ಅಂಕಣ

ಸಂಸ್ಕೃತದಲ್ಲಿ ಬರುತ್ತಿದೆ ಅನಿಮೇಷನ್ ಸಿನೆಮಾ – ‘ಪುಣ್ಯಕೋಟಿ’

‘ಪುಣ್ಯಕೋಟಿ’ ಹಸುವಿನ ಜಾನಪದ ಹಾಡು ಮತ್ತು ಕಥೆಯನ್ನು ಕರ್ನಾಟಕದ ಹಲವು ಪೀಳಿಗೆಯ ಮಕ್ಕಳು ಕೇಳುತ್ತಲೇ ಬೆಳೆದಿದ್ದಾರೆ. ಸಮಗ್ರತೆ, ಸಹಾನುಭೂತಿ, ನೈತಿಕತೆಯನ್ನು ಸಾರುವ ಪುಣ್ಯಕೋಟಿ ಕಥೆಯು ಮನುಷ್ಯರಲ್ಲಿ ಈ ಗುಣಗಳನ್ನು ಬಿತ್ತುವಲ್ಲಿ ಸಹಕಾರಿಯಾಗುತ್ತವೆ. ಹಲವು ರೂಪಾಂತರ, ವ್ಯಾಖ್ಯಾನಗಳ ಮೂಲಕ ಈ ಕಥೆಯು ಮತ್ತೆ ಮತ್ತೆ ಜನರನ್ನು ತಲಪುತ್ತಿದೆ. ಪ್ರಸಿದ್ಧ ಜಾನಪದ ಕಥೆಯಾದ ಪುಣ್ಯಕೋಟಿಯನ್ನು ಹೆಣೆಯುವ ಕೆಲಸವನ್ನು ಕಥೆಗಾರನ ಕಲ್ಪನೆಗೆ ಬಿಡಲಾಗಿದೆ.

ವೃತ್ತಿಯಿಂದ ಟೆಕ್ಕಿ ಆಗಿರುವ ರವಿಶಂಕರ್ ಅವರು ಪುಣ್ಯಕೋಟಿ ಕಥೆಗೆ ಹೊಸರೆಕ್ಕೆಗಳನ್ನು ಕೊಡುವ ಮೂಲಕ ಕಥೆ ಹೇಳಲಾರಂಭಿಸಿದ್ದಕ್ಕೂ ಒಂದು ಸಣ್ಣ ಕಥೆಯಿದೆ. ತನ್ನ ಸ್ನೇಹಿತ ಉಮೇಶ್ ಕಾರಂತ್ ಜೊತೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಪುಣ್ಯಕೋಟಿ ಕಥೆಯನ್ನು ಕೇಳಿದ ಇವರಿಗೆ ಕರ್ನಾಟಕದ ಹೊರತಾಗಿ ಯಾರಿಗೂ ಈ ಕಥೆ ತಿಳಿಯದೇ ಇರುವ ಬಗ್ಗೆ ಆಶ್ಚರ್ಯವಾಯಿತು. ಆಗ ರವಿಶಂಕರ್ ಹೇಳಿದ್ದು ಇಷ್ಟೇ “ನಾವು ಈ ಕಥೆಯನ್ನು ಎಲ್ಲರಿಗೂ ತಲಪಿಸಬೇಕು. ಆದರೆ ಅದಕ್ಕೆ ಹೊಸರೂಪಗಳನ್ನು ನೀಡಬೇಕು” ಎಂದು. ಬಳಿಕ 2014ರಲ್ಲಿ ಜಾನಪದ ಕಥೆಯ ಹಿನ್ನೆಲೆಯ ಸಮೇತವಾಗಿ ಪುಣ್ಯಕೋಟಿ ಕಥೆ ಪುಸ್ತಕ ಬರೆದರು. ಈ ಪುಸ್ತಕಕ್ಕೆ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಮತ್ತು ವರ್ಣಚಿತ್ರಕಾರ ಬಿ.ಜಿ. ಗುಜ್ಜಪ್ಪ ಅವರು ಚಿತ್ರಗಳನ್ನು ಬಿಡಿಸಿದ್ದರು.

ಬತ್ತದ ಉತ್ಸಾಹ

ಪುಸ್ತಕದ ಮೂಲಕ ಪುಣ್ಯಕೋಟಿ ಕಥೆಯನ್ನು ತಲಪಿಸಿದ್ದೇನೋ ಸರಿ. ಆದರೆ ಅಷ್ಟಕ್ಕೆ ಅವರು ತೃಪ್ತರಾಗಲಿಲ್ಲ. ಅನಿಮೇಷನ್ ಚಿತ್ರ ಮಾಡುವುದರಿಂದ ಈ ಕಥೆಯನ್ನು ಪ್ರತಿಯೊಬ್ಬರಿಗೂ ತಲಪಿಸುವಂತೆ ಮಾಡಬಹುದು ಎನ್ನುವ ಯೋಚನೆ ಮೂಡಿತು. “ಪಾಶ್ಚಾತ್ಯ ದೇಶಗಳ ಹಲವು ಅನಿಮೇಟೆಡ್ ಚಿತ್ರಗಳನ್ನು ನಾವು ನೋಡುತ್ತೇವೆ. ಭಾರತದಲ್ಲಿಯೂ ಇಂತಹ ಅನಿಮೇಟೆಡ್ ಚಿತ್ರಗಳನ್ನು ಮಾಡುವ ಪ್ರಯತ್ನಗಳು ನಡೆದಿದ್ದರೂ ಗುಣಮಟ್ಟದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳಿವೆ. ಅಲ್ಲಿ ಬರುವ ಚಿತ್ರ-ಚಿತ್ರಣಗಳೂ ಪಾಶ್ಚಾತ್ಯ ಪ್ರಭಾವವನ್ನು ಹೊಂದಿದ್ದವೇ ಆಗಿರುತ್ತಿತ್ತು. ಈ ಭಾವನೆಯನ್ನು ತೆಗೆದುಹಾಕಬೇಕು, ಉತ್ತಮ ಚಿತ್ರವನ್ನು ಕೊಡಬೇಕು ಎನ್ನುವ ಉದ್ದೇಶವೇ  ಪುಣ್ಯಕೋಟಿ ಕಥೆಯನ್ನು ಅನಿಮೇಟೆಡ್ ಚಿತ್ರ ಮಾಡಲು ದಾರಿಮಾಡಿಕೊಟ್ಟಿತು” ಎನ್ನುತ್ತಾರೆ ರವಿಶಂಕರ್.

ಆದರೆ ಚಿತ್ರವನ್ನು ಮಾಡಬಯಸುವವರು ಮತ್ತು ತಯಾರಿಸುವವರ ದೃಷ್ಟಿಕೋನಗಳು ಬೇರೆಬೇರೆಯದೇ ಆಗಿರುತ್ತವೆ. ಈ ಕಥೆಯನ್ನು ಹಲವು ನಿರ್ಮಾಪಕರಲ್ಲಿ ಹೇಳಿದಾಗ ಯಾರೂ ಈ ಕುರಿತಾಗಿ ಆಸಕ್ತಿ ತೋರಿಸದೇ ಇದ್ದದ್ದು ರವಿಶಂಕರ್ ಅವರಿಗೆ ಬಲವಾದ ಹೊಡೆತವನ್ನೇ ನೀಡಿತು. ಸಂಸ್ಕೃತದಲ್ಲಿ ಈ ಅನಿಮೇಟೆಡ್ ಚಿತ್ರವನ್ನು ಮಾಡಬೇಕು ಎಂದುಕೊಂಡಿದ್ದ ರವಿಶಂಕರ್ ಅವರಿಗೆ, ಬಹುತೇಕರು ‘ಇದು ಅಸಾಧ್ಯವಾದದ್ದು. ಖಂಡಿತವಾಗಿಯೂ ಇದು ಕೈಗೂಡುವ ಕೆಲಸವಲ್ಲ’ ಎಂದು ಹೇಳಿ ಇದರಿಂದ ಹಿಂದೆ ಬರುವಂತೆ ಒತ್ತಡ ಹಾಕಿದರು. ಇವೆಲ್ಲ ಘಟನೆ ನಡೆದ ಬಳಿಕ “ಈ ಚಿತ್ರವನ್ನು ನಾನೇ ನಿರ್ಮಿಸುತ್ತೇನೆ; ಪೂರ್ತಿ ಕೆಲಸ ನನ್ನದೇ ಆಗಿರುತ್ತದೆ. ಒಂದು ದೃಶ್ಯ ಪೂರ್ಣಗೊಳ್ಳಲು ಒಂದು ದಿನದಂತೆ ತೆಗೆದುಕೊಂಡಾದರೂ ಸರಿ, 10 ವರ್ಷಗಳ ಕಾಲ ಕೆಲಸ ಮಾಡಿಯಾದರೂ ಸರಿ; ಸ್ವತಃ ನಾನು ಈ ಕೆಲಸವನ್ನು ಮಾಡುತ್ತೇನೆ. ನನ್ನ ಜೀವನವನ್ನೇ ಪುಣ್ಯಕೋಟಿಗಾಗಿ ಮುಡಿಪಿಡುತ್ತೇನೆ ಎಂದು ಸ್ನೇಹಿತರ ಬಳಿ ಹೇಳಿದೆ. ನನ್ನ ಪತ್ನಿ ಮತ್ತು ಮನೆಯವರು ಪೂರ್ಣಸಹಕಾರವನ್ನು ನೀಡಿದರು” ಎನ್ನುತ್ತಾರೆ ರವಿಶಂಕರ್.

ಮಣಿಪಾಲ್ ಫೌಂಡೇಶನ್‍ನ ಮೋಹನ್‍ದಾಸ್ ಪೈ ಅವರನ್ನು ಭೇಟಿಯಾಗಿದ್ದು, ಅವರು ಕ್ರೌಡ್‍ಫಂಡಿಗ್ ಮಾಡಬಹುದು ಎನ್ನುವ ಸಲಹೆ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾ ರವಿಶಂಕರ್ ಹೇಳಿದ್ದು – “ಕ್ರೌಡ್‍ಫಂಡಿಗ್ ಜೊತೆಗೆ ಯಾವೆಲ್ಲಾ ರೀತಿಯ ಮೂಲಕ ಖರ್ಚುಗಳನ್ನು ಕಡಮೆ ಮಾಡಬಹುದು ಎಂಬುದನ್ನೂ ಮೋಹನ್‍ದಾಸ್ ಪೈ ಅವರು ಹೇಳಿದರು. 2015ರಲ್ಲಿ ವಿಶ್‍ಬೆರಿ ಮೂಲಕ ಕ್ರೌಡ್‍ಫಂಡಿಗ್ ಆರಂಭಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲಪಿದೆವು.” ಕ್ರೌಂಡ್‍ಸೋರ್ಸಿಂಗ್ ಯಾವ ಪರಿಯ ಯಶಸ್ಸನ್ನು ಸಾಧಿಸಿತೆಂದರೆ 2016ರಲ್ಲಿ ಪುಣ್ಯಕೋಟಿ ಟೀಮ್ ‘ಸೋಷಿಯಲ್ ಮೀಡಿಯಾ ಎಂಪರ್’ಮೆಂಟ್’ ಅವಾರ್ಡ್ ಅನ್ನು ಕೂಡ ಪಡೆಯಿತು. ಕ್ರೌಂಡ್‍ಫಂಡಿಗ್ ಮೂಲಕ ಪಡೆದ 40ಲಕ್ಷ ರೂ ಚಿತ್ರದ ಪೂರ್ವ ನಿರ್ಮಾಣ ಮತ್ತು ಅನಿಮ್ಯಾಟಿಕ್ಸ್ ಕೆಲಸ ಆರಂಭಿಸಲಷ್ಟೇ ಸಾಕಾಗಿತ್ತು. ರವಿಶಂಕರ್ ಮತ್ತು ಟೀಮ್ 2016ರಲ್ಲಿ ಚಿತ್ರದ ಕೆಲಸವನ್ನು ಆರಂಭಿಸಿದರು.

“ಆರಂಭದಲ್ಲಿ ಟೀಮ್ ರೂಪಿಸುವುದು, ಕೆಲಸವನ್ನು ಹಂಚಿಕೊಳ್ಳುವುದೇ ದೊಡ್ಡ ಕಷ್ಟವಾಗಿತ್ತು. ಎಲ್ಲರೂ ಬೇರೆ ಬೇರೆ ಕಡೆಗಳಲ್ಲಿ ಇದ್ದ ಕಾರಣ, ಮೊದಲಿಗೆ ಓಪನ್ ಸಾಫ್ಟ್‍ವೇರ್ ಬಳಸುವ ಮೂಲಕ ಖರ್ಚನ್ನು ಕಡಮೆ ಮಾಡುವ ಪ್ರಯತ್ನ ಮಾಡಿದೆವು. ಕ್ರಮೇಣವಾಗಿ ನಮ್ಮಲ್ಲಿ ಇರುವ ಸಾಧನಗಳಲ್ಲೇ, ನಾವಿರುವಲ್ಲಿಂದಲೇ ಕೆಲಸವನ್ನು ನಿರ್ವಹಿಸಲು ಕಲಿತುಕೊಂಡಿದ್ದೇವೆ” ಎನ್ನುತ್ತಾರೆ ರವಿಶಂಕರ್.

ತಂಡದ ಅವಿರತ ಪ್ರಯತ್ನ

ಖರ್ಚು ಎಷ್ಟಾದರೂ ಸರಿ, ಸಮಯ ಎಷ್ಟು ತೆಗೆದುಕೊಂಡರೂ ಸರಿ; ಸಿನೆಮಾ ಮಾಡಿಯೇ ಸಿದ್ಧ ಎಂದು ನಿರ್ಧರಿಸಿದ್ದ ರವಿಶಂಕರ್ ಅವರಿಗೆ ತಮ್ಮ ತಂಡ ಮತ್ತು ಸಿನೆಮಾ ಮಂದಿ ಕೆಲವರು ಮಾಡಿದ ಸಹಾಯ, ತ್ಯಾಗ, ಪ್ರಯತ್ನವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಇಳಯರಾಜ ಅವರು ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ರಾಷ್ಟ್ರೀಯ ಅವಾರ್ಡ್ ಪಡೆದಿರುವ ರೇವತಿ ಅವರು ಸ್ಕ್ರಿಪ್ಟ್ ಅನ್ನು ಮೆಚ್ಚಿದರು ಮತ್ತು ತಾವೇ ಸ್ವತಃ ರೆಕಾರ್ಡಿಂಗ್‍ಗೆ ಬಂದರು. ಸಂಸ್ಕೃತದಲ್ಲಿ ಸಂಭಾಷಣೆ ಇದ್ದುದರಿಂದ ಸ್ವಲ್ಪ ಆತಂಕಗೊಂಡಿದ್ದರಾದರೂ, ರವಿಶಂಕರ್ ಮತ್ತು ಅವರ ಮಗಳು ಸಂಸ್ಕೃತ ಹೇಳಿಕೊಡುವ ಮೂಲಕ ಬಹಳ ಸುಲಲಿತವಾಗಿ ಈ ಕೆಲಸವನ್ನು ರೇವತಿ ಅವರು ನಿರ್ವಹಿಸಿದರು. ಇವರಂತೆ ಬಹಳಷ್ಟು ಮಂದಿ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಅಥವಾ ಕನಿಷ್ಠ ಸಂಭಾವನೆ ತೆಗೆದುಕೊಳ್ಳುವ ಮೂಲಕ ಚಿತ್ರ ನಿರ್ಮಾಣಕ್ಕೆ ಬೆಂಬಲವನ್ನು ನೀಡಿದ್ದಾರೆ. ಇವರ ಕಾರ್ಯವನ್ನು ಗುರುತಿಸಿದ ‘ಅಡೋಬ್ ಇಂಡಿಯ’ ಸಂಸ್ಥೆಯು ತಮ್ಮ ಸಾಫ್ಟ್‍ವೇರ್ ಅನ್ನು ಉಚಿತವಾಗಿ ಉಪಯೋಗಿಸಲು ಕೊಟ್ಟರು. ಈ ಚಿತ್ರದ ವಿಷಯ ಮತ್ತು ಉದ್ದೇಶ ಇವೆಲ್ಲದಕ್ಕೆ ಮೂಲ ಪ್ರೇರಣೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ರವಿಶಂಕರ್.

ರೇವತಿ ಅವರೊಂದಿಗೆ ರವಿಶಂಕರ್

ದೊಡ್ಡ ಪ್ರಮಾಣದ ಸುಸಜ್ಜಿತ ಸ್ಟುಡಿಯೋಗಳು, ಅಪಾರ ಮೂಲಭೂತ ಸೌಕರ್ಯಗಳ ಬೆಂಬಲ ಇರುವ ಹಲವಾರು ದೊಡ್ಡ ಬಜೆಟ್‍ನ ಸಿನೆಮಾಗಳು ಪ್ರೇಕ್ಷರೊಂದಿಗೆ ಸಂಪರ್ಕ ಹೊಂದಲು ವಿಫಲವಾಗಿವೆ. ಸ್ಕ್ರಿಪ್ಟ್, ಎಡಿಟಿಂಗ್ ಎಲ್ಲಾ ರೀತಿಯಿಂದಲೂ ಗುಣಮಟ್ಟದಲ್ಲೂ ಹಿಂದೆ ಉಳಿಯುತ್ತವೆ. ಇಂತಹ ಸನ್ನಿವೇಶದಲ್ಲಿ, ಪುಣ್ಯಕೋಟಿ ತಂಡವು ತಮ್ಮ ವೈಯಕ್ತಿಕ ಕೆಲಸ ಮತ್ತು ಅದೇ ಸಮಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ದೂರದಿಂದಲೇ ಕೆಲಸ ಮಾಡಿದೆ. ಅತ್ಯಲ್ಪ ಸಂಪನ್ಮೂಲ, ಸೀಮಿತ ಸೌಕರ್ಯಗಳೊಂದಿಗೆ ಮಾಡಿದ ಈ ಸಾಧನೆಯನ್ನು ಹೇಗೆ ನಿಭಾಯಿಸಿದಿರಿ ಎಂದು ಕೇಳಿದರೆ ತಂಡ ಬಹಳ ಉತ್ಸಾಹದಿಂದ ಉತ್ತರಿಸುತ್ತದೆ. “ನಮ್ಮ ತಂಡವನ್ನು ಗೂಗಲ್ ಹ್ಯಾಂಗ್‍ಔಟ್‍ನಲ್ಲಿ ಭೇಟಿಯಾಗುತ್ತೇವೆ. ಈ-ಮೈಲ್‍ಗಳ ಮೂಲಕ ನಿರಂತರ ಸಂಪರ್ಕದಲ್ಲಿರುತ್ತೇವೆ. ನಮ್ಮ ಸ್ಕ್ರಿಪ್ಟಿಂಗ್ ಕೆಲಸವೂ ಆನ್‍ಲೈನ್ ಅಲ್ಲಿಯೇ ನಡೆಯಿತು” ಎಂದು ಹೇಳುತ್ತಾರೆ ರವಿಶಂಕರ್. ಸಿನೆಮಾದ ಕ್ರಿಯೇಟಿವ್ ಡೈರೆಕ್ಟರ್ ಆದ ಗಿರೀಶ್ ಅವರು ಮಾತನಾಡುತ್ತಾ – “ನಾನು ತಿರುವನಂತಪುರ ಮತ್ತು ಬೆಂಗಳೂರಿಗೆ ಈ ಯೋಜನೆಗಾಗಿ ಪಯಣಿಸುತ್ತಿರುತ್ತೇನೆ. ನಮ್ಮ ಎಡಿಟರ್ ಮನೋಜ್ ಕನ್ನೋಟ್ ಅವರು ದೆಹಲಿಯಲ್ಲಿ ಇರುತ್ತಾರೆ. ಆದರೆ ನಾವು ಆನ್‍ಲೈನ್‍ನಲ್ಲಿ ನಮ್ಮ ಸ್ಕ್ರೀನ್‍ಗಳನ್ನು ಹಂಚಿಕೊಂಡಿದ್ದೇವೆ; ಸ್ಕ್ರಿಪ್ಟ್ ಕುರಿತಾಗಿ ಚರ್ಚಿಸಿದ್ದೇವೆ. ಚಲನಚಿತ್ರವೊಂದಕ್ಕಾಗಿ ಆನ್‍ಲೈನ್‍ನಲ್ಲಿ ಕೆಲಸ ಮಾಡುವುದು ಒಂದು ಹೊಸ ಅನುಭವವನ್ನು ನೀಡಿದೆ” ಎಂದು ಹೇಳುತ್ತಾರೆ.  

ಟೀಂ ಪುಣ್ಯಕೋಟಿ

ನಿರ್ದೇಶಕ: ರವಿಶಂಕರ್

ಸಂಗೀತ: ಇಳಯರಾಜ

ಎಡಿಟರ್: ಮನೋಜ್ ಕನ್ನೋಟ್

ಪರಿಕಲ್ಪನೆ: ಬಿ.ಜಿ. ಗುಜ್ಜಾರಪ್ಪ

ಕ್ರಿಯೇಟಿವ್ ಡೈರೆಕ್ಟರ್: ಎ.ವಿ. ಗಿರೀಶ್

ಸಂಸ್ಕೃತ ಮಾರ್ಗದರ್ಶನ: ಪ್ರೊ. ಎಸ್.ಆರ್. ಲೀಲಾ

ಮುಖ್ಯ ಪಾತ್ರವರ್ಗ (ಧ್ವನಿ)

ರೇವತಿ – ಪುಣ್ಯಕೋಟಿ ಹಸು

ರೋಜರ್ ನಾರಾಯಣ್ – ಕಾಳಿಂಗ ಹುಲಿ

ವೆಬ್‍ಸೈಟ್: www.punyakoti.com

ಮಹತ್ತ್ವಾಕಾಂಕ್ಷೆ – ಪ್ರತಿಕ್ರಿಯೆ

ಪುಣ್ಯಕೋಟಿ ಸಿನೆಮಾದ ಟ್ರೈಲರ್’ಗೆ ಈಗಾಗಲೆ 3000 ಜನ ಸಬ್‍ಸ್ಕ್ರೈಬರ್ ಇದ್ದಾರೆ, ಮೂರವರೆ ಲಕ್ಷ ಜನ ಯೂಟ್ಯೂಬ್‍ನಲ್ಲಿ ಟ್ರೈಲರ್ ವೀಕ್ಷಿಸಿದ್ದಾರೆ. ನೋಡುಗರಲ್ಲಿ ಆಸಕ್ತಿ ಮತ್ತು ಭಾವನೆಯನ್ನು ಹುಟ್ಟುಹಾಕುವುದರೊಂದಿಗೆ; ಹಿನ್ನೆಲೆ ಕಥೆ ಏನಿರಬಹುದು ಮತ್ತು ಹಸು-ಹುಲಿಯ ಭೇಟಿ ಯಾವುದಕ್ಕೆ ನಾಂದಿಯಾಗಬಹುದು ಎನ್ನುವ ಕುತೂಹಲವನ್ನು ಉಳಿಸಿಕೊಂಡಿದೆ. ಟ್ರೈಲರ್ ಒಂದು ವಿಶಿಷ್ಟ ರೂಪದಲ್ಲಿ ಮೂಡಿಬಂದಿರುವ ಬಗೆಗೆ ತಂಡದ ಬಳಿ ಹೆಚ್ಚಿನ ಪ್ರಶ್ನೆಗಳು ಬರುತ್ತವೆ.

ಟ್ರೈಲರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

“ಅನಿಮೇಷನ್‍ನಲ್ಲಿ ಪಾಶ್ಚಾತ್ಯ ಶೈಲಿಯನ್ನು ಅನುಸರಿಸುವ ಬದಲು ಭಾರತೀಯತೆಯನ್ನು ತರಬೇಕು ಎನ್ನುವುದು ನಮ್ಮ ಮೂಲ ಉದ್ದೇಶದಲ್ಲಿ ಒಂದಾಗಿತ್ತು. ಭಾರತದ ಜಾನಪದ ಕಲೆಗಳು ನಮಗೆ ಸ್ಫೂರ್ತಿ. ಟ್ರೈಲರ್‍ನಲ್ಲಿ ತೊಗಲು ಬೊಂಬೆಯಾಟವನ್ನು ಅಳವಡಿಸಿಕೊಂಡಿದ್ದೇವೆ. ಹೀಗೆ ಭಾರತದ ಇತರ ಜಾನಪದ ಕಲೆಗಳ ಬಗ್ಗೆ ಅಧ್ಯಯನ ಮಾಡಿ ಅನಿಮೇಷನ್‍ನಲ್ಲಿ ಅವುಗಳನ್ನು ಬಳಸಿಕೊಂಡಿದ್ದೇವೆ; 3ಡಿ ಅನಿಮೇಷನ್‍ನಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸುವ ಪ್ರಯತ್ನ ಮಾಡಿದ್ದೇವೆ” ಎನ್ನುತ್ತಾರೆ ಕ್ರಿಯೇಟಿವ್ ಡೈರೆಕ್ಟರ್ ಗಿರೀಶ್.

ಕಥೆಯ ಬಗ್ಗೆ ಅಥವಾ ಅನಿಮೇಷನ್ ಸಿನೆಮಾಗಳ ಕುರಿತಾಗಿ ಜನರಲ್ಲಿ ಆಸಕ್ತಿ ಮೂಡಿಸುವುದರೊಂದಿಗೆ ಪುಣ್ಯಕೋಟಿಯು ವೃತ್ತಿಜೀವನದಲ್ಲಿದ್ದುಕೊಂಡೇ ಯಾವ ರೀತಿ ಸಿನೆಮಾ ತಯಾರಿಸಬಹುದು ಎನ್ನುವ ಕಲ್ಪನೆಯನ್ನು ಜನರಿಗೆ ನೀಡುತ್ತಿದೆ. “ಶಿಸ್ತು ನಮ್ಮ ಮೊದಲ ಆದ್ಯತೆ. ನಮ್ಮ ವೃತ್ತಿರಂಗದ ಕೆಲಸ ಮತ್ತು ಚಿತ್ರಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮೊದಲಿಗೆ ಬೇರೆಬೇರೆ ಮಾಡಿಕೊಂಡೆವು. ಎರಡೂ ಕೆಲಸಕ್ಕೆ ಅದರದ್ದೇ ಆದ ಸಮಯ ಮತ್ತು ಆದ್ಯತೆಯನ್ನು ನೀಡುತ್ತಿದ್ದೇನೆ ಎನ್ನುವುದನ್ನು ಖಚಿತಪಡಿಸಿಕೊಂಡೆ. ಈ ಸ್ಪಷ್ಟತೆಯ ಕಾರಣದಿಂದಲೇ ಹಾಕಿಕೊಂಡ ಚೌಕಟ್ಟಿನಲ್ಲಿ ಸಮಯವನ್ನು ನಿಭಾಯಿಸಿಕೊಂಡು ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಅದಲ್ಲದೇ ದೂರದರ್ಶನದಿಂದ ದೂರವಿದ್ದೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯವಾಗಿ ಸಮಯ ಕಳೆಯುವುದನ್ನು ಕಡಮೆ ಮಾಡುವ ಮೂಲಕ ಸಮಯ ಉಳಿಸಿದೆ” ಎಂದು ನಗುತ್ತಾರೆ ರವಿಶಂಕರ್.

ಬಿಡುಗಡೆಯ ಸವಾಲು

ಪುಣ್ಯಕೋಟಿ ಚಿತ್ರವನ್ನು ಈ ವರ್ಷದಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡಿರುವ ತಂಡದ ಮುಂದೆ ಇರುವ ದೊಡ್ಡ ಸವಾಲು ಬಿಗ್ ಸಿನೆಮಾಸ್, ಮಲ್ಟಿಪ್ಲೆಕ್ಸ್‍ಗಳಲ್ಲಿ ಸಿನೆಮಾವನ್ನು ಬಿಡುಗಡೆ ಮಾಡುವುದು. ಸಿನೆಮಾವನ್ನು ಹೇಗೆ ಬಿಡುಗಡೆ ಮಾಡಬೇಕೆಂದು ಯೋಚಿಸಿದ್ದೀರಿ ಎಂಬ ಪ್ರಶ್ನೆಗೆ ರವಿಶಂಕರ್ ಉತ್ತರಿಸುತ್ತಾ “ಥಿಯೇಟರ್’ಗಳಲ್ಲಿ ಸಿನೆಮಾ ಬಿಡುಗಡೆ ಮಾಡುವುದು ಆರ್ಥಿಕವಾಗಿ ಬಹಳ ದೊಡ್ಡ ಮಟ್ಟದ ಬಂಡವಾಳವನ್ನು ಬೇಡುತ್ತದೆ. ಆದ್ದರಿಂದ ಸಿನೆಮಾವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗಳಿಗೆ ತೆಗೆದುಕೊಂಡು ಹೋಗುವ ಯೋಚನೆಯಿದೆ. ಜೊತೆಗೆ ಡಿಜಿಟಲ್ ಮಾಧ್ಯಮದಲ್ಲಿ ಸಿನೆಮಾ ಬಿಡುಗಡೆ ಮಾಡಬೇಕು ಎನ್ನುವ ಯೋಜನೆಯಿದೆ. ‘ಪಿಕ್ಚರ್’ಟೈಮ್ ಡಿಜಿಪ್ಲೆಕ್ಸ್’ – ಕೆಲವು ಕ್ಷಣಗಳಲ್ಲಿ 100 ಸೀಟ್ ವ್ಯವಸ್ಥೆಯುಳ್ಳ ಥಿಯೇಟರ್ ಅನ್ನು ನಿರ್ಮಿಸುವಂತಹ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯವೇ ಎನ್ನುವುದರ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಶಾಲಾಮಕ್ಕಳು ಮತ್ತು ಹಳ್ಳಿಯನ್ನು ಈ ಚಿತ್ರ ತಲಪಬೇಕೆನ್ನುವುದು ನನ್ನ ಕನಸಾಗಿದೆ. ಈ ಚಿತ್ರದ ಮೂಲಕ ಜನ ಸಂಸ್ಕೃತಕ್ಕೆ ಹತ್ತಿರವಾದರೆ ನಾವು ಸಿನೆಮಾ ತಯಾರಿಸಿದ ಉದ್ದೇಶವೂ ಸಫಲವಾದಂತೆ” ಎನ್ನುತ್ತಾರೆ.

ಸಂಸ್ಕೃತವೇ ಏಕೆ?

ಅನಿಮೇಷನ್ ಚಿತ್ರಕ್ಕೆ ಸಂಸ್ಕೃತವನ್ನು ಏಕೆ ಆರಿಸಿಕೊಂಡಿರಿ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ರವಿಶಂಕರ್ “ಇನ್‍ಫೋಸಿಸ್’ನಲ್ಲಿ ಸಂಸ್ಕೃತ ಸಂಭಾಷಣ ಶಿಬಿರದಲ್ಲಿ ಕೆಲವು ವರ್ಷಗಳ ಹಿಂದೆ ಭಾಗವಹಿಸಿದ್ದ ನನಗೆ ಸಂಸ್ಕೃತ ಭಾಷೆಯ ಕುರಿತಾಗಿ ಆಸಕ್ತಿ ಉಂಟಾಯಿತು. ಅದೇ ಸಮಯದಲ್ಲಿ ಸಂಸ್ಕೃತ ಭಾಷೆಯಲ್ಲಿ ಅನಿಮೇಷನ್ ಸಿನೆಮಾಗಳು ಹೆಚ್ಚಾಗಿ ಬಂದಿಲ್ಲ ಎಂದೂ ತಿಳಿಯಿತು. ಇಂದು ನಮ್ಮ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಯ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಮಂದಿ ಉತ್ಸುಕರಾಗುತ್ತಿದ್ದಾರೆ. ಇದಕ್ಕೆ ಸಿನೆಮಾ ಉತ್ತಮ ಮಾಧ್ಯಮ ಎನಿಸಿತು” ಎನ್ನುತ್ತಾರೆ. “ಅನಿಮೇಷನ್ ನಮ್ಮ ಒಳಗಿನ ಭಾವನೆಯನ್ನು ಪ್ರಚೋದಿಸುತ್ತದೆ ಮತ್ತು ನಮ್ಮ ನೆನಪಿನಂಗಳದಲ್ಲಿ ಬಹಳ ಸಮಯ ಉಳಿಯುತ್ತದೆ. ಈ ಎಲ್ಲಾ ದೃಷ್ಟಿಯಿಂದ ಯೋಚನೆ ಮಾಡಿದಾಗ ಸಂಸ್ಕೃತವೇ ಪುಣ್ಯಕೋಟಿಯ ಕಥೆಯನ್ನು ಹೇಳಲು ಸೂಕ್ತವೆನಿಸಿತು” ಎಂದು ವಿಶ್ವಾಸದಿಂದ ಹೇಳುತ್ತಾರೆ ರವಿಶಂಕರ್.  

ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಎಡ್ವರ್ಡ್ ಝ್ವಿಕ್ ಅವರು ಸಂದರ್ಶನವೊಂದರಲ್ಲಿ “ಸಿನೆಮಾ ನಿರ್ದೇಶಕನಾಗಿ ನಾನು ಚಿತ್ರದ ಮೂಲಕ ಮೊದಲಿಗೆ ಜನರನ್ನು ಮನರಂಜಿಸಲು ಪ್ರಯತ್ನಿಸುತ್ತೇನೆ. ಅದರಲ್ಲಿ ಜಾಗೃತಿ ಮತ್ತು ತಿಳುವಳಿಕೆಯ ವಿಷಯ ಬಂದಾಗ, ಮುಂದೆ ಇದರಿಂದ ಬದಲಾವಣೆ ಸಾಧ್ಯ ಎನ್ನುವ ಭರವಸೆಯಲ್ಲಿ ಈ ಕಾರ್ಯವನ್ನು ಮಾಡುತ್ತೇನೆ” ಎಂದಿದ್ದರು. ಇದರಂತೆ, ಪುಣ್ಯಕೋಟಿ ತಂಡದ ಉತ್ಸಾಹ ಮತ್ತು ಪ್ರಯತ್ನವನ್ನು ನೋಡಿದರೆ ಸಂಸ್ಕೃತವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಗುರಿಯನ್ನು ಸಾಧಿಸುತ್ತಾರೆ ಎನಿಸುತ್ತದೆ.

ಕೊನೆಯದಾಗಿ

ಸಂಸ್ಕೃತ ಭಾಷೆಯಲ್ಲಿ ಬಂದ ಭಾರತದ ಮೊದಲ ಅನಿಮೇಷನ್ ಸಿನೆಮಾ ಎಂದು ಜನ ಪ್ರಶಂಸಿಸಿದಾಗ ತಮಗೆ ಹೇಗೆ ಎನಿಸುತ್ತದೆ ಎಂದು ಕೇಳಿದಾಗ – “ಹೆಮ್ಮೆ ಮತ್ತು ಭಯಮಿಶ್ರಿತ ಭಾವನೆ ನನ್ನಲ್ಲಿದೆ. ನಮ್ಮ ಪರಿಶ್ರಮದ ಬಗ್ಗೆ ಹೆಮ್ಮೆ ಇದೆ; ಪ್ರತಿಕ್ರಿಯೆ ಹೇಗಿರಬಹುದು ಎನ್ನುವ ಭಯವಿದೆ. ಪುಣ್ಯಕೋಟಿ ಅವರ ನಿರೀಕ್ಷೆಯ ಮಟ್ಟಕ್ಕೆ ತಲಪಿ; ನಮ್ಮ ಶ್ರಮವನ್ನು ಅವರು ಪ್ರೀತಿಸುತ್ತಾರೆ ಎಂದು ಭಾವಿಸಿದ್ದೇವೆ” ಎಂದು ರವಿಶಂಕರ್ ತಮ್ಮ ಕನಸಿನ ಕೂಸಾದ ‘ಪುಣ್ಯಕೋಟಿ’ ಬಗ್ಗೆ ಹೇಳುತ್ತಾರೆ.

ಸಂಸ್ಕೃತದ ಈ ಸೂಕ್ತಿ ಹೇಳುವಂತೆ ‘ಹೇಗೆ ರಥವು ಒಂದೇ ಚಕ್ರದ ಸಹಾಯದಿಂದ ಚಲಿಸಲಾರದೋ; ಹಾಗೆ ನಿರ್ದಿಷ್ಟ ಸ್ಥಾನಕ್ಕೆ ಕಠಿಣ ಪರಿಶ್ರಮವಿಲ್ಲದೆ ತಲಪಲಾಗದು.’    

200ಕ್ಕೂ ಮಿಕ್ಕಿ ಜನರನ್ನು ಹೊಂದಿರುವ ‘ಪುಣ್ಯಕೋಟಿ’ ತಂಡ ಒಂದೇ ಉದ್ದೇಶಕ್ಕಾಗಿ ತಮ್ಮ ಶ್ರಮವನ್ನು ಸಮಯವನ್ನು ಮೀಸಲಿಟ್ಟಿದ್ದಾರೆ. ಇದು ಪುಣ್ಯಕೋಟಿಯೆಂಬ ರಥದ ಒಂದು ಚಕ್ರವಾದರೆ, ಜನರ ಬೆಂಬಲ ಮತ್ತೊಂದು ಚಕ್ರ. ಮೊದಲ ಸಂಸ್ಕೃತ ಅನಿಮೇಷನ್ ಸಿನೆಮಾ ಎನ್ನುವ ಹೆಮ್ಮೆಯನ್ನು ಹೊಂದಿರುವ ‘ಪುಣ್ಯಕೋಟಿ’ಯ ಮೂಲಕ ‘ಚಲನಚಿತ್ರ’ ಮತ್ತು ‘ಸಂಸ್ಕೃತ’ ಎರಡೂ ಜಯಶಾಲಿಗಳಾಗಿ ಹೊರಹೊಮ್ಮಲಿ ಎಂದು ಆಶಿಸೋಣ.

– ಪ್ರಶಾಂತ್ ವೈದ್ಯರಾಜ್

‘ವಿಕ್ರಮ’ ವಾರಪತ್ರಿಕೆಯಲ್ಲಿ ಪ್ರಕಟಿತ ಬರಹ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!