ಅಂಕಣ

ವಿ.ಸಿ.ಆರ್’ನ ಫ್ಲ್ಯಾಶ್’ಬ್ಯಾಕ್

ಡಿಜಿಟಲ್ ಕ್ರಾಂತಿಯ ಮನೋರಂಜನೆಯ ಆಧುನಿಕ ಸಾಧನಗಳಾದ ಸ್ಮಾರ್ಟ್ ಫೋನ್, ಎಲ್.ಈ.ಡಿ. ಟೆಲಿವಿಷನ್, ಲ್ಯಾಪ್’ಟಾಪ್’ಗಳಲ್ಲಿ ಚಲನಚಿತ್ರಗಳನ್ನು ನೋಡುವ ಜನಾಂಗಕ್ಕೆ ಬಹುಶಃ ವಿ.ಸಿ.ಆರ್.(ವಿಡಿಯೋ ಕ್ಯಾಸೆಟ್ ರಿಕಾರ್ಡರ್)ನ ಪರಿಚಯವಿರಲಿಕ್ಕಿಲ್ಲ. ನಮ್ಮ ನೆನಪುಗಳ ಕ್ಯಾಸೆಟ್’ನ್ನು ರಿವೈಂಡ್ ಮಾಡಿ ಸಮಯ ಯಂತ್ರವನ್ನು 80  ಮತ್ತು 90ರ ದಶಕಕ್ಕೆ ಕೊಂಡೊಯ್ದಾಗ, ಮನೆ ಮಂದಿಯೆಲ್ಲಾ ಕುಳಿತು ಬಾಡಿಗೆ ತಂದ ವಿ.ಸಿ.ಆರ್. ಹಾಗೂ ಕಲರ್ ಟಿ.ವಿ.ಯಲ್ಲಿ ದಿನಪೂರ್ತಿ ಸಿನೆಮಾ ನೋಡಿದ ದೃಶ್ಯಗಳು ತಾಜಾಗೊಳ್ಳುತ್ತವೆ. ದೂರದರ್ಶನದ ಏಕಚಕ್ರಾಧಿಪತ್ಯವಿದ್ದ ಕಾಲದಲ್ಲಿ ಮನೋರಂಜನೆಯ ಈ ವಿಕಲ್ಪ ವೀಡಿಯೋ ಕ್ರಾಂತಿಯ ಸಂಕೇತವಾಗಿತ್ತು..

ಜನತೆಯ ಮಟ್ಟಿಗೆ ವಿ.ಸಿ.ಆರ್’ನ ಅಂತ್ಯವಾಗಿ ಎರಡೂವರೆ ದಶಕಗಳು ಕಳೆದಿವೆ. ಆದರೆ ಜಪಾನಿನ ಫ್ಯೂನಾಯಿ ಎಲೆಕ್ಟ್ರಿಕಲ್ ಕಾರ್ಪೊರೇಷನ್ ಮಾತ್ರ  2016ರವರೆಗೂ ವಿ.ಸಿ.ಆರ್’ಗಳನ್ನು ತಯಾರಿಸುತ್ತಿತ್ತು. ಈ ಕಂಪನಿ ಕಳೆದ ವರ್ಷವಷ್ಟೇ ವಿ.ಸಿ.ಆರ್’ನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ವೀಡಿಯೋ ಕ್ರಾಂತಿಯ ಜನ್ಮದಾತನ ಅಧ್ಯಾಯಕ್ಕೆ ಮಂಗಳ ಹಾಡಿದೆ. ಫ್ಯೂನಾಯಿ ಕಂಪನಿ 2015ರಲ್ಲಿ ಏಳೂವರೆ ಲಕ್ಷ ವಿ.ಸಿ.ಆರ್’ಗಳನ್ನು ಉತ್ಪಾದಿಸಿತ್ತು.1970ರಲ್ಲಿ ಜಪಾನ’ನ ಜೆ.ವಿ.ಸಿ, ಸೋನಿ, ಮತ್ತು ನೆದರ್ಲ್ಯಾಂಡ್’ನ ಫಿಲಿಪ್ಸ್  ವಿ.ಸಿ.ಆರ್’ನ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದವು. ದೀರ್ಘಾವಧಿಯ ವೀಡಿಯೋ ರೆಕಾರ್ಡ್ ಮಾಡಬಲ್ಲ ವಿ.ಎಚ್.ಎಸ್. (ವೀಡಿಯೋ ಹೋಮ್ ಸಿಸ್ಟಮ್) ಉತ್ಪಾದಿಸಿ ಜೆ.ವಿ.ಸಿ. ಇತರ ಕಂಪನಿಗಳನ್ನು ಹಿಂದಿಕ್ಕಿತ್ತು.

ಭಾರತದಲ್ಲಿ ವಿ.ಸಿ.ಆರ್’ನ ಪ್ರವೇಶವಾಗಿದ್ದು 1980ರ ದಶಕದಲ್ಲಿ. ಇಂದಿಗೆ ಬರೋಬ್ಬರಿ 36 ವರ್ಷಗಳ ಹಿಂದೆ 1982ರಲ್ಲಿ ಏಶೀಯನ್ ಕ್ರೀಡಾಕೂಟವನ್ನು ದೆಹಲಿಯಲ್ಲಿ ಆಯೋಜಿಸಲಾಗಿತ್ತು. ದೂರದರ್ಶನ ಏಶೀಯನ್ ಕ್ರೀಡಾಕೂಟದ ಕಲರ್ ಪ್ರಸಾರಣ ಮಾಡಿ ಭಾರತೀಯ ದರ್ಶಕರ  ಕಪ್ಪು ಬಿಳುಪಿನ ಜಗತ್ತಿಗೆ ಪ್ರಥಮ ಬಾರಿಗೆ ಬಣ್ಣದ ಚಿತ್ತಾರ ಬಳೆದಿತ್ತು. ಆ ಸಮಯದಲ್ಲಿ ಸರ್ಕಾರ 90ಸಾವಿರ ಕಲರ್ ಟಿ.ವಿ. ಕಿಟ್’ಗಳನ್ನು ವಿದೇಶಗಳಿಂದ ತರಿಸಿ ಭಾರತದಲ್ಲಿ ಜೋಡಣೆ ಮಾಡಿಸಿತ್ತು. ಭಾರತದಲ್ಲಿ ಕಲರ್ ಟಿ.ವಿ.ಯೊಂದಿಗೆ ವಿ.ಸಿ.ಆರ್.ನ ಪ್ರವೇಶವೂ ಆಗಿತ್ತು. ಆದರೆ ಆಗ ದುಬಾರಿ ಬೆಲೆಯ ಕಲರ್ ಟಿ.ವಿ. ಮತ್ತು ವಿ.ಸಿ.ಆರ್. ಮಧ್ಯಮವರ್ಗದ ಕೈಗೆಟುಕದ, ಕೇವಲ ಉಳ್ಳವರ ಐಷಾರಾಮದ ಸ್ವತ್ತಾಗಿದ್ದವು. 1980ರ ದಶಕದ ಆರಂಭದಲ್ಲಿ ವಿ.ಸಿ.ಆರ್’ನ ಬೆಲೆ 50ಸಾವಿರ ರೂಪಾಯಿಯಾಗಿತ್ತು, ಕೆಲ  ಭಾರತೀಯ ಕಂಪನಿಗಳು ವಿ.ಸಿ.ಆರ್. ಉತ್ಪಾದನೆಯಲ್ಲಿ ತೊಡಗಿದ ನಂತರ 1982ರ ಹೊತ್ತಿಗೆ ಇವುಗಳ ಬೆಲೆ 30ಸಾವಿರ ರೂಪಾಯಿಗೆ ಇಳಿಯಿತು. ದೇಶದಲ್ಲಿ ಕಲರ್ ಟಿ.ವಿ.ಯ ಬಳಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ವಿದೇಶಗಳಿಂದ ಉಡುಗರೆಯ ರೂಪದಲ್ಲಿ ತರಲ್ಪಡುವ ಟಿ.ವಿ.ಗಳ ಮೇಲಿದ್ದ ಆಯಾತ ಶುಲ್ಕವನ್ನು ಕಡಿತಗೊಳಿಸಿತ್ತು. 1982ರಲ್ಲಿ ಏಶೀಯನ್ ಕ್ರೀಡಾಕೂಟದ ಸಮಯದಲ್ಲಿ ಸರಾಸರಿ 8000 ರೂಪಾಯಿ ಬೆಲೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಕಲರ್ ಟಿ.ವಿ. ಖರೀದಿಸಿದ್ದರು. ಇದೇ ರೀತಿ ಸರ್ಕಾರ, ಪ್ರಯಾಣಿಕರು ವಿ.ಸಿ.ಆರ್’ನ್ನು ತಮ್ಮ ವೈಯಕ್ತಿಕ ಸರಕಿನ ಭಾಗವಾಗಿ  ತರಬಹುದೆಂದು ಘೋಷಣೆ ಮಾಡಿತ್ತು. ಹೀಗಾಗಿ ದೇಶದಲ್ಲಿ ವಿ.ಸಿ.ಆರ್’ನ ಆಗಮನ ಶುಲ್ಕರಹಿತವಾಗಿತ್ತು. ಮಾರುಕಟ್ಟೆಯಲ್ಲಿ ವಿ.ಸಿ.ಆರ್’ನ ದರ 20ಸಾವಿರ ರೂಪಾಯಿಯಾಗಿದ್ದರೆ, ವಿದೇಶದಿಂದ ತಂದ ವಿ.ಸಿ.ಆರ್ 9000 ಸಾವಿರ ರೂಪಾಯಿಗೆ ಸಿಗುವಂತಾಗಿತ್ತು.  

ಇಷ್ಟಾದರೂ ಕಲರ್ ಟಿ.ವಿ. ಮತ್ತು ವಿ.ಸಿ.ಆರ್. ಭಾರತೀಯ ಮಧ್ಯಮವರ್ಗದ ಪಾಲಿಗೆ ಮರೀಚಿಕೆಯಾಗಿದ್ದವು. ಈ ಪರಿಸ್ಥಿತಿಯನ್ನು  ತಮ್ಮ ಉಪಯೋಗಕ್ಕೆ ಬಳಸಿಕೊಂಡ ಕೆಲ ಬುದ್ಧಿವಂತರು ವೀಡಿಯೋ ಲೈಬ್ರರಿಗಳನ್ನು ಹುಟ್ಟುಹಾಕಿ, ಟಿ.ವಿ, ವಿ.ಸಿ.ಆರ್ ಹಾಗೂ ವೀಡಿಯೋ ಕ್ಯಾಸೆಟ್’ಗಳನ್ನು ಬಾಡಿಗೆಗೆ ನೀಡುವ ಉದ್ಯೋಗವನ್ನು ಪ್ರಾರಂಭಿಸಿದರು. 1980ರ ದಶಕದ ಅಂತ್ಯ ಮತ್ತು 1990ರ ದಶಕದ ಪ್ರಾರಂಭದಷ್ಟೊತ್ತಿಗೆ ಟಿ.ವಿ, ವಿ.ಸಿ.ಆರ್ ಮತ್ತು 3 ವೀಡಿಯೋ ಕ್ಯಾಸೆಟ್’ಗಳು 150ರಿಂದ 250ರೂಪಾಯಿಗೆ ಒಂದು ದಿನದ ಮಟ್ಟಿಗೆ ಬಾಡಿಗೆಗೆ ದೊರೆಯಹತ್ತಿದವು. ತಡವಾಗಿ ವಿ.ಸಿ.ಆರ್. ಮರಳಿಸುವಾಗ ಪಾವತಿಸಬೇಕಾದ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು, ಬಾಡಿಗೆಯ ಅವಧಿ ಮುಗಿಯುವಷ್ಟರಲ್ಲೇ ಇಡೀ ಪರಿವಾರ ಬಿಡುವಿಲ್ಲದೆ ಒಂದರ ಹಿಂದೊಂದರಂತೆ ಮೂರು ಚಲನಚಿತ್ರಗಳನ್ನು ನೋಡಿ ಮುಗಿಸುತ್ತಿತ್ತು. ದೂರದರ್ಶನದ ಸ್ಪಷ್ಟ ಸಿಗ್ನಲ್’ಗಳಿಲ್ಲದ, ಕರ್ನಾಟಕದ ಹಲವು ಪ್ರದೇಶಗಳು ಸೇರಿದಂತೆ ದೇಶದ ಬಹುಭಾಗಗಳಲ್ಲಿ  ಕೇಬಲ್ ಟಿ.ವಿ.ಯ ಜಾಲ ವಿಸ್ತಾರವಾಗಿತ್ತು. ಕೇಬಲ್ ಟಿ.ವಿ.ಜಾಲದ ಮುಖಾಂತರ ವಿ.ಸಿ.ಆರ್. ಬಳಸಿ ಹೊಚ್ಚ ಹೊಸ ಚಲನ ಚಿತ್ರಗಳನ್ನು ತೋರಿಸಲಾಗುತ್ತಿತ್ತು. 1990ರ ದಶಕದಲ್ಲಿ ಚಿತ್ರ ಮಂದಿರಗಳಿಗೆ ಹೋಗಿ ಸೀನೆಮಾ ನೋಡುವವರ ಸಂಖ್ಯೆ ಇಳಿಮುಖವಾಗಿ, ಯಾವ ಸಿನೆ ತಾರೆಯರನ್ನು ನೋಡಲು ಜನತೆ ಟಾಕೀಜ್’ಗಳಿಗೆ ಹೋಗಬೇಕಿತ್ತೋ, ವಿ.ಸಿ.ಆರ್. ಮುಖಾಂತರ ತಾರೆಗಳೇ ಜನರ ಪಡಸಾಲೆಯ ಮೆರಗು ಹೆಚ್ಚಿಸಿದ್ದರು! ಖಾಸಗಿ ಸುಖಾಸೀನ ಬಸ್’ಗಳಲ್ಲೂ ಪ್ರಯಾಣಿಕರ ಮನೋರಂಜನೆಗಾಗಿ ವಿ.ಸಿ.ಆರ್’ನಲ್ಲಿ ಸಿನೆಮಾ ತೋರಿಸಲಾಗುತ್ತಿತ್ತು. ಭಾರತದಲ್ಲಿ ವಿದೇಶಿ ಚಲನ ಚಿತ್ರಗಳನ್ನು/ಧಾರವಾಹಿಗಳನ್ನು ನೋಡಿ ವಿದೇಶಿ ಸಂಸ್ಕೃತಿಯ ಇಣುಕುನೋಟ ಪಡೆಯುವ ಏಕೈಕ ಸಾಧನ ವಿ.ಸಿ.ಆರ್. ಆಗಿತ್ತು. ಒಂದು ಸಮಯದಲ್ಲಿ ಮದುವೆಯ ಸಮಾರಂಭದ ಫೋಟೋ ಅಲ್ಬಮ್’ಗೆ ತಗಲುವ ವ್ವೆಚ್ಚಗಿಂತ ವೀಡಿಯೋ ರಿಕಾರ್ಡಿಂಗ್ ಅಗ್ಗವಾಗಿತ್ತು!

1980ರ ದಶಕದಲ್ಲಿ ಭಾರತದಲ್ಲಿ  ಭಾರತದ ಚಿಕ್ಕ ಪಟ್ಟಣಗಳಲ್ಲೂ ವೀಡಿಯೋ ಪಾರ್ಲ್’ರಗಳು ತೆರೆದುಕೊಂಡು, ಚಲನಚಿತ್ರದ ಜೊತೆಗೆ ಮಧ್ಯಂತರದಲ್ಲಿ ಬಾದಾಮಿ ಹಾಲು ಹಾಗೂ ಇನ್ನಿತರ ಪಾನೀಯಗಳನ್ನು ಉಚಿತವಾಗಿ ನೀಡಿ  ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಉತ್ತಮ ದರ್ಜೆಯ ಸಿನೆಮಾ ಟಾಕೀಜ್’ಗಳಿಲ್ಲದ ಆ ಸಮಯದಲ್ಲಿ ವೀಡಿಯೋ ಪಾರ್ಲ್’ರಗಳು ಸಹಜವಾಗಿಯೇ ಜನರ ಮೊದಲ ಆಯ್ಕೆಯಾಗಿದ್ದವು. ಬಾಲಿವುಡ್’ನ ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಮತ್ತು ಮಧುರ್ ಭಂಡಾರ್ಕರ್ ಕೂಡ ಒಂದು ಕಾಲದಲ್ಲಿ ವೀಡಿಯೋ ಲೈಬ್ರರಿ ನಡೆಸುತ್ತಿದ್ದರು!

ವಿ.ಸಿ.ಆರ್. ಜಗತ್ತಿನಾದ್ಯಂತ 20ವರ್ಷಗಳ ಕಾಲ ಮನೋರಂಜನೆಯ ರಾಜ್ಯವಾಳಿತ್ತು. ತಾಂತ್ರಿಕತೆಯ ವಿಕಾಸ,  ಸಿ.ಡಿ. ಮತ್ತು ಡಿ.ವಿ.ಡಿ.ಗಳ ಆವಿಷ್ಕಾರ ವಿ.ಸಿ.ಆರ್. ತಂತ್ರಜ್ಞಾನವನ್ನು ಮೂಲೆಗುಂಪು ಮಾಡಿತ್ತು.2006ರ ಹಾಲಿವುಡ್ ಚಿತ್ರ ‘ದಿ ಹಿಸ್ಟರಿ ಆಫ್ ವೈಲೆನ್ಸ್’ ವಿ.ಎಚ್.ಎಸ್. ಟೇಪ್’ನಲ್ಲಿ  (ಫಾರ್ಮ್ಯಾಟ್’ನಲ್ಲಿ) ಬಿಡುಗಡೆಯಾದ ಕಡೆಯ ಚಿತ್ರವಾಗಿತ್ತು. ಇತಿಹಾಸದ ಪುಟ ಸೇರಿದ ವಿ.ಸಿ.ಆರ್’ನಲ್ಲಿ ನೆನಪುಗಳ ಕ್ಯಾಸೆಟ್ ಹಾಕಿ ರಿವೈಂಡ್ ಮಾಡಿದಾಗ ಗತಕಾಲದ ವೈಭವವನ್ನು ಮೆಲಕುಹಾಕಬಹುದು!    

 

ವಿಶ್ವವಾಣಿಯಲ್ಲಿ ಪ್ರಕಟಿತ ಬರಹ

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!