ಅಂಕಣ ಸ್ಪ್ಯಾನಿಷ್ ಗಾದೆಗಳು

ಸೋತವನಿಗೆ ಸಮಾಜದ ಜನರೆಲ್ಲ ಸಲಹೆಗಾರರೇ!

ಇವತ್ತಿನ ವಿಷಯ ಕೂಡ ಇಡೀ ಜಗತ್ತಿಗೆ ಅನ್ವಯಿಸುವಂತದ್ದು. ದೇಶ ಭಾಷೆಗಳ ಗಡಿ ಮೀರಿ ಇದು ಎಲ್ಲೆಡೆ ಕೇಳಿಬರುವಂತದ್ದು. ಹಾಗೆಯೇ ಇದು ಒಂದು ಕಾಲಘಟಕ್ಕೆ ಸೀಮಿತವಾಗದೆ ಸದಾಕಾಲಕ್ಕೂ ಹಸಿರು. ಇವತ್ತಿನ ಪರಿಸ್ಥಿತಿಯ ನೋಡಿ ಇದನ್ನು ಯಾರಾದರೂ ಸೃಷ್ಟಿಸಿದರೇನೋ ಎನ್ನುವ ಸಂಶಯ ಬರುವಷ್ಟು ಪ್ರಸ್ತುತ .

ತೆಂಡೂಲ್ಕರ್ ಆಟವಾಡುತಿದ್ದ ಸಮಯದಲ್ಲಿ ಆತ ಒಂದೆರಡು ಪಂದ್ಯದಲ್ಲಿ ಸರಿಯಾದ ನಿರ್ವಹಣೆ ಮಾಡದಿದ್ದರೆ ಸಾಕು; ಜೀವನದಲ್ಲಿ ಒಮ್ಮೆಯೂ ಬ್ಯಾಟ್ ಹಿಡಿಯದ ಮುದುಕರಿಂದ ಸರಿಯಾಗಿ ಬ್ಯಾಟ್ ಹಿಡಿಯಲು ಬಾರದ ಪುಟ್ಟ ಮಗುವಿನವರೆಗೆ ಎಲ್ಲರೂ ತೆಂಡೂಲ್ಕರ್ ಹೇಗೆ ಬ್ಯಾಟ್ ಮಾಡಬೇಕು ಅಥವಾ ಹೇಗೆ ಬ್ಯಾಟ್ ಮಾಡಿದ್ದರೆ ಚೆನ್ನಾಗಿರುತಿತ್ತು ಎಂದು ಹೇಳುವರೇ! ೯೦ ಮೈಲಿ ಘಂಟೆಗೆ ನುಗ್ಗಿ ಬರುವ ಚೆಂಡನ್ನು ತಾವು ಕುಳಿತ ಸೋಫಾ ಮೇಲಿಂದ ಸರಾಗವಾಗಿ ಕೈ ಜಾಡಿಸಿ ಬೌಂಡರಿಗೆ ಅಟ್ಟುವ ನುರಿತ ಕ್ರಿಕೆಟ್ ಪಟುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಇಷ್ಟೆಲ್ಲಾ ಮಾತನಾಡುವ, ತೆಂಡೂಲ್ಕರ್ನಂತ ಕ್ರಿಕೆಟ್ ಪಟುವಿಗೆ ಕ್ರಿಕೆಟ್ ಜ್ಞಾನ ಹೇಳುವ ಜನರು ಮಾತ್ರ ಅದೇಕೆ ತೆಂಡೂಲ್ಕರ್’ನ ಸ್ಥಾನ ಮುಟ್ಟಲಿಲ್ಲ? ಅಂತರರಾಷ್ಟ್ರೀಯ ಕ್ರಿಕೆಟ್ ಬಿಡಿ, ಗಲ್ಲಿ ಕ್ರಿಕೆಟ್ ನಲ್ಲಿ ಕೂಡ ಸೈ ಅನ್ನಿಸಿಕೊಳ್ಳಲಿಲ್ಲ? ಹೇಳಿಕೊಳ್ಳುವ ಸಾಧನೆ ಮಾಡದ ಎಲ್ಲರೂ ಅದನ್ನ ಮರೆತು ನಿಪುಣನೊಬ್ಬ, ಕ್ಷೇತ್ರ ಯಾವುದೇ ಇರಲಿ; ನೆಲಕ್ಕೆ ಬಿದ್ದನೆಂದರೆ ಎಲ್ಲರೂ ಅವನ ಪತನಕ್ಕೆ ಕಾರಣ ಹೇಳುವವರೇ. ಇದನ್ನು ನಮ್ಮ ಭಾಷೆಯಲ್ಲಿ ‘ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’  ಎಂದರು.  ನಮ್ಮ ಸಮಾಜದಲ್ಲಿ ಕಸ ಗುಡಿಸುವ ವ್ಯಕ್ತಿಯಿಂದ ಎಲ್ಲರಿಗೂ ನರೇಂದ್ರ ಮೋದಿ  ಹೇಗೆ ಸರಕಾರ  ನಡೆಸಬೇಕು ಎನ್ನುವುದರ ನಿಖರ ಜ್ಞಾನವಿರುತ್ತದೆ. ಒಂದು ದಿನದ ಮಟ್ಟಿಗೆ ಆ ಸ್ಥಾನದಲ್ಲಿ ಕಾರ್ಯನಿರ್ವಹಿಸಿ ಎಂದರೆ ಅಲ್ಲಿಗೆ ಕಥೆ ಮುಗಿಯಿತು .

ಇದರ ಅರ್ಥ ಬಹಳ ಸರಳ. ಎಲ್ಲಿಯವರೆಗೆ ಯಾವುದೇ ವ್ಯಕ್ತಿ ಓಡುತ್ತಿರುತ್ತಾನೆ ಅಲ್ಲಿಯವರೆಗೆ ನಮ್ಮ ಸಮಾಜ ಅವನಿಗೆ ಜೈಕಾರ ಹಾಕುತ್ತದೆ. ಆತ ಬಿದ್ದ ದಿನ ಇಡೀ ಸಮಾಜ ಅವನಿಗೆ ಬುದ್ಧಿವಾದ ಹೇಳಲು ಶುರುಮಾಡುತ್ತದೆ.

ಸ್ಪೇನ್ ದೇಶದಲ್ಲಿ ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಆಡು ಮಾತು  ‘Cada uno sabe  donde le aprieta el zapato’ ಎನ್ನುತ್ತಾರೆ. ’ಕಾದ ಉನೊ ಸಾವೆ ದೊಂದೆ ಲೆ ಅಪ್ರೇತ ಎಲ್ ಸಪಾತೊ’ ಎಂದರೆ ಪ್ರತಿಯೊಬ್ಬನಿಗೂ ಚಪ್ಪಲಿಯನ್ನ ಎಲ್ಲಿ ಒತ್ತಬೇಕು ಎಂದು ಗೊತ್ತಿದೆ ಎಂದರ್ಥ. ಅಂದರೆ ಚಪ್ಪಲಿಯನ್ನ ಹೇಗೆ ಪ್ರತಿಯೊಬ್ಬರ ಕಾಲಿಗೆ ತಕ್ಕಂತೆ ಹೊಲಿಯಬೇಕು ಎನ್ನುವುದು ಚಮ್ಮಾರನ ಕೆಲಸ. ಆದರೇನು ತನ್ನ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿರುವ ಚಮ್ಮಾರನಿಗಿಂತ ಹೆಚ್ಚಾಗಿ ಬೇರೆಯವರೇ ಚಪ್ಪಲಿ ಹೇಗೆ ಹೊಲಿಯಬೇಕು ಎಂದು ಹೇಳುತ್ತಾರೆ ಎನ್ನುವುದು ನಿಜವಾದ ಅರ್ಥ.

ಇನ್ನು ಇಂಗ್ಲಿಷ್ ಭಾಷಿಕರು ‘Each person knows where problems lie’ ಎನ್ನುತ್ತಾರೆ. ಎಲ್ಲರಿಗೂ ತಪ್ಪು ಅಥವಾ ತೊಂದರೆ ಎಲ್ಲಿದೆ ಎನ್ನವುದು ಗೊತ್ತು. ಆದರೆ ಅದನ್ನು ಸರಿ ಮಾಡುವರು ಮಾತ್ರ ಯಾರಿಲ್ಲ ಎನ್ನುವುದು ಮಾತಿನ ಅರ್ಥ .

ಜಗತ್ತಿನೆಲ್ಲೆಡೆ ಗಟ್ಟಿಗಿಂತ ಜೊಳ್ಳಿನ ಆರ್ಭಟವೇ ಹೆಚ್ಚು ಎನ್ನುವುದು ಎಲ್ಲಾ ಭಾಷೆಯ ಆಡುಮಾತಿನ ಭಾವಾರ್ಥ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

Cada uno: ಪ್ರತಿಯೊಬ್ಬ  ಎನ್ನುವುದು ಅರ್ಥ. ಕಾದ ಉನೊ ಎನ್ನುವುದು ಉಚ್ಚಾರಣೆ.

sabe: ಗೊತ್ತು , ತಿಳಿದಿದೆ, ಎನ್ನುವ ಅರ್ಥ ಸಾವೆ ಎನ್ನುವುದು ಉಚ್ಚಾರಣೆ.

donde: ಎಲ್ಲಿ ಎನ್ನುವ ಅರ್ಥ. ದೊಂದೆ ಎನ್ನುವುದು ಉಚ್ಚಾರಣೆ.

le aprieta: ಒತ್ತುವುದು, ಅದುಮುವುದು ಎನ್ನುವ ಅರ್ಥ. ಲೇ ಅಪ್ರೇತ ಎನ್ನುವುದು ಉಚ್ಚಾರಣೆ.

el zapato:  ಪಾದರಕ್ಷೆ ಎನ್ನುವ ಅರ್ಥ, ಶೊ, ಚಪ್ಪಲಿ ಎನ್ನುವ ಅರ್ಥ. ಎಲ್ ಸಪಾತೊ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!