ಅಂಕಣ ಸ್ಪ್ಯಾನಿಷ್ ಗಾದೆಗಳು

ಹಾವಪ್ಪ ಅಲ್ಲ ನಾಗಪ್ಪ

ಬದುಕು ಎಷ್ಟು ಸುಂದರ. ನಮ್ಮ ಹಿರಿಯರು ಒಂದಲ್ಲ ಹಲವು ಹತ್ತು ಬವಣೆಗಳನ್ನ ಅನುಭವಿಸಿ, ನಮ್ಮ ಮುಂದಿನ ಪೀಳಿಗೆ ಮತ್ತೆ ಅದೇ ಕಷ್ಟದ ಹಾದಿ ತುಳಿಯದಿರಲಿ ಎನ್ನುವ ಭಾವನೆಯಿಂದ ತಮ್ಮ ಜೀವನದ ಸಾರವನ್ನ ಆಡು ಮಾತಿನಲ್ಲಿ ಮತ್ತು ಗಾದೆಯ ರೂಪದಲ್ಲಿ ನಮಗೆ ಕಟ್ಟಿಕೊಟ್ಟಿದ್ದಾರೆ. ಅವರು ನಮಗೆ ನೀಡಿರುವ ಇಂತಹ ಬೆಲೆ ಕಟ್ಟಲಾಗದ ಮಾತುಗಳನ್ನ ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಕೋರ್ಟು-ಕಚೇರಿ, ಜಗಳ, ಹೊಡೆದಾಟ ಇವೆಲ್ಲಾ ಪದಗಳು ಅರ್ಥ ಕಳೆದುಕೊಳ್ಳುತ್ತವೆ. ಇಂದಿನ ವೇಗದ ಯುಗದಲ್ಲಿ ಮೂಲಭೂತವಾಗಿ ಬದುಕ ಹಸನಾಗಿಸಿಕೊಳ್ಳಲು ಏನು ಬೇಕು ಅಷ್ಟು ಬಿಟ್ಟು ಮತ್ತೆಲ್ಲಾ ಮಾಡುತ್ತಿದ್ದೇವೆ ಮತ್ತು ಅದಕ್ಕೆ ನಾವು ಅಭಿವೃದ್ಧಿ ಎನ್ನುವ ಹೆಸರನ್ನ ಬೇರೆ ಕೊಟ್ಟುಕೊಂಡಿದ್ದೇವೆ. ವಿಪರ್ಯಾಸವೆಂದರೆ ಇದೆ ಇರಬೇಕು. ಇರಲಿ.

ಬದಲಾವಣೆ ನಮ್ಮಿಂದ ಆರಂಭವಾಗಲಿ

ನೀವು ಟಿಸಿಎಸ್‘ನಲ್ಲಿರಿ , ಇನ್ಫೋಸಿಸ್‘ನಲ್ಲಿ ಕೆಲಸ ಮಾಡಿ ಅಥವಾ ಮತ್ತ್ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿ, ಅಲ್ಲಿನ ಪರಿಸ್ಥಿತಿಗೆ ಹೊಂದುಕೊಂಡು ಕೆಲಸ ಮಾಡುತ್ತಾ ಹೋದರೆ ಉತ್ತಮ. ಅಲ್ಲಿ ಟೀಮ್ ಲೀಡರ್ ಸರಿಯಿಲ್ಲ ಅಥವಾ ಬೇರೆ ಏನೋ ಕಾರಣ ಹೇಳಿ ಕೆಲಸ ಬಿಟ್ಟು ಮತ್ತೊಂದು ಕೆಲಸ ಸೇರಿಕೊಂಡಿರಿ ಎಂದುಕೊಳ್ಳಿ. ಅಲ್ಲೇನು ಎಲ್ಲವೂ ಸರಿ ಇರುತ್ತದೆಯೇ? ಅಲ್ಲಿಯೂ ತನ್ನದೇ ಅದ  ಸಮಸ್ಯೆಗಳು ಇದ್ದೆ ಇರುತ್ತವೆ. ನಮ್ಮ ಹಿರಿಯರಿಗೆ ಇನ್ಫೋಸಿಸ್ ಸಂಸ್ಥೆ ಬರಬಹದು ಎನ್ನುವ ಅರಿವಿರಲಿಲ್ಲ. ಆದರೆ ಬದುಕು ಎಷ್ಟೇ ಬದಲಾಗಲಿ ಮೂಲಭೂತ ವಿಷಯಗಳು ಎಂದೂ ಬದಲಾಗುವುದಿಲ್ಲ ಎನ್ನುವ ಅರಿವಂತೂ ಖಂಡಿತಾ ಇತ್ತು . ಅದಕ್ಕೆ ಅವರು ಅಂದದ್ದು ‘ಹಾವಪ್ಪ ಅಲ್ಲ ನಾಗಪ್ಪ’ ಎಂದು. ಅರ್ಥ ಇಷ್ಟೇ ಯಾವುದೊ ವಿಷಯಕ್ಕೆ ಬೇಸರಪಟ್ಟುಕೊಂಡು ಬೇರೆ ಬೇಕು ಎಂದಾಗ ಹೆಸರಷ್ಟೇ ಬದಲಾವಣೆ; ಹಾವಪ್ಪ ಎಂದರೂ ಹಾವೇ ನಾಗಪ್ಪ ಎಂದರೂ ಹಾವೇ. ನೀನು ಬದಲಾಗದೆ ಪರಿಸ್ಥಿತಿ ಬದಲಾಗುವುದಿಲ್ಲ ಎನ್ನುವುದು.

ಇದನ್ನು ಸ್ಪಾನಿಶರು  ‘Es el mismo perro con diferente colla“ (ಈಸ್ ಎಲ್ ಮಿಸ್ಮೋ ಪೆರ್ರೋ ಕೋನ್ ಡಿಫರೆಂತೆ ಕೊಯರ್) ಎಂದರು. ‘ಅದೇ ನಾಯಿ ಬದಲಾದ ಕತ್ತಿನಪಟ್ಟಿ’ ಎನ್ನುವುದು ಯಥಾವತ್ತು ಅನುವಾದ. ನಾವು ಬಯಸಿದ ಬದಲಾವಣೆ ನಮ್ಮಲ್ಲಿ ಆಗಬೇಕು. ಆಗ ಮಾತ್ರ ನಿಜವಾಗಿ ಹೊಸದಾಗಿ ಬಯಸಿದ್ದು ಸಿಗಬಹುದು. ನಮ್ಮ ಪ್ರಯತ್ನವಿಲ್ಲದೆ ಹೊಸ ಬದಲಾವಣೆ ಬಯಸಿದರೆ ಸಿಗುವುದು ಅದೇ ನಾಯಿ. ಕತ್ತಿನಪಟ್ಟಿ ಬದಲಾಯಿಸಿ ಕೊಡುತ್ತಾರೆ ಅಷ್ಟೇ. ನೀವು ಕೆಲಸ ಮಾಡುವ ಕಂಪನಿಯ ಹೆಸರು ಬದಲಾಯಿತು; ನಿಮ್ಮ ಜೀವನದಲ್ಲಿ ನಿಜವಾಗಿ ಬದಲಾವಣೆ ಸಿಕ್ಕಿತೇ?

ಇನ್ನು ಇಂಗ್ಲಿಷರು ‘It’s the same people under a different name. Nothing has really changed’ ಜೊತೆಗೆ ‘same wine in a new bottle’ ಎನ್ನುವ ಹಲವು ನುಡಿಗಳನ್ನು ಬಳಸುತ್ತಾರೆ. ಇವೆಲ್ಲವುಗಳ ಅರ್ಥದಲ್ಲಿ ಮಾತ್ರ ಹೆಚ್ಚಿನ ಬದಲಾವಣೆ ಇಲ್ಲ .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

Es el mismo: ಒಂದೇ ರೀತಿಯ, ಅದನ್ನೇ ಹೋಲುವ ಎನ್ನುವ ಅರ್ಥ ಕೊಡುತ್ತದೆ. ಈಸ್ ಎಲ್ ಮಿಸ್ಮೋ ಎನ್ನುವುದು ಉಚ್ಚಾರಣೆ.

perro: ನಾಯಿ ಎನ್ನುವ ಅರ್ಥ. ಪೆರ್ರೋ ಎನ್ನುವುದು ಉಚ್ಚಾರಣೆ.

con diferente: ವಿಥ್ ಡಿಫರೆಂಟ್, ಬೇರೆಯದಾದ, ಬದಲಾದ ಎನ್ನುವ ಅರ್ಥ ಕೊಡುತ್ತದೆ. ಕೋನ್ ಡಿಫರೆಂತೆ ಎನ್ನುವದು ಉಚ್ಚಾರಣೆ.

collar: ಕತ್ತಿನಪಟ್ಟಿ ಎನ್ನುವ ಅರ್ಥ. ಕೊಯರ್ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!