ಇಂದಿನ ಗಾದೆ ವಿವರಿಸಲು ಒಂದು ಸಣ್ಣ ಕಥೆ ನಿಮಗೆ ಹೇಳಬೇಕಿದೆ. ಒಂದೂರು ಆ ಊರಿಗೊಬ್ಬ ರಾಜ. ಅವನಿಗೊಬ್ಬ ಮಂತ್ರಿ. ಒಂದು ದಿನ ರಾಜ ತನ್ನ ಮಂತ್ರಿಯ ಜೊತೆ ಬೇಟೆಗೆ ಹೊರಡುತ್ತಾನೆ. ಬೇಟೆಯೆಲ್ಲ ಮುಗಿದು ಅರಣ್ಯದಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತ ತನ್ನ ಮಂತ್ರಿಯ ಕುರಿತು ಹೇಳುತ್ತಾನೆ: “ಮಂತ್ರಿಗಳೇ ನಮ್ಮ ಅರಮನೆಯ ಹಿಂದಿನ ತೋಟದಲ್ಲಿ ಎಷ್ಟೊಂದು ಜನ ಮಾಲಿಗಳು ಕಷ್ಟಪಟ್ಟು ಪೋಷಿಸುತ್ತಾರೆ. ಆದರೂ ಇಲ್ಲಿನ ವನಸುಮಗಳು ಕಂಗೊಳಿಸುವ ರೀತಿ ಇರುವುದಿಲ್ಲ ಏಕೆ?” ಎಂದು. ಅದಕ್ಕೆ ಮಂತ್ರಿ ಶಾಂತಚಿತ್ತದಿಂದ “ಮಹಾಪ್ರಭುಗಳೆ ಯಾರಿಗೆ ಯಾರೂ ಆಸರೆಯಿಲ್ಲವೊ ಅವರಿಗೆ ಭಗವಂತನ ಆಸರೆ ಮತ್ತು ಅನುಗ್ರಹ ಹೆಚ್ಚಾಗಿರುತ್ತದೆ. ಹೀಗಾಗಿ ವನಸುಮಗಳು ಹೆಚ್ಚು ಉಲ್ಲಸಿತವಾಗಿ ಕಾಣುತ್ತವೆ” ಎಂದನು. ರಾಜ ಮಂತ್ರಿಯ ಮಾತಿನಿಂದ ಸಮಾಧಾನ ಹೊಂದಿದವನಂತೆ ಕಾಣಲಿಲ್ಲ. “ನಮ್ಮ ಮಾಲಿಗಳು ಅಷ್ಟೊಂದು ಅಕ್ಕರೆಯಿಂದ ಗಿಡಗಳನ್ನು ಪೋಷಿಸುತ್ತಾರೆ. ಕಾಲಕಾಲಕ್ಕೆ ಗೊಬ್ಬರ, ಕೀಟನಾಶಕ ಎಲ್ಲವನ್ನೂ ಹಾಕುತ್ತೇವೆ. ಆದರೆ ಇಲ್ಲಿ ನೋಡಿ ಈ ಅರಣ್ಯದಲ್ಲಿ ಗಿಡಗಳನ್ನು ಸಂರಕ್ಷಿಸುವರು ಯಾರೂ ಇಲ್ಲ. ಹೀಗಿದ್ದೂ ಹೇಗೆ ಅಷ್ಟೊಂದು ನಳನಳಿಸಲು ಸಾಧ್ಯ?” ಈ ಬಾರಿ ರಾಜನ ಧ್ವನಿಯಲ್ಲಿ ಏರಿಕೆಯಿತ್ತು. “ಪ್ರಭು ತಾವು ತಪ್ಪು ತಿಳಿಯದಿದ್ದರೆ ಒಂದು ವಿಷಯವನ್ನ ಉದಾಹರಣೆ ಸಹಿತ ವಿವರಿಸಿ ಹೇಳುತ್ತೇನೆ” ಮಂತ್ರಿ ಅತ್ಯಂತ ವಿನಯದಿಂದ ರಾಜನಿಗೆ ನಿವೇದಿಸಿದ. ’ಹೇಳು’ ಎನ್ನುವಂತೆ ರಾಜ ತಲೆಯಾಡಿಸಿದ. “ಸ್ವಾಮೀ ನಮ್ಮ ಸೈನಿಕರ ಮಕ್ಕಳ ನೋಡಿ ಜೀವನದ ಕಷ್ಟಗಳನ್ನ ಹುಟ್ಟಿನಿಂದಲೇ ಕಂಡಿರುತ್ತಾರೆ, ಅತ್ಯಂತ ಕಡಿಮೆ ಆಹಾರ, ಬಟ್ಟೆಯಲ್ಲೂ ಅವರ ಮೈಕಟ್ಟು ನೋಡಿ ಎಷ್ಟೊಂದು ಸದೃಢರಾಗಿರುತ್ತಾರೆ. ಕೆಲವೊಮ್ಮೆ ಅವರಿಗೆ ಮೂರು ಹೊತ್ತು ಊಟವೂ ಸಿಗುವುದಿಲ್ಲ. ಆದರೂ ಅವರ ಪರಾಕ್ರಮ ಸಾಹಸ ನೋಡಿ. ಅದೇ ಮಟ್ಟದ ಸಾಹಸ ರಾಜಕುಮಾರನಿಂದ ಅಥವಾ ನನ್ನ ಮಗನಿಂದ ನಿರೀಕ್ಷಿಸಲು ಸಾಧ್ಯವೇ? ಅವರು ಶೂರರಲ್ಲ ಎಂದಲ್ಲ. ಆದರೆ ಸಾಧಾರಣ ಸೈನಿಕರ ಮಗನಲ್ಲಿರುವ ಕೆಚ್ಚು ನಮ್ಮ ಮಕ್ಕಳಲ್ಲಿ ಬರಲು ಸಾಧ್ಯವಿಲ್ಲ. ಏಕೆಂದರೆ ಗಿಡಕ್ಕೆ ಹೇಗೆ ನೀರು, ಗೊಬ್ಬರ, ಕೀಟನಾಶಕ ಹಾಕಿ ಪೋಷಿಸಿದ್ದೆವೋ, ಹಾಗೆಯೇ ಅವರನ್ನೂ ಕೂಡ ಪೋಷಿಸಿದ್ದೇವೆ. ಸಹಜವಾಗಿ ಬೆಳೆಯುವುದಕ್ಕೂ ಕೃತಕವಾಗಿ ಬೆಳೆಯುವುದಕ್ಕೂ ಇರುವ ವ್ಯತ್ಯಾಸವಿದು” ಎಂದು ಮುಗಿಸಿದ ಮಂತ್ರಿ.
ಇದನ್ನೇ ನಮ್ಮ ಹಿರಿಯರು ‘ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು!’ ಎಂದರು. ಸಹಜವಾಗಿ ಕಟ್ಟಿಕೊಳ್ಳುವ ಬದುಕಿದೆಯಲ್ಲಾ ಅದು ಎಲ್ಲಕ್ಕಿಂತ ದೊಡ್ಡದು ಮತ್ತು ಉತ್ತಮವಾದುದು ಎನ್ನುವುದು ಗಾದೆಯ ಸಾರ.
ಇದನ್ನು ಸ್ಪಾನಿಶರು ‘La abundancia mata la gana’ (ಲ ಅಬುಂಡನ್ಸಿಯ ಮಾತಾ ಲ ಗಾನ ) ಎಂದರು. ಸಿರಿವಂತಿಕೆ ಆಸೆ(ಏನ್ನನ್ನಾದರೂ ಮಾಡುವ ಆಸೆ )ಯನ್ನ ಕೊಲ್ಲುತ್ತದೆ ಎನ್ನುವುದು ಗಾದೆಯ ಯಥಾವತ್ತು ಅರ್ಥ. ಎಲ್ಲವೂ ಕಷ್ಟ ಪಡುವುದಕ್ಕೆ ಮುಂಚೆಯೇ ಸಿಕ್ಕರೆ ಏನಾದರೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಕಿಚ್ಚು ಅಥವಾ ಆಸೆ ವ್ಯಕ್ತಿಯಿಂದ ದೂರವಾಗುತ್ತದೆ ಎನ್ನುವುದು ಗಾದೆಯ ಅರ್ಥ.
ಇನ್ನು ಇಂಗ್ಲಿಷರು ’Abundance of things engenders disdainfulness’ ಎಂದರು. ಭಾಷೆ ಬೇರೆಯಾದರು ಭಾವವೊಂದೇ ಅಲ್ಲವೇ?
ಬಡತನದಲ್ಲಿ ಬಡತನವೊಂದೇ ಸಮಸ್ಯೆ ಆದರೆ ಸಿರಿತನ ತರುವು ಸಮಸ್ಯೆಗಳು ಹಲವು. ಸಮಾಜ ಇದನ್ನು ಅರಿತರೆ ಒಳಿತು.
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
La abundancia: ಹೆಚ್ಚಿನ, ಹೇರಳವಾಗಿ, ಕೊರತೆಯಿಲ್ಲದ ಎನ್ನುವ ಅರ್ಥ. ಲ ಅಬುಂಡನ್ಸಿಯ ಎನ್ನುವುದು ಉಚ್ಚಾರಣೆ.
mata: ಕೊಲ್ಲು, ಕೊಲ್ಲುವುದು, ಕೊಲ್ಲುತ್ತದೆ ಎನ್ನುವ ಅರ್ಥ. ಮಾತಾ ಎನ್ನುವುದು ಉಚ್ಚಾರಣೆ.
la gana: ಆಸೆ, ಕಿಚ್ಚು, ಹಂಬಲ ಎನ್ನುವ ಅರ್ಥ. ಲ ಗಾನ ಎನ್ನುವುದು ಉಚ್ಚಾರಣೆ.