ಅಲ್ಲಿ ನಿಂತಿದ್ದದ್ದು ಕಳೆದ ನವೆಂಬರ್‘ನಲ್ಲಿ ನಾವೇ – ನಾನು, ಧರ್ಮಶ್ರೀ, ಸಿಂಧೂ ಮತ್ತು ಸಾಂಗತ್ಯ. ಅವತ್ತು ಅವರು ಮನೆಯಲ್ಲಿರಲಿಲ್ಲ. ನವೆಂಬರ್‘ನಲ್ಲಿ ಕಿರಿಕಿರಿ ಬೇಡವೆಂದು ಯು.ಎಸ್.ಎ ಗೆ ಹೋಗಿದ್ದರು. ಇವತ್ತು ಜೂನ್ 14. ವಾರದ ಮೊದಲೇ ಭೇಟಿಗೆ ಅವಕಾಶ ಕೇಳಿದ್ದೆವು. ಎರಡು ಬಾರಿ ಕರೆಗಂಟೆ ಒತ್ತಿದರೂ ಯಾರು ಉತ್ತರಿಸಲಿಲ್ಲ. ಕಾಲೇಜಲ್ಲಿ ವೈವಾ ಪರೀಕ್ಷೆಗೆ ಒಳ ಹೋಗುವ ಸ್ಟೂಡೆಂಟಿನ ಪರಿಸ್ಥಿತಿ. ನನ್ನ ಮುಖ ನೋಡಿ ಧರ್ಮಶ್ರಿ ಅವರೂ,ಸಿಂಧೂ ಮಜಾ ತಗೋತಾ ಇದ್ದರು.
ಸಾಂಗತ್ಯ ,ಧರ್ಮಶ್ರೀ ಕೊಡಿಸಿದ ಚಾಕಲೇಟಿನ ತನ್ನಮ್ಮನ ಚೂಡಿಗೆ ಬಳಿಯುವ ಕಾರ್ಯದಲ್ಲಿ ಬಿಸಿ.
ನಿಧಾನವಾಗಿ ಬಾಗಿಲು ತೆರೆಯಿತು. ಗಾಳಿ ಸ್ತಂಭಿಸೋದು, ಅಲೆಗಳು ದಡಕ್ಕೆ ಬಡಿಯೋವಾಗ ಫ್ರೀಜ್ ಆಗೋದು, ಹಂಗೇನಿಲ್ಲ. ಭೈರಪ್ಪ ಬಾಗಿಲಲ್ಲಿ ನಿಂತಿದ್ದರು.
ಅಷ್ಟೇ.
ಅವರ ಹಿಂದೆ ಒಳಹೋಗುವಾಗ ನನಗಂತೂ ನಡುಕ. ಅವರು ಕೂತ ಹಾಗೇ ಕಾಲಿಗೆ ಬಿದ್ದೆ. ಶಿಷ್ಟವಾಗಿ ಹೇಳುವುದಾದರೆ ನಮಸ್ಕರಿಸಿದೆ.
‘ಎಲ್ಲಿ ಕೆಲಸ? ಇಲ್ಲೆಲ್ಲಿ ಉಳಕೊಂಡಿದ್ದೀರಿ’ ಎಲ್ಲ ವಿಚಾರಿಸಿದ ಬಳಿಕ ನಮ್ಮ ಪ್ರಶ್ನೆಗಳು, ಅವರ ವಿವರಣೆ ಶುರು.
(Disclaimer – ಎಲ್ಲವನ್ನೂ ಯಥಾವತ್ ಹಾಕಿದರೆ ಮತ್ತೆ ವಿವಾದ ಸುಮ್ಮನೆ ಶುರುವಾಗುವುದರಿಂದ ಅವನ್ನೆಲ್ಲ ಒಳಗೆ ಮಡಿಸಿಟ್ಟು ಉಳಿದದ್ದು. ಇಲ್ಲಿ ನೀವು ಗಮನಿಸಬೇಕಾದದ್ದು ನಮ್ಮ ಪ್ರಶ್ನೆಗಳಿಗೆ ಅವರ ಉತ್ತರ ಹೊರತು ಅವರ ಬರೇ ಮಾತುಗಳಲ್ಲ. ಅದಲ್ಲದೆ ಅವರ ಮಾತುಗಳ ನಮ್ಮ ಅಕ್ಷರ ರೂಪದಲ್ಲಿ ಬರೆದ ಕಾರಣ ಇದು ನಾವು ಗ್ರಹಿಸಿದ್ದಷ್ಟೇ. ಇವನ್ನೆಲ್ಲ ಓದುವಾಗ ಗಮನಿಸಿ.ಮತ್ತು ಮನ್ನಿಸಿ)
‘ನಿಮ್ಮ ಕೃತಿಗಳ ಬಗ್ಗೆ ಕೇಳಬಹುದಾ ಸರ್?’
‘ಕೇಳಿ ಕೇಳಿ’
‘ಸಾರ್, ತಂತು ಸ್ವಾತಂತ್ರೋತ್ತರ ಭಾರತ ಎಮರ್ಜೆನ್ಸಿ ಪಿರಿಯಡ್ ಕತೆ ಆಯ್ತು, ಯಾನ ಭವಿಷ್ಯದ್ದಾಯ್ತು, ಕವಲು ಈಗಿನದಾಯ್ತು, ಸಾರ್ಥ ಆಯ್ತು.ಈ ನಡುವೆ ಒಂದು ಸ್ವಾತಂತ್ರ್ಯ ಪೂರ್ವ ಕಾಲ ನಡುವೆ ಬಾಕಿ ಆಗಿದೆ ಅಲ್ವಾ ಸಾರ್? ಅದರ ಕುರಿತು ಏನಾದರೂ?’
‘ನಂಗೆ ಅದರ ಬಗ್ಗೆ ಏನೂ ಹೊಳೆದಿಲ್ಲ. ಈಗಲೂ. ಹಾಗಾಗಿ ಬರೆದಿಲ್ಲ’
‘ಭಿತ್ತಿಯ ಬಗ್ಗೆ ಒಂದು ಪ್ರಶ್ನೆ ಇದೆ ಸಾರ್. ಭಿತ್ತಿಯಲ್ಲಿ ಈ ವೈಯಕ್ತಿಕ ವಿವರಗಳು ಅಂದರೆ ಕುಟುಂಬದ ಕುರಿತು ಜಾಸ್ತಿ ಯಾಕೆ ಇಲ್ಲ?’
‘ಸಂಸಾರದ್ದು ಅಂದರೆ ನನ್ನ ಮದುವೆ ಮಕ್ಕಳು ಇದನ್ನ ಬರೀಬೇಕಾದರೆ ಇಂತಹದ್ದನ್ನು ಬರೀಬೇಕು ಇಂತಹದ್ದನ್ನ ಬಿಡಬೇಕು ಅಂತ ಇರಲಿಲ್ಲ. ಅದು ನನ್ನ ಬೆಳವಣಿಗೆ ಕುರಿತು. ಯಾಕೆ ಬರಲಿಲ್ಲ ಅಂದರೆ ಅದರಲ್ಲಿ ವಿಶೇಷ ಏನಿದೆ? ಎಲ್ಲರ ಹಾಗೆ ನನಗೂ ಮದುವೆಯಾಯಿತು.ನನಗೂ ಮಕ್ಕಳಾಯಿತು. ಅದರೊಳಗೆ ಹೇಳ್ಕೊಳುವಂತಹದ್ದು ಏನಿದೆ? ಅದು ಹಾಗೆ ಕೈ ಬಿಟ್ಟು ಹೋಯಿತು.ಒಂದು ಸಲ ಬಿಟ್ಟ ಮೇಲೆ ಅದನ್ನ ಎಲ್ಲಿ ಸೇರಿಸೋದು ಅನ್ನೋದೆ ಸಮಸ್ಯೆಯಾಯಿತು. ಅದಕ್ಕೆ ವಿಶೇಷ ಕಾರಣ ಏನಿಲ್ಲ’
‘ನೆಲೆ ಓದುವಾಗ ಆ ಲಿವ್ ಇನ್ ಆಗಲೇ ಬರೆದಿದ್ರಲ್ಲ ಅಂತ ಆಶ್ಚರ್ಯ; ಅಂಚು ಓದುವಾಗ ಅಮೃತಾ ಎಷ್ಟು ಸಲ ಸಾವಿಗೆಳೆಸುತ್ತಾಳೆ ಅಂತ .ಈಗ ನೋಡುವಾಗ ಅದು ಸಹಜ ಅನಿಸ್ತದೆ‘
‘ಹೌದು’
‘ಸರ್, ನೀವು ಸಣ್ಣ ಕತೆ ಜಾಸ್ತಿ ಯಾಕೆ ಬರೀರಿಲ್ಲ‘
‘ಅದು ನನ್ನ ಮಾಧ್ಯಮ ಅನಿಸಿಲ್ಲ. ಹಾಗಾಗಿ’
‘ಸಾರ್ಥ ಅನ್ನುವುದು ನಿಜವಾಗಿ ಇತ್ತಾ? ಅಲ್ಲ ಇಡೀ ಕಾದಂಬರಿಯ ತರಹ ಅದೂ ಕಲ್ಪನೆಯಾ ಸಾರ್?’
‘ ಹೌದು.ಸಾರ್ಥ ಅಂದರೆ ಮತ್ತೇನಲ್ಲ ಇಂಗ್ಲೀಷಲ್ಲಿ ಕೆರವಾನ್ ಅಷ್ಟೇ’
‘ಪರ್ವ ಬರೆದದ್ದು ಅಂತ ಬರೆದ್ರಿ, ಮಂದ್ರ ಬರೆದದ್ದು ಬರೆದ್ರಿ. ತಂತುವಿನಂತಹ ದೊಡ್ಡ ಕಾದಂಬರಿ ಬರೆದ ಕುರಿತು ಯಾಕಿಲ್ಲ?’
‘ಅದು ಬರೆಯಲು ಅಷ್ಟು ಅಧ್ಯಯನ ಬೇಕಿತ್ತು. ಪರ್ವಕ್ಕೆ ಪ್ರವಾಸ ಹೋಗಿದ್ದೆ. ಮಂದ್ರಕ್ಕೆ ಸಂಗೀತ ಕಲಿತೆ. ಎಲ್ಲ ಕಾದಂಬರಿಗಳಿಗೂ ಅಧ್ಯಯನ ಮಾಡಬೇಕಾಗಿ ಬರುತ್ತದೆ. ಹಾಗಂತ ಎಲ್ಲವನ್ನೂ ಬರೆದಿದ್ದರ ಕುರಿತು ಬರೆಯಲು ಆಗುವುದಿಲ್ಲ’
‘ಕವಲು ಬಗ್ಗೆ ನನಗೊಂದು ಪ್ರಶ್ನೆಯಿದೆ ಸರ್. ಅದರ ಅಂತ್ಯ ಅಷ್ಟು ಸಹಜ ಅನಿಸೋದಿಲ್ಲ. ಬೇಕಂತ ಸುಖಾಂತ್ಯ ಬಂದ ಹಾಗೆ…’
‘ಅಲ್ಲಿ ಸುಖಾಂತ ಅಂತ ಯಾವುದನ್ನ ಹೇಳ್ತೀರಿ? ಮಂಗಳೆಯ ಮಗು ತನ್ನಪ್ಪ ಯಾರು ಅಂತ ಕೇಳುವಾಗ ಅದನ್ನು ಹೊಡೆಯುತ್ತಾಳೆ.ಅದು ಸುಖಾಂತವೇ? ಇನ್ನು ಪುಟ್ಟಕ್ಕನ ಮದುವೆಯ ಕುರಿತು ಹೇಳುವುದಾದರೆ ಆಕೆ ಕೊಂಚ ತಲೆ ಸ್ವಾಧೀನ ಕಡಿಮೆ ಅಂತ ಬಿಟ್ಟರೆ ಫಿಸಿಕಲೀ ಶೀ ಈಸ್ ಆಲ್ ರೈಟ್.ಅದು ಅಸಹಜ ಅಂತ್ಯ ಆಗೊಲ್ಲ. ಕಾದಂಬರಿ ಬರೀಬೇಕಾದರೆ ಕತೆ ಎಳ್ಕೊಂಡು ಹೋಗುತ್ತೆ.ನಾನು ಯೋಚಿಸಿ ಬರೆದದ್ದಲ್ಲ.’
‘ಮುಂದೆ ಯಾವುದಾದರೂ ಬರಿಯೋ ಸಬ್ಜೆಕ್ಟ್ ಇದೆಯಾ? ಸಾಹಿತ್ಯ ವಿಮರ್ಶೆ ಈ ತರ?’
‘ಸದ್ಯ ಏನಿಲ್ಲ. ವಿಮರ್ಶೆ ನಾನು ಬರೆಯಲು ಹೋಗಲ್ಲ. ಕ್ರಿಯೇಟಿವ್ ಬರಹಗಾರ ಅದನ್ನೆಲ್ಲ ಬರೆಯಲು ಹೋಗಬಾರದು. ಯಾಕಂದ್ರೆ ಆ ವಿಮರ್ಶೆಗೆ ಬಿದ್ದರೆ ಸೃಜನಶೀಲತೆ ಹಾಳಾಗಿ ಹೋಗುತ್ತದೆ. ನವೋದಯ ಕಾಲದಲ್ಲಿ ವಿಮರ್ಶೆ ಅಂತ ಬರೀತಿದ್ದದ್ದಕ್ಕಿಂತ ಅದರಲ್ಲಿ ಮೆಚ್ಚುಗೆಯ ಅಂಶ ಹೆಚ್ಚು. ಲೇಖಕರೇ ವಿಮರ್ಶಕರಾದಾಗ ಎರಡು ರೀತಿಯ ಅಪಾಯ ಬಂತು ಒಂದು ತಮಗಾಗದವರ ಮೇಲೆ ಆಕ್ರಮಣ, ತಾನು ಬರೆದ ಪುಸ್ತಕಗಳ ಬೆಂಬಲಿಸುವ ರೀತಿ. ಈ ತೆರನಾದ್ದು ಜಾಸ್ತಿ.
ಮತ್ತೆ ಪಾಶ್ಚಾತ್ಯದ ಓದಿನಿಂದ ಬಂದ ಬರಹದ ಔಟ್-ಪುಟ್ ಕಡಿಮೆ.ಇ ಲ್ಲಿ ಮುಖ್ಯ ಅಡಿಗರು. ಅವರಿಗೆ ಸಂಸ್ಕೃತ ಜ್ಞಾನ ಇತ್ತು. ಪುರಾಣಗಳ ಪರಿಚಯ ಇತ್ತು. ಹಾಗಾಗಿ ಅವರಲ್ಲಿ ಭಾರತೀಯತೆನೇ ಇತ್ತು. ಒಂದು ಗಟ್ಟಿತನ. ಈ ನೆಲದಿಂದ ಹುಟ್ಟದನ್ನು ಬರೆದಾಗ ಅದರಲ್ಲಿ ಸತ್ತ್ವ ಇರುವುದಿಲ್ಲ. ಹಾಗಾಗೇ ಅದು ಬಹುಬೇಗ ಸೊರಗಿ ಹೋಯಿತು’
‘ ಹೌದು ಯಾರು ಮೂಲ ಅಧ್ಯಯನ ಮಾಡ್ತಾರೆ ಅವರನ್ನ ಹೀಗಳೆಯುವ ಪ್ರವೃತ್ತಿ ಬೆಳೆಯಿತು ಅಲ್ವಾ ಸರ್?’
‘ಹೌದ್ಹೌದು. ಗುಂಪುಗಾರಿಕೆ ಬೆಳೀತು ಅಷ್ಟೆ.ಯಾವುದೇ ಒಂದು ಸಾಹಿತ್ಯ ಕೃತಿಯಲ್ಲಿ ಕತೆ ಬೆಳೀತಾ ಬೆಳೀತಾ ವಿಚಾರ ಬರಬೇಕು. ಪಾತ್ರಕ್ಕೆ ಒಂದು ಸಮಸ್ಯೆ ಬರುವಾಗ ಅದರ ಪರಿಹಾರ ರೂಪದಲ್ಲಿ ವಿಚಾರ ಬರಬೇಕು ಅದನ್ನ ತುರುಕುವುದು ಸರಿಯಲ್ಲ. ಪಾತ್ರ ತನ್ನ ಅನುಭವದ ಮೂಲಕ ಪ್ರತಿಬಿಂಬಿಸಬೇಕು. ತನ್ನ ಸಿದ್ದಾಂತದ ಮೂಲಕ ಅಲ್ಲ. ಅದನ್ನ ಅರ್ಥ ಮಾಡ್ಕೋಬೇಕು.’
‘ಸಮಾಜವಾದ?’
‘ಅಂಬೇಡ್ಕರ್, ಲೋಹಿಯಾ ಎಲ್ಲ ಬದಲಾವಣೆಗೆ ಅಂತ ಸಮಾಜವಾದ ಮಾಡಿದವರು. ಅವರು ಹೋರಾಟಗಾರರು. ನಾವು ನೋಡಬೇಕಾದದ್ದು ‘ಪ್ಯೂರ್ ಸೋಶಿಯಾಲಜಿಸ್ಟ್’ ಕಡೆಗೆ. ನನ್ನ ಓದಿಗೆ ದಕ್ಕಿದವರು ಕೆ.ಎಮ್.ಕಪಾಡಿಯಾ, ಎಮ್.ಎನ್.ಶ್ರೀನಿವಾಸ್ ಇವರುಗಳು. ಇವರೆಲ್ಲ ಯಾವ ಪಕ್ಷದ ಪರ ಇಲ್ಲದೆ ನೋಡ್ಕೊಂಡವರು. ಶ್ರೀನಿವಾಸ್ ಅವರ ಒಂದು ಲೇಖನ ಓದಿ ‘ ಅರ್ಬನೈಸೇಷನ್ ಆ್ಯಂಡ್ ಸಂಸ್ಕೃತೈಸೇಷನ್’
ಉದಾಹರಣೆಗೆ ಇಂಗ್ಲೀಷ್ ವಿದ್ಯಾಭ್ಯಾಸ ಮಾಡಿದವರು ಸಂಪ್ರದಾಯಗಳಿಂದ ದೂರ ಆದರು; ಆದರೆ ಅವರು ಪೂಜೆ ಇತ್ಯಾದಿ ಆದಾಗ ಒಂದು ಮಂಟಪ ಮಾಡಿರ್ತಾರೆ. ಈ ಮಂಟಪದ ಚಿತ್ರ ಅವರಿಗೆ ಎಲ್ಲಿಂದ ಬಂತು? ಅದು ಸಿನಿಮಾದಲ್ಲಿ ನೋಡಿದ್ದು? ಆಗ ಅವರು ಹಾಡೋ ಸೋಬಾನೆ ಪದಗಳು ಕೂಡ ಹಾಗೇ . ಯಾಕೆಂದರೆ ಅವರು ಶಾಸ್ತ್ರ ಅಂತ ತಿಳ್ಕೊಂಡದ್ದಕ್ಕೆಲ್ಲ ಮಾಡೆಲ್ ಹೀಗೇ ಬರುತ್ತೆ. ‘
‘ಬುದ್ಧ ಮತ್ತು ಅಹಿಂಸೆ?’
‘ ನೋಡಿ. ಬುದ್ಧನ ಅಹಿಂಸೆ ಮತ್ತು ಇತರ ಎಲ್ಲ ಮನುಷ್ಯರಿಗೆ. ಆಹಾರದಲ್ಲೂ ಅಹಿಂಸೆ ಅನ್ನುವುದು ಇರೋದು ಜೈನರು. ಅದು ಬ್ರಾಹ್ಮಣರಿಗೂ ಬಂತು. ಮೊದಲು ಬ್ರಾಹ್ಮಣರೂ ಮಾಂಸ ತಿಂತಾ ಇದ್ದರು. ಉತ್ತರ ಭಾರತದಲ್ಲಿ ನೋಡಿದ್ರೆ ಈಗಲೂ ತಿನ್ನೋರು ಇದಾರೆ. ಜೈನರು ಆಹಾರದಲ್ಲಿ ಮಾಂಸ ಪ್ರಾಣಿಹಿಂಸೆ ಅನ್ನುವುದರ ಪ್ರಭಾವ ಬ್ರಾಹ್ಮಣರ ಮೇಲಾಗಿದೆ ಅಷ್ಟೇ. ಆಹಾರ ಸಂಸ್ಕೃತಿ ಅಂತೆಲ್ಲ ಬಳಸೋ ಪದ ಎಲ್ಲ ಮಿಸ್ ಯೂಸ್ ಆಫ್ ವರ್ಡ್ಸ್ ಅಷ್ಟೇ.
‘ಹೌದು ಸರ್. ಮಾಂಸ ತಿನ್ನೋದು ಷೋಕಿಗೆ ಅನ್ನೋ ತರಹವೂ ಆಗಿದೆ. ನಮ್ಮಲ್ಲಿ ಕೂಡ ಮಾಂಸ ತಿನ್ನೋದು ಬ್ರಾಹ್ಮಣ್ಯನ ಧಿಕ್ಕರಿಸೋಕೆ ಅಂತೆಲ್ಲ ಮಾಡ್ತಾರೆ‘
‘ಹೌದು’
‘ಸಾರ್, ನೀವು ಸಮಕಾಲೀನರ ಕೃತಿಗಳ ಓದ್ತೀರಾ?’
‘ನನ್ನ ಬರವಣಿಗೆಗೆ ಪೂರಕವಾದ ಕೃತಿಗಳ ಓದಲು ಸಮಯ ಸಾಲೊಲ್ಲ. ಸ್ನೇಹಿತರು ಓದಲೇ ಬೇಕು ಅಂತ ಹೇಳಿದ್ದನ್ನ ಓದ್ತೇನೆ’.
‘ ಕರಣಂ ಪವನ್ ಪ್ರಸಾದ್ ಅವರದ್ದು ಓದಿದ್ದು ಗೊತ್ತಾಯಿತು ಸರ್‘
‘ ಹೌದು. ನಿಮಗೇನನ್ನಿಸುತ್ತೆ?’
‘ಸಾರ್, ಅವರ ಮೂರು ಪುಸ್ತಕ ಬೇರೆ ಬೇರೆ ಕಥಾವಸ್ತು.ಬರೆದ ರೀತಿಯೂ ಬೇರೆ.ಈಗ ಭರವಸೆ ಇಡುವಂತಹ ಲೇಖಕ ಅನಿಸ್ತದೆ ಸರ್‘
‘ ಓಹ್ ಹೌದಾ’
‘ ಸರ್, ಯಾನದಲ್ಲಿ ಶಿಷ್ಟ ಭಾಷೆಯ ಬಳಕೆ ಬಿಟ್ಟು ಯಾಕೆ ಈ ಕಡೆಯ ಭಾಷಾ ಬಳಕೆ ಸಮಂಜಸವೇ? ಅಂದರೆ ಬಳಸುವ ಭಾಷೆ ಮೈಸೂರು ಕಡೆದ್ದು‘
‘ನೋಡಿ, ನಾನು ಬರೀತಾ ಇರೋದು ಕನ್ನಡದಲ್ಲಿ .ಯಾವ ಭಾಷೆ ಬರೀಬೇಕು? ವಿಜ್ಞಾನದ ಕಾದಂಬರಿ ಆದರೂ ಕೂಡ ಹ್ಯೂಮನ್ ಎಲಿಮೆಂಟ್ ಇಲ್ಲದೆ ಹೋದರೆ ಕಾದಂಬರಿ ಹುಟ್ಟೊಲ್ಲ. ಯಾನದಲ್ಲಿ ಅವಳು ಅಲ್ಲಿ ಹೋದ ಮೇಲೆ ಮೋಸಕ್ಕೊಳಗಾದಂತೆ ಅವಳಿಗೆ ಭಾಸವಾಗ್ತದೆ. ಆದರೆ ಯಾರು ಅವಳಿಗೆ ಮೋಸ ಮಾಡಿದ್ದು? ಅವಳಿಗೆ ಅವಳೇ ಮೋಸ ಮಾಡಿಕೊಂಡದ್ದು. ಯಾಕೆ ಅಂದರೆ ಮೊದಲನೆಯ ಸಲ ಹೋದಾಗ ನೂರು ದಿನ ಇದ್ದು ಬಂದವಳು ಅಂತ, ಅಲ್ಲದೆ ಅವಳು ಚಂದವಿದ್ದಳು ಅನ್ನುವುದೂ ಅಲ್ಲಿ ಇರ್ತದೆ. ಅವಳಿಗೆ ಅದರಿಂದ ಬಿಡಿಸಿಕೊಳ್ಳಲಾಗೊಲ್ಲ. ಅವನು ತನ್ನ ಜೊತೆಗೆ ಬರ್ತಾನೆ ಅಂತ ಅವಳಿಗೆ ಪ್ರಾಮಿಸ್ ಮಾಡಿರ್ತಾನೆ. ಆದರೆ ಈ ಸೌರಮಂಡಲ ದಾಟಿದ ಮೇಲೆ ಯಾವ ನಿಯಮ ಎಲ್ಲಿ ಅಪ್ಲೈ ಆಗತ್ತೆ ಅಂತ ಹೇಗೆ ನಿರ್ಣಯ ಮಾಡ್ತೀರಿ? ಈ ಸನ್ನಿವೇಶದೊಳಗೆ ಕತೆ ಬೆಳೆಯುವುದು.ಸೂರ್ಯಮಂಡಲದಲ್ಲಿ ಇರುವ ನಿಯಮ ಇದರಿಂದ ಆಚೆ ಹೋದಾಗ ಇರೊಲ್ಲ.ಹಾಗಿರುವಾಗ ಇಲ್ಲಿ ಮಾಡಿದ ಪ್ರಾಮಿಸ್ ಗೆ ಅಲ್ಲಿ ಬೆಲೆ ಇರುತ್ತಾ? ನೋಡಿ,ಇಂತಹ ಪ್ರಶ್ನೆಗಳ ಎತ್ತುವುದರಿಂದ ತಾನೇ ಕತೆ ಹುಟ್ಟುವುದು. ಇಲ್ಲವಾದರೆ ಕತೆ ಹೇಗೆ ಹುಟ್ಟುತ್ತದೆ?’
‘ ನೀವು ಉತ್ತರಕಾಂಡದಲ್ಲಿ ರಾಮನ ಕಣ್ಣಿಂದ ಅಂದರೆ ರಾಮನ ಸ್ವಗತ ಆ ನಿಟ್ಟಿನಲ್ಲಿ ಕತಾ ನಿರೂಪಣೆ ಮಾಡದಿರಲು ಕಾರಣ?’
‘ನೋಡಿ. ಈ ಮಾತನ್ನ ಹೇಳಿದ್ರೆ ತುಂಬಾ ಜನ ಅಲ್ಲಗೆಳೆಯಬಹುದು. ಈಗ ರಾಮನ ಜಾಗದಲ್ಲಿ ಕೃಷ್ಣ ಇದ್ದಿದ್ದರೆ ಆ ಕಾಡಿಗೆ ಹೋಗುವ ಪ್ರಸಂಗವೇ ಬರ್ತಾ ಇರಲಿಲ್ಲ ಅಂತ ನನ್ನ ಭಾವನೆ. ಜನ ಎಲ್ಲ ಪಲಾಯನ ಮಾಡಿದವನು ಅಂತ ಹೇಳಿದರೂ ಕೃಷ್ಣ ,ಜರಾಸಂಧನ ನೇರಾ ನೇರ ಎದುರಿಸದೆ ಹೋದ. ಆಮೇಲೆ ಭೀಮನ ಕೈಲಿ ಕೊಲ್ಲಿಸಿದ. ಈಗ ನಮ್ಮ ದೇಶದಲ್ಲಿ ಕೃಷ್ಣನ ಓಡಿಹೋದವ ಹೇಡಿ ಅಂತ ಪೂಜಿಸ್ತಾರೋ ಅಲ್ಲ. ಚಾಣಾಕ್ಷ ಅಂತ ಪೂಜಿಸ್ತಾರೋ?’
‘ಹೌದು ಕೃಷ್ಣ ಇಷ್ಟವಾದಷ್ಟು ರಾಮ ಆಗೊಲ್ಲ‘
‘ಎಷ್ಟೋ ಜನಕ್ಕೆ ಕೋಪ ಇದೆ ನನ್ನ ಮೇಲೆ ಅದಕ್ಕೆ.ರಾಮನ ದೋಷಗಳ ಬರೆದರು ಅಂತ.ಯಾವಾಗ ನೀವು ದೇವರು,ಪ್ರಶ್ನಾತೀತರು ಅಂತ ಒಪ್ಕೊಂಡು ಬಿಡ್ತೀರಾ ಆಗ ನಿಮ್ಮ ವಿಮರ್ಶಾ ಶಕ್ತಿ ಕುಸಿಯಿತು ಅಂತ ಅರ್ಥ’
‘ಹೌದು ಸರ್‘
‘ನೋಡಿ, ನಮ್ಮ ಭಾರತದಲ್ಲಿ ನೈತಿಕ ಮೌಲ್ಯ ಬಿತ್ತಲು ಎಲ್ಲವನ್ನು ಅತಿಗೆ ಒಯ್ತಾರೆ. ಈಗ ಹರಿಶ್ಚಂದ್ರನ ಕತೆ ತಗೋಳಿ. ಅವನು ಕುದುರೆಯ ಮೇಲೆ ನಾಣ್ಯ ಚಿಮ್ಮಿಸಿದರೆ ಆಗೋವಷ್ಟು ಸಂಪತ್ತು ಕೊಡ್ತೇನೆ ಅಂದ. ಅವನು ನಿಜವಾಗಿ ರಾಜ್ಯಭಾರ ಮಾಡುವವನಾಗಿದ್ದರೆ ಏನು ಮಾಡ್ತಿದ್ದ? ಯಾರಾದರೂ ದಾನ ಕೇಳೋಕೆ ಬರುವಾಗ ಕೊಡುವ ಮೊದಲು ಫೈನಾನ್ಸ್ ಮಿನಿಸ್ಟರ್ ನ ಕೇಳ್ತಾ ಇದ್ದ. ಅಷ್ಟು ಭಂಡಾರದಲ್ಲಿ ಇದ್ಯಾ?
ಎಷ್ಟು ಖರ್ಚು ಇದೆ. ಯಾಕಂದ್ರೆ ರಾಜ್ಯ ಆಳಬೇಕಲ್ವಾ? ಇದನ್ನೆಲ್ಲ ಯಾರೂ ಯೋಚಿಸೊಲ್ಲ. ರಾಮನನ್ನೂ ಹೀಗೆ ಅತಿಗೆ ಒಯ್ದು ನಮ್ಮ ಆದರ್ಶವಾಗಿ ಇಟ್ಕೊಳ್ಳೋದು ನಮ್ಮ ನೀತಿಯಾಗಿದೆ.’
‘ ಸರ್, ಈ ಪಾಶ್ಚಾತ್ಯ. ಸಾಹಿತ್ಯ ಏನಿದೆ, ಮುಖ್ಯವಾಗಿ ಈ ಮ್ಯಾಜಿಕಲ್ ರಿಯಲಿಸಂ ಇದರ ಬಗ್ಗೆ ನಿಮ್ಮ ಅಭಿಪ್ರಾಯ? ನೀವು ಆ ತರಹದ ಪುಸ್ತಕಗಳ ಓದಿದೀರಾ? ನಿಮ್ಮ ಸಾಕ್ಷಿಯಲ್ಲೂ ಆ ಸೆಟ್ಟಿಂಗ್ ಅದೇ ತರಹ ಬರ್ತದಲ್ಲ‘.
‘ಪಾಶ್ಚಿಮಾತ್ಯ ಸಾಹಿತ್ಯ ಹತ್ತೊಂಬತ್ತನೇ ಶತಮಾನದಲ್ಲಿ ಜಾಸ್ತಿ ರಿಯಲಿಸಂ ಇದ್ದದ್ದು. ಆಗಿನ ಕಾಲದಲ್ಲಿ ನ್ಯೂಟನ್ನನ ಫಿಸಿಕ್ಸ್ ಎಲ್ಲಾ. ಅವನದ್ದು ಮುಖ್ಯವಾಗಿ ಸ್ಪೇಸ್ ಮತ್ತು ಟೈಮ್. ಎಲ್ಲ ಅದರೊಳಗೆ ಬರ್ತದೆ ಅಂತ. ಹಾಗಾಗಿ ಅವರೆಲ್ಲ ವಾಸ್ತವತೆಯನ್ನೇ ಬರೆದರು. ವರ್ಣನಾಶಕ್ತಿಯನ್ನೇ ಆರ್ಟ್ ಅಂತ ತಿಳಿದಿದ್ದರು. ಎಷ್ಟೂ ಅಂದರೆ ಈಗ ಓದುವಾಗ ಏನಪ್ಪಾ ಇಷ್ಟೆಲ್ಲ ವರ್ಣನೆಮಾಡಿದ್ರು ಅಂತ ಬೋರಾಗುವಷ್ಟು. ಈ ನ್ಯೂಟನ್ ಕಾಲ ಮುಗಿದ. ಮೇಲೆ ಐನ್ಸ್ಟೈನ್ ಕಾಲ ಬಂತು.ಅಲ್ಲಿಗೆ ಈ ಥಿಯರಿನೇ ಬೇರೆ ಆಯ್ತು. ಕಾಲ ದೇಶ ಎಲ್ಲದರ ವ್ಯಾಖ್ಯಾನ ಬದಲಾಯಿತು. ಸ್ಪೇಸ್ ಮತ್ತು ಟೈಮ್ ಗೆ ಸ್ವತಂತ್ರ ಅಸ್ತಿತ್ವ ಇಲ್ಲ .ಸ್ವತಂತ್ರ ಅಸ್ತಿತ್ವ ಇರೋದು ಮ್ಯಾಟರ್ ಗೆ ಮಾತ್ರ ಅಂತ ಗೊತ್ತಾಯಿತು. ಗ್ರಾವಿಟೇಷನ್ ಮೇಲೆ ನಿರ್ಭರ ಅನ್ನುವಂತದ್ದು ಬಂತು. ತುಂಬ ಹಿಗ್ಗಿಸಿದರೆ ಮೊದಲು,ನಂತರ ಬರುವ ಸಾಧ್ಯತೆ ಇದೆ ಅಂತ ಕೂಡ ಕಂಡುಕೊಂಡರು. ಇದನ್ನೆಲ್ಲ ಅವರ ರಿಯಲಿಸಂ ಅಲ್ಲಿ ತರೋಕಾಗಲ್ಲ. ಹಾಗಾಗಿ ಹುಟ್ಟಿಕೊಂಡದ್ದು ಮ್ಯಾಜಿಕಲ್ ರಿಯಲಿಸಂ.
ನಮ್ಮಲ್ಲಿ ಇವೆಲ್ಲ ಮೊದಲಿನಿಂದ ಇತ್ತು. ನಮ್ಮ ಪುರಾಣಗಳು ಏನು ಹಾಗಾದರೆ? ನಾರದ ಈಗ ಇಲ್ಲಿರ್ತಾನೆ ಆಮೇಲೆ ಅಂತರ್ಧಾನ ಆಗ್ತಾನೆ ಇವೆಲ್ಲ ಏನು? ಕಾಳಿದಾಸನ ಮೇಘದೂತ ಇವೆಲ್ಲ ಏನು? ಹಾಗಾಗಿ ಕನ್ನಡದಲ್ಲಿ ಮ್ಯಾಜಿಕಲ್ ರಿಯಲಿಸಂ ಸರಿಯಾಗಿ ಬರೆದವರು ಎಮ್.ಎಸ್.ಕೆ.ಪ್ರಭು ಅವರು. ಆದರೆ ಏನಾಗುತ್ತೆ ಇದನ್ನ ಜಾಸ್ತಿ ಬರೆಯೋಕಾಗಲ್ಲ.
ಯಾವುದನ್ನ ಬರೆಯಬೇಕಾದರೂ ಗಾಢ ಅನುಭವ,ರಸ ಇರಬೇಕು, ಇಲ್ಲವಾದರೆ ಶುಷ್ಕವಾಗುತ್ತದೆ.’
‘ಹೌದು ಸರ್‘
‘ನಮ್ಮ ಅನುಭವ ಬದಲಾಗುತ್ತಾ ಇದೆ. ಇನ್ನೊಂದು ಐವತ್ತು ವರ್ಷ ಕಳೆದರೆ ಆ ಅನುಭವ ಬದಲಾಗಬಹುದು.ಆಗ ಹೊಸ ಪ್ರಶ್ನೆ ಹೊಸ ಚಿಂತನೆ ಬರಬಹುದು. ಬದಲಾವಣೆ ಸಹಜ.ಈಗ ಯಾನ ಬರೆದಾಗ ಅಷ್ಟು ದೂರ ಆ ಪ್ರಯಾಣ ಅನ್ನುವಾಗ ಮುಂದಿನ ಪೀಳಿಗೆ ಹುಟ್ಟಿಸೋದು ಇವೆಲ್ಲ ಯೋಚಿಸಬೇಕಲ್ಲ. ಅಲ್ಲದೆ ಒಂದು ಸಾಹಿತ್ಯ ಕೃತಿ ಬರಬೇಕಾದರೆ ರಸ ಬೇಕು. ಮುಖ್ಯವಾಗಿ ಆ ರಸ ಹುಟ್ಟಿಸುವ ಶಕ್ತಿ ಬೇಕು.ಕತೆ ಯಾವುದಾದರೂ ಮೂಲ ನಿಯಮ ಬದಲಾಗೊಲ್ಲ ಅಲ್ವಾ? ಹಾಗಂತ ಅಲ್ಲಿ ಮ್ಯಾಜಿಕಲ್ ರಿಯಲಿಸಂ ತರೋಕಾಗಲ್ಲ. ಲೈಟ್ ಈಯರ್ಸ್ ಹೋಗ್ತಾ ಇರೊವಾಗ ಬರೋ ಸಮಸ್ಯೆಗಳ ಹೇಗೆ ಎದುರಿಸಿದರು ಅಂತ ಬರೆಯದೆ ಇದನ್ನ ಬರೆದರೆ ಅದು ಎಸ್ಕೇಪಿಸಂ ಆಗುತ್ತೆ ಅಷ್ಟೇ.’
‘ ಪರ್ವದ ಅಂತ್ಯ ನನಗೆ ಬಹಳ ಹಿಡಿಸಿತ್ತು. ಮಳೆಯನ್ನ ನೋಡ್ತಾ ನಿಲ್ಲೋ ಆ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಈ ಕಾದಂಬರಿ ಬರೆದ ಬಳಿಕ ನೀವು ರೀ ರೈಟ್ ಮಾಡ್ತೀರಾ?
‘ ಬರೀಬೇಕಾಗುತ್ತೆ. ಕೆಲವೊಂದು ಸಲ ಇಡೀ ಕಾದಂಬರೀನಾ ಬೇರೆಯಾಗೇ ಬರೆದಿದ್ದು ಉಂಟು. ನಾನೊಂದು ಕಾದಂಬರಿ ಬರೆದು ಆರು ತಿಂಗಳು ಒಂದು ವರ್ಷ ಸುಮ್ಮನಿರ್ತೇನೆ. ಆಗ ಅದರಿಂದ ಬಿಡುಗಡೆಗೆ ಪ್ರವಾಸ ಹೋಗ್ತೇನೆ. ಈ ಕಾಲ ಕಳೆದ ಮೇಲೆ ನಾನು ಅದರಿಂದ ಬಿಡಿಸಿಕೊಂಡು ಹೊರಗೆ ನಿಂತು ವಿಮರ್ಶಿಸಲು ಸಹಕಾರಿ. ಅಲ್ಲದೆ ಬರೆದ ಬಳಿಕ ಅದನ್ನ ಗೆಳೆಯರೊಬ್ಬರಿಗೆ ಓದಲು ಕೊಡ್ತೇನೆ. ಇದರ ಅರ್ಥ ಅವರು ಹೇಳಿದ್ದನ್ನೆಲ್ಲ ನಾನು ಒಪ್ತೇನೆ ಅಂತ ಅಲ್ಲ. ಆದರೆ ಆ ದೃಷ್ಟಿಕೋನವೂ ಬೇಕಾಗುತ್ತೆ.’
‘ಸರ್, ಈಗ್ಲೂ ಕೈಯಲ್ಲೇ ಬರೀತೀರಾ?’
‘ಹೌದು . ನಂಗೆ ಈಗಲೂ ಕಂಪ್ಯೂಟರ್ ಅಷ್ಟಾಗಿ ಬರೊಲ್ಲ. ಅಲ್ಲದೆ ಅಲ್ಲಿ ಇಂಗ್ಲೀಷ್ ಅಲ್ಲಿ ಬರೆದು ಕನ್ನಡಕ್ಕೆ ಬದಲಾಗೋದು ಅನ್ನುವಾಗ ಲಹರಿ ಕಡಿಮೆಯಾಗುತ್ತದೆ. ಅದಕ್ಕೇ ಈಗಲೂ ನಾನು ಕೈಯಲ್ಲೇ ಬರೆಯೋದು. ಮೊದಲು ದಿನಕ್ಕೆ ಹತ್ತು ಪುಟ ಬರೆಯುತ್ತಿದ್ದುದು ಈಗ ಕಡಿಮೆಯಾಗಿದೆ. ಎಲ್ಲ ದಿನವೂ ಒಂದೇ ತರಹ ಇರುವುದಿಲ್ಲ. ಬರೆಯುವಾಗ ಆದಷ್ಟು ಬರಿಯೋದು’
‘ಉಕ್ತ ಲೇಖನದಲ್ಲಿ ಖಾಸಗಿತನ ಬರುವುದಿಲ್ಲ ಅಲ್ವಾ ಸರ್. ನಂಗೆ ಮೂಕಜ್ಜಿಯ ಕನಸುಗಳು ಆದ ಮೇಲೆ ಬಂದ ಕಾರಂತರ ಕಾದಂಬರಿಗಳಲ್ಲಿ ಭಾವ ಕಾಣಲಿಲ್ಲ.ಪ್ರವೇಶಕ್ಕೇ ಕತೆ ಶುರುವಾಗಲೇ ನಲವತ್ತು ಪುಟ ಹೀಗೆ ಬರುತ್ತೆ‘
‘ಕಾರಂತರಲ್ಲಿ ರಿಯಲಿಸಂ, ಅನುಭವ ತುಂಬಾ ಇತ್ತು. ಅನಕೃ ಅವರಲ್ಲಿ ಭಾವ ಇತ್ತು. ಹೃದಯಕ್ಕೆ ತಾಗುವ ಸನ್ನಿವೇಶ ಬಂದಾಗ ಅದನ್ನ ಹಾಗೆ ಬರೆಯೋದು ಕಾರಂತರಲ್ಲಿ ಇರಲಿಲ್ಲ. ಯಾಕೆಂದರೆ ಅವರು ಆ ಕಡೆ ಗಮನ ಕೊಡ್ತಾ ಇರಲಿಲ್ಲ. ಅನಕೃ ಭಾವಪುಷ್ಟಿಯಾಗುವಂತೆ ಬರೀತಾ ಇದ್ರು. ಆದರೆ ಗಟ್ಟಿತನ ಅಂತ ನೋಡುವಾಗ ಕಾರಂತರು ಕಣ್ಣಿಗೆ ಬರ್ತಾರೆ.’
‘ಬರೆಯುವಾಗ ಇಲ್ಲೇ ಮುಗಿಸಬೇಕು ಅಂತ ಮೊದಲೇ ನಿರ್ಧಾರ ಮಾಡ್ತೀರಾ?’
‘ಇಲ್ಲ.ಇಲ್ಲ. ನಾನೆಲ್ಲಿ ನಿಲ್ಲಿಸುತ್ತೇನೆ. ಅಂದರೆ ಕತೆಯ ಎಲ್ಲ ಎಳೆಗಳೂ ಸೇರಿ ಒಂದು ಅಂತ್ಯ ಬಿಂದುವಿನಲ್ಲಿ ನಿಲ್ಲಿಸಬೇಕಾಗುತ್ತದೆ. ಓದುಗ ಧಿಗ್ಮೂಢನಾಗಬೇಕು. ಆಗ ಇಡೀ ಕತೆ ಅವನ ಮನಸಿನೊಳಗೆ ಪ್ರತಿಬಿಂಬಿಸಬೇಕು ಅಂತಹ ಪಾಯಿಂಟ್ ಅಲ್ಲಿ ಕತೆ ನಿಲ್ಲಿಸ್ತೇನೆ.
‘ನನಗೆ ತುಂಬಾ ಸಲ ಅನಿಸಿದೆ. ನಿಮ್ಮ ಕಾದಂಬರಿಗಳೆಲ್ಲ ಹಿಂದೂಸ್ತಾನಿ ಸಂಗೀತದ ಆಲಾಪದ ಹಾಗೆ ವಿಸ್ತಾರವಿರುತ್ತದೆ.ಹಾಗಾಗಿಯೇ ಸಣ್ಣ ಕತೆಗಳು ನಿಮ್ಮ ಪ್ರಕಾರವಾಗಲಿಲ್ಲ ಅಂತ‘
‘ ಹೌದು’
‘ ಸರ್, ನೀವೀಗ ಸುಮಾರು ದೇಶ ಸುತ್ತಿದ್ದೀರಿ. ಅವುಗಳ ಅಲ್ಲಿನ ಜನರ ಕುರಿತು ಕಾದಂಬರಿಗಳಲ್ಲಿ ಬಂದಿರೋದು ಕಡಿಮೆ ಯಾಕೆ?’
‘ಇಲ್ಲ ಬಂದಿಲ್ಲ. ನೋಡಿರೋ ದೇಶಗಳ ಎಲ್ಲ ತರೊಲ್ಲ. ತರಲೂಬಾರದು. ಏನೆಲ್ಲ ನೋಡಿರ್ತೀವಿ ಅವನ್ನೆಲ್ಲ ತರಲು ನಾನು ಪತ್ರಕರ್ತ ಅಲ್ಲ. ನನಗೆ ಬೇಕಾದ ಅಂಶಗಳ ಮಾತ್ರ ತರ್ತೇನೆ’
‘ ಸರ್, ಸಂಗೀತ ನೀವು ತುಂಬಾ ಕೇಳ್ತೀರಿ ಅಂತ. ನಿಮ್ಮತ್ರ ಆಫ್ರಿಕನ್ ಸಂಗೀತದ ಮುದ್ರಿಕೆ ಕೂಡ ಇದೆ ಅಂತ…‘
‘ಆಫ್ರಿಕನ್ ಅಲ್ಲ ಅದು ಜಪಾನೀಸ್’
‘ಈಗ ಮಂದ್ರ ಬರೆದ ನಂತರ?’
‘ಈಗ ಅಷ್ಟಾಗಿ ಕೇಳೊಲ್ಲ. ಒಂದು ನಾನು ಆ ಕಾಲಕ್ಕೆ ಖ್ಯಾತನಾಮರ ಸಂಗೀತ ಎಲ್ಲ ಕಾರ್ಯಕ್ರಮಗಳಿಗೆ ಹೋಗಿ ಕೇಳಿದ್ದೇನೆ. ಈ ಹಸಿವು ಏನಿತ್ತು ಸಂಗೀತದ ಕುರಿತು ಅದು ಮಂದ್ರ ಬರೆದ ಬಳಿಕ ಶಮನವಾಯ್ತು ನನಗೆ’
‘ಹೌದು‘
‘ಪರ್ಫಾಮಿಂಗ್ ಕಲಾವಿದನಿಗೆ ಇರುವ ಒಳನೋಟಗಳು ಉಳಿದವರಿಗೆ ಇರೊಲ್ಲ. ಸಾಹಿತ್ಯದಲ್ಲೂ ಅಷ್ಟೇ . ವಿಮರ್ಶಕ ನೂರು ಹೇಳಬಹುದು ಆದರೆ ಸೃಜನಶೀಲ ಬರಹಗಾರನಿಗೆ ಸಿಗುವ ಒಳನೋಟ ಅವರಿಗೆ ಸಿಗೊಲ್ಲ’
‘ಈಗ ಕಾದಂಬರಿ ಬರೆಯದಿರುವಾಗ ವಿರಾಮದ ಸಮಯ ಹೇಗೆ ಕಳೀತೀರಿ ಸಾರ್?’
‘ ಓದ್ತೇನೆ. ಬರೀತೇನೆ. ವಾಕಿಂಗ್ ಹೋಗ್ತೇನೆ ‘
‘ತುಂಬಾ ಖುಷಿಯಾಯ್ತು ಸರ್. ನಿಮ್ಮ ಭೇಟಿ. ಎಷ್ಟೋ ಚಿಕ್ಕ ಅನುಮಾನಗಳ ನೀವು ಬಗೆಹರಿಸಿದ್ರಿ. ಅಲ್ಲದೆ ಇಷ್ಟು ಸಮಯ ಕೊಟ್ಟು ಮಾತನಾಡಿದ್ರಿ. ಧನ್ಯವಾದಗಳು ಸರ್‘
‘ನಮಸ್ಕಾರ’
(ಮಾತುಕತೆ – ಪ್ರಶಾಂತ್, ಧರ್ಮಶ್ರಿ, ಸಿಂಧೂ. ಸಹಕಾರ – ಸಾಂಗತ್ಯ)
ಬರಹ ರೂಪ: ಪ್ರಶಾಂತ್ ಭಟ್