ಅಂಕಣ

’ಮಲೇಷಿಯಾ ಹೋಪ್ ಫಂಡ್’ – ವಿನೂತನ ರಾಷ್ಟ್ರವಾದ

ರಾಷ್ಟ್ರವಾದದ ವಿಚಾರ ಯಾವುದೇ ದೇಶವನ್ನು ಸೂಪರ್ ಪವರ್ ಮಾಡಬಲ್ಲದು ಮತ್ತು ಆ ದೇಶದ ಜನತೆಯಲ್ಲಿ ಹೊಸ ಚೈತನ್ಯವನ್ನು ತುಂಬಿ ನಿದ್ದೆಯಲ್ಲಿದ್ದವರನ್ನು ಬಡಿದೆಬ್ಬಿಸಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅವಸಾನದಂಚಿನಲ್ಲಿರುವ ದೇಶಕ್ಕೂ ಸಂಜೀವಿನಿಯಾಗಬಲ್ಲದು. ಬಹುತೇಕ ಜನರಿಗೆ ತಮ್ಮ  ಹೋಮ್ ಲೋನ್, ಕಾರ್ ಲೋನ್’ನ ಈ.ಎಂ.ಐ. ಯಾವತ್ತೂ ನೆನಪಿನಲ್ಲಿ ಇರುತ್ತವೆ, ಆದರೆ ನಮ್ಮ ದೇಶದ ಮೇಲಿರುವ ಸಾಲದ ಹೊರೆಯ ಈ.ಎಂ.ಐ. ಎಷ್ಟು ಜನರಿಗೆ ನೆನಪಿದೆ? ನಮ್ಮದೇ ಸಾಲಬಾಧೆ ಮತ್ತು ಜೀವನದ ತೊಳಲಾಟದಲ್ಲಿ ತಲ್ಲೀನರಾಗಿರುವ ನಮಗೆ ದೇಶದ ಬಗ್ಗೆ ಯೋಚಿಸಲು ಕಿಂಚಿತ್ತೂ ಸಮಯವಿಲ್ಲ.ನಾವು ಭಾರತೀಯರು ಈ ವಿಷಯದಲ್ಲಿ ಅಷ್ಟು ಸ್ವಾರ್ಥಿಗಳಾ? ಜಾನ್.ಎಫ್. ಕೆನಡಿಯವರ ಈ ಮಾತು   “ದೇಶ ನನಗಾಗಿ ಏನು ಮಾಡಿತು ಎಂಬುದಕ್ಕಿಂತ ನಾನು ದೇಶಕ್ಕಾಗಿ ನಾನು ಏನು ಮಾಡಿದ್ದೇನೆ/ಮಾಡುತ್ತಿರುವೆ ಎಂಬುದು ಬಹುಮುಖ್ಯ” ಎಂದೆದಿಗೂ ಪ್ರಸ್ತುತ..

ಮಲೇಶಿಯಾದ ಜನತೆ ತಮ್ಮ ದೇಶದ ಸಾಲವನ್ನು ತೀರಿಸಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ‘ಕ್ರೌಡ್ ಫಂಡಿಂಗ್’ ಹೆಸರಿನಲ್ಲಿ ಅಳಿಲು ಸೇವೆ ಸಲ್ಲಿಸುತ್ತಾ ಕೆಲವೇ ದಿನಗಳಲ್ಲಿ  ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಿದ್ದಾರೆ. ಇದು ನೈಜ ರಾಷ್ಟ್ರವಾದವನ್ನು ಬಿಂಬಿಸುವ ವಿಶಿಷ್ಟ ಪ್ರಯತ್ನ. ಮಲೇಶಿಯಾದ ಜನತೆ ಕಳೆದ ತಿಂಗಳವಷ್ಟೆ 92ರ ಹರೆಯದ ಉತ್ಸಾಹಿ ಮೋಹಾತೀರ್ ಮಹ್ಮದರನ್ನು ತಮ್ಮ ಪ್ರಧಾನಿಯನ್ನಾಗಿ ಆರಿಸಿದ್ದಾರೆ. ಇಂದು ಮಲೇಶಿಯಾದ ಸಾಲದ ಹೊರೆ  ಅದರ ಒಟ್ಟು ಜಿ.ಡಿ.ಪಿ.ಯ 80%ರಷ್ಟಿದೆ. ಅರ್ಥಾತ್ ಸಾಲದ ಈ ಭಾರ ಮುಂದೊಂದು ದಿನ ದೇಶದ ಸ್ವತಂತ್ರ ಅಸ್ತಿತ್ವಕ್ಕೆ ಧಕ್ಕೆ ತಂದರು ತರಬಹುದು.

ಭಾರತದ ದಿಲ್ಲಿಗೆ ಹೋಲಿಸಬಹುದಾದ, ಮೂರುಕಾಲು ಕೋಟಿ ಜನಸಂಖ್ಯೆ ಹೊಂದಿರುವ ಮಲೇಶಿಯಾಕ್ಕೆ ಸಾಲದ ಈ ಸಂಕಟದಿಂದ  ಹೊರಬರುವುದು ದೊಡ್ಡ ಸವಾಲು. ದೇಶದ ಸಾಮಾನ್ಯ ನಾಗರಿಕರು ಒಂದು ಆಂದೋಲನವನ್ನು ನಡೆಸಲು ಅಥವಾ ನಿಗದಿತ ಗುರಿಯೊಂದನ್ನು ಮುಟ್ಟಲು ಸಾಮೂಹಿಕವಾಗಿ  ಚಂದಾ ಸಂಗ್ರಹಿಸುವುದನ್ನು ಇಂಗ್ಲೀಷ್’ನಲ್ಲಿ ‘ಕ್ರೌಡ್ ಫಂಡಿಂಗ್’ ಎನ್ನುತ್ತಾರೆ. ಅಂತರ್ಜಾಲದ ಈ ಯುಗದಲ್ಲಿ ಯಾವುದಾದರೊಂದು ಕಾರಣಕ್ಕೆ ಆನ್’ಲೈನ್  ಕ್ರೌಡ್ ಫಂಡಿಂಗ್ ಸದಾ ನಡೆದೇ ಇರುತ್ತದೆ. ಮಲೇಶಿಯಾದ 16ಲಕ್ಷ 80ಸಾವಿರ ಕೋಟಿ ರೂಪಾಯಿಗಳ ಸಾಲದ ಹೊರೆ ಹಿಂದಿನ ಸರಕಾರದ ಭ್ರಷ್ಟಾಚಾರ ಫಲಶೃತಿ ಎಂದು ಹೇಳಲಾಗುತ್ತದೆ. ಮಲೇಶಿಯಾದ ಜನತೆ ತಮ್ಮ ದೇಶದ ಸಾಲವನ್ನು ತೀರಿಸಲು ‘ಕ್ರೌಡ್ ಫಂಡಿಂಗ್’ ಮೊರೆಹೋಗಿದ್ದಾರೆ. ಈ ಆಂದೋಲನ ಪ್ರಾರಂಭವಾದ ರೀತಿ ಕೂಡ  ಸ್ವಾರಸ್ಯಕರ! ಮೊಟ್ಟಮೊದಲು 39ರ ಹರೆಯದ ಎಸ್. ರಾಜಲಿಂಗಮ್ ಎಂಬ ವ್ಯಕ್ತಿ ಮಲೇಶಿಯಾದ ಪ್ರಧಾನಿಗೆ ಪತ್ರಬರೆದು 25 ಡಾಲರ್’ಗಳ ವಂತಿಗೆಯನ್ನು ನೀಡಿದರು ಈ ಹಣ ಮಲೇಶಿಯಾದ ಸಾಲಕ್ಕೆ ಹೊಲಿಸಿದರೆ ಸಮುದ್ರದಲ್ಲಿ ಒಂದು ಹನಿ ನೀರನ್ನು ಸುರಿದಂತೆ! ಆದರೆ ಅನೇಕಬಾರಿ ಇಂತಹ ಸಣ್ಣ ಸಣ್ಣ ನಾವೀನ್ಯ ವಿಚಾರಗಳು ಇಡೀ ದೇಶಕ್ಕೆ ಪ್ರೇರಣೆಯಾಗಬಲ್ಲವು. ಎಸ್. ರಾಜಲಿಂಗಮ್’ರ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಮಾನ್ಯ ಜನರೆಲ್ಲಾ ತಮ್ಮ ಕೈಲಾದಷ್ಟು ಹಣವನ್ನು ನೀಡಲಾರಂಭಿಸದರು. ಮಲೇಶಿಯಾದ ಒಂದು ಸಂಸ್ಥೆ ಕೂಡ ‘ಕ್ರೌಡ್ ಫಂಡಿಂಗ್’ ಮುಖಾಂತರ 3500ಡಾಲರ್’ಗಳನ್ನು ಸೇರಿಸಿತ್ತು.ಇದನ್ನು ಗಮನಿಸಿದ ಮಲೇಶಿಯಾ ಸರಕಾರ ದೇಶದ ಸಾಲದ ಭಾರವನ್ನು ಇಳಿಸಲು ‘ಮಲೇಶಿಯಾ ಹೋಪ್ ಫಂಡ್ ‘ ಎಂಬ ನಿಧಿಯನ್ನು ಸ್ಥಾಪಿಸಿ  ಅಧಿಕೃತವಾಗಿ ಚಂದಾವನ್ನು ಸ್ವೀಕರಿಸಹತ್ತಿತು. ನೋಡು ನೋಡುತ್ತಿದ್ದಂತೆ ಕೇವಲ 24 ಗಂಟೆಗಳಲ್ಲಿ ಸಾಮಾನ್ಯ ನಾಗರಿಕರಿಂದ 13ಕೋಟಿ ರೂಪಾಯಿ ಮೊತ್ತದ ಚಂದಾ ಸಂಗ್ರಹಿಸಲಾಯಿತು!

ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ, ಮಲೇಶಿಯಾದ ಜನರು ಸ್ವಯಂ ಪ್ರೇರಿತರಾಗಿ ದೇಶದ ಸಾಲ ತೀರಿಸಲು ಹೆಗಲು ಕಟ್ಟಿ ನಿಂತರೆ, ನಮ್ಮ ದೇಶದಲ್ಲಿ ತಮ್ಮ ಪಾಲಿನ ಆದಾಯ ಕರವನ್ನೂ ನೀಡಲೂ ಹಿ೦ಜರಿಯುತ್ತಾರೆ. ಚಾಪೆಯ ಕೆಳಗೆ ನುಸುಳಿ ಕರ ನೀಡದೇ ಸರಕಾರವನ್ನು/ ದೇಶವನ್ನು ಹೇಗೆ  ವಂಚಿಸುವದು ಎಂದು ಮಾರ್ಗೋಪಾಯ ಹುಡುಕುತ್ತಾರೆ. 133ಕೋಟಿ ಜನಸಂಖ್ಯೆಯ ಭಾರತದಲ್ಲಿ 2015-2016 ರಲ್ಲಿ ಆದಾಯ ಕರ ರಿಟರ್ನ್  ಸಲ್ಲಿಸಿದವರ  ಸಂಖ್ಯೆ ಕೇವಲ 4ಕೋಟಿ 7ಲಕ್ಷ !  ಇದರಲ್ಲೂ ಆದಾಯ ಕರ ಪಾವತಿಸಿದವರ ಸಂಖ್ಯೆ 2ಕೋಟಿ 6ಲಕ್ಷ ಮಾತ್ರ, ಇದು ಭಾರತದ ಜನಸಂಖ್ಯೆಯ 1.7% ಮಾತ್ರ!  

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಭಾರತೀಯರನ್ನು ವಿಡಂಬನೆ ಮಾಡುವ ಸಂದೇಶವೊಂದು ಹೀಗಿತ್ತು: “ನಾವು ಭಾರತೀಯರು ವಿದ್ಯುತ್’ನ್ನು ಮಿತಿ ಮೀರಿ ಬಳಸುವದರಲ್ಲಿ ನಿಸ್ಸೀಮರು ಆದರೆ ಸರ್ಕಾರ ನಮ್ಮ ವಿದ್ಯುತ್ ಬಿಲ್’ನ್ನು ಮನ್ನಾ ಮಾಡಲೆಂದು ಬಯಸುತ್ತೇವೆ. ನಮ್ಮಲ್ಲಿ ಬಹುತೇಕರು ಎಂದಿಗೂ ಗಿಡವನ್ನು ನೆಡುವುದಿಲ್ಲ. ಆದರೆ  ಶುದ್ಧ ಗಾಳಿ ಮಾತ್ರ ನಮಗೆ ಬೇಕು.ನಾವು ಯಾವುದೇ ಅಪರಾಧ ಅಥವಾ ಅವಗಢದ ಕುರಿತು ಫಿರ್ಯಾದು/ದೂರು ನೀಡುವುದಿಲ್ಲ ಆದರೆ ಶೀಘ್ರವಾಗಿ ಕ್ರಮ ಜರುಗಿಸಬೇಕೆಂದು ಬಯಸುತ್ತೇವೆ. ದೇಶದಲ್ಲಿ ಬಹಳಷ್ಟು ಅಧಿಕಾರಿಗಳು ಲಂಚಕೋರರಾಗಿರುತ್ತಾರೆ. ಆದರೆ ಚಿಟಕಿ ಹೊಡೆಯುಷ್ಟರಲ್ಲಿ ಭ್ರಷ್ಟಾಚಾರ ಅಂತ್ಯವಾಗಬೇಕೆಂದು ಬಯಸುತ್ತೇವೆ. ರಸ್ತೆಯ ಮೇಲೆ ದಿನ ಬೆಳಗಾದರೆ ಕಸ ಎಸೆಯುವುದು ನಮ್ಮ ಹಕ್ಕೆಂದು ನಂಬುತ್ತೇವೆ; ಆದರೆ ರಸ್ತೆಗಳು ಯಾವಾಗಲೂ ಸ್ವಚ್ಛವಾಗಿರಬೇಕೆಂದು ಬಯಸುತ್ತೇವೆ. ನಾವು ಜಾತಿ ಮತ್ತು ಧರ್ಮದ ಆಧಾರದಲ್ಲೇ ಮತ ಚಲಾವಣೆ ಮಾಡುತ್ತೇವೆ; ಆದರೂ ದೇಶ ಜ್ಯಾತೀತವಾಗಿರಬೇಕೆಂದು ಬಯಸುತ್ತೇವೆ. ನಮ್ಮಲ್ಲಿ ಬಹುತೇಕರು ಎಂದಿಗೂ ಆದಾಯ ಕರ ನೀಡುವುದಿಲ್ಲ; ಆದರೆ ದೇಶದ ಅಭಿವೃದ್ಧಿ ಮಾತ್ರ ಶರವೇಗದಲ್ಲಾಗಬೇಕೆಂದು ಬಯಸುತ್ತೇವೆ”. ಹಾಗೆಂದು ನಮ್ಮ ದೇಶದಲ್ಲಿ ತೀರಾ ನಿರಾಶಾದಾಯಕ ಪರಿಸ್ಥಿತಿಯೇನಿಲ್ಲ, ಪ್ರಧಾನಿಯ ಮನವಿಯ ಮೇರೆಗೆ ಸ್ವಯಂ ಪ್ರೇರಿತರಾಗಿ ಕೊಟ್ಟಿಗಟ್ಟಲೆ ಸಾಮಾನ್ಯ ಜನ ಅಡುಗೆ ಅನಿಲದ ಸಬ್ಸಿಡಿ ತ್ಯಜಿಸಿದ್ದಾರೆ. ಅಂಕಿಅಂಶಗಳ ಪ್ರಕಾರ 2017-2018ರಲ್ಲಿ ಭಾರತದ ಸಾಲದ ಹೊರೆ 68ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಇದು ದೇಶದ ಜಿ.ಡಿ.ಪಿ.ಯ 39.2%. ನಮ್ಮ  ದೇಶದಲ್ಲಿ ಒಂದು ರಾಷ್ಟ್ರವಾದದ ಹೆಸರು ಹೇಳಿ ಪ್ರಸಿದ್ಧರಾಗಬೇಕು, ಇಲ್ಲ ರಾಷ್ಟ್ರವಾದವನ್ನು ವಿರೋಧಿಸಿ ಪ್ರಸಿದ್ಧರಾಗಬೇಕು. ಒಟ್ಟಿನಲ್ಲಿ ಪ್ರಸಿದ್ಧಿ ಪಡೆದು ಲೈಮ್’ಲೈಟ್’ಗೆ ಬರಲು ರಾಷ್ಟ್ರವಾದವನ್ನು ಊರುಗೋಲಾಗಿ ಉಪಯೋಗಿಸಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನೈಜ ರಾಷ್ಟ್ರವಾದಕ್ಕೆ ಜ್ವಲಂತ ನಿದರ್ಶನವಾದ ಮಲೇಶಿಯಾ ನಮಗೆಲ್ಲ ಮಾದರಿಯಾಗಿದೆ.  

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!