಕ ನಿದ್ದೆ ಮಾಡಲು ಬಿಡುವುದಿಲ್ಲ. ಮಂಡೇಲಾ ನಮಗೆ ಕಲಿಸಿರುವ ವಿಷಯ ಎಂದರೆ ನಮ್ಮ‌ ಜೀವನವನ್ನು ಒಂದು ಒಳ್ಳೆಯ ಕೆಲಸದ ಸುತ್ತಲೂ ಕಟ್ಟಬೇಕು ಎನ್ನುವುದು. ನಮ್ಮೆಲ್ಲರ ಜನ್ಮ ಒಂದೊಳ್ಳೆ ಕೆಲಸಕ್ಕೆ ಅಂತಾನೇ ಆಗಿರುವುದು. ಆ ಕಾರ್ಯದ ಅರ್ಥವನ್ನು ಹುಡುಕಿ ಎಷ್ಟು ಆಳಕ್ಕೆ  ನಾವು ಹೋಗುತ್ತೆವೆಯೋ ಅಷ್ಟೇ ಪ್ರಬಲವಾದ ಆಯಸ್ಕಾಂತ ನಾವಾಗುತ್ತೇವೆ. ನಮ್ಮ ಸುತ್ತ ಮುತ್ತಲಿನ ನಮ್ಮದೇ ವಿಚಾರವನ್ನು ಹೊಂದಿರತಕ್ಕಂತ ವ್ಯಕ್ತಿಗಳು, ಸಂಸ್ಥೆಗಳು ನಮ್ಮ ಆ‌ ಪ್ರಬಲವಾದ ಮಾನಸಿಕ ಆಯಸ್ಕಾಂತೀಯ ಶಕ್ತಿಯ ಸೆಳೆತಕ್ಕೆ ಸಿಕ್ಕಿ ನಮ್ಮೆಡೆ ಬರುತ್ತಾರೆ. ನೆಲ್ಸನ್ ಮಂಡೇಲಾ ಜೈಲಿನಲ್ಲಿರುವಾಗ ಅವರ ಮಡದಿ ಅವರ ಪರವಾಗಿ ಹೋರಾಟ ನಡೆಸಿದರು. ಇಡೀ ಜಗತ್ತು ಮಂಡೇಲಾರವರಿಗೆ ಜೈಲಿನಲ್ಲಿ ಕೊಡುತ್ತಿರುವ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಂತಾರಾಷ್ಟ್ರೀಯ ದಿಗ್ಭಂಧನದ ಹೇರಿಕೆ ಹೆಚ್ಚುತ್ತಾ ಹೋಯಿತು. ದೇಶದಲ್ಲಿ ಆಂತರಿಕ ಯುದ್ಧದ ಸನ್ನಿವೇಶ ನಿರ್ಮಾಣವಾಗಿತ್ತು, ಮಂಡೇಲಾರವರನ್ನು ಜೈಲಿನಿಂದ ಹೊರಗಡೆ ಬಿಡದೇ ಆ ದೇಶದ ರಾಷ್ಟ್ರಪತಿಗೆ ಬೇರೆ ಮಾರ್ಗವೇ ಇರಲಿಲ್ಲ. ಮಂಡೇಲಾರನ್ನು ಜೈಲಿನಿಂದ ಹೊರತರಲು ದಕ್ಷಿಣ ಆಫ್ರಿಕಾದ ಬಿಳಿ ನಾಯಕರು ಆ ಮೊದಲು ಪ್ರಯತ್ನ ಪಡಲಿಲ್ಲ ಎನ್ನುವುದಿಲ್ಲ. ಆದರೆ ಪ್ರತಿಬಾರಿಯೂ ಮಂಡೇಲಾರವರ ಮೇಲೆ ಒಂದಲ್ಲಾ ಇನ್ನೊಂದು ಷರತ್ತುಗಳನ್ನು ಹೇರಲಾಗುತ್ತಿತ್ತು. ಮಂಡೇಲಾರವರಿಗೆ ಸ್ವಾತಂತ್ರ್ಯಕ್ಕಿಂತ ಮತ್ತೇನೂ ಬೇಕಾಗಿರಲಿಲ್ಲ. ನಾಯಕತ್ವದ ಹಾದಿಯಲ್ಲಿ ಹಲವಾರು ರೀತಿಯ ಪರೀಕ್ಷೆಗಳು ಎದುರಾಗುತ್ತವೆ. ಅದರಲ್ಲಿ ಒಂದು ‘ಹೊಂದಾಣಿಕೆ’ ಎನ್ನುವುದು. ಇಂದು ರಾಜನಾಗಲು ರಾಜಕಾರಣಿ ಏನು ಬೇಕಾದರೂ ರಾಜಿ ಮಾಡಿಕೊಳ್ಳಬಲ್ಲ. ಆದರೆ ಮಂಡೇಲಾ ಬ್ರಿಟಿಷರ ಜೊತೆ ಯಾವುದೇ ಹೊಂದಾಣಿಕೆ ಮಾಡಲು ಒಪ್ಪಲಿಲ್ಲ. ತೀವ್ರವಾದ ದೈಹಿಕ ಹಾಗೂ ಮಾನಸಿಕ ಆಘಾತದ ನಡುವೆಯೂ ತಮ್ಮ ಗುರಿಯಿಂದ ತುಸು ಈ ಕಡೆ ಆ ಕಡೆ ಸರಿಯಲಿಲ್ಲ. ಅವರ ತಾಯಿ ತೀರಿಕೊಂಡಾಗ, ಮಗನ ನಿಧನವಾದಾಗ ಕೊನೆಯ ದರ್ಶನದ ಭಾಗ್ಯವೂ ಸಿಗಲಿಲ್ಲ. ಇಂತಹ ಕಷ್ಟಗಳನ್ನು ಎದುರಿಸುವವರೇ ಶತಮಾನದ ನಂತರವೂ ಜಗತ್ತು ನೆನಪಿನಲ್ಲಿಡಬಹುದಾದ ನಾಯಕರಾಗಬಲ್ಲರು.

ಗೆಲುವಿನಿಂದ ಗೆಲುವನ್ನು ಸಾಧಿಸಿ ತೋರಿಸಿದರು ಮಂಡೇಲಾ.

ಮಂಡೇಲಾರವರು ಪರೋಕ್ಷವಾಗಿ ತೋರಿಸಿದ ಹಾದಿ ಎಂದರೆ‌ ಗೆಲುವಿನಿಂದ ಗೆಲುವುಗಳನ್ನು ಹೆಚ್ಚಿಸುತ್ತಾ ಹೋಗುವುದು. ಇಂದು ವ್ಯಾಪಾರದಲ್ಲಿ, ರಾಜಕೀಯದಲ್ಲಿ ಇನ್ನೊಬ್ಬರನ್ನು ಸೋಲಿಸುವುದೇ ನಮ್ಮ ಗೆಲುವು ಅಂದುಕೊಂಡವರು ಮೊದಲೇಮೊದಲ ಹೆಜ್ಜೆಯಲ್ಲೇ ಎಡವುತ್ತಾರೆ. ಮಂಡೇಲಾ ಜೈಲಿನಿಂದ ಹೊರಗಡೆ ಬಂದಾಗ ಒಡೆದು ಛಿದ್ರವಾದ ದಕ್ಷಿಣ ಆಫ್ರಿಕಾವನ್ನು ಕೂಡಿಸಬೇಕಿತ್ತು. ಕರಿಯರು, ಕರಿಯರೊಡನೆ ಕಚ್ಚಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಒಂದು ಭಾಷಣದಲ್ಲಿ ಮಂಡೇಲಾ, “ಸಹೋದರರ ನಡುವೆ ಹೊಡೆದಾಟಕ್ಕೆ ನಾನು ಇಪ್ಪತ್ತೇಳು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಲಿಲ್ಲ” ಎನ್ನುವ ಮಾತನ್ನು ಹೇಳುತ್ತಾರೆ. ವರ್ಣಬೇಧ ನೀತಿಯನ್ನು ಕೊನೆಗೊಳಿಸಲು ಮಂಡೇಲಾ ಬಿಳಿಯರ ಜೊತೆ ಕೂತು ಮಾತನಾಡಿದರು. ಜೈಲಿನಲ್ಲಿ ಇರುವಾಗಲೇ ಸರಕಾರದ ಮುಖ್ಯಸ್ಥರೊಡನೆ ಗೌಪ್ಯವಾಗಿ ಮಂಡೇಲಾ ವರ್ಣಭೇದ ನೀತಿಯಿಂದ ದೇಶ ಅನುಭವಿಸಬೇಕಾದ ನಷ್ಟವನ್ನು ವಿಸ್ತಾರವಾಗಿ ಮಂಡಿಸಿದ್ದರು. ಆಗಿನ ರಾಷ್ಟ್ರಪತಿ ಫೆಡರಿಕ್ ಈ ವರ್ಣಬೇಧ ನೀತಿ ನಿಲ್ಲದೇ ಹೋದರೆ ದೇಶ ದಿವಾಳಿ ಆಗುತ್ತದೆ ಎನ್ನುವುದನ್ನು ಮನಗಂಡಿದ್ದರು. ವರ್ಣಬೇಧ ನೀತಿಯು ಕೊನೆಗೊಂಡು ಎಲ್ಲರಿಗೂ ಸಮನಾದ ಹಕ್ಕುಗಳನ್ನು ನೀಡುವಲ್ಲಿ ಮಂಡೇಲಾರವರು ಫೆಡರಿಕ್ ಅವರ ಜೊತೆ ನಡೆಸಿದ ಸಂಧಾನ ಬಹಳ ಮುಖ್ಯವಾದದ್ದು. ಇಷ್ಟೇ ಅಲ್ಲ ದೇಶದ ಉದ್ದಗಲಕ್ಕೆ ಹಬ್ಬಿದ್ದ ರಾಜಕೀಯ ಅರಾಜಕತೆಯನ್ನು ತಡೆಯುವುದು ಕೂಡ ಸುಲಭವಾಗಿರಲಿಲ್ಲ. ಮಂಡೇಲಾರವರು ಅರಾಜಕತೆಯ ಬೆನ್ನೇರಿ ಹೊರಟ ನಾಯಕರನ್ನು ಸೋಲಿಸಲಿಲ್ಲ, ಗೆದ್ದರು. ನಿಮ್ಮ ಗೆಲುವಿನಲ್ಲಿ ಎಲ್ಲರ ಗೆಲುವಿದೆ ಎಂದು ಇಡೀ ದಕ್ಷಿಣ ಆಫ್ರಿಕಾದ ಸಂಘಟನೆಗೆ ಸಾಕ್ಷಿಯಾದರು. ಇದಕ್ಕಾಗಿಯೇ ಫೆಡರಿಕ್ ವಿಲಿಯಂ ಡಿ ಕ್ಲಾರ್ಕ್ ಹಾಗೂ ನೆಲ್ಸನ್ ಮಂಡೇಲಾ ಇಬ್ಬರಿಗೂ 1993ರ ನೋಬೆಲ್ ಶಾಂತಿ ಪುರಸ್ಕಾರ ಸಿಕ್ಕಿದ್ದು. ಒಬ್ಬರ ಹೆಗಲನ್ನು ಬಳಸಿಕೊಂಡು ಮೇಲೆ ಬಂದು ಹೆಗಲು ಕೊಟ್ಟವನನ್ನು ತುಳಿದು ಹೋಗುವ ಕಾಲ ಮುಗಿದಿದೆ, ಇನ್ನೇನಿದ್ದರೂ ಒಬ್ಬರ ಹೆಗಲಿಗೆ ನಮ್ಮ ತೋಳನ್ನು ಕೊಟ್ಟು ಮಾನವ ಸರಪಳಿಯನ್ನು ಬಲವಾಗಿಸುತ್ತಾ ಹೋಗಬೇಕು. ಇದನ್ನೇ ಮಂಡೇಲಾ ಜಗತ್ತಿಗೆ ತೋರಿಸಿ ಕೊಟ್ಟಿದ್ದು.

ಕಳೆದು ಹೋದ ದಿನಗಳು ನಮ್ಮ ಮುಂಬರುವ ದಿನಗಳನ್ನು ಕೆಡಿಸಬಾರದು.

ಜೈಲಿನಿಂದ ಹೊರಗೆ ಬರುವಾಗ ಮಂಡೇಲಾರ ಕಣ್ಣುಗಳಲ್ಲಿ ಸಿಟ್ಟಿನ ಜ್ವಾಲಾಮುಖಿ ಕಾಣುತ್ತಿತ್ತು. ರಾತ್ರಿ ಮೂರು ಗಂಟೆಗೆ ಎದ್ದು ಮಂಡೇಲಾ ಹೊರಗಡೆ ಬರುವುದನ್ನು ಆಗಿನ ಅಮೇರಿಕಾದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಟಿವಿಯಲ್ಲಿ ವೀಕ್ಷಿಸುತ್ತಿದ್ದರು. ಮಂಡೇಲಾರ ಕಣ್ಣುಗಳು ಕಾರುತ್ತಿದ್ದ ಸಿಟ್ಟಿನ ಕಿಡಿಯನ್ನು ಬಹಳ ಸೂಕ್ಷ್ಮವಾಗಿ ಅವರು ಗಮನಿಸಿದ್ದರು. ನಂತರದಲ್ಲಿ ಮಂಡೇಲಾರನ್ನು ಭೇಟಿಯಾದಾಗ ಇದರ ಬಗ್ಗೆ ಮಾತನಾಡಿದರು. ಅದಕ್ಕೆ ಮಂಡೇಲಾ ಏನು ಹೇಳಿದರು ಗೊತ್ತೇ? ಕ್ಯಾಮೆರಾಗಳು ಅಷ್ಟೊಂದು ಎಚ್ಚರಿಕೆಯಿಂದ ನನ್ನ ಭಾವನೆಗಳನ್ನು ಹಿಡಿಯುತ್ತವೆ ಅಂದುಕೊಂಡಿರಲಿಲ್ಲ. ಹೌದು, ನನ್ನ ಇಪ್ಪತ್ತೇಳು ವರ್ಷಗಳನ್ನು ಕಸಿದುಕೊಂಡಿದ್ದಕ್ಕೆ ಸಿಟ್ಟು ಬಂತು, ಆದರೆ ನಾನು ಕ್ಷಮಿಸಿದ್ದೇನೆ. ಜೈಲಿನಲ್ಲಿರುವಾಗ ಮುಕ್ತನಾದೆ, ಈಗ ಹೊರಗೆ ಬಂದು ಮತ್ತೆ ಬಂಧಿಯಾಗುವ ಮನಸಿಲ್ಲ” ಎಂದರು. ಮೊದಲು ಉಗ್ರವಾದವನ್ನು ಕೈಯಲ್ಲಿ ಹಿಡಿದವರೇ ಮಂಡೇಲಾ. ಆದರೆ ಹೊರಗಿನ ಜಗತ್ತನ್ನು ನೋಡಿ ಅವರು ತಮ್ಮ ಆಯ್ಕೆಯನ್ನು ಬದಲಾಯಿಸಿದರು.‌ ನಮ್ಮೆದುರು ಕುದಿದು ಸುಟ್ಟು ಬಿಡುವಷ್ಟು ಕೋಪ ಬರುತ್ತದೆ ಆದರೆ ಮಂಡೇಲಾ ಕಲಿಸಿದ್ದು ಅಪ್ರತಿಮ ಪಾಠ – ಹಿಂದಕ್ಕೆ ನೋಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ, ಕ್ಷಮಿಸಿ ಮುಂದಕ್ಕೆ ಹೋಗುತ್ತಿರಬೇಕು. ಕ್ಷಮಿಸಿದೇ ಹೊರತು ನಾವು ಏನು ಸಾಧಿಸಬೇಕು ಎನ್ನುವುದರ ಬಗ್ಗೆ ನಮ್ಮ ಶಕ್ತಿ ಕೇಂದ್ರೀಕೃತ ಆಗುವುದಿಲ್ಲ. ಮಂಡೇಲಾರನ್ನು ಮಟ್ಟ ಹಾಕಲು ಎಷ್ಟೋ ಪ್ರಯತ್ನಗಳು ನಡೆದವು ಅಲ್ಲಿ ತಮ್ಮ ಹೋರಾಟವನ್ನು ಕೈ ಬಿಡುವ ಆಯ್ಕೆಯೂ ಅವರ ಹತ್ತಿರವಿತ್ತು. ಆದರೆ ಕೊನೆಗೂ ಸೋತವರು ಯಾರು? ಪ್ರತಿಯೊಂದು ಸನ್ನಿವೇಶದಲ್ಲೂ ನಮಗೆ ಎರಡು ಆಯ್ಕೆ ಇರುತ್ತದೆ ನಾವೇ ಸರಿ ಎನ್ನುವುದು ಇನ್ನೊಂದು ಸರಿಯಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಕೊನೆ ಮುಟ್ಟಿಸುವುದು. ಬ್ಯುಸಿನೆಸ್, ಸರಕಾರದ ಆಡಳಿತ, ಮದುವೆ, ಮನೆಯಲ್ಲಿ ಒಂದು ಸಮಾರಂಭ ಯಾವುದೇ ಇರಲಿ‌ ಈ ಎರಡು ಆಯ್ಕೆಯೊಳಗೆ ಒಂದನ್ನು ನಾವು ಆರಿಸಿಕೊಳ್ಳುತ್ತೇವೆ. ಮಂಡೇಲಾ ಯಾವತ್ತೂ ‘ತಾವೇ ಸರಿ’ ಎನ್ನಲಿಲ್ಲ, ‘ಯಾವುದು ಸರಿ’ ಎನ್ನುವುದರತ್ತ ಸಾಗುತ್ತಿದ್ದರು. “You mustn’t compromise your principles, but you mustn’t humiliate the opposition. No one is more dangerous than one who is humiliated.” ಇದೇ ಅವರ ಗೆಲುವಿನ ರಹಸ್ಯವಾಗಿತ್ತು. ಇನ್ನೊಬ್ಬರ ಸ್ವಾಭಿಮಾನಕ್ಕೆ ಧಕ್ಕೆ ಮಾಡದೇ ಒಂದು ಳಿತಿಗೆ ಸರಿಯಾದ ಕೊನೆಗಾಣಿಸುವುದೇ ಇಂದು ಗೆಲುವಿಗೆ ಬೇಕಾದ ಕಲೆ. ಇದನ್ನು ಮಂಡೇಲಾರವರಿಗಿಂತ ಚೆನ್ನಾಗಿ ಬೇರೆ ಯಾರು ಹೇಳಿ ಕೊಡಲು ಸಾಧ್ಯ

ಒಬ್ಬ ನಾಯಕ ಕೇವಲ ಆ ಪೀಳಿಗೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಈ ಸತ್ಯವನ್ನು ಮನೆಯಲ್ಲಿ, ಊರಿನಲ್ಲಿ, ಕಂಪನಿಯಲ್ಲಿ, ಸಂಸತ್ತಿನಲ್ಲಿ ನಾವು ನೋಡುತ್ತೇವೆ.  ಆತ ಹಲವಾರು ಪೀಳಿಗೆಗೆ ಮಾದರಿಯಾತ್ತಾನೆ. ತನ್ನ ವರ್ಚಸ್ಸಿನಿಂದ  ಆತ ತನ್ನದೇ ಆದ ಒಂದು ಹೊಸ ಜನರೇಷನ್ ಹುಟ್ಟಿ ಹಾಕುತ್ತಾನೆ. ಅದಕ್ಕಾಗಿ ನಾಯಕನಾದವನು ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ನಾವು ಏನನ್ನು ನೋಡಲು ಬಳಸುತ್ತೇವೆ ಆ ಬದಲಾವಣೆ ಮೊದಲು ನಮ್ಮಲ್ಲಿ ಕಾಣಬೇಕು. ಇದೇ ನಾಯಕತ್ವದ ಮೊದಲ ನಿಯಮ. ಮಂಡೇಲಾರ ಜೀವನವನ್ನು ನೋಡಿದರೆ ಅಲ್ಲಿ ಅವರಿಗೆ ಏನಿದೆ? ಎಲ್ಲವನ್ನೂ ದೇಶದ ಜನರಿಗಾಗಿ ತ್ಯಾಗ ಮಾಡಿದರು. ಇಂದು ಇಂತಹ ನಿಸ್ವಾರ್ಥ ನಾಯಕ ನಮ್ಮಲ್ಲಿ ಕಾಣಬಹುದಾ? ಅಂತಹ ಒಬ್ಬ ನಾಯಕನಲ್ಲಿ ಕಂಪನಿಯನ್ನು, ಊರನ್ನು, ರಾಜ್ಯವನ್ನು, ದೇಶವನ್ನು ಒಗ್ಗೂಡಿಸುವ ಶಕ್ತಿ ಇರುತ್ತದೆ. ಅದಕ್ಕೆ ಜಗತ್ತನ್ನು ಗೆಲ್ಲುವ ಮೊದಲು ನಮ್ಮನ್ನು ನಾವೇ ಗೆದ್ದು ಆ ಸಾಧನೆ ಮಾಡಬೇಕು. ವೈಯಕ್ತಿಕ ಏರುಪೇರು, ಜೈಲುವಾಸ, ವಿರೋಧಗಳು ಇವೆಲ್ಲ ಮಂಡೇಲಾರಿಗೆ ತಮ್ಮನ್ನು ತಾವು ಗೆಲ್ಲಲು ಸಹಾಯ ಮಾಡಿದವು. ಬದಲಾವಣೆ ಹೊರಗಿನಿಂದ ಆಗಲು ಶಕ್ಯವೇ ಇಲ್ಲ, ಅದು ನಮ್ಮೊಳಗಿಂದ ಬರಬೇಕು. ಹಾಗೆಯೇ ಸಾಧಕನಾಗುವುದು ಸುಲಭವಲ್ಲ. ಮಂಡೇಲಾರವರ ಜೀವನ ನಾಯಕತ್ವದ ಒಂದು ತೆರೆದ ಪುಸ್ತಕ, ಓದುತ್ತಲೇ ಇರಬೇಕು, ಕಲಿಯುತ್ತಲೇ ಇರಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!